ಕಥೆ – ವಿನುತಾ ರಘುವೀರ್
ಮೇಜರ್ ಸೂರ್ಯಕಾಂತ್ ಆರ್ಮಿ ಡ್ಯೂಟಿಯಲ್ಲಿ ಬಿಝಿಯಾಗಿದ್ದ. ಆಗ ಆತನಿಗೆ ಪತ್ನಿ ತನುಜಾ ಗರ್ಭವತಿ ಎಂಬ ಸುದ್ದಿ ಸಿಕ್ಕಿತು. ಆಗ ತನು ಜೊತೆ ಮಾತನಾಡಿ ಸೂರ್ಯನಿಗೆ ಗಂಟಲು ಗದ್ಗದಿತವಾಯಿತು. ತಾನು ಈ ಪರೀಕ್ಷೆಯ ಘಳಿಗೆಯಲ್ಲಿ ತನು ಜೊತೆ ಇಲ್ಲ ಎಂಬ ಸಂಕಟ ಹೆಚ್ಚಾಯಿತು. ಆಗ ಅವನು ಹೆಂಡತಿ ಜೊತೆ ಫೋನಿನಲ್ಲೇ ಮಾತನಾಡುತ್ತಾ ಹೀಗೆ ಮಾಡು, ಹೀಗೆ ಮಾಡಬೇಡ ಇತ್ಯಾದಿ ಅನೇಕ ಸಲಹೆಗಳನ್ನಿತ್ತ. ಕಾಶ್ಮೀರದ ಅತಿ ಸೂಕ್ಷ್ಮ ಪ್ರದೇಶದಲ್ಲಿ ಭಯೋತ್ಪಾದಕರ ಅಟ್ಟಹಾಸ ಎದುರಿಸುತ್ತಾ, ಅಡಿಗಡಿಗೂ ಜೀವವನ್ನು ಯಮನ ಬಳಿ ಪಣಕ್ಕೊಡ್ಡುತ್ತಿದ್ದ. ಅಂಥ ಗಟ್ಟಿ ಜೀವದ ಸೂರ್ಯ ಇಂದು ತನ್ನ ಮನೆಗೆ ಒಂದು ಸಣ್ಣ ಕಂದ ಬರುತ್ತಿದೆ ಎಂದು ಗೊತ್ತಾದಾಗ ಬಹಳ ಭಾವುಕನಾದ. ತಾನು ಅಲ್ಲಿ ಪತ್ನಿ ಬಳಿ ಇಲ್ಲ ಎಂಬುದನ್ನು ನೆನೆದೇ ಕಂಬನಿ ತುಂಬಿ ಬರುತ್ತಿತ್ತು. ಶತ್ರುಗಳನ್ನು ಸದೆಬಡಿಯಬಲ್ಲ ಕಠೋರ ಹೃದಯದ ವೀರಾಧಿ ವೀರನೇ ಆದರೂ ಅವನೂ ಒಬ್ಬ ಮನುಷ್ಯನೇ ಅಲ್ಲವೇ? ಸಾಮಾನ್ಯ ಜನರಂತೆ ಅವನು ಈ ಹೊತ್ತು ಪತ್ನಿಯ ಬಳಿ ಇರಲಾಗದು ಎಂದು ವಿವೇಕ ಹೇಳುತ್ತಿದ್ದರೂ, ಹೃದಯ ಕೇಳಬೇಕಲ್ಲವೇ? ಆದರೆ ಮಾತೃಭೂಮಿಯ ಸೇವೆಗಾಗಿ ಜೀವವನ್ನೇ ಮುಡಿಪಾಗಿಟ್ಟಿರುವಾಗ ಇಂಥ ತ್ಯಾಗ ಅನಿವಾರ್ಯ.
ಆ ಸಂಜೆ ಮೆಸ್ ಬಳಿ ಬಂದು, ಎಲ್ಲರಿಗೂ ಇಂದು ತನ್ನ ವತಿಯಿಂದ 2-2 ಬಟ್ಟಲು ಶ್ಯಾವಿಗೆ ಪಾಯಸ ಕೊಡಬೇಕೆಂದು ಹಣ ಕಟ್ಟಿ ಬಂದ. ಗೆಳೆಯರಿಗೆ ವಿಷಯ ತಿಳಿದು ಅವರೆಲ್ಲ ಖುಷಿಯಿಂದ ಅವನನ್ನು ಮೇಲೆತ್ತಿಕೊಂಡು ಶುಭಾಶಯ ಕೋರಿದರು. ಆ ರಾತ್ರಿ ಸೂರ್ಯ ಕಣ್ಣು ಮುಚ್ಚಿ ನಿದ್ದೆ ಮಾಡಲೇ ಇಲ್ಲ. ಅಲ್ಲಿ ದೂರದ ತುಮಕೂರಿನಲ್ಲಿ ತನ್ನ ಮನೆಯಲ್ಲಿ ನಡೆಯಲಿದ್ದ ಸಂಭ್ರಮವನ್ನು ನೆನೆದು ಇಲ್ಲಿಂದಲೇ ಕನಸು ಕಾಣುತ್ತಿದ್ದ.
