ಸ್ಪೆಷಲ್ ಹೆಲ್ದಿ ಹಲ್ವಾ
ಸಾಮಗ್ರಿ : 1 ಕಪ್ ಬ್ರೋಕನ್ ವೀಟ್, 3 ಕಪ್ ಹಾಲು, ಅಗತ್ಯವಿದ್ದಷ್ಟು ಸಕ್ಕರೆ, ತುಪ್ಪ, ಏಲಕ್ಕಿ ಪುಡಿ, ತುಂಡರಿಸಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ.
ವಿಧಾನ : ಮೊದಲು ಹಾಲು ಬಿಸಿ ಮಾಡಿಕೊಂಡು, ಅದು ಉಕ್ಕಿದಾಗ ಸಕ್ಕರೆ ಹಾಕಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕೆದಕಬೇಕು. ಅದೇ ಹೊತ್ತಲ್ಲಿ ಪಕ್ಕದ ಒಲೆಯಲ್ಲಿ ಬಾಣಲೆ ಬಿಸಿ ಮಾಡಿ ತುಪ್ಪದಲ್ಲಿ ಮೊದಲು ಡ್ರೈಫ್ರೂಟ್ಸ್ ಹುರಿದು ಪಕ್ಕಕ್ಕಿಡಿ. ಇನ್ನಷ್ಟು ತುಪ್ಪ ಹಾಕಿ, ಬ್ರೋಕನ್ ವೀಟ್ ಬೆರೆಸಿ, ಮಂದ ಉರಿಯಲ್ಲಿ ಘಮ್ಮೆನ್ನುವಂತೆ ನಿಧಾನವಾಗಿ ಹುರಿಯಿರಿ. ನಡುನಡುವೆ ತುಪ್ಪ ಬೆರೆಸುತ್ತಾ ಕೆದಕಬೇಕು. ಹಾಲು ಅರ್ಧದಷ್ಟು ಹಿಂಗಿದಾಗ ಅದನ್ನು ಇದಕ್ಕೆ ಬೆರೆಸಿ ಕೈಯಾಡಿಸಿ. ಮತ್ತೆ ತುಪ್ಪ ಬೆರೆಸುತ್ತಾ ಕೆದಕಬೇಕು. ಅದು ಚೆನ್ನಾಗಿ ಬೆಂದ ಮೇಲೆ ಏಲಕ್ಕಿ, ಡ್ರೈಫ್ರೂಟ್ಸ್ ಬೆರೆಸಿ, ಚಿತ್ರದಲ್ಲಿರುವಂತೆ ಗುಲಾಬಿ ದಳ ಉದುರಿಸಿ, ಬಿಸಿ ಬಿಸಿಯಾಗಿ ಮೇಲಷ್ಟು ತುಪ್ಪ ಹಾಕಿ ಅತಿಥಿಗಳಿಗೆ ಸವಿಯಲು ಕೊಡಿ.
ಬೇಸನ್ ಲಡ್ಡು
ಸಾಮಗ್ರಿ : 1 ಕಪ್ ಬೇಸನ್ (ಕಡಲೆಹಿಟ್ಟು), ಅಗತ್ಯವಿದ್ದಷ್ಟು ಪುಡಿ ಸಕ್ಕರೆ, ತುಪ್ಪ, ಏಲಕ್ಕಿ ಪುಡಿ, ಪಚ್ಚಕರ್ಪೂರ, ಅಲಂಕರಿಸಲು ತುಪ್ಪದಲ್ಲಿ ಹುರಿದ ಪಿಸ್ತಾ ಚೂರು, ಬೆಳ್ಳಿ ರೇಕು.
ವಿಧಾನ : ಮೊದಲು ಹಿಟ್ಟು ಜರಡಿಯಾಡಿ. ಭಾರಿ ಬಾಣಲೆಯಲ್ಲಿ ಧಾರಾಳ ತುಪ್ಪ ಬಿಸಿ ಮಾಡಿ ಪಿಸ್ತಾ ಹುರಿದು ತೆಗೆಯಿರಿ. ನಂತರ ಇದಕ್ಕೆ ಕಡಲೆಹಿಟ್ಟು ಹಾಕಿ ಮಂದ ಉರಿಯಲ್ಲಿ ಸುಮಾರು ಹೊತ್ತು ಹುರಿಯಬೇಕು, ನಡುನಡುವೆ ತುಪ್ಪ ಸೇರಿಸುತ್ತಿರಿ. ನಂತರ ಇದನ್ನು ಅಗಲ ತಟ್ಟೆಗೆ ಹರಡಿ ಚೆನ್ನಾಗಿ ಆರಲು ಬಿಡಿ. ನಂತರ ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ, ತುಪ್ಪ ಸವರಿದ ಜಿಡ್ಡು ಕೈಯಲ್ಲಿ ಉಂಡೆ ಕಟ್ಟಿ, ಚಿತ್ರದಲ್ಲಿರುವಂತೆ ಅಲಂಕರಿಸಿ. ಇವನ್ನು ಏರ್‌ಟೈಟ್ ಕಂಟೇನರ್‌ನಲ್ಲಿರಿಸಿ ಮಕ್ಕಳು ಬಯಸಿದಾಗ ಸವಿಯಲು ಕೊಡಿ.
