ಕಥೆ -ಶಿಲ್ಪಾ

ತನಗೆ ಗಂಡು ಮಗು ಹುಟ್ಟಲಿಲ್ಲವೆಂಬ ಕೊರಗಿನಲ್ಲಿ ಶ್ರೀಧರ ಒಳಗೇ ಕುಗ್ಗಿ ಹೋಗುತ್ತಿದ್ದ. ಇಬ್ಬರೂ ಹೆಣ್ಣುಮಕ್ಕಳು, ಅದರಲ್ಲೂ ಒಬ್ಬಳು ಅಂಗವಿಕಲೆ. ಮುಂದೆ ಅವನಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಅವನ ಮಗಳು ನಡೆದುಕೊಂಡದ್ದಾದರೂ ಹೇಗೆ…..?

“ಏನಾಯ್ತು ನಿಮಗೆ? ಒಳ್ಳೆ ಬಾಲ ಸುಟ್ಟ ಬೆಕ್ಕಿನ ಹಾಗೆ ಅಷ್ಟು ಹೊತ್ತಿನಿಂದ ಓಡಾಡುತ್ತಿದ್ದೀರಿ, ಮಲಗಬಾರದಾ?” ಹಾಲ್‌ನಲ್ಲೇ  ಅತ್ತಿಂದಿತ್ತ ಕಾಲೆಳೆಯುತ್ತಾ ಓಡಾಡುತ್ತಿದ್ದ ಗಂಡನನ್ನು ಕೇಳಿದಳು ಮಾಲಿನಿ.

“ವನಿತಾ ಇನ್ನೂ ಮನೆಗೆ ಬಂದಿಲ್ವಾ…”

“ಬರ್ತಾಳೆ. ಇವತ್ತೇನು ಹೊಸದೇ?”

“ಬಾಗಿಲು ತೆಗೀಬೇಕು.”

“ದಿನಾ ನಾನೇ ಅಲ್ವೇ ತೆಗೆಯೋದು… ತೆಗೀತೀನಿ. ನೀವು ಹೋಗಿ ಮಲಗಿ.”

“ನಾನು ತೆಗೆದರೆ ಏನಾಗುತ್ತೆ? ಇವತ್ತು ನಾನೇ ತೆಗೀತೀನಿ. ನೀನೇ ಹೋಗಿ ಮಲಗು,” ಪುಟ್ಟ ಮಕ್ಕಳು ಹಠ ಮಾಡುವಂತೆ ಮಾತಾಡಿದ ಗಂಡನನ್ನೇ ಅಚ್ಚರಿಯಿಂದ ನೋಡಿದ ಮಾಲಿನಿ, “ಸರಿ, ತೆಗೀರಿ, ನನಗೇನಂತೆ,” ಎನ್ನುತ್ತಾ ಒಳನಡೆದಳು.

ಹುಸಿ ಕೋಪ ಬೀರಿ ಒಳ ನಡೆದ ಹೆಂಡತಿಯನ್ನೇ ನೋಡುತ್ತಿದ್ದ ಶ್ರೀಧರ ಪುನಃ ಓಡಾಡಲಾರದೆ ಕುಳಿತ. ಈಗ ಅವನ ಮನಸ್ಸು ಮಗಳ ಕಡೆಗೆ ಓಡಿತು. ಮಗಳು ಬೇಗ ಮನೆಗೆ ಬಂದು ಎಷ್ಟು ದಿನಗಳಾಗಿರಬಹುದು? ದಿನ…. ತಿಂಗಳು…. ವರ್ಷ….. ಉಹ್ಞೂಂ ಸರಿಯಾಗಿ ನೆನಪಿಲ್ಲ. ಆದರೂ ತಾನು ನಿಶ್ಚಿಂತೆಯಿಂದ ಇದ್ದೆ. ಹೌದು. ಇಂದು ಸಂಜೆಯವರೆಗೆ, ಆ ಮುರಳೀಧರ ಎಲ್ಲರೆದುರಿಗೆ  ಸಿಕ್ಕು ಆ ಮಾತನ್ನು ಹೇಳುವವರೆಗೆ.

ಶ್ರೀಧರನ ಮನದಲ್ಲಿ ಸಂಜೆಯ ಘಟನೆ ಸುಳಿಯಿತು. ಬೇಸರವೆಂದು ಹತ್ತಿರದ ಪಾರ್ಕ್‌ವರೆಗೆ ನಡೆದು ಅಲ್ಲಿಯ ಕಟ್ಟೆಯ ಮೇಲೆ ಕುಳಿತಿದ್ದ ಅವನನ್ನು ಮುರಳೀಧರ ಎಲ್ಲರೆದುರಿಗೆ ಕೆದಕಿದ್ದ, “ಅಂತೂ ನಿನ್ನ ಕೈಲಿ ಆಗದ ಕೆಲಸ ನಿನ್ನ ಮಗಳು ಮಾಡಿದ್ದಾಳೆ.”

