ದಕ್ಷಿಣದವರ ಮನಗೆದ್ದ ಕಿಯಾರಾ
`ಕಬೀರ್ ಸಿಂಗ್’ ತೆಲುಗು ಚಿತ್ರದ ನಂತರ ಕಿಯಾರಾ ಅಡ್ವಾಣಿಯ ದಿನಗಳು ರಂಗೇರಿದವು. ಒಂದು ಕಡೆ ಬಾಲಿವುಡ್ ಆಫರ್‌ಗಳೇನೋ ಇದ್ದೇ ಇವೆ, ಇದೀಗ ದಕ್ಷಿಣದ ದೊಡ್ಡ ದೊಡ್ಡ ನಿರ್ಮಾಪಕ ನಿರ್ದೇಶಕರೂ ಈಕೆಯನ್ನು ಕರೆದು ಮಣೆ ಹಾಕುತ್ತಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ತಮಿಳಿನ ಸೂಪರ್‌ಸ್ಟಾರ್ ವಿಜಯ್‌ನ ಮುಂದಿನ `ದಳಪತಿ 64′ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈಗಂತೂ ಅವಳು `ಕಬೀರ್ ಸಿಂಗ್’ ಚಿತ್ರದ ಸಕ್ಸೆಸ್ ತಲೆಗೇರಿಸಿಕೊಂಡು ಮೆರೆಯುತ್ತಿದ್ದಾಳೆ. ಒಮ್ಮೆ ನಾಯಕ ವಿಜಯ್ ದೇವರಕೊಂಡ ಜೊತೆ, ಮತ್ತೊಮ್ಮೆ ನಿರ್ದೇಶಕ ಕರಣ್ ಜೋಹರ್ ಜೊತೆ ಎಲ್ಲೆಂದರಲ್ಲಿ ಸುತ್ತಿ ಸುಳಿದಾಡಿ, ಸಿನಿ ಕ್ಯಾಮೆರಾಗಳಿಗೆ ಆಹಾರವಾಗುತ್ತಾ ಬೀಗುತ್ತಿದ್ದಾಳೆ.
ಮಿಶನ್ ಮಂಗಲ್‌ನಿಂದ ಶರ್ಮನ್ ವಾಪಸ್ಸು
ಶೀರ್ಷಿಕೆ ನೋಡಿ ಶರ್ಮನ್ ಜೋಶಿ ಮಂಗಳ ಗ್ರಹಕ್ಕೆ ಹೋಗಿದ್ದರೇನೋ ಎಂದುಕೊಳ್ಳಬೇಡಿ. ಶರ್ಮನ್ ಬಹುದಿನಗಳಿಂದ ಒಂದು ಹಿಟ್ ಚಿತ್ರಕ್ಕಾಗಿ ಕಾಯುತ್ತಿದ್ದರು. `ಮಿಶನ್ ಮಂಗಲ್’ ಅವರ ಆಸೆ ಈಡೇರಿಸಿತು. ಇದಕ್ಕೆ ಮುಂಚೆ ಚಿತ್ರದಲ್ಲಿ ಚಾನ್ಸ್ ಸಿಗುವುದೇ ಈತನಿಗೆ ಮಂಗಳ ಗ್ರಹಕ್ಕೆ ಹೋಗಿಬಂದಷ್ಟು ಕಷ್ಟಕರವಾಗಿತ್ತು. ಈ ಬಾಲಿವುಡ್ ನಿಜಕ್ಕೂ ದೊಡ್ಡ ಮಾಯಾಬಜಾರ್. `3 ಈಡಿಯಟ್ಸ್’ನಂಥ ಯಶಸ್ವೀ ಚಿತ್ರದಲ್ಲಿ ಘಟಾನುಘಟಿಗಳ ಜೊತೆ ನಟಿಸಿದ್ದರೂ ಈತನ ಕೆರಿಯರ್ ಗ್ರಾಫ್ ಮೇಲೇರಲೇ ಇಲ್ಲ. ಈಗ `ವಿಶನ್ ಮಂಗಲ್’ ಹಿಟ್ ಆಗಿರುವುದರಿಂದ ಇನ್ನಾದರೂ ಶರ್ಮನ್‌ಗೆ ಹೆಚ್ಚಿನ ಅವಕಾಶ ಸಿಗಲೆಂದು ಹಾರೈಸೋಣ.