ರವೆ ಕೊಬ್ಬರಿ ಮಿಠಾಯಿ
ಸಾಮಗ್ರಿ : 1-1 ಕಪ್ ರವೆ ತೆಂಗಿನ ತುರಿ, ಸಕ್ಕರೆ, 2 ಕಪ್ ಹಾಲು, ಅರ್ಧ ಸೌಟು ತುಪ್ಪ, ತುಸು ಏಲಕ್ಕಿ ಪುಡಿ, ಅಲಂಕರಿಸಲು ಪಿಸ್ತಾ ಚೂರು.
ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಪಿಸ್ತಾ ಹುರಿದು ತೆಗೆಯಿರಿ. ಅದಕ್ಕೆ ರವೆ ಸೇರಿಸಿ ಮಂದ ಉರಿಯಲ್ಲಿ ಘಮ್ಮೆನ್ನುವಂತೆ ಹುರಿಯಿರಿ. ನಡುನಡುವೆ ತುಪ್ಪ ಬೆರೆಸುತ್ತಿರಿ. ನಂತರ ತೆಂಗಿನ ತುರಿ ಸೇರಿಸಿ ತುಪ್ಪ ಬೆರೆಸುತ್ತಾ ಬಾಡಿಸಬೇಕು. ನಂತರ ಕೆಳಗಿಳಿಸಿ. ಇದನ್ನು ಅಗಲ ತಟ್ಟೆಗೆ ಸುರಿದು ಆರಲು ಬಿಡಿ. ಅದೇ ಬಾಣಲೆಯಲ್ಲಿ ಹಾಲು ಬಿಸಿ ಮಾಡಿ, ಮಂದ ಉರಿಯಲ್ಲಿ ಕುದ್ದು ಅರ್ಧ ಹಿಂಗಲು ಬಿಡಿ. ಇದಕ್ಕೆ ರವೆ ಮಿಶ್ರಣ ಹಾಕಿ ಮತ್ತೆ ಬಾಡಿಸಿ. ನಂತರ ಸಕ್ಕರೆ, ಏಲಕ್ಕಿ ಹಾಕಿ ಕೆದಕಬೇಕು. ನಡುವೆ ತುಪ್ಪ ಬೆರೆಸುತ್ತಾ ತಳ ಹತ್ತದಂತೆ ನೋಡಿಕೊಳ್ಳಿ. ಕೆಳಗಿಳಿಸಿ, ತುಪ್ಪ ಸವರಿದ ಅಗಲ ತಟ್ಟೆಗೆ ಇದನ್ನು ಹರಡಿ, ಚಿತ್ರದಲ್ಲಿರುವಂತೆ ನೀಟಾಗಿ ಬರ್ಫಿ ಕತ್ತರಿಸಿ, ಅದರ ಮೇಲೆ ಪಿಸ್ತಾದಿಂದ ಅಲಂಕರಿಸಿ. ಎಂದಿನ ಕೊಬ್ಬರಿ ಮಿಠಾಯಿಗಿಂತ ತುಸು ಭಿನ್ನವಾಗಿರುವ ಇದು ಸವಿಯಲು ಚೆನ್ನ.
ಕ್ಯಾರಾಮೆಲ್ ಕಸ್ಟರ್ಡ್
ಸಾಮಗ್ರಿ : 3 ಮೊಟ್ಟೆ, ಅರ್ಧ ಕಪ್ ಸಕ್ಕರೆ, ಅರ್ಧ ಸಣ್ಣ ಚಮಚ ವೆನಿಲಾ ಎಸೆನ್ಸ್, 2 ಕಪ್ ಕಾದಾರಿದ ಹಾಲು, ತುಸು ತೇದ ಜಾಯಿಕಾಯಿ, ಪುದೀನಾ ಎಸಳು.