“ಏನಪ್ಪ ಅದು?” ಅವನು ಯಾವ ವಿಷಯದ ಬಗ್ಗೆ ಹೇಳುತ್ತಿದ್ದಾನೆ ಎಂಬುದು ತಿಳಿಯದೆ ಗಲಿಬಿಲಿಕೊಂಡ ಶ್ರೀಧರ.

“ಅದೇ, ನಿನ್ನ ಮಗಳಿಗೆ ಗಂಡು ಹುಡುಕುವ ಕೆಲಸ.”

ಇತರರು ತನ್ನ ಅಸಮರ್ಥತೆಯನ್ನು ಎತ್ತಿ ತೋರಿಸುತ್ತಿರುವಂತೆ, ಮುಸುಮುಸು ನಗುತ್ತಿರುವಂತೆ ಭಾಸವಾಯಿತು ಅವನಿಗೆ.

“ನೀನು ಏನು ಹೇಳುತ್ತಿದ್ದೀಯೋ ನನಗಂತೂ ಅರ್ಥ ಆಗ್ತಿಲ್ಲ. ಬಿಡಿಸಿ ಹೇಳಬಾರದೇ?” ಶ್ರೀಧರ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದ.

“ನಿಜವಾಗಲೂ! ಯಾಕೆ, ನಿನ್ನ ಮಗಳು ದಿನಾ ರಾತ್ರಿ ಲೇಟಾಗಿ ಬರೋದು ನಿನಗೆ ಗೊತ್ತಿಲ್ವೇ?”

“ಗೊತ್ತು, ಅದು…. ಅವಳು….”

“ಅದೇ, ಅವಳು ಯಾರ ಜೊತೆ ಬರ್ತಾಳೇನ್ನೋದು?”

“ಯಾರ ಜೊತೆ?”

“ಒಬ್ಬ ಯುವಕ ದಿನಾ ರಾತ್ರಿ ಅವಳನ್ನು ಮನೆವರೆಗೆ ಬಿಡೋದು… ನಿಜವಾಗಲೂ ನಿಂಗೊತ್ತಿಲ್ವಾ?” ಮತ್ತೆ ಅನುಮಾನದ ಧ್ವನಿ.

“ಇಲ್ಲ… ಗೊತ್ತಿಲ್ಲ.”

“ಸರಿ ಬಿಡು. ಹಾಗಾದರೆ ನೀನು ನಿಜವಾಗಲೂ ಮನೇಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲದವನ ಹಾಗೆ.”

ಆಗ ಮಾತ್ರ ಎಲ್ಲರೂ ಸ್ವಲ್ಪ ಜೋರಾಗಿಯೇ ನಕ್ಕರು.

`ಥತ್‌, ನನ್ನ ಈ ಪರಿಸ್ಥಿತಿಗೆ ಅವಳೇ ಕಾರಣ,’ ಅವನು ಜೋರಾಗಿ ಕೈ ಬೀಸಿದಾಗ ಅದು ಪಕ್ಕದ ಗೋಡೆಗೆ ಬಡಿದು ನೋವಾದಾಗ ವಾಸ್ತವಕ್ಕೆ ಬಂದ. ಆ ಮುರಳೀಧರ ಇವತ್ತು ಎಲ್ಲರೆದುರಿಗೆ ನನ್ನ ಮಾನ ಕಳೆದ, ಅಸಲು ನಾನು ಅಲ್ಲಿಗೆ ಹೋಗಲೇಬಾರದಾಗಿತ್ತು. ಎಲ್ಲಾ ತನ್ನಿಚ್ಛೆಯಂತೆಯೇ ನಡೆದಿದ್ದರೆ ಆ ದಿನ ತಾನು ಅಲ್ಲಿಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಳಾದ್ದು, ಎಲ್ಲಾ ನನ್ನ ಹಣೆಬರಹ. ಶ್ರೀಧರನ ಮನದಲ್ಲಿ ಅವನ ಗತ ಸುಳಿಯಿತು.

ಶ್ರೀಧರ ಮಾಲಿನಿಯನ್ನು ಮದುವೆಯಾದದ್ದೇ ಅವಳ ರೂಪವನ್ನು ಮೆಚ್ಚಿ. ಬಡವಳು, ಆದರೆ ಗುಣವಂತೆ. ಈಗಿನ ಕಾಲದಲ್ಲಿ ಗುಣವನ್ನು ಯಾರು ಕೇಳುತ್ತಾರೆ? ಹಾಗೆಂದು ಅವನೇನೂ ಸಿರಿವಂತನಲ್ಲ. ಮಧ್ಯಮ ವರ್ಗದವನು. ಎಲ್ಲಾ ಸರಿಯಿದ್ದಿದ್ದರೆ ಕಡೆಯ ಪಕ್ಷ ಒಂದು ಮಾರುತಿ 800 ಆದರೂ ಇಟ್ಟುಕೊಳ್ಳಬಹುದಿತ್ತು. ಅವನಿಗೆ ಮೊದಲಿನಿಂದ ಒಂದು ಕನಸು ಇತ್ತು. ವೃದ್ಧಾಪ್ಯದಲ್ಲಿ ತನ್ನನ್ನು ನೋಡಿಕೊಳ್ಳುವ ಒಂದೇ ಒಂದು ಗಂಡು ಮಗು. ಅವನನ್ನು ಚೆನ್ನಾಗಿ ಓದಿಸಬೇಕು. ಸುಂದರ ಹೆಂಡತಿ, ಹೆಸರು ತರುವ ಮಗ, ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸಂಸಾರ.

