ನೀಳ್ಗಥೆ - ಸುಷ್ಮಾ ಸ್ವರೂಪ್
``ಅಣ್ಣಾ .... ನಿನ್ನ ಪುಸ್ತಕ ತಗೋ..... ಶಾಂತಿ ಕೊಟ್ಟಿದ್ದಾಳೆ,'' ರಾಗಿಣಿ ಪುಸ್ತಕಗಳನ್ನು ಮೇಜಿನ ಮೇಲಿಡುತ್ತಾ ಹೇಳಿದಳು.
ತನ್ನ ಸ್ಟಡೀ ರೂಮಿನ ಬುಕ್ ಶೆಲ್ಫ್ ನಲ್ಲಿ ಪುಸ್ತಕಗಳನ್ನು ಜೋಡಿಸುತ್ತಿದ್ದ ದಿವಾಕರ ಮೇಜಿನ ಮೇಲಿದ್ದ ಪುಸ್ತಕಗಳತ್ತ ನೋಡಿ ಕೇಳಿದ, ``ಶಾಂತಿ ಇಲ್ಲಿಗೆ ಬಂದಿದ್ದಳೇನು....?''
ದಿವಾಕರನ ಕಣ್ಣಿನಲ್ಲಿ ಮಿಂಚಿದ ಹೊಳಪನ್ನು ಗಮನಿಸಿದ ರಾಗಿಣಿ, ``ಕಾಲೇಜಿನಲ್ಲಿ ಇದನ್ನು ಕೊಟ್ಟಳು ಅಣ್ಣಾ,'' ಎಂದಳು.
``ಸರಿ,'' ಎಂದು ಹೇಳಿ ದಿವಾಕರ್ ಮತ್ತೆ ಪುಸ್ತಕಗಳನ್ನು ಸರಿಪಡಿಸತೊಡಗಿದ.
ರಾಗಿಣಿ ಅಲ್ಲೇ ನಿಂತಿರುವುದನ್ನು ಕಂಡು ದಿವಾಕರ ಕೇಳಿದ, ``ಈಚೆಗೆ ನಿನ್ನ ಗೆಳತಿಯರು ಮನೆಗೆ ಬರುತ್ತಲೇ ಇಲ್ಲವಲ್ಲ.... ಏಕೆ...?''
ಅಣ್ಣನ ಮನಸ್ಸನ್ನು ಓದಿಕೊಂಡ ರಾಗಿಣಿ ಅವನ ಮುಖವನ್ನು ದಿಟ್ಟಿಸುತ್ತಾ, ``ಗೆಳತಿಯರೋ ಅಥವಾ ಶಾಂತಿಯೋ?'' ಎಂದು ಕೇಳಿದಳು.
``ನಾನು ಹಾಗೆ ಹೇಳಲಿಲ್ಲ.....''
``ಅಣ್ಣಾ... ನೀನು ಹೇಳದಿದ್ದರೆ ನನಗೆ ಗೊತ್ತಾಗುವುದಿಲ್ಲವೇ? ಶಾಂತಿಯ ಹೆಸರು ಕೇಳಿದರೆ ನಿನ್ನ ಕಣ್ಣಿನಲ್ಲಿ ಅದೇನು ಮಿಂಚು, ಮುಖದಲ್ಲಿ ಅದೇನು ರಂಗು.....!'' ರಾಗಿಣಿ ಛೇಡಿಸಿದಳು.
ದಿವಾಕರ್ ಮೌನವಾಗಿದ್ದ.
``ಶಾಂತಿಯನ್ನು ಕಂಡರೆ ನಿನಗೆ ಬಹಳ ಇಷ್ಟ ಅಲ್ಲವೇ ಅಣ್ಣಾ,'' ರಾಗಿಣಿ ಅವನ ಪಕ್ಕಕ್ಕೆ ಸರಿದು ನಿಂತು ಕೇಳಿದಳು.
``ಇಲ್ಲವಲ್ಲ..... ನಾನು ಯಾವಾಗ ಹಾಗೆ ಹೇಳಿದೆ?'' ದಿವಾಕರ್ ತಬ್ಬಿಬ್ಬಾದ.
``ಅಣ್ಣಾ, ಎಚ್ಚರವಾಗಿ ಹೆಜ್ಜೆ ಇಡು. ಇಲ್ಲವಾದರೆ ಪೆಟ್ಟು ತಿನ್ನಬೇಕಾಗುತ್ತದೆ...... ಶಾಂತಿ ನನ್ನ ಕ್ಲಾಸ್‌ನಲ್ಲಿ ಓದುತ್ತಿರುವಳು. ಅವಳಿಗಿನ್ನೂ 19 ವರ್ಷ ವಯಸ್ಸು. ಅವಳಿಗೆ 3 ಜನ ಅಣ್ಣಂದಿರಿದ್ದಾರೆ. ಅವಳ ಮದುವೆಗೆ ಇನ್ನೂ ಬಹಳ ಸಮಯ ಇದೆ..... ಶಾಂತಿಯ ಸ್ವಭಾವ ಎಂತಹದು ಅಂತ ನನಗೆ ಗೊತ್ತು. ಅವಳು ತನ್ನ ಮನೆಯವರ ವಿರುದ್ಧವಾಗಿ ಎಂದೂ ಹೋಗುವುದಿಲ್ಲ..... ಮತ್ತೆ ಅವಳ ತಂದೆ ಒಬ್ಬ ವಿವಾಹಿತನಾದ ಮತ್ತು 4 ವರ್ಷದ ಮಗುವಿನ ತಂದೆಯಾಗಿರುವವನಿಗೆ ತಮ್ಮ ಮಗಳನ್ನು ಖಂಡಿತ ಮದುವೆ ಮಾಡಿಕೊಡುವುದಿಲ್ಲ.''
