ಸಾವಿರಾರು ವರ್ಷಗಳಿಂದ ಎಲ್ಲ ಧರ್ಮಗಳ ಧನವಂತ ಗುತ್ತಿಗೆದಾರರು ತಮ್ಮ ಸ್ವಾರ್ಥ ಹಾಗೂ ವೈಯಕ್ತಿಕ ಹಿತಾಸಕ್ತಿಗಾಗಿ, ಧರ್ಮ ಪಾಲನೆಯ ಹೆಸರಿನ  ಮೇಲೆ ಮಹಿಳೆಯರನ್ನು ಮಾನಸಿಕವಾಗಿ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅವರನ್ನು ಅಪರಾಧಿಭಾವದಿಂದ ಕುಗ್ಗುವಂತೆ ಮಾಡಿ, ಅವರ ಮನೋಬಲವನ್ನು ಕುಗ್ಗಿಸಿಬಿಟ್ಟಿದ್ದಾರೆ. 21ನೇ ಶತಮಾನದಲ್ಲೂ ಆದು ಹಾಗೇ ಮುಂದುವರಿದಿದೆ. ಹುಡುಗಿಯರು ಧರ್ಮದ ವಶೀಕರಣಕ್ಕೊಳಗಾಗಿ ಸ್ವತಃ ತಾವೇ `ಸ್ಟಾಕ್‌ ಹೋಮ್ ಸಿಂಡ್ರೋಮ್ ‘ಗೆ ತುತ್ತಾಗಿದ್ದಾರೆ.

40 ವರ್ಷಗಳ ಮುಂಚೆ ಸ್ಟಾಕ್‌ ಹೋಮ್ ನಲ್ಲಿ ಬ್ಯಾಂಕ್‌ ಡಕಾಯಿತಿ ಮಾಡುವವರು ಕೆಲವು ಜನರನ್ನು ಅಪಹರಣ ಮಾಡಿದ್ದರು. ಅವರ ಮೇಲೆ ಅತ್ಯಾಚಾರ ಕೂಡ ನಡೆಸಿದರು. ನಂತರ ಈ ಅಪಹರಣಕ್ಕೆ ಒಳಗಾದ ಜನರು ಜೀವಿಸಲೇ ಬೇಕೆಂಬ ಅನಿವಾರ್ಯತೆಯಿಂದ ಆ ಡಕಾಯಿತರನ್ನೇ ರಕ್ಷಣೆ ಮಾಡುವಲ್ಲಿ ನಿರತರಾಗಿದ್ದರು. ಅವರು ನೆರವು ನೀಡಲು ಬರುವ ಪ್ರತಿಯೊಬ್ಬರನ್ನೂ ವಿರೋಧಿಸಿದರು.

ಅಷ್ಟೇ ಏಕೆ ಡಕಾಯಿತರಿಗೆ ಶಿಕ್ಷೆ ಕೊಡಲು ಮುಂದಾದವರ ಪ್ರಯತ್ನ ಕೂಡ ವಿಫಲವಾಗುವಂತೆ ಮಾಡಿದರು. ಈ ಹೆದರಿಕೆಯ ಮನೋಭಾವದ, ಪುಕ್ಕಲು ಜನರನ್ನು ತಜ್ಞರು `ಸ್ಟಾಕ್‌ಹೋಮ್ ಸಿಂಡ್ರೋಮ್’ಗೆ ಹೋಲಿಸುತ್ತಾರೆ. ಇಂದಿನ ದಿನಗಳಲ್ಲಿ ಧರ್ಮದ ಗುಲಾಮಗಿರಿಗೆ ತುತ್ತಾಗಿರುವ ಬಹುತೇಕ ಮಹಿಳೆಯರು ಇದೇ ಸಿಂಡ್ರೋಮ್ ಗೆ ತುತ್ತಾಗಿದ್ದಾರೆ. ಅವರು ಅದೇ ಧರ್ಮದ ಬೇಕಾಬಿಟ್ಟಿತನದ ಆಸರೆ ಹುಡುಕುತ್ತಾರೆ. ಆದರೆ ವಾಸ್ತವದಲ್ಲಿ ಅದು ಅವರ ಗೌರವಕ್ಕೆ ಚ್ಯುತಿ ತರುವಂಥದ್ದಾಗಿದೆ.