ಥತ್‌, ಎಲ್ಲಾ ಹಾಳಾಗಿ ಹೋಯಿತು. ಯಾವುದೂ ನಡೆಯಲಿಲ್ಲ. ಮೊದಲ ಮಗು ಹೆಣ್ಣಾದಾಗಲೇ ಕನಸು ಚೂರಾಗಿದ್ದು ನಿಜ. ಹಾಗೆಂದು ಮಗುವನ್ನು ಕೊಲ್ಲುವಷ್ಟು ಕಟುಕನಲ್ಲ ಅವನು. ಮಗು ವನಿತಾ, ರೂಪದಲ್ಲಿ ತಾಯಿಯ ಪಡಿಯಚ್ಚು. ಮುದ್ದು ಮಗು ತನ್ನ ನಗುವಿನಿಂದ, ಚುರುಕಿನಿಂದ ಅವನನ್ನು ತನ್ನತ್ತ  ಸೆಳೆಯಿತು. ಬರುಬರುತ್ತಾ. ಹೆಣ್ಣುಮಗು ಎಂಬ ಅಸಮಾಧಾನ ದೂರಾಯಿತು. `ಮನೆಗೆ ಹೆಣ್ಣು ಕಣ್ಣಿದ್ದಂತೆ!’ ತನಗೆ ತಾನೇ ಸಮಾಧಾನ ಹೇಳಿಕೊಂಡ. ಮಗುವಿನತ್ತ ಪ್ರೀತಿ ಹೆಚ್ಚುತ್ತಿರುವಾಗಲೇ ಮತ್ತೊಂದು ಆಘಾತ ಅವನಿಗಾಗಿ ಕಾದಿತ್ತು. ಬಾಲಗ್ರಹದ ದೆಸೆಯಿಂದ ಮಗುವಿನ ಒಂದು ಕಾಲು ಸೆಳೆಯಿತು. ಮಗುವಿನ ಕಾಲನ್ನು ಕಾಪಾಡಲು ಅವನು ತನ್ನ ಶಕ್ತಿಮೀರಿ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲ. ಮುದ್ದಾದ ರೂಪವಂತೆ ಮಗಳು. ಅಂಗವಿಕಲರ ಸಾಲಿಗೆ ಸೇರಿಹೋದಳು.

ಮನದಲ್ಲೇ ಹುದುಗಿದ್ದ ಮತ್ತೊಂದು ಮಗುವಿನ ಆಸೆಯನ್ನು ಈಗ ಅವನು ಹೊರಗೆಳೆಯಬೇಕಾಯಿತು. ಆದರೆ ಮಗಳು ಸುನೀತಾ ಹುಟ್ಟಿ ಗಂಡು ಮಗು ಬೇಕೆಂಬ ಅವನ ಆಸೆಗೆ ತಣ್ಣೀರೆರಚಿದಳು. ಗಂಡು ಮಗುವಿಗಾಗಿ ಸಾಲಾಗಿ ಮಕ್ಕಳನ್ನು ಹುಟ್ಟಿಸುವಷ್ಟು ಮೂರ್ಖನಾಗಿರಲಿಲ್ಲ ಅವನು. ಹಾಗಾಗಿ ಅವನ ಆಸೆಗೆ ಶಾಶ್ವತವಾದ ತೆರೆಬಿದ್ದಿತು.

ಮಕ್ಕಳಿಬ್ಬರಿಗೂ ದೊಡ್ಡ ಓದು ಓದಿಸುವಷ್ಟು ಚೈತನ್ಯ ಅವನಿಗಿರಲಿಲ್ಲ. ಆದರೂ ಹೆಣ್ಣುಮಕ್ಕಳೆಂದು ತಾತ್ಸಾರ ಮಾಡದೆ ಕಾಲೇಜಿಗೆ ಕಳುಹಿಸಿದ. ಈ ನಡುವೆ ಅವನ ಆರೋಗ್ಯ ಆಗಾಗ ಕೈಕೊಡುತ್ತಿತ್ತು. ವೈದ್ಯರು ನರದೌರ್ಬಲ್ಯ ಎಂದರು. ಬೆರಳುಗಳ ಮೇಲಿನ ಹಿಡಿತ ತಪ್ಪಿದಾಗ ನಿವೃತ್ತಿಗೆ ಮುಂಚೆಯೇ ಅವನು ನಿವೃತ್ತನಾಗಬೇಕಾಯಿತು.

