ಹೂಕೋಸಿನ ಪಡ್ಡು
ಸಾಮಗ್ರಿ : ಅರ್ಧ ಕಪ್ (ಲೈಟ್ ಬ್ಲಾಂಚ್ಡ್) ತುರಿದ ಹೂಕೋಸು, 1-2 ಈರುಳ್ಳಿ, 2-3 ಹಸಿ ಮೆಣಸು, ಹೆಚ್ಚಿದ ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ (ಒಟ್ಟಾಗಿ ಅರ್ಧ ಕಪ್), ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, 2 ಕಪ್ ಹುಳಿ ಬಂದ ಇಡ್ಲಿ ಹಿಟ್ಟು, ತುಸು ಉಪ್ಪು, ಎಣ್ಣೆ.
ವಿಧಾನ : ಮೇಲಿನ ಎಲ್ಲಾ ಪದಾರ್ಥಗಳನ್ನು ಹೆಚ್ಚಿ ಒಂದು ಬಾಣಲೆಯಲ್ಲಿ ಎಣ್ಣೆ ಸಹಿತ ಲಘು ಬಾಡಿಸಿ. ಇದನ್ನು ಕೊ.ಸೊಪ್ಪಿನ ಜೊತೆ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಡ್ಡು ತವಾಗೆ ಎಣ್ಣೆ ಹಾಕಿ ಅರ್ಧರ್ಧ ಭಾಗ ಹಿಟ್ಟು ಹಾಕಿ ಬೇಯಿಸಿ. ಎಣ್ಣೆ ಹಾಕಿ ತಿರುವಿ ಹಾಕಬೇಕು. ಹಬೆಯಾಡುವ ಈ ಪಡ್ಡುಗಳಿಗೆ ತುಪ್ಪ ಹಾಕಿ ಟೊಮೇಟೊ ಚಟ್ನಿ ಜೊತೆ ಸವಿಯಲು ಕೊಡಿ.
ಕ್ಯಾರೆಟ್ ಸಾಟೆ
ಸಾಮಗ್ರಿ : 500 ಗ್ರಾಂ ಮಧ್ಯಮ ಆಕಾರದ ಕ್ಯಾರೆಟ್ (ಕೆಂಪು/ಕೇಸರಿ), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಾಟ್ಮಸಾಲ, ಕಸೂರಿ ಮೇಥಿ, ಇಂಗು, ನಿಂಬೆರಸ, ತುಸು ಎಣ್ಣೆ, ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಕ್ಯಾರೆಟ್ ಶುಚಿಗೊಳಿಸಿ, ಸಿಪ್ಪೆ ಹೆರೆದು, ಫಿಂಗರ್ ಚಿಪ್ಸ್ ತರಹ ಉದ್ದಕ್ಕೆ ಸೀಳಿಕೊಳ್ಳಿ. ಒಂದು ನಾನ್ಸ್ಟಿಕ್ ಪ್ಯಾನ್ನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಇಂಗಿನ ಒಗ್ಗರಣೆ ಕೊಡಿ. ಅದಕ್ಕೆ ಈ ಕ್ಯಾರೆಟ್ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ನಂತರ ಒಂದೊಂದಾಗಿ ಉಪ್ಪು, ಉಳಿದೆಲ್ಲ ಮಸಾಲೆ ಉದುರಿಸಿ. ಹೊರತೆಗೆದು ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಸವಿಯಲು ಕೊಡಿ.
ವೆಜ್ ಗೋಲ್ಡ್ ಕಾಯಿನ್
ಸಾಮಗ್ರಿ : 1 ಪ್ಯಾಕೆಟ್ ಮೊನಾಕೊ ಸಾಲ್ಟ್ ಬಿಸ್ಕೆಟ್, 1 ಕಪ್ ತುರಿದ ಹೂಕೋಸು, ಅರ್ಧ ಕಪ್ ಬೇಯಿಸಿ ಮಸೆದ ಆಲೂ, 1 ಸಣ್ಣ ಚಮಚ ಹೆಚ್ಚಿದ ಶುಂಠಿ ಹಸಿಮೆಣಸು, 2 ಈರುಳ್ಳಿ, ತುಸು ತುಪ್ಪ, ಅರಿಶಿನ, ಜೀರಿಗೆ, 4 ಎಸಳು ಬೆಳ್ಳುಳ್ಳಿ, 4 ಚಮಚ ನೈಲಾನ್ ಎಳ್ಳು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಕರಿಯಲು ರೀಫೈಂಡ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ಮಸಾಲ.
