ಇತ್ತೀಚಿನ ವರ್ಷಗಳಲ್ಲಿ ಯುವ ಜನರು ತಮ್ಮೆಲ್ಲ ಸಂಬಂಧಗಳನ್ನು ಬದಿಗೊತ್ತಿ ಗೆಳೆಯ ಗೆಳತಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಸ್ನೇಹ ಸಂಬಂಧ ಅದ್ವಿತೀಯವಾಗಿರುತ್ತದೆ ಎಂಬುದೇನೊ ನಿಜ. ಅದನ್ನು ಸರಿಯಾಗಿ ನಿಭಾಯಿಸಿದರೆ ಅದು ಜೀವನಪರ್ಯಂತ ಉಳಿಯುತ್ತದೆ. ಆದರೆ ಖೇದದ ಸಂಗತಿಯೆಂದರೆ, ನಾವು ನಮ್ಮ ಸುತ್ತಮುತ್ತ ಇರುವ ಕೆಲವು ಮುಖಗಳನ್ನು ಸ್ನೇಹಿತರನ್ನಾಗಿಸಿಕೊಳ್ಳುತ್ತಿದ್ದೇವೆ. ಅದೆಲ್ಲ ಟೈಮ್ ಪಾಸ್‌ಗಾಗಿ. ಅದರಿಂದಾಗಿ ನಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಮರೆತು, ನಮ್ಮವರನ್ನು ಬಿಟ್ಟುಕೊಡುತ್ತಿದ್ದೇವೆ.
ಅಶ್ವಿನಿ ತನ್ನ ಮಗನ ಹುಟ್ಟುಹಬ್ಬದ ಪಾರ್ಟಿಗಾಗಿ ಯಾರು ಯಾರನ್ನು ಕರೆಯಬೇಕೆಂದು ಪಟ್ಟಿ ಸಿದ್ಧಪಡಿಸುತ್ತಿದ್ದಳು. ಅವಳು ಸಿದ್ಧಪಡಿಸಿದ ಸಂಬಂಧಿಕರ ಪಟ್ಟಿ ನೋಡಿ ಮಗ, “ಅಮ್ಮಾ, ಇಷ್ಟೊಂದು ಜನರನ್ನು ಕರೆದು ಏನ್ ಮಾಡ್ತೀಯಾ? ನಾನು ಈ ಸಲ ನನ್ನ ಗೆಳೆಯರ ಜೊತೆ ಬರ್ಥ್‌ಡೇ ಆಚರಿಸಿಕೊಳ್ಳೀನಿ. ಸಂಬಂಧಿಕರು ಯಾರೂ ಬರುವುದೇ ಬೇಡ,” ಎಂದ.
“ಗೆಳೆಯರನ್ನು ನಾವು ಪ್ರತಿ ವರ್ಷ ಕರೆದೇ ಕರೆಯುತ್ತೇವೆ. ಈ ಸಲವೂ ಕರೆಯುತ್ತಿದ್ದೇವೆ. ಆದರೆ ನೀನು ಸಂಬಂಧಿಕರನ್ನು ಕರೆಯುವುದು ಬೇಡ ಅನ್ನುತ್ತಿರುವೆ ಏಕೆ?”
ಅಶ್ವಿನಿ ಆಶ್ಚರ್ಯದಿಂದ ಕೇಳಿದಳು, ಅದಕ್ಕೆ ಮಗ, “ಅಮ್ಮಾ ಆ ಸಂಬಂಧಿಕರು ನಿಮ್ಮವರು. ಅವರ ನಡುವೆ ನನಗೆ ಬೇಸರ ಅನಿಸುತ್ತೆ. ಹೀಗಾಗಿ ಈ ಸಲ ನಾನು ಕೇವಲ ಗೆಳೆಯರ ಉಪಸ್ಥಿತಿಯಲ್ಲಿ ಯಾವುದಾದರೂ ರೆಸ್ಟೋರೆಂಟ್ ಅಥವಾ ಮಾಲ್‌ನಲ್ಲಿ ಬರ್ಥ್‌ಡೇ ಆಚರಿಸಿಕೊಳ್ತೀನಿ,” ಎಂದು ವಿವರಿಸಿದ.
