ಮನಸ್ಸು ಬಯಸಿದ ಉಡುಗೆ ಧರಿಸಿ ತನ್ನ ಮೈಮಾಟ ಪ್ರದರ್ಶಿಸಬೇಕೆಂದು ಯಾವ ಹೆಣ್ಣಿಗೆ ತಾನೇ ಇಷ್ಟವಿರುವುದಿಲ್ಲ….?
ಈ ಸ್ಮಾರ್ಟ್ ಡ್ರೆಸ್‌ಗಳ ಮುಖಾಂತರವೇ ಅವಳು ತನ್ನ ಸೌಂದರ್ಯ ಹೆಚ್ಚಿಸಿಕೊಂಡು, ಬಾಯ್‌ಫ್ರೆಂಡ್‌ನ್ನು ಆಕರ್ಷಿಸಲು ಸಾಧ್ಯ. ಹಾಗಾಗಿಯೇ ಅವಳು ತನ್ನ ಸಮವಯಸ್ಕ ಗೆಳತಿಯರು ಹಾಗೂ ನೆರೆಹೊರೆಯ ಹೆಂಗಸರ ಅಸೂಯೆಯ ಕಣ್ಣೋಟಕ್ಕೆ ಗುರಿಯಾಗುತ್ತಾಳೆ. ಪ್ರಕೃತಿ ಅಂದವಾಗಿ ರೂಪಿಸಿದ ಕಲಾಕೃತಿಯೇ ಹೆಣ್ಣು! ಹೀಗಾಗಿಯೇ ತಾನು ಮತ್ತಷ್ಟು ರೂಪವತಿಯಾಗಿ ಕಂಗೊಳಿಸಬೇಕು ಎಂದು ಬಯಸುತ್ತಾಳೆ. ಈ ಕಾರಣದಿಂದಲೇ ವಿಶ್ವಾದ್ಯಂತ ಮಾರುಕಟ್ಟೆಯಲ್ಲಿ ಸ್ತ್ರೀ ಉಡುಗೆಯಲ್ಲಿರುವ ವೈವಿಧ್ಯತೆ ಗಂಡಸರ ಉಡುಗೆಗಿಲ್ಲ.
ಮಹಿಳೆಯರು ಮನಸ್ಸು ಬಯಸಿದ ಉಡುಗೆ ಧರಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಮತ್ತೊಂದು ಮುಖ್ಯ ವಿಷಯ ನೆನಪಿಡತಕ್ಕದ್ದು ಎಂದರೆ, ಯಾವ ಡ್ರೆಸ್ ಧರಿಸುವುದರಿಂದ ತಾವು ಅದರಲ್ಲಿ ಕಂಫರ್ಟೆಬಲ್ ಕಾನ್ಛಿಡೆಂಟ್ ಎಂದು ಭಾವಿಸುತ್ತೀರೋ ಅದನ್ನು ಮಾತ್ರವೇ ಧರಿಸಬೇಕು. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಕಣ್ಣು ಕೋರೈಸುವ ಸ್ಟೈಲಿಶ್, ಗ್ಲಾಮರಸ್ ಡ್ರೆಸೆಸ್ ನಮಗೆ ಸೂಟ್ ಆಗುತ್ತದೆ ಎಂದು ಭಾವಿಸಬಾರದು. ಮಾರ್ಕೆಟ್‌ನಲ್ಲಿ ಇಂಥವನ್ನು ಕಂಡಾಗ ಹೆಂಗಸರು ಬೇಗ ಮರುಳಾಗುತ್ತಾರೆ, ಯಾವುದನ್ನು ಧರಿಸುವುದು ಬಿಡುವುದು ಎಂದು ಗೊಂದಲಗೊಳ್ಳುತ್ತಾರೆ. ಇಂಥ ಉಡುಗೆಗಳಿಂದ ತಮ್ಮ ಸ್ಮಾರ್ಟ್‌ನೆಸ್ ಹೆಚ್ಚುತ್ತದೋ ಇಲ್ಲವೋ ಅಥವಾ ತಮ್ಮ ದೇಹದ ಕುಂದುಕೊರತೆ ಎದ್ದು ಕಾಣಲಿದೆಯೋ ಎಂಬುದನ್ನೂ ಗಮನಿಸುವುದಿಲ್ಲ.
