ಸರ್ಕಾರದ ನಿಯಂತ್ರಣಕ್ಕೆ ಸಿಗದ ಜನಜಂಗುಳಿ
ದೇಶದಲ್ಲಿ ಚಿಕ್ಕ ಪುಟ್ಟ ಘಟನೆಗಳಿಂದ ರೊಚ್ಚಿಗೇಳುವ ಜನಜಂಗುಳಿ ಥಳಿಸಲು ಮುಂದಾಗುತ್ತಿರುವುದು ಈಗ ಸಂಸ್ಕೃತಿಯ ಒಂದು ಭಾಗವೇ ಆಗಿಹೋಗಿದೆ. ಮಕ್ಕಳ ಕಳ್ಳತನ ಇರಬಹುದು, ಹಸು ಕದ್ದೊಯ್ಯುವ ಘಟನೆಯೇ ಆಗಿರಬಹುದು. ಧ್ವಜ ರಕ್ಷಣೆ ಅಥವಾ ಮೆರವಣಿಗೆಯನ್ನು ವಿರೋಧಿಸುವವರೇ ಇರಬಹುದು. ಜನಜಂಗುಳಿ ಒಮ್ಮೆಲೆ ಪ್ರತ್ಯಕ್ಷವಾಗಿ ಥಳಿಸಲು ಮುಂದಾಗುವುದು ಸಾಮಾನ್ಯ ಎಂಬಂತಾಗಿದೆ. ಸರಗಳ್ಳತನ, ಛೇಡಿಸುವಿಕೆಯ ಘಟನೆಗಳಲ್ಲಿ ಪೊಲೀಸರು ಬರುವ ಮೊದಲೇ ತಾವೇ ಅಂತಹ ವ್ಯಕ್ತಿಯನ್ನು ಹೊಡೆಯಲು ಶುರು ಮಾಡುತ್ತಾರೆ. ಆಗ ಪೊಲೀಸರೇ ಅಪರಾಧಿಯನ್ನು ರಕ್ಷಿಸಬೇಕಾಗಿ ಬರುತ್ತದೆ.
ಹಿಂಸೆಯ ಸಂಸ್ಕೃತಿ ಮೊದಲು ಹಳ್ಳಿಗಳಲ್ಲಷ್ಟೇ ಇತ್ತು. ಈಗ ನಗರಕ್ಕೂ ಪಸರಿಸಿ ಮನೆಮನೆಗೂ ನುಗ್ಗಿದೆ. ಕೈಯೆತ್ತುವ ಅಭ್ಯಾಸ ಹಾಗೂ ಕೋಪ ಮಾಡಿಕೊಳ್ಳುವುದು ಒಂದು ಗುಣವಾಗಿಬಿಟ್ಟಿದೆ.
ಈ ಸಂಸ್ಕೃತಿ ಎಲ್ಲೆಲ್ಲೂ ಇದೆ. ಆದರೆ ನಮ್ಮಲ್ಲಿ ರಾಜಕೀಯ ಹಾಗೂ ಧರ್ಮದ ಕಾರಣದಿಂದ ಇದು ಇನ್ನಷ್ಟು ಹೆಚ್ಚಿಗೆ ಪಸರಿಸುತ್ತಿದೆ. ಹೀಗಾಗಿ ಕಾರಣವಿಲ್ಲದೆ ನಾವು ಜಗಳಕ್ಕೆ ಇಳಿದುಬಿಡುತ್ತೇವೆ. ಕಳೆದ 30-40 ವರ್ಷಗಳ ರಾಜಕೀಯದಲ್ಲಿ ಜನಜಂಗುಳಿಯ ದುರ್ಬಳಕೆ ಪ್ರಮಾಣ ಹೆಚ್ಚಿದೆ. ಕಾಶ್ಮೀರದಿಂದ ತಮಿಳುನಾಡು ಪ.ಬಂಗಾಳದಿಂದ ರಾಜಸ್ತಾನದತನಕ ಎಲ್ಲೆಲ್ಲೂ ಇದು ಹಬ್ಬುತ್ತಿದೆ. ಜನಸಮೂಹ ಮಾಡಿದ್ದೇ ಸರಿ, ಅದು ಏನು ಬೇಕಾದರೂ ಮಾಡಬಹುದು ಎಂದು ಪಾಠ ಬೋಧಿಸಲಾಗುತ್ತದೆ.