ಸ್ನೇಹಿತರು ನನ್ನವರು ಸಂಬಂಧಿಕರು ನಿಮ್ಮವರು ಮಗ ಸುಹಾಸನ ಬಾಯಿಂದ ಈ ತೆರನಾದ ಮಾತು ಕೇಳಿ ಅಶ್ವಿನಿಗೆ ಮಾತೇ ನಿಂತುಹೋದಂತೆ ಆಯಿತು. ಸಂಬಂಧಿಕರಂತೂ ನನಗೆ ಸಂಬಂಧಿಸಿಲ್ಲ. ನಿನಗೆ ಸಂಬಂಧಿಸಿದವರು ಎಂಬ ಮಾತು ಅವಳ ಕಿವಿಯಲ್ಲಿ ಬಹಳ ಹೊತ್ತಿನವರೆಗೂ ಗುಂಯ್‌ಗುಡುತ್ತಲೇ ಇತ್ತು. ಮಕ್ಕಳ ಪ್ರಪಂಚ ಅವರ ಸ್ನೇಹಿತರಿಗಷ್ಟೇ ಸೀಮಿತವಾಗಿಬಿಟ್ಟಿದೆಯಾ ಎಂದು ಅವಳು ಯೋಚಿಸಲಾರಂಭಿಸಿದಳು. ಮಕ್ಕಳಿಗೆ ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅತ್ತಿಗೆಯಂತಹ ಸಂಬಂಧಗಳಿಂದ ಏನೂ ಪ್ರಯೋಜನ ಇಲ್ಲವೇ? ಅವರು ನಮಗಷ್ಟೇ ಸಂಬಂಧಿಕರೇ? ಮಕ್ಕಳಿಗೆ ಏನೂ ಅಲ್ಲವೇ?
ಬೆಂಗಳೂರಿನ ನಿರ್ಮಲಾ ತನ್ನ ಮನೆಯಲ್ಲಿದ್ದ ಅಕ್ಕನ ಮಗಳು ಚಂದ್ರಿಕಾಗೆ, “ಈ ಸಲ ಹೊಸ ವರ್ಷಕ್ಕೆ ನೀನು ಅಮ್ಮನ ಮನೆಗೆ ತೀರ್ಥಹಳ್ಳಿಗೆ ಹೋಗುವ ಪ್ಲಾನ್ ಮಾಡ್ತಿದಿಯಾ ಹೇಗೆ?” ಎಂದು ಕೇಳಿದಳು. ಅದಕ್ಕೆ ಅವಳು, “ಇಲ್ಲ, ಜನವರಿ ಮೊದಲನೇ ವಾರ ನನ್ನ ಗೆಳತಿಯ ಬರ್ಥ್‌ಡೇ ಇದೆ. ಅವಳ ಹುಟ್ಟುಹಬ್ಬ ಆಚರಿಸಲು ನಾವು ಊಟಿಯ ಹೋಟೆಲ್‌ನಲ್ಲಿ ಸೇರ್ತಿದೀವಿ. ನಾನು ಹೊಸ ವರ್ಷಕ್ಕೆ ರಜೆ ತಗೊಂಬಿಟ್ರೆ, ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗಲು ರಜೆ ಸಿಗೋದಿಲ್ಲವಲ್ಲ.”
