ಇಂದಿನ ಧಾವಂತದ ದಿನಗಳಲ್ಲಿ ವಿವಾಹಿತರ ಜೀವನದಿಂದ ಸೆಕ್ಸ್ ಮರೆಯಾಗುತ್ತಿದೆ. ಈ ಸಮಸ್ಯೆ ದಿನಗಳೆದಂತೆ 1 ಕ್ಕೆ 2, 2ಕ್ಕೆ 4ರಂತೆ ಹೆಚ್ಚುತ್ತಾ ಹೊರಟಿದೆ. ಹೆಸರಾಂತ ಕಾದಂಬರಿ `ಹೌ ಟು ಗೆಟ್ ದಿ ಮೋಸ್ಟ್ ಔಟ್ ಆಫ್ ದಿ ಸೆಕ್ಸ್ ‘ನ ಲೇಖಕ ಡೇವಿಡ್ ರುಬೆನ್ರ ಪ್ರಕಾರ, `ದಾಂಪತ್ಯದಲ್ಲಿ ಸೆಕ್ಸ್ ಸಾಮರಸ್ಯ ಸರಿಯಾಗಿದ್ದರೆ ಎಲ್ಲ ಸರಿಯಾಗಿದೆ ಎಂದರ್ಥ.’ ಒಂದು ವೇಳೆ ಗಂಡಹೆಂಡತಿಯ ನಡುವೆ ಅದರ ಉಪಸ್ಥಿತಿ ಇರದೇ ಇದ್ದರೆ ಯಾವುದೂ ಸರಿಯಿಲ್ಲ ಎಂದರ್ಥ.
27 ವರ್ಷದ ಮಾಯಾ ತ್ಯಾಗಿಯವರ ಜೀವನಕ್ಕೂ ಈ ಸಮೀಕರಣ ಅನ್ವಯಿಸುತ್ತದೆ. ಕೆಲವು ತಿಂಗಳುಗಳ ಹಿಂದಷ್ಟೇ ಆದ ಈ ವಿವಾಹವು ಮೀಡಿಯಾ ಪ್ರೊಫೆಶನ್ಗಳ ಜೀವನದಲ್ಲಿ ಬಹಳಷ್ಟು ಅಲ್ಲೋಲ ಕಲ್ಲೋಲವನ್ನುಂಟು ಮಾಡಿತು. ಏಕೆಂದರೆ ಮಾಯಾಳ ಪತಿ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಸಮರ್ಪಿತರಾಗಿದ್ದರು. ಹೀಗಾಗಿ ಅವರ ಖಾಸಗಿ ಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದೆ. ಅವರು ದಿನ ಮನೆಗೆ ಬರುವುದು ತುಂಬ ತಡವಾಗಿ. ಅದೂ ಕೂಡ ಸಾಕಷ್ಟು ದಣಿದು ಬಂದಿರುತ್ತಾರೆ. ಹೀಗಾಗಿ ಅವರಿಗೆ ಸಮಾಗಮ ಚಟುವಟಿಕೆಗೂ ಮನಸ್ಸಿರುವುದಿಲ್ಲ.
ಈ ಕುರಿತಂತೆ ಮಾಯಾ ಹೀಗೆ ಹೇಳುತ್ತಾರೆ, “ಆರಂಭದಲ್ಲಿ ನಮಗೆ ಇದು ದೊಡ್ಡ ಸಮಸ್ಯೆ ಆಗಿರಲಿಲ್ಲ. ನಾವು ಜೊತೆಗೆ ಇದ್ದಾಗೆಲ್ಲ ಸಮಾಗಮ ಕ್ರಿಯೆ ನಡೆಯುತ್ತಿತ್ತು. ಆ ಜೀವನಶೈಲಿ ನನಗೆ ಅಷ್ಟೇನೂ ಕೆಟ್ಟದಾಗಿ ಕಂಡಿರಲಿಲ್ಲ. ಆದರೆ ಕ್ರಮೇಣ ನಮ್ಮ ಲೈಂಗಿಕ ಸಂಬಂಧದಲ್ಲಿ ಬಹಳ ದಿನಗಳ ಅಂತರ ಉಂಟಾಗತೊಡಗಿತು. ಬಳಿಕ ಆ ಅಂತರ ಹೆಚ್ಚುತ್ತಲೇ ಹೋಯಿತು. ನನ್ನ ಪತಿಗೆ ಈಗ ಅದರ ಬಗ್ಗೆ ಮಹತ್ವವೇ ಇಲ್ಲದಂತಾಗಿಬಿಡುತ್ತದೆ. ಈಗ ಹೆಚ್ಚೆಂದರೆ ತಿಂಗಳಿಗೊಮ್ಮೆ ಕೂಡುತ್ತೇವೆ. ಅದು ಕೂಡ ಅವರು ಮನಸ್ಸಿಲ್ಲದ ಮನಸ್ಸಿನಿಂದ ಹತ್ತಿರ ಬರುತ್ತಾರೆ. ಅಷ್ಟೇ ಬೇಗನೇ ದೂರ ಸರಿಯುತ್ತಾರೆ,” ಎಂದು ನಿಡುಸುಯ್ಯುತ್ತಾರೆ.