ಹಾಲಿವುಡ್ ರಿಜೆಕ್ಟ್ ಬಾಲಿವುಡ್ ಹಿಟ್
ನುಸರತ್ ಭರೂಚಾ ಎಂಬ ಈ ಮಹಾನ್ ನಟಿ, ಬಾಲಿವುಡ್‌ಗೆ ಬರುವುದಕ್ಕೆ ಮುಂಚೆ ತಾನು ಹಾಲಿವುಡ್‌ಗೆ ಆಡಿಷನ್‌ಗೆ ಹೋಗಿದ್ದಾಗಿ ಹೇಳುತ್ತಾಳೆ. ಆದರೆ ಅಲ್ಲಿ ರಿಜೆಕ್ಟ್ ಆದಳಂತೆ. ಆದದ್ದೆಲ್ಲ ಒಳಿತೇ ಆಯಿತು…. ಹಾಗಾಗಿ ನುಸರತ್ ಮುಂಬೈಗೆ ಹಾರಿ ಹಾಲಿವುಡ್‌ನಲ್ಲಿ ತಳವೂರಿ `ಪ್ಯಾರ್ ಕಾ ಪಂಚ್‌ನಾಮಾ, ಸೋನೂ ಕೆ ಬಿಟ್ಟೂ ಕೀ ಸ್ವೀಟಿ’ ಮುಂತಾದ ಚಿತ್ರಗಳಲ್ಲಿ ಮಿಂಚಿದಳು. ಈಗ ಈಕೆ ಆಯುಷ್ಮಾನ್ ಖುರಾನಾ ಜೊತೆ `ಡ್ರೀಮ್ ಗರ್ಲ್’ ಚಿತ್ರದಲ್ಲಿ ಕಾಣಿಸಲಿದ್ದಾಳೆ. ಇತ್ತೀಚೆಗಂತೂ ಆಯುಷ್ಮಾನ್ ನಟಿಸಿದ ಚಿತ್ರಗಳೆಲ್ಲ ಒಂದಾದ ಮೇಲೆ ಒಂದು ಹಿಟ್ ಆಗುತ್ತಿವೆ. ಹೀಗಾಗಿ ನುಸರತ್‌ಳ ಮುಂದಿನ ಚಿತ್ರ ಗ್ಯಾರಂಟಿ ಹಿಟ್! ಅಲ್ಲಿ ಸಲ್ಲದಿದ್ದರೇನಂತೆ…..! ಇಲ್ಲಂತೂ ತವರಿನಲ್ಲಿ ಈಕೆಗೆ ಹಿಟ್ ಮಾರ್ಕೆಟ್ ಇದೆ.
ಸುಲಭವಲ್ಲ ನಮ್ಮ ಮದುವೆ
`ಸೆಕ್ಷನ್ 375′ ಚಿತ್ರದ ತನ್ನ ನಟನೆಗಾಗಿ ಅಪಾರ ಮೆಚ್ಚುಗೆ ಗಳಿಸಿದ ಋಚಾ ಚಡ್ಡಾ, ತನ್ನ ಬಾಯ್‌ಫ್ರೆಂಡ್ ಅಲೀ ಫಝಲ್ ಜೊತೆ ಮದುವೆಯಾಗ ಬಯಸುತ್ತಾಳೆ. ಆದರೆ ಕಷ್ಟ ಎಂದರೆ ಇಬ್ಬರೂ ತಂತಮ್ಮ ಚಿತ್ರಗಳಲ್ಲಿ ಬಿಝಿಯೋ ಬಿಝಿ! ಇಬ್ಬರೂ ಪುರಸತ್ತಾಗಿ ಕುಳಿತು ತಮ್ಮ ಮದುವೆ ಬಗ್ಗೆ ಪ್ಲಾನಿಂಗ್ ಮಾಡಲು ಆಗುತ್ತಲೇ ಇಲ್ಲ. ಈ ಕುರಿತಾಗಿ ಋಚಾ ಹೇಳುತ್ತಾಳೆ, ನಮ್ಮ ಮದುವೆ ಮಾಡಿಸುವುದಕ್ಕಾಗಿ ಒಂದು ದೊಡ್ಡ ಪ್ಲಾನಿಂಗ್ ತಂಡವನ್ನೇ ನಿಯೋಜಿಸಬೇಕಾಗುತ್ತದೆ. ಅವರೇ ಎಲ್ಲಾ ಅರೇಂಜ್‌ಮೆಂಟ್ಸ್ ನೋಡಿಕೊಳ್ಳಬೇಕು, ನಮ್ಮ ಮೇಲೆಯೇ ಆ ಹೊಣೆ ಬಿಟ್ಟರೆ ಇದು ಗಣೇಶನ ಮದುವೆ ಆಗುತ್ತೆ! ಆದರೆ ಬಾಲಿವುಡ್ ತಜ್ಞರು, ಈಗಲೇ ಮದುವೆಯ ಯೋಚನೆ ಮಾಡಬೇಡಮ್ಮ ಋಚಾ ಎನ್ನುತ್ತಾರೆ. ರಿಯಲ್ ಮದುವೆ ಆಗಿರುವ ಹೀರೋಯಿನ್ ಜೊತೆ ಚಿತ್ರಗಳಲ್ಲಿ ವಿಧಿಯಿಲ್ಲದೆ ಹೀರೋ ಹತ್ತಿರ ಬರಬಹುದು, ಆದರೆ ಭಾರತೀಯ ಪ್ರೇಕ್ಷಕರಂತೂ ಖಂಡಿತಾ ಅಲ್ಲ! ರಾಷ್ಟ್ರವಿಡೀ ಇದು ಭಾಷಾತೀತವಾದುದು. ಇನ್ನೊಂದು ವಿಚಾರವೆಂದರೆ, ಅಲಿ ಫಝಲ್‌ನ ಕೆರಿಯರ್ ಇದೀಗ ರೂಪುಗೊಳ್ಳುತ್ತಿದೆ. ಅವನು ಸ್ಥಿರವಾಗಿ ನೆಲೆ ನಿಲ್ಲಲು ಸ್ವಲ್ಪ ಕಾಲಾವಕಾಶ ಬೇಕೇಬೇಕು.
ಕೆಟ್ಟ ಮೇಲೆ ಬುದ್ಧಿ ಬಂತು
ಬಹಳ ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರ ಸರಿದಿದ್ದ ಅಕ್ಷಯ್ ಖನ್ನಾ, ವಾಪಸ್ಸು ನಟನೆಗೆ ಮರಳಿ ಎಲ್ಲರ ಹುಬ್ಬೇರಿಸಿದ್ದಾನೆ. ಇತ್ತೀಚೆಗೆ ರಿಲೀಸ್ ಆಗುತ್ತಿರುವ ಆತನ ಚಿತ್ರಗಳಾವುವು ಫ್ಲಾಪ್ ಅಲ್ಲ! ಆತನ ನಟನೆಯಲ್ಲೂ ಸಾಕಷ್ಟು ಗಾಂಭೀರ್ಯ ಇಣುಕಿದೆ. ಅಕ್ಷಯ್ ತನ್ನ ತಂದೆಯ ಅದೇ ಹಳೆಯ ಸೂತ್ರ ಮತ್ತೆ ಬಳಸಿಲ್ಲ ತಾನೇ ಎಂದು ಸುದ್ದಿಗಾರರು ಬೆನ್ನು ಹತ್ತಿದ್ದಾರಂತೆ. ಹೀಗೇ ಈತನ ತಂದೆ ವಿನೋದ್ ಖನ್ನಾ ಸಹ ದೊಡ್ಡ ಬ್ರೇಕ್ ನಂತರವೇ ಬಾಲಿವುಡ್‌ಗೆ ಮರಳಿ `ದಯಾವಾನ್’ (ಕಮಲ್ ನಟನೆಯ `ನಾಯಗನ್’) ಚಿತ್ರದಿಂದ ಮತ್ತೆ ಶೈನ್ ಆಗಿದ್ದರು. ಇತ್ತೀಚಿನ ಅಕ್ಷಯ್ ಚಿತ್ರ `ಸೆಕ್ಷನ್ 375` ಪ್ರೇಕ್ಷಕರಿಂದ ಬಹು ಮೆಚ್ಚುಗೆ ಗಳಿಸಿತು. ಇಡೀ ಚಿತ್ರದ ತುಂಬಾ ಅಕ್ಷಯ್ ಆವರಿಸಿದ್ದಾನೆ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿರುವ ಈತನ ಫೋಟೋಗಳನ್ನು ನೋಡಿ ಆತನ ಫ್ಯಾನ್ಸ್ ಚಿಂತೆಗೀಡಾಗಿದ್ದಾರೆ. ಏಕೆಂದರೆ ಈತ ಅದರಲ್ಲಿ ಬಹಳ ದುರ್ಬಲನಾಗಿದ್ದಾನೆ. ಆದರೆ ಅಕ್ಷಯ್ ಅದನ್ನು ಅಲ್ಲಗಳೆದು ಗಾಳಿ ಮಾತು ಎಂದಿದ್ದಾನೆ.