ಅಕ್ಕನ ಮಗಳು ಹೇಳಿದ ಮಾತನ್ನು ಕೇಳಿ ನಿರ್ಮಲಾಗೆ ಕೋಪವೇನೋ ಬಂತು. ಆದರೆ ಅವಳು ಏನನ್ನೂ ಮಾತನಾಡಲಿಲ್ಲ. ಅವಳಿಗೆ ತನ್ನ ಅಕ್ಕಭಾವನ ಚಿತ್ರ ಕಣ್ಮುಂದೆ ಹಾದುಹೋಯ್ತು. ಮಗಳು ಬರಬಹುದೆಂದು ಅವರು ಕಾಯುತ್ತಿದ್ದರು. ಮಗಳು ಈ ಸಲ ಮನೆಗೆ ಬರುವುದಿಲ್ಲವೆಂದು ಹೇಳಿದರೆ ಅವರಿಗೆ ಅದೆಷ್ಟು ನಿರಾಶೆ ಆಗಬಹುದು.
ವಿರೋಧಾಭಾಸ ಏಕೆ?
ಯುವ ಜನತೆಯಷ್ಟೇ ಸಂಬಂಧಗಳಿಂದ ದೂರ ಉಳಿಯುತ್ತಿಲ್ಲ. ಮಹಿಳೆಯರು ಹಾಗೂ ಪುರುಷರು ಕೂಡ ಸಂಬಂಧಗಳನ್ನು ದೂರ ಇಟ್ಟು ಸ್ನೇಹಿತ ಸ್ನೇಹಿತೆಯರಿಗೆ ಪ್ರಾಶಸ್ತ್ಯ ಕೊಟ್ಟಿದ್ದಾರೆ. ನಾನು ನೆರೆಮನೆಯರ ಮದುವೆಯ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ನಾನು ಅವರ ಗೆಳತಿಯರು ಹಾಗೂ ಪರಿಚಿತರನ್ನಷ್ಟೇ ಕಂಡೆ. ಅವರ ಸಂಬಂಧಿಕರು ಯಾರೂ ಅಲ್ಲಿ ಕಂಡು ಬರಲಿಲ್ಲ. ನಾನು ಅವರಿಗೆ ನಿಮ್ಮ ಸಂಬಂಧಿಕರೊಬ್ಬರೂ ಕಾಣ್ತಿಲ್ಲವಲ್ಲ ಎಂದು ಕೇಳಿದೆ.
ಆಗ ಆಕೆ ನಗುತ್ತಾ, “ನೀವೆಲ್ಲ ನನಗೆ ಸಂಬಂಧಿಕರಿಗಿಂತ ಕಡಿಮೆ ಅಂತ ಅನಿಸೋದೇ ಇಲ್ಲ. ನಾವೆಲ್ಲ ಸ್ನೇಹಿತರು ಒಂದೆಡೆ ಕೂಡಿ ಎಷ್ಟೊಂದು ಮಜ ಮಾಡಬಹುದು, ಖುಷಿಯಿಂದ ಟೈಮ್ ಕಳೆಯಬಹುದು. ಅದೆಲ್ಲ ಸಂಬಂಧಿಕರ ಜೊತೆ ಸಾಧ್ಯವೇ? ಅವರನ್ನೆಲ್ಲ ಕರೆದರೆ ನೂರೆಂಟು ಸಮಸ್ಯೆಗಳು. ಮೊದಲನೆಯದು ಅವರು ಬಂದು 1-2 ದಿನ ಇದ್ದರೆ ಅವರಿಗೆ ಮಲಗುವ, ತಿನ್ನುವ ವ್ಯವಸ್ಥೆ ಮಾಡಬೇಕು. ಇಡೀ ದಿನ ಏನಾದರೊಂದು ಮಾಡ್ತಾನೇ ಇರಬೇಕು. ವಿಶ್ರಾಂತಿಗೆ ಸ್ವಲ್ಪವೂ ಸಮಯ ಸಿಗುವುದಿಲ್ಲ. ಅಷ್ಟೇ ಅಲ್ಲ, ಅವರ ನಖರಾಗಳನ್ನು ಸಹಿಸಿಕೊಳ್ಳಬೇಕು….” ಎಂದಳು.
ಸ್ನೇಹಿತರಿಗೆ ಎಷ್ಟು ಮಹತ್ವ ಕೊಡಬೇಕು?