``ರಾಗಿಣಿ....'' ದಿವಾಕರ್ ಚೀರಿ ಹತಾಶೆಯಿಂದ ಕುರ್ಚಿಯ ಮೇಲೆ ಕುಸಿದು ಕುಳಿತು, ``ನೀನು ಮತ್ತು ಅಮ್ಮ ಇಬ್ಬರೂ ಏಕೆ ಆ ವಿಷಯವನ್ನು ಜ್ಞಾಪಿಸುತ್ತೀರಿ.... ಅದು ನನ್ನ ಮದುವೆ ಅಲ್ಲ. ನನ್ನ ಜೀವನದ ಒಂದು ಭಯಾನಕ ಘಟನೆ.... ಅಪ್ಪನ ಹಠದಿಂದ ನಡೆದುಹೋಯಿತು. ಶರತ್ ನನ್ನ ಮಗನಲ್ಲ..... ಹಳೆಯದನ್ನೆಲ್ಲ ಬಿಟ್ಟುಬಿಡು. ಏನಿದ್ದರೂ ನಾನು 28 ವರ್ಷದ ಯುವಕ. ನನ್ನ ಹೆಚ್ಚಿನ ಗೆಳೆಯರಿಗೆಲ್ಲ ಇನ್ನೂ ಮದುವೆ ಆಗಿಯೇ ಇಲ್ಲ.''
``ಗೊತ್ತು ಅಣ್ಣಾ......, ನಾನು ನಿನ್ನ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದೇನೆ. ನಿನಗೆ ಸಂತೋಷ ಕೊಡುವುದಕ್ಕೆ ನನಗೆ ಸಾಧ್ಯವಿದ್ದಿದ್ದರೆ ಶಾಂತಿಯನ್ನು ನಿನ್ನ ಹತ್ತಿರಕ್ಕೆ ಎಳೆದು ತಂದು ನಿಲ್ಲಿಸುತ್ತಿದ್ದೆ. ನಿನ್ನ ಜೀವನದಲ್ಲಿ ಅದೆಲ್ಲ ನಡೆದಿಲ್ಲದಿದ್ದರೆ ನಿನ್ನಂತಹ ಯೋಗ್ಯನಾದ ಅಣ್ಣನ ವಿಷಯದ ಬಗ್ಗೆ ಶಾಂತಿಯ ಜೊತೆ ಮಾತುಕತೆ ನಡೆಸುತ್ತಿದ್ದೆ. ನಿನ್ನಷ್ಟು ಒಳ್ಳೆ ಹುಡುಗನನ್ನು ಬಾಳಸಂಗಾತಿಯಾಗಿ ಪಡೆಯುವುದು ಯಾವುದೇ ಹುಡುಗಿಯ ಭಾಗ್ಯವೇ ಸರಿ.''
ದಿವಾಕರ್ ಸುಮ್ಮನೆ ಕುಳಿತಿದ್ದ. ರಾಗಿಣಿ ಅವನ ಭುಜದ ಮೇಲೆ ಕೈಯಿಟ್ಟು, ``ಆದರೆ ನಿನಗೆ ಇನ್ನೊಂದು ಪೆಟ್ಟು ಬೀಳುವುದು ನನಗೆ ಇಷ್ವವಿಲ್ಲ... ನೀನು ಬಯಸುತ್ತಿರುವುದು ಸಾಧ್ಯವಿಲ್ಲದ ವಿಷಯ. ನೀನೇ ಯೋಚನೆ ಮಾಡು. ಇಂತಹ ಹುಡುಗನ ಜೊತೆ ನನ್ನ ಮದುವೆ ಮಾಡುವುದಕ್ಕೆ ಒಪ್ಪುವೆಯಾ? ನಿನಗೆ ಕೆಲವು ಸಂಬಂಧಗಳು ಬಂದಿವೆ..... ಅಮ್ಮನ ಹತ್ತಿರ ಆ ಜಾತಕಗಳು ಇವೆ. ಅವುಗಳಲ್ಲಿ ಯಾವುದನ್ನಾದರೂ ಆರಿಸಿಕೊಂಡು ಮದುವೆಯಾಗು. ಆಗ ನಿನ್ನ ಮನಸ್ಸು ಶಾಂತಿಯಿಂದ ದೂರವಾಗುತ್ತದೆ,'' ಎಂದಳು.