ಬಾಡಿ ಅಲ್ಲ ಟ್ಯಾಲೆಂಟ್ ಮುಖ್ಯ
`ದಂ ಲಗಾಕೇ ಐಸಾ’ ನಿಂದ `ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರದವರೆಗೆ ಭೂಮಿಯ ಫ್ಯಾನ್‌ಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಅವಳ ತೂಕ ದಿನೇದಿನೇ ಕುಗ್ಗುತ್ತಿದೆ. ತನ್ನ ಮೊದಲ ಚಿತ್ರದಿಂದಲೇ ಭೂಮಿ ಬಳ್ಳಿಯಂಥ ಬಳುಕುವ ದೇಹವಿದ್ದರೆ ಮಾತ್ರ ಬಾಲಿವುಡ್‌ನಲ್ಲಿ ಮೇಲೇರಬಹುದು, ಎಂಬುದನ್ನು ಸುಳ್ಳಾಗಿಸಿದ್ದಾಳೆ. ಟ್ಯಾಲೆಂಟ್‌ಗೆ ಬೆಲೆ ಎಂಬುದೂ ಈಗಲೂ ಉಂಟು. ಅತ್ಯುತ್ತಮ ಕಥಾಹಂದರವುಳ್ಳ ಚಿತ್ರಗಳಲ್ಲಿ ನಟಿಸಿ ಉತ್ತಮ ಹೆಸರು ಗಳಿಸಿರುವ ಭೂಮಿ, ಸರಿಯಾದ ಸ್ಕ್ರಿಪ್ಟ್ ನ್ನು ಆರಿಸುವ ಸಾಮರ್ಥ್ಯ ತನ್ನಲ್ಲಿದೆ ಎಂಬುದನ್ನೂ ನಿರೂಪಿಸಿದ್ದಾಳೆ. ಆದರೆ ಇಂಥ ಚುರುಕಾದ ಜ್ಞಾನಿ ಭೂಮಿ, ಯಾರೋ ಒಬ್ಬ ರೋಡ್‌ರೋಮಿಯೋ ನಟನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್ ಹೊಂದಿರುವುದು ಎಲ್ಲರ ಹುಬ್ಬೇರಿಸಿದೆ. ಇಲ್ಲಿ ರೋಡ್ ರೋಮಿಯೋ ಬೇರಾರೂ ಅಲ್ಲ, `ಫಾಲ್ತೂ’ ಚಿತ್ರದ ನಾಯಕ ಜಾಕಿ ಭಗ್ನಾನಿ. ಆದರೆ ಈ ವಿಷಯಕ್ಕೆ ಸಾಕ್ಷಿ, ಪುರಾವೆಗಳಿಲ್ಲದ ಕಾರಣ, ಊಹಾಪೋಹಗಳ ಮೇರೆಗೆ ಗಾಳಿ ಮಾತು ಎಲ್ಲೆಡೆ ಹರಡುತ್ತಿದೆ.