ಮೊದಲ ರಾತ್ರಿಯೇ ವಿಚ್ಛೇದನ
ಕೆಲವೊಂದು ಪ್ರಕರಣಗಳು ಹೇಗಿವೆ ಎಂದರೆ ಆ ಜೋಡಿಗಳಿಗೆ ಮೊದಲ ರಾತ್ರಿಯಲ್ಲಿಯೇ ಸಮಸ್ಯೆ ಶುರುವಾಗುತ್ತದೆ. ಸುನಿಲ್ ಮತ್ತು ರಶ್ಮಿ ನಡುವೆ ಕೂಡ ಹೀಗೆಯೇ ಆಯಿತು. ಅವರು ಮದುವೆಯಾಗುವ ಮುಂಚೆಯೇ ಒಳ್ಳೆಯ ಸ್ನೇಹಿತರಾಗಿದ್ದರು. ಹೀಗಾಗಿ ಅವರ ನಡುವೆ ಅಪರಿಚಿತತೆ ಪರಿಪೂರ್ಣವಾಗಿ ನಿವಾರಣೆಯಾಗಿತ್ತು. ಆದರೆ ಮೊದಲ ಬಾರಿ ಅವರು ಸಮಾಗಮ ನಡೆಸಿದ ಬಳಿಕವೇ ಅವರ ಸಮಸ್ಯೆ ಶುರುವಾಯಿತು.
29 ವರ್ಷದ ಸುನಿಲ್ ಆ ರಾತ್ರಿ ತನ್ನ ಪ್ರೀತಿಯ ಎಲ್ಲೆಯನ್ನು ಮೀರಲು ಬಯಸಿದ್ದ. ಆದರೆ ಅವನ ಸ್ನೇಹಿತೆಯಾಗಿ ಪತ್ನಿಯಾಗಿದ್ದ ರಶ್ಮಿ ಮಾತ್ರ ತಮ್ಮ ಪವಿತ್ರ ಸ್ನೇಹವನ್ನು ಮುರಿಯಲು ಇಚ್ಛಿಸುತ್ತಿರುಲಿಲ್ಲ. ರಶ್ಮಿಯ ನಕಾರ ಭಾವದಿಂದ ಅವರು ರಾತ್ರಿ ಸಮಾಗಮ ನಡೆಸಲು ಆಗಲಿಲ್ಲ. ಪ್ರತಿದಿನ ಇದೇ ಮರುಕಳಿಸತೊಡಗಿತು. ಗಂಡ ಒತ್ತಾಯಿಸುವುದು ಹೆಂಡತಿ ನಿರಾಕರಿಸುವುದು ಮಾಡುತ್ತಾ ಇದ್ದರೆ ಇಬ್ಬರ ನಡುವೆ ಜಗಳ ಖಚಿತ. ಕೆಲವು ತಿಂಗಳುಗಳ ಬಳಿಕ ಸುನಿಲ್ ವಿಚ್ಛೇದನಕ್ಕಾಗಿ ಅರ್ಜಿ ಕೊಟ್ಟ. ಅವನು ರಶ್ಮಿಯಿಂದ ಬೇರೆಯಾಗುವ ಬಗ್ಗೆ ತನ್ನ ಗೆಳೆಯರ ಮುಂದೆ ಹೇಳಿದಾಗ, “ವಿಚ್ಛೇದನ ತೆಗೆದುಕೊಳ್ಳುವುದು ಬೇಡ. ಧೈರ್ಯದಿಂದಿರು…. ಉದಾಸನಾಗಬೇಡ. ನಿನ್ನ ಜೊತೆಗೆ ಹೆಂಡತಿಯ ರೂಪದಲ್ಲಿ ಬಹಳ ಒಳ್ಳೆಯ ಸ್ನೇಹಿತೆಯಿದ್ದಾಳೆ. ನೀನು ಅವಳ ಮುಂದೆ ಏನೆಲ್ಲವನ್ನು ಹಂಚಿಕೊಳ್ಳಬಹುದು. ಅಂದಹಾಗೆ ಸೆಕ್ಸ್ ಕೆಲವು ವರ್ಷಗಳ ಬಳಿಕ ನಮ್ಮಿಂದ ದೂರವಾಗಿಬಿಡುತ್ತದೆ,” ಎಂದು ವಿವಾಹಿತ ಸ್ನೇಹಿತರು ಅವನಿಗೆ ಬುದ್ಧಿ ಹೇಳಿದರು. ಈ ಎಲ್ಲ ತೊಂದರೆ ತಾಪತ್ರಯಗಳ ನಡುವೆಯೂ ಸುನಿಲ್ ತನ್ನ ಹೆಂಡತಿಯನ್ನು ಸಿನಿಮಾ, ಎಕ್ಸಿಬಿಷನ್, ಹೋಟೆಲ್, ಮದುವೆ, ಪಾರ್ಟಿಗಳು ಹೀಗೆ ಎಲ್ಲೆಂದರಲ್ಲಿ ಜೊತೆ ಜೊತೆಗೆ ಕರೆದೊಯ್ಯುತ್ತಾನೆ. ವಿಶೇಷ ಸಂದರ್ಭಗಳಲ್ಲಿ ಪರಸ್ಪರ ಉಡುಗೊರೆ ಕೂಡ ಕೊಡುತ್ತಾರೆ. ರಶ್ಮಿ ತನ್ನ ಗಂಡನ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾಳೆ. 3 ವರ್ಷಗಳ ಬಳಿಕ ಈಗ ಅವರ ಜೀವನದಲ್ಲಿ ಸೆಕ್ಸ್ ಕೂಡ ಇದೆ. ಪ್ರೀತಿಯಂತೂ ಧಾರಾಳವಾಗಿದೆ.
ಸುನಿಲ್ ಈ ಬಗ್ಗೆ ಹೀಗೆ ಹೇಳುತ್ತಾರೆ, “ನಾನೀಗ ರಶ್ಮಿ ಜೊತೆಗೆ ಖುಷಿಯಿಂದ ಇದ್ದೇನೆ. ಅವಳು ನನ್ನ ಒಳ್ಳೆಯ ಸ್ನೇಹಿತೆ, ನಾನೀಗ ಅವಳೊಂದಿಗೆ ಆಫೀಸಿನಲ್ಲಿ ನಡೆದದ್ದು, ಅಮ್ಮನೊಂದಿಗಿನ ಮಾತಿನ ಚಕಮಕಿ ಹೀಗೆ ಏನೆಲ್ಲವನ್ನೂ ಹೇಳುತ್ತೇನೆ. ಆರಂಭದಲ್ಲಿ ನಮ್ಮಿಬ್ಬರ ನಡುವೆ ಜಗಳವಾಗುತ್ತಿತ್ತು. ನಾನು ಸೆಕ್ಸ್ ಆಕಾಂಕ್ಷಿ ಆಗಿದ್ದರೆ, ಅವಳು ಸೆಕ್ಸ್ ಹಾಗೂ ಸ್ನೇಹ ಈ ಎರಡೂ ಜೊತೆ ಜೊತೆಗೆ ಮುಂದೆ ಸಾಗಲು ಸಾಧ್ಯವಿಲ್ಲ ಎನ್ನುತ್ತಿದ್ದಳು. ಆಗ ನನ್ನಲ್ಲಿ ಅಪೇಕ್ಷೆ ಇತ್ತು. ನಮ್ಮಿಬ್ಬರಲ್ಲಿ ಯಾರಿಗೂ ಬಾಹ್ಯ ಸಂಬಂಧ ಇಲ್ಲ.”
