ಆ್ಯಪಲ್ ಸ್ಯಾಫ್ರನ್‌ ಅಪ್‌ಸೈಡ್‌ ಡೌನ್‌ ಕೇಕ್‌

ಸ್ಯಾಫ್ರನ್‌ ಆ್ಯಪಲ್‌ಗೆ ಸಾಮಗ್ರಿ : ಕೆಸ್ಟರ್‌ ಶುಗರ್‌, ಆ್ಯಪಲ್ ಜೂಸ್‌, ಫ್ರೆಶ್‌ ಕ್ರೀಂ (ಅರ್ಧರ್ಧ ಕಪ್‌), 2-3 ಸೇಬು (ಉದ್ದಕ್ಕೆ ತುಂಡರಿಸಿ ಇಡಿ), 2 ಚಿಟಕಿ ದಾಲ್ಚಿನ್ನಿ ಪುಡಿ.

ಕೇಕ್‌ಗಾಗಿ ಸಾಮಗ್ರಿ : 1-1 ಕಪ್‌ ಸಣ್ಣ ರವೆ, ಸಿಪ್ಪೆ ಹೆರೆದು ತುರಿದ ಸೇಬು, ಫುಲ್ ಕ್ರೀಂ ಗಟ್ಟಿ ಹಾಲು, ಸಿಹಿಯಾದ ಕೆನೆ ಮೊಸರು,  ಅರ್ಧರ್ಧ ಕಪ್‌ ಮೈದಾ, ಬೆಣ್ಣೆ ಅಥವಾ ತುಪ್ಪ, ಪುಡಿ ಸಕ್ಕರೆ, ಅರ್ಧ ಸಣ್ಣ ಚಮಚ ಬೇಕಿಂಗ್‌ ಪೌಡರ್‌, ಕೇಕ್‌ ಟಿನ್ಸ್.

ವಿಧಾನ : ಸ್ಯಾಫ್ರನ್‌ ಆ್ಯಪಲ್‌ಗಾಗಿ ಮೊದಲು ಭಾರಿ ತಳ ಇರುವ ಬಾಣಲೆಯಲ್ಲಿ ತುಸು ಬೆಣ್ಣೆ ಯಾ ತುಪ್ಪ ಬಿಸಿ ಮಾಡಿ. ಇದಕ್ಕೆ ಕೆಸ್ಟರ್‌ ಶುಗರ್‌, ಹಾಲಲ್ಲಿ ನೆನೆದ ಕೇಸರಿ, ಆ್ಯಪಲ್ ಜೂಸ್‌ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ, ಸೇಬಿನ ತುಂಡು ಸೇರಿಸಿ ಕೆದಕಬೇಕು. ಅದು 2-3 ನಿಮಿಷ ಬೇಯಲಿ. ನಂತರ ಇದನ್ನು ಕೆಳಗಿಳಿಸಿ ಸೇಬಿನ ತುಂಡುಗಳನ್ನು ಬೇರ್ಪಡಿಸಿ. ಒಂದು ಗಾಜಿನ ಬಟ್ಟಲಿಗೆ ಮೊದಲು ಫ್ರೆಶ್‌ ಕ್ರೀಂ ಹರಡಿರಿ. ಅದರ ಮೇಲೆ ಈ ಮಿಶ್ರಣ ಹರಡಿ ಚೆನ್ನಾಗಿ ಬೀಟ್‌ ಮಾಡುತ್ತಾ ಬೆರೆಸಿಕೊಳ್ಳಿ. ಇದನ್ನು ನಾನ್‌ಸ್ಟಿಕ್‌ ಪ್ಯಾನಿಗೆ ರವಾನಿಸಿ, ಒಲೆಯ ಮೇಲಿರಿಸಿ ಗಟ್ಟಿ ಆಗುವವರೆಗೂ ಮಂದ ಉರಿಯಲ್ಲಿ ಕುದಿಸಬೇಕು. ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ.