ಒಮ್ಮೊಮ್ಮೆ ಟಿವಿ ಯಾ ಪತ್ರಿಕೆಗಳ ಜಾಹೀರಾತುಗಳಲ್ಲಿ ಮಾಡೆಲ್, ಹೀರೋಯಿನ್ಸ್ ಇಂಥ ಚಿತ್ರವಿಚಿತ್ರ ಉಡುಗೆ ಧರಿಸಿರುವುದನ್ನು ನೋಡುತ್ತೇವೆ. ಕೆಲವೊಂದು ಮಾಡರ್ನ್ ಸ್ಟೈಲಿಶ್ ಆಗಿ ಅವರಿಗೆ ಬಹಳ ಶೋಭೆ ನೀಡುತ್ತಿರುತ್ತದೆ. ಒಮ್ಮೊಮ್ಮೆ ಇಂಥವರೂ ಸಹ ತಮ್ಮ ಮೈಕಟ್ಟಿಗೆ ಸೂಕ್ತ ಉಡುಗೆ ಆರಿಸದ ಕಾರಣ, ಎಲ್ಲರ ಮುಂದೆ ಸಂಕೋಚಕ್ಕೆ ಒಳಗಾಗುವ ಪ್ರಸಂಗ ಎದುರಾಗುತ್ತದೆ. ನಟಿ ಮಲೈಕಾ ಅರೋರಾ ಕ್ಯಾಟ್‌ವಾಕ್ ಮಾಡುವಾಗ, ಮೇಲ್ಫಾಗದ ಸ್ಟ್ರಾಪ್ಸ್ ಕಿತ್ತು ಹೋಗಿ ಎಲ್ಲರೆದುರು ಟಾಪ್‌ಲೆಸ್ ಆಗಬೇಕಾಯಿತು.
ಹೊಗಳಿಕೆ ಗಿಟ್ಟಿಸುವುದು ಹೇಗೆ?
ಕೆಲವು ದಿನಗಳ ಹಿಂದೆ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅದರಲ್ಲಿ ಒಬ್ಬಳು ಸೆಲೆಬ್ರಿಟಿ ತನ್ನ ಅತಿ ಟೈಟಾದ ಡ್ರೆಸ್‌ನ್ನು ಹೇಗೋ ಸಂಭಾಳಿಸುತ್ತಾ, ಇಡೀ ದೇಹದ ಉಬ್ಬು ತಗ್ಗುಗಳನ್ನು ಎಲ್ಲರ ಮುಂದೆ ಪ್ರದರ್ಶಿಸಿ ಬೀಗುತ್ತಿದ್ದಳು. ಈ ಅಟಾಟೋಪದಲ್ಲಿ ಅವಳ ಡ್ರೆಸ್‌ನ ಮುಂಭಾಗದ ಜಿಪ್ ಫಟ್ ಅಂತ ಕಿತ್ತುಹೋಗಿ….. ರಾದ್ಧಾಂತ ಎದುರಾಯಿತು. ಇದೇ ತರಹ ಒಂದು ಸಲ ಅಮಿತಾಭ್ ನಡೆಸಿಕೊಡುb ರಿಯಾಲಿಟಿ ಶೋನಲ್ಲಿ ಒಬ್ಬ ಮಹಿಳೆ ಬಂದು ಕೂರುತ್ತಾಳೆ. ಬಿಗಿಯಾದ ಉಡುಗೆ ಬಿಟ್ಟುಕೊಂಡಾಗ, ಅಮಿತಾಭ್ ಪಕ್ಕಕ್ಕೆ ಮುಖ ಸರಿಸುತ್ತಾರೆ. ಇವೆಲ್ಲ ಅವಾಂತರಗಳು ಸರಿಯಾದ ಡ್ರೆಸ್ ಆರಿಸದ ಕಾರಣ ಆಗಿರುವಂಥವು. ಇದರಿಂದ ಅವಮಾನ ಮಾತ್ರವಲ್ಲ, ಹೆಂಗಸರಿಗೆ ಬೇಕೆಂದೇ ಮಾಡಿದರೆಂಬ ಕೆಟ್ಟ ಹೆಸರೂ ಬರುತ್ತದೆ. ಮತ್ತೊಂದು ಸಲ, ಗೌಹರ್ ಖಾನ್ ತನ್ನ ಬಿಗಿಯಾದ ಡ್ರೆಸ್ ಕಾರಣ, ರಾಂಪ್ ಮೇಲೆ ಕ್ಯಾಟ್‌ವಾಕ್ ಮಾಡುವಾಗ ಹಿಂಬದಿ ಫಟ್ ಎಂದು ಹರಿಯಿತು. ಪೋಟೋಗ್ರಾಫರ್ಸ್‌ಗಂತೂ ಗಾಢ ಮಸಾಲ ಫೋಟೋಗಳು ದೊರಕಿದವು.