ಹೊಸ ಟ್ರೆಂಡ್ ಏನೆಂದರೆ, ಜನಸಮೂಹ ಥಳಿಸಲಾರಂಭಿಸಿದರೆ ಅವರನ್ನು ತಡೆಯಲು ಹೋಗದೆ ವಿಡಿಯೋ ಮಾಡಿಕೊಳ್ಳುವುದು. ಪೊಲೀಸರಿಗೂ ವಿಷಯ ತಿಳಿಸುವುದಿಲ್ಲ. ಪಕ್ಕದ ಮನೆಯವರು ಯಾರನ್ನೊ ಹೊಡೆಯುತ್ತಿರಬಹುದು, ಅತ್ತೆ ಸೊಸೆಯನ್ನು ಮನಬಂದಂತೆ ಥಳಿಸುತ್ತಿರಬಹುದು, ಅವರನ್ನು ತಡೆಯಲು ಹೋಗಬೇಡಿ, ಅದರ ವಿಡಿಯೋ ಮಾಡಿಕೊಳ್ಳಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಿ ಎಂದು ಹೇಳಲಾಗುತ್ತದೆ.
ವಿಡಿಯೋ ಮಾಡುವುದು ಅಂತಹ ಅಪರಾಧಗಳನ್ನು ತಡೆಯುತ್ತದೆ ಎಂದು ಯೋಚಿಸುವುದು ತಪ್ಪು. ಅದಕ್ಕೆ ಬದಲು ಹೆಚ್ಚಿಸುತ್ತದೆ. ಅದನ್ನು ನೋಡುವವನು ತಾನೂ ಹಾಗೆ ಮಾಡಬೇಕು ಎಂದುಕೊಳ್ಳುತ್ತಾನೆ.
ಸಾಮಾನ್ಯ ಗೂಂಡಾ ಪ್ರವೃತ್ತಿಯ ಜನರು ಥಳಿಸುವುದಕ್ಕೆ ಮುಂದಾಗುತ್ತಾರೆ. ಆಕ್ರೋಶದಿಂದ ಏನನ್ನಾದರೂ ಸಾಧಿಸಬಹುದು ಎಂದುಕೊಳ್ಳಲಾಗುತ್ತದೆ. ಧರ್ಮದ ರಾಜಕಾರಣ ಈ ಕೋಪಕ್ಕೆ ರಕ್ಷಣೆ ನೀಡುತ್ತಿದೆ. ಕಾಡಿಗಳಲ್ಲಿ, ಮೆರವಣಿಗೆಗಳಲ್ಲಿ, ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ `ದೇಶದ್ರೋಹಿ’ಗಳಿಗೆ ಸ್ಥಳದಲ್ಲೇ ಶಿಕ್ಷೆ ಕೊಡುವಾಗ ಯಾರೂ ಏನೂ ಹೇಳುವುದಿಲ್ಲ. ಅಂಥವರಿಗೆ ಶಿಕ್ಷೆ ಕೂಡ ಆಗುವುದಿಲ್ಲ. ಅವರು ನಿರಪರಾಧಿ ಎಂದು ಹೊರಗೆ ಬಂದರೆ ಅವರಿಗೆ ಅದ್ಧೂರಿ ಸ್ವಾಗತ ಕೊಡಲಾಗುತ್ತದೆ.
