ದಕ್ಷಿಣದವರ ಮನಗೆದ್ದ ಕಿಯಾರಾ
`ಕಬೀರ್ ಸಿಂಗ್' ತೆಲುಗು ಚಿತ್ರದ ನಂತರ ಕಿಯಾರಾ ಅಡ್ವಾಣಿಯ ದಿನಗಳು ರಂಗೇರಿದವು. ಒಂದು ಕಡೆ ಬಾಲಿವುಡ್ ಆಫರ್‌ಗಳೇನೋ ಇದ್ದೇ ಇವೆ, ಇದೀಗ ದಕ್ಷಿಣದ ದೊಡ್ಡ ದೊಡ್ಡ ನಿರ್ಮಾಪಕ ನಿರ್ದೇಶಕರೂ ಈಕೆಯನ್ನು ಕರೆದು ಮಣೆ ಹಾಕುತ್ತಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ತಮಿಳಿನ ಸೂಪರ್‌ಸ್ಟಾರ್ ವಿಜಯ್‌ನ ಮುಂದಿನ `ದಳಪತಿ 64' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈಗಂತೂ ಅವಳು `ಕಬೀರ್ ಸಿಂಗ್' ಚಿತ್ರದ ಸಕ್ಸೆಸ್ ತಲೆಗೇರಿಸಿಕೊಂಡು ಮೆರೆಯುತ್ತಿದ್ದಾಳೆ. ಒಮ್ಮೆ ನಾಯಕ ವಿಜಯ್ ದೇವರಕೊಂಡ ಜೊತೆ, ಮತ್ತೊಮ್ಮೆ ನಿರ್ದೇಶಕ ಕರಣ್ ಜೋಹರ್ ಜೊತೆ ಎಲ್ಲೆಂದರಲ್ಲಿ ಸುತ್ತಿ ಸುಳಿದಾಡಿ, ಸಿನಿ ಕ್ಯಾಮೆರಾಗಳಿಗೆ ಆಹಾರವಾಗುತ್ತಾ ಬೀಗುತ್ತಿದ್ದಾಳೆ.
ಮಿಶನ್ ಮಂಗಲ್‌ನಿಂದ ಶರ್ಮನ್ ವಾಪಸ್ಸು
ಶೀರ್ಷಿಕೆ ನೋಡಿ ಶರ್ಮನ್ ಜೋಶಿ ಮಂಗಳ ಗ್ರಹಕ್ಕೆ ಹೋಗಿದ್ದರೇನೋ ಎಂದುಕೊಳ್ಳಬೇಡಿ. ಶರ್ಮನ್ ಬಹುದಿನಗಳಿಂದ ಒಂದು ಹಿಟ್ ಚಿತ್ರಕ್ಕಾಗಿ ಕಾಯುತ್ತಿದ್ದರು. `ಮಿಶನ್ ಮಂಗಲ್' ಅವರ ಆಸೆ ಈಡೇರಿಸಿತು. ಇದಕ್ಕೆ ಮುಂಚೆ ಚಿತ್ರದಲ್ಲಿ ಚಾನ್ಸ್ ಸಿಗುವುದೇ ಈತನಿಗೆ ಮಂಗಳ ಗ್ರಹಕ್ಕೆ ಹೋಗಿಬಂದಷ್ಟು ಕಷ್ಟಕರವಾಗಿತ್ತು. ಈ ಬಾಲಿವುಡ್ ನಿಜಕ್ಕೂ ದೊಡ್ಡ ಮಾಯಾಬಜಾರ್. `3 ಈಡಿಯಟ್ಸ್'ನಂಥ ಯಶಸ್ವೀ ಚಿತ್ರದಲ್ಲಿ ಘಟಾನುಘಟಿಗಳ ಜೊತೆ ನಟಿಸಿದ್ದರೂ ಈತನ ಕೆರಿಯರ್ ಗ್ರಾಫ್ ಮೇಲೇರಲೇ ಇಲ್ಲ. ಈಗ `ವಿಶನ್ ಮಂಗಲ್' ಹಿಟ್ ಆಗಿರುವುದರಿಂದ ಇನ್ನಾದರೂ ಶರ್ಮನ್‌ಗೆ ಹೆಚ್ಚಿನ ಅವಕಾಶ ಸಿಗಲೆಂದು ಹಾರೈಸೋಣ.