ಅವನಿಗೆ ಚೆನ್ನಾಗಿ ನೆನಪಿದೆ. ಆಗ ಅವನಿಗೆ ಇನ್ನೂ ನಲತ್ತೊಂಬತ್ತರ ಹರೆಯ. ಹೆಣ್ಣುಮಕ್ಕಳಿಬ್ಬರ ಓದು, ಮದುವೆಯ ಹೊರೆ ಅವನ ಮೇಲಿತ್ತು. ಪಿತ್ರಾರ್ಜಿತ ಆಸ್ತಿ ಇಲ್ಲ. ಸಹಾಯ ಮಾಡುವ ಮಾವ ಇಲ್ಲ. ಸಂಬಳವೆಲ್ಲಾ ಮಗಳ ಹಾಗೂ ಅವನ ಅನಾರೋಗ್ಯ  ನುಂಗಿಹಾಕಿತ್ತು. ಈ ಪರಿಸ್ಥಿತಿಯಲ್ಲಿ ಅನಿವಾರ್ಯ ನಿವೃತ್ತಿ ಬೇರೆ.

ಆಗ ಅವನಿಗೆ ಧೈರ್ಯ ನೀಡಿದವಳೇ ವನಿತಾ. ಅವಳು ಆಗಷ್ಟೇ ಬಿ.ಕಾಂ. ಮುಗಿಸಿದ್ದಳು. ಅಂಗವಿಕಲೆಯಾದರೂ ಕೆಲಸಕ್ಕೆ ಸೇರಿ ಮನೆ ನಿಭಾಯಿಸಿದಳು. ಪಾರ್ಟ್‌ ಟೈಂ ಕೆಲಸ ಮಾಡಿದಳು. ತಂಗಿಯನ್ನು ಓದಿಸಿದಳು.

ತಾನೂ ಸಿ.ಎ. ಮಾಡಿದಳು. ತಂದೆಯನ್ನು ಮನೆಯಲ್ಲಿ ಕೂಡಿಸಿ ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಂಡಳು. ಎಲ್ಲಕ್ಕಿಂತ ಹೆಚ್ಚಾಗಿ ಮದುವೆಯ ಮಾತು ಬಂದಾಗ, “ಈ ಜನ್ಮದಲ್ಲಿ ಅದು ಕನಸು. ನಾನು ಆ ವಿಚಾರ ಬಿಟ್ಟಿದ್ದೇನೆ. ನೀವೂ ಬಿಟ್ಟುಬಿಡಿ,” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಳು.

ಹಾಗೆಂದು ಅವನೇನೂ ತನ್ನ ಕರ್ತವ್ಯವನ್ನು ಮರೆತಿರಲಿಲ್ಲ. ಆದರೆ ಎಲ್ಲಾ ಸರಿಯಾಗಿರುವವರಿಗೇ ವಿವಾಹ ಕಷ್ಟವಾಗಿರುವಾಗ ಒಬ್ಬ ಅಂಗವಿಕಲೆ, ಎಷ್ಟು ಸುಂದರಳಾಗಿದ್ದರೇನಂತೆ, ಲಕ್ಷ್ಮೀದೇವಿಯ ಕೃಪಾಕಟಾಕ್ಷವೇ ಇಲ್ಲದಿರುವಾಗ, ಅವನು ತನ್ನ ಪ್ರತಿ ಪ್ರಯತ್ನದಲ್ಲೂ ಸೋಲುತ್ತಿದ್ದ. ಆಗೆಲ್ಲಾ ಮಗಳ ನಿರ್ಧಾರ ಮತ್ತಷ್ಟು ಗಟ್ಟಿಯಾಗುತ್ತಿತ್ತು.

“ಯಾಕಪ್ಪಾ, ನಿದ್ದೆ ಬರಲಿಲ್ವಾ? ಇಲ್ಲಿ ಕೂತಿದ್ದೀರಿ?” ಮಗಳ ಧ್ವನಿ ಕೇಳಿ ಬೆಚ್ಚಿ ವಾಸ್ತವಕ್ಕೆ ಬಂದ. ಎದುರಿಗೆ ಮಗಳು ವನಿತಾ.  “ಯಾ…ಯಾರು ತೆಗೆದರಮ್ಮಾ ಬಾಗಿಲು?” ತೊದಲಿದ.

“ಇನ್ಯಾರು ಅಮ್ಮಾನೇ. ಅದ್ಸರಿ ನೀವೇನೂ ಇಲ್ಲಿ ಕೂತು ಕನಸು ಕಾಣ್ತಿದ್ದೀರಿ,” ನಗುತ್ತಾ ಅವನ ಕೈಹಿಡಿದು ಎಬ್ಬಿಸಲು ಹೋದಳು.

ಶ್ರೀಧರ ಹತ್ತಿರದಿಂದ ಮಗಳ ಮುಖವನ್ನೇ ದಿಟ್ಟಿಸಿದ. ಅಲ್ಲಿ ಯಾವುದೇ ಕಲ್ಮಶವಿಲ್ಲ, ಅಪರಾಧಿ ಭಾವವಿಲ್ಲ, ಭಯದ ನೆರಳಿಲ್ಲ. ತಾನೇ ಕೋಲಿನ ಆಧಾರದಿಂದ ನಡೆಯಬೇಕಾದವಳು ನನಗೆ ಆಸರೆ ನೀಡಲು ಬಂದಿದ್ದಾಳೆ. ಅವನ ಮನ ಬೆಣ್ಣೆಯಂತೆ ಕರಗಿಹೋಯಿತು.

