ಕಥೆ – ಶ್ಯಾಮಲಾ ಕುಲಕರ್ಣಿ

ಬೆಳಗ್ಗೆ 9 ಗಂಟೆಯಾಗಿತ್ತು. ನಂದಿನಿ ಲಗುಬಗೆಯಿಂದ ಪತಿ ಮತ್ತು ಮಕ್ಕಳಿಗಾಗಿ ತಿಂಡಿ ಸಿದ್ಧಪಡಿಸಿದಳು. ಅವರೆಲ್ಲರೂ ತಿಂಡಿ ತಿಂದು ಲಂಚ್‌ ಬಾಕ್ಸ್ ನ್ನೂ ಕೊಂಡೊಯ್ಯುತ್ತಿದ್ದರು. ಆದ್ದರಿಂದ ಮೂವರಿಗೂ ಡಬ್ಬಿಗಳನ್ನು ಪ್ಯಾಕ್‌ ಮಾಡಿಟ್ಟಳು. ಮಕ್ಕಳು ಕಾಲೇಜಿನಿಂದ ಸಾಯಂಕಾಲ ಹಿಂದಿರುಗುತ್ತಿದ್ದರು. ಪತಿ ವಿಜಯ್‌ ಆಫೀಸ್‌ನಿಂದ ಬರಲು ಇನ್ನೂ ತಡವಾಗುತ್ತಿತ್ತು.

ವಿಜಯ್‌ ತಿಂಡಿ ತಿನ್ನುತ್ತಾ ಅಂದಿನ ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ. ಸೌಮ್ಯಾ ಮತ್ತು ಸುರೇಶ್‌ ತಮ್ಮ ತಮ್ಮ ಮೊಬೈಲ್‌ ಫೋನ್‌ನಲ್ಲಿ ಕಣ್ಣು ಕೀಲಿಸಿ ತಿಂಡಿ ತಟ್ಟೆಯಲ್ಲಿ ಬೆರಳಾಡಿಸುತ್ತಿದ್ದರು.

ನಂದಿನಿ ಮಕ್ಕಳ ಮೇಲೆ ರೇಗಿದಳು, “ನಿಮಗೆ ಸದಾ ಫೋನ್‌ ಒಂದು ಇದ್ದರೆ ಆಯಿತು. ತಿಂಡಿ ಕಡೆ ಗಮನ ಇಟ್ಟು ತಿನ್ನಬಾರದೇ? ಎಲ್ಲರೂ ಬೆಳಗ್ಗೆ ಹೊರಟರೆ ಇನ್ನು ಸಂಜೆವರೆಗೂ ಯಾರೂ ಇರುವುದಿಲ್ಲ. ಎರಡು ಮಾತನಾಡುತ್ತಾ ನೆಮ್ಮದಿಯಿಂದ ತಿಂಡಿ ತಿನ್ನಿ.”

ನಂದಿನಿಯ ಮಾತಿನಿಂದ ಪೇಪರ್‌ ಓದುತ್ತಿದ್ದ ವಿಜಯ್‌ಗೆ ಡಿಸ್ಟರ್ಬ್‌ ಆಯಿತು. ಅವನು, “ಯಾಕೆ ಬೆಳಗ್ಗೆ ಬೆಳಗ್ಗೆ ರೇಗಾಡುತ್ತಿದ್ದೀಯಾ? ಅವರು ಫೋನ್‌ನಲ್ಲಿ ಏನೋ ಮಾಡುತ್ತಿರಬಹುದು ಬಿಡು,” ಎಂದ.

“ನಾನೇನು ಕೇಳಿದೆ? ನೀವು ಮೂವರೂ ದಿನವೆಲ್ಲ ಹೊರಗಿರುತ್ತೀರಿ. ಶಾಂತಿಯಿಂದ ತಿಂಡಿ ತಿನ್ನಿ ಅಂದೆ,” ಎಂದಳು ನಂದಿನಿ ಕೋಪದಿಂದ.

ವಿಜಯ್‌ ಮುಗುಳ್ನಗುತ್ತಾ, “ನಾವು ಶಾಂತವಾಗಿಯೇ ತಿನ್ನುತ್ತಾ ಇದ್ದೇವೆ. ನೀನೇ ಗಲಾಟೆ ಮಾಡುತ್ತಾ ಇರುವವಳು….” ಎಂದ.

ಮಕ್ಕಳು ಫೋನ್‌ನಿಂದ ದೃಷ್ಟಿ ಕಿತ್ತು ತಂದೆಯ ಮಾತನ್ನು ಖುಷಿಯಿಂದ ಸಮರ್ಥಿಸುತ್ತಾ, “ವಾಹ್‌ ಪಪ್ಪಾ…! ಸರಿಯಾಗಿ ಹೇಳಿದಿರಿ,” ಎಂದರು.

ನಂದಿನಿ ಮೂವರ ಟಿಫಿನ್‌ ಬ್ಯಾಗ್‌ಗಳನ್ನು ಟೇಬಲ್ ಮೇಲೆ ತಂದಿಟ್ಟು ಬೇಸರದಿಂದ ಅಲ್ಲಿಂದ ಸರಿದುಹೋದಳು. `ಇನ್ನು ಇಡೀ ದಿನ ಒಬ್ಬಳೇ ಇರಬೇಕು…. ಇವರು ಯಾರಿಗೂ ಸ್ವಲ್ಪ ಹೊತ್ತು ನಗುತ್ತಾ ಮಾತನಾಡೋಣ ಎನ್ನುವ ಯೋಚನೆಯೇ ಬರುವುದಿಲ್ಲ. ಸಾಯಂಕಾಲ ಸುಸ್ತಾಗಿ ಬರುತ್ತಾರೆ. ಆಮೇಲೆ ಟಿವಿ, ಪೋನ್‌ ಕಡೆಗೇ ಜ್ಞಾನ. ಈಗೀಗ ಯಾರಿಗೂ ಮನೆಯವರ ಜೊತೆ ಮಾತೇ ಬೇಕಾಗಿಲ್ಲ…..`

ಮಕ್ಕಳು ಸದಾಕಾಲ ಫೋನ್‌ ಹಿಡಿದುಕೊಂಡೇ ಇದ್ದರೆ ಒಂಟಿತನ ಕಾಡುತ್ತದೆ. ಮೂವರಿಗೂ ಸ್ವಲ್ಪ ಹೊತ್ತು ನಿಮ್ಮ ಟಿವಿ, ಪೋನ್‌, ಲ್ಯಾಪ್‌ಟಾಪ್‌ ಮುಚ್ಚಿಟ್ಟು ನನ್ನ ಕಡೆ ಸ್ವಲ್ಪ ನೋಡಿ ಎಂದು ಹೇಳಿದರೆ ನನಗೆ ಏನಾಗಿದೆ ಅಂತ ಅಂದುಕೊಳ್ಳುತ್ತಾರೆ.

