ಕಥೆ - ಶ್ಯಾಮಲಾ ಕುಲಕರ್ಣಿ
ಹನಿಮೂನ್‌ನಿಂದ ಹಿಂದಿರುಗುತ್ತಿದ್ದ ಜ್ಯೋತಿಯ ಮನಸ್ಸಿನಲ್ಲಿ ಬಗೆಬಗೆಯ ಯೋಚನೆಗಳು ಸುಳಿಯುತ್ತಿದ್ದವು. ಅವಳ ಅನ್ಯಮನಸ್ಕತೆಯನ್ನು ಕಂಡು ಅಜಯ್ ಅವಳ ಕಣ್ಮುಂದೆ ಕೈಗಳನ್ನು ಆಡಿಸುತ್ತಾ ಕೇಳಿದ, ``ಏನು, ಬಹಳ ಯೋಚನೆ ಮಾಡುತ್ತಿದ್ದೀಯಲ್ಲ, ಮನೆಗೆ ಹೋಗಲು ಮನಸ್ಸಿಲ್ಲವೇ?''
ಜ್ಯೋತಿ ಮುಗುಳ್ನಕ್ಕಳು. ಅತ್ತೆಮನೆಯಲ್ಲಿ ಹೇಗಿರುತ್ತದೋ ಎಂದು ಆಲೋಚಿಸಿ ಭಯ ವಿಹ್ವಲಳಾದಳು. ಅಜಯ್ ಮತ್ತು ಜ್ಯೋತಿಯದು ಪ್ರೇಮವಿವಾಹ. ಇಬ್ಬರೂ ಚಾರ್ಟೆರ್ಡ್ ಅಕೌಂಟೆಂಟ್‌ಗಳು. ಇಂದಿರಾನಗರದ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾದ 1 ವಾರಕ್ಕೆ ಹನಿಮೂನ್‌ಗೆಂದು ಸಿಮ್ಲಾಗೆ ಹೋಗಿದ್ದರು.
ಅಜಯ್ ತಂದೆ ಶಿವಸ್ವಾಮಿ ಪ್ರೈವೇಟ್ ಕಂಪನಿಯೊಂದರಲ್ಲಿ ಹಿರಿಯ ಹುದ್ದೆಯಲ್ಲಿದ್ದರು. ತಾಯಿ ಶೈಲಜಾ ಗೃಹಿಣಿ ಮತ್ತು ತಂಗಿ ಅನುಶ್ರೀ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ತಾಯಿತಂದೆಯರಿಗೆ ಒಬ್ಬಳೇ ಮಗಳಾದ ಜ್ಯೋತಿ ಅಕ್ಕರೆಯಿಂದ ಬೆಳೆದಿದ್ದಳು. ಕೆಲಸದ ಒತ್ತಡದಿಂದಾಗಿ ಮನೆಗೆ ಹಿಂದಿರುಗಲು ನಿಗದಿತ ಸಮಯವೆಂಬುದಿರಲಿಲ್ಲ. ಬಸವನಗುಡಿಯಲ್ಲಿದ್ದ ಅವಳ ಮನೆ ತಲುಪಲು ಕೆಲವು ಸಲ 10-11 ಗಂಟೆ ಆಗುತ್ತಿತ್ತು. ಅವಳಿಗೆ ವಹಿಸಲಾಗುತ್ತಿದ್ದ ಕ್ಲೈಂಟ್‌ನ ಅಕೌಂಟ್ಸ್ ಬಗ್ಗೆ ತನ್ನ ಇಡೀ ಟೀಮಿಗೆ ಲೆಕ್ಕ ಪರಿಶೀಲನೆ ಮಾಡಬೇಕಾಗುತ್ತಿತ್ತು. ಮನೆಯಲ್ಲಿ ಅವಳಿಗೆ ಯಾವುದೇ ಜವಾಬ್ದಾರಿ ಇರಲಿಲ್ಲ. ಮನೆಗೆ ಹೋಗುತ್ತಲೇ ಕೈಕಾಲು ತೊಳೆದು ಊಟ ಮಾಡಿ ಹಾಸಿಗೆ ಹಿಡಿಯುತ್ತಿದ್ದಳು.