ನಂತರ ಬೇರೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ರವೆ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ಇದನ್ನು ಅಗಲ ತಟ್ಟೆಗೆ ಹಾಕಿ ಆರಲು ಬಿಡಿ. ನಂತರ ಇದಕ್ಕೆ ಮೈದಾ, ತುರಿದ ಸೇಬು, ಬೆಣ್ಣೆ, ಹಾಲು, ಕೆಸ್ಟರ್‌ ಶುಗರ್‌ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಮೊಸರು ಬೇಕಿಂಗ್‌ ಪೌಡರ್‌, ಬೇಕಿಂಗ್‌ ಸೋಡ ಬೆರೆಸಿ ಈ ಮಿಶ್ರಣವನ್ನು ತುಪ್ಪ ಸವರಿದ ಕೇಕ್‌ ಟಿನ್ನುಗಳಿಗೆ ಅರ್ಧರ್ಧದಷ್ಟು  ತುಂಬಿಸಿ. ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ ಇದನ್ನಿರಿಸಿ ಅರ್ಧ ಗಂಟೆ ಕಾಲ ಹೊಂಬಣ್ಣ ಬರುವವರೆಗೂ ಹದನಾಗಿ ಬೇಕ್‌ ಮಾಡಿ. ನಂತರ ಇದನ್ನು ಹೊರತೆಗೆದು ತುಸು ಆರಲು ಬಿಡಿ. ಇದರ ಮೇಲೆ ಚಿತ್ರದಲ್ಲಿರುವಂತೆ ಸೇಬು ಜೋಡಿಸಿ, ಉಳಿದ ಕ್ರೀಂ ಮಿಶ್ರಣ ಹರಡಿಕೊಳ್ಳಿ. ಇದೀಗ ಆ್ಯಪಲ್ ಕೇಕ್‌ ಸವಿಯಲು ಸಿದ್ಧ!

ಏಪ್ರಿಕಾಟ್‌ ಪೊಮೋಗ್ರಾನೆಟ್‌ ಪರ್ಫೆಕ್ಟ್

ಸಾಮಗ್ರಿ : 20-25 ಡ್ರೈ ಏಪ್ರಿಕಾಟ್‌ (3 ಗಂಟೆ ಕಾಲ ಬಿಸಿ ಹಾಲಲ್ಲಿ ನೆನೆಹಾಕಿಡಿ), ಅರ್ಧ ಸಣ್ಣ ಚಮಚ ಏಲಕ್ಕಿ ಪುಡಿ, ತುಸು ಸೀಡ್ಲೆಸ್‌ ದಾಳಿಂಬೆ ಹರಳು, 1-1 ಕಪ್‌ ಕ್ರೀಂ, ಚೀಸ್‌, 4 ಚಮಚ ಫ್ಯಾಶನ್‌ ಫ್ರೂಟ್‌ ಸಿರಪ್‌, ಅಲಂಕರಿಸಲು ಆರೆಂಜ್‌ ಲೈಮ್ ರಿಂಡ್ಸ್.

ವಿಧಾನ : ಏಪ್ರಿಕಾಟ್‌ನ್ನು 2 ಭಾಗ  ಮಾಡಿ, ಅದರ ತಿರುಳಿನಿಂದ ಪೇಸ್ಟ್ ತಯಾರಿಸಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಈ ಪೇಸ್ಟ್, ಏಲಕ್ಕಿ ಪುಡಿ ಹಾಕಿ ಮಂದ ಉರಿಯಲ್ಲಿ ಗಟ್ಟಿ ಆಗುವವರೆಗೆ ಕೆದಕಬೇಕು. ಕೆಳಗಿಳಿಸಿ ಆರಲು ಬಿಡಿ. ನಂತರ ಇದಕ್ಕೆ ದಾಳಿಂಬೆ, ಕ್ರೀಂ, ಚೀಸ್‌, ಫ್ಯಾಶನ್‌ ಫ್ರೂಟ್‌ ಸಿರಪ್‌ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು 6 ಭಾಗ ಮಾಡಿ ಬೇರೆ ಬೇರೆ ಗ್ಲಾಸುಗಳಿಗೆ ತುಂಬಿಸಿ. ಇದರ ಮೇಲೆ ಇನ್ನಷ್ಟು ಚೀಸ್‌, ಕ್ರೀಂ ಸುರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಚಾಕಲೇಟ್‌ ಕೋಕೋನಟ್‌ ಫಜ್‌

ಸಾಮಗ್ರಿ : 2 ಕಪ್‌ ತೆಂಗಿನ ತುರಿ, 4-5 ಚಮಚ ತುಪ್ಪ, ಅರ್ಧರ್ಧ ಕಪ್‌ ಕೆಸ್ಟರ್‌ ಶುಗರ್‌, ಹಾಲು, ಫ್ರೆಶ್‌ ಕ್ರೀಂ, 1 ಕಪ್‌ ಡಾರ್ಕ್‌ ಚಾಕಲೇಟ್‌ ಚಿಪ್ಸ್, ತುಸು ಏಲಕ್ಕಿ ಪುಡಿ.

ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಮಂದ ಉರಿ ಇರಲಿ. ಇದಕ್ಕೆ ತೆಂಗಿನ ತುರಿ ಹಾಕಿ ಘಂ ಎನ್ನುವಂತೆ ಬಾಡಿಸಿ. ನಂತರ ಇದಕ್ಕೆ ಹಾಲು ಬೆರೆಸಿ, ಸಕ್ಕರೆ ಹಾಕಿ ಕೆದಕುತ್ತಾ ಅದು ಅರ್ಧದಷ್ಟು ಹಿಂಗುವಂತೆ ಮಾಡಿ. ಈ ಮಧ್ಯೆ ಮೈಕ್ರೋವೇವ್‌ನಲ್ಲಿ ಒಂದು ಬಟ್ಟಲಿಗೆ ಚಾಕಲೇಟ್‌ ಕ್ರೀಂ ಹಾಕಿ 40 ಕ್ಷಣಗಳವರೆಗೆ ಬೇಕ್‌ ಮಾಡಿ. ಹೊರಗೆ ತೆಗೆದು ಅದನ್ನು ಚೆನ್ನಾಗಿ ಬೀಟ್‌ ಮಾಡುತ್ತಾ, ಥಿಕ್‌ ಗ್ಲಾಸಿ ಮಿಶ್ರಣ ಆಗಿಸಿ. ತೆಂಗು ಬಾಡಿಸಿದ ಮೇಲೆ ಅದಕ್ಕೆ ಏಲಕ್ಕಿ ಪುಡಿ ಹಾಕಿ ಕೆದಬೇಕು. ಕೆಳಗಿಳಿಸಿ ಆರಲು ಬಿಡಿ. ನಂತರ ಅಚ್ಚುಗಳಿಗೆ ತುಪ್ಪ ಸವರಿ ಇದಕ್ಕೆ ತೆಂಗಿನ ಮಿಶ್ರಣ, ಚಾಕಲೇಟ್‌ ಮಿಶ್ರಣ ತುಂಬಿಸಿ 3-4 ಗಂಟೆ ಕಾಲ ಫ್ರೀಝರ್‌ನಲ್ಲಿರಿಸಿ. ನಂತರ ಹೊರತೆಗೆದು, ಚಿತ್ರದಲ್ಲಿರುವಂತೆ ತುಪ್ಪದಲ್ಲಿ ಹುರಿದ ಕಡಲೆಬೀಜ ಉದುರಿಸಿ ಸವಿಯಲು ಕೊಡಿ.

ಸ್ಪೆಷಲ್ ಕ್ಯಾರೆಟ್‌ ಹಲ್ವಾ

ಸಾಮಗ್ರಿ : ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ 2 ಕಪ್‌), ಅರ್ಧರ್ಧ ಕಪ್‌ ಆರೆಂಜ್‌ ಜೂಸ್‌, ತುಪ್ಪ, 10-12 ಕೆಂಪು ಕ್ಯಾರೆಟ್‌, 2 ಕಪ್‌ ಸಕ್ಕರೆ, 1 ಕಪ್‌ ಸಿಹಿ ಖೋವಾ, 1 ಲೀ. ಗಟ್ಟಿ ಹಾಲು, 1 ಸಣ್ಣ ಚಮಚ ಏಲಕ್ಕಿ ಪುಡಿ, ತುಸು ಪಚ್ಚ ಕರ್ಪೂರ.

ವಿಧಾನ : ಮೊದಲು ಕ್ಯಾರೆಟ್‌ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಮೊದಲು ಗೋಡಂಬಿ, ದ್ರಾಕ್ಷಿ ಹುರಿದು ಪಕ್ಕಕ್ಕಿಡಿ. ಇನ್ನಷ್ಟು ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಕ್ಯಾರೆಟ್‌ ಸೇರಿಸಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ನಡುನಡುವೆ ಆರೆಂಜ್‌ ಜೂಸ್‌ ಬೆರೆಸುತ್ತಾ ಬೇಯಿಸಿ. ನಂತರ ಹಾಲು ಬೆರೆಸಿ, ಸಕ್ಕರೆ ಸಮೇತ ಕೆದಕುತ್ತಾ ಅರ್ಧದಷ್ಟು ಹಿಂಗುವವರೆಗೂ ಕೈಯಾಡಿಸಿ. ನಂತರ ಮಸೆದ ಖೋವಾ, ಏಲಕ್ಕಿ, ಪಚ್ಚ ಕರ್ಪೂರ ಎಲ್ಲಾ ಸೇರಿಸಿ ತುಪ್ಪ ಹಾಕಿ ಕೆದಕುತ್ತಾ ಬೆರೆತುಕೊಳ್ಳುವಂತೆ ಮಾಡಿ. ಕೊನೆಯಲ್ಲಿ ದ್ರಾಕ್ಷಿ, ಗೋಡಂಬಿ ಸೇರಿಸಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಇದನ್ನು ಬಿಸಿ ಇರುವಾಗಲೇ ಇನ್ನಷ್ಟು ತುಪ್ಪ ಹಾಕಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