`ಸೋಶಿಯಲ್ ನೆಟ್‌ವರ್ಕಿಂಗ್‌ನ ಹುಚ್ಚು ನನಗಿಲ್ಲ. ಬಲವಂತವಾಗಿ ಸ್ನೇಹ ಬೆಳೆಸುವುದಾಗಲಿ, ಅಕ್ಕಪಕ್ಕದವರೊಂದಿಗೆ ಹರಟೆ ಹೊಡೆಯುವುದಾಗಲಿ ನನಗೆ ಇಷ್ಟವಿಲ್ಲ. ಇದು ನನ್ನ ತಪ್ಪೆ? ಈ ಮೂವರೂ ತಮ್ಮ ಫೇಸ್‌ಬುಕ್‌ ಫ್ರೆಂಡ್ಸ್ ನೊಂದಿಗೆ ಚಿಕ್ಕಪುಟ್ಟ ವಿಷಯವನ್ನೂ ಶೇರ್‌ ಮಾಡಿಕೊಳ್ಳುತ್ತಾರೆ. ಆದರೆ ನನ್ನ ಜೊತೆ ಮಾತನಾಡಲು ಸಮಯವಿಲ್ಲ.’

ಮೂವರೂ ಆಫೀಸ್‌, ಕಾಲೇಜುಗಳಿಗೆ ಹೊರಟ ನಂತರ ಮನೆಯಲ್ಲಿ ಒಂದು ವಿಚಿತ್ರವಾದ ಮೌನ ಆವರಿಸಿತು. ನಂದಿನಿಯ ಮನಸ್ಸಿಗೆ ಮತ್ತೆ ಬೇಸರ ಕವಿಯಿತು. ಅವಳು ನಿಧಾನವಾಗಿ ತಿಂಡಿ ತಿಂದು ಮುಗಿಸಿದಳು. ಅಡುಗೆ ಮನೆಯ ಕೆಲಸ ಮುಗಿಸುವಷ್ಟರಲ್ಲಿ ಕೆಲಸದಾಕೆ ಲಕ್ಷ್ಮಿ ಬಂದಳು. ಅವಳು ಕೆಲಸ ಮಾಡಿ ಹೋದ ಮೇಲೆ ಮನೆಯಲ್ಲಿ ಮತ್ತೆ ಮೌನ.

ಹಿಂದೆ ತಾನೆಷ್ಟು ಖುಷಿಯಿಂದ ಲವಲವಿಕೆಯಿಂದ ಇರುತ್ತಿದ್ದಳು. ಬಣ್ಣ ಬಣ್ಣದ ಕನಸು ಕಾಣುತ್ತಿದ್ದಳು. ಈಗ ಮನೆಯಲ್ಲಿ ಹಗಲೆಲ್ಲ ಮೌನ, ರಾತ್ರಿಯ ಹೊತ್ತು ಟಿವಿ, ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ಗಳ ಕಲರವದ ನಡುವೆ ಒಂಟಿ ಬಾಳು. ಜೀವನವೆಷ್ಟು  ನೀರಸವಾಗಿಬಿಟ್ಟಿದೆ…..ಅವರು ಚೆನ್ನೈನಿಂದ ಬೆಂಗಳೂರಿಗೆ ಬಂದು 1 ವರ್ಷವಷ್ಟೇ ಆಗಿದೆ. ವಿಜಯ್‌ನ ಆಫೀಸ್‌ ಮತ್ತು ಮಕ್ಕಳ ಕಾಲೇಜ್‌ ಎಲ್ಲ ಇಂದಿರಾ ನಗರದಲ್ಲಿ ಇರುವುದರಿಂದ ಅವರು ಇಂದಿರಾನಗರದಲ್ಲೇ  ಮನೆ ಮಾಡಿಕೊಂಡಿದ್ದರು. ತಮ್ಮ ಫ್ಲಾಟ್‌ನ ಬಾಲ್ಕನಿ ನಂದಿನಿಗೆ ಪ್ರಿಯ ತಾಣ. ಅಲ್ಲಿ ದೊಡ್ಡದೊಂದು ಫ್ಲಾಟ್‌ನಲ್ಲಿ ಹಬ್ಬಿಸಿದ್ದ ಮಲ್ಲಿಗೆ ಬಳ್ಳಿಯ ಪರಿಮಳ ಅವಳನ್ನು ಪುಳಕಿತಗೊಳಿಸುತ್ತಿತ್ತು. ಬಾಲ್ಕನಿಯಿಂದ ಸುತ್ತಮುತ್ತಲ ಸ್ಥಳವೆಲ್ಲ ಚೆನ್ನಾಗಿ ಗೋಚರಿಸುತ್ತಿತ್ತು. ರಸ್ತೆಯಲ್ಲಿ ಹರಿದಾಡುವ ವಾಹನಗಳು, ಅಲ್ಲಲ್ಲಿ ತಲೆಯೆತ್ತಿರುವ ಎತ್ತರದ ಅಪಾರ್ಟ್‌ಮೆಂಟ್‌ಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು. ಇವುಗಳನ್ನು ನೋಡುತ್ತಾ ನಂದಿನಿ ತನ್ನ ಬಿಡುವಿನ ವೇಳೆಯನ್ನೆಲ್ಲ ಬಾಲ್ಕನಿಯಲ್ಲೇ ಕಳೆಯುತ್ತಿದ್ದಳು. ಮನೆಯ ಇತರರು ಆ ಬಾಲ್ಕನಿಗೆ ಕಾಲಿಡುತ್ತಿದ್ದುದೇ ವಿರಳ. ಹೀಗಾಗಿ ಅದು ಅವಳದೇ ಕಲ್ಪನಾ ಲೋಕದಲ್ಲಿ ವಿಹರಿಸುವ ಸ್ಥಳವಾಗಿತ್ತು.

ಲಕ್ಷ್ಮಿ ತನ್ನ ಕೆಲಸ ಮುಗಿಸಿ ಹೋದ ನಂತರ `ಈಗೇನು ಮಾಡಲಿ’ ಎಂದು ಯೋಚಿಸುತ್ತಾ ನಂದಿನಿ ಸ್ಟೋರ್‌ ರೂಮಿಗೆ ಹೋದಳು. ಅಲ್ಲಿನ ಸಾಮಾನುಗಳನ್ನು ಚೊಕ್ಕಗೊಳಿಸಿ ಬಹಳ ದಿನಗಳಾಗಿದ್ದವು. ಒಂದೊಂದಾಗಿ ಎತ್ತಿ ಜೋಡಿಸುವಾಗ ಒಂದು ದೊಡ್ಡ ರಟ್ಟಿನ ಡಬ್ಬ ಕಾಣಿಸಿತು. 3 ವರ್ಷಗಳ ಹಿಂದೆ ನಾಲ್ಕು ಜನರು ನೈನಿತಾಲ್‌ ಪ್ರವಾಸಕ್ಕೆ ಹೋಗಿದ್ದಾಗ ಕೊಂಡಿದ್ದ ದುರ್ಬೀನು ಅದರಲ್ಲಿತ್ತು.

