ನ್ಯಾಯಾಧೀಶ : ನೀನು ಒಂದೇ ಅಂಗಡಿಯಲ್ಲಿ ನಾಲ್ಕು ಸಲ ಏಕೆ ಕಳ್ಳತನ ಮಾಡಿದೆ?

ಕಳ್ಳ : ಒಂದೇ ಸಲ ಕದ್ದಿದ್ದು ಮಹಾಸ್ವಾಮಿ! ಮೂರು ಸಲ ಅವುಗಳನ್ನು ಬದಲಾಯಿಸೋಕೆ ಹೋಗಿದ್ದೆ. ನನ್ನ ಹೆಂಡ್ತಿ ಯಾವ ಸೀರೆಯನ್ನೂ ಬೇಗ ಇಷ್ಟಪಡೋಲ್ಲ!

ಅವಳು ತುಂಬಾ ವಾಚಾಳಿ. ಇಂಟರ್‌ವ್ಯೂಗಾಗಿ ಬಂದಾಗ ನೇಮಕಾತಿ ಆಯೋಗದ ಮುಖ್ಯಸ್ಥರೊಂದಿಗೆ ಮಾತನಾಡುತ್ತಿದ್ದಳು. “ನನ್ನ ಕೆಲಸ ನೋಡಬೇಕು ನೀವು. ನಾನು ಮಾಡೋ ತರಹ ಕೈ ಕೆಲಸ ಯಾರೂ ಮಾಡೋಲ್ಲ. ನಾನು ಯಾವುದೇ ಕೆಲಸ ಮಾಡಲಿ, ಅದರಲ್ಲಿ ಮುಳುಗಿಬಿಟ್ಟಿರುತ್ತೇನೆ.”

ನೇಮಕಾತಿ ಮಾಡುವವನು ಅವಳನ್ನು ಮಧ್ಯದಲ್ಲೇ ತಡೆದು ಹೇಳಿದ, “ನೀವು ಎಂದಾದರೂ, ಯಾವುದಾದರೂ ಬಾವಿಯನ್ನು ಅಗೆದಿದ್ದೀರಾ?”

ವೀರ ರಸವನ್ನು ಉಕ್ಕೇರಿಸುತ್ತಾ  ಕವಿಯಿತ್ರಿ (ಸಂಪಾದಕರೊಂದಿಗೆ) ಹೇಳುತ್ತಿದ್ದಳು, “ನೀವು ಏನು ಹೇಳ್ತೀರೀ, ನಾನು ನನ್ನ ಈ ಕವಿತೆಗಳಲ್ಲಿ ಇನ್ನಷ್ಟು ಸ್ವಲ್ಪ ಬೆಂಕಿ ಹಾಕಲೇನು?”

ಸಂಪಾದಕ ಸಿಡಿಮಿಡಿ ಗುಟ್ಟುತ್ತಾ ಹೇಳಿದ, “ಇಲ್ಲ, ನೀವು ಈ ಕವಿತೆಗಳಿಗೇ ಬೆಂಕಿ ಇಟ್ಟರೆ ವಾಸಿ!”

ಮೊದಲ ಮಿತ್ರ (ತನ್ನ ಇನ್ನೊಬ್ಬ ಮಿತ್ರನ ಪರಿಸ್ಥಿತಿಯನ್ನು ನೋಡಿ) “ಅರೇ, ಇದೇನಿದು ನಿಮ್ಮ ಬಟ್ಟೆಯೆಲ್ಲ ಚಿಂದಿ, ಬಾಯಿಂದ ರಕ್ತ ಬರ್ತಿದೆ. ನಡೀರಿ ನಿಮ್ಮನ್ನು ಮನೇಗೆ ತಲುಪಿಸಿ, ಬರ್ತೀನಿ.”