ತನುಜಾಳಿಗೆ ದಿನ ತುಂಬುತ್ತಿದ್ದ ಹಾಗೆ ಸೂರ್ಯನ ಚಡಪಡಿಕೆ ಹೆಚ್ಚಿತು. ಒಮ್ಮೊಮ್ಮೆ ಬೆಳಗ್ಗೆ 6 ಗಂಟೆಗೇ ತನುಜಾಳಿಗೆ ಫೋನ್ ಮಾಡಿ, “ಏನು ಮಾಡುತ್ತಿದೆ ನಮ್ಮ ಮಗು? ಒದೆಯುತ್ತಿದೆಯಾ? ರಾತ್ರಿ ನಡುವೆ ಎದ್ದು ಹಾಲು ಕುಡಿದೆಯಾ? ಮಗುವನ್ನು ಹಸಿವಲ್ಲಿ ಕೆಡವಬೇಡ. ಬೇಗ ಸ್ನಾನ ಮಾಡಿ ತಿಂಡಿ ತಿನ್ನು. ಡಾಕ್ಟರ್ ಹೇಳಿದ ಸಮಯಕ್ಕೆ ಮರೆಯದೆ ಔಷಧಿ ತಗೋ…..” ಎಂದು ಹೇಳುತ್ತಲೇ ಇದ್ದ.
ಪ್ರತಿ ದಿನ ಬೆಳಗ್ಗೆ ಎದ್ದು ಇನ್ನೂ ಎಷ್ಟು ದಿನ ಉಳಿದಿದೆ ಹೆರಿಗೆಗೆ ಎಂದು ಲೆಕ್ಕ ಹಾಕುವುದೇ ಅವನ ಕೆಲಸವಾಗಿತ್ತು. ಹೆರಿಗೆ ಸಮಯಕ್ಕೆ ಹೊಂದುವಂತೆ ಅವನು ದೀರ್ಘ ರಜೆಯ ಮಂಜೂರಾತಿ ಪಡೆದಿದ್ದ. ರಜೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಅವನ ಖುಷಿ ಮೇರೆ ಮೀರುತ್ತಿತ್ತು. ಮದುವೆಗೆಂದು ರಜೆ ಪಡೆದಾಗಲಿಂದ ಅವನು ಊರಿಗೆ ಹೊರಡುವ ಸಮಯದಲ್ಲಿ ಈ ಖುಷಿ ಇಮ್ಮಡಿಸುತ್ತಿತ್ತು. ಈ ಸಲವಂತೂ ಯಾವಾಗ ತವರೂರಿಗೆ ಹೋಗುವೆನೋ ಎಂದು ದಿನದಿನ ಚಡಪಡಿಸುತ್ತಿದ್ದ.
ಇತ್ತ ತನುಜಾ ಸಹ ಯಾವಾಗ ಗಂಡ ಬರುವನೋ ಎಂದು ಬಹಳ ವಿಹ್ವಲತೆಯಿಂದ ಕಾಯುತ್ತಿದ್ದಳು. ರಾತ್ರಿ ಹೊತ್ತು ನಿದ್ದೆ ಬರುತ್ತಿರಲಿಲ್ಲ. ಹಗಲು ಅದೂ ಇದೂ ಕೆಲಸ ಮಾಡುತ್ತಾ ಹೇಗೋ ಕಳೆದು ಬಿಡುವಳು, ರಾತ್ರಿ ನಿದ್ದೆಯಿಲ್ಲದೆ ಹಾಸಿಗೆ ಮೇಲೆ ಹೊರಳಾಡುವುದೇ ಆಗಿತ್ತು. ಸೂರ್ಯ ಬೇಕೆಂದೇ ಗೆಳೆಯರ ಬಳಿ ಕೇಳಿ ಕೇಳಿ ನೈಟ್ ಡ್ಯೂಟಿಗೆ ಬದಲಿಸಿಕೊಳ್ಳುತ್ತಿದ್ದ. ಅವನು ರಾತ್ರಿ ಪಾಳಿಯಲ್ಲಿ 11-3ರವರೆಗೆ ಡ್ಯೂಟಿ ಪೂರೈಸುತ್ತಿದ್ದ. ಸಮಯ ಸಿಕ್ಕಿದಾಗೆಲ್ಲ ತನು ಜೊತೆ ಮಾತನಾಡುತ್ತಲೇ ಇದ್ದ. ಪ್ರತಿ 10-15 ನಿಮಿಷಕ್ಕೊಮ್ಮೆ ಜೋರಾಗಿ ತನ್ನ ಸೀಟಿ ಊದಿ, `ಆಲ್ ಈಸ್ ವೆಲ್’ ಎಂದು ತನ್ನ ಜಾಗದ ಸುರಕ್ಷತೆಯ ಬಗ್ಗೆ ಇತರರನ್ನು ಎಚ್ಚರಿಸುತ್ತಿದ್ದ. ಇನ್ನೊಂದು ಬದಿಯಿಂದಲೂ ಇದೇ ರೀತಿ ಉತ್ತರ ಬಂದಾಗ, ನೆಮ್ಮದಿಯಿಂದ ತನು ಜೊತೆ ಮಾತನಾಡಲು ಸಜ್ಜಾಗುತ್ತಿದ್ದ. ಹೀಗೆ ಎರಡೂ ಕೆಲಸ ಸುಗಮವಾಗಿ ನಡೆಸುತ್ತಿದ್ದ. ತನ್ನ ದೇಶ ಹಾಗೂ ಪತ್ನಿ ಎರಡೂ ಕಡೆ ಅವನು ತನ್ನ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದ್ದ.
4 ಗಂಟೆ ಮೇಲೆ ಅವನು ತನ್ನ ಕೋಣೆಗೆ ಹೋಗುತ್ತಿದ್ದ. ಕೈಕಾಲು ತೊಳೆದು ಬಟ್ಟೆ ಬದಲಿಸಿ, 2-3 ಗಂಟೆ ಕಾಲ ನಿದ್ರಿಸಿ, ಮತ್ತೆ ಬೆಳಗಿನ ಡ್ಯೂಟಿಗೆ ತಯಾರಾಗಿ ಹೊರಟುಬಿಡುತ್ತಿದ್ದ. ಹೀಗೆ ಇಡೀ ದಿನ ಮತ್ತೆ ತನ್ನ ಕರ್ತವ್ಯದಲ್ಲಿ ತಲ್ಲೀನನಾಗುತ್ತಿದ್ದ. ಅವನ ಯೂನಿಟ್‌ನ ಸಹೋದ್ಯೋಗಿಗಳು, ಸೂರ್ಯನ ಈ ಪರಿಯ ವ್ಯಾಮೋಹ ಕಂಡು ನಗುತ್ತಿದ್ದರು, ಹಾಸ್ಯ ಮಾಡುತ್ತಿದ್ದರು. ಆದರೆ ತನ್ನ ಕುಟುಂಬ ಹಾಗೂ ದೇಶ ಎರಡೂ ಕಡೆ ಅವನು ಇಟ್ಟಿರುವ ನಿಷ್ಠೆ ಗಮನಿಸಿ, ಅವನನ್ನು ಹೊಗಳುತ್ತಿದ್ದರು.
ಇತ್ತ 2-3 ಎನ್‌ಕೌಂಟರ್‌ಗಳಲ್ಲಿ ಮಿಲಿಟೆಂಟ್ಸ್ ಹತ್ಯೆಗೊಳಗಾದಾಗ, ಇಡೀ ಸೆಕ್ಟರ್‌ನಲ್ಲಿ ಗಂಭೀರ ಮೌನ ವ್ಯಾಪಿಸಿತು. ಆದರೆ ಸೂರ್ಯನಿಗೆ ಸದಾ, ಇದು ಮುಂದೆ ಆಗಲಿರುವ ಭಾರಿ ಅನಾಹುತದ ಮುಂಚಿನ ನಿಶ್ಶಬ್ದತೆ ಎಂದೇ ಅನಿಸುತ್ತಿತ್ತು. ಇದ್ದಕ್ಕಿದ್ದಂತೆ ಶತ್ರುಗಳ ಭಯಂಕರ ದಾಳಿ ನಡೆಯಬಹುದು, ಆಕ್ರಮಣದಲ್ಲಿ ಯಾರಿಗೆ ಬೇಕಾದರೂ ಪ್ರಾಣಾಪಾಯ ಆಗಬಹುದು ಎಂಬ ನಿರೀಕ್ಷೆ ಇತ್ತು. ಅವನು ತನ್ನ ಕಡೆಯಿಂದ ಸದಾ ಅಲರ್ಟ್ ಆಗಿರುತ್ತಿದ್ದ. ಆದರೆ…. ಯಾವ ತಂಟೆ ತಕರಾರು ಇಲ್ಲದೆ ಇಡೀ ತಿಂಗಳು ಕಳೆಯಿತು. ಸೂರ್ಯನ ರಜೆ ಸ್ಯಾಂಕ್ಷನ್ ಆಗಿತ್ತು! ಈಗಂತೂ ಅವನಿಗೆ ಯಾವಾಗ ಬೇಗ ಮನೆಗೆ ಹೋಗುವೆನೋ ಎಂದು ಒಂದೊಂದು ಕ್ಷಣವನ್ನೂ ಎಣಿಸುತ್ತಿದ್ದ.
ಮನೆಗೆ ಹೊರಡುವುದಕ್ಕಾಗಿ ಯೂನಿಟ್‌ನಿಂದ 2 ಗಂಟೆ ಕಾಲ ಬಸ್‌ನಲ್ಲಿ ಹೊರಟು ಜಮ್ಮು ತಾಣ ಸೇರಬೇಕಿತ್ತು. ಜಮ್ಮುವಿನಿಂದ ರೈಲು ಹಿಡಿದು ದೆಹಲಿ ಸೇರಲು 1 ದಿನ ಹಾಗೂ ದೆಹಲಿಯಿಂದ ಬೆಂಗಳೂರಿಗೆ ಎರಡೂವರೆ ದಿನ, ಆಮೇಲೆ ಅಲ್ಲಿಂದ ರೈಲಿನಲ್ಲಿ ಮತ್ತೆ 3 ಗಂಟೆ ಕಾಲ ತುಮಕೂರಿಗೆ ಹೋಗಬೇಕಿತ್ತು. ಅಲ್ಲಿಂದ ಆಟೋ ಹಿಡಿದು ಸಂಜೆ ಹೊತ್ತಿಗೆ ಹೋಗಿ ಮನೆ ಸೇರಿದ್ದ.