ಆಮಿರ್ ಆಗಲಿದ್ದಾನೆ ಮೊಘಲ್
ಅಂತೂ ಇಂತೂ ಆಮಿರ್ ಭೂಷಣ್ ಕುಮಾರರ `ಮೊಘಲ್’ ಚಿತ್ರದಲ್ಲಿ ಐತಿಹಾಸಿಕ ಪಾತ್ರ ನಿಭಾಯಿಸಲು ಒಪ್ಪಿದ್ದಾನೆ. `ಮೀ ಟೂ’ ಆಗ್ರಹಕ್ಕೆ ಬಲಿಯಾಗಿದ್ದ ನಿರ್ದೇಶಕ ಸುಭಾಷ್ ಕಪೂರ್ ಈ ಚಿತ್ರದ ಬೆನ್ನಲ್ಲಿದ್ದ ಕಾರಣ ಆಮಿರ್ ಈ ಪಾತ್ರ ಬೇಡ ಎನ್ನುತ್ತಿದ್ದ. ಈ ವಿಷಯ ತಿಳಿದು ತಮಗೆ ಆಫರ್ ಮಾಡಿದ ಅದೇ ಪಾತ್ರವನ್ನು ಅಕ್ಷಯ್ ಕುಮಾರ್, ಕಪಿಲ್ ಶರ್ಮ ಕೂಡ ತಿರಸ್ಕರಿಸಿದರು. ಇಷ್ಟೆಲ್ಲ ಗೊಂದಲಕ್ಕೆ ಕಾರಣಳಾದ ತನುಶ್ರೀ ದತ್ತಾ ತಾನು `ಮೀ ಟೂ’ ಅಂದಿದ್ದರಿಂದಲೇ ಆಮಿರ್‌ನಂಥ ನಟ ಮೊಘಲ್ ಆಗುತ್ತಿಲ್ಲವಲ್ಲ ಎಂದು ಖೇದಗೊಂಡು, ತನ್ನ ಮೇಲೆ ಗೂಬೆ ಕೂರಿಸುವ ಹುನ್ನಾರ ಇದು ಎಂದು ತನುಶ್ರೀ ಮತ್ತೆ ಹುಯಿಲಿಟ್ಟಳು. ಇದಕ್ಕೆ ಆಮಿರ್ ಏನೂ ಪ್ರತಿಕ್ರಿಯಿಸಲಿಲ್ಲ. `ಮೀ ಟೂ’ ಇಂದಿಗೂ ಹಲವರ ನಿದ್ದೆ ಕೆಡಿಸುತ್ತಿದೆ ಎಂಬುದಂತೂ ನಿಜ.
ಈಗೇನು ಮಾಡಲಿದ್ದಾಳೆ ಜಾಯ್ರಾ?
ಕೆಲವು ದಿನಗಳ ಹಿಂದೆ ಜಾಯ್ರಾ ಫೇಸ್‌ಬುಕ್‌ನಲ್ಲಿ ದೊಡ್ಡದೊಂದು ಭಾಷಣವನ್ನೇ ಕೊರೆದು ಪೋಸ್ಟ್ ಹಾಕಿದ್ದಳು. ಜೊತೆಗೆ ತಾನು ಬಾಲಿವುಡ್‌ನಲ್ಲಿ ಕಂಫರ್ಟ್ ಆಗಿಲ್ಲ, ಇದರ ಸಹವಾಸವೇ ಬೇಡ ಎಂದು ಸಿಡಿದಿದ್ದಳು. ಜಾಯ್ರಾಳ ಈ ನಿರ್ಧಾರ ಎಲ್ಲರಿಂದ ಟೀಕೆಗೆ ಒಳಗಾಯಿತು. ಆದರೆ `ದಿ ಸ್ಕೈ ಈಸ್ ಪಿಂಕ್’ ಚಿತ್ರದ ಟೀಸರ್ ರಿಲೀಸ್ ಆಗಿದ್ದೇ, ಅದರಲ್ಲಿ ಜಾಯ್ರಾಳ ಹಾವಭಾವ ಕಂಡು ಎಲ್ಲರೂ ಹೊಗಳತೊಡಗಿದರು. ಹೀಗಿರುವಾಗ ಹಲವರು ಜಾಯ್ರಾಳ ಈ ಧೋರಣೆ ಡ್ರಾಮಾ ತರಹ ಇದೆ, ಡಬ್ಬಲ್ ಸ್ಟಾಂಡರ್ಡ್ ಡೈಲಾಗ್ ಎಂದೆಲ್ಲ ಆಡಿಕೊಂಡರು. ಈ ಜಾಯ್ರಾ ಬೇಬಿ ಹೀಗೆ ಮಾಡಿದ್ದೇಕೆ? ಇಂಡಸ್ಟ್ರಿಗೆ ಈಕೆ ಇನ್ನೂ ಹೊಸಬಳು. ಧರ್ಮದ ಕಟ್ಟುಪಾಡುಗಳಿಗೆ ನಿಷ್ಠಳಾದ ಜಾಯ್ರಾ ಈಗ ಬಾಲಿವುಡ್‌ನಲ್ಲಿ ಮುಂದುವರಿಯಲೋ ಬೇಡವೋ ಎಂಬ ಗೊಂದಲದಲ್ಲಿದ್ದಾಳೆ.