ಸೆಕ್ಸ್ ನಲ್ಲಿ ಉದಾಸೀನತೆ ಏಕೆ?
ಇಂದು ಸೆಕ್ಸ್ ನಗರೀಕರಣದ ಬಹು ದೊಡ್ಡ ಸಮಸ್ಯೆ. ಮಹಾನಗರಗಳ ದಂಪತಿಗಳ ನಡುವಿನ ಸೆಕ್ಸ್ ಉದಾಸೀನತೆಗೆ ತಜ್ಞರು ಬೇರೆ ಬೇರೆ ಕಾರಣ ಕೊಡುತ್ತಾರೆ. ಕೆಲವು ದಂಪತಿಗಳಿಗೆ ಡಬಲ್ ಇನ್ಕಂ, ಅದ್ಧೂರಿ ಜೀವನ ಶೈಲಿ, ಹೈಪ್ರೊಫೈಲ್ ವೇತನಗಳು, ಬ್ರ್ಯಾಂಡ್ ಲೇಬಲ್ ಮುಂತಾದವು ಸೆಕ್ಸ್ ಕೊರತೆಗೆ ಕಾರಣಗಳಾಗಿವೆ. ಉನ್ನತ ಆದಾಯ ಬಯಸುವ ಜೋಡಿಗಳು ತಮ್ಮ ಬೆಡ್ರೂಮಿನಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಆಫೀಸಿನಲ್ಲಿ ಕಳೆಯುತ್ತಾರೆ. ಅವರ ವ್ಯಸ್ತ ಜೀವನ ಸಮಾಗಮಕ್ಕೆ ಪುರಸತ್ತು ಕೊಡುತ್ತಿಲ್ಲ. ಅದಕ್ಕೆ ಅವರು ಪ್ರಯತ್ನ ಕೂಡ ಮಾಡುವುದಿಲ್ಲ. ಹೀಗೆಯೇ ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ.
ಡಾ. ಮನು ಈ ಕುರಿತು ಹೀಗೆ ಹೇಳುತ್ತಾರೆ, “ಇಂದಿನ ಯುವ ಜೋಡಿಗಳು ಲೈಂಗಿಕ ಸಂತೃಪ್ತಿ ಪಡೆಯಲು ಸಮಯದ ಕೊರತೆ ಅಡ್ಡ ಬರುತ್ತಿದೆ. ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಅವರಲ್ಲಿ ದೈಹಿಕ ದಣಿವು ಉಂಟಾಗಿ ಸೆಕ್ಸ್ ಕಡೆ ಅವರ ಗಮನ ಹೋಗುವುದೇ ಇಲ್ಲ. ಹತ್ತು ಹಲವು ವ್ಯಸನಗಳು ಕೂಡ ಜೋಡಿಗಳನ್ನು ಲೈಂಗಿಕ ಚಟುವಟಿಕೆಯಿಂದ ದೂರ ಇಡುತ್ತವೆ. ದಂಪತಿಗಳ ಸೆಕ್ಸ್ ನಿರಾಸಕ್ತಿ ಕೂಡ ಸಮಾಗಮದಿಂದ ದೂರ ಇಡುತ್ತದೆ.”
ಹೆಚ್ಚಿನ ಪುರುಷರು ಆನ್ಲೈನ್ ಸೆಕ್ಸ್ ಹಾಗೂ ಸ್ವಯಂ ಆನಂದಕ್ಕೆ ಮಹತ್ವ ಕೊಡುತ್ತಾರೆ. ಒಂದು ಸಂಗತಿ ಗಮನದಲ್ಲಿರಲಿ, ಸೆಕ್ಸ್ ಎನ್ನುವುದು ಗಂಡಹೆಂಡತಿಗೆ ಸಮೀಪ ಬರಲು ಒಂದು ಅತ್ಯವಶ್ಯ ಮಾಧ್ಯಮ. ಇದನ್ನು ನಿರ್ಲಕ್ಷ್ಯ ಮಾಡುವುದು ಇಬ್ಬರ ವಿಚ್ಛೇದನಕ್ಕೆ ಕಾರಣವಾಗಬಹುದು.
– ಡಾ. ಪ್ರೇಮಲತಾ