ಕನ್ನಡದ ಸಿನಿಮಾ ಪ್ರಿಯರಿಗೆ ಹೊಸ ಬಗೆಯ ಅನುಭವ ನೀಡಲು ಗುಮ್ಮಾಗಳು ಬರುತ್ತಿದ್ದಾರೆ. ಮಾಸ್ಕ್ ಫೋಬಿಯಾ (ಮುಖವಾಡದ ಭಯ) ಪರಿಕಲ್ಪನೆ ಇಟ್ಟುಕೊಂಡು ಪ್ರೇಕ್ಷಕರ ಮನಸ್ಸನ್ನು ಕಲಕಲು ಗುಮ್ಮಾಗಳು ಹವಣಿಸಲಿದ್ದಾರೆ. ಯಾರು ಈ ಗುಮ್ಮಾಗಳು? ಅವರೇನು ಮಾಡುತ್ತಾರೆ ಎಂಬುದೇ ಸಿನಿಮಾದ ಮೂಲ ಕೇಂದ್ರ. ಹೌದು, ಯುವ ಮನಸ್ಸುಗಳು ಭೌತಿಕವಾದ ಮತ್ತು ಅಸ್ತಿತ್ವವಾದದ ಮಾಯಾ ಕನ್ನಡಿಯಲ್ಲಿ ತಮ್ಮನ್ನು ತಾವು ಹುಡುಕುತ್ತಾ, ಕಳೆದುಕೊಳ್ಳುತ್ತಾ ಕೊನೆಯರಿಯದ ದಾರಿಯಲ್ಲಿ, ಯಾರದೋ ಸಮ್ಮೋಹನಕ್ಕೆ ಸಿಕ್ಕಿದವರಂತೆ ಸಾಗುತ್ತಿದ್ದಾರೆ ಎಂಬ ಒಂದು ಎಳೆಯನ್ನಿಟ್ಟುಕೊಂಡು `ಮನರೂಪ' ಎಂಬ ಹೆಸರಿನಲ್ಲಿ ಸಿ.ಎಂ.ಸಿ.ಆರ್‌ ಮೂವೀಸ್‌ ಈ ಚಲನಚಿತ್ರ ನಿರ್ಮಿಸಿದೆ.

ಸ್ವಮೋಹದ ಪಾಶದಲ್ಲಿ ಯಾವುದು ಭ್ರಾಮಕವೋ, ಯಾವುದು ವಾಸ್ತವವೋ ತಿಳಿಯುತ್ತಿಲ್ಲ. ಜನರೇಶನ್‌ ನೆಕ್ಸ್ಟ್ ಎಂದೂ ಕರೆಯಲ್ಪಡುವ ಈ ಯುವ ಸಮುದಾಯದ ಭ್ರಾಮಕ ಜಗತ್ತಿನ ಪರಿಮಿತಿಯನ್ನು ಶೋಧಿಸುವ ಸಾಹಸದ ಭಾಗವೇ ಮನರೂಪ ಸಿನಿಮಾ. 40 ಗಂಟೆಗಳಲ್ಲಿ ತೆರೆದುಕೊಳ್ಳುವ ಥ್ರಿಲ್ಲರ್‌ ಕಥನ ಸ್ವಗೀಳಿನ ಸುತ್ತಲೇ ಹುಟ್ಟಿಕೊಳ್ಳುವ ಬದುಕೆಂಬ ಹುತ್ತದ ನಿಗೂಢತೆಯನ್ನೂ, ಆಳವನ್ನೂ, ಅನಿಶ್ಚಿತತೆಯನ್ನೂ ತೆರೆದಿಡುವ ಪ್ರಯತ್ನ ಮಾಡುತ್ತದೆ ಎಂದು ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ನಿರ್ದೇಶಕ ಕಿರಣ್‌ ಹೆಗಡೆ ವಿವರಿಸುತ್ತಾರೆ. ಈ ಚಿತ್ರ ಗೆಳೆತನ, ಹಳಸಿದ ಪ್ರೇಮ, ಸಂಬಂಧದ ಸಂಘರ್ಷ, ಒಂಟಿತನ, ಅಪರಾಧ ಎಲ್ಲದರ ಮಿಶ್ರಣವನ್ನೂ ಹೊಂದಿದೆ.