ಹುಡುಗಹುಡುಗಿ ಜೊತೆ ಜೊತೆಗೆ ಕುಳಿತಿದ್ದರೆ ಅವರನ್ನು ಮನಬಂದಂತೆ ಥಳಿಸಲಾಗುತ್ತದೆ. ಥಳಿಸುವವರ ವಿಡಿಯೋ ವೈರಲ್ ಆಗುತ್ತದೆ. ಅಷ್ಟಾದರೂ ಪೊಲೀಸರು ಯಾರೊಬ್ಬರನ್ನೂ ಬಂಧಿಸುವುದಿಲ್ಲ. ಅದೆಷ್ಟೋ ಹುಡುಗಿಯರ ಬಲಾತ್ಕಾರದ ವಿಡಿಯೋಗಳು ವೈರಲ್ ಆಗಿವೆ. ಆದರೆ ಪೊಲೀಸರಿಗೆ ಮಾತ್ರ ಘಟನೆ ಎಲ್ಲಿಯದು, ಅಪರಾಧಿಗಳು ಯಾರು ಎನ್ನುವುದು ಗೊತ್ತೇ ಆಗುವುದಿಲ್ಲ. ಹೊಡೆಯಿರಿ, ಕೈ ಹಗುರ ಮಾಡಿಕೊಳ್ಳಿ ಇದು ನಮ್ಮ ಸಂಸ್ಕೃತಿಯ ಭಾಗವಾಗುತ್ತಿದೆ. ಯಾರು ದೇವರಲ್ಲಿ ನಂಬಿಕೆ ಇಡುತ್ತಾನೊ, ರಾತ್ರಿ ಹಗಲು ಪೂಜೆ ಮಾಡುತ್ತಾನೊ, ಸೋಶಿಯಲ್ ಆಗಿರುವ ನಾಟಕ ಮಾಡುತ್ತಾನೊ ಅಂಥವರಿಗೆ ತಿಳಿ ಹೇಳುವುದು ಕಷ್ಟಕರ.
ದೇಶದ ವಾತಾರಣವನ್ನು ಉದ್ದೇಶಪೂರ್ಕವಾಗಿ ಎಷ್ಟೊಂದು ಕಲುಷಿತಗೊಳಿಸಲಾಗಿದೆಯೆಂದರೆ, ನಾವು ಸಭ್ಯತೆಯನ್ನೇ ಮರೆತುಬಿಟ್ಟಿದ್ದೇವೆ. ಪೊಲೀಸರಿಗೆ ಇಂತಹ ಪ್ರಕರಣಗಳು ಚಿನ್ನದ ಮೊಟ್ಟೆ ಇಡುವ ಕೋಳಿಗಳಂತೆ. ಹೊಡೆದವರಿಂದಲೂ ವಸೂಲಿ, ಹೊಡೆಸಿಕೊಂಡವರಿಂದಲೂ ವಸೂಲಿ. ಇದರಿಂದ ಕುಟುಂಬಗಳಿಗೇ ಹಾನಿ ಆಗುತ್ತಿದೆ. ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚೆಚ್ಚು ಬರುತ್ತಿವೆ. ಮಕ್ಕಳ ಪುಂಡತನ ಜಾಸ್ತಿಯಾಗುತ್ತಿದೆ. ಓದುಬರಹ, ಕಾನೂನಿನ ಗೌರವ, ಹಕ್ಕುಗಳ ಇತಿಮಿತಿ ಅರಿಯುವುದು ಈಗ ಘೋಷಣೆಗಳ ಮಹಾಪೂರದಲ್ಲಿ ಕೊಚ್ಚಿಹೋಗಿವೆ. ಜಯ ಅದು, ಜಯ ಇದು, ಈ ಜಯ ಶಾಂತಿ ಮತ್ತು ನೆಮ್ಮದಿಯನ್ನು ಮಸಣಕ್ಕೆ ಒಯ್ದು ತಲುಪಿಸಿವೆ.