ಮೀಡಿಯಾ ಪರ್ಸನಾಲಿಟಿಗಳನ್ನು ಕಂಡು ಹೆಂಗಸರು ಎಷ್ಟು ಪ್ರಭಾವಿತರಾಗುತ್ತಾರೆಂದರೆ ಏನಾದರೂ ಮಾಡಿ ತಾವು ಅವರಂತೆ ರಾತ್ರೋರಾತ್ರಿ ಫೇಮಸ್ ಆಗಿಬಿಡಬೇಕೆಂದು ಬಯಸುತ್ತಾರೆ. ಆದರೆ ಇಲ್ಲಿ ಅವರು ಮಾಡುವ ದೊಡ್ಡ ಮಿಸ್ಟೇಕ್ ಎಂದರೆ, ಸಾಧಾರಣ ಹೆಂಗಸರು ಈ ಸೆಲೆಬ್ರಿಟಿಗಳ ಡ್ರೆಸ್ ಮಾತ್ರ ನೋಡುತ್ತಾರೆಯೇ ವಿನಾ ಅವರ ಸಾಧನೆಯನ್ನಲ್ಲ. ಆ ಸೆಲೆಬ್ ಎಷ್ಟು ಗಂಟೆಗಳ ಕಾಲ ಜಿಮ್ ನಲ್ಲಿ ಬೆವರು ಹರಿಸಿ, ಡಯೆಟ್ ಮಾಡಿ, ಸರ್ಜರಿಗಳಿಂದ ತನ್ನ ದೇಹವನ್ನು ಹಾಗೆ ಪರ್ಫೆಕ್ಟ್ ಮಾಡಿಕೊಂಡಿದ್ದಾಳೋ ಎಂಬುದನ್ನು ಗಮನಿಸುವುದಿಲ್ಲ. ಈ ಸಾಧಾರಣ ಮಹಿಳೆಯರು ಕುರುಡುಕುರುಡಾಗಿ ಸಾವಿರಾರು ರೂ. ಸುರಿದು ಅಂಥದ್ದೇ ಡ್ರೆಸ್ ಕೊಳ್ಳಲು ಧಾವಿಸುತ್ತಾರೆ, ಆದರೆ ತಮ್ಮ ದೇಹದ ಕುಂದುಕೊರತೆಗಳನ್ನು ನಿರ್ಲಕ್ಷಿಸುತ್ತಾರೆ.
ಸಾಧಾರಣವಾಗಿ ನೀವು ಮದುವೆ, ಪಾರ್ಟಿಗಳಲ್ಲಿ ಇಂಥ ಮಹಿಳೆಯರನ್ನು ಗಮನಿಸಿಯೇ ಇರುತ್ತೀರಿ. ಇವರುಗಳು ದುಬಾರಿ ಸ್ಲೀವ್‌ಲೆಸ್ ಗೌನ್ ಧರಿಸಿರುತ್ತಾರೆ, ಆದರೆ ಕಂಕುಳ ಭಾಗ ನೀಟಾಗಿ ಇಟ್ಟುಕೊಳ್ಳಬೇಕೆಂಬ ಪರಿಜ್ಞಾನ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಕೊಳಕಾದ ಕಂಕುಳ ಭಾಗ, ಕಪ್ಪಾದ ಕೈ, ಬೆಳ್ಳನೆ ತೋಳಿನ ಭಾಗ ಸೌಂದರ್ಯ ಹೆಚ್ಚಿಸುವ ಬದಲು ಆಭಾಸ ಹೆಚ್ಚಿಸುತ್ತದಷ್ಟೆ. ಕೆಲವು ಹೆಂಗಸರು ಶಾರ್ಟ್ ಡ್ರೆಸ್ ಏನೋ ಧರಿಸುತ್ತಾರೆ, ಆದರೆ ಅವರ ಅತಿಯಾದ ನಿತಂಬಗಳು, ಸ್ಟ್ರೆಚ್ ಮಾಕ್ಸ್ ಇತ್ಯಾದಿ ಹೊರಗಿಣುಕಿ ಹಿಂಸೆ ಎನಿಸುತ್ತದೆ.