ವಿಧಾನ : ಒಂದು ನಾನ್ಸ್ಟಿಕ್ ಪ್ಯಾನ್ನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಆಮೇಲೆ ಈರುಳ್ಳಿ ಹಾಕಿ ಬಾಡಿಸಬೇಕು. ನಂತರ ಹೂಕೋಸು ಹಾಕಿ ಕೆದಕಿ ಉಪ್ಪು, ಅರಿಶಿನ ಸೇರಿಸಿ. ಕೊನೆಯಲ್ಲಿ ಮಸೆದ ಆಲೂ ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ. ಮಿಶ್ರಣ ಡ್ರೈ ಆಗಿರಲಿ. ಒಂದು ಪ್ಲೇಟ್ನಲ್ಲಿ ಎಳ್ಳು ಉದುರಿಸಿ. 2 ಬಿಸ್ಕೆಟ್ಗಳ ಮಧ್ಯೆ ಈ ಮಿಶ್ರಣವನ್ನು ಗುಂಡಗೆ ತಟ್ಟಿ, ಎಳ್ಳಿನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಡೀಪ್ಫ್ರೈ ಮಾಡಿ ಸವಿಯಲು ಕೊಡಿ.
ಹೂಕೋಸಿನ ಸ್ಪೆಷಲ್ ಕೋಫ್ತಾ
ಮೂಲ ಸಾಮಗ್ರಿ : 1 ದೊಡ್ಡ ಹೂಕೋಸು (ನೀಟಾಗಿ ತುರಿದಿಡಿ), ಅರ್ಧ ಕಪ್ ಪನೀರ್, 1 ದೊಡ್ಡ ಕಪ್ (ತುಪ್ಪದಲ್ಲಿ ಹುರಿದು) ಪುಡಿ ಮಾಡಿದ ಗೋಡಂಬಿ, ಅರ್ಧ ಕಪ್ ಕಡಲೆಹಿಟ್ಟು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಚನಾ ಮಸಾಲ, ಹೆಚ್ಚಿದ ಕೊ.ಸೊಪ್ಪು.
ಹೂರಣದ ಸಾಮಗ್ರಿ : 1 ದೊಡ್ಡ ಚಮಚ ಹೆಚ್ಚಿದ ಹಸಿ ಶುಂಠಿ ಹಸಿಮೆಣಸು, 1 ಈರುಳ್ಳಿ, ಅರ್ಧ ಕಪ್ ಈರುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಗೋಡಂಬಿ ಪುಡಿ, ಅರಿಶಿನ, ಧನಿಯಾಪುಡಿ, ಕಾಶ್ಮೀರಿ ಮಿರ್ಚ್ ಮಸಾಲ, ಅಚ್ಚ ಖಾರ, ಗರಂಮಸಾಲ, ಚಾಟ್ಮಸಾಲ, 4 ಚಮಚ ತುಪ್ಪ.
ವಿಧಾನ : ಹೂಕೋಸಿಗೆ ತುರಿದ ಪನೀರ್, ಗೋಡಂಬಿ ಪುಡಿ, ಕಡಲೆಹಿಟ್ಟು ಇತ್ಯಾದಿ ಎಲ್ಲಾ ಬೆರೆಸಿಕೊಳ್ಳಿ. ಅದೇ ಸಮಯದಲ್ಲಿ ಹೂರಣದ ಎಲ್ಲಾ ಸಾಮಗ್ರಿ ಸೇರಿಸಿ ಬೆರೆಸಿಕೊಳ್ಳಿ. ಹೂಕೋಸಿನ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ, ಮಧ್ಯೆ ಟೊಳ್ಳು ಮಾಡಿ ತುಸು ಹೂರಣ ತುಂಬಿಸಿ. ಪ್ರತಿ ಕೋಫ್ತಾವನ್ನೂ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಒಂದು ನಾನ್ಸ್ಟಿಕ್ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಒಂದೊಂದಾಗಿ ಮಸಾಲೆ, ಉಪ್ಪು ಹಾಕಿ ಕೆದಕಬೇಕು. ಅರ್ಧ ಲೋಟ ನೀರು ಬೆರೆಸಿ ಚೆನ್ನಾಗಿ ಗ್ರೇವಿ ಕುದಿಸಿರಿ. ನಂತರ ಎಲ್ಲಾ ಕೋಫ್ತಾ ಹಾಕಿ, ಮಂದ ಉರಿಯಲ್ಲಿ ನಿಧಾನವಾಗಿ (ಮುರಿಯದಂತೆ) ಕೋಫ್ತಾಗಳನ್ನು ಕೆದಕುತ್ತಾ ಗ್ರೇವಿಯಲ್ಲಿ ಕುದಿಸಿರಿ. ಗ್ರೇವಿ ಬಹುತೇಕ ಹಿಂಗಿ ಕೋಫ್ತಾದಲ್ಲಿ ಬೆರೆತಾಗ, ಇದನ್ನು ಕೆಳಗಿಳಿಸಿ ಚಿತ್ರದಲ್ಲಿರುವಂತೆ ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.