ದೇಶದ ಪ್ರಗತಿಯ ನೈಜತೆ ಬಯಲು ಮಾಡುತ್ತಿರುವ ಘಟನೆಗಳು
ಕೆಲವು ತಿಂಗಳುಗಳ ಹಿಂದೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ ಇಂದಿನ ಉದ್ಯಮಗಳ ನೈಜತೆ ಬಯಲು ಮಾಡಿತು. ಭಾರತದಲ್ಲಿ ವ್ಯಾಪಾರ ಮಾಡುವುದು ಹಾಗೂ ಅದನ್ನು ನಡೆಸಿಕೊಂಡು ಹೋಗುವುದು ಎಷ್ಟೊಂದು ಕಠಿಣ ಎನ್ನುವುದು ಈ ಪ್ರಕರಣದಿಂದ ಗೊತ್ತಾಗುತ್ತದೆ. ಅವರು ತಮ್ಮ ಹಿಂದೆ ಇಬ್ಬರು ಪುತ್ರಿಯರು ಹಾಗೂ ಪತ್ನಿಯನ್ನು ಹಾನಿಭರಿಸುವ ಜವಾಬ್ದಾರಿಯೊಂದಿಗೆ ಬಿಟ್ಟುಹೋಗಿದ್ದಾರೆ.
ಮೈಸೂರಿನ ಓಂಪ್ರಕಾಶ್ ತಮ್ಮ ಇಡೀ ಕುಟುಂಬದವರನ್ನು ಗುಂಡು ಹೊಡೆದು ಸಾಯಿಸಿ ಕೊನೆಗೆ ತಾವು ಆತ್ಮಹತ್ಯೆ ಮಾಡಿಕೊಂಡರು. ತಮ್ಮ ಬಳಿಕ ಕುಟುಂಬದ ಯಾರಿಗೂ ಯಾವುದೇ ತೊಂದರೆ ಬರಬಾರದು ಎಂದು ಅವರು ಈ ನಿರ್ಧಾರಕ್ಕೆ ಬಂದರು.
ಓಂಪ್ರಕಾಶ್ ಒಂದು ಆ್ಯನಿಮೇಶನ್ ಫಿಲ್ಮ್ ಕಂಪನಿ ಶುರು ಮಾಡಿದ್ದರು. ಅದರಲ್ಲಿ ಭಾರಿ ಹಾನಿಯಾಗಿತ್ತು. ಅದರ ಹಾನಿ ಭರಿಸುವುದು ಹೇಗೆಂದು ಅವರಿಗೆ ಗೊತ್ತಾಗುತ್ತಿರಲಿಲ್ಲ. ದುಬೈನ ಯಾರೊ ಒಬ್ಬ ಡಾನ್ ತನ್ನನ್ನು ಸಾಯಿಸಲು ಹೊಂಚು ಹಾಕುತ್ತಿದ್ದ ಎಂದು ಅವರು ಹೇಳಿದ್ದರು. ದುಬೈನ ಡಾನ್ ಹಿಂದೆ ಬೀಳುವಷ್ಟು ದೊಡ್ಡ ತಪ್ಪನ್ನೇನೂ ಅವರು ಮಾಡಿರಲಿಲ್ಲ.
ಹೆಂಡತಿ, ಮಕ್ಕಳು, ತಂದೆತಾಯಿಯರನ್ನು ಸಾಯಿಸುವ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಏಕೆಂದರೆ ಈಗ ವ್ಯಾಪಾರ ನಡೆಸುವುದು ಬಹಳ ಕಷ್ಟಕರವಾಗಿ ಪರಿಣಮಿಸಿದೆ. ಈಗ ಮಾರುಕಟ್ಟೆಯ ಒತ್ತಡ ಎಷ್ಟೊಂದು ಹೆಚ್ಚಿದೆ ಎಂದರೆ, ಈಗ ಪ್ರತಿಯೊಬ್ಬರೂ ಕೆಲವೇ ದಿನಗಳಲ್ಲಿ ಭಾರಿ ಹಣ ಗಳಿಸಬೇಕೆನ್ನುತ್ತಾರೆ. ಆದರೆ ಅದು ವಾಸ್ತವದಲ್ಲಿ ಸಾಧ್ಯವಿಲ್ಲ. ವ್ಯಾಪಾರ ಎನ್ನುವುದು ಒಂದು ತೇಗದ ಮರದ ಹಾಗೆ. ಅದು ಬಲು ನಿಧಾನವಾಗಿ ಬೆಳೆಯುತ್ತ ಹೋಗುತ್ತದೆ. ಇಲ್ಲಿ ಕಾಡು ಪ್ರಾಣಿಗಳು ಹಾಗೂ ಬೀಡಾಡಿ ದನಗಳು ಎಷ್ಟಿವೆಯೆಂದರೆ, ಅವು ಸಸಿಯನ್ನೇ ನುಂಗಿಬಿಡಲು ತಯಾರಾಗಿವೆ. ಆ ಸಸಿ ನೆಟ್ಟ ವ್ಯಕ್ತಿ ನೋಡು ನೋಡುತ್ತಿರುವಂತೆ ದಿವಾಳಿಯಾಗಿ ಹೋಗುತ್ತಾನೆ. ಶ್ರೀಮಂತ ಕುಟುಂಬದಿಂದ ಬಂದ ವ್ಯಕ್ತಿ, ಸಾಧಾರಣ ವ್ಯಕ್ತಿಯಾಗಿರಲು ಇಷ್ಟಪಡುವುದಿಲ್ಲ.