ಧರ್ಮದ ವಾಸ್ತವ ಅರಿಯಿರಿ

ಧರ್ಮ ಏನನ್ನು ಧಾರಣ ಮಾಡುತ್ತೊ, ಪಾಲನೆ ಮಾಡುತ್ತೊ, ಕರ್ತವ್ಯವನ್ನು ಪ್ರೇರಿತಗೊಳಿಸುತ್ತೊ, ಆ ಧರ್ಮ ವೈಯಕ್ತಿಕ ಪ್ರಗತಿಗೆ ವಿವೇಕದ ನೆಲೆಗಟ್ಟಿನಲ್ಲಿ ಸವಾಲಿಗೆ ಒಡ್ಡಿಕೊಳ್ಳಲು ಹೇಳಿಕೊಳ್ಳುತ್ತದೆ. ಆದರೆ ಧರ್ಮದ ಈ ಕುರುಹುಗಳು ಈಗಲೂ ಇರಲಿಲ್ಲ, ಹಿಂದೆಯೂ ಇರಲಿಲ್ಲ. ಧರ್ಮ ಜೀವನದ ಭಯ ತೋರಿಸಿ ಜೀವನವನ್ನು ಲೂಟಿ ಮಾಡುತ್ತದೆ, ಆತ್ಮೀಯರ ಭಯ ತೋರಿಸಿ ಆತ್ಮೀಯರನ್ನೇ ನಾಶ ಮಾಡಿಬಿಡುತ್ತದೆ. ಹಣಸಂಪತ್ತು ಲೂಟಿಯಾಗುವ ಭಯ ತೋರಿಸಿ ಕಡುಬಡವರ ಹಣ ಲೂಟಿ ಮಾಡಲು ಕೂಡ ಸಂಕೋಚ ತೋರಿಸುವುದಿಲ್ಲ. ಈ ಎಲ್ಲ ಆಟ ಆಡುವವರು ಧರ್ಮದ ಗುತ್ತಿಗೆದಾರರು, ಪೂಜಾರಿ ಪುರೋಹಿತರು, ಮೌಲ್ವಿಗಳು, ಪೋಪ್‌ಗಳು.

ಮಹಿಳೆಯರೇ ಹೆಚ್ಚು ಗುರಿ

ಮಹಿಳೆ ಹುಟ್ಟಿದಂದಿನಿಂದಲೇ ಧರ್ಮದ ಹೆಸರಿನಲ್ಲಿ ಅವರನ್ನು ಧರ್ಮದ ಕಪಿಮುಷ್ಟಿಗೆ ಸಿಲುಕುವಂತೆ ಮಾಡಲಾಗುತ್ತದೆ. ಅವಳ ಕಾಲುಗಳಲ್ಲಿ ಗೆಜ್ಜೆಗಳನ್ನು ಧರಿಸಲು ಹೇಳುವುದು ಅವಳು ಜೀವನವಿಡೀ ಕಾಲುಗಳಿಗೆ ಬೇಡಿ ಹಾಕಿಸಿಕೊಂಡಂತೆ, ಹಣೆಗೆ ತಿಲಕ ಇಡಲು ಹೇಳುವುದು ಜೀವನವಿಡೀ ಗುಲಾಮಳಾಗು ಎಂದು ಸೂಚಿಸಿದಂತೆ.

ಹೆಜ್ಜೆಹೆಜ್ಜೆಗೂ ಮಹಿಳೆಗೆ ನಿರಾಕರಣೆ, ದಿನ ಒಂದಿಲ್ಲೊಂದು ಅಡೆತಡೆಗಳು, ಬಂಧನದಲ್ಲಿಯೇ ಜೀವನ ನಿರ್ವಹಣೆ ನೂರಾರು ಬಗೆಯ ವ್ರತ, ಉಪವಾಸಗಳು, ಎಲ್ಲ ಅವಳದೇ ಜವಾಬ್ದಾರಿಯನ್ನುವಂತೆ ಹೇಳುವುದು. ಮಾಡದಿದ್ದರೆ ನರಕದ ಭಯ ತೋರಿಸುವುದು. ಪಾಪ ಮಹಿಳೆಯರು ಅಲಂಕರಿಸಿಕೊಳ್ಳುವ ನೆಪದಲ್ಲಿ ಹತ್ತು ಹಲವು ನೋವುಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಮಾನಸಿಕ, ದೈಹಿಕ ಗುಲಾಮಗಿರಿಯ ಮಾತನ್ನು ಮರೆತು ಆಭರಣ ಧರಿಸಿರುವ ಖುಷಿ ಅವರಿಗಿರುತ್ತದೆ.