ಮನೆ ಮಂದಿಗೆಲ್ಲ ಬಹಳ ಖುಷಿಯಾಗಿತ್ತು. ಅವನು ನೇರವಾಗಿ ಓಡಿಬಂದು ಹೆಂಡತಿಯನ್ನು ಅಪ್ಪಿಕೊಂಡ. ಆನಂದಬಾಷ್ಪ ಧಾರಾಕಾರವಾಗಿ ಅವನ ಎದೆ ತೊಯ್ಯಿಸಿತು. ಅವನಿಗೂ ಕಂಗಳು ತುಂಬಿ ಬಂದಿದ್ದರೂ….. ಸೈನಿಕನಲ್ಲವೇ? ಹೆಂಡತಿ ಮುಂದೆ ತೋರಿಸಿಕೊಳ್ಳಬಾರದೆಂದು ಅವಳನ್ನು ಸಮಾಧಾನಪಡಿಸಿದ. ಅವಳ ಹಣೆ ಚುಂಬಿಸಿ, ನಿಧಾನವಾಗಿ ಹೊಟ್ಟೆ ಮೇಲೆ ಕೈ ಆಡಿಸಿದ. ಅವಳಿಗೆ ಬಹಳ ನಾಚಿಕೆ ಎನಿಸಿತು. ಮಗುವಿನ ಕಲ್ಪನೆಯಲ್ಲೇ ಈ ಜೀವನ ಬಹಳ ಸುಂದರವಾಗಿದೆ ಎನಿಸಿತು.
ಮಾರನೇ ದಿನ ತನುಜಾಳನ್ನು ಆಸ್ಪತ್ರೆಗೆ ಕರೆದೊಯ್ದು ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಬೇಕಿತ್ತು. ಸೂರ್ಯ ಸಂಭ್ರಮದಿಂದ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಅವನು ಡಾ. ರಮಾರನ್ನು ರಿಕ್ವೆಸ್ಟ್ ಮಾಡಿಕೊಂಡು, ತಾನೂ ತನೂಳ ಕೈ ಹಿಡಿದು ಒಳಗೆ ನಿಂತಿರುತ್ತೇನೆ ಎಂದ. ಡಾಕ್ಟರ್ ನಗುತ್ತಾ ಒಪ್ಪಿದರು. ಮಾನಿಟರ್‌ನಲ್ಲಿ ಮಗುವಿನ ಅಸ್ಪಷ್ಟ ಚಿತ್ರ ಕಾಣಿಸಿದಾಗ, ಅವನು ಖುಷಿ, ಹೆಮ್ಮೆಯಿಂದ ಬೀಗಿದ. ಇಬ್ಬರಲ್ಲೂ ಧನ್ಯತಾ ಭಾವವಿತ್ತು.
ಅಂದು ರಾತ್ರಿ ಕುಟುಂಬದ ಎಲ್ಲರ ಜೊತೆ ಕುಳಿತು ಊಟ ಮಾಡುವಾಗ ಸೂರ್ಯಕಾಂತನಿಗೆ ಬಹಳ ಸಂತೋಷ ಸಂತೃಪ್ತಿ ಉಕ್ಕಿ ಬಂದಿತ್ತು. `ಅಬ್ಬಾ….. ನಮ್ಮ ಮನೆಯಲ್ಲಿ ನಾವು ಬೆಚ್ಚಗಿದ್ದರೆ ಎಂಥ ಆನಂದ….. ಯಾವ ಶತ್ರುಗಳ ಭಯವಿಲ್ಲ…. ಮುಂದೇನಾಗುವುದೋ ಎಂಬ ಆತಂಕವಿಲ್ಲ…. ನಮ್ಮವರೆಲ್ಲರ ಜೊತೆ ನಗುನಗುತ್ತಾ ಹೀಗೆ ಊಟ ಮಾಡುವುದು ಎಷ್ಟು ಸೊಗಸು…. ಜೀವನ ಹೀಗೆ ಆನಂದದಾಯಕವಾಗಿದ್ದರೆ ಇದಕ್ಕಿಂತ ಏನು ಬೇಕು?’ ಎಂದು ಬಡಿಸುತ್ತಿದ್ದ ಅಮ್ಮ, ಹೆಂಡತಿಯತ್ತ ತೃಪ್ತಿಕರ ನೋಟ ಬೀರಿದ. ಎಲ್ಲ ಕಡೆ ಸುರಕ್ಷತೆ ಇದ್ದರೆ ಜೀವಕ್ಕೆ ಎಷ್ಟು ನೆಮ್ಮದಿ! ಇದನ್ನು ಒಬ್ಬ ಸೈನಿಕನಿಗಿಂತ ಮಿಗಿಲಾಗಿ ಸಾಮಾನ್ಯರು ಅರ್ಥ ಮಾಡಿಕೊಳ್ಳಲಾರರು.
ಅಂದು ರಾತ್ರಿ ಮಲಗಿದವನಿಗೆ ಅಭ್ಯಾಸ ಬಲದಿಂದ 1 ಗಂಟೆ ದಾಟಿದರೂ ನಿದ್ದೆ ಬರಲಿಲ್ಲ. ಕೆಳಗೆ ಕಿಚನ್‌ಗೆ ಹೋಗಿ ತನಗೆ ಕಾಫಿ, ತನುವಿಗಾಗಿ ಬಿಸಿ ಹಾಲು ರೆಡಿ ಮಾಡಿ ತಂದ.
“ಅಲ್ಲಿ ಗಡಿನಾಡಲ್ಲೂ ಡ್ಯೂಟಿ, ಇಲ್ಲಿ ಮನೆಗೆ ಬಂದಾಗಲೂ ಈ ಡ್ಯೂಟಿ ಮಾಡಬೇಕೇ? ನಿಮಗೆ ವಿಶ್ರಾಂತಿಯೇ ಇಲ್ಲವಾಯಿತು. ಯಾಕೆ ತೊಂದರೆ ತಗೊಂಡ್ರಿ? ನನಗೆ ಹೇಳಬಾರದಿತ್ತೇ…..” ತನು ಹಾಲಿನ ಗ್ಲಾಸ್ ತೆಗೆದುಕೊಳ್ಳುತ್ತಾ ಹೇಳಿದಳು.