“ಏನಪ್ಪಾ, ನನ್ನ ಹಾಗೆ ನೋಡ್ತಿದ್ದೀರಿ? ಯಾವತ್ತೂ ನೋಡಿಲ್ಲದವರ ಹಾಗೆ?” ನಗು ಅವಳ ಮುಖವನ್ನು ತುಂಬಿತು.

“ಏನಿಲ್ಲ. ನೀನು ಹೋಗು. ಬೆಳಗ್ಗೆಯಿಂದ ಕಷ್ಟಪಟ್ಟಿದ್ದೀಯ.”

“ಸರಿಯಪ್ಪಾ, ನಿಮ್ಮಿಷ್ಟ.”

`ಥತ್‌, ಏನು ಹಾಳು ಯೋಚನೆಗಳೋ? ಅವಳಿಗಾಗಿ ಕಾದಿದ್ದು ವ್ಯರ್ಥವಾಯಿತು. ನಾನು ಇಲ್ಲೇ ಕೂತಿದ್ದರೂ ಅದು ಯಾವ ಮಾಯದಲ್ಲಿ ಬಂದು ಬಾಗಿಲು ತೆಗೆದಳೋ?’ ಹೆಂಡತಿಯನ್ನು ಮನದಲ್ಲೇ ಬೈದುಕೊಂಡ.

ಮರುದಿನ ಗಂಡ, “ನೀನು ಮಲಗು. ನಾನೇ ಬಾಗಿಲು ತೆಗೀತೀನಿ,” ಎಂದಾಗ ಮಾಲಿನಿ, `ನಿನ್ನೆ ನೋಡಲಿಲ್ವೇ ನಾನು, ನೀವು ಬಾಗಿಲು ತೆಗೆದದ್ದು,’ ಎಂಬಂತೆ ದುರದುರನೆ ಅಲ್ಲಿಂದೆದ್ದು ಹೋದಳು.

ಆ ದಿನ ಯೋಚನೆಗಳಲ್ಲಿ ಮುಳುಗಿಹೋಗದೆ ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದುದರಿಂದಲೋ ಏನೋ ಹೊರಗೆ ಕಾರು ಬಂದು ನಿಂತಾಗ ಕಿಟಕಿಯ ಸರಳು ಆಧರಿಸಿ ನಿಂತು ಹೊರಗೆ ಕಣ್ಣು ಕೀಲಿಸಿದ.

ಅವನ ಮನೆಯ ಗೇಟಿನ ಮುಂದೆಯೇ ಕಾರು ನಿಂತಿತ್ತು. ಡ್ರೈವರ್‌ ಸೀಟಿನಿಂದ ಯುವಕನೊಬ್ಬ ಇಳಿದು ಬಂದು ಬಾಗಿಲು ತೆಗೆದು ಕೈಯ ಆಸರೆ ನೀಡಿ ವನಿತಾಳಿಗೆ ಇಳಿಯಲು ಸಹಾಯ ಮಾಡಿದ. ಅವಳು ಒಳಬರುವವರೆಗೂ ಕಾದಿದ್ದು ಕೈಯಾಡಿಸಿ ಕಾರು ಸ್ಟಾರ್ಟ್‌ ಮಾಡಿದ.

ಶ್ರೀಧರ ಬಾಗಿಲು ತೆಗೆದಾಗ, “ಇದೇನಪ್ಪಾ ನೀವು! ಅಮ್ಮ ಎಲ್ಲಿ?” ವನಿತಾ ಅಚ್ಚರಿ ಸೂಸಿದಳು.

“ಯಾಕೆ, ನಾನು ಬಾಗಿಲು ತೆಗೀಬಾರದಾ?” ಅವನ ಧ್ವನಿಯಲ್ಲಿನ ವ್ಯತ್ಯಾಸದಿಂದ ಅವಳ ಹುಬ್ಬುಗಳು ಮೇಲೇರಿದವು. `ಯಾರಿರಬಹುದು ಅವನು?’ ಶ್ರೀಧರನ ತಲೆ ಕೊರೆಯತೊಡಗಿತು. `ಸುಂದರವಾಗಿದ್ದಾನೆ, ಚಿಕ್ಕವನಂತೆ ಕಾಣುತ್ತಾನೆ. ಪರಿಚಯದವನಾಗಿರಬಹುದು? ಇವರಿಬ್ಬರ ನಡುವಿನ ಸಂಬಂಧವೇನು? ಏನು ತಾಯಿಯೋ? ಬೆಳೆದ ಮಗಳ ಕಡೆ ಸ್ವಲ್ಪವಾದರೂ ನಿಗಾ ಬೇಡವೇನು? ಥತ್‌, ಕುಳಿತಲ್ಲೇ ಕನಸು ಕಾಣುವುದಷ್ಟೇ ನನ್ನ ಕೆಲಸಾಯಿತು. ಇದೂ ಒಂದು ಬದುಕಾ?’ ಶ್ರೀಧರ ತನ್ನ ಅಸಹಾಯಕತೆಗೆ ಸಿಟ್ಟಿನ ರೂಪ ಕೊಟ್ಟ.

