ಕನ್ನಡ ಚಿತ್ರವೆಂದರೆ ಸಾಕು ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ರಾಷ್ಟ್ರ ಪ್ರಶಸ್ತಿ ಪಡೆದಾಗ ಮಾತ್ರ ಕನ್ನಡದ ಹೆಸರು ಕೇಳಿಬರುತ್ತಿತ್ತು. ಕಮರ್ಷಿಯಲ್ ಸಿನಿಮಾಗಳಿಗೆ ಹೋಲಿಸಿ ನೋಡಿದಾಗ ನಮ್ಮ ಚಿತ್ರಗಳ ಬಜೆಟ್ ಆಗಲಿ, ಮಾರುಕಟ್ಟೆಯಾಗಲಿ ಅಷ್ಟಕ್ಕಷ್ಟೆ ಎನ್ನುವಂತೆ ಮಾತಾನಾಡಿಕೊಳ್ಳುತ್ತಿದ್ದರು. ಕಾಲ ಉರುಳಿದಂತೆ ಕನ್ನಡದ ಕೆಲವು ಚಿತ್ರಗಳು ಹೊರರಾಜ್ಯದಲ್ಲಿ, ರಾಷ್ಟ್ರಗಳಲ್ಲಿ ತೆರೆ ಕಾಣತೊಡಗಿತು. `ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂಥ ಚಿತ್ರವೊಂದು ಬರಬೇಕು,' ಎಂಬುದು ಎಲ್ಲ ಕನ್ನಡಿಗರ ಆಸೆಯಾಗಿತ್ತು. ಅಂಥವೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇ ಹೊಂಬಾಳೆ ಫಿಲಂಸ್. ಹಣ ಎಷ್ಟೇ ಖರ್ಚಾಗಲಿ, ಸಮಯ ಎಷ್ಟೇ ಹಿಡಿಸಲಿ. ಅಂಥದ್ದೊಂದು ಚಿತ್ರ ಮಾಡಲೇಬೇಕೆಂದು `ಕೆ.ಜಿ.ಎಫ್` ಚಿತ್ರ ಶುರು ಮಾಡಿದರು. ಸುಮಾರು ಎರಡು ವರ್ಷಗಳೇ ತೆಗೆದುಕೊಂಡಿತು. `ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಕೆ.ಜಿ.ಎಫ್‌ನ್ನು ಬಹಳ ವಿಭಿನ್ನವಾಗಿ ಅದ್ಧೂರಿಯಾಗಿ ಎಲ್ಲ ಚಿತ್ರರಂಗ ತಿರುಗಿ ನೋಡುವಂತೆ ಮೇಕಿಂಗ್ ಸ್ಟೈಲ್‌ನಲ್ಲೇ ಮೋಡಿ ಮಾಡತೊಡಗಿದರು.
ಯಶ್ ನಾಯಕ. ಆತನ ಗೆಟಪ್, ಮೇಕಪ್, ಬಳಸಲಾದ ಕಾಸ್ಟ್ಯೂಮ್, ಆ ಗಡ್ಡ ಎಲ್ಲ ಒಂದೊಂದಾಗಿ ಬಯಲಾದಂತೆ ಕ್ಯೂರಿಯಾಸಿಟಿ ಹೆಚ್ಚಾಗತೊಡಗಿತು. ಕೆ.ಜಿ.ಎಫ್ ಬಗ್ಗೆ ಒಂದು ಚೂರು ಸುಳಿವನ್ನೂ ಬಿಟ್ಟುಕೊಡದ ತಂಡ ಪಂಚಭಾಷೆಯಲ್ಲಿ ತೆರೆಕಾಣಲಿದೆ ಎಂಬ ಸುದ್ದಿ ಬಂದಾಗ ಎಲ್ಲರಲ್ಲೂ ಅಚ್ಚರಿ ಮೂಡತೊಡಗಿತು. ಈ ಚಿತ್ರದ ಪ್ರತಿಯೊಂದು ಝಲಕ್‌ಗಾಗಿ ಅಭಿಮಾನಿಗಳು, ಚಿತ್ರರಂಗ ನಿರೀಕ್ಷೆ ಮಾಡತೊಡಗಿತು. ಟ್ರೇಲರ್ ಬಿಡುಗಡೆ ದಿನ ಹತ್ತಿರ ಬರುತ್ತಿದ್ದಂತೆ ಹೊಂಬಾಳೆ ಫಿಲಂಸ್ ಭಾರತದ ಎಲ್ಲ ಪಂಚಭಾಷೆಯ ಪತ್ರಕರ್ತರನ್ನು ಬೆಂಗಳೂರಿಗೆ ಆಹ್ವಾನಿಸಿ ಅವರಿಗೆಲ್ಲ ಫೈವ್ ಸ್ಟಾರ್ ಟ್ರೀಟ್‌ಮೆಂಟ್ ನೀಡಿ ಅದ್ಧೂರಿಯಾಗಿ ಟ್ರೇಲರ್ ಬಿಡುಗಡೆ ಮಾಡಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ. ಒಂದಾದ ಮೇಲೊಂದರಂತೆ ಟ್ರೇಲರ್ ತೆರೆ ಕಾಣುತ್ತಿದ್ದಂತೆ ಬಾಲಿವುಡ್, ಟಾಲಿವುಡ್ ಎಲ್ಲ ಕಡೆ ಕೆ.ಜಿ.ಎಫ್.... ಸಿನಿಮಾದ ಟ್ರೇಲರ್ ಬಗ್ಗೆ ಕ್ರೇಜ್ ಹುಟ್ಟಿಕೊಂಡಿತು.