ವಿಧಾನ : ಒಂದು ಚಿಕ್ಕ ಬಾಣಲೆಯಲ್ಲಿ ಸಕ್ಕರೆ ಹಾಕಿ ಬಿಸಿ ಮಾಡಿ. ಅದು ಕ್ಯಾರಾಮೈಸ್ ಆಗಿ ತುಸು ಕರಗಿದಾಗ, 4 ಮೌಲ್ಡ್‌ಗೆ ಹಾಕಿ, ಓವನ್‌ನಲ್ಲಿರಿಸಿ 10 ನಿಮಿಷ ಹಾರ್ಡ್ ಮಾಡಿ. ಒಂದು ಬಟ್ಟಲಲ್ಲಿ ಮೊಟ್ಟೆ ಒಡೆದು ಹಾಕಿ ಬೀಟ್ ಮಾಡಿ. ಇದಕ್ಕೆ ಸಕ್ಕರೆ, ವೆನಿಲಾ ಎಸೆನ್ಸ್, ಜಾಯಿಕಾಯಿ ರಸ ಬೆರೆಸಿ ಚೆನ್ನಾಗಿ ಗೊಟಾಯಿಸಿ. ಇದನ್ನು ಸೋಸಿಕೊಂಡು ಎಲ್ಲಾ ಮೌಲ್ಡ್‌ಗೂ ಮುಕ್ಕಾಲು ಭಾಗ ತುಂಬಿಸಿ. ನಂತರ ಓಪನ್ ರಾಕ್‌ನಲ್ಲಿ ವರ್ಗಾಕಾರದ ಪ್ಯಾನ್ ಬಳಸಿ, ಅದಕ್ಕೆ ನೀರು ತುಂಬಿಸಿ ಅದರಲ್ಲಿ ಮೌಲ್ಡ್ ಇರಿಸಿ, ಹದನಾಗಿ ಬೇಕ್ ಮಾಡಿ. ಅದಕ್ಕೆ ಸ್ಟೀಲ್ ಕಡ್ಡಿ ಚುಚ್ಚಿದಾಗ ಅದು ಸಲೀಸಾಗಿ ಹೊರಬರಬೇಕು. ನಂತರ ಜೋಪಾನವಾಗಿ ಇವನ್ನು ಹೊರತೆಗೆದು, ಮೌಲ್ಡ್ ಮೇಲೆ ಇರಿಸಿ, ಡಿಶ್ ಉಲ್ಟಾ ಆಗುವಂತೆ ಮಾಡಿ. ಈಗ ರೆಡಿ ಇರುವ ಕ್ಯಾರಾಮೆಲ್ ಸಿರಪ್‌ನ್ನು ಸಾಸ್ ತರಹ ಕಸ್ಟರ್ಡ್ ಸುತ್ತಲೂ ಹರಡಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಸವಿಯಲು ಕೊಡಿ.
ಸ್ಪೆಷಲ್ ಮೋದಕ
ಸಾಮಗ್ರಿ : 1 ಕಪ್ ಬೆಲ್ಲದ ಪುಡಿ, 2 ಕಪ್ ತೆಂಗಿನ ತುರಿ, ತುಸು ಏಲಕ್ಕಿ ಪುಡಿ, ಅರ್ಧ ಸೌಟು ತುಪ್ಪ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ-ದ್ರಾಕ್ಷಿ, 1 ಕಪ್ ಅಕ್ಕಿಹಿಟ್ಟು, ಅರ್ಧ ಕಪ್ ತುರಿದ ಪನೀರ್, ಚಿಟಕಿ ಉಪ್ಪು.
