ಮಕ್ಕಳು ಶಾಲೆಗೆ ಮತ್ತು ಪತಿ ಆಫೀಸ್‌ಗೆ ತೆರಳಿದ ನಂತರ ನೀವು ಮನೆಗೆಲಸದಲ್ಲಿ ತೊಡಗಿಸಿಕೊಳ್ಳುವಿರಿ. ಹೇಗೆ ಸಮಯ ಸರಿದು ಸಾಯಂಕಾಲವಾಗುವುದೆಂದು ತಿಳಿಯುವುದೇ ಇಲ್ಲ. ಇದು ಡೇಲಿ ರೊಟೀನ್‌ ಆಗಿಬಿಡುತ್ತದೆ. ಈ ಮಧ್ಯೆ ನಮ್ಮ ಸ್ಪೆಷಲ್ ಡೇಸ್‌ ಸಾಗಿ ಹೋಗುವುದು ನಿಮ್ಮ ಅರಿವಿಗೇ ಬರುವುದಿಲ್ಲ. ಇದು ಸರಿಯಲ್ಲ. ಹೊಸ ವರ್ಷದಲ್ಲಿ ಹೊಸ ಉತ್ಸಾಹದೊಂದಿಗೆ ಕೊಂಚ ಸಮಯವನ್ನು ನಿಮಗಾಗಿ ಮೀಸಲಿಡಿ. ಡೇಲಿ ಲೈಫ್‌ನಲ್ಲಿ ಆಗಾಗ ಸೆಲೆಬ್ರೇಶನ್‌ಗಳನ್ನು ಮಾಡುತ್ತಿರಿ. ಅದು ಹೇಗೆಂದು ತಿಳಿಯೋಣ ಬನ್ನಿರಿ :

ವೆಡ್ಡಿಂಗ್‌ ಆ್ಯನಿವರ್ಸರಿ ಅಥವಾ ಬರ್ತ್‌ಡೇ

ಎಲ್ಲ ಪತಿಪತ್ನಿಯರಿಗೂ ವೆಡ್ಡಿಂಗ್‌ ಆನಿವರ್ಸರಿಯು ಒಂದು ಮಹತ್ವಪೂರ್ಣ ದಿನವಾಗಿರುತ್ತದೆ. ನಿಮ್ಮ ವಿವಾಹ ವಾರ್ಷಿಕೋತ್ಸವ ಹತ್ತಿರದಲ್ಲಿದ್ದರೆ ಅದನ್ನು ಸೆಲೆಬ್ರೇಟ್‌ ಮಾಡಲು ಉದ್ಯುಕ್ತರಾಗಿ, ಆ ದಿನವನ್ನು ಚೆನ್ನಾಗಿ ಎಂಜಾಯ್‌ ಮಾಡಲಾಗುವಂತೆ ವಿಶೇಷವಾಗಿ ಪ್ಲಾನಿಂಗ್‌ ಮಾಡಿ. ನಿಮ್ಮ ಪ್ರೀತಿಯ ಬಾಳ ಸಂಗಾತಿಗಾಗಿ ಈ ಒಂದು ದಿನವನ್ನು ವಿಶಿಷ್ಟವಾಗಿ ರೂಪಿಸಿದರೆ ಅವರಿಗೆ ಅದೆಷ್ಟು ಸಂತೋಷವಾಗುವುದೆಂದು ಯೋಚಿಸಿ. ಅವರ ಸಂತೋಷವನ್ನು ಕಂಡು ನಿಮಗೂ ಸಂತೋಷವಾಗುವುದರಲ್ಲಿ ಸಂಶಯವಿಲ್ಲ.