ಕ್ಯಾರೆಟ್ನಲ್ಲಿ ಸ್ಟಫ್ಡ್ ಪರೋಟ
ಮೂಲ ಸಾಮಗ್ರಿ : 2 ಕಪ್ ಗೋಧಿಹಿಟ್ಟು, ಅರ್ಧ ಸೌಟು ತುಪ್ಪ, ತುಸು ಬೆಚ್ಚಗಿನ ನೀರು, 2-2 ಚಿಟಕಿ ಉಪ್ಪು, ಓಮ.
ಹೂರಣದ ಸಾಮಗ್ರಿ : 2 ಕಪ್ ತುರಿದ ಕ್ಯಾರೆಟ್, ಅರ್ಧ ಕಪ್ ಕಡಲೆಹಿಟ್ಟು, 4 ಬೆಟ್ಟದ ನೆಲ್ಲಿಕಾಯಿ (ತುರಿದಿಡಿ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಸೋಂಪು ಪುಡಿ, ಹೆಚ್ಚಿದ ಹಸಿಮೆಣಸು, ಅರ್ಧ ಸೌಟು ರೀಫೈಂಡ್ ಎಣ್ಣೆ.
ವಿಧಾನ : ಕ್ಯಾರೆಟ್ ಚೆನ್ನಾಗಿ ಹಿಂಡಿಕೊಳ್ಳಿ. ಈ ರಸವನ್ನು ಹಿಟ್ಟು ಕಲಸಲು ಬಳಸಿ. ಕಡಲೆಹಿಟ್ಟನ್ನು ತವಾ ಮೇಲೆ ಡ್ರೈ ಆಗಿ ಹುರಿಯಿರಿ. ಇದನ್ನು ಕೆಳಗಿಳಿಸಿ ಹೂರಣದ ಎಲ್ಲಾ ಸಾಮಗ್ರಿ ಹಾಕಿ ಮಿಶ್ರಣ ಕಲಸಿಡಿ. ಗೋಧಿಹಿಟ್ಟಿಗೆ ತುಸು ಉಪ್ಪು, ಓಮ, ಬೆಚ್ಚಗಿನ ನೀರು ಬೆರೆಸಿ ಪೂರಿ ಹಿಟ್ಟಿನಂತೆ ಮೃದುವಾಗಿ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಇದನ್ನು 1 ಗಂಟೆ ಕಾಲ ನೆನೆಯಲು ಬಿಡಿ. ನಂತರ ಮತ್ತೆ ತುಪ್ಪ ಹಾಕಿ ನಾದಿಕೊಂಡು, ಸಣ್ಣ ಉಂಡೆಗಳಾಗಿಸಿ. ಇದನ್ನು ತ್ರಿಕೋನಾಕಾರದಲ್ಲಿ ಪದರ ಪದರಾಗಿ ಬರುವಂತೆ ಲಟ್ಟಿಸಿ. ಮಧ್ಯದಲ್ಲಿ 2-3 ಚಮಚ ಹೂರಣವಿರಿಸಿ, ನೀಟಾಗಿ ಮಡಿಚಿ ಮತ್ತೆ ಲಟ್ಟಿಸಿ. ನಂತರ ಬಿಸಿ ತವಾಗೆ ಹಾಕಿ, ರೀಫೈಂಡ್ ಎಣ್ಣೆ ಬಿಟ್ಟು, ಎರಡೂ ಬದಿ ಹೊಂಬಣ್ಣ ಬರುವಂತೆ ಬೇಯಿಸಿ, ನೀಟಾಗಿ ಕತ್ತರಿಸಿ, ಮೇಲೆ ತುಪ್ಪ ಹಾಕಿ ಮೊಸರು, ಉಪ್ಪಿನಕಾಯಿ ಜೊತೆ ಸವಿಯಲು ಕೊಡಿ.