ವಿಧಾನ : ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಬೆಲ್ಲ ಹಾಕಿ ತುಸು ನೀರು ಚಿಮುಕಿಸುತ್ತಾ ಮಂದ ಉರಿಯಲ್ಲಿ ಕೆದಕಬೇಕು. ಆಮೇಲೆ ತೆಂಗಿನ ತುರಿ ಪನೀರ್ ಹಾಕಿ ಬಾಡಿಸಿ. ನಡುನಡುವೆ ತುಪ್ಪ ಬೆರೆಸುತ್ತಾ ತಳ ಹಿಡಿಯದಂತೆ ಕೆದಕಿರಿ. ನಂತರ ಏಲಕ್ಕಿ, ದ್ರಾಕ್ಷಿ-ಗೋಡಂಬಿ ಹಾಕಿ ಕೆದಕಿ ಕೆಳಗಿಳಿಸಿ. ಇದು ಚೆನ್ನಾಗಿ ಆರಬೇಕು, ಈಗ ಹೂರಣ ರೆಡಿ. ಅದೇ ಸಮಯದಲ್ಲಿ 1 ಕಪ್ ನೀರು ಕುದಿಸಿ ಅದಕ್ಕೆ ಉಪ್ಪು, ತುಪ್ಪ ಹಾಕಿ ಮರಳಿಸಿ. ಇದಕ್ಕೆ ಅಕ್ಕಿಹಿಟ್ಟು ಬೆರೆಸಿ ಗಂಟಾಗದಂತೆ ಕೈಯಾಡಿಸುತ್ತಿರಿ. ನಾವು ಒತ್ತು ಶ್ಯಾವಿಗೆಗೆ ಹಿಟ್ಟು ರೆಡಿ ಮಾಡುವ ಹದಕ್ಕೆ ಬಂದಾಗ ಇದನ್ನು ಕೆಳಗಿಳಿಸಿ. 2 ನಿಮಿಷ ಬಿಟ್ಟು, ಜಿಡ್ಡು ಸವರಿದ ಕೈನಿಂದ, ಇದರಿಂದ ದೊಡ್ಡ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಅಂಗೈ ಮೇಲೆ ತಟ್ಟಿಕೊಳ್ಳಿ. ಇದರ ಮಧ್ಯೆ 2-3 ಚಮಚ ಹೂರಣವಿರಿಸಿ, ಚಿತ್ರದಲ್ಲಿರುವಂತೆ ಅಂಚು ಜೋಡಿಸಿ, ಆಕಾರ ನೀಡಿ. ಹೀಗೆ ಎಲ್ಲಾ ಸಿದ್ಧಪಡಿಸಿಕೊಂಡು, ಇಡ್ಲಿ ತಟ್ಟೆಯಲ್ಲಿರಿಸಿ ಹಬೆಯಲ್ಲಿ 10 ನಿಮಿಷ ಬೇಯಿಸಿ. ನಂತರ ಬಿಸಿ ಬಿಸಿಯಾಗಿ ತಟ್ಟೆಗೆ ಹಾಕಿ, ಮೇಲೆ ತುಪ್ಪ ಹಾಕಿ ಸವಿಯಲು ಕೊಡಿ.
ಸ್ಪೆಷಲ್ ಖೋವಾ ಲಡ್ಡು
ಸಾಮಗ್ರಿ : 1 ಕಪ್ ಸಿಹಿ ಖೋವಾ, ಅರ್ಧ ಕಪ್ ಪುಡಿಸಕ್ಕರೆ, ತುಸು ತುಪ್ಪ, ಡ್ರೈ ಫ್ರೂಟ್ಸ್, 1 ಗಿಟುಕು ತೆಂಗಿನ ತುರಿ, ಒಂದಿಷ್ಟು ಪಿಸ್ತಾ ಚೂರು.
ವಿಧಾನ : ಒಂದು ನಾನ್‌ಸ್ಟಿಕ್ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಮಸೆದ ಖೋವಾ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಸಕ್ಕರೆ ಸೇರಿಸಿ ಕೈಯಾಡಿಸಿ ಕೆಳಗಿಳಿಸಿ, ಆರಲು ಬಿಡಿ. ನಂತರ ಇದರಿಂದ ಸಣ್ಣ ಉಂಡೆ ಮಾಡಿ. ಇದನ್ನು ತುಸು ಟೊಳ್ಳಾಗಿಸಿ ಮಧ್ಯೆ ಡ್ರೈಫ್ರೂಟ್ಸ್ ತುಂಬಿಸಿ ಮತ್ತೆ ಉಂಡೆ ಕಟ್ಟಿರಿ. ನಂತರ ತೆಂಗಿನ ತುರಿಯಲ್ಲಿ ಹೊರಳಿಸಿ, ಮೇಲೆ ಪಿಸ್ತಾ ಉದುರಿಸಿ, ಸವಿಯಲು ಕೊಡಿ.
ಗುಲಾಬ್ ಜಾಮೂನು
ಸಾಮಗ್ರಿ : 1 ಕಪ್ ಸಕ್ಕರೆ, 1 ಕಪ್ ನೀರು, ತುಸು ಏಲಕ್ಕಿ ಪುಡಿ, ಪಚ್ಚ ಕರ್ಪೂರ, 1 ಚಮಚ ನಿಂಬೆ ರಸ, 2 ಚಮಚ ಗುಲಾಬಿ ಜಲ, 1 ಕಪ್ ಹಾಲಿನ ಪುಡಿ, 4-5 ಚಮಚ ಮೈದಾ, 1-2 ಚಮಚ ರವೆ, 1-2 ಚಿಟಕಿ ಬೇಕಿಂಗ್ ಸೋಡ, ತುಸು ತುಪ್ಪ, 2 ಚಮಚ ಮೊಸರು, ಅರ್ಧ ಕಪ್ ಗಟ್ಟಿ ಹಾಲು, ಕರಿಯಲು ರೀಫೈಂಡ್ ಎಣ್ಣೆ, ಗಾರ್ನಿಶ್‌ಗಾಗಿ ಡ್ರೈ ಫ್ರೂಟ್ಸ್.