“ಇಂಥ ಡ್ಯೂಟಿ ಮಾಡಬೇಕೂಂತ ಎಷ್ಟು ದಿನದಿಂದ ಕಾಯುತ್ತಿದ್ದೆ ಗೊತ್ತಾ? ನಿನಗಾಗಿ ಏನಾದರೂ ಮಾಡಿಕೊಡುವಾಗ ನನಗೆ ಸುಸ್ತು ಆದದ್ದೂ ಉಂಟೇ?”
“ನಿಮಗೆ ನಾನೂಂದ್ರೆ….. ಅಷ್ಟು ಪ್ರೀತಿಯೇ?”
“ನೀನೇ ನನ್ನ ಜೀವದ ಜೀವ…. ನಿನಗಾಗಿ ತಾನೇ ನಾನು ಎಷ್ಟೇ ಕಷ್ಟ ಬಂದರೂ ಗಡಿ ರಕ್ಷಣೆಯಲ್ಲಿ ಶತ್ರುಗಳೆದುರು ಎದೆಯೊಡ್ಡಿ ಹೋರಾಡುವುದು….”
ತನು ಗಂಡನೆದೆಗೆ ಒರಗಿ ಹಾಯಾಗಿ ನಿದ್ದೆ ಹೋದಳು. ಬೆಳಗ್ಗೆ ತಿಂಡಿ ಸಮಯದಲ್ಲಿ ಸೂರ್ಯ ತನುವನ್ನು ಕೇಳಿದ, “ಇವತ್ತು ನಮ್ಮ ಮಗೂಗೆ ಏನು ಬೇಕಂತೆ?”
“ಕಾರ್ನ್‌ಫ್ಲೇಕ್ಸ್,” ತನು ಹೇಳಿದಳು.
ಆಗ ಸೂರ್ಯ ಹಾಲು ಬಿಸಿ ಮಾಡಿ. ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು ಹಾಕಿ ಕಾರ್ನ್‌ಫ್ಲೇಕ್ಸ್, ಬೆರೆಸಿ ಜೊತೆಗೆ ಟೀ ಮಾಡಿ ತಂದು ಅಂಗಳದಲ್ಲಿ ಕುರ್ಚಿ, ಟೀಪಾಯಿ ಜೋಡಿಸಿದ. ಇಬ್ಬರೂ ಅಲ್ಲಿ ಕುಳಿತು ಬೆಳಗಿನ ಆಹ್ಲಾದಕರ ತಂಗಾಳಿ ಮಧ್ಯೆ ಟೀ ಕುಡಿದರು. ಬೆಳಗಿನ ಹೊತ್ತಾದ್ದರಿಂದ ಎಳೆ ಬಿಸಿಲು ಮೂಡುವುದರಲ್ಲಿತ್ತು. ಹಸಿರು ಹುಲ್ಲಿನ ಲಾನ್, ಗಿಡಮರಗಳ ತಾಜಾ ಹವಾ ಮಧ್ಯೆ ಮೆಚ್ಚಿನ ಮನೆ, ನೆಚ್ಚಿನ ಮಡದಿ ಜೊತೆ ಅವನಿಗೆ ಬದುಕು ಬಂಗಾರವೆನಿಸಿತು.
ನಂತರ ತಾನೂ ಸ್ನಾನ, ತಿಂಡಿ ಮುಗಿಸಿ ಒಂದು ಸುತ್ತು ಗೆಳೆಯರನ್ನು ನೋಡಿಕೊಂಡು ಬರ್ತೀನಿ ಎಂದು ಹೊರಟ. ಅತ್ತೆಸೊಸೆ ಮಧ್ಯಾಹ್ನದ ಅಡುಗೆ ತಯಾರಿಯಲ್ಲಿದ್ದರು. ಸೊಸೆ ಹೆಚ್ಚಿಗೆ ಕೆಲಸ ಮಾಡಬಾರದೆಂದು ಅತ್ತೆ ಹೇಳಿದರೆ, ಸಾಧ್ಯವಾದಷ್ಟೂ ಓಡಾಡುತ್ತಾ, ಡೈನಿಂಗ್ ಟೇಬಲ್ ಬಳಿ ಕುಳಿತು ತರಕಾರಿ ಹೆಚ್ಚುವುದು, ಏನಾದರೂ ಬಿಡಿಸುವುದು ಇತ್ಯಾದಿ ತನು ಮಾಡುವಳು.
ಊಟದ ಹೊತ್ತಿಗೆ ಮಧ್ಯಾಹ್ನ 2 ಗಂಟೆಗೆ ಸೂರ್ಯ ಮನೆಗೆ ಬಂದ. ತನು ಮಹಡಿಯ ತಮ್ಮ ಕೋಣೆಯಲ್ಲಿ ಟಿವಿ ನೋಡುತ್ತಿದ್ದಳು. ಅಮ್ಮನಿಗೆ ಹೇಳಿ ಎರಡು ತಟ್ಟೆಯಲ್ಲಿ ತಾನೇ ಊಟ ಬಡಿಸಿಕೊಂಡು ಮೇಲೆ ಕೊಂಡುಹೋದ.