ಆಹಾ, ಇದೆಂಥ ಬ್ಯೂಟಿಫುಲ್ ಕೆಮಿಸ್ಟ್ರಿ ಇವರದು!
ಶಾಹಿದ್ ಹಾಗೂ ಮೀರಾರ ಜೋಡಿಯ ಯಶಸ್ಸು ಹೇಗಿದೆ ಎಂದರೆ ಸುದ್ದಿಗಾರರು ಸದಾ ಇವರ ಮೇಲೆ ಕಣ್ಣಿಟ್ಟಿರುತ್ತಾರೆ. ಇತ್ತೀಚೆಗೆ ಈ ಜೋಡಿ ಜಿಮ್ ನಲ್ಲಿ ವರ್ಕ್‌ಔಟ್ ಮಾಡಿ ಹೊರಬಂದಾಗ, ಬಾಲಿವುಡ್ ಕ್ಯಾಮೆರಾಗೆ ಸಿಕ್ಕಿಬಿದ್ದರು. ವಿಡಂಬನೆ ಎಂದರೆ, ಹೇಳಿಕೊಟ್ಟ ಹಾಗೆ, ಇವರಿಬ್ಬರೂ ಮೀಡಿಯಾಗೆ ಒಂಟಿ ಅಥವಾ ಜಂಟಿಯಾಗಿ ಸಿಗಲಿ, ಪರಸ್ಪರರ ಕುರಿತು ಒಂದೇ ತರಹ ಹೇಳಿಕೆ ನೀಡುತ್ತಾರೆ. ಹೀಗಾಗಿ ಸುದ್ದಿಗಾರರು ಈ ಜೋಡಿಯ ಕೆಮಿಸ್ಟ್ರಿ ಬಗ್ಗೆ ಎಷ್ಟು ಹೊಗಳಿದರೂ ಸಾಲದು ಎನ್ನುತ್ತಾರೆ. ಮತ್ತೊಂದು ಪ್ಲಸ್ ಪಾಯಿಂಟ್, ಇಬ್ಬರ ವಯಸ್ಸಿನಲ್ಲಿ 14 ವರ್ಷಗಳ ಅಂತರವಿದೆ! ಆದರೆ ತಮ್ಮ ಬಾಡಿ ಲ್ಯಾಂಗ್ವೇಜ್‌ನಿಂದ ಅವರು ಎಂದೂ ಹಾಗೆ ತೋರಿಸಿಕೊಳ್ಳುವುದಿಲ್ಲ. ಹೀಗಾಗಿ ಇವರಿಗೆ ಬಾಲಿವುಡ್‌ನ ಬೆಸ್ಟ್ ಕಪಲ್ ಪಟ್ಟ ಸಿಕ್ಕಿದೆ. ಅದಕ್ಕೂ ಮುಖ್ಯ, ಶಾಹಿದ್ ಪತ್ನಿಗೆ ಈ ಕುರಿತಾಗಿ ಕಿಂಚಿತ್ತೂ ದೂರಿಲ್ಲ!