ನಂದಿನಿ ದುರ್ಬೀನನ್ನು ತೆಗೆದಿಟ್ಟುಕೊಂಡು ಉಳಿದ ಸಾಮಾನುಗಳನ್ನು ಸರಿಪಡಿಸಿ ಬಾಲ್ಕನಿಗೆ ಬಂದು ನಿಂತಳು. ಹೀಗೆ ನಿಂತು ದುರ್ಬೀನಿನಲ್ಲಿ ನೋಡುವುದನ್ನು ಬೇರೆ ಯಾರಾದರೂ ಗಮನಿಸಿದರೆ ತಪ್ಪು ತಿಳಿಯಬಹುದು ಎಂದು ಯೋಚಿಸಿ. ಒಳಗಿನಿಂದ ಒಂದು ಸ್ಟೂಲನ್ನು ತಂದು ಮಲ್ಲಿಗೆ ಬಳ್ಳಿಯ ಮರೆಗಿಟ್ಟಳು. ಅಲ್ಲಿ ಕುಳಿತು ಆರಾಮವಾಗಿ ದುರ್ಬೀನಿನಿಂದ ನೋಡತೊಡಗಿದಳು.

ಎದುರು ಭಾಗದಲ್ಲಿ ಕೊಂಚ ದೂರದಲ್ಲಿ ಹೊಸದಾಗಿ ಕಟ್ಟಿದ್ದ ಬಿಲ್ಡಿಂಗ್‌ನತ್ತ ನಂದಿನಿ ದೃಷ್ಟಿಹರಿಸಿದಳು. ಅಲ್ಲಿ ಕೆಲವು ಫ್ಲಾಟ್‌ಗಳಲ್ಲಿ ಜನರು ವಾಸಕ್ಕೆ ಬಂದಿದ್ದರು. ಉಳಿದ ಕೆಲವು ಫ್ಲಾಟ್‌ಗಳಲ್ಲಿ ಇನ್ನೂ ಕೆಲಸ ನಡೆಯುತ್ತಿತ್ತು. ಒಂದು ಫ್ಲಾಟ್‌ನ ಬಾಲ್ಕನಿ ಮತ್ತು ಡ್ರಾಯಿಂಗ್‌ ರೂಮ್ ದುರ್ಬೀನಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅವಳದೇ ವಯಸ್ಸಿನ ಒಬ್ಬ ಮಹಿಳೆ ಡ್ರಾಯಿಂಗ್‌ ರೂಮಿನಲ್ಲಿರುವುದು ಕಂಡಿತು. ಆ ಮನೆಯಲ್ಲಿ ಬಹುಶಃ ಮ್ಯೂಸಿಕ್‌ ಇದ್ದಿರಬಹುದು. ಆ ಮಹಿಳೆ ತಲೆಯನ್ನು ಅಲುಗಿಸುತ್ತಾ ಕೆಲಸ ಮಾಡುತ್ತಿದ್ದಳು.

ಸ್ವಲ್ಪ ಹೊತ್ತಿಗೆ ಅವಳ ಮಗಳು ಡ್ರಾಯಿಂಗ್‌ ರೂಮ್ ಪ್ರವೇಶಿಸಿದಳು. ಇಬ್ಬರೂ ಕೂಡಿ ಯಾವುದೋ ಹಾಡಿಗೆ ಹೆಜ್ಜೆ ಹಾಕುತ್ತಾ ಜೋರಾಗಿ ನಕ್ಕರು. ಅದನ್ನು ಕಂಡು ನಂದಿನಿಯೂ ನಕ್ಕಳು. ಪಕ್ಕದಲ್ಲಿ ಮಲ್ಲಿಗೆ ಹೂವಿನ ಸುವಾಸನೆ, ದೂರದಲ್ಲಿ ತಾಯಿ ಮಗಳ ಚಟುವಟಿಕೆ. ಇವುಗಳಿಂದ ನಂದಿನಿಯ ಮನಸ್ಸಿಗೆ ಏನೋ ಹೊಸತನದ ಅನುಭವವಾಯಿತು.

ತಾಯಿ ಮಗಳು ಮನೆಯ ಒಳಭಾಗಕ್ಕೆ ಸರಿದರು. ನಂದಿನಿಯೂ ಎದ್ದು ಒಳಗೆ ಹೋದಳು. `ಆಗಲೇ 12 ಗಂಟೆಯಾಗಿದೆ. ಇಂದು ಹೊತ್ತು ಸರಿದದ್ದೇ ತಿಳಿಯಲಿಲ್ಲ,’ ಎಂದುಕೊಂಡು ಹಿಂದಿರುಗಿ ಬಂದು ಸ್ಟೂಲ್‌ ಮೇಲೆ ಕುಳಿತಳು. ದುರ್ಬೀನಿನಿಂದ ಅತ್ತ ಇತ್ತ ನೋಡಿದಳು. ಹೆಚ್ಚಿನ ಫ್ಲಾಟ್ಸ್ ನ ಬಾಗಿಲುಗಳು ಮುಚ್ಚಿದ್ದವು ಅಥವಾ ಕರ್ಟನ್‌ ಎಳೆಯಲ್ಪಟ್ಟಿತ್ತು.

ಹಾಗೇ ನೋಡುತ್ತಾ ಒಂದು ಫ್ಲಾಟ್‌ನ ಬಾಲ್ಕನಿಯಲ್ಲಿ ಅವಳ ದೃಷ್ಟಿ ನಿಂತಿತು. ಅವಳು ಕುತೂಹಲದಿಂದ ಅತ್ತ ವೀಕ್ಷಿಸಿದಳು. ಒಬ್ಬ ದಷ್ಟಪುಷ್ಟ ಶರೀರದ ಸುಂದರ ತರುಣ ಕೇವಲ ಶಾರ್ಟ್ಸ್ ತೊಟ್ಟು ಟವೆಲ್‌ನಿಂದ ತಲೆಯನ್ನು ಒರೆಸಿಕೊಳ್ಳುತ್ತಾ ನಿಂತಿದ್ದ. ಹಿಂದಿನಿಂದ ರೂಪವತಿಯಾದ ಯುವತಿಯೊಬ್ಬಳು ಬಂದು ಅವನ ಸೊಂಟವನ್ನು ಹಿಡಿದು ನಿಂತಳು. ಆ ತರುಣ ಹಿಂದೆ ತಿರುಗಿ ನೋಡಿ ಅಲ್ಲೇ ಅವಳನ್ನು ಚುಂಬಿಸಿದ. ಅವರು ನವವಿವಾಹಿತರೆಂದು ಅವರ ಚರ್ಯೆಯೇ ಹೇಳುತ್ತಿತ್ತು. ಅವಳ ಸೊಂಟವನ್ನು ಬಳಸಿ ಹಿಡಿದು ಒಳಗೆ ಕರೆದೊಯ್ದು ಡ್ರಾಯಿಂಗ್‌ ರೂಮಿನ ಸೋಫಾ ಮೇಲೆ ಒರಗಿದ.

ಇಬ್ಬರೂ ದೀರ್ಘ ಚುಂಬನದಲ್ಲಿ ತೊಡಗಿದ್ದುದು ನಂದಿನಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನಂದಿನಿಯ ಕೆನ್ನೆ ಕೆಂಪಾಯಿತು. ಅವಳ ಹೃದಯದ ಬಡಿತ ಹೆಚ್ಚಿತು. ಈ ರೋಮಾಂಚಕ ದೃಶ್ಯವನ್ನು ನೇರವಾಗಿ ಕಂಡು ಅವಳ ಮೈ ಬೆವರಿತು. ಬಹಳ ದಿನಗಳ ನಂತರ ಅವಳಿಗೆ ಇಂತಹ ಅನುಭವವಾಯಿತು. ಮತ್ತೆ ನೋಡಿದಾಗ ಆ ಯುವ ಜೋಡಿ ಸೋಫಾದಿಂದ ಎದ್ದು ಮನೆಯ ಬೇರೆ ಭಾಗಕ್ಕೆ ಹೋದರು. ಬಹುಶಃ ಬೆಡ್‌ರೂಮಿಗೆ ಹೋಗಿರಬಹುದು ಎಂದು ಯೋಚಿಸಿ ನಂದಿನಿಗೆ ನಗು ಬಂದಿತು.

ಆಗ 1 ಗಂಟೆಯಾಗಿತ್ತು. ನಂದಿನಿ ಊಟಕ್ಕೆ ಕುಳಿತಳು. ಇಂದು ಊಟ ಮಾಡುತ್ತಾ ಅವಳು ಮುಗುಳ್ನಗುತ್ತಿದ್ದಳು. ಅವಳಿಗೆ ಹಳೆಯ ಘಟನೆಗಳೆಲ್ಲ ನೆನಪಾಗತೊಡಗಿದವು. ಪ್ರಾರಂಭದ ದಿನಗಳಂತೆ ಚೆನ್ನಾಗಿ ಅಲಂಕರಿಸಿಕೊಂಡು ವಿನಯ್‌ ಜೊತೆಯಲ್ಲಿ ಕೆಲಕಾಲ ಕಳೆಯಬೇಕೆಂಬ ಮನಸ್ಸಾಯಿತು. ಊಟ ಮಾಡಿ ಸ್ವಲ್ಪ ಹೊತ್ತು ನಿದ್ರಿಸಿದಳು.

4 ಗಂಟೆಗೆ ಕಾಫಿ ಕಪ್‌ ಹಿಡಿದು ದುರ್ಬೀನಿನೊಂದಿಗೆ ಸ್ಟೂಲ್ ಮೇಲೆ ಕುಳಿತಳು. ತಾಯಿ ಮಗಳ ಮನೆಯಲ್ಲಿ ಯಾರೂ ಕಾಣಿಸಲಿಲ್ಲ. ನವವಿವಾಹಿತ ಜೋಡಿ ಮನೆಯ ಸಾಮಾನುಗಳನ್ನು ಜೋಡಿಸುತ್ತಿರುವುದು ಕಂಡು ಬಂದಿತು. ಅವರು ಫ್ಲಾಟ್‌ಗೆ ಹೊಸದಾಗಿ ಬಂದಿರಬಹುದು. ಕೆಲಸದ ಮಧ್ಯೆ ಅವರ ರೊಮಾನ್ಸ್ ಕೂಡ ನಡೆದಿತ್ತು. ತರುಣನು ಪತ್ನಿಯನ್ನು ತೋಳಿನಲ್ಲೆತ್ತಿಕೊಂಡು ಸುತ್ತಾಡಿದನು. ಅದೊಂದು ಆಕರ್ಷಕ ಜೋಡಿ.

ನಂದಿನಿ ನಗುತ್ತಾ ತನ್ನ ದುರ್ಬೀನಿಗೆ ಮುತ್ತಿಟ್ಟಳು. ಇಂದು ಅವಳಿಗೆ ಒಂದು ಬಗೆಯ ರೋಮಾಂಚನವಾಗುತ್ತಿತ್ತು. ದಿನವೆಲ್ಲ ಹೇಗೆ ಕಳೆಯಿತೆಂದು ತಿಳಿಯಲೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಂದು ಪತಿ ಮತ್ತು ಮಕ್ಕಳು ನಡೆದುಕೊಳ್ಳುವ ಬಗ್ಗೆ ಕೋಪ ಬರಲಿಲ್ಲ.  ಮನಸ್ಸಿಗೆ ಬೇಸರ ಆಗಲಿಲ್ಲ. ಬದಲಾಗಿ ಮೈಮನವೆಲ್ಲ ಸಂತೋಷದಿಂದ ತುಂಬಿತ್ತು.

5 ಗಂಟೆಯಾಯಿತು. ನಂದಿನಿ ಪ್ರತಿದಿನ ಸಾಯಂಕಾಲ ಹತ್ತಿರದ ಪಾರ್ಕ್‌ನಲ್ಲಿ 1 ಗಂಟೆ ಕಾಲ ವಾಕಿಂಗ್‌ ಮಾಡುತ್ತಿದ್ದಳು. ಇಂದು ಅವಳು ನಡಿಗೆಯಲ್ಲಿ ಉತ್ಸಾಹವಿತ್ತು, ಮನದಲ್ಲಿ ಸ್ಛೂರ್ತಿ ಇತ್ತು.

ವಾಕಿಂಗ್‌ ಮಾಡುತ್ತಾ ನಂದಿನಿ ಯೋಚಿಸುತ್ತಿದ್ದಳು, `ಈ ದುರ್ಬೀನಿನ ವಿಷಯವನ್ನು ಮನೆಯಲ್ಲಿ ಯಾರೊಡನೆಯೂ ಹೇಳಬಾರದು.’ ತಾನು ಮಾಡಿದ್ದು ಸರಿಯಲ್ಲ ಎಂದು ಅವಳಿಗೆ ಗೊತ್ತು. ಆದರೆ ಇಡೀ ದಿನ ಮಜವಾಗಿ ಕಾಲ ಕಳೆಯಿತು. ಸರಿ ತಪ್ಪು ಎಂದು ಯೋಚಿಸುತ್ತಾ ಕುಳಿತರೆ ಸಮಯ ಕಳೆಯುವುದು ಕಷ್ಟವಾಗುತ್ತದೆ.

ವಾಕಿಂಗ್‌ ಮುಗಿಸಿ ಮನೆಗೆ ಬಂದು ದುರ್ಬೀನನ್ನು ತನ್ನ ಸೀರೆಗಳ ಕಪಾಟಿನಲ್ಲಿ ಮುಚ್ಚಿಟ್ಟಳು. ಮಕ್ಕಳು ಮನೆಗೆ ಬರುವ ಹೊತ್ತಾಯಿತೆಂದು ಬೇಗನೆ ಅಡುಗೆಮನೆಯ ಕೆಲಸದಲ್ಲಿ ತೊಡಗಿಕೊಂಡಳು.

ಮಕ್ಕಳಿಗೆ ತಿಂಡಿ, ಕಾಫಿ ಕೊಡುತ್ತಾ ಕಾಲೇಜಿನ ಬಗ್ಗೆ ವಿಚಾರಿಸಿದಳು. ಅವಳು ಮತ್ತೆ ಒಂದೆರಡು ಪ್ರಶ್ನೆ ಕೇಳಿದಾಗ ಫೋನ್‌ನಲ್ಲಿ ಮಗ್ನನಾಗಿದ್ದ ಸುರೇಶ್‌, “ಅಮ್ಮಾ, ಎಷ್ಟು ಪ್ರಶ್ನೆ ಕೇಳುತ್ತೀರಿ?” ಎಂದು ಸಿಡುಕಿದ.

ನಂದಿನಿಗೆ ತನ್ನ ಬಗೆಗೆ ತಾನೇ ಆಶ್ಚರ್ಯಗೊಂಡಳು. ಇಂದು ಸುರೇಶ್‌ನ ಮಾತಿನಿಂದ ಅವಳಿಗೆ ಕೊಂಚವೂ ಕೋಪ ಬರಲಿಲ್ಲ. ಅವಳು ಹಾಡನ್ನು ಗುಣುಗುಣಿಸುತ್ತಾ ಕೆಲಸ ಮಾಡುತ್ತಿದ್ದಳು.

ಊಟವಾದ ನಂತರ ಮಕ್ಕಳು ತಮ್ಮ ಕೋಣೆಗೆ ಹೋದರು. ವಿಜಯ್‌ ಟಿವಿಯಲ್ಲಿ ನ್ಯೂಸ್‌ ನೋಡಲು ಕುಳಿತ. ನಂದಿನಿಗೆ ದುರ್ಬೀನನ್ನು ಕೈಗೆತ್ತಿಕೊಳ್ಳುವ ಮನಸ್ಸಾಯಿತು. ಬೇಡ….ಬೇಡ ಮನೆಯಲ್ಲಿ ಯಾರಿಗೂ ಇದರ ಸುಳಿವು ಸಿಗಬಾರದು ಎಂದುಕೊಂಡು ಸುಮ್ಮನಾದಳು.

ನಂದಿನಿ ಪತಿಯ ಪಕ್ಕದಲ್ಲಿ ಹೋಗಿ ಕುಳಿತಳು. ರೊಮ್ಯಾಂಟಿಕ್‌ ರೀತಿಯಲ್ಲಿ ಅವನ ಕುತ್ತಿಗೆ ಬಳಸಿ, “ಬನ್ನಿ, ಹೊರಗೆ ಸುತ್ತಾಡಿ ಬರೋಣ,” ಎಂದಳು.

ವಿಜಯ್‌ ಅಚ್ಚರಿಯಿಂದ ಅವಳತ್ತ ನೋಡಿ, “ಏನಾಗಿದೆ ನಿನಗೆ?” ಎಂದು ಕೇಳಿದ.

ನಂದಿನಿ ನಗುತ್ತಾ, “ಏನಾಗಿದೆ ಅಂತ ಕೇಳುವುದರ ಬದಲು ನೀವೇ ಏನಾದರೂ ಹೇಳಬಹುದಲ್ಲ,” ಎಂದಳು.

ವಿಜಯ್‌ ಮುಗುಳ್ನಗುತ್ತಾ ಟಿವಿ ಆಫ್‌ ಮಾಡಿದ. ನಂದಿನಿ ರೊಮ್ಯಾಂಟಿಕ್‌ ಮೂಡ್‌ನಲ್ಲಿದ್ದಳು. ನವವಿವಾಹಿತ ಜೋಡಿಯ ಪ್ರಣಯ ಲೀಲೆಯು ಅವಳನ್ನು ರೋಮಾಂಚನಗೊಳಿಸಿತು. ಪತಿಯ ಕೈ ಹಿಡಿದೇ ಸುತ್ತಾಡಿ ಬಂದಳು. ಆ ರಾತ್ರಿ ವಿಶೇಷ ರೀತಿಯಲ್ಲಿ ಸ್ಪಂದಿಸಿ, ಸ್ವರ್ಗ ಸುಖವನ್ನುಣ್ಣಿಸಿ ವಿಜಯ್‌ ಆಶ್ಚರ್ಯಗೊಳ್ಳುವಂತೆ ಮಾಡಿದಳು.

ಮರುದಿನ ಬೆಳಗ್ಗೆ ಮೂವರೂ ಹೊರಟ ಮೇಲೆ ದುರ್ಬೀನನ್ನು ತೆಗೆದುಕೊಂಡು ಸ್ಟೂಲ್ ಮೇಲೆ ಕುಳಿತಳು. ತಾಯಿ ಮಗಳ ಮನೆಯಲ್ಲಿ ಇಬ್ಬರೂ ಹೊರಗೆ ಹೊರಡಲು ತಯಾರಾಗಿ ನಿಂತಿದ್ದರು. ಇಬ್ಬರೂ ಫ್ರೆಶ್‌ ಆಗಿ, ಖುಷಿಯಾಗಿ ಕಾಣುತ್ತಿದ್ದರು. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ.

ನಂದಿನಿ ದುರ್ಬೀನನ್ನು ಇನ್ನೊಂದು ಫ್ಲಾಟ್‌ನತ್ತ ತಿರುಗಿಸಿದಳು. ಹೀರೋ ಹೀರೋಯಿನ್‌ ಏನು ಮಾಡುತ್ತಿರಬಹುದು ಎಂದುಕೊಂಡು ಜೋರಾಗಿ ನಕ್ಕಳು. ಹೀರೋ ಆಫೀಸಿಗೆ ಹೋಗಲು ಸಿದ್ಧನಾಗುತ್ತಿದ್ದ. ಹೀರೋಯಿನ್‌ ತನ್ನ ಕೈಯಿಂದಲೇ ಅವನಿಗೆ ತಿಂಡಿ ತಿನ್ನಿಸುತ್ತಿದ್ದಳು. ಜೊತೆಯಲ್ಲಿ  ರೊಮಾನ್ಸ್ ನಡೆಯುತ್ತಿತ್ತು. ಓಹೋ! ಹುಣ್ಣಿಮೆಯ ಕಾಲ ನಡೆಯುತ್ತಿದೆ. ಆಮೇಲೆ ತಾನೇ ಅಮಾವಾಸ್ಯೆ ಎಂದು ಯೋಚಿಸುತ್ತಾ  ಮುಗುಳ್ನಕ್ಕಳು.

ಲಕ್ಷ್ಮಿ ಬಾಗಿಲು ತಟ್ಟಿದಾಗ ದುರ್ಬೀನನ್ನು ಎತ್ತಿಟ್ಟು ಹೋಗಿ ಬಾಗಿಲು ತೆರೆದಳು. ಬಹಳ ಕಾಲದ ನಂತರ ಅಂದು ನಂದಿನಿ ವಾಟ್ಸ್ಆ್ಯಪ್‌ನಲ್ಲಿ ವಿಜಯ್‌ಗೆ  `ಐ ಲವ್ ಯೂ’ ಮೆಸೇಜ್‌ ಮಾಡಿದಳು. ವಿಜಯ್‌ನಿಂದ ಒಂದು ಸ್ಮೈಲಿಯೊಂದಿಗೆ `ಸೇಮ್ ಟು ಯೂ ಡಿಯರ್‌,’ ಎಂಬ ಮೆಸೇಜ್‌ ಬಂದಿತು.

ನಂದಿನಿಯ ಮನಸ್ಸು ವಿಚಿತ್ರ ಭಾವನೆಗಳಿಂದ ತುಂಬಿಹೋಗಿತ್ತು. ಮಧ್ಯಾಹ್ನ ಅವಳು ಬ್ಯೂಟಿ ಪಾರ್ಲರ್‌ಗೆ ಹೋದಳು. ಮಾಡರ್ನ್‌ ಹೇರ್‌ಕಟ್‌ ಮಾಡಿಸಿಕೊಂಡು ಫೇಶಿಯಲ್, ಮೆನಿಕ್ಯೂರ್‌, ಪೆಡಿಕ್ಯೂರ್‌ಗಳನ್ನೂ ಮಾಡಿಸಿಕೊಂಡಳು. ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು ಖುಷಿಪಟ್ಟಳು.