“ಅಯ್ಯೋ…. ಇದೇಕೆ ನೀವು ಊಟ ತರಲು ಹೋದಿರಿ? ಕೆಳಗಿನಿಂದ ಕೂಗಿದ್ದರೆ ನಾನೇ ಬರುತ್ತಿರಲ್ಲವೇ?” ಎಂದು ತಟ್ಟೆ ಪಡೆಯುತ್ತಾ ತನು ಹೇಳಿದಳು.
“ನೀನು ಮತ್ತೆ ಮತ್ತೆ ಮೆಟ್ಟಿಲು ಹತ್ತಿ ಇಳಿಯುವುದು ಬೇಡ ಅಂತಾನೇ ನಾನೇ ಊಟ ತಂದೆ.”
“ಇರಲಿ ಬಿಡಿ, ಎಷ್ಟೂಂತ ನನ್ನ ಸೇವೆ ಮಾಡ್ತೀರಿ?”
“ಗಡಿಭಾಗಕ್ಕೆ ಹೋದಾಗ ತಾಯ್ನಾಡಿನ ಸೇವೆ. ರಜೆಯಲ್ಲಿ ಬಂದಾಗ ಮನೆಯರ ಸೇವೆ,” ಎಂದು ಹಾಸ್ಯ ಮಾಡಿದ.
ಈ ಮಧ್ಯೆ ದಿನಕ್ಕೆ 2-3 ಸಲ ತನ್ನ ಪೋಸ್ಟಿಂಗ್ ವಿಭಾಗಕ್ಕೆ ಫೋನ್ ಮಾಡಿ ಅಲ್ಲೇನೂ ತೊಂದರೆ ಇಲ್ಲ ತಾನೇ ಎಂದು ಸಹೋದ್ಯೋಗಿಗಳನ್ನು ವಿಚಾರಿಸುತ್ತಿದ್ದ. ಅಲ್ಲಿ ಅವನು ಒಬ್ಬ ಕಮಾಂಡೋ. ಕಮಾಂಡೋ ತನ್ನ ಯೂನಿಟ್‌ನ ಚಿಂತೆ ಬಿಟ್ಟು ಇರುವುದಾದರೂ ಹೇಗೆ? ಅಕಸ್ಮಾತಾಗಿ ಅಲ್ಲಿಂದ ಫೋನ್ ಕಾಲ್ ಬಂದರೆ ತನ್ನನ್ನು ತುರ್ತಾಗಿ ಡ್ಯೂಟಿಗೆ ವಾಪಸ್ಸು ಕರೆಸಿಕೊಳ್ಳುತಿದ್ದಾರೇನೋ ಎಂದೇ ಅನಿಸುತ್ತಿತ್ತು…. ಯಾವುದೋ ಎಮರ್ಜೆನ್ಸಿಗಾಗಿ ತನ್ನ ರಜೆ ಕ್ಯಾನ್ಸಲ್ ಆಗಲಿಲ್ಲ ತಾನೇ ಎಂದು ಗಾಬರಿಯಾಗುತ್ತಿತ್ತು. ಒಟ್ಟು 1 ತಿಂಗಳು ರಜೆಯ ಮೇಲೆ ಅವನು ಬಂದಿದ್ದ. ಅದರಲ್ಲೂ ಯಾವಾಗ ಬೇಕಾದರೂ ರಜೆ ರದ್ದಾಗುವ ಅವಕಾಶಗಳಿದ್ದವು. ಏಕೆಂದರೆ ಪ್ಯಾರಾ ಕಮಾಂಡೋ ಆದಕಾರಣ ಅವನ ಜವಾಬ್ದಾರಿ ಹೆಚ್ಚಿತ್ತು.
ಅವನ ರಜೆಗಳು ಮುಗಿಯುತ್ತಾ ಬಂದವು. ಈಗ ಅವನಿಗೆ ಒಂದೊಂದು ದಿನ ಕಳೆದುಹೋಗುತ್ತಿದೆಯಲ್ಲ ಎಂಬುದೇ ಬೇಸರ.
ಹೀಗೆ ದಿನಗಳು ಸರಿದವು. ರಾತ್ರಿ ನಿದ್ದೆ ಬಾರದೆ ಅವನು ಬಾಲ್ಕನಿಯಲ್ಲಿ ನಿಂತು ಯೋಚಿಸುತ್ತಿದ್ದ. ಈ ಸಲ ತನುವಿಗೆ ವಿದಾಯ ಹೇಳಿ ಹೊರಡುವುದು ಅಷ್ಟು ಸುಲಭವಲ್ಲ ಎನಿಸಿತು. ಅವಳಿಗೆ ಹೆರಿಗೆ ಆಗಿ ಮಗು ಮನೆಗೆ ಬರುವವರೆಗೂ ತಾನು ಇಲ್ಲೇ ಇರೋಣ ಎನಿಸುತ್ತಿತ್ತು. ಮಗುವಿನ ಜೊತೆ 4-6 ದಿನ ಕಳೆಯಬಯಸಿದ್ದ. ಈ ಬಾರಿ ಅಂತೂ ಖಂಡಿತಾ ಅವನಿಗೆ ವಾಪಸ್ಸು ಡ್ಯೂಟಿಗೆ ಹೋಗಲು ಮನಸ್ಸೇ ಇರಲಿಲ್ಲ. ಮುಂದಿನ ತನ್ನ ಪೋಸ್ಟಿಂಗ್ ಮನೆಗೆ ಹತ್ತಿರದ ಊರಲ್ಲಿದ್ದರೆ ಕನಿಷ್ಠ ತಾನು ಮಗುವಿಗೆ 1-2 ವರ್ಷವಾದರೂ ಆಗುವವರೆಗೂ ಮನೆಗೆ ಹತ್ತಿರದಲ್ಲಿರಲಿ ಎಂದೇ ಬಯಸುತ್ತಿದ್ದ.