ಇಲ್ಲಿವೆ ಅದಕ್ಕಾಗಿ ಕೆಲವು ಟಿಪ್ಸ್

ನಿಮ್ಮ ವಿವಾಹ ವಾರ್ಷಿಕೋತ್ಸವವನ್ನು ಚೆನ್ನಾಗಿ ಸೆಲೆಬ್ರೇಟ್‌ ಮಾಡಲು ಬಯಸುವಿರಾದರೆ ಅದಕ್ಕಾಗಿ 25 ವರ್ಷದವರೆಗೂ ಕಾಯುವಿರೇಕೆ? 5ನೇ, 10ನೇ, 15ನೇ ಅಥವಾ 20ನೇ ವಾರ್ಷಿಕೋತ್ಸವ ಹತ್ತಿರ ಇರುವುದಾದರೆ ಅದನ್ನೇ ಆಚರಿಸಿ ಸ್ಮರಣೀಯವಾಗಿಸಬಹುದಲ್ಲವೇ? ಅದಕ್ಕಾಗಿ ಕೊಂಚ ಹಣ ವೆಚ್ಚವಾಗುದೆಂಬುದು ನಿಜ. ನಿಮ್ಮ ಆಪ್ತ ಬಂಧುಮಿತ್ರರನ್ನು ಆಹ್ವಾನಿಸಿ ಪಾರ್ಟಿಗೆ ಏರ್ಪಾಟು ಮಾಡಿ. ಹೊರಗೆ ಪಾರ್ಟಿ ಮಾಡಲು ಇಷ್ಟವಿಲ್ಲದಿದ್ದರೆ ಮನೆಯಲ್ಲಿಯೇ ಏರ್ಪಡಿಸಿ ಎಂಜಾಯ್‌ ಮಾಡಿ. ಇದರಿಂದ ಹಣದ ಉಳಿತಾಯ ಆಗುವುದು. ಇದರ ಎಲ್ಲ ಜವಾಬ್ದಾರಿಯನ್ನು ನೀವೊಬ್ಬರೇ ಹೊರಬೇಡಿ. ನಿಮ್ಮ ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರನ್ನೂ ಇದರಲ್ಲಿ ಸೇರಿಸಿಕೊಳ್ಳಿ. ಇದು ನಿಮಗೆ ವಿಶೇಷ ದಿನವಾದರೂ ಅವರಿಗೂ ಸಂತೋಷದ ದಿನವೇ.

ಈ ದಿನವನ್ನು ನೀವಷ್ಟೇ ಸೆಲೆಬ್ರೇಟ್‌ ಮಾಡಲು ಬಯಸುವಿರಾದರೆ ನಿಮ್ಮ ಮೆಚ್ಚಿನ ಮೆನುವನ್ನು ಪಟ್ಟಿ ಮಾಡಿ. ಅದರಂತೆ ಹೊರಗಿನಿಂದ ಆರ್ಡರ್‌ ಮಾಡಿ ತರಿಸಿ. ನಿಮ್ಮ ಪತಿಗೆ ಸರ್‌ಪ್ರೈಸ್‌ ಮಾಡಬಹುದು ಅಥವಾ ನೀವೇ ಅವರ ಜೊತೆಗೂಡಿ ತಯಾರಿಸುತ್ತಾ ಅವರೊಡನೆ ಕಾಲ ಕಳೆಯಬಹುದು. ಏನೇ ಆಗಲಿ, ವೆಡ್ಡಿಂಗ್‌ ಕೇಕ್‌ ತರಲು ಮರೆಯದಿರಿ. ಡಿನ್ನರ್‌ಗೆ ಮೊದಲು ಕೇಕ್‌ ಕತ್ತರಿಸುತ್ತಾ ನಿಮ್ಮ ವಿವಾಹದ ವಿಶೇಷ ದಿನವನ್ನು ವಿಶಿಷ್ಟವಾಗಿ ಆಚರಿಸಿ.