ಧರ್ಮ ಮಹಿಳೆಯರಿಗೆ ಏನು ಕೊಟ್ಟಿದೆ?

ಬಾಲ್ಯವನ್ನು ದಾಟಿ ಹದಿವಯಸ್ಸಿಗೆ ಬರುತ್ತಿದ್ದಂತೆಯೇ ಧರ್ಮದ ದೊಡ್ಡ ದೊಡ್ಡ ರಾಕ್ಷಸರು ಅವಳ ಮುಂದೆ ವೇಷ ಮರೆಸಿಕೊಂಡು ಪ್ರತ್ಯಕ್ಷರಾಗುತ್ತಾರೆ. ಅವಳ ಜಾತಕ ಹೊಂದಿಸುವ ಪ್ರಯತ್ನ ಶುರುವಾಗುತ್ತದೆ. ಏಕೆಂದರೆ ಅವಳು ಮದುವೆಗೆ ಅರ್ಹಳು  ಎಂಬುದನ್ನು ತೋರಿಸುವುದಾಗಿರುತ್ತದೆ. ಮದುವೆ ಎಂಬ ಶಾಸ್ತ್ರವನ್ನು ಪಾರು ಮಾಡುವ ಹೊತ್ತಿಗೆ ಅವಳು ನೂರಾರು ಬಂಧನಗಳಿಗೆ ತುತ್ತಾಗುತ್ತಾಳೆ. ಪುರುಷನ ಗುಲಾಮಳಾಗಲೆಂದೇ ಮಹಿಳೆ ಹುಟ್ಟಿದ್ದಾಳೆ ಎಂಬಂತೆ ಬಿಂಬಿಸಲಾಗುತ್ತದೆ.

ಜಾತಕ ಹೊಂದಾಣಿಕೆ ಮತ್ತು ಮಹಿಳೆ

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ವಿದ್ಯೆ ಹೆಚ್ಚು ಪ್ರಚಲಿತವಾಗಿದೆ. ಅಸಮಾನ ಗ್ರಹ ನಕ್ಷತ್ರಗಳ ವಿಚಾರ ಪ್ರಸ್ತಾಪಿಸಿ, ಮನುಷ್ಯರ ಮೇಲೆ ಅದರ ಪ್ರಭಾವ ಹಾಗೂ ನಂತರ ಅದರ ನಿವಾರಣೆಯ ಬಗ್ಗೆ ಹೇಳಿಕೊಳ್ಳಲಾಗುತ್ತದೆ. ಒಂದು ಸಂಗತಿ ವಿಚಾರ ಮಾಡಲೇಬೇಕಾದಂಥದು, ಅದೇನೆಂದರೆ ಲಕ್ಷಾಂತರ ಮೈಲಿ ದೂರದಲ್ಲಿರುವ ಗ್ರಹಗಳ ಪ್ರಭಾವ ಮನುಷ್ಯರ ಮೇಲೆ ಆಗುತ್ತದೆಯೇ? ಆಗುತ್ತದೆ ಎಂದಿಟ್ಟುಕೊಳ್ಳೋಣ. ಅದರ ಪ್ರಭಾವ ಕಡಿಮೆ ಮಾಡುವ ಶಕ್ತಿ ಜ್ಯೋತಿಷಿಗಳಿಗೆ ಎಷ್ಟರಮಟ್ಟಿಗೆ ಇದೆ? ಸಾವಿರಾರು ರೂ. ಖರ್ಚು ಮಾಡಿದರೆ ಎಲ್ಲ ಸರಿ ಹೋಗುತ್ತದೆ ಎಂದು ಹೇಳುವ ಜ್ಯೋತಿಷಿಗಳ ಮಾತನ್ನು ಎಷ್ಟರಮಟ್ಟಿಗೆ ನಂಬಬೇಕು?

