ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ದೀಪ ಬೆಳಗಿಸುತ್ತಾರೆ. ಸಿಹಿ ತಿಂಡಿ ಮಾಡಿ ಮನೆ ಮಂದಿಗೆಲ್ಲ ಹಂಚಿ ಸಂತೋಷಪಡುತ್ತಾರೆ. ಇದು ಸರಿಯೇ…., ಆದರೆ ನೀವು ಎಂದಾದರೂ ಇತರರ ಮನೆಯ ಅಂಧಕಾರವನ್ನು ದೂರ ಮಾಡಲು ಪ್ರಯತ್ನಿಸಿದ್ದೀರಾ? ದೀಪಾವಳಿಯಂದು ಹೀಗೆ ಮಾಡುವುದರಿಂದ ಅದೆಂತಹ ಆನಂದ ದೊರೆಯುವುದೆಂಬುದನ್ನು ಅನುಭವಿಸಿ ನೋಡಿ.
ದೀಪಾವಳಿಯನ್ನು ಜೊತೆಗೂಡಿ ಆಚರಿಸಿ : ಇಂದಿನ ಕಾಲದಲ್ಲಿ ನಮ್ಮ ಮಹಾನಗರಗಳಲ್ಲಿನ ಗೌಜು ಗದ್ದಲದಲ್ಲಿಯೂ ಅದೆಷ್ಟು ಜನರು ಒಂಟಿಯಾಗಿ ಬೇಸರದಿಂದ ಇರುತ್ತಾರೆ ಗೊತ್ತೇ…..? ದೀಪಾವಳಿಯಂದು ಜೊತೆಯಾಗಿ ಹಬ್ಬವನ್ನಾಚರಿಸಿ ಸಂತೋಷಪಡಲು ಅವರಿಗೆ ಯಾರೂ ಇರುವುದಿಲ್ಲ. ಕೆಲವು ಕಡೆ ವಯಸ್ಸಾದ ತಂದೆ ತಾಯಿಯರು ಒಂಟಿಯಾಗಿರುತ್ತಾರೆ. ಮತ್ತೆ ಕೆಲವೆಡೆ ಯುವಕ ಯುವತಿಯರು ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕಾಗಿ ತಂದೆ ತಾಯಿಯರಿಂದ, ಮನೆಯಿಂದ ದೂರದಲ್ಲಿ ವಾಸಿಸುತ್ತಿರುತ್ತಾರೆ. ಕೆಲವರು ಅವಿವಾಹಿತರಾಗಿ ಒಂಟಿಯಾಗಿದ್ದರೆ, ಮತ್ತೆ ಕೆಲವರು ಜೀವನ ಸಂಗಾತಿಯ ಅಗಲಿಕೆ, ಸಾವಿನಿಂದಾಗಿ ಒಂಟಿಯಾಗಿರುತ್ತಾರೆ.
ನಗರಗಳಲ್ಲಿನ ಆಫೀಸ್, ಕಂಪನಿ, ಇನ್ಸ್ಟಿಟ್ಯೂಟ್ಗಳಲ್ಲಿ ದೀಪಾವಳಿ ಹಬ್ಬಕ್ಕಾಗಿ ರಜೆ ಕೊಡಲಾಗುವುದರಿಂದ ಅಲ್ಲೆಲ್ಲ ಒಂದು ದಿನ ಮೊದಲೇ ಹಬ್ಬವನ್ನಾಚರಿಸಲಾಗುತ್ತದೆ. ಸಹೋದ್ಯೋಗಿಗಳು ಒಟ್ಟಾಗಿ ಸೇರಿರುವುದರಿಂದ ಆನಂದದ ವಾತಾವರಣವಿರುವುದು ಸಹಜ. ಆದರೆ ಹಬ್ಬದ ದಿನ ಯಾರು ಮನೆಯಲ್ಲಿ ಒಂಟಿಯಾಗಿರುತ್ತಾರೋ ಅವರ ಪಾಲಿಗೆ ಬೆಳಕಿನ ಹಬ್ಬದಲ್ಲಿಯೂ ಅಂಧಕಾರ ಹರಡಿರುತ್ತದೆ. ಇಂತಹ ಒಬ್ಬಂಟಿಗ ವ್ಯಕ್ತಿಯೊಡನೆ ಸೇರಿ ಅವರ ಜೀವನದಲ್ಲಿ ಜ್ಯೋತಿ ಬೆಳಗುವಂತೆ ಮಾಡುವುದು ನಮ್ಮ ಹೊಣೆಯಾಗಿರುತ್ತದೆ.