ಎರಡನೇ ಮಿತ್ರ (ನೋವಿನಿಂದ ಚೀರುತ್ತಾ), “ಅಯ್ಯೋ, ಬೇಡ ಬೇಡ! ನಾನು ನಮ್ಮ ಮನೇಗೆ ಹೋಗೋಲ್ಲ, ಅಲ್ಲಿಂದಲೇ ನಾನು ಬರ್ತಿರೋದು.

”ಒಬ್ಬ ಮಹಿಳೆ ತನ್ನ ಗಂಡನೊಂದಿಗೆ ಪ್ರವಾಸ ಹೊರಟು ಒಂದು ಹೋಟೆಲ್‌ನಲ್ಲಿ ಇಳಿದುಕೊಂಡಿದ್ದಳು. ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಳಲು ಅವಳು ಬಾತ್‌ರೂಂ ಹೊಕ್ಕ ಕೂಡಲೇ ಗೋಡೆಯ ಮೇಲೆ ಬರೆದಿದ್ದನ್ನು ನೋಡಿದಳು. `ಬಲಗಡೆ ನೋಡಿ!’ ಅವಳು ಬಲಗಡೆ ನೋಡಿದಳು. ಅಲ್ಲಿ ಗೋಡೆಯ ಮೇಲೆ ಬರೆದಿತ್ತು. `ಹಿಂದೆ ನೋಡಿ!’ ಅವಳು ಚಕಿತಳಾಗಿ ಹಿಂದೆ ನೋಡಿದಳು. ಗೋಡೆಯ ಮೇಲೆ `ಎಡಗಡೆ ನೋಡಿ!’ ಎಂದು ಬರೆದಿತ್ತು. ಅವಳು ಉದ್ವಿಗ್ನಳಾದಳು. ಕೂಡಲೇ ಅವಳು ಎಡಗಡೆ ತಿರುಗಿ ನೋಡಿದಳು. ಅಲ್ಲಿ ಗೋಡೆಯ ಮೇಲೆ ಹೀಗೆಂದು ಬರೆಯಲಾಗಿತ್ತು. `ಹುಚ್ಚರ ತರಹ ಆ ಕಡೆ ಈ ಕಡೆ ಯಾಕೆ ನೋಡ್ತೀರ್ರಿ? ಸುಮ್ಮನೆ ಸ್ನಾನ ಮಾಡಿ…’

ಮನೆಗೆ ಬಂದಿರುವ ಅತಿಥಿಗಳೊಂದಿಗೆ ಆ ಮನೆಯ ಒಡತಿ ಕುಳಿತು ಮಾತನಾಡುತ್ತಿದ್ದಳು. ಆಗ ಇದಕ್ಕಿದ್ದಂತೆ ವಿದ್ಯುತ್‌ ಹೊರಟುಹೋಯಿತು. ಅದರಿಂದ ಅವಳು ಮೇಣದ ಬತ್ತಿಯನ್ನು ಹೊತ್ತಿಸಿದಳು. ಸ್ವಲ್ಪ ಸಮಯದ ನಂತರ ಅತಿಥಿಗಳು ಆ ಒಡತಿಗೆ ಹೇಳಿದರು, “ತುಂಬಾ ಶೆಕೆ ಆಗ್ತಿದೆ, ದಯವಿಟ್ಟು ಫ್ಯಾನ್‌ ಹಾಕಿ…..”

ಆಗ ಆ ಒಡತಿ ಗಂಭೀರ ಸ್ವರದಲ್ಲಿ ಹೇಳಿದಳು, “ನಾನೇನೋ ಫ್ಯಾನ್‌ ಹಾಕ್ತೀನಿ. ಆದರೆ ಈ ಮೇಣದ ಬತ್ತಿ ಆರಿ ಹೋಗುತ್ತೆ.”

ಒಬ್ಬ ಕುರೂಪಿ ಮಹಿಳೆ ಬಹು ಹೊತ್ತಿನಿಂದ ಕನ್ನಡಿ ಎದುರು ನಿಂತು ಸಿಂಗರಿಸಿಕೊಳ್ಳುತ್ತಿದ್ದಳು. ಇದರಿಂದ ಬೇಸರಗೊಂಡ ಅವಳ ಗಂಡ ಹೇಳಿದ, “ಅರೆ! ಎಷ್ಟು ಹೊತ್ತಾಯ್ತು? ಇನ್ನೂ ನಿನ್ನ ಶೃಂಗಾರ ಮುಗೀಲಿಲ್ವಾ?

