ಸರ್ಕಾರದ ನಿಯಂತ್ರಣಕ್ಕೆ ಸಿಗದ ಜನಜಂಗುಳಿ
ದೇಶದಲ್ಲಿ ಚಿಕ್ಕ ಪುಟ್ಟ ಘಟನೆಗಳಿಂದ ರೊಚ್ಚಿಗೇಳುವ ಜನಜಂಗುಳಿ ಥಳಿಸಲು ಮುಂದಾಗುತ್ತಿರುವುದು ಈಗ ಸಂಸ್ಕೃತಿಯ ಒಂದು ಭಾಗವೇ ಆಗಿಹೋಗಿದೆ. ಮಕ್ಕಳ ಕಳ್ಳತನ ಇರಬಹುದು, ಹಸು ಕದ್ದೊಯ್ಯುವ ಘಟನೆಯೇ ಆಗಿರಬಹುದು. ಧ್ವಜ ರಕ್ಷಣೆ ಅಥವಾ ಮೆರವಣಿಗೆಯನ್ನು ವಿರೋಧಿಸುವವರೇ ಇರಬಹುದು. ಜನಜಂಗುಳಿ ಒಮ್ಮೆಲೆ ಪ್ರತ್ಯಕ್ಷವಾಗಿ ಥಳಿಸಲು ಮುಂದಾಗುವುದು ಸಾಮಾನ್ಯ ಎಂಬಂತಾಗಿದೆ. ಸರಗಳ್ಳತನ, ಛೇಡಿಸುವಿಕೆಯ ಘಟನೆಗಳಲ್ಲಿ ಪೊಲೀಸರು ಬರುವ ಮೊದಲೇ ತಾವೇ ಅಂತಹ ವ್ಯಕ್ತಿಯನ್ನು ಹೊಡೆಯಲು ಶುರು ಮಾಡುತ್ತಾರೆ. ಆಗ ಪೊಲೀಸರೇ ಅಪರಾಧಿಯನ್ನು ರಕ್ಷಿಸಬೇಕಾಗಿ ಬರುತ್ತದೆ.
ಹಿಂಸೆಯ ಸಂಸ್ಕೃತಿ ಮೊದಲು ಹಳ್ಳಿಗಳಲ್ಲಷ್ಟೇ ಇತ್ತು. ಈಗ ನಗರಕ್ಕೂ ಪಸರಿಸಿ ಮನೆಮನೆಗೂ ನುಗ್ಗಿದೆ. ಕೈಯೆತ್ತುವ ಅಭ್ಯಾಸ ಹಾಗೂ ಕೋಪ ಮಾಡಿಕೊಳ್ಳುವುದು ಒಂದು ಗುಣವಾಗಿಬಿಟ್ಟಿದೆ.
ಈ ಸಂಸ್ಕೃತಿ ಎಲ್ಲೆಲ್ಲೂ ಇದೆ. ಆದರೆ ನಮ್ಮಲ್ಲಿ ರಾಜಕೀಯ ಹಾಗೂ ಧರ್ಮದ ಕಾರಣದಿಂದ ಇದು ಇನ್ನಷ್ಟು ಹೆಚ್ಚಿಗೆ ಪಸರಿಸುತ್ತಿದೆ. ಹೀಗಾಗಿ ಕಾರಣವಿಲ್ಲದೆ ನಾವು ಜಗಳಕ್ಕೆ ಇಳಿದುಬಿಡುತ್ತೇವೆ. ಕಳೆದ 30-40 ವರ್ಷಗಳ ರಾಜಕೀಯದಲ್ಲಿ ಜನಜಂಗುಳಿಯ ದುರ್ಬಳಕೆ ಪ್ರಮಾಣ ಹೆಚ್ಚಿದೆ. ಕಾಶ್ಮೀರದಿಂದ ತಮಿಳುನಾಡು ಪ.ಬಂಗಾಳದಿಂದ ರಾಜಸ್ತಾನದತನಕ ಎಲ್ಲೆಲ್ಲೂ ಇದು ಹಬ್ಬುತ್ತಿದೆ. ಜನಸಮೂಹ ಮಾಡಿದ್ದೇ ಸರಿ, ಅದು ಏನು ಬೇಕಾದರೂ ಮಾಡಬಹುದು ಎಂದು ಪಾಠ ಬೋಧಿಸಲಾಗುತ್ತದೆ.