ಸೋಶಿಯಲ್ ಮೀಡಿಯಾದಲ್ಲಿ ಹುಚ್ಚೆಬ್ಬಿಸಿರುವ ದಿಶಾ
ಇತ್ತೀಚೆಗೆ ಬಾಲಿವುಡ್ ಸಿನಿಮಾಗಳಿಂದ ದೂರ ಸರಿಯುತ್ತಿರುವ ದಿಶಾ, ಫೇಸ್‌ಬುಕ್ ಇತ್ಯಾದಿಗಳಲ್ಲಿ ಭಾರೀ ಆ್ಯಕ್ಟಿವ್ ಆಗಿದ್ದಾಳೆ. ತನ್ನ ಹಾಟ್‌ನೆಸ್ ಬೋಲ್ಡ್ ನೆಸ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಚ್ಚಮ್ಮನಾಗಿ ಪ್ರದರ್ಶಿಸುತ್ತಿರುವ ದಿಶಾ ಎಲ್ಲರನ್ನೂ ದಂಗುಬಡಿಸಿದ್ದಾಳೆ. ಹಾಗೆ ನೋಡಿದರೆ ದಿಶಾ ಈಗ ಕೇವಲ ಎರಡೇ ಜಾಗಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಒಂದು, ಸೋಶಿಯಲ್ ಮೀಡಿಯಾ ಸೈಟ್ಸ್ ಹಾಗೂ ಮತ್ತೊಂದು ಎಂದರೆ ಟೈಗರ್‌ಶ್ರಾಫ್ ಜೊತೆ ಪಾರ್ಟಿ, ಲಂಚ್, ಡಿನ್ನರ್‌ಗಳಲ್ಲಿ! ಇದೆಲ್ಲ ಸರಿ ಕಣಮ್ಮ, ಆಗಾಗ ಬೆಳ್ಳಿ ಪರದೆಯಲ್ಲೂ ಕಾಣಿಸುತ್ತಿರಬೇಕು, ಇಲ್ಲದಿದ್ದರೆ ಜನ ನಿನ್ನ ಮರೆತೇಬಿಟ್ಟಾರು ಎಂಬುದು ಬಲ್ಲವರ ಸಲಹೆ!
ಹಳೆಯದನ್ನು ಮರೆಯದ ಜಗ್ಗು ದಾದಾ
ಬಾಲಿವುಡ್‌ನಲ್ಲಿ 37 ವರ್ಷಗಳ ಸುದೀರ್ಘ ಅನುಭವ ಪಡೆದ ಜಗ್ಗು ದಾದಾ ಜಾಕಿ ಶ್ರಾಫ್, ಇಂದೂ ಸಹ ತಾನು ಎಂಟ್ರಿ ಪಡೆದ ಕಾಲದಲ್ಲಿ ವಾಸಿಸುತ್ತಿದ್ದ ಒಂಟಿ ಕೋಣೆಯ ಬಾಡಿಗೆ ರೂಮನ್ನು ಮರೆತಿಲ್ಲವಂತೆ! ಬಾಲಿವುಡ್‌ನಲ್ಲಿ ತುಸು ಸೆಟ್ ಆದ ಮೇಲೂ ಎಷ್ಟೋ ಕಾಲ ಆತ ಅಲ್ಲೇ ವಾಸಿಸಬೇಕಾಯ್ತು. ಅಲ್ಲಿಂದ ಹಿಂದಿರುಗಿ ನೋಡಲು ಅಗತ್ಯವಿಲ್ಲದಷ್ಟು ಎತ್ತರಕ್ಕೆ ಬೆಳೆದ ಈ ನಟ, ಈಗಲೂ ಅಂದಿನ ಕಾಲ ಹಾಗೂ ಈಗಿನ ವೈಭವದ ದಿನಗಳನ್ನು ಹೋಲಿಸುತ್ತಾ, ಆ ದಿನಗಳಲ್ಲಿ ಟಾಯ್ಲೆಟ್‌ಗೆ ಹೋಗಲು ನಾನು ಸರದಿಯಲ್ಲಿ ನಿಂತಿರಬೇಕಿದ್ದ ಕಷ್ಟದ ದಿನಗಳವು. ಆದರೆ ಈಗ ಜನ ನನ್ನ ಸಿನಿಮಾ ಶೂಟಿಂಗ್ ನೋಡಲು, ನನ್ನನ್ನು ಮಾತನಾಡಿಸಲು ಸರದಿಯಲ್ಲಿ ನಿಲ್ಲುತ್ತಾರೆ, ಎನ್ನುತ್ತಾರೆ. ಅದೇ ರೀತಿ ಅವರ ಮಗ ಟೈಗರ್ ಸಹ ತನ್ನ ಕಷ್ಟದ ದಿನಗಳ ಕುರಿತು ಹೇಳುತ್ತಾ, ಆರಂಭದ ದಿನಗಳಲ್ಲಿ ನಾನು 1-1 ರೂಪಾಯಿಗೂ ಲೆಕ್ಕ ಹಾಕುತ್ತಿದ್ದೆ. ನಾನು ಇಷ್ಟಪಡುತ್ತಿದ್ದ ಎಷ್ಟೋ ದುಬಾರಿ ವಸ್ತುಗಳನ್ನು ಕೊಳ್ಳಲು ಆಗುತ್ತಲೇ ಇರಲಿಲ್ಲ. ಆದರೆ ಈಗ….. ಬಯಸಿದ್ದನ್ನು ಕೊಳ್ಳಬಹುದಾಗಿದೆ ಎನ್ನುತ್ತಾನೆ! ಇದನ್ನೇ `ಈ ಜೀವನ ಬೇವು ಬೆಲ್ಲ…..’ ಎನ್ನುತ್ತಾರಲ್ಲವೇ?