ಮ್ಯಾಚಿಂಗ್ ಫುಟ್‌ವೇರ್
ನೀವು ಉತ್ತಮ ಡ್ರೆಸ್ ಧರಿಸಿದ್ದೇನೋ ಆಯ್ತು, ಆದರೆ ಅದಕ್ಕೆ ಹೊಂದುವ ಫುಟ್‌ವೇರ್ ಧರಿಸದೆ ಹೋದರೆ, ಎಲ್ಲ ವೇಸ್ಟ್ ಅನಿಸುತ್ತದೆ. ಪಾರ್ಟಿಯ ವಾತಾವರಣ, ಎಂಥ ಸಮಾರಂಭ, ಸಮಯ ಇತ್ಯಾದಿ ಎಲ್ಲವನ್ನೂ ಪರಿಗಣಿಸಿ ಫುಟ್‌ವೇರ್ ಆರಿಸಿ. ನೀವು ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಸಲ್ವಾರ್ ಸೂಟ್ ಧರಿಸಿದ್ದರೆ ಹೊಳೆ ಹೊಳೆಯುವ ಫುಟ್‌ವೇರ್ ಧರಿಸಬಹುದು. ನೀವು ಆಫೀಸ್‌ನಂಥ ಗಂಭೀರ ಜಾಗಕ್ಕೆ ಹೋಗಲಿದ್ದಾಗ, ಇಂಥ ಹೊಳೆಯುವ ಫುಟ್‌ವೇರ್ಸ್ ಬೇಡ. ಆಗ ನೀವು ಸೌಮ್ಯ, ಡೀಸೆಂಟ್ ಆದ ಡ್ರೆಸ್ಸಿಗೆ ಮ್ಯಾಚ್ ಆಗುವಂಥದ್ದನ್ನೇ ಆರಿಸಬೇಕು.
ಡ್ರೆಸ್ ಸೆಲೆಕ್ಷನ್
ಎಷ್ಟೋ ಸಲ ಸ್ಥೂಲ ಮಹಿಳೆಯರು ಸೀರೆ ಉಡುವಾಗ ಬೇಕೆಂದೇ ಹೊಕ್ಕುಳ ಕೆಳಗೆ ಉಡುತ್ತಾರೆ. ಇದರಿಂದ ಅಂಥವರ ಹೊಟ್ಟೆ ಮೇಲಿನ ಸ್ಟ್ರೆಚ್ ಮಾರ್ಕ್ಸ್ (ಪ್ರಸವ ಕಾಲದ) ಎದ್ದು ಕಾಣುತ್ತವೆ. ಅದು ಇವರುಟ್ಟ ಭರ್ಜರಿ ಸೀರೆ, ವ್ಯಕ್ತಿತ್ವವನ್ನು ಡಲ್ ಆಗಿಸುತ್ತದೆ. ಕೆಲವು ಮಹಿಳೆಯರು ದುಬಾರಿ ಡ್ರೆಸ್, ಮುಖಕ್ಕೆ ಭಾರಿ ಮೇಕಪ್ ಮಾಡಿರುತ್ತಾರೆ, ಆದರೆ ಅವರ ಉಗುರು ವಕ್ರಾಕಾರವಾಗಿ, ನೇಲ್‌ಪಾಲಿಶ್ ರಹಿತ ಇದ್ದರೆ, ಟೋಟಲ್ ಗೆಟಪ್ ಕೆಟ್ಟದಾಗಿರುತ್ತದೆ.