ಅಂದಿನಿಂದ ಅವನ ನಿದ್ದೆ ದೂರವಾಯಿತು. ಮಗಳ ಚಲನಲನಗಳತ್ತ ಗಮನ. ಕೇಳಲು ಬಿಂಕ. ತಂದೆಯ ಕರ್ತವ್ಯ ನೆನಪಾಗುವಾಗ ಒಮ್ಮೊಮ್ಮೆ ಅವನಿಗನ್ನಿಸುತ್ತಿತ್ತು . `ಅವಳಿಗೂ ಮೂವತ್ತಾಯಿತು. ಹುಡುಗ ಚೆನ್ನಾಗಿದ್ದಾನೆ. ಕಾರುಗೀರು ನೋಡಿದರೆ ತಕ್ಕಮಟ್ಟಿಗೆ ಸ್ಥಿತಿವಂತರಿರಬಹುದು. ಅವಳು ಇಷ್ಪಪಡುವುದಾದರೆ ಅವನನ್ನೇ ವಿವಾಹವಾಗಲಿ. ಇನ್ನು ತಾವು ಹೇಗೋ ಕಾಲ ತಳ್ಳಿದರಾಯಿತು.’

ದಿನಗಳು ಉರುಳುತ್ತಿದ್ದವು. ಯಾರಲ್ಲೂ ಯಾವುದೇ ಬದಲಾವಣೆ ಇಲ್ಲ. ಇವನೊಬ್ಬ ಮಾತ್ರ ಚಿಂತಿಸಿ ಚಿಂತಿಸಿ ಹಣ್ಣಾಗುತ್ತಿದ್ದಾನೆ. `ತಾನು ಕೈಲಾಗದವನು ಎಂದು ಇವರೆಲ್ಲಾ ತನ್ನಿಂದ ಏನನ್ನಾದರೂ ಮುಚ್ಚಿಡುತ್ತಿದ್ದಾರಾ?’ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಆಗೆಲ್ಲಾ `ಏನು ಹೆಂಗಸರೋ… ಸ್ವಲ್ಪ ಲೋಕಜ್ಞಾನವಿಲ್ಲ,’ ಮನದಲ್ಲೇ ಬೈದುಕೊಳ್ಳುತ್ತಾನೆ. ಒಳನೋಟ ಹೆಚ್ಚಾಗುತ್ತಿದ್ದಂತೆ ನಿರ್ಧಾರವೊಂದು ಗಟ್ಟಿಯಾಯಿತು ಅವನಲ್ಲಿ.

“ಗುಡ್‌ನೈಟ್‌ ಅಪ್ಪಾ,” ಬಾಗಿಲು ತೆರೆದ ಶ್ರೀಧರನಿಗೆ ವಿಷ್‌ ಮಾಡಿ ಒಳನಡೆದವಳನ್ನು ಅವನ ಸ್ವರ ಹಿಂಬಾಲಿಸಿತು.

“ಆ ಹುಡುಗ ಯಾರಮ್ಮಾ?”

“ಯಾರಪ್ಪ?”

“ಅದೇ ದಿನಾ ನಿನ್ನ ಕರ್ಕೊಂಡು ಬರ್ತಾನಲ್ಲಾ…”

“ಓ ಅವರಾ, ನನ್ನ ಬಾಸ್‌ ಮಗ.” ಮುಂದೆ ತಂದೆ ಮಾತನಾಡದುದನ್ನು ಕಂಡು ಅವಳು ರೂಮಿನ ಕಡೆ ಸರಿದಳು.

“ನೀನು ಅವನನ್ನು ಮದುವೆ ಆಗ್ಬೇಕೂಂತಿದ್ದೀಯೇನಮ್ಮಾ?” ಹಿಂದಿನಿಂದ ಮಾತೊಂದು ತೂರಿಬಂತು. ವನಿತಾ ಗಕ್ಕನೆ ತಿರುಗಿ ನಿಂತಳು.

“ಯಾಕಪ್ಪ, ಹಾಗೆ ಕೇಳ್ತಿದ್ದೀರಿ?”

“ಏನಿಲ್ಲ…. ಹೀಗೆ….”

“ಇದು ಖಂಡಿತಾ ನಿಮ್ಮ ಯೋಚನೆ ಅಲ್ಲಪ್ಪಾ!”

ಅವಳು ತನ್ನ ಮೇಲಿಟ್ಟಿದ್ದ ಭರವಸೆಯನ್ನು ಕಂಡು ಮೂಕನಾದ. ಅವನು ಎಚ್ಚೆತ್ತುಕೊಳ್ಳುವ ವೇಳೆಗೆ ಅವಳು ಒಳಗೆ ಸರಿದಾಗಿತ್ತು.