ಈ ದಿನದಲ್ಲಿ ನೀವು ಬೇರೇನನ್ನೂ ಮಾಡದೆ ಪರಸ್ಪರ ಜೊತೆಯಲ್ಲಿಟ್ಟುಕೊಂಡು ನಿಮ್ಮ ವೆಡ್ಡಿಂಗ್‌ ಆಲ್ಬಮ್ ಮತ್ತು ವೀಡಿಯೋಗಳನ್ನು ನೋಡುತ್ತಾ ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳಿ. ಚಿಕ್ಕಪುಟ್ಟ ಸರ್‌ಪ್ರೈಸ್‌ ನೋಡುತ್ತಾ ಸ್ಪೆಷಲ್ ಫೀಲಿಂಗ್‌ ಪಡೆಯುವಿರಿ. ವರ್ಷಗಳಿಂದಲೂ ಹೇಳಿಕೊಳ್ಳದಿದ್ದ ಫೀಲಿಂಗ್‌ಗಳನ್ನು ಪರಸ್ಪರ ಹಂಚಿಕೊಳ್ಳಿ.

ಒಂದು ಸರ್‌ಪ್ರೈಸ್‌ ಟ್ರಿಪ್‌ ಪ್ಲಾನ್‌ ಮಾಡಬಹುದು. ಸಾಧ್ಯವಾದರೆ ಮಕ್ಕಳನ್ನು ಯಾವುದಾದರೂ ಬಂಧುಗಳೊಂದಿಗೆ ಬಿಟ್ಟು ಹೋಗಲು ಪ್ರಯತ್ನಿಸಿ. ಹೇಗಾದರೂ, ನೀವಿಬ್ಬರು ಜೊತೆಯಲ್ಲಿ ಕಾಲ ಕಳೆಯಲು ಅನುಕೂಲವಾಗುವಂತಿರಲಿ.

ಲವ್ ಸ್ಟೋರಿ ಥೀಮ್ ನ ಫೋಟೊ ಶೂಟ್‌ ಮಾಡಿ. ಇಂದಿನ ದಿನಗಳಲ್ಲಿ ಎಲ್ಲೆಡೆಯೂ ಪ್ರೊಫೆಶನಲ್ ಫೋಟೋಗ್ರಾಫರ್ಸ್  ದೊರೆಯುವುದರಿಂದ ನಿಮ್ಮ ಈ ದಿನವನ್ನು ಸ್ಮರಣೀಯವಾಗಿಸಿಕೊಳ್ಳಿ.

ನಿಮ್ಮ ಸಂಗಾತಿಗೆ ಮೆಚ್ಚುಗೆಯಾಗುವಂತಹ ಉಡುಗೊರೆ ನೀಡಿ. ಉಡುಗೊರೆ ಪಡೆದಾಗ ಅದರ ಬೆಲೆಯನ್ನು ಗಮನಿಸಲು ಹೋಗದೆ ಅದರ ಹಿಂದಿನ ಭಾವನೆಗಳನ್ನು ಗುರುತಿಸಿ.

ಇದೇ ರೀತಿ ನಿಮ್ಮ ಸಂಗಾತಿಯ ಬರ್ತ್‌ಡೇ ಇದ್ದರೆ, ಅವರು ಆ ದಿನವನ್ನು ಎಂದೂ ಮರೆಯದಂತೆ ಸೆಲೆಬ್ರೇಟ್‌ ಮಾಡಿ. ಅವರು ತಮ್ಮಿಷ್ಟದಂತೆ ಇರಲು ಅನುವು ಮಾಡಿಕೊಡಿ. ಅವರು ತಮ್ಮ ಫ್ಯಾಮಿಲಿಯೊಂದಿಗಿರಲು ಇಷ್ಟಪಟ್ಟರೆ ಅದಕ್ಕಾಗಿ ಒಂದು ಸರ್‌ಪ್ರೈಸ್‌ ಪಾರ್ಟಿ ಏರ್ಪಾಟು ಮಾಡಿ. ಅವರ ಹಳೆಯ ಗೆಳೆಯರನ್ನು ಒಟ್ಟುಗೂಡಿಸಿ ಏನಾದರೂ ಪ್ಲಾನ್‌ ಮಾಡಿ. ಯಾವುದಾದರೂ ರೊಮ್ಯಾಂಟಿಕ್‌ ಮೂವಿ ನೋಡಿ ಮತ್ತು ಸ್ಪೆಷಲ್ ಕ್ಯಾಂಡಲ್ ಲೈಟ್‌ ಡಿನ್ನರ್‌ನ್ನು ಎಂಜಾಯ್‌ ಮಾಡಿ. ಅವರು ಬಹಳ ಕಾಲದಿಂದಲೂ ಬಯಸುತ್ತಿದ್ದಂತಹ ಉಡುಗೊರೆ ನೀಡಿ. ಹೀಗೆ ಸಂತಸ ತರುವಂತಹ ಚಿಕ್ಕಪುಟ್ಟ ಸಂದರ್ಭಗಳನ್ನು ಹುಡುಕಿ ಸಂಗಾತಿಯ ಈ ವಿಶೇಷ ದಿನವನ್ನು ಸೆಲೆಬ್ರೇಟ್‌ ಮಾಡಿ.