ಇದೇ ತರಹ ಕೆಲವರ ಹೈಹೀಲ್ಸ್ ನಿಂದಾಗಿ ಅವರ ಒಡೆದ ಹಿಮ್ಮಡಿ ವಿಕಾರವಾಗಿ ಕಾಣಿಸುತ್ತದೆ. ಭಾರಿ ಸ್ತನಗಳುಳ್ಳ ಮಹಿಳೆಯರು ಡೀಪ್‌ನೆಕ್ ಧರಿಸಿದರೆ, ಅವರು ಬಗ್ಗಿದಾಗೆಲ್ಲ ಎಲ್ಲರ ಗಮನ ಬೇಡದ ಕಡೆ ಹೋಗಿ ಬ್ರಾ ದರ್ಶನ ಆಗುತ್ತದೆ.
ಹುಟ್ಟಿನಿಂದಲೇ ಪ್ರತಿಯೊಬ್ಬರ ದೇಹರಚನೆ, ಮೈಕಟ್ಟು ವಿಭಿನ್ನವಾಗಿರುತ್ತದೆ. ಆದ್ದರಿಂದ ಯಾವ ಬಣ್ಣದ ಡ್ರೆಸ್ ಬೇರೆಯವರಿಗೆ ಅಚ್ಚುಕಟ್ಟಾಗಿ ಒಪ್ಪುತ್ತದೋ ಅದು ನಿಮಗೂ ಹೊಂದಲೇಬೇಕು ಅಂತೇನಿಲ್ಲ. ಕೆಲವಂತೂ ಹೋಲ್‌ಸೇಲ್ ಆಗಿ ಎಲ್ಲರಿಗೂ ಅನ್ವಯ ಆಗುವಂಥ ಬಣ್ಣ ಆಗಿರುವುದೇ ಇಲ್ಲ. ಉದಾ : ಸೂರ್ಯಕಾಂತಿ, ಹಳದಿ, ಕತ್ತಳೆ, ಡಾರ್ಕ್ ಗುಲಾಬಿ ಇತ್ಯಾದಿ. ಯಾವುದೇ ಹೊಸ ಬಣ್ಣದ ಉಡುಗೆ ಖರೀದಿಸುವ ಮುನ್ನ ಅದನ್ನು ಟ್ರಯಲ್ ರೂಮಿನಲ್ಲಿ ಧರಿಸಿ ನೋಡಿ ಪರೀಕ್ಷಿಸಿ. ಇಲ್ಲದಿದ್ದರೆ ನಿಮ್ಮ ಹಣ ದಂಡ, ನೋಡುವವರೂ ಮುಖ ಸಿಂಡರಿಸುತ್ತಾರೆ.
ಡ್ರೆಸ್ ಖರೀದಿಸುವಾಗ ಎಲ್ಲಕ್ಕೂ ಮೊದಲು ಅದು ನಿಮ್ಮ ದೇಹ ರಚನೆ, ಮೈಕಟ್ಟಿಗೆ ಪರ್ಫೆಕ್ಟ್ ಆಗಿ ಹೊಂದುತ್ತದೆಯೇ ಎಂಬುದನ್ನು ಗಮನಿಸಿ. ಅದು ಧರಿಸಲು ಆರಾಮದಾಯಕ ಆಗಿರಬೇಕು, ನಿಮ್ಮ ವ್ಯಕ್ತಿತ್ವಕ್ಕೆ ಕಳೆ ತರುವಂತಿರಬೇಕು.
ಫಿಟ್ಟಿಂಗ್ಸ್ ಕಡೆ ಗಮನವಿರಲಿ
ಡ್ರೆಸ್ ಕೊಳ್ಳುವಾಗ ಕೇವಲ ಸೈಜ್ ಮಾತ್ರ ನೋಡುವುದಲ್ಲ, ಡ್ರೆಸ್ ಫಿಟ್ಟಿಂಗ್ಸ್ ಕಡೆಯೂ ಗಮನ ಕೊಡಬೇಕು. ಅದನ್ನು ಧರಿಸಿದ ಮೇಲೆ ನೀವು ಹೇಗೆ ಕಾಣಿಸುತ್ತೀರಿ ಎಂಬುದು ಬಲು ಮುಖ್ಯ. ಬಾಡಿ ಟೈಪ್ ಪ್ರಕಾರ ಸೈಜ್ ಸೂಟ್ ಆದ ಮಾತ್ರಕ್ಕೆ, ಅದು ನಿಮಗೆ ಚೆನ್ನಾಗಿ ಸೂಟ್ ಆದಂತಲ್ಲ. ನೀವು ಕೊಳ್ಳುವ ಡ್ರೆಸ್ ದೇಹದ ಕುಂದುಕೊರತೆ ಅಡಗಿಸಿ, ನಿಮ್ಮ ಸೌಂದರ್ಯ ಎದ್ದು ತೋರುವಂತೆ ಮಾಡಬೇಕು. ಇಂಥ ಡ್ರೆಸ್ ಆರಾಮದಾಯಕ ಅನಿಸಬೇಕು, ಫ್ಯಾಷನ್‌ಗೆ ಮರುಳಾಗಿ ನೀವು ಅಸಹಜವಾಗಿ ಕಾಣುವಂತಾಗಬಾರದು.