ನಾನು ಯೋಚಿಸಲಾರಂಭಿಸಿದೆ. ಇಷ್ಟೊಂದು ಖುಷಿ ಇದೆ. ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಆದರೆ ಆ ಖುಷಿಯಲ್ಲಿ ಪಾಲ್ಗೊಳ್ಳಲು ಒಬ್ಬರೇ ಒಬ್ಬರು ಅಲ್ಲಿಗೆ ಬಂದಿಲ್ಲ. ಇದೇನು ಸಂಬಂಧ? ಕುಟುಂಬದ ಸದಸ್ಯರೊಬ್ಬರು ಇರದೇ ಇದ್ದರೆ ಖುಷಿ ಅನುಭವಿಸಲು ಸಾಧ್ಯವೇ?
ಸೀಮಾ ತಮ್ಮ ಮನೆ ಆಸುಪಾಸಿನಲ್ಲಿ ಕಿಟಿ ಪಾರ್ಟಿಗೆ ಹೋಗಲಾರಂಭಿಸಿದಳು. ಅಲ್ಲಿ ಅವಳಿಗೆ ಹೊಸ ಹೊಸ ಸ್ನೇಹಿತೆಯರು ಸಿಗತೊಡಗಿದರು. ಅವರೊಂದಿಗೆ ಮಾತನಾಡಲು, ಸಮಯ ಕಳೆಯಲು ಬಹಳ ಇಷ್ಟವಾಗತೊಡಗಿತು. ಆದರೆ ಅವರು ಕೂಡ ಹಳಬರನ್ನು ಬಿಟ್ಟು ಹೊಸ ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಅದೊಂದು ದಿನ ಸೀಮಾಳ ಗೆಳತಿ ರಶ್ಮಿ ಕಿಟಿ ಪಾರ್ಟಿಗೆ ಬರಲಿಲ್ಲ. ತನ್ನ ಅತ್ತೆಗೆ ಹುಷಾರಿಲ್ಲ, ಹಾಗಾಗಿ ಬರಲು ಆಗುತ್ತಿಲ್ಲ ಎಂದು ಅವಳು ಮೆಸೇಜ್ ಕಳಿಸಿದ್ದಳು. ರಶ್ಮಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಬದಲು ಕಿಟಿ ಪಾರ್ಟಿಯಲ್ಲಿ ಅವಳ ಬಗೆಗೆ ಚರ್ಚೆ ನಡೆಯಲಾರಂಭಿಸಿತು. ರಶ್ಮಿಯ ಅತ್ತೆ ದಿನ ಅನಾರೋಗ್ಯದಿಂದ ಇರ್ತಾರೆ. ಅವರಿಗೆ ಔಷಧ ಕೊಟ್ಟು ಬರಬೇಕಿತ್ತು. ಕಿಟಿ ಪಾರ್ಟಿಗೆ ಬರದೇ ಇರಲು ಅವಳು ಕೊಟ್ಟ ನೆಪ ಇದು ಎಂದು ಎಲ್ಲರೂ ವ್ಯಂಗ್ಯವಾಡಿದರು.
ಕ್ರಮೇಣ ಅವಳ ಗಮನಕ್ಕೆ ಬಂದ ಸಂಗತಿಯೆಂದರೆ, ಕಿಟಿ ಪಾರ್ಟಿಯಲ್ಲಿ ತಮ್ಮ ಕುಟುಂಬದವರು, ಸಂಬಂಧಿಕರ ಬಗ್ಗೆ ಅದೆಷ್ಟು ಅವಹೇಳನಕಾರಿಯಾಗಿ ಮಾತಾಡುತ್ತಾರೆಂದರೆ, ಗೆಳತಿಯರಿಗಾಗಿ ನಾನು ಅತ್ತೆಗೆ ತಿಂಡಿ ಮಾಡಿ ಕೊಡುವುದನ್ನು ಬಿಟ್ಟು, ಮಾವನಿಗೆ ಔಷಧಿ ಕೊಡದೇ ಬಂದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿಮ್ಮನ್ನೆಲ್ಲ ಭೇಟಿ ಮಾಡೋಕೆ ಕುಟುಂಬದವರಿಗೆ ಸುಳ್ಳು ಹೇಳಿ ಬಂದಿರುವೆ ಎಂದೆಲ್ಲ ಹೇಳುತ್ತಾರೆ.