ಮನೆಗೆ ಬಂದು ದುರ್ಬೀನು ಹಿಡಿದು ನೋಡಿದಳು. ತಾಯಿ ಮಗಳು ಇನ್ನೂ ಮನೆಗೆ ಬಂದಿರಲಿಲ್ಲ. ಹೀರೋಯಿನ್‌ ಸಹ ಕಾಣಿಸಲಿಲ್ಲ. ಬಹುಶಃ ವಿಶ್ರಾಂತಿ ಪಡೆಯುತ್ತಿರಬಹುದು. ಸಾಯಂಕಾಲ ಮತ್ತೆ ನೋಡಿದಾಗ ಅವಳು ಸಿಂಗರಿಸಿಕೊಂಡು ಹೀರೋಗಾಗಿ ಕಾಯುತ್ತಾ ನಿಂತಿದ್ದಳು. ನಂದಿನಿಯೂ ಅಂದು ವಿಶೇಷವಾಗಿ ಅಲಂಕರಿಸಿಕೊಂಡಳು.

ಸಾಯಂಕಾಲ ಮನೆಗೆ ಬಂದ ಸೌಮ್ಯಾ ತಾಯಿಯನ್ನು ನೋಡಿ, “ವಾಹ್‌ ಮಮ್ಮಿ! ಎಷ್ಟು ಚೆನ್ನಾಗಿ ಕಾಣುತ್ತಿರುವಿರಿ. ಹೊಸ ಹೇರ್‌ ಕಟ್‌, ತುಂಬಾ ಚೆನ್ನಾಗಿದೆ,” ಎಂದು ಉದ್ಗರಿಸಿದಳು.

ಸುರೇಶ್‌ ಕೂಡ, “ಹೀಗೇ ಡ್ರೆಸ್‌ ಮಾಡಿಕೊಳ್ಳಿ ಮಮ್ಮಿ…. ಲುಕಿಂಗ್‌ ಗುಡ್‌,” ಎಂದ.

ವಿಜಯ್‌ ಹಿಂದಿನ ದಿನದಿಂದಲೇ ನಂದಿನಿಯಲ್ಲಿ ಆಗಿದ್ದ ಮಾರ್ಪಾಟನ್ನು ಕಂಡು ಆಶ್ಚರ್ಯಗೊಂಡಿದ್ದನು. ಅವಳನ್ನು ಮೇಲಿನಿಂದ ಕೆಳಗಿನವರೆಗೆ ನೋಡಿ, “ಓಹೋ! ಏನು ವಿಶೇಷ?” ಎಂದ. ನಂದಿನಿ ಮೋಹಕವಾಗಿ ನಕ್ಕಳು.

“ಈ ಮೇಕ್‌ಓವರ್‌ಗೆ ಒಂದು ಐಸ್‌ಕ್ರೀಮ್ ಟ್ರೀಟ್‌ ಕೊಡಬಹುದು. ಊಟವಾದ ಮೇಲೆ ಎಲ್ಲರೂ `ಕೂಲ್ ಕಾರ್ನರ್‌’ಗೆ ಹೋಗೋಣ.”

“ವೆರಿಗುಡ್‌ ಪಪ್ಪಾ…..”

ನಾಲ್ವರು ನಗುನಗುತ್ತಾ ಐಸ್‌ಕ್ರೀಮ್ ತಿಂದು ಮನೆಗೆ ಹಿಂದಿರುಗಿದರು. ತನ್ನ ಮನಸ್ಸಿನ ಬದಲಾವಣೆ ಕಂಡು ನಂದಿನಿಯೇ ಅಚ್ಚರಿಗೊಂಡಳು. ಮೊದಲು ಆ ಮೂವರ ಪ್ರತಿಯೊಂದು ಮಾತಿಗೂ ರೇಗುತ್ತಿದ್ದಳು. ಆದರೆ ಈಗ ನಿನ್ನೆಯಿಂದ ಎಲ್ಲ ಚೆನ್ನಾಗಿರುವಂತೆ ಅನಿಸುತ್ತಿತ್ತು. ಇದು ಹೇಗಾಯಿತು? ಅವಳು ಸಂತೋಷವಾಗಿರುವುದರಿಂದ ಮನೆಯ ವಾತಾವರಣವೇ ಬದಲಾಗಿಬಿಟ್ಟಿತ್ತು. ಹಾಗಾದರೆ ಅವಳು ಸಿಡುಕುತ್ತಿದ್ದುದರಿಂದ, ದೂರುತ್ತಿದ್ದುದರಿಂದ ಮನೆಯಲ್ಲಿ ಮಂಕು ಕವಿದಿರುತ್ತಿತ್ತೇ? ತನ್ನ ಮನಸ್ಸಿನ ಬೇಸರಕ್ಕೆ ಜೀವನದ ನೀರವತೆಗೆ ಸ್ವತಃ ತಾನೇ ದೋಷಿಯೇ? ಈ ಮೂವರನ್ನು ದೂರುವುದರಲ್ಲಿಯೇ ತನ್ನ ಶಕ್ತಿಯನ್ನೆಲ್ಲಾ ವ್ಯಯಿಸಿದಳೇ?

ಈಗ ನಂದಿನಿಗೆ ಒಂಟಿತನ ಕಾಡುತ್ತಿರಲಿಲ್ಲ. ಸಮಯ ಸಿಕ್ಕಿದಾಗೆಲ್ಲ ದುರ್ಬೀನನ್ನು ಕೈಗೆತ್ತಿಕೊಳ್ಳುತ್ತಿದ್ದಳು. ಸುವಾಸಿತ ಹೂಬಳ್ಳಿಯ ಮರೆಯಲ್ಲಿ ಕುಳಿತು ದುರ್ಬೀನಿನಿಂದ ನೋಡುತ್ತಿದ್ದಳು. ಆ ಹೀರೋ ಹೀರೋಯಿನ್‌ನ ಹೊಚ್ಚ ಹೊಸ ಮಾದಕ ರೊಮಾನ್ಸ್ ಗೆ  ಅವಳು ಸಾಕ್ಷಿಯಾಗಿದ್ದಳು. ಅವರ ಹೊಸದಾದ ಪ್ರೀತಿ ಅವಳಿಗೆ ತಾನು ವಿಜಯ್‌ನೊಂದಿಗೆ ಜೀವನವನ್ನು ಪ್ರಾರಂಭ ಮಾಡಿದ ದಿನಗಳ ನೆನಪನ್ನು ತಂದುಕೊಟ್ಟಿತು. ಅವರ ವರ್ತಮಾನವನ್ನು ನೋಡಿ ಅವಳು ಸ್ಛೂರ್ತಿಗೊಂಡು ತನ್ನ ಕಳೆದ ಜೀವನದ ರೀತಿಯಲ್ಲಿ ಇಂದಿನ ಜೀವನವನ್ನು ಜೀವಿಸತೊಡಗಿದಳು.