ವ್ಯಕ್ತಿಯೊಬ್ಬನಿಗೆ ತನ್ನ ಕರ್ಮದ ಫಲ ದೊರೆಯುತ್ತದೆ ಎಂದು ಜ್ಯೋತಿಷಿ ಒಪ್ಪಿಕೊಳ್ಳುತ್ತಾನೆ. ಆದರೆ ಆ ಫಲವನ್ನು ತನ್ನ ಉಪಾಯಗಳಿಂದ ಹೆಚ್ಚು ಕಡಿಮೆ ಮಾಡಿಕೊಳ್ಳುವ ಶಕ್ತಿ ಜ್ಯೋತಿಷಿಗೆ ಹೇಗೆ ದೊರಕಿತು? ದೇವರನ್ನು ನಂಬದ ಜ್ಯೋತಿಷಿ ಸಿಗಲಾರ. ಹಾಗಾದರೆ ಜ್ಯೋತಿಷಿ ದೇವರಿಗಿಂತಲೂ ಹೆಚ್ಚು ಶಕ್ತಿಶಾಲಿಯೇ? ಅವನು ಮನುಷ್ಯ ಜೀವನದ ಪ್ರತಿಯೊಂದು ಆಗುಹೋಗುಗಳನ್ನು ಕಾಲಗರ್ಭದಲ್ಲಿ ಸೇರಿಕೊಂಡಿರುವ ಸಕಲ ರಹಸ್ಯಗಳನ್ನು ಬೇಧಿಸಬಲ್ಲನೆ? ಅವನ್ನು ಬದಲಿಸುವ ಶಕ್ತಿ ಹೊಂದಿರುವನೆ? ಯಾವ ಒಂದು ಶಾಸ್ತ್ರದ ಮೇಲೆ ಹೆಚ್ಚು ನಂಬಿಕೆ ಇಟ್ಟು ಅದನ್ನು ಅನುಸರಿಸುವವರು ಪುರುಷರಲ್ಲ, ಮಹಿಳೆಯರು.

ಎಂತೆಂಥ ಯಾತನೆಗಳು?

ಜಾತಕ ಹೊಂದಾಣಿಕೆಯ ಹೆಸರಿನ ಮೇಲೆ ಮಹಿಳೆಯರನ್ನು ಬಲಿಪೀಠದಲ್ಲಿ ಕೂರಿಸಲಾಗುತ್ತದೆ. ಆ ಸಮಸ್ಯೆ ನಿವಾರಣೆಯ ನೆಪದಲ್ಲಿ ಹಲವು ದುಬಾರಿ ಉಪಾಯಗಳನ್ನು ಸೂಚಿಸಲಾಗುತ್ತದೆ. ಜೊತೆಗೆ ಹಲವು ತಪ್ಪುಗಳನ್ನು, ಅಪರಾಧಗಳನ್ನು ಆಕೆಯ ಮೇಲೆ ಹೊರಿಸಲಾಗುತ್ತದೆ. ಅವರ ದೌರ್ಬಲ್ಯಗಳನ್ನು, ಕೊರತೆಗಳನ್ನು ಕಂಡುಕೊಂಡು ಅವರ ಮೇಲೆ ಹಲವು ಆರೋಪಗಳನ್ನು ಹೊರಿಸಲಾಗುತ್ತದೆ. ಅವನ್ನೆಲ್ಲ ಸತ್ಯ ಎಂದು ನಂಬಿ ಮಹಿಳೆಯರು ಹತ್ತು ಹಲವು ವ್ರತ ಉಪವಾಸಗಳ ಮೂಲಕ ತಮಗೆ ತಾವೇ ಕಷ್ಟ ತಂದುಕೊಳ್ಳುತ್ತಾರೆ. ಅವರು ತಮ್ಮ ವಾಸ್ತವಿಕ ಜೀವನ ಪಯಣಕ್ಕೆ ಬಾಧೆ ತಂದುಕೊಂಡು, ಕಾಲ್ಪನಿಕ ಕಥೆಗಳ ಹಿಂದೆ ತಮ್ಮ ಸ್ಛೂರ್ತಿಶಕ್ತಿಯನ್ನೆಲ್ಲ ತೊಡಗಿಸಿಬಿಡುತ್ತಾರೆ.