ತಮಿಳಿನಲ್ಲಿ ವಿಶಾಲ್ ಡಬ್ಬಿಂಗ್ ರೈಟ್ಸ್ ಪಡೆದರೆ ಹಿಂದಿಗೆ ಫರಾನ್ ಅಖ್ತರ್, ತೆಲುಗಿನಲ್ಲಿ ಅತ್ಯಂತ ಪ್ರಭಾವಿ ವಿತರಕರು ಕೆ.ಜಿ.ಎಫ್ ವಿತರಕರಾದರು.
ಏಕಕಾಲದಲ್ಲಿ ಎಲ್ಲ ಪಂಚಭಾಷೆಯಲ್ಲೂ ಕೆ.ಜಿ.ಎಫ್ ರಿಲೀಸ್ ಮಾಡುವುದಾಗಿ ಘೋಷಿಸಿತು. ರಿಲೀಸ್‌ಗೆ ಮೊದಲೇ ಈ ಚಿತ್ರ `ಬಾಹುಬಲಿ' ನಂತರದ ಅದ್ಧೂರಿ ಚಿತ್ರವಾಗಲಿದೆ ಎಂದು ಹೊಗಳಿದರು.
ಯಶ್ ಹೆಸರು ಭಾರತೀಯ ಚಿತ್ರರಂಗದಲ್ಲೇ ಜನಪ್ರಿಯವಾಗತೊಡಗಿತು. ಶಾರೂಖ್ ಖಾನ್, ಅಮಿರ್ ಖಾನ್, ಅಮಿತಾಭ್ ಚಿತ್ರಗಳನ್ನು ಪಕ್ಕಕ್ಕಿಡುವಂತಾಯ್ತು. ಇಷ್ಟೆಲ್ಲ ಹೈಪ್ಸ್ ಪಡೆದ `ಕೆ.ಜಿ.ಎಫ್' ಚಿತ್ರದಲ್ಲಿ ಅಂಥಾದ್ದೇನಿದೆ ಎನ್ನುವ ಕುತೂಹಲವೇ ಈ ಸಿನಿಮಾವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿತ್ತು.
ಯಶ್ ಎಲ್ಲ ಭಾಷೆಯ ಪತ್ರಕರ್ತರ ಕಣ್ಮಣಿಯಾಗಿಬಿಟ್ಟಿದ್ದ. ಹಿಂದಿಯಲ್ಲೇ ಮಾತನಾಡಿದ, ಮಲಯಾಳಂನಲ್ಲೂ ಒಂದೆರಡು ಮಾತು, ತೆಲುಗು, ತಮಿಳು ಎಲ್ಲ ಭಾಷೆಯಲ್ಲೂ ಮಾತನಾಡಿದಾಗ ಸಹಜವಾಗಿ ಅವರೆಲ್ಲರೂ ಖುಷಿಪಟ್ಟಿದ್ದರು.
ಎರಡು ವರ್ಷವೇಕೆ ಹಿಡಿಯಿತು? ಎಂದು ಕೇಳಿದಾಗ ಸಾಮಾನ್ಯವಾಗಿ ಮನೆ ಕಟ್ಟಲು ಕಡಿಮೆ ಸಮಯಬೇಕಾಗುತ್ತದೆ. ಆದರೆ ಅರಮನೆ ಕಟ್ಟಲು ಹೆಚ್ಚು ಸಮಯ ಹಿಡಿಯುತ್ತದೆ ಎಂದು ಉತ್ತರ ಕೊಟ್ಟು ಚಪ್ಪಾಳೆ ಗಿಟ್ಟಿಸಿದ್ದರು. ಇದು ಬರೀ ಟ್ರೇಲರ್, ಪಿಕ್ಚರ್ ಅಭೀ ಬಾಕಿ ಹೈ ಎಂದು ಹಿಂದಿಯಲ್ಲಿ ಡೈಲಾಗ್ ಹೊಡೆದಿದ್ದರು ಯಶ್.