ನಂದಿನಿಯ ಮನಸ್ಸಿನಲ್ಲಿ ವರ್ಷಗಳ ಹಿಂದೆ ಇದ್ದ ಉತ್ಸಾಹ, ರೋಮಾಂಚನ ರೊಮಾನ್ಸ್ ಗಳು ಮರಳಿ ಅನುಭವಕ್ಕೆ ಬರತೊಡಗಿದವು. ವಿಜಯ್‌ ಆಫೀಸಿನ ಕೆಲಸಕ್ಕಾಗಿ ಟೂರ್‌ ಹೊರಟರೆ ಈಗ ಅವಳು ಗೊಣಗುತ್ತಿರಲಿಲ್ಲ. ಮಕ್ಕಳ ಜೊತೆ ಸಿನಿಮಾಗೆ ಅಥವಾ ಡಿನ್ನರ್‌ಗೆ ಹೋಗುತ್ತಿದ್ದಳು. ತಾಯಿ ಮಗಳ ಫ್ಲಾಟ್‌ನಲ್ಲಿ ಆ ತಾಯಿ ಮಗಳು ಸಂತೋಷವಾಗಿರುವುದನ್ನು ಕಂಡು ಅವಳಿಗೆ ಖುಷಿಯಾಗುತ್ತಿತ್ತು. ಮನೆಯಲ್ಲಿ ಅವರಿಬ್ಬರೇ ಕಾಣುತ್ತಾರೆ. ಜೊತೆಯಲ್ಲಿ ಯಾರೂ ಇಲ್ಲವಲ್ಲ…..? ಬೇರೆಯವರು ಎಲ್ಲಿ ಎಂದು ನಂದಿನಿ ಯೋಚಿಸುತ್ತಾ ಕುಳಿತುಕೊಳ್ಳುತ್ತಿದ್ದಳು. ಈಗ ಅವಳಿಗೆ ಸಮಯ ಸರಿದುದೇ ತಿಳಿಯುತ್ತಿರಲಿಲ್ಲ.

ನಂದಿನಿಯ ದುರ್ಬೀನು ವೀಕ್ಷಣೆ ಪ್ರಾರಂಭವಾಗಿ 4 ತಿಂಗಳಾಗಿತ್ತು. ಈಗ ಎದುರು ಬಿಲ್ಡಿಂಗ್‌ನಲ್ಲಿ ಖಾಲಿಯಿದ್ದ ಫ್ಲಾಟ್‌ಗಳಲ್ಲಿ ಜನರು ಕ್ರಮೇಣ ವಾಸಕ್ಕೆ ಬರತೊಡಗಿದ್ದರು. ಹೀರೋ ಹೀರೋಯಿನ್‌ನ ರೊಮಾನ್ಸ್ ಅವಳಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಅದರಿಂದ ಅವಳಿಗೆ ಒಂದು ಬಗೆಯ ಥ್ರಿಲ್ ಉಂಟಾಗುತ್ತಿತ್ತು. ಅವರನ್ನು ನೋಡು ನೋಡುತ್ತಾ ಅವಳು ಬದಲಾಗತೊಡಗಿದಳು.

ಮತ್ತೆ ಕೆಲವು ತಿಂಗಳು ಕಳೆದವು. ಎಂದಿನಂತೆ ಒಂದು ದಿನ ಬೆಳಗ್ಗೆ 11 ಗಂಟೆಗೆ ದುರ್ಬೀನು ಹಿಡಿದು ನೋಡಿದ ನಂದಿನಿಗೆ ಶಾಕ್‌ ಹೊಡೆದಂತಾಯಿತು. ಅವಳು ತನ್ನ ಕನಸಿನ ಪ್ರಪಂಚದಿಂದ ಉರುಳಿ ಪಾತಾಳಕ್ಕೆ ಬಿದ್ದಳು. ದರ್ಬೀನು ಹಿಡಿದಿದ್ದ ಅವಳ ಕೈಗಳು ಕಂಪಿಸಿದವು. ಹೀರೊ ಹೀರೋಯಿನ್‌ ಫ್ಲಾಟ್‌ನ್ನು ಖಾಲಿ ಮಾಡುತ್ತಿದ್ದರು. ಸಾಮಾನು ಪ್ಯಾಕ್‌ ಮಾಡುವವರು ಡ್ರಾಯಿಂಗ್‌ ರೂಮಿನಲ್ಲಿ ಗಡಿಬಿಡಿಯಿಂದ ಕೆಲಸ ಮಾಡುತ್ತಿದ್ದುದು ಅವಳಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬಿಲ್ಡಿಂಗ್‌ನ ಮುಂದೆ ರಸ್ತೆಯಲ್ಲಿ ನಿಂತಿದ್ದ ಟ್ರಕ್‌ ಕೂಡ ಕಾಣಿಸಿತು.

ನಂದಿನಿಯ ಕಣ್ಣಿನಲ್ಲಿ ನೀರಾಡಿತು. ಹೃದಯ ಹಿಂಡಿದಂತಾಯಿತು. ಅವಳು ಆ ಜೋಡಿಯೊಂದಿಗೆ ಮಾನಸಿಕವಾಗಿ ಬೆರೆತುಹೋಗಿದ್ದಳು. ತಾವು ಸಂತೋಷವಾಗಿರುವುದನ್ನು ನೋಡಿ ಬೇರೊಬ್ಬರು ಆನಂದದಿಂದ ಬಾಳತೊಡಗಿದ್ದಾರೆ ಎಂಬ ವಿಷಯ ಅವರಿಬ್ಬರಿಗೆ ಎಂದೂ ತಿಳಿಯುವುದಿಲ್ಲ. ಇನ್ನು ಅವರು ಹೊರಟು ಹೋಗುತ್ತಾರೆ. ಮತ್ತೆ ಅದೇ ಬೋರಿಂಗ್‌ ರೊಟೀನ್‌. ನಂದಿನಿ ಇಡೀ ದಿನ ಅಶಾಂತಿಯಿಂದ ದುರ್ಬೀನು ಹಿಡಿದು ಒಳಗೆ ಹೊರಗೆ ಓಡಾಡಿದಳು.

ಸಾಯಂಕಾಲದ ಹೊತ್ತಿಗೆ ಟ್ರಕ್‌ ಸಾಮಾನು ತುಂಬಿಸಿಕೊಂಡು ಹೊರಟುಹೋಯಿತು. ಹೀರೋ ಹೀರೋಯಿನ್‌ ಕೂಡ ಕಾರಿನಲ್ಲಿ ಹೊರಟು ಹೋದರು. ನಂದಿನಿ ದುರ್ಬೀನನ್ನು ತೊಡೆಯ ಮೇಲಿರಿಸಿಕೊಂಡು ಗೋಡೆಗೆ ತಲೆಯೊರಗಿಸಿ ಸುಮ್ಮನೆ ಕುಳಿತುಬಿಟ್ಟಳು.