ವೀಕೆಂಡ್ ಬಂದಿತೆಂದರೆ ಅವಳಿಗೆ ಖುಷಿ. ವಾರದ 5 ದಿನಗಳು ಕೆಲಸದಲ್ಲಿ ಮುಳುಗಿದ್ದು, ಶನಿವಾರ, ಭಾನುವಾರದ ದಿನಗಳಲ್ಲಿ ಆರಾಮವಾಗಿರುತ್ತಿದ್ದಳು. ಬೇಕೆಂದರೆ ಗೆಳತಿಯರ ಜೊತೆ ಮೂವಿಗೆ, ಡಿನ್ನರ್‌ಗೆ ಹೋಗುತ್ತಿದ್ದಳು. ಬೆಂಗಳೂರಿನಲ್ಲಿ ಅವಿವಾಹಿತ ಯುವತಿಯರ ರೊಟೀನ್ ಇದೇ ತಾನೇ? ``ಆಹಾ! ವೀಕೆಂಡ್ ಬಂತು,'' ಎಂದು ಅವಳು ಉತ್ಸಾಹದಿಂದ ಹೇಳುತ್ತಿದ್ದಳು. ಅವಳ ತಾಯಿ, ``ಪಾಪಾ, ಇಡೀ ವಾರ ದುಡಿದು ಸಾಕಾಗಿದ್ದಾಳೆ,'' ಎಂದು ಮಗಳು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡುತ್ತಿದ್ದರು.
ತನ್ನ ಮನೆಯ ಶಾಸ್ತ್ರವಿಧಿಗಳೆಲ್ಲ ಮುಗಿದ ನಂತರ ತಾಯಿ ತನ್ನನ್ನು ಬೀಳ್ಕೊಡುತ್ತಿದ್ದ ಘಟನೆ ಜ್ಯೋತಿಗೆ ನೆನಪಾಯಿತು. ತಾಯಿ ದುಃಖದಿಂದ ಕಣ್ಣೀರು ಹರಿಸುತ್ತಿದ್ದಾಗ ಅವಳ ಅತ್ತೆ ಬಂದು ಭುಜದ ಮೇಲೆ ಕೈಯಿರಿಸಿ ಸಮಾಧಾನ ಹೇಳಿದ್ದರು, ``ನೀವು ಯೋಚನೆ ಮಾಡಬೇಡಿ. ಜ್ಯೋತಿ ನಮ್ಮ ಮನೆಯಲ್ಲಿ ಮಗಳ ಹಾಗೆ ಇರುತ್ತಾಳೆ. ನಾನು ಮಗಳು ಸೊಸೆ ಅನ್ನುವ ಭೇದ ಮಾಡುವುದಿಲ್ಲ.''
ಅಲ್ಲಿಯೇ ನಿಂತಿದ್ದ ಚಿಕ್ಕಮ್ಮ, ವ್ಯಂಗ್ಯವಾಗಿ ಜ್ಯೋತಿಯ ಕಿವಿಯಲ್ಲಿ ಉಸುರಿದರು, ``ಇವೆಲ್ಲ ಬರೀ ಬಾಯಿ ಮಾತು. ಹೊಸತರಲ್ಲಿ ಹುಡುಗನ ಕಡೆಯವರು ಹೀಗೇ ದೊಡ್ಡ ದೊಡ್ಡ ಮಾತನಾಡುತ್ತಾರೆ ಅಷ್ಟೇ. ಸೊಸೆಯನ್ನು ಮಗಳಂತೆ ನೋಡುವುದು ಅಷ್ಟು ಸುಲಭವಲ್ಲ.''
ಕಣ್ಣೀರು ಹರಿಯುತ್ತಿದ್ದರೂ ಜ್ಯೋತಿಗೆ ಚಿಕ್ಕಮ್ಮನ ಆ ಮಾತು ಸ್ಪಷ್ಟವಾಗಿ ಕೇಳಿಸಿತ್ತು. ಅತ್ತೆಯ ಮನೆಯಲ್ಲಿ ಮೊದಲ ವಾರ ಸಂತೋಷ ಸಡಗರದಿಂದಲೇ ಕಳೆದಿತ್ತು. ಈಗ ಅವರು ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದಾರೆ. ಮುಂದೆ ಹೇಗಿರುತ್ತದೋ ನೋಡಬೇಕು. ಇನ್ನೆರಡು ದಿನಗಳ ನಂತರ ಆಫೀಸಿಗೂ ಹೋಗಬೇಕು.
ಅಜಯ್ ಮತ್ತು ಜ್ಯೋತಿ ಮನೆ ತಲುಪಿದರು. ಅವರು ಬರುವುದು ಮೊದಲೇ ತಿಳಿದಿದ್ದರಿಂದ ಎಲ್ಲರೂ ಅವರಿಗಾಗಿ ಕಾಯುತ್ತಿದ್ದರು. ಶಿವಸ್ವಾಮಿ ಮತ್ತು ಶೈಲಜಾ ಪ್ರವಾಸದ ಬಗ್ಗೆ ವಿಚಾರಿಸಿದರು.