ಇಂದು ಒಟ್ಟು ಕುಟುಂಬಗಳು ಕಡಿಮೆಯಾಗಿರುವುದರಿಂದ ಜನರು ಕೇವಲ ತಮ್ಮ ಸಂಸಾರದೊಡಗೂಡಿ ಹಬ್ಬವನ್ನು ಆಚರಿಸಬೇಕಾಗಿದೆ. ಹೀಗಿರುವಾಗ 2-3 ಕುಟುಂಬಗಳು ಕೂಡಿದರೆ ಹಬ್ಬದ ಸಂಭ್ರಮ ಖಂಡಿತ ಹೆಚ್ಚುವುದು.
ನಿಮ್ಮ ಅಕ್ಕಪಕ್ಕದ ಒಂಟಿಯಾದ ಹಿರಿಯರು ಅಥವಾ ಯುವಜನರನ್ನು ಹಬ್ಬಕ್ಕಾಗಿ ನಿಮ್ಮ ಮನೆಗೆ ಆಮಂತ್ರಿಸಬಹುದು. ನಿಮ್ಮ ನೆರೆಮನೆಯವರಿಗೆ ಸಿಹಿತಿಂಡಿ, ಪಟಾಕಿಗಳನ್ನು ನೀಡಿ ಶುಭ ಹಾರೈಸಬಹುದು. ಅವರ ಮಕ್ಕಳನ್ನು ನಿಮ್ಮ ಮನೆಗೆ ಕರೆತಂದು ಮನೆಯಲ್ಲಿ ಆಟ ಆಡಿಸಿ ನಗುವಿನ ಹರ್ಷದ ಹೊನಲು ಹರಿಯುವಂತೆ ಮಾಡಬಹುದು.
ನಿಮ್ಮನ್ನು ಯಾರಾದರೂ ಹಬ್ಬಕ್ಕಾಗಿ ತಮ್ಮ ಮನೆಗೆ ಆಮಂತ್ರಿಸಿದರೆ, ಅವರಿಗಾಗಿ ಮಿಠಾಯಿ, ಪಟಾಕಿಗಳನ್ನು ಮರೆಯದೆ ಕೊಂಡೊಯ್ಯಿರಿ. ಅವರ ಮನೆಗೆ ಹೋಗಿ ಮನೆಯ ಅಲಂಕಾರ ಮತ್ತು ಹಬ್ಬದ ಇತರೆ ಕೆಲಸದಲ್ಲಿ ಸಹಾಯ ಮಾಡಿ.
ಹಿರಿಯರೊಡನೆ ಸಂಭ್ರಮ : ಪತ್ರಕರ್ತೆ ಪ್ರಿಯಾ ಹೀಗೆ ಹೇಳುತ್ತಾರೆ, ನಾನು ಉದ್ಯೋಗಕ್ಕಾಗಿ ಬೆಂಗಳೂರಿಗೆ ಮೊದಲ ಬಾರಿ ಬಂದಾಗ 3 ವರ್ಷಗಳು ಒಂದು ಪಿಜಿ ಹಾಸ್ಟೆಲ್ನಲ್ಲಿದ್ದೆ. ಪಕ್ಕದಲ್ಲಿ ಅದಕ್ಕೇ ಸೇರಿದ ಒಂದು ವೃದ್ಧಾಶ್ರಮವಿತ್ತು. ಅಲ್ಲಿ ವೃದ್ಧ ಮಹಿಳೆಯರಿರುತ್ತಿದ್ದರು. ನನ್ನ ಬಿಡುವಿನ ಸಮಯದಲ್ಲಿ ನಾನು ಆಗಾಗ ಅಲ್ಲಿಗೆ ಹೋಗಿ ಅವರೊಡನೆ ಮಾತನಾಡಿಸಿ, ಕಾಲ ಕಳೆಯುತ್ತಿದ್ದೆ. ಅವರೊಟ್ಟಿಗೆ ಕುಳಿತು ಟಿವಿ ನೋಡುತ್ತಿದ್ದೆ. ಅವರೊಡನೆ ನನಗೆ ಒಳ್ಳೆಯ ಸಂಪರ್ಕ ಏರ್ಪಟ್ಟಿತ್ತು. ಕಳೆದ ವರ್ಷ ನಾನು ಮನೆ ಮಾಡಿದ ಮೇಲೆ ದೀಪಾವಳಿಯ ಸಂದರ್ಭದಲ್ಲಿ ಅವರ ನೆನಪಾಯಿತು. ಆಗ ನಾನು ಹೂ, ಹಣ್ಣು, ಸಿಹಿ ತಿಂಡಿಗಳೊಂದಿಗೆ ಅಲ್ಲಿಗೆ ಹೋದೆ. ನನ್ನನ್ನು ನೋಡಿ ಅವರೆಲ್ಲರ ಮುಖದಲ್ಲಿ ಬೇಸರ ಮಾಯವಾಗಿ ಸಂತಸ ಹರಡಿತು. ನಾನು ಕೊಂಡೊಯ್ದಿದ್ದ ಹೂ ಮತ್ತು ಅಲಂಕಾರಿಕ ವಸ್ತುಗಳಿಂದ ವೃದ್ಧಾಶ್ರಮದ ಮುಖ್ಯದ್ವಾರವನ್ನು ಸೊಗಸಾಗಿ ಅಲಂಕರಿಸಿದೆ. ಅವರಿಗೆಲ್ಲ ಸಿಹಿ ತಿನ್ನಿಸಿದೆ. ನಿಜವಾಗಿ ಬಹಳ ಸಂತೋಷವಾಯಿತು.
ನಾನು ಅಲ್ಲಿ ಸುಮಾರು 2 ಗಂಟೆಗಳ ಕಾಲ ಇದ್ದೆ. ಆ ದಿನದ ದೀಪಾವಳಿ ನನ್ನ ಮನಸ್ಸಿನಲ್ಲಿ ಸಿಹಿ ನೆನಪಾಗಿ ಉಳಿದಿದೆ.
ಆಪ್ತರಿಂದ ಅಗಲಿದವರಿಗೆ ಭರವಸೆಯ ಬೆಳಕಾಗಿರಿ : ನಿಮ್ಮ ನೆಂಟರು, ಪರಿಚಿತರು, ನೆರೆಮನೆಯವರು ಅಥವಾ ಸುತ್ತಮುತ್ತಲಲ್ಲಿ ವಾಸಿಸುವ ಯಾರಾದರೂ ದುರ್ಘಟನೆ, ಮೃತ್ಯು, ಪೊಲೀಸ್ ಕೇಸ್, ಆಪ್ತರ ಅಗಲಿಕೆಯಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದರೆ, ದೀಪಾವಳಿಯ ದಿವಸ ಖಂಡಿತ ಅವರನ್ನು ಭೇಟಿ ಮಾಡಿ. ಆ ಮನೆಯ ಜನರಲ್ಲಿ ಭರವಸೆಯ ಬೆಳಕನ್ನು ಬೆಳಗಿಸಿ. ಎಲ್ಲ ಸಮಯದಲ್ಲಿಯೂ ನೀವು ಅವರ ಜೊತೆಯಿರುವುದಾಗಿ ಭರವಸೆ ನೀಡಿ.
ಅಪರಿಚಿತರ ಮುಖದಲ್ಲಿ ಮುಗುಳ್ನಗೆ ಮೂಡಿಸಿ : ಹಬ್ಬದಂದು ನಿಮ್ಮ ಬಂಧು ಮಿತ್ರರು, ಕಲೀಗ್ಸ್, ಕ್ಲೈಂಟ್ಸ್ ಮತ್ತು ಇತರೆ ಪರಿಚಿತರಿಗೆ ಮಿಠಾಯಿ ಕೊಡಲು ಮುಂದಾಗುವಿರಿ. ಹಾಗೆಯೇ ಕಷ್ಟದಲ್ಲಿರುವವರು ನಿಮಗೆ ಅಪರಿಚಿತರಾದರೂ, ಅವರಿಗೂ ಮಿಠಾಯಿ ಕೊಟ್ಟು ಅವರ ಮುಖ ಸಂತೋಷದಿಂದ ಅರಳುವಂತೆ ಮಾಡಿ. ಅವರ ಸಂತೋಷವನ್ನು ನೋಡಿ ನಿಮಗೂ ಸಂತಸವಾಗುವುದರಲ್ಲಿ ಸಂದೇಹವಿಲ್ಲ.