ಓಂಪ್ರಕಾಶ್‌ಗೆ ದುಬೈ ಡಾನ್‌ನ ಬೆದರಿಕೆಯಿತ್ತೊ ಅಥವಾ ಪ್ರತಿಷ್ಠೆ ತೋರಿಸಲು ಅವರು 4 ಜನ ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದರೊ, ಏನೋ? ಅದರಲ್ಲಿ ಇಬ್ಬರೂ ಸದಾ ಪಿಸ್ತೂಲ್ ಜೊತೆಗೆ ಅವರೊಂದಿಗೆ ಸುತ್ತಾಡುತ್ತಿದ್ದರು. ಈ ತೆರನಾದ ಘಟನೆಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಹಾಗೆ ನೋಡಿದರೆ ಅವರು ಕೋಟ್ಯಂತರ ರೂ. ಮಾಲೀಕರಾಗಬೇಕಿತ್ತು.
ಜೂನ್‌ನಲ್ಲಿ ಪಾಟ್ನಾದ ಒಬ್ಬ ವ್ಯಾಪಾರಿ ಪತ್ನಿ, ಮಗಳ ಜೊತೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡರು. ಏಕೆಂದರೆ ಅವರು ಸಾಲಗಾರರಿಂದ ಬಹಳ ಕಂಗಾಲಾಗಿದ್ದರು. ದೆಹಲಿಯ ಯೋಗೇಶ್ ಅರೋರಾ ಮೇನಲ್ಲಿ ದೆಹಲಿಯ ಹೋಟೆಲ್ ಕೋಣೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಏಕೆಂದರೆ ಅವರೂ ಸಾಲಗಾರರ ಕಾಟದಿಂದ ರೋಸಿ ಹೋಗಿದ್ದರು.
ವಿನೀತ್ ವಿಗ್ ವ್ಯಾಪಾರಿ. ಅವರು ಹಣಕಾಸು ಮುಗ್ಗಟ್ಟಿನಿಂದ ಗುರುಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡರು. 2012ರಲ್ಲಿ ರಾಜ್ ಟ್ರಾವೆಲ್ಸ್ ನ ಮಾಲೀಕ ಲಲಿತ್ ಸೇಠ್ ಮುಂಬೈನ ಸೀ ಲಿಂಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಎಂ. ರಾಜಪಾಲ್‌ರ ಮಗ ಆನಂದ್ ಪಾಲ್ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಮಲೆಯಾಳಿ ಸಾಡಾನ್ ಪರೆಯಾಲಿ ಒಂದು ಆಡಿಟೋರಿಯಂನಲ್ಲಿ ಹೂಡಿಕೆ ಮಾಡಿದ್ದರು. ಆದರೆ ಸರ್ಕಾರಿ ಆಡಳಿತದಿಂದ ಲೈಸೆನ್ಸ್ ದೊರೆಯದ ಕಾರಣ ಅವರು ಆತ್ಮಹತ್ಯೆ ಮಾಡಿಕೊಂಡರು.