”ಮಹಿಳೆ, “ನೀವ್ಯಾಕೆ ಸಿಡಿಸಿಡೀಂತ ಇದ್ದೀರ? ಸುಂದರವಾಗಿ ಕಾಣಿಸಬೇಕು ಹಾಗೂ ಸುಂದರಿ ಎಂದು ಕರೆಸಿಕೊಳ್ಳಬೇಕು ಅನ್ನುವ ಇಚ್ಛೆ ನನಗೆ ಇಲ್ಲಾಂತ ಅಂದುಕೊಂಡಿದ್ದೀರೇನು?”

ಗಂಡ, “ಹಾಗಿದ್ರೆ ಸರಿ, ನೀನು `ಸುಂದರಿ’ ಅಂತ್ಲಾದ್ರೂ ಹೆಸರಿಟ್ಕೋ. ಆಗ ಜನರೆಲ್ಲ ನಿನ್ನ `ಸುಂದರಿ’ ಅಂತಲೇ ಕರೀತಾರೆ.”

ಹೊಸದಾಗಿ ಮದುವೆಯಾದ ದಂಪತಿಗಳು ಒಂದು ಸಿನಿಮಾ ಮಂದಿರ ತಲುಪಿದರು. ಗಂಡ ಹೆಂಡತಿಯ ಕೈಗೆ ಹಣ ಕೊಡುತ್ತಾ ಹೇಳಿದ, “ಹೆಂಗಸರಿಗೆ ಟಿಕೆಟ್‌ ಕೊಡೋ ಕಡೇಗೆ ಹೋಗಿ ಟಿಕೆಟ್‌ ತಗೋ! ಎಲ್ಲಕ್ಕಿಂತ ಹಿಂದೆ ಇರೋ ಸಾಲಿನ ಮೂಲೆಯಲ್ಲಿರೋ ಎರಡು ಕುರ್ಚಿಗಳನ್ನು ಬೇಕೂಂತ ಕೇಳು!”

ಹೆಂಡತಿ : ಒಂದು ವೇಳೆ ಆ ಸೀಟುಗಳ ಟಿಕೆಟ್‌ ಇಲ್ಲಾಂತ ಹೇಳಿದ್ರೆ ಏನು ಮಾಡೋದು?

ಗಂಡ : (ಭಾರವಾದ ನಿಟ್ಟುಸಿರು ಬಿಡುತ್ತಾ), ಆಗ ಸಿನಿಮಾನೇ ನೋಡೋಣ.

ಹೊಸದಾಗಿ ಮದುವೆಯಾಗಿದ್ದ ಗಂಡ ಹೆಂಡತಿಯೊಂದಿಗೆ ಹೇಳಿದ, “ಪ್ರಿಯೆ! ನನಗೆ ನಿದ್ದೇಲಿ ಮಾತಾಡೋ ರೂಢಿ ಇದೆ. ಒಂದು ವೇಳೆ ನಿದ್ದೇಲಿ ನಾನು ನಿನ್ನ ಬೇರೆ ಹೆಸರಿನಿಂದ ಕರೆದರೆ ನಿನಗೇನೂ ನೋವಾಗೋಲ್ಲ ತಾನೇ?”

ಒಬ್ಬ ಮಹಿಳೆ ಸಾಕುಪ್ರಾಣಿಗಳ ಅಂಗಡಿಯವನಿಗೆ, “ನನಗೆ ಈ ನಾಯಿ ತುಂಬಾ ಹಿಡಿಸಿತ್ತು. ಆದರೆ ಇದರ ಕಾಲುಗಳು ತುಂಬಾ ಚಿಕ್ಕವು….”