ಮಕ್ಕಳ ಸಫಲತೆಯ ಸೆಲೆಬ್ರೇಶನ್

ಪರೀಕ್ಷಾ ಫಲಿತಾಂಶ ಬಂದಾಗ ಮಕ್ಕಳು ತಮಗೆ ಬೇಕಾದ ಗಿಫ್ಟ್ ಪಡೆದುಕೊಳ್ಳುತ್ತಾರೆ. ಜೊತೆಗೆ  ತಮ್ಮ ಗೆಳೆಯರೊಂದಿಗೆ ಪಾರ್ಟಿಯನ್ನೂ ಮಾಡುತ್ತಾರೆ. ನಮ್ಮಲ್ಲಿ  ಕೆಲವು ತಂದೆ ತಾಯಿಯರು ಮಕ್ಕಳಿಗೆ ಪರೀಕ್ಷೆ ಬಂದಾಗ ತಮ್ಮದೇ ಪರೀಕ್ಷೆ ಎಂಬಂತೆ ಮಕ್ಕಳ ಜೊತೆಯಲ್ಲಿ ರಾತ್ರಿಯಲ್ಲಿ ಎದ್ದು ಕುಳಿತಿರುತ್ತಾರೆ. ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದುಕೊಂಡು ತೇರ್ಗಡೆಯಾದಾಗ ಅಥವಾ ಅವರಿಗೆ ಒಳ್ಳೆಯ ಉದ್ಯೋಗ ದೊರಕಿದಾಗ, ಮಕ್ಕಳಿಗಾಗುವ ಸಂತೋಷಕ್ಕಿಂತ ಹೆಚ್ಚಿನ ಸಂತಸ ತಂದೆ ತಾಯಿಗಳಿಗೆ ಆಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಪಾರ್ಟಿ ಮಾಡುವರಾದರೆ, ನೀವೂ ಸಹ ಪಾರ್ಟಿ ಮಾಡಬಹುದಲ್ಲವೇ?

ನಿಮ್ಮ ಪರಿವಾರದ ಎಲ್ಲ ಸದಸ್ಯರೂ ಒಟ್ಟುಗೂಡುವಂತಹ ಒಂದು ಪಾರ್ಟಿ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಆಯಾಸವೆಲ್ಲ ದೂರವಾಗಿ ಪರಿವಾರದೊಂದಿಗೆ ಕಾಲ ಕಳೆಯಲು ಅವಕಾಶ ದೊರೆಯುವುದು.

ಮಕ್ಕಳ ಸಫಲತೆಗಾಗಿ ಗಿಫ್ಟ್ ನೀಡುವಂತಿದ್ದರೆ, ನಿಮಗಾಗಿಯೂ ಒಂದು ಗಿಫ್ಟ್ ಅವಶ್ಯವಾಗಿ ಕೊಳ್ಳಿರಿ. ಏಕೆಂದರೆ ಇದು ನಿಮ್ಮ ಅಚೀವ್ ಮೆಂಟ್‌ ಸಹ ಆಗಿದೆ.