“ನೋಡಿದ್ರಾ, ನಮ್ಮ ವನಿತಾದು ಎಷ್ಟು ಒಳ್ಳೆ ಮನಸ್ಸು,” ಸಡಗರದಿಂದ ಅವನ ರೂಮನ್ನು ಪ್ರವೇಶಿಸಿದಳು ಮಾಲಿನಿ. ಶ್ರೀಧರ ಏನೂ ಮಾತಾಡದೆ ಅವಳ ಮುಖ ನೋಡಿದ.

“ಬೆಟ್ಟದಷ್ಟು ಕೆಲಸ ಇದೆ. ಬೇಗ ಏಳಿ, ಸಂಜೆ ನಮ್ಮ ಸುನೀನ ನೋಡೋಕ್ಕೆ ಯಾರೋ ಬರ್ತಾರಂತೆ!”

“ಯಾರು ಹೇಳಿದ್ದು?”

“ಇನ್ಯಾರು? ನಮ್ಮ ವನಿತಾ,” ಬಂದಷ್ಟೇ ಸಡಗರದಿಂದ ಹೊರನಡೆದಳು ಮಾಲಿನಿ.

`ತಾನು ಅವಳ ಮದುವೆ ಬಗ್ಗೆ ಕೇಳಿದರೆ ಇವಳು ತಂಗಿಯ ಮದುವೆ ಬಗ್ಗೆ ಹೇಳ್ತಿದ್ದಾಳಲ್ಲ!’ ಶ್ರೀಧರ ಅಯೋಮಯಗೊಂಡ.

ಸಂಜೆ ತನ್ನ ಜೊತೆಯಲ್ಲೇ ಬಂದ ಯುವಕನನ್ನು ಎಲ್ಲರಿಗೂ ಪರಿಚಯಿಸಿದಳು ವನಿತಾ, “ಇವರು ವಿವೇಕ್‌, ನಾನು ಸಂಜೆ ಹೊತ್ತು ಪಾರ್ಟ್‌ ಟೈಂ ಕೆಲಸ ಮಾಡೋದು ಇವರ ಆಫೀಸ್‌ನಲ್ಲೇ.”

ಮಾಲಿನಿ ಭಾವಿ ಅಳಿಯನಿಗೆ ಉಪಚಾರ ಮಾಡುವ ಸಂಭ್ರಮದಲ್ಲಿದ್ದರೆ ಸುನೀತಾ, ವಿವೇಕ್‌ ಕಣ್ಣುಗಳಲ್ಲೇ ಸಂಭಾಷಣೆ ನಡೆಸಿದ್ದರು. ಶ್ರೀಧರ ಇಂಗು ತಿಂದ ಮಂಗನಂತೆ, ಮಗಳ ಮನಸ್ಸು ಅರ್ಥವಾಗದವನಂತೆ ಬೆಪ್ಪಾಗಿ ಕುಳಿತಿದ್ದ.

ಅಂದು ರಾತ್ರಿ ಶ್ರೀಧರ, “ಅಲ್ಲಮ್ಮಾ, ನೀನು ಏನು ಮಾಡ್ತಾ ಇದ್ದೀಯೋ ನನಗೊಂದು ಅರ್ಥ ಆಗ್ತಾ ಇಲ್ಲ. ಪ್ರತಿದಿನ ಅವನ ಜೊತೆ ಬರ್ತಾ ಇದ್ದವಳು ನೀನು. ಅದರಿಂದ ಎಷ್ಟು ಜನರ ಬಾಯಿಗೆ ಆಹಾರ ಆಗಿದ್ದಿ ಅನ್ನೋದು ಬಹುಶಃ ನಿನಗೆ ಗೊತ್ತಿಲ್ಲ. ಈ ದಿನ ನೋಡಿದರೆ, ಅವನು ನಿನ್ನ ತಂಗೀನ ನೋಡೊಕ್ಕೆ ಬಂದಿದ್ದಾನೆ. ಏನಮ್ಮಾ ಇದೆಲ್ಲಾ?” ಅಯೋಮಯನಾಗಿ ನುಡಿದ.

“ಅಪ್ಪಾ, ನನಗೆ ಅವರಿವರ ಮಾತು ಬೇಡ. ನೀವೇನಂದ್ಕೋಂಡಿದ್ರಿ ಅದು ಹೇಳಿ,” ಮಗಳು ನೇರವಾಗಿ ಪ್ರಶ್ನಿಸಿದಳು.

“ಅವರಿವರ ಮಾತು ಕೇಳಿದಾಗ ನನಗೆ ಬೇಸರವಾದದ್ದು ನಿಜ. ನಿನ್ನ ಮೇಲೆ ಕೋಪ ಬಂದದ್ದು ನಿಜ. ಆದರೂ ಹುಡುಗನ್ನ ನೋಡಿದ ಮೇಲೆ ನೀನು  ಇಷ್ಟಪಡುವುದಾದರೆ ಯಾಕಾಗಬಾರದು ಅಂದುಕೊಂಡೆ.”

“ಅಂದರೆ ನಿಮಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ.”