ವಾಲಂಟಿಯರ್ ಆಗಿ : ಪ್ರತಿ ವರ್ಷ ದೀಪಾವಳಿಯ ರಾತ್ರಿ ಅನೇಕರು ಪಟಾಕಿ ಮತ್ತು ಬೆಂಕಿಯ ದುರ್ಘಟನೆಗೆ ಬಲಿಯಾಗುತ್ತಾರೆ. ಆ ಸಮಯದಲ್ಲಿ ಲಾ & ಆರ್ಡರ್ ಮ್ಯಾನೇಜ್ ಮಾಡುವುದು ಕಠಿಣವಾಗಿರುತ್ತದೆ. ಹಾಗಾದಾಗ ನೀವು ವಾಲಂಟಿಯರ್ ಆಗಿ ಮುಂದೆ ಬಂದು ಸುಟ್ಟು ಗಾಯವಾದ ವ್ಯಕ್ತಿಗೆ ಸಹಾಯ ಮಾಡಿದರೆ, ನಿಮ್ಮ ಈ ಕೆಲಸದಿಂದ ಅವರ ಮನೆಯಲ್ಲಿ ಹೊಸ ದೀಪ ಬೆಳಗಿದಷ್ಟು ಸಮಾಧಾನ ಸಿಗುತ್ತದೆ.
ಹಬ್ಬದಂದೂ ಕಾರ್ಯನಿರತರಾದವರಿಗೆ ಶುಭಾಶಯ ಹೇಳಿ : ವಾಚ್ಮನ್, ಪೊಲೀಸ್ ಮನ್, ಡಾಕ್ಟರ್ ಮುಂತಾದವರಿಗೆ ದೀಪಾವಳಿಯಂದೂ ರಜೆ ಸಿಗಲಾರದು. ಅವರೆಲ್ಲ ನಮ್ಮ ಒಳಿತಿಗಾಗಿ ಕೆಲಸದಲ್ಲಿ ತೊಡಗಿರುತ್ತಾರೆ. ಅವರ ಬಗ್ಗೆ ನಿಮಗಿರುವ ಕಾಳಜಿಯನ್ನು ವ್ಯಕ್ತಪಡಿಸಲು ಗ್ರೀಟಿಂಗ್ ಕಾರ್ಡ್, ಮಿಠಾಯಿ ಕೊಟ್ಟು `ಹ್ಯಾಪಿ ದೀಪಾವಳಿ’ ಎಂದು ಹೇಳಿ ನೋಡಿ. ಇದರಿಂದ ಅವರು ಸಂತೋಷಗೊಂಡು ಉತ್ಸಾಹದಿಂದ ಕೆಲಸ ಮಾಡುತ್ತಾರೆ.
ಉಪಯುಕ್ತ ವಸ್ತುಗಳನ್ನು ಇತರರಿಗೆ ನೀಡಿ : ಹಬ್ಬಕ್ಕಾಗಿ ಮನೆಯನ್ನು ಚೊಕ್ಕಟಗೊಳಿಸುವಾಗ ನಮಗೆ ಬೇಕಿಲ್ಲದ ಅನೇಕ ವಸ್ತುಗಳು ಹೊರಬರುತ್ತವೆ. ಅವುಗಳನ್ನು ಎಸೆಯುವ ಬದಲು ಅವಶ್ಯಕತೆ ಇರುವವರಿಗೆ ಕೊಡಿ. 45 ವರ್ಷದ ಸ್ಕೂಲ್ ಟೀಚರ್ ದಮಯಂತಿ ಹೇಳುತ್ತಾರೆ, “ನಮ್ಮ ಕೆಲಸದವಳು 15 ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಾಳೆ. ನಾನು ಹಬ್ಬಕ್ಕಾಗಿ ಮನೆ ಚೊಕ್ಕಟಗೊಳಿಸುವಾಗ, ನನಗೆ ಬೇಡವೆನಿಸಿದ ಅನೇಕ ವಸ್ತುಗಳನ್ನು ತೆಗೆದಿಟ್ಟು, ಅವಳಿಗೆ ಉಪಯೋಗವಾಗುವಂತಹವನ್ನು ಕೊಡುತ್ತಿರುತ್ತೇನೆ.”
ಈ ಅಂಶಗಳಲ್ಲಿ ಒಂದನ್ನು ಪಾಲಿಸಿದರೂ ಈ ಬಾರಿಯ ಹಬ್ಬ ನಿಮಗೆ ಸ್ಮರಣೀಯಾಗಿರುತ್ತದೆ.
– ವಿಭಾ ರಮಣ್