ಹಾಲಿವುಡ್ ರಿಜೆಕ್ಟ್ ಬಾಲಿವುಡ್ ಹಿಟ್
ನುಸರತ್ ಭರೂಚಾ ಎಂಬ ಈ ಮಹಾನ್ ನಟಿ, ಬಾಲಿವುಡ್‌ಗೆ ಬರುವುದಕ್ಕೆ ಮುಂಚೆ ತಾನು ಹಾಲಿವುಡ್‌ಗೆ ಆಡಿಷನ್‌ಗೆ ಹೋಗಿದ್ದಾಗಿ ಹೇಳುತ್ತಾಳೆ. ಆದರೆ ಅಲ್ಲಿ ರಿಜೆಕ್ಟ್ ಆದಳಂತೆ. ಆದದ್ದೆಲ್ಲ ಒಳಿತೇ ಆಯಿತು.... ಹಾಗಾಗಿ ನುಸರತ್ ಮುಂಬೈಗೆ ಹಾರಿ ಹಾಲಿವುಡ್‌ನಲ್ಲಿ ತಳವೂರಿ `ಪ್ಯಾರ್ ಕಾ ಪಂಚ್‌ನಾಮಾ, ಸೋನೂ ಕೆ ಬಿಟ್ಟೂ ಕೀ ಸ್ವೀಟಿ' ಮುಂತಾದ ಚಿತ್ರಗಳಲ್ಲಿ ಮಿಂಚಿದಳು. ಈಗ ಈಕೆ ಆಯುಷ್ಮಾನ್ ಖುರಾನಾ ಜೊತೆ `ಡ್ರೀಮ್ ಗರ್ಲ್' ಚಿತ್ರದಲ್ಲಿ ಕಾಣಿಸಲಿದ್ದಾಳೆ. ಇತ್ತೀಚೆಗಂತೂ ಆಯುಷ್ಮಾನ್ ನಟಿಸಿದ ಚಿತ್ರಗಳೆಲ್ಲ ಒಂದಾದ ಮೇಲೆ ಒಂದು ಹಿಟ್ ಆಗುತ್ತಿವೆ. ಹೀಗಾಗಿ ನುಸರತ್‌ಳ ಮುಂದಿನ ಚಿತ್ರ ಗ್ಯಾರಂಟಿ ಹಿಟ್! ಅಲ್ಲಿ ಸಲ್ಲದಿದ್ದರೇನಂತೆ.....! ಇಲ್ಲಂತೂ ತವರಿನಲ್ಲಿ ಈಕೆಗೆ ಹಿಟ್ ಮಾರ್ಕೆಟ್ ಇದೆ.
ಸುಲಭವಲ್ಲ ನಮ್ಮ ಮದುವೆ
`ಸೆಕ್ಷನ್ 375' ಚಿತ್ರದ ತನ್ನ ನಟನೆಗಾಗಿ ಅಪಾರ ಮೆಚ್ಚುಗೆ ಗಳಿಸಿದ ಋಚಾ ಚಡ್ಡಾ, ತನ್ನ ಬಾಯ್‌ಫ್ರೆಂಡ್ ಅಲೀ ಫಝಲ್ ಜೊತೆ ಮದುವೆಯಾಗ ಬಯಸುತ್ತಾಳೆ. ಆದರೆ ಕಷ್ಟ ಎಂದರೆ ಇಬ್ಬರೂ ತಂತಮ್ಮ ಚಿತ್ರಗಳಲ್ಲಿ ಬಿಝಿಯೋ ಬಿಝಿ! ಇಬ್ಬರೂ ಪುರಸತ್ತಾಗಿ ಕುಳಿತು ತಮ್ಮ ಮದುವೆ ಬಗ್ಗೆ ಪ್ಲಾನಿಂಗ್ ಮಾಡಲು ಆಗುತ್ತಲೇ ಇಲ್ಲ. ಈ ಕುರಿತಾಗಿ ಋಚಾ ಹೇಳುತ್ತಾಳೆ, ನಮ್ಮ ಮದುವೆ ಮಾಡಿಸುವುದಕ್ಕಾಗಿ ಒಂದು ದೊಡ್ಡ ಪ್ಲಾನಿಂಗ್ ತಂಡವನ್ನೇ ನಿಯೋಜಿಸಬೇಕಾಗುತ್ತದೆ. ಅವರೇ ಎಲ್ಲಾ ಅರೇಂಜ್‌ಮೆಂಟ್ಸ್ ನೋಡಿಕೊಳ್ಳಬೇಕು, ನಮ್ಮ ಮೇಲೆಯೇ ಆ ಹೊಣೆ ಬಿಟ್ಟರೆ ಇದು ಗಣೇಶನ ಮದುವೆ ಆಗುತ್ತೆ! ಆದರೆ ಬಾಲಿವುಡ್ ತಜ್ಞರು, ಈಗಲೇ ಮದುವೆಯ ಯೋಚನೆ ಮಾಡಬೇಡಮ್ಮ ಋಚಾ ಎನ್ನುತ್ತಾರೆ. ರಿಯಲ್ ಮದುವೆ ಆಗಿರುವ ಹೀರೋಯಿನ್ ಜೊತೆ ಚಿತ್ರಗಳಲ್ಲಿ ವಿಧಿಯಿಲ್ಲದೆ ಹೀರೋ ಹತ್ತಿರ ಬರಬಹುದು, ಆದರೆ ಭಾರತೀಯ ಪ್ರೇಕ್ಷಕರಂತೂ ಖಂಡಿತಾ ಅಲ್ಲ! ರಾಷ್ಟ್ರವಿಡೀ ಇದು ಭಾಷಾತೀತವಾದುದು. ಇನ್ನೊಂದು ವಿಚಾರವೆಂದರೆ, ಅಲಿ ಫಝಲ್‌ನ ಕೆರಿಯರ್ ಇದೀಗ ರೂಪುಗೊಳ್ಳುತ್ತಿದೆ. ಅವನು ಸ್ಥಿರವಾಗಿ ನೆಲೆ ನಿಲ್ಲಲು ಸ್ವಲ್ಪ ಕಾಲಾವಕಾಶ ಬೇಕೇಬೇಕು.