ಆ್ಯಟಿಟ್ಯೂಡ್ ಬಿಟ್ಟುಕೊಡದ ಸಲ್ಮಾನ್
`ದಬಂಗ್’ ಚಿತ್ರ ಹಿಟ್ ಆದದ್ದೇ ತಡ, ತನ್ನ ಎಲ್ಲಾ ಧೋರಣೆ, ಹಾವಭಾವಗಳಲ್ಲಿ ಆ ಚಿತ್ರದ ನಾಟಕನ ಪಾತ್ರದಂತೆಯೇ ಆ್ಯಟಿಟ್ಯೂಡ್ ತೋರುತ್ತಾ ಮೆರೆಯುತ್ತಿದ್ದ ಸಲ್ಮಾನ್ ಖಾನ್, ತನ್ನ ದುರಹಂಕಾರದಿಂದಾಗಿ ಹಿಂದೆ ಕೈ ಹಿಡಿದೆತ್ತಿದ್ದ ಲೀಲಾ ಭನ್ಸಾಲಿಯವರ `ಇನ್ಶಾ ಅಲ್ಲಾಹ್’ ಚಿತ್ರದಿಂದ ಹೊರ ಬರಬೇಕಾಯ್ತು. ಸುದ್ದಿಗಾರರ ಪ್ರಕಾರ, ಸಲ್ಮಾನ್ ತನ್ನ ಪಾತ್ರ ಇನ್ನಷ್ಟು ವಿಜೃಂಭಿಸಲೆಂದು ಚಿತ್ರದ ಕಥೆ ತಿರುಚಿ ಹೀಗೆ ಹೀಗೆ ಮಾಡಿ ಎಂದು ಅಬ್ಬರಿಸಿದನಂತೆ. ಅದಕ್ಕೆ ನಿರ್ದೇಶಕರು ತಯಾರಿಲ್ಲ. ಇಬ್ಬರನ್ನೂ ರಾಜಿ ಮಾಡಿಸಲು ನಿರ್ಮಾಪಕರು ಇನ್ನಿಲ್ಲದ ಪಾಡು ಪಡಬೇಕಾಯ್ತು. ಆದರೆ ಕೊನೆಯಲ್ಲಿ ರೋಸಿಹೋದ ನಿರ್ದೇಶಕರು ಸಲ್ಮಾನ್‌ಗೆ ಗೇಟ್ ಪಾಸ್ ನೀಡಿದರಂತೆ! ಈಗ ಹೃತಿಕ್ ರೋಶನ್ ಆ ಪಾತ್ರ ವಹಿಸಲಿದ್ದಾನೆ. ಡಿಯರ್ ಸಲ್ಮಾನ್ ಖಾನ್, ಆ ಕಾಲದಲ್ಲಿ ಖಾನ್‌ಗಳ ಹೆಸರಿನಲ್ಲಿದ್ದ ಗಮ್ಮತ್ತು ಈಗ ಖಂಡಿತಾ ಇಲ್ಲ ಎಂಬುದನ್ನು ಮರೆಯದಿರು ಎಂಬುದು ಆಪ್ತರ ಸಲಹೆ.