ಹೂಕೋಸಿನ ಮಸಾಲೆ
ಸಾಮಗ್ರಿ : 500 ಗ್ರಾಂ ಹೂಕೋಸು (ಸಣ್ಣದಾಗಿ ಕತ್ತರಿಸಿ ಬಿಸಿ ನೀರಿಗೆ ಹಾಕಿ ಶುಚಿಗೊಳಿಸಿ), 1 ಕಪ್ ಹಸಿ ಬಟಾಣಿ, ಅರ್ಧರ್ಧ ಕಪ್ ಹೆಚ್ಚಿದ ಈರುಳ್ಳಿ, ಈರುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್, ಮೊಸರು, ತುಪ್ಪ, 1-1 ಚಮಚ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಕಾಶ್ಮೀರಿ ಮಿರ್ಚ್ ಮಸಾಲ, ಗೋಡಂಬಿ ಪುಡಿ, ಗರಂಮಸಾಲ, ಚಾಟ್ಮಸಾಲ, ಒಂದಿಷ್ಟು ಫ್ರೆಶ್ ಕ್ರೀಂ, ತುರಿದ ಕ್ಯಾರೆಟ್, ಹೆಚ್ಚಿದ ಕೊ.ಸೊಪ್ಪು. (ಹೆಚ್ಚಿದ ಈರುಳ್ಳಿ, ಬಟಾಣಿ.)
ವಿಧಾನ : ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಶುಚಿಗೊಳಿಸಿದ ಹೂಕೋಸನ್ನು ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಅದೇ ಸಮಯದಲ್ಲಿ ಮಿಕ್ಸಿಗೆ ಮೊಸರು, ಗೋಡಂಬಿ ಹಾಕಿ ನುಣ್ಣಗೆ ಮಾಡಿ. ನಂತರ 3 ಬಗೆಯ ಪೇಸ್ಟ್ ಹಾಕಿ ಕೆದಕಬೇಕು. ನಂತರ ಗೋಡಂಬಿ ಪೇಸ್ಟ್, ಟೊಮೇಟೊ ಪೇಸ್ಟ್ ಹಾಕಿ ಚೆನ್ನಾಗಿ ಕೈಯಾಡಿಸಿ. ಕೊನೆಯಲ್ಲಿ ಉಪ್ಪು, ಉಳಿದೆಲ್ಲ ಮಸಾಲೆ ಹಾಕಿ ಕೆದಕಬೇಕು. ನಂತರ ಅರ್ಧ ಕಪ್ ನೀರು ಬೆರೆಸಿ, ಗ್ರೇವಿ ಗಟ್ಟಿಯಾಗುವಂತೆ ಕುದಿಸಿ ಕೆಳಗಿಳಿಸಿ. ಇದರ ಮೇಲೆ ಫ್ರೆಶ್ ಕ್ರೀಂ, ಕೊ.ಸೊಪ್ಪು, ಕ್ಯಾರೆಟ್ ಉದುರಿಸಿ ಅಲಂಕರಿಸಿ ಸವಿಯಲು ಕೊಡಿ.
ಸ್ಪೈಸಿ ಗೋಭಿ ವಿತ್ ಗ್ರೀನ್ ಕರೀ
ಸಾಮಗ್ರಿ : 3 ಕಪ್ ತುಂಡರಿಸಿ ಶುಚಿಗೊಳಿಸಿದ ಹೂಕೋಸು, ಅರ್ಧ ಕಂತೆ ಹೆಚ್ಚಿದ ಪಾಲಕ್ಸೊಪ್ಪು, 4-5 ಹಸಿ ಮೆಣಸು, ಅರ್ಧರ್ಧ ಕಪ್ ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಹಸಿ ಶುಂಠಿ, 7-8 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಅರ್ಧ ಸೌಟು, ರೀಫೈಂಡ್ ಎಣ್ಣೆ.
ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಮಂದ ಉರಿಯಲ್ಲಿ ಹೂಕೋಸನ್ನು ಬಾಡಿಸಿ. ಅದೇ ಸಮಯದಲ್ಲಿ ಮಿಕ್ಸಿಗೆ ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ ಜೊತೆ ಎಲ್ಲಾ ಹಸಿರು ಸೊಪ್ಪು ಹಾಕಿ ನೀಟಾಗಿ ಪೇಸ್ಟ್ ಮಾಡಿ. ಇದನ್ನು ಬಾಣಲೆಗೆ ಹಾಕಿ ಬೇಗ ಬೇಗ ಕೈಯಾಡಿಸಿ. ಉಪ್ಪು ಹಾಕಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ನಿಂಬೆಹಣ್ಣು ಹಿಂಡಿಕೊಂಡು ಮಿಕ್ಸ್ ಮಾಡಿ. ಬಿಸಿ ಬಿಸಿಯಾಗಿ ರೊಟ್ಟಿ, ಚಪಾತಿ ಜೊತೆ ಸವಿಯಲು ಕೊಡಿ.
ಕ್ಯಾರೆಟ್ ಕಲಾಕಂದ್
ಸಾಮಗ್ರಿ : 300 ಗ್ರಾಂ ತುರಿದ ಕೆಂಪು ಕ್ಯಾರೆಟ್, ಅರ್ಧ ಲೀ. ಫುಲ್ ಕ್ರೀಂ ಹಾಲು, 2-3 ಚಮಚ ಹುಳಿಮೊಸರು, 2 ಚಮಚ ಕಾರ್ನ್ಫ್ಲೋರ್, 1 ಕಪ್ ಹಾಲಿನ ಪುಡಿ, ಅರ್ಧ ಸಣ್ಣ ಚಮಚ ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ, ತುಪ್ಪ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು.
ವಿಧಾನ : ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಕ್ಯಾರೆಟ್ ಹಾಕಿ ಬಾಡಿಸಿ. (ಸಣ್ಣ ಉರಿ ಇರಲಿ) ಇದನ್ನು ಒಂದು ಬದಿಗಿರಿಸಿ, ಅದೇ ಬಾಣಲೆಗೆ ಹಾಲು ಹಾಕಿ ಬಿಸಿ ಮಾಡಿ ಅರ್ಧದಷ್ಟು ಹಿಂಗುವವರೆಗೂ ಕೈಯಾಡಿಸುತ್ತಾ ಮಂದ ಉರಿಯಲ್ಲಿ ಕುದಿಸುತ್ತಿರಬೇಕು. ಅದೇ ಹಾಲಿನಲ್ಲಿ ಕಾರ್ನ್ಫ್ಲೋರ್ ಕದಡಿಕೊಂಡು ಇದಕ್ಕೆ ಬೆರೆಸಿ ಕೈಯಾಡಿಸಿ. ಆಮೇಲೆ ಮೊಸರು ಬೆರೆಸಿ. ಅದು ತುಸು ಒಡೆದಂತಾಗಲು ಕ್ಯಾರೆಟ್, ಸಕ್ಕರೆ ಹಾಕಿ ನಿಧಾನ ಕೈಯಾಡಿಸಿ. ನಂತರ ಹಾಲಿನ ಪುಡಿ ಹಾಕಿ ಕೆದಕಬೇಕು. ನಡುನಡುವೆ ತುಪ್ಪ ಬೆರುಸುತ್ತಾ ಎಲ್ಲೂ ತಳ ಹಿಡಿಯದಂತೆ ಎಚ್ಚರ ವಹಿಸಿ. ಇದೀಗ ಇಡೀ ಮಿಶ್ರಣ ಹಲ್ವಾ ಹದಕ್ಕೆ ಬಂದಿರುತ್ತದೆ. ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ಪಿಸ್ತಾ, ಏಲಕ್ಕಿ ಪುಡಿ ಸೇರಿಸಿ ಕೆಳಗಿಳಿಸಿ. ಅಗಲ ತಟ್ಟೆಗೆ ತುಪ್ಪ ಸವರಿ ಅದರ ಮೇಲೆ ಇದನ್ನು ಹರಡಿಕೊಳ್ಳಿ. ತುಸು ಆರಿದ ನಂತರ, ಚಿತ್ರದಲ್ಲಿರುವಂತೆ ನೀಟಾಗಿ ಕತ್ತರಿಸಿ ಸವಿಯಲು ಕೊಡಿ. ಗಾಳಿಯಾಡದ ಡಬ್ಬಕ್ಕೆ ತುಂಬಿಸಿ ಬೇಕಾದಾಗ ಸವಿಯಿರಿ.