“ಅಲ್ಲಮ್ಮ … ಅದು ಹಾಗಲ್ಲ…..”

“ನೋಡಪ್ಪಾ, ವಿವೇಕ್‌ ನನಗೆ ಬಾಸ್‌ ಮಗ ಅಷ್ಟೇ. ಅವರ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ಮೆಲೆಯೇ ಅವನು ನನಗೆ ಎಷ್ಟೋ ಸಹಾಯ ಮಾಡಿದ್ದಾನೆ. ಪ್ರೀತಿ ಅಂತಲ್ಲ, ನನ್ನ ಕಥೆ ಕೇಳಿ ಕರುಣೆಯಿಂದ. ಅವನ ಒಳ್ಳೆಯತನ ನೋಡಿದ ದಿನಾನೇ ನಾನು ನಿರ್ಧರಿಸಿದ್ದೆ ನಮ್ಮ ಸುನೀಗೆ ಇವನೇ ತಕ್ಕ ಜೋಡಿ ಅಂತ. ಅವನಿಗೂ ಕೇಳಿದ್ದೆ. ಅವನ ಒಪ್ಪಿಗೆ ಸಿಕ್ಕಿದ್ಮೆಲೇನೆ ನಾನು ಅವನ ಜೊತೆ ಕಾರಲ್ಲಿ ಬರೋಕ್ಕೆ ಒಪ್ಪಿದ್ದು.”

ವನಿತಾ ಅವನ ಪಕ್ಕದಲ್ಲಿ ಬಂದು ಕುಳಿತಳು. “ನಾನು ಕಾರಲ್ಲಿ ಬಂದ ಮೊದಲ ದಿನಾನೇ ಅಮ್ಮ ಇದರ ಬಗ್ಗೆ ಕೇಳಿದ್ದರಿಂದ ನಾನು ಎಲ್ಲಾ ಅವಳಿಗೆ ಹೇಳಿದೆ. ನೀವು ನನ್ನನ್ನು ಏನೂ ಕೇಳದೆ ಇರೋದು ನೋಡಿ, ನಿಮಗೆ ನನ್ನಲ್ಲಿ, ನನ್ನ ಮಾತಿನಲ್ಲಿ ಎಷ್ಟು ನಂಬಿಕೆ. ಅಮ್ಮನಿಗೆ ನನ್ನಲ್ಲಿ ನಂಬಿಕೆ ಇಲ್ಲದೆ ಇದ್ದಿದ್ರಿಂದಾನೇ ನನ್ನ ಪ್ರಶ್ನಿಸಿದಳು, ಅಂದ್ಕೊಂಡೆ. ಅಷ್ಟೇ ಅಲ್ಲದೆ ನಿಮಗೆ ಹೇಳಬಾರದೂಂತಲ್ಲ. ಈಗ ಸಮಯ ಬಂತು ನೋಡಿ.”

ಮಗಳು ವಿವರಿಸುತ್ತಾ ಹೋದಂತೆ ಅವನು ಸ್ತಂಭಿತನಾಗಿ ಕುಳಿತ, `ಅವರಿವರ ಮಾತಿಗೆ ತಲೆ ಕೆಡಿಸಿಕೊಂಡು ಅನಗತ್ಯವಾಗಿ ತಾನೆಷ್ಟು ತೊಳಲಾಡಿದೆ. ಇವಳ ಮೇಲೂ ಸಂದೇಹಪಟ್ಟೆ.’ ಅವನ ಅನುಮಾನ ತೊಲಗಿ ಹೋಗಿ ಮನಸ್ಸು ನಿರಾಳವಾಗುತ್ತಿದ್ದಂತೆ ನಾಚಿಕೆ ಆ ಸ್ಥಾನವನ್ನು ತುಂಬತೊಡಗಿತು.

`ಅಂಗವಿಕಲೆಯಾದರೇನಂತೆ? ತನ್ನ ಕಾಲ ಮೇಲೆ ತಾನು ನಿಂತಿದ್ದಲ್ಲದೆ, ನನ್ನ ಜವಾಬ್ದಾರಿಯನ್ನೂ ತಾನೇ ಹೊತ್ತು ತಂಗಿಗೆ ಮದುವೆ ಮಾಡಿಸುತ್ತಿದ್ದಾಳೆ. ಇಂತಹ ಮಗಳಿರಬೇಕಾದರೆ ಮಗನ ಚಿಂತೆ ಏತಕ್ಕೆ? ನನ್ನ ಮಗಳು ಅಪ್ಪಟ ಚಿನ್ನ!’ ಶ್ರೀಧರ ಹೆಮ್ಮೆಯಿಂದ ಬೀಗಿದ.

ಸಂತೋಷ, ಮೆಚ್ಚುಗೆಗಳ ಭಾವಸಂಗಮದಲ್ಲಿ ಅವನ ಮನ ಪಿಸು ನುಡಿಯಿತು, “ಅಬ್ಬಾ, ಹೆಂಗಸರೇ ಇಷ್ಟು… ಪ್ರಚಂಡರು!’

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