ಹೊಸ ಟ್ರೆಂಡ್ ಏನೆಂದರೆ, ಜನಸಮೂಹ ಥಳಿಸಲಾರಂಭಿಸಿದರೆ ಅವರನ್ನು ತಡೆಯಲು ಹೋಗದೆ ವಿಡಿಯೋ ಮಾಡಿಕೊಳ್ಳುವುದು. ಪೊಲೀಸರಿಗೂ ವಿಷಯ ತಿಳಿಸುವುದಿಲ್ಲ. ಪಕ್ಕದ ಮನೆಯವರು ಯಾರನ್ನೊ ಹೊಡೆಯುತ್ತಿರಬಹುದು, ಅತ್ತೆ ಸೊಸೆಯನ್ನು ಮನಬಂದಂತೆ ಥಳಿಸುತ್ತಿರಬಹುದು, ಅವರನ್ನು ತಡೆಯಲು ಹೋಗಬೇಡಿ, ಅದರ ವಿಡಿಯೋ ಮಾಡಿಕೊಳ್ಳಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಿ ಎಂದು ಹೇಳಲಾಗುತ್ತದೆ.
ವಿಡಿಯೋ ಮಾಡುವುದು ಅಂತಹ ಅಪರಾಧಗಳನ್ನು ತಡೆಯುತ್ತದೆ ಎಂದು ಯೋಚಿಸುವುದು ತಪ್ಪು. ಅದಕ್ಕೆ ಬದಲು ಹೆಚ್ಚಿಸುತ್ತದೆ. ಅದನ್ನು ನೋಡುವವನು ತಾನೂ ಹಾಗೆ ಮಾಡಬೇಕು ಎಂದುಕೊಳ್ಳುತ್ತಾನೆ.
ಸಾಮಾನ್ಯ ಗೂಂಡಾ ಪ್ರವೃತ್ತಿಯ ಜನರು ಥಳಿಸುವುದಕ್ಕೆ ಮುಂದಾಗುತ್ತಾರೆ. ಆಕ್ರೋಶದಿಂದ ಏನನ್ನಾದರೂ ಸಾಧಿಸಬಹುದು ಎಂದುಕೊಳ್ಳಲಾಗುತ್ತದೆ. ಧರ್ಮದ ರಾಜಕಾರಣ ಈ ಕೋಪಕ್ಕೆ ರಕ್ಷಣೆ ನೀಡುತ್ತಿದೆ. ಕಾಡಿಗಳಲ್ಲಿ, ಮೆರವಣಿಗೆಗಳಲ್ಲಿ, ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ `ದೇಶದ್ರೋಹಿ'ಗಳಿಗೆ ಸ್ಥಳದಲ್ಲೇ ಶಿಕ್ಷೆ ಕೊಡುವಾಗ ಯಾರೂ ಏನೂ ಹೇಳುವುದಿಲ್ಲ. ಅಂಥವರಿಗೆ ಶಿಕ್ಷೆ ಕೂಡ ಆಗುವುದಿಲ್ಲ. ಅವರು ನಿರಪರಾಧಿ ಎಂದು ಹೊರಗೆ ಬಂದರೆ ಅವರಿಗೆ ಅದ್ಧೂರಿ ಸ್ವಾಗತ ಕೊಡಲಾಗುತ್ತದೆ.
ಹುಡುಗಹುಡುಗಿ ಜೊತೆ ಜೊತೆಗೆ ಕುಳಿತಿದ್ದರೆ ಅವರನ್ನು ಮನಬಂದಂತೆ ಥಳಿಸಲಾಗುತ್ತದೆ. ಥಳಿಸುವವರ ವಿಡಿಯೋ ವೈರಲ್ ಆಗುತ್ತದೆ. ಅಷ್ಟಾದರೂ ಪೊಲೀಸರು ಯಾರೊಬ್ಬರನ್ನೂ ಬಂಧಿಸುವುದಿಲ್ಲ. ಅದೆಷ್ಟೋ ಹುಡುಗಿಯರ ಬಲಾತ್ಕಾರದ ವಿಡಿಯೋಗಳು ವೈರಲ್ ಆಗಿವೆ. ಆದರೆ ಪೊಲೀಸರಿಗೆ ಮಾತ್ರ ಘಟನೆ ಎಲ್ಲಿಯದು, ಅಪರಾಧಿಗಳು ಯಾರು ಎನ್ನುವುದು ಗೊತ್ತೇ ಆಗುವುದಿಲ್ಲ. ಹೊಡೆಯಿರಿ, ಕೈ ಹಗುರ ಮಾಡಿಕೊಳ್ಳಿ ಇದು ನಮ್ಮ ಸಂಸ್ಕೃತಿಯ ಭಾಗವಾಗುತ್ತಿದೆ. ಯಾರು ದೇವರಲ್ಲಿ ನಂಬಿಕೆ ಇಡುತ್ತಾನೊ, ರಾತ್ರಿ ಹಗಲು ಪೂಜೆ ಮಾಡುತ್ತಾನೊ, ಸೋಶಿಯಲ್ ಆಗಿರುವ ನಾಟಕ ಮಾಡುತ್ತಾನೊ ಅಂಥವರಿಗೆ ತಿಳಿ ಹೇಳುವುದು ಕಷ್ಟಕರ.