ನಾಣ್ಯದ ಇನ್ನೊಂದು ಮುಖ
ಸ್ನೇಹ ಬೆಳೆಸುವುದು ಅದನ್ನು ಮುಂದುವರಿಸುವುದು ಒಳ್ಳೆಯದೇ. ಆದರೆ ಸ್ನೇಹಿತರ ಮುಂದೆ ಕುಟುಂಬದವರ ಬಗ್ಗೆ ಉಪೇಕ್ಷೆ ಮಾಡುವುದು ಅವಮಾನ ಮಾಡಿ ಮಾತನಾಡುವುದು ಅತ್ಯಂತ ಅಪಾಯಕಾರಿ ಸಂಗತಿ. ನಮ್ಮ ಆಸುಪಾಸಿನಲ್ಲಿ ಸಾಕಷ್ಟು ಜನ ಗೆಳತಿಯರು ಸಿಗಬಹುದು. ಆದರೆ ಅವರಲ್ಲಿ ಒಬ್ಬರಾದರೂ ಒಳ್ಳೆಯವರಿದ್ದಾರೆಯೇ ಎಂದು ಹುಡುಕಿ ನೋಡುವುದು ಕಷ್ಟ. ಗೆಳತಿಯರ ಜೊತೆ ಕುಳಿತು ಮಾತನಾಡುವುದು, ಹರಟೆ ಹೊಡೆಯುವುದು ಬಹಳ ಖುಷಿ ಕೊಡುತ್ತದೆ. ಆದರೆ ಅವರ ಜೊತೆಗಿನ ಖುಷಿ ನಮ್ಮವರನ್ನು ದೂರ ಇಡುವಷ್ಟು ಮಹತ್ವದ್ದೇ?
ಮೊಬೈಲ್, ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ಗಳ ಮುಖಾಂತರ ಜಗತ್ತಿನ ಯಾವುದೇ ಮೂಲೆಯವರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ಹಗಲು ರಾತ್ರಿ ಅವರ ಜೊತೆ ಚಾಟ್ ಮಾಡುತ್ತಾ, ನಾವು ಅವರ ಬಹಳ ಒಳ್ಳೆಯ ಮಿತ್ರರಾಗಿದ್ದೇವೆ ಎಂದು ತಪ್ಪು ಕಲ್ಪನೆ ಮಾಡಿಕೊಳ್ಳುತ್ತೇವೆ. ಅಂತಹ ಸ್ನೇಹಿತರು ಖುಷಿಯ ಗಳಿಗೆಯಲ್ಲಿ ಸಾಕಷ್ಟು ಹತ್ತಿರವಾಗುತ್ತಾರೆ. ಆದರೆ ದುಃಖದ ಸಂದರ್ಭದಲ್ಲಿ ನನಗೀಗ ಸಮಯವಿಲ್ಲ. ನಾನು ಎಲ್ಲೋ ದೂರ ಇದ್ದೇನೆ ಎಂದು ನೆಪ ಹೇಳತೊಡಗುತ್ತಾರೆ. ನಮ್ಮವರೇ ನಮಗೆ ದುಃಖದಲ್ಲಿ ಆಗುವವರು, ಸಂಕಷ್ಟಕ್ಕೆ ಸ್ಪಂದಿಸುವವರು. ಅವರು ಯಾವಾಗ ಬರುತ್ತಾರೆ ಎಂದು ನಾವು ನಿರೀಕ್ಷಿಸುವಂತಾಗಬೇಕು.
– ಎಸ್. ಶ್ಯಾಮಲಾ