ಸೂರ್ಯನಿಗೆ ಮತ್ತೊಂದು ಚಿಂತೆ ಇತ್ತು. ಈಗ ಅವನು 3 ತಿಂಗಳ ನಂತರ ಮತ್ತೆ ರಜೆಗೆ ಮನೆಗೆ ಬಂದರೆ, ಮಗುವಿನ ಜನನದ ಸಮಯದಲ್ಲಿ ತನು ಬಳಿ ಇರಲು ಆಗುತ್ತಿರಲಿಲ್ಲ. ಅಂದ್ರೆ ಈಗ ಅವನು ರಜೆ ಮುಂದುವರಿಸದೆ ಇರುವುದೇ ವಾಸಿ ಅಂತಾಯಿತು. ಆಗ ಮಾತ್ರ ಒಟ್ಟು 2 ತಿಂಗಳ ರಜೆಯ ಮಂಜೂರಾತಿ ಆಗುತ್ತಿತ್ತು. ಇದೆಲ್ಲ ಮತ್ತೆ ಮತ್ತೆ ಯೋಚಿಸಿ ಅವನ ತಲೆ ಕೆಟ್ಟುಹೋಗಿತ್ತು.
ಈ ಕಾರಣವಾಗಿ ಮಧ್ಯದ 5 ತಿಂಗಳಲ್ಲಿ ಅವನು ಹೆಂಡತಿ ಮುಖ ನೋಡುವ ಹಾಗಿರಲಿಲ್ಲ. ತಾನು ಇದ್ದಂಥ ಗಡಿ ಪ್ರದೇಶಕ್ಕೆ ಮಾತ್ರ ಗರ್ಭವತಿ ಹೆಂಡತಿಯನ್ನು ಕರೆದುಕೊಂಡು ಹೋಗಿ ಮನೆ ಮಾಡಲು ಅವಕಾಶವೇ ಇರಲಿಲ್ಲ. ಮತ್ತೆ ಗರ್ಭಿಣಿ ಈ ಸಮಯದಲ್ಲಿ ತುಮಕೂರಿನಿಂದ ಜಮ್ಮುವರೆಗೂ ಪ್ರಯಾಣ ಬೆಳೆಸುವುದು ಸಹ ಸುಲಭದ ಮಾತಾಗಿರಲಿಲ್ಲ.
ಒಬ್ಬ ಕರ್ತವ್ಯನಿಷ್ಠ ಗಂಡಸು, ತನ್ನ ಪ್ರೀತಿ ಹಾಗೂ ಡ್ಯೂಟಿ ಮಧ್ಯೆ ಸಿಕ್ಕಿ ಹಾಕಿಕೊಂಡು ಅಸಹಾಯಕನಾಗಿದ್ದ. ರಜೆಯ ಕೊನೆಯ ದಿನ ಅವನು ತನುವನ್ನು ಅದೇ ವೈದ್ಯರ ಬಳಿ ಕರೆದೊಯ್ದ. ಅವಳ ಚೆಕಪ್ ನಡೆಯಿತು. ಎಲ್ಲ ನಾರ್ಮಲ್ ಆಗಿತ್ತು. ಈ ಸಲ ಅವನು ತನ್ನ ಬಟ್ಟೆಬರೆ ಪ್ಯಾಕ್ ಮಾಡಿಕೊಳ್ಳುವಾಗ, ತನುಜಾಳನ್ನು ಅವಳ ತವರೂರು ಶಿವಮೊಗ್ಗಕ್ಕೆ ಕಳುಹಿಸಲು ಅವಳದೂ ಪ್ಯಾಕಿಂಗ್ ಆಗಬೇಕಿತ್ತು.
ಹೊರಡುವ ಸಮಯ ಹತ್ತಿರ ಬಂದಂತೆ ಅವನು ಮತ್ತೆ ಮತ್ತೆ ತಮ್ಮ ಕೋಣೆ, ಮನೆ ಸುತ್ತಿ ಬರತೊಡಗಿದ. ಮತ್ತೆ ಇದನ್ನೆಲ್ಲ ತಾನು ಯಾವಾಗ ಬಂದು ನೋಡುವೆನೋ ಅಥವಾ ಬರುವುದೇ ಇಲ್ಲವೋ ಅದೂ ಗ್ಯಾರಂಟಿ ಇರಲಿಲ್ಲ. ಇದನ್ನೆಲ್ಲ ನೆನೆದು ಅವನ ಕಂಗಳು ತುಂಬಿ ಬಂದವು. ಅವನು ಅದು ಕಾಣಬಾರದೆಂಬಂತೆ ಕರ್ಚೀಫ್‌ನಿಂದ ಒರೆಸಿಕೊಂಡ.
“ಏನಾಯ್ತು ಸೂರ್ಯ?”
“ಏನೂ ಇಲ್ಲ ಬಿಡು….” ಸೂರ್ಯ ನಿಧಾನವಾಗಿ ಹೇಳಿದ.