ಅಂಗಡಿಯನು ಇದನ್ನು ಕೇಳಿ ಹೇಳಿದ, “ಚಿಕ್ಕವು ಎಲ್ಲಮ್ಮ? ನಾಲ್ಕು ಕಾಲುಗಳೂ ನೆಲವನ್ನು ಮುಟ್ಟುತ್ತಿವೆ ನೋಡಿ.”

ರೇಖಾ : ದಿನೇ ದಿನೇ ನನ್ನ ಮೈಬಣ್ಣ ಬಿಳಿಚಿಕೊಳ್ಳುತ್ತಿದೆ. ಅದೇ ನನ್ನ ಗೆಳತಿಯರು ಗುಲಾಬಿ ಬಣ್ಣ ಪಡೆಯುತ್ತಿದ್ದಾರೆ.

ರಾಜೇಶ್‌  : ಡಾಕ್ಟರ್‌ಗೆ ತೋರಿಸಬೇಕು ಎಂದ.

ಮಾರನೇ ದಿನ ರೇಖಾ ಡಾಕ್ಟರ್‌ ಬಳಿ ಹೋದಳು. ಅವಳನ್ನು ಪರೀಕ್ಷಿಸಿದ ಡಾಕ್ಟರ್‌, ರೇಖಾಗೆ ನಿಯಮಿತವಾಗಿ ಹಣ್ಣು ತಿನ್ನಲು ಸಲಹೆ ನೀಡಿ, 200 ರೂ. ಬಿಲ್‌ ಕೊಟ್ಟರು.

ರಾಜೇಶ್‌ : ಅರೇ, ನಿನ್ನ ಮುಖ ಮೊದಲಿಗಿಂತ ಜಾಸ್ತಿ ಬಿಳಿಚಿಕೊಂಡಿದೆಯಲ್ಲಾ…..?

ರೇಖಾ : ಡಾಕ್ಟರ್‌ ಬಿಲ್‌ ನೋಡಿ. ರೀ, ಡಾಕ್ಟರ್‌ ನನಗೆ ಹಣ್ಣು ತಿನ್ನಲು ಹೇಳಿದ್ದಾರೆ. ಪೇಟೆಯಿಂದ ಎರಡು ಡಜನ್‌ ಕಿತ್ತಳೆಹಣ್ಣು ತನ್ನಿ.

ರಾಜೇಶ್‌ ಹಣ್ಣು ತಂದ. ರೇಖಾ 5-6 ಕಿತ್ತಳೆ ಹಣ್ಣು ತಿಂದಳು. ಸಂಜೆ ರೇಖಾಗೆ ನೆಗಡಿ, ಬೆನ್ನು ನೋವು ಶುರುವಾಯ್ತು.

ರೇಖಾ : ಅಯ್ಯೋ! ನನ್ನ ಆರೋಗ್ಯ ಹದಗೆಟ್ಟಿದೆ. ಡಾಕ್ಟರ್‌ ಬಳಿ ಹೋಗಬೇಕು.

ಡಾಕ್ಟರ್‌, ಅವಳಿಗೆ 2 ದಿನಗಳಿಗೆ ಔಷಧಿ ಕೊಟ್ಟು 50 ರೂಪಾಯಿ ವಸೂಲಿ ಮಾಡಿದರು.

ರಾಜೇಶ್‌ : ಎಷ್ಟು ದಿನಾಂತ ಈ ಡಾಕ್ಟರ್‌ಗೆ 50-60 ಕೊಡೋದು? ದಿನಾ ಒಂದು ಸೇಬು ತಿಂದು ಡಾಕ್ಟರ್‌ರಿಂದ ದೂರವಿರು.

ರೇಖಾ : ಹೌದು ನಿಮ್ಮ ಮಾತು ಸರಿ. ಪೇಟೆಯಿಂದ 2 ಕಿಲೋ ಸೇಬು ತನ್ನಿ. ಡಾಕ್ಟರ್‌ಗೆ ದಿನಾ ದುಡ್ಡು ಕೊಡುವ ಬದಲು ಸೇಬು ತಿನ್ನುವುದೇ ಒಳ್ಳೆಯದು.