ಅಂದಹಾಗೆ, ಇವೆಲ್ಲ ಅವಳ ಮೇಲೆ ಹೇರಲ್ಪಟ್ಟ ಕಂದಾಚಾರಗಳು, ಅವಳನ್ನು ಗುಲಾಮಗಿರಿಗೆ ತಳ್ಳುವ ಪ್ರತೀಕದಂತಿವೆ. ಖೇದದ ಸಂಗತಿಯೇನೆಂದರೆ, ಅವಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅವನ್ನೆಲ್ಲ ಯಥಾರೀತಿಯಲ್ಲಿ ಪಾಲಿಸುತ್ತಿದ್ದಾಳೆ. ಅವಳಷ್ಟೇ ಅಲ್ಲ, ತನ್ನ ಮುಂದಿನ ಪೀಳಿಗೆಗೂ ಅವನ್ನು ಹೇರುತ್ತಾ ಹೋಗುತ್ತಾಳೆ.

ಮದುವೆ ಇನ್ನೇನು ನಡೆಯಬೇಕು ಎನ್ನುವಷ್ಟರಲ್ಲಿ ಯಾರದ್ದಾದರೂ ನಿಧನ ಆಗಿಬಿಟ್ಟರೆ, ಅದಕ್ಕೆ ಕನ್ಯೆಯದ್ದೇ ದೋಷ, ಅಪಶಕುನ ಎಂದೆಲ್ಲ ಅವಳ ಮೇಲೆ ಆರೋಪ ಹೊರಿಸಲಾಗುತ್ತದೆ. ಮನೆಯಲ್ಲಿ ಯಾರಾದರೂ ಬಹಳ ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರೆ, ಮನೆಯಲ್ಲಿ ಕನ್ಯೆಯದ್ದೇ ದೋಷ. ಮನೆಯಲ್ಲಿ ಆರ್ಥಿಕವಾಗಿ ಹಾನಿಯುಂಟಾಗಿದ್ದರೆ ಕನ್ಯೆಯ ಕಡೆಯೇ ಬೆರಳು ಮಾಡಿ ತೋರಿಸಲಾಗುತ್ತದೆ. ಗಂಡನಿಗೆ ಆರ್ಥಿಕವಾಗಿ ಸಮಸ್ಯೆಯಾದರೆ, ದೈಹಿಕ ತೊಂದರೆ ಉಂಟಾದರೆ ಅದಕ್ಕೆ ಹೆಂಡತಿಯೇ ಕಾರಣ. ಅತ್ತೆಮನೆಗೆ ಏನಾದರೂ ಸಮಸ್ಯೆ ಉಂಟಾದರೆ ಸೊಸೆ ಜಾತಕದಲ್ಲಿ ದೋಷವಿದೆ ಎಂದು ಗೂಬೆ ಕೂರಿಸಲಾಗುತ್ತದೆ.

ಇವೆಲ್ಲ ಸಮಸ್ಯೆಗಳಿಗೆ ಜ್ಯೋತಿಷಿ ಅಥವಾ ಪೂಜಾರಿ ಪುರೋಹಿತರು ಪರಿಹಾರ ಸೂಚಿಸುವುದಾಗಿ ಹೇಳುತ್ತಾರೆ.

ಮುಸ್ಲಿಂ ಕಾನೂನಿನ ಪ್ರಕಾರ, ಮದುವೆ ಇಬ್ಬರು ವ್ಯಕ್ತಿಗಳ ಹೊಂದಾಣಿಕೆ ಮತ್ತು ಪ್ರೀತಿಯ ಬಂಧನ ಎಂದು ಹೇಳಲಾಗಿದೆ. ಒಂದು ವೇಳೆ ಅವರಿಬ್ಬರಲ್ಲಿ ಹೊಂದಾಣಿಕೆ ಆಗದಿದ್ದರೆ ಇಬ್ಬರೂ ಪ್ರತ್ಯೇಕವಾಗುವ ಬಗ್ಗೆ ಹೇಳಲಾಗಿದೆ. ಆದರೆ ಪ್ರತಿ ಮನೆ ಮನೆಯಲ್ಲೂ ಧರ್ಮ ಪ್ರವೇಶಿಸಿ ಮಹಿಳೆಯರ ಸ್ಥಿತಿ ದಯನೀಯವಾಗಿದೆ. ಧರ್ಮದ ಭಯ ತೋರಿಸಿ ಮುಸ್ಲಿಂ ಮಹಿಳೆಯರಿಗೆ ಅರಿವಾಗುತ್ತಿರುವ ಅನ್ಯಾಯವನ್ನು ಇಸ್ಲಾಂ ಬಗೆಗೆ ಸಮರ್ಪಣೆ ಮಾಡಿಕೊಳ್ಳುವುದು ಎಂದು ಹೇಳಲಾಗಿದೆ. ಬೌದ್ಧಿಕತೆಯ ಅಭಾವದಿಂದ ಮಹಿಳೆಯರು ತಮ್ಮೊಂದಿಗೆ ಘಟಿಸುತ್ತಿರುವ ಅನ್ಯಾಯವನ್ನು ಧಾರ್ಮಿಕ ಬಂಧನದ ರೂಪದಲ್ಲಿ ಸ್ವೀಕರಿಸುತ್ತಿದ್ದಾರೆ.