“ಇಲ್ಲಿ ಬನ್ನಿ ನನ್ನ ಬಳಿ,” ಎಂದು ಅವನನ್ನು ತನ್ನ ಬಳಿ ಕುಳ್ಳಿರಿಸಿಕೊಂಡು, ತನ್ನ ಮಡಿಲಲ್ಲಿ ಅವನ ತಲೆ ಇರಿಸಿ, ಕೂದಲಲ್ಲಿ ಕೈಯಾಡಿಸಿದಳು. ಮಗು ತನ್ನ ಮುಖಕ್ಕೆ ತಗುಲಿದಂತೆ ಸೂರ್ಯ ಬಿಕ್ಕಳಿಸಿ ಅತ್ತುಬಿಟ್ಟ.
“ಛೆ….ಛೇ…. ಇಷ್ಟಕ್ಕೆಲ್ಲ ಮನಸ್ಸನ್ನು ಸಡಿಲ ಬಿಡಬಾರದು. ಧೀರೋದಾತ್ತ ಸೈನಿಕ ನೀವು….. ನಿಮ್ಮ ಕೆಳಗಿನ ಸಿಬ್ಬಂದಿಗೆ ಎಷ್ಟೋ ಧೈರ್ಯ ತುಂಬ ಬೇಕಾದವರು…. ಈ ಕಷ್ಟದ ದಿನಗಳು ಹೆಚ್ಚು ದಿನ ಇರೋಲ್ಲ. ನೀವು ಹೀಗೆ ಹೋಗಿ ಹಾಗೆ ಬಂದುಬಿಡ್ತೀರಿ. ಪಾಪು ಬರುವ ಹೊತ್ತಿಗೆ ಇಲ್ಲೇ ಇರ್ತೀರಿ ಬಿಡಿ.”
ಅಲ್ಲಿಂದ ಹೊರಡುವಾಗ ಮತ್ತೆ ಮತ್ತೆ ತನ್ನವರನ್ನೆಲ್ಲ ಪ್ರೀತಿಯಿಂದ ಅಪ್ಪಿಕೊಂಡು, ಎಲ್ಲರಿಗೂ ಹೋಗಿ ಬರುವುದಾಗಿ ತಿಳಿಸಿ, ತನು ಜೊತೆ ರೈಲ್ವೆ ಸ್ಟೇಷನ್ ಕಡೆ ಟ್ಯಾಕ್ಸಿ ಹೊರಡುವಂತೆ ತಿಳಿಸಿದ. ಅಲ್ಲಿಂದ ರೈಲ್ವೆ ಸ್ಟೇಷನ್ನಿನಲ್ಲಿ ಇಳಿದು, ತನುಜಾಳನ್ನು ಅವಳ ತವರಿನ ಶಿವಮೊಗ್ಗ ರೈಲಿಗೆ ಹತ್ತಿಸಿದ್ದಾಯಿತು. ಅವಳ ನೆರವಿಗೆಂದು ಸೂರ್ಯನ ತಂಗಿ ಪ್ರಭಾ ಜೊತೆಗಿದ್ದಳು. ಅವರಿಗೆ ಕೈ ಬೀಸಿ ಸೂರ್ಯ ತನ್ನ ಲಗೇಜ್ ಸಮೇತ ಬೆಂಗಳೂರಿನ ರೈಲು ಹಿಡಿದ. ಅಲ್ಲಿಂದ ಮುಂದೆ ಅವನು ದೆಹಲಿಯ ರೈಲು ಹಿಡಿದು ಹೊರಟ.
ಅವನ ಮೊಬೈಲ್ ಕವರ್‌ಗೆ ತನುಜಾಳ ಒಂದು ಸಣ್ಣ ಬಿಂದಿ ಅಂಟಿಕೊಂಡಿತ್ತು. ತಾವಿಬ್ಬರೂ ಕಳೆದ ರಸಮಯ ಕ್ಷಣಗಳನ್ನು ನೆನೆಯುತ್ತಾ, ಆ ಬಿಂದಿಯನ್ನು ಸವರಿದ. ತಾನು ಡ್ಯೂಟಿಯಲ್ಲಿರುವಷ್ಟು ದಿನ ಅದು ಊರಿನ ನೆನಪು ತರಲಿತ್ತು.
ತನ್ನ ಪತ್ನಿಯಿಂದ ವಿದಾಯ ಪಡೆದ ಸೈನಿಕ, ಇದೀಗ ಕರ್ತವ್ಯನಿಷ್ಠನಾಗಿ ತನ್ನ ಮಾತೃಭೂಮಿಯ ಸೇವೆಗೆ ಕಂಕಣ ಕಟ್ಟಿಕೊಂಡು ಸಿದ್ಧನಾದ. ಎಂದಿನಂತೆ ದೃಢ ಮನಸ್ಸಿನಿಂದ ಅವನು ವೀರ ಯೋಧನಾಗಿ ತನ್ನ ಪಹರೆಯ ಕೆಲಸ, ಶತ್ರು ದಾಳಿಗೆ ಉತ್ತರ ಕೊಡುವಲ್ಲಿ ನಿರತನಾದ. ಮತ್ತೆ ತಾನು ಮರಳಿ ಮನೆ ಸೇರುವೆನೇ….. ತನ್ನವರನ್ನೆಲ್ಲ ನೋಡುವೆನೇ…. ತಿಳಿಯದೆ ಅವನು ಕರ್ತವ್ಯದಲ್ಲಿ ತಲ್ಲೀನನಾದ. ಹುಟ್ಟಲಿರುವ ಮಗುವನ್ನು ಕಾಣುವ ಆಶಾಜೀವಿಯಾಗಿ ಕರ್ತವ್ಯ ನಿರ್ವಹಿಸತೊಡಗಿದ.