ವಿಧಾನ : ಒಂದು ಬಾಣಲೆಯಲ್ಲಿ ನೀರು ಬಿಸಿ ಮಾಡಿ. ಅದು ಕುದ್ದಾಗ ಸಕ್ಕರೆ ಹಾಕಿ, ಕೈಯಾಡಿಸುತ್ತಾ ಒಂದೆಳೆಯ ಪಾಕ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ, ಪಚ್ಚ ಕರ್ಪೂರ ಹಾಕಿ ಕೈಯಾಡಿಸಿ. ಮಧ್ಯೆ ಗಂಟಾಗದಿರಲು ನಿಂಬೆ ರಸ ಬೆರೆಸಿ, ಮುಚ್ಚಳ ಮುಚ್ಚಿರಿಸಿ ಒಂದು ಕಡೆ ಆರಲು ಬಿಡಿ. ಒಂದು ಬೇಸನ್ನಿಗೆ ಮೈದಾ, ಹಾಲಿನ ಪುಡಿ, ಲಘು ಹುರಿದ ರವೆ, ಸೋಡ ಸೇರಿಸಿ. ಆಮೇಲೆ ಮೊಸರು, ಹಾಲು, ತುಪ್ಪ ಬೆರೆಸಿ ಗಂಟಾಗದಂತೆ ಅತಿ ಮೃದು ಮಿಶ್ರಣ ಸಿದ್ಧಪಡಿಸಿ. ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಪಾಕದಲ್ಲಿ ನೆನೆಹಾಕಿ 5-6 ಗಂಟೆ ಕಾಲ ಹಾಗೇ ಬಿಡಿ. ನಂತರ ಸರ್ವಿಂಗ್ ಬೌಲ್‌ಗೆ ಪಾಕದ ಸಮೇತ ಹಾಕಿ, ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ, ಸವಿಯಲು ಕೊಡಿ.
ಬೆಲ್ಲದ ಖೋವಾಪಾಕ್
ಸಾಮಗ್ರಿ : 1 ಗಿಟುಕು ತೆಂಗಿನ ತುರಿ, ಅರ್ಧ ಕಪ್ ಬೆಲ್ಲದ ಪುಡಿ, ಹಾಲು, ಮಸೆದ ಖೋವಾ, ಹಾಲಲ್ಲಿ ನೆನೆಸಿದ ಕೇಸರಿ, ತುಸು ಏಲಕ್ಕಿ ಪುಡಿ, ಪಿಸ್ತಾ-ಬಾದಾಮಿ ಚೂರು.
ವಿಧಾನ : ಮೊದಲು ದಪ್ಪ ತಳದ ಬಾಣಲೆಗೆ ತುಪ್ಪ ಹಾಕಿ, ತೆಂಗಿನ ತುರಿ ಹಾಕಿ ಹದನಾಗಿ ಬಾಡಿಸಿ ಕೆಳಗಿಳಿಸಿ ಆರಲು ಬಿಡಿ. ಅದರಲ್ಲಿ ತುಸು ನೀರು ಬಿಸಿ ಮಾಡಿ, ಬೆಲ್ಲ ಹಾಕಿ ಕರಗಿಸಿ. ನಂತರ ಇದಕ್ಕೆ ತೆಂಗಿನ ತುರಿ ಬೆರೆಸಿ ಬಾಡಿಸಬೇಕು. ಆಮೇಲೆ ಹಾಲು ಬೆರೆಸಿ ಮಂದ ಉರಿಯಲ್ಲಿ ಕುದಿಸಿ. ನಂತರ ಮಸೆದ ಖೋವಾ, ಏಲಕ್ಕಿ, ಕೇಸರಿ ಹಾಕಿ ಕೆದಕಬೇಕು. ಕೆಳಗಿಳಿಸಿ ಪಿಸ್ತಾಬಾದಾಮಿ ಸೇರಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ, ಆರಿದ ನಂತರ ಬರ್ಫಿ ಕತ್ತರಿಸಿ, ಸವಿಯಿರಿ.