ಹಲವು ವರ್ಷಗಳ ನಂತರ ಸಂಧಿಸುವ ಐವರು ಸ್ನೇಹಿತರು ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ಚಾರಣ ಕೈಗೊಳ್ಳುತ್ತಾರೆ. ಯಾಂತ್ರಿಕ ಬದುಕಿನ ಜಂಜಡದಿಂದ ದೂರ ಸಾಗಿ ತಮ್ಮ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ, ಭವಿಷ್ಯದ ಕನಸುಗಳನ್ನು ಹಂಚಿಕೊಳ್ಳಲು ಐವರು ಸ್ನೇಹಿತರು ಕರಡಿ ಗುಹೆ ನೋಡಲು ಸಾಗುತ್ತಾರೆ. ಹಳೆಯ ನೆನಪು, ಪ್ರೇಮ ವೈಫಲ್ಯ, ಜೀವನದ ತಪ್ಪಿಹೋದ ಅವಕಾಶಗಳು, ತಾವು ಎದುರಿಸಿದ ನೈತಿಕ ಸವಾಲುಗಳನ್ನು ಅರಣ್ಯದ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರೀಕರಿಸಲಾಗಿದೆ.

ಮಾನವೀಯತೆಯ ಪರಿಧಿಯನ್ನೇ ಸೀಮಿತಗೊಳಿಸಿರುವ ಸ್ವಕೇಂದ್ರಿತ ಬದುಕಿನ ಛಾಯೆ ಕರಡಿ ಗುಹೆಯ ಸ್ವಚ್ಛಂದ ವಾತಾವರಣದಲ್ಲಿ ನಿರ್ಮಿಸುವ ವಿಭಿನ್ನ ಅಲೆಯೇ ಕಥೆಯಾಗಿ ವೀಕ್ಷಕರನ್ನು ಆವರಿಸುತ್ತಾ ಸಾಗುತ್ತದೆ. ಗೋವಿಂದರಾಜ್‌ರವರ ಕ್ಯಾಮೆರಾ ಕಣ್ಣಿನಲ್ಲಿ ದಟ್ಟ ಕಾಡಿನ ನಿಗೂಢತೆ, ನೀರವತೆ ಹಾಗೂ ಮುಕ್ತತೆ ಮನೋಜ್ಞವಾಗಿ ಮೂಡಿಬಂದಿದೆ. 43 ದಿನಗಳ ಕಾಡಿನ ಚಿತ್ರೀಕರಣ ಮುಕ್ತಾಯವಾಗಿ ಇದೀಗ ಮನರೂಪ ಚಿತ್ರ ಲೋಕಿ ಮತ್ತು ಸೂರಿಯವರ ಸಂಕಲನ ತಟ್ಟೆಯಲ್ಲಿ ಮರುಹುಟ್ಟನ್ನು ಪಡೆಯುತ್ತಿದೆ. ಚಿತ್ರಕ್ಕೆ ಸ್ವರ್ಣ ಸಂಗೀತ ನೀಡಿದ್ದಾರೆ.

ಮನರೂಪದ ಮೂಲಕ ಚಂದನವನಕ್ಕೆ ಪರಿಚಯಗೊಳ್ಳುತ್ತಿರುವ ರಂಗಭೂಮಿ ಕಲಾವಿದ ದಿಲೀಪ್‌ ಕುಮಾರ್‌ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಅನುಷಾ ರಾವ್‌ ಮತ್ತು ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರುವ ನಿಶಾ ಬಿ.ಆರ್‌. ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭರವಸೆಯ ಪ್ರತಿಭೆ ಆರ್ಯನ್‌ ಮತ್ತು ಶಿವಪ್ರಸಾದ್‌ ಐದು ಜನ ಸ್ನೇಹಿತರ ಬಳಗದ ಉಳಿದಿಬ್ಬರು ಸದಸ್ಯರಾಗಿ ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಮೋಘ ಸಿದ್ಧಾರ್ಥ, ಗಜ ನೀನಾಸಮ್ ಮತ್ತು  ಪ್ರಜ್ವಲ್ ಗೌಡ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ವಿಶಿಷ್ಟ ಪಾತ್ರದಲ್ಲಿ ಜನಪ್ರಿಯ ನಿರ್ದೇಶಕ, ನಟ ಬಿ. ಸುರೇಶ್‌ ಜೀವ ತುಂಬಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