ರೇಖಾ, ಬೇಗ ಮೈ ಕಾಂತಿ ಗಳಿಸಬೇಕೆಂದು ದಿನಕ್ಕೆ 4-5 ಸೇಬು ತಿಂದುಬಿಟ್ಟಳು. ನನ್ನ ಮೈಕಾಂತಿ ವೀಣಾಳನ್ನು ಮೀರಿಸುತ್ತದೆ ಎಂದುಕೊಂಡಳು.

1 ಗಂಟೆಯ ನಂತರ, ಅಯ್ಯೋ ಅಮ್ಮಾ, ತುಂಬಾ ಹೊಟ್ಟೆ ನೋವು…..ರೇಖಾಳ ಸಂಕಟ ನೋಡಲಾಗದೆ ರಾಜೇಶ್‌ ಡಾಕ್ಟರನ್ನು ಕರೆಸಿದ. ಡಾಕ್ಟರ್‌ ಮದ್ದಿನಿಂದ ರೇಖಾಳ ನೋವು ವಾಸಿಯಾಯ್ತು. ಡಾಕ್ಟರ್‌ಗೆ 100 ರೂಪಾಯಿ ತೆರಬೇಕಾಯ್ತು.

ಓಹ್‌ ನನಗೆ ಸೇಬು ಕೂಡಾ ಸೂಟ್‌ ಆಗ್ತಾ ಇಲ್ಲ ಎಂದುಕೊಂಡಳು ರೇಖಾ.

ರಾಜೇಶ್‌ : ನೀನು ಕಂಡಾಪಟ್ಟೆ ಸೇಬು ತಿಂದರೆ ಎಲ್ಲಿಂದ ಸೂಟಾಗುತ್ತೆ? ನಿನಗಾಗಿ ಒಂದು ಹೊಸ ಗಾದೆ ಮಾಡಬೇಕಾಗಿದೆ.

ರೇಖಾ : ಏನದು?

ರಾಜೇಶ್‌ : ಹೆಚ್ಚಿನ ಸೇಬು ತಿಂದು, ನಿತ್ಯ ಡಾಕ್ಟರ್‌ ದರ್ಶನ ಮಾಡಿರಿ! ಹ…ಹ್ಹಾ….ಹ್ಹಾ…..

ನಿಮ್ಮ ವ್ಯಕ್ತಿತ್ವ ಸಿನಿಮಾ ಸ್ಟಾರ್‌ ತರಹ ಅಂದವಾಗಿದ್ದರೆ, ನಿಮ್ಮ ಬಳಿ ಬೇರೇನೂ ಇರಬೇಕಾದ ಅವಶ್ಯಕತೆಯಿಲ್ಲ. ಅದರೆ ನಿಮ್ಮ ಸೌಂದರ್ಯ ಸಿನಿಮಾ ಸ್ಟಾರ್‌ ಹಾಗೆ ಮಿಂಚುತ್ತಿಲ್ಲವಾದರೆ, ನಿಮ್ಮ ಬಳಿ ಏನೇ ಇದ್ದರೂ ಅದಕ್ಕೆ ಅರ್ಥವಿಲ್ಲ.

ರತ್ನಗಂಬಳಿಯ ಅಂಗಡಿಯಲ್ಲಿ ತೂಗು ಹಾಕಿದ್ದ ನೋಟೀಸ್‌ ಹೀಗಿತ್ತು  `ರತ್ನಗಂಬಳಿಯನ್ನು ಇಷ್ಟಪಟ್ಟು ಖರೀದಿಸಲು ಬರುವ ಗಂಡಸರು, ಅವರ ಹೆಂಡತಿಯರ ಅನುಮತಿ ಪತ್ರ ತರಬೇಕಾದ್ದು ಅತ್ಯಗತ್ಯ.’

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