ನಂದಿನಿಯ ಮುಖ ಸಪ್ಪೆಯಾಗಿದ್ದುದನ್ನು ಮನೆಯಲ್ಲಿ ಎಲ್ಲರೂ ಗಮನಿಸಿದರು. ಮೈ ಸರಿಯಿಲ್ಲವೆಂದು ಕಾರಣ ಹೇಳಿ ಅವಳು ಬೇಗನೆ ಮಲಗಲು ಹೋದಳು. 3-4 ದಿನಗಳು ಅವಳು ಬಹಳ ಬೇಸರವಾಗಿದ್ದಳು. ಎದುರು ಬಿಲ್ಡಿಂಗ್‌ನ ತಾಯಿ ಮಗಳು ಬೆಳಗ್ಗೆ ಮನೆ ಬಿಟ್ಟರೆ ಸಾಯಂಕಾಲವೇ ಹಿಂದಿರುಗುತ್ತಿದ್ದುದು. ಪ್ರಣಯ ಲೀಲೆಯಲ್ಲಿ ಮುಳುಗಿದ್ದ ಹೀರೋ ಹೀರೋಯಿನ್‌ ಸದಾ ನೆನಪಾಗುತ್ತಿದ್ದರು. ಅವಳ ಜೀವನದಲ್ಲಿ ಮತ್ತೆ ಬೇಸರ, ನಿರಾಸೆ ಪ್ರಾರಂಭವಾಯಿತು. 15 ದಿನಗಳ ಕಾಲ ಅವಳು ದುರ್ಬೀನನ್ನು ಕೈಯಿಂದ ಮುಟ್ಟಲೂ ಇಲ್ಲ.

ನಂತರ ಒಂದು ದಿನ ನಂದಿನಿ ಸ್ಟೂಲ್‌ ಮೇಲೆ ಕುಳಿತು ಎದುರು ಬಿಲ್ಡಿಂಗ್‌ನತ್ತ ದುರ್ಬೀನನ್ನು ಹಾಯಿಸುತ್ತಿದ್ದಳು. ಹೆಚ್ಚಿನ ಮನೆಗಳಲ್ಲಿ ಕರ್ಟನ್ಸ್ ಎಳೆಯಲ್ಪಟ್ಟಿದ್ದವು. ಹೀರೋ ಹೀರೋಯಿನ್‌ ಇದ್ದ ಮನೆಯ ಕಡೆ ನೋಡುತ್ತಿದ್ದಂತೆ ಅವಳ ಮನಸ್ಸು ಗರಿಗೆದರಿ ಕುಣಿಯಿತು. 2-3 ಯುವಕರು ಸೇರಿ ಆ ಫ್ಲಾಟ್‌ನ್ನು ಬಾಡಿಗೆಗೆ ಪಡೆದು ಬಂದಿರುವಂತೆ ತೋರಿತು.

ಅಲ್ಲಿ 3 ಜನ ಸುಂದರ ತರುಣರು ಸಾಮಾನು ಜೋಡಿಸುವುದರಲ್ಲಿ ಮಗ್ನರಾಗಿದ್ದರು. ಒಬ್ಬ ಕೈಯಲ್ಲಿ ಬಟ್ಟೆ ಹಿಡಿದು ಫರ್ನೀಚರ್‌ನ್ನು ಡಸ್ಟಿಂಗ್‌ ಮಾಡುತ್ತಿದ್ದ. ಇನ್ನಿಬ್ಬರು ಬಾಗಿಲು ಕಿಟಕಿಗಳಿಗೆ ಕರ್ಟನ್ಸ್ ಹಾಕುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಅವರೊಲ್ಲಬ್ಬ ಬಿಳಿ ಟೀಶರ್ಟ್‌ ಮತ್ತು ಕಪ್ಪು ಶಾರ್ಟ್ಸ್ ಹಾಕಿದ್ದ. ಬಾಲ್ಕನಿಗೆ ಬಂದು ಬಟ್ಟೆಗಳನ್ನು ಒಣಗಲು ಹಾಕುತ್ತಿದ್ದ.

ಆ ಹುಡುಗರ ಫ್ಲಾಟ್‌ನ ಪಕ್ಕದ ಫ್ಲಾಟ್‌ಗೆ ಸೇರಿದ ಬಾಲ್ಕನಿಯಲ್ಲಿ ಹುಡುಗಿಯೊಬ್ಬಳು ಗಿಡಗಳಿಗೆ ನೀರು ಹಾಕುತ್ತಿದ್ದಳು. ಬಟ್ಟೆ ಒಣಗಿ ಹಾಕುತ್ತಿದ್ದ ಹುಡುಗ ಮತ್ತು ಆ ಹುಡುಗಿ ಪರಸ್ಪರ ಕದ್ದು ನೋಡುತ್ತಾ ಮುಗುಳ್ನಗೆ ಬೀರುತ್ತಿದ್ದುದನ್ನು ಗಮನಿಸಿ ನೋಡಿದಾಗ ನಂದಿನಿಗೆ ಗೊತ್ತಾಯಿತು. ಓಹೋ! ಇಲ್ಲೊಂದು ಲವ್ ಸ್ಟೋರಿ ಅಂಕುರಿಸುತ್ತಿದೆ ಎಂದು ಯೋಚಿಸಿ ನಂದಿನಿ ರೋಮಾಂಚನಗೊಂಡಳು. ಅವರಿಬ್ಬರ ಕೈಗಳು ತಾವು ಮಾಡುತ್ತಿದ್ದ ಕೆಲಸವನ್ನು ಮರೆತು ನಿಂತಿದ್ದವು. ಕಣ್ಣುಗಳು ಮಾತ್ರ ಕಳ್ಳ ದೃಷ್ಟಿಹರಿಸುತ್ತಿದ್ದವು. ಅಂದರೆ ಹೊಸ ಮನೆಗೆ ಶಿಫ್ಟ್ ಮಾಡುತ್ತಿದ್ದಂತೆ ರೊಮಾನ್ಸ್ ಪ್ರಾರಂಭವಾಗಿದೆ ಎಂದರ್ಥ. ನಂದಿನಿಗೆ ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ಬೇಸರ ಹಾರಿಹೋಯಿತು.

ಇದ್ದಕ್ಕಿದ್ದಂತೆ ಆ ಹುಡುಗಿಯ ಅಜ್ಜಿಯಂತೆ ಕಾಣುತ್ತಿದ್ದ ಮಹಿಳೆಯೊಬ್ಬರು ಬಂದು ಅವಳಿಗೆ ಏನೋ ಹೇಳಿದರು. ಅವರು ಬರುತ್ತಿದ್ದುದನ್ನು ಕಂಡಾಗ ಆ ಹುಡುಗಿ ಕೂಡಲೇ ಹುಡುಗನಿಗೆ ಬೆನ್ನು ಮಾಡಿ ನಿಂತಳು. ಹುಡುಗ ಒಳಗಡೆ ಹೊರಟುಹೋದ. ಸ್ವಲ್ಪ ಹೊತ್ತಿನ ನಂತರ ಹುಡುಗಿ ಮತ್ತು ಅಜ್ಜಿಯೂ ಒಳಗೆ ನಡೆದರು.

ಇಂದು ನಂದಿನಿ ದುರ್ಬೀನನ್ನು ಬೀರುವಿನಲ್ಲಿ ಇಡುತ್ತಾ ಹಾಡೊಂದನ್ನು ಗುನುಗುನಿಸುತ್ತಿದ್ದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