ಕಳಪೆ ಮೇಕಪ್
ಹಗಲಿನಲ್ಲಿ ಲೈಟ್, ರಾತ್ರಿ ಹೊತ್ತು ಡಾರ್ಕ್ ಆಗಿರುವ ಮೇಕಪ್ ಮಾಡಿಕೊಳ್ಳಿ. ಹಗಲು ಹೊತ್ತು ಆಲ್‌ಮೋಸ್ಟ್ ಮೇಕಪ್ ಮಾಡಿಯೇ ಇಲ್ಲ ಎಂಬಂತೆಯೂ, ಸಂಜೆ ಪಾರ್ಟಿಗೆ ಹೊರಡುವಾಗ ಡಾರ್ಕ್ ಮೇಕಪ್ ಫೈನಲ್! ಹೇಗೆ ನೀವು ಹೋದ ಎಲ್ಲಾ ಕಡೆಯೂ ಒಂದೇ ತರಹದ ಡ್ರೆಸ್ ಧರಿಸುದಿಲ್ಲವೋ, ಅದೇ ತರಹ ಎಲ್ಲಾ ಕಡೆ ಕೆಟ್ಟದಾಗಿ ಒಂದೇ ತರಹದ ಮೇಕಪ್ ಮಾಡಿಕೊಳ್ಳಬಾರದು. ಎಲ್ಲಾ ಕಡೆ ಡಾರ್ಕ್ ಲಿಪ್‌ಸ್ಟಿಕ್ ಹಚ್ಚಿದರಾಯಿತು ಎಂದು ಭಾವಿಸದಿರಿ. ಕೆಲವು ಜಾಗಕ್ಕೆ ಹೋದಾಗ ಲೈಟ್ ಮೇಕಪ್ ಲಿಪ್‌ಸ್ಟಿಕ್ ತನ್ನದೇ ಆದ ವಿಶೇಷ ಪ್ರಭಾವ ಬೀರಬಲ್ಲದು. ಜೊತೆಗೆ ಬದಲಾಗುತ್ತಿರುವ ಮೇಕಪ್ ಟ್ರೆಂಡ್‌ಗೆ ತಕ್ಕಂತೆ ನಿಮ್ಮನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿರಿ.
ಹೊಳೆ ಹೊಳೆಯುವ ಉಗುರು
ನಿಮ್ಮ ಉಗುರುಗಳನ್ನು ಸದಾ ಶುಚಿಯಾಗಿಡಿ. ಅದಕ್ಕೆ ಸರಿಯಾದ ಶೇಪ್ ನೀಡಿ ನೇಲ್ ಪಾಲಿಶ್ ಹಚ್ಚುತ್ತಿರಿ. ಸಾಮಾನ್ಯವಾಗಿ ಬೇರೆ ಹೆಂಗಸರ ದೃಷ್ಟಿ ನಿಮ್ಮ ಕೈಗಳತ್ತ ಹೋಗುತ್ತಿರುತ್ತದೆ. ನಿಮ್ಮ ಉಗುರು ಕೊಳಕಾಗಿದ್ದು, ತುಂಡರಿಸಿದ್ದರೆ ನಿಮ್ಮ ಬಾಡಿ ಮೇಕಪ್ ಪೂರ್ತಿ ವೇಸ್ಟ್. ಆದ್ದರಿಂದ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಉಗುರುಗಳನ್ನು ನಿರ್ಲಕ್ಷಿಸದಿರಿ. ನೀವು ಉದ್ಯೋಗಸ್ಥೆ ಆಗಿದ್ದರೆ, ಲೈಟ್ ಕಲರ್ ಪಾಲಿಶ್ ಆರಿಸಿ. ತೀರಾ ಥಳುಕು ಬಳುಕಿನ ಪಾಲಿಶ್‌ನ್ನು ಪಾರ್ಟಿ, ಬೇರೆಡೆಗೆ ಮಾತ್ರ ಸೀಮಿತವಾಗಿಡಿ.