ಆಡಂಬರಗಳ ಪ್ರಚಾರದಲ್ಲಿ ಟಿವಿಗಳ ಪಾತ್ರ

ಹಣದ ಸುರಿಮಳೆಯಲ್ಲಿ ಟಿ.ವಿ. ಚಾನೆಲ್‌ಗಳ ವಿವೇಕ ಮಂಗಮಾಯವಾಗಿಬಿಟ್ಟಿದೆ. ಈಗ ಜೈಲಿನಲ್ಲಿರುವ ಆಸಾರಾಮ್ ಬಾಪುವಿನ ಆಕರ್ಷಕ ಭಾಷಣಗಳು ಇದೇ ಟಿ.ವಿ. ಚಾನೆಲ್‌ಗಳಲ್ಲಿ ಗಂಟೆಗಟ್ಟಲೆ ಪ್ರಸಾರವಾಗುತ್ತಿದ್ದವು. ಅದರ ಹಕ್ಕುಗಳು ಕೋಟ್ಯಂತರ ರೂ.ಗಳಿಗೆ ಮಾರಾಟವಾಗುತ್ತಿದ್ದವು. ಅಬ್ಬರದ ಮೌಢ್ಯ ಪ್ರಚಾರ ಮನೆ ಮನೆಯ ಟಿವಿಯ ಮುಂದೆ ಕುಳಿತುಕೊಂಡ ಮಹಿಳೆಯರಿಗೆ ಬಹಳಷ್ಟು ಹಾನಿಯನ್ನುಂಟು ಮಾಡಿದೆ.

ಬಾಬಾಗಳ, ಸ್ವಾಮಿಗಳ ಭಕ್ತಿಯಲ್ಲಿ ಅಂಧರಾಗಿರುವ ಮಹಿಳೆಯರು ಅವರ ಭಾಷಣಗಳಿಗೆ, ತರ್ಕವಿಲ್ಲದ ಮಾತುಗಳಿಗೆ ತಲೆ ಅಲ್ಲಾಡಿಸುತ್ತಾ ಇರುತ್ತಾರೆ. ಬೌದ್ಧಿಕವಾಗಿ ಯಾರು ಸಮರ್ಥರೊ, ಅದನ್ನು ಜೀವನದಲ್ಲಿ ಸ್ವಯಂ ಅಳವಡಿಸಿಕೊಂಡಿರುತ್ತಾರೊ, ಅಂಥವರಿಂದಷ್ಟೇ ನಾವು ಜ್ಞಾನ ಪಡೆಯಬೇಕು.

ಮಹಿಳೆಯರು ಮತ್ತು ಪುರುಷರ ಮಾನಸಿಕ ಮತ್ತು ಬೌದ್ಧಿಕ ವಿಕಾಸದಿಂದಷ್ಟೇ ದೇಶದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಮಹಿಳೆಯು ಧರ್ಮದ ಕಂದಾಚಾರದ ದಾರಿಯಲ್ಲಿ ಸುಳಿಯದೆ, ಅದರ ಅನ್ಯಾಯ ಅತ್ಯಾಚಾರಗಳ ಬಗ್ಗೆ ಅರಿತು, ಎಲ್ಲರೂ ಒಗ್ಗಟ್ಟಿನಿಂದ ಅದನ್ನು ವಿರೋಧಿಸಬೇಕು. ಅದೇ ಮಹಿಳೆಯರನ್ನು ವಾಸ್ತವದ ದಾರಿಗೆ ಕೊಂಡೊಯ್ಯುತ್ತದೆ.

– ದೀಪಾ ಬಿ. ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