ಗೃಹಿಣಿಯ ಔಟ್‌ಡೋರ್‌ ಸೆಲೆಬ್ರೇಶನ್‌

ನಿಮ್ಮ ಕುಟುಂಬದಲ್ಲಿ ಯಾವುದಾದರೂ ಮದುವೆ ಅಥವಾ ಶುಭ ಕಾರ್ಯ ನೆರವೇರಿತೇ? ಯಾವುದೇ  ಸಮಾರಂಭವಾಗಲಿ, ಅದರ ಜವಾಬ್ದಾರಿಯೆಲ್ಲ ಗೃಹಿಣಿಯದೇ ಆಗಿರುತ್ತದೆ. ಅವಳು ಕೆಲಸ ಕಾರ್ಯಗಳನ್ನು ಹಂಚಿಕೊಟ್ಟಿದ್ದರೂ ಸಹ ಎಲ್ಲ ಕಡೆಯೂ ಗಮನವಿರಿಸಬೇಕಾಗುತ್ತದೆ. ಹೀಗಾಗಿ, ಮನೆಯ ಯಾವುದೇ ಸಮಾರಂಭದ ಬಳಿಕ ಗೃಹಿಣಿಯು ಸಾಕಷ್ಟು ದಣಿದಿರುತ್ತಾಳೆ ಮತ್ತು ಅವಳಿಗೆ ರಿಲ್ಯಾಕ್ಸೇಶನ್‌ನ ಅಗತ್ಯವಿರುತ್ತದೆ. ಇದಕ್ಕಾಗಿ ನೀವು ನಿಮ್ಮ ಗೆಳತಿಯರೊಂದಿಗೆ ಔಟ್‌ಡೋರ್‌ ಪಾರ್ಟಿ ಮಾಡಬಹುದಲ್ಲವೇ?

ಈ ಬಗ್ಗೆ ಇಲ್ಲಿದೆ ನಿಮಗೆ ಕೆಲವು ಟಿಪ್ಸ್ :

ಇದು ಲೇಡೀಸ್‌ ಔಟ್‌ಡೋರ್‌ನ ಸಂದರ್ಭ, ಅಂದರೆ ನಿಮ್ಮ ಪತಿ ಮತ್ತು ಮಕ್ಕಳಿಂದ ದೂರದಲ್ಲಿ ನಡೆಸುವ ಪಾರ್ಟಿ, ನಿಮ್ಮ ಗ್ಯಾಂಗ್‌ನ್ನು ಕರೆದುಕೊಂಡು ಪಾರ್ಟಿಗಾಗಿ ಹೊರಡಿರಿ. ಆಗ ನಿಮಗೆ ಕಾಲೇಜಿನ ಮಜಾ ದಿನಗಳ ನೆನಪಾಗುವುದು ಖಂಡಿತ.

ಬಹಳ ದಿನಗಳಿಂದ ನಿಮಗೆ ಯಾವುದೋ ಹಿಲ್‌ಸ್ಟೇಷನ್‌ಗೆ ಹೋಗುವ ಇಚ್ಛೆ ಇದ್ದು, ಕಾರಣಾಂತರದಿಂದ ಅದು ಮುಂದೂಡಲ್ಪಡುತ್ತಿದ್ದರೆ, ಗೆಳತಿಯರ ಜೊತೆ ಪ್ರೋಗ್ರಾಂ ಹಾಕಿ ಆ ಇಚ್ಛೆಯನ್ನು ಪೂರೈಸಿಕೊಳ್ಳಿ.

ಇತರರ ಅನುಕೂಲಗಳನ್ನು ಗಮನಿಸುವುದರ ಜೊತೆಗೆ ನಿಮ್ಮ ಬಗ್ಗೆಯೂ ಯೋಚಿಸಲು ಮರೆಯದಿರಿ ಮತ್ತು ಪ್ರತಿಕ್ಷಣವನ್ನೂ ಆನಂದಿಸುತ್ತಾ ಮಿಕ್ಕೆಲ್ಲವನ್ನೂ ಮರೆತುಬಿಡಿ.

– ಶೀಲಾ ಜೈನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