ಸದಾ ಸುಗಂಧಿತರಾಗಿರಿ
ಎಷ್ಟೋ ಹೆಂಗಸರಿಗೆ ಬೆವರುವಿಕೆ ಒಂದು ಸಾಮಾನ್ಯ ಸಮಸ್ಯೆ. ಮುಖ್ಯ ಕಂಕುಳ ಭಾಗ ಬೆವರಿನಲ್ಲಿನ ಬ್ಯಾಕ್ಟೀರಿಯಾದಿಂದ ದುರ್ನಾತ ಬೀರುತ್ತದೆ. ಜನ ನಿಮ್ಮನ್ನು ಅವಾಯ್ಡ್ ಮಾಡುವಂತಾಗಬಾರದು. ಆದ್ದರಿಂದ ಉತ್ತಮ ಗುಣಮಟ್ಟದ ಡಿಯೋ ಬಳಸಿರಿ. ಅದನ್ನು ಆಗಾಗ ಬೇರೆ ಪರಿಮಳ ಬೀರುವಂತೆ ಬದಲಿಸುತ್ತಿರಿ. ಆಗ ಸುವಾಸಿನಿಯಾಗಿ ನೀವು ಎಲ್ಲೆಡೆ ಜನಪ್ರಿಯತೆ ಪಡೆಯುವಿರಿ.
ಹೇರ್ ಕಲರ್
ಹೆಣ್ಣಿನ ಒಡವೆ ಎಂದರೆ ಕೂದಲು. ನಿಮ್ಮ ಕೂದಲನ್ನು ಚೆನ್ನಾಗಿ ಕಂಟ್ರೊಲ್‌ನಲ್ಲಿಟ್ಟು ಕೊಂಡರೆ, ನಿಮ್ಮ ಬ್ಯೂಟಿ ಇಮ್ಮಡಿಸುತ್ತದೆ. ಆದರೆ ಈ ಮೇಕಪ್‌ನ ಬಳಕೆಯಲ್ಲಿ ಎಡವಟ್ಟಾಯಿತೋ, ಸೌಂದರ್ಯ ಕುರೂಪಕ್ಕೆ ದಾರಿ ಮಾಡೀತು! ಆದ್ದರಿಂದ ಕೂದಲಿಗೆ ಉತ್ತಮ ರೀತಿಯಲ್ಲಿ ಕಲರಿಂಗ್ ಮಾಡಬೇಕು. ಉತ್ತಮ ಹೇರ್‌ಕಟ್ ನಿಮಗೆ ಹೊಸ ಲುಕ್ಸ್ ತಂದುಕೊಡುತ್ತದೆ. ವೈವಿಧ್ಯಮಯ ಹೇರ್‌ಸ್ಟೈಲ್‌ಗಳಿಂದ ಹೊಸ ಲುಕ್ಸ್ ನಿಮಗೆ ಕಳೆ ಕಟ್ಟುತ್ತದೆ. ಆದರೆ ಒಂದು ವಿಷಯ ನೆನಪಿಡಿ, ಕೂದಲಿಗೆ ಬಣ್ಣ ಹಚ್ಚಿ ಅದನ್ನು ಕಾಪಾಡಿಕೊಳ್ಳುವುದು ತುಸು ದುಬಾರಿ ವ್ಯವಹಾರ. ಆದ್ದರಿಂದ ಕೂದಲಿನ ಒಂದು ಭಾಗ ಮಾತ್ರ ಕಲರ್‌ನಿಂದ ಹೈಲೈಟ್ ಮಾಡಿ, ಹೊಸ ಲುಕ್ಸ್ ಪಡೆಯಬಹುದು. ಒಂದಂತೂ ನಿಜ, ಉತ್ತಮ ಡ್ರೆಸ್ಸಿಂಗ್ ಸೆನ್ಸ್, ಮ್ಯಾಚಿಂಗ್ ಫುಟ್‌ವೇರ್ ಆ್ಯಕ್ಸೆಸರೀಸ್, ಪರ್ಫೆಕ್ಟ್ ಮೇಕಪ್‌ನಿಂದ ನೀವು ಉತ್ತಮವಾಗಿ ಕಂಗೊಳಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಇವೆಲ್ಲ ಆದಮೇಲೆ ನಿಮ್ಮ ಮುಖದಲ್ಲಿ ಮಂದಹಾಸ ತೇಲದಿದ್ದರೆ ಎಲ್ಲ ಶೂನ್ಯ ಎಂದಾಗಿ ಹೋಗುತ್ತದೆ. ಆದ್ದರಿಂದ ಯಾರೊಂದಿಗಾದರೂ ಮಾತನಾಡುವಾಗ ಒಂದು ಮೃದು ಮಧುರ ಮಂದಹಾಸ ನಿಮ್ಮ ತುಟಿಗಳ ಮೇಲಿರಲಿ. ಜನರೊಂದಿಗೆ ಬೆರೆತು ಮಾತನಾಡುವಾಗ, ಬಾಯಿ ತುಂಬಾ ನಗುತ್ತಾ ಸಹಜವಾಗಿ ಆತ್ಮೀಯತೆ ತೋರಿಸಿ, ಆಗ ಎಲ್ಲರ ನಡುವೆ ಜನಪ್ರಿಯತೆ ಗಳಿಸುವಿರಿ. ಇದಕ್ಕೆ ವಿರುದ್ಧವಾಗಿ ಮುಖ ಕಿವುಚುತ್ತಾ, ಬೇಸರದಿಂದ ಇದ್ದರೆ, ಜನ ನಿಮ್ಮಿಂದ ದೂರ ಸರಿಯುತ್ತಾರೆ.
ಸ್ಮಾರ್ಟ್‌ನೆಸ್‌ಗೆ ವ್ಯಾಖ್ಯಾನ ಹೇಳುವಾಗ ಅದರಲ್ಲಿ ಆತ್ಮವಿಶ್ವಾಸದ ಬಗ್ಗೆ ತಿಳಿಸದ್ದಿದರೆ ಹೇಗೆ? ನಿಮ್ಮ ನಡೆನುಡಿ, ಮಾತುಕತೆ, ಕುಳಿತೇಳುವಿಕೆ, ಜನರ ಒಡನಾಟ ಎಲ್ಲದರಲ್ಲೂ ಸದಾ ಆತ್ಮವಿಶ್ವಾಸ ತುಂಬಿರಲಿ.
ನಮ್ಮ ಮನ ಬಯಸಿದ ಡ್ರೆಸ್ ಧರಿಸುವುದರಲ್ಲಿ ತಪ್ಪಿಲ್ಲ, ಬದಲಿಗೆ ನಮ್ಮಿಷ್ಟದ ಡ್ರೆಸ್ ನಮ್ಮ ಮನಸ್ಸಿನ ಅಂತರಾಳ, ಜೀವನಶೈಲಿ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ. ನಮ್ಮಿಷ್ಟದ ಉಡುಗೆ ಧರಿಸಿದ ಮೇಲೆ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ಅದು ನಮ್ಮ ವಿಚಾರ ಮತ್ತು ಕೆಲಸದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.
ಯಾವುದೇ ಉಡುಗೆಯಿಂದ ಮಾತ್ರವೇ ಅದನ್ನು ಧರಿಸಿದ ವ್ಯಕ್ತಿ ಎಷ್ಟು ಸಂವೇದನಾಶೀಲರು, ಎಷ್ಟು ಹೆಮ್ಮೆಯಿಂದ ಕೂಡಿದ್ದಾರೆ, ಆತ್ಮವಿಶ್ವಾಸಿಯೇ ಅಥವಾ ಡಲ್ ಎಂಬುದು ತಿಳಿಯುತ್ತದೆ. ಆದ್ದರಿಂದ ಬಲು ಸಾವಧಾನದಿಂದ ನಿಮ್ಮ ಫಿಗರ್‌ನ್ನು ಗಮನದಲ್ಲಿರಿಸಿಕೊಂಡೇ ಉಡುಗೆಗಳ ಆಯ್ಕೆ ಮಾಡಬೇಕಾಗುತ್ತದೆ.
– ರತ್ನಪ್ರಭಾ