ದೇಶದ ಪ್ರಗತಿಯ ಘೋಷಣೆಗಳ ಪೊಳ್ಳನ್ನು ಬಟಾಬಯಲು ಮಾಡುತ್ತಿರುವ ಈ ಆತ್ಮಹತ್ಯೆಗಳ ಹಿಂದೆ ಅವರ ಹೆಂಡತಿಯರು ಹಾಗೂ ಅವರ ಬೆಳೆಯುತ್ತಿರುವ ಮಕ್ಕಳ ನೋವು ಅಡಗಿದೆ. ಅದರ ಬಗ್ಗೆ ಚರ್ಚೆ ಮಾಡುವ ಪುರಸತ್ತು ಯಾರೊಬ್ಬರಿಗೂ ಇಲ್ಲ. ಮೀಡಿಯಾ ಅಂತೂ ಹಾಯ್ ಹಾಯ್ ಹೇಳಿ ಸುಮ್ಮನಾಗಿಬಿಟ್ಟಿದೆ. ಆದರೆ ಯಾವ ಉದ್ಯಮಿಗಳು ತಮ್ಮ ಕುಟುಂಬದವರನ್ನು ನಿರಾಧಾರರನ್ನಾಗಿ ಬಿಟ್ಟು ಹೋಗಲು ಕಾರಣರಾದ ಅಧಿಕಾರಿಗಳನ್ನು ಮಾತ್ರ ಯಾರೂ ವಿಚಾರಣೆ ಮಾಡುವುದಿಲ್ಲ. ಆ ಕಾರಣದಿಂದ ಉದ್ಯಮಿಗಳ ಪತ್ನಿಯರು ದುಃಖ ಮತ್ತು ಉದ್ಯಮ ನಡೆಸಿಕೊಂಡು ಹೋಗಬೇಕಾದ ಇಬ್ಬಗೆಯ ಜವಾಬ್ದಾರಿ ಹೊರಬೇಕಾಗಿ ಬರುತ್ತಿದೆ.
ಸ್ವಯಂ ಕೈಕೋಳ ಹಾಕಿಕೊಳ್ಳುತ್ತಿರುವ ಮಹಿಳೆಯರು
ಜಾತಿಯ ಹಾಹಾಕಾರ ಈಗಲೂ ಎಷ್ಟಿದೆಯೆಂದರೆ, ಅದು ಮಕ್ಕಳ ಮನಸ್ಸನ್ನೂ ಪ್ರವೇಶಿಸಿಬಿಟ್ಟಿದೆ. ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ಓಬಿಸಿ ಯುವತಿ ದಲಿತ ಹುಡುಗನನ್ನು ಮದುವೆಯಾಗಿ ಗಂಡನೊಂದಿಗೆ ಖುಷಿಯಿಂದ ಜೀವನ ನಡೆಸಿದಳು. ಆಕೆ ತನ್ನೂರಿನಿಂದ ದೂರವೇ ಇದ್ದಳು. ಹೀಗಾಗಿ ಆಕೆಗೆ ಯಾರೂ ಏನೂ ಮಾಡಲು ಆಗಲಿಲ್ಲ. ಆದರೆ ಸೆಪ್ಟೆಂಬರ್ ಮೊದಲ ವಾರ ಆಕೆ ತವರಿಗೆ ಬಂದಾಗ, ಆಕೆಯ ತಮ್ಮ ಹಾಗೂ ಚಿಕ್ಕಪ್ಪನ ಮಕ್ಕಳು ಸೇರಿಕೊಂಡು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಸಾಯಿಸಿದರು.
ಕಳೆದ 7 ವರ್ಷ ಆಕೆ ಗಂಡನೊಂದಿಗೆ ಲೂಧಿಯಾನಾದಲ್ಲಿ ಇದ್ದಳು. ಕಳೆದ ವರ್ಷವಷ್ಟೇ ಆಕೆ ಗಂಡನ ಊರಿಗೆ ಬಂದು ಅಲ್ಲಿ ವಾಸ ಮಾಡಿದ್ದಳು. ಆಕೆಯೊಂದಿಗೆ ತವರಿನ ಯಾರೊಬ್ಬರೂ ಮಾತುಕತೆ ನಡೆಸುತ್ತಿರಲಿಲ್ಲ.
ಮದುವೆಯಾಗಿ 7 ವರ್ಷ ಕಳೆದಿದೆ ಎಂದರೆ, ಜಾತಿಯ ಅಹಂ ಬಿಟ್ಟು ಹೋಗಬೇಕಿತ್ತು. ಆದರೆ ಧಾರ್ಮಿಕ ಯೋಚನೆಯ ಕಾರಣದಿಂದ ಜನರು ಉಗ್ರ ಹಾಗೂ ಕಠೋರ ಯೋಚನೆಯುಳ್ಳವರಾಗುತ್ತಿದ್ದಾರೆ. ಉದಾರತೆ, ಸೋದರತ್ವ ಭಾವನೆ ನಶಿಸಿ ಹೋಗಿದೆ. ಬೇರೆ ಜಾತಿಯವರು ಈಗ ವೈರಿಗಳಂತೆ ಆಗಿಬಿಟ್ಟಿದ್ದಾರೆ. ತಮ್ಮ ಕರುಳಿನ ಕುಡಿ ಬೇರೆ ಜಾತಿಗೆ ಹೋಗಿಬಿಟ್ಟರೆ ಅವರ ಆಕ್ರೋಶ ಅವಳನ್ನು ಮುಗಿಸಿಬಿಡುವಷ್ಟು ಮಟ್ಟಿಗೆ ವಿಕೋಪಕ್ಕೆ ಹೋಗುತ್ತದೆ.
ಈ ಘಟನೆಯ ಬಗ್ಗೆ ಸರ್ಕಾರವಾಗಲಿ, ಮುಖ್ಯಮಂತ್ರಿಯಾಗಲಿ ಕಣ್ಣೀರು ಸುರಿಸುವುದಿಲ್ಲ. ಭಕ್ತಿರಸದಲ್ಲಿ ಮುಳುಗಿರುವ ಮೀಡಿಯಾದವರು ಇಂತಹ ಘಟನೆಗಳನ್ನು ತೋರಿಸಲು ಹಿಂದೇಟು ಹಾಕುತ್ತಾರೆ. ಈಗ ದೇಶಭಕ್ತಿ, ಧರ್ಮಭಕ್ತಿ, ಜಾತಿಭಕ್ತಿ ಹಾಗೂ ಸರ್ಕಾರಿ ಭಕ್ತಿ ಎಲ್ಲ ಕಲಸು ಮೇಲೋಗರವಾಗಿದೆ. ಹೀಗಾಗಿ ಇಂತಹ ಘಟನೆಗಳು ಘಟಿಸುತ್ತಿರುತ್ತವೆ.
ಇದೊಂದು ಅಪಾಯಕಾರಿ ಸಂಕೇತ. ಆದರೆ ಇದಕ್ಕೆ ಯಾರು ಹೊಣೆಯೆಂದರೆ ಅವರು ಮಹಿಳೆಯರೇ! ಉಪವಾಸ, ತೀರ್ಥಯಾತ್ರೆ, ಪೂಜೆ ಧರ್ಮಪಾಠಗಳನ್ನು ಅನುಸರಿಸುತ್ತ ಜಾತಿ, ರೀತಿ ರಿವಾಜು ಇವು ಮಹಿಳೆಯರ ಆಸಕ್ತಿ ಅನಾಸಕ್ತಿಗಳಿಗಿಂತ ಮಿಗಿಲು ಎಂದು ನಂಬಿದ್ದಾರೆ. ಈ ಮೂಲಕ ಅವರು ತಮಗೆ ತಾವೇ ಕೈಕೋಳ ಹಾಕಿಕೊಳ್ಳುತ್ತಿದ್ದಾರೆ, ಜೊತೆಯವರಿಗೂ ಹಾಕುತ್ತಿದ್ದಾರೆ.