ಕಥೆ – ಕನಕಾ ಕೇಶವ
“ಸ್ವಲ್ಪ ದಾರಿ ಬಿಡುತ್ತೀರಾ…” ಧ್ವನಿ ಕಿವಿಗೆ ಬೀಳುತ್ತಿದ್ದಂತೆ ಆಶಾ ಅರೆನಿದ್ರೆಯಿಂದ ಎಚ್ಚೆತ್ತಳು. ಮಹಿಳೆಯೊಬ್ಬಳು ತನ್ನ ಗರ್ಭಿಣಿ ಮಗಳ ಜೊತೆ ಅವಳಿದ್ದ ರೈಲಿನ ಕೋಚ್‌ಕಡೆ ಬರುತ್ತಿದ್ದಳು. ಆಶಾ ಆಕಳಿಸುತ್ತಾ ಸಹಪ್ರಯಾಣಿಕರ ಕಡೆ ನೋಡತೊಡಗಿದಳು. ಮಗಳಿಗೆ ಬಹುಶಃ ಒಂಬತ್ತನೇ ತಿಂಗಳು ನಡೆಯುತ್ತಿತ್ತು. ಅವಳು ತನ್ನ ದಢೂತಿ ದೇಹವನ್ನು ಬಹಳ ಪ್ರಯಾಸದಿಂದ ಸಂಭಾಳಿಸಿಕೊಂಡು ತನಗಾಗಿ ಜಾಗ ಹುಡುಕುತ್ತಿದ್ದಳು. ಅವಳ ತಾಯಿಯ ಕಣ್ಣುಗಳಲ್ಲಿ ಸಂಕಟದ ಛಾಯೆ ಸ್ಪಷ್ಟವಾಗಿ ಕಾಣುತ್ತಿತ್ತು.
ಆ ಕೋಚ್‌ನಲ್ಲಿ ಕೇವಲ ಆರು ಜನರಿಗಾಗುವಷ್ಟು ಜಾಗವಿತ್ತು. ಆದರೂ 3 ಸೀಟಿನ ಮೇಲೆ ಕೆಳಗೆ ಎಡಬಲ ಎಲ್ಲಾ ಕಡೆಗಳಲ್ಲೂ ತುಂಬಿದ್ದ ಸಾಮಾನು ನೋಡಿದರೆ ಇಡೀ ಪಟ್ಟಣವೇ ಅದರಲ್ಲಿ ತುಂಬಿದಂತೆ ಕಾಣುತಿತ್ತು. ತಾನು ಅದಕ್ಕೆ ಜವಾಬ್ದಾರಳಲ್ಲ ಅನ್ನುವಂತೆ ಆಶಾ ಅವರ ಕಡೆ ನೋಡಿದಳು.
ಜೊತೆಗೆ ಆ ಇಬ್ಬರು ಮಹಿಳೆಯರು ಕೈಕಾಲು ಚಾಚಿ ಎಲ್ಲಿ ತನ್ನ ಸ್ಥಾನಕ್ಕೆ ಧಕ್ಕೆ ತರುತ್ತಾರೋ ಅನ್ನುವ ಭಯ ಕೂಡಾ ಅವಳನ್ನು ಸತಾಯಿಸಿತು. ಎಷ್ಟೇ ಕಷ್ಟ ಬಂದರೂ ಒಂದಡಿ ಜಾಗ ಕೊಡಲು ಅವಳು ಸಿದ್ಧಳಿರಲಿಲ್ಲ. ತುಂಬಿದ ಡಬ್ಬಿಯಲ್ಲೂ ಅವಳು ತನಗಾಗಿ ಏಕಾಂತ ಹುಡುಕುತ್ತಿದ್ದಳು. ಅವಳ ಜೀವನದಲ್ಲಿ ಅವಳಿಗೆ ತನ್ನದೇ ಆದ ಜಾಗವೇ ಇರಲಿಲ್ಲ. ಬುದ್ಧಿ ಬಂದಾಗಿನಿಂದ ಅವಳು ಒಂದು ತುಂಬಿದ ಕುಟುಂಬದಲ್ಲಿದ್ದಳು, ನಾಲ್ಕೂ ಕಡೆಗಳಲ್ಲೂ ಸಹೋದರ ಸಹೋದರಿಯರು ತುಂಬಿದ್ದರು. ವಯಸ್ಸಾದ ಅಜ್ಜಿ ತಾತಾ ಮತ್ತು ಯಾವಾಗಲೂ ಮನೆ ತುಂಬಾ ಜನ ಇರುತ್ತಿದ್ದರು. ನೆಂಟರಿಂದ ಮನೆ ದೊಡ್ಡದಾಗಿದ್ದರೂ ತುಂಬಾ ಚಿಕ್ಕದೆನಿಸುತ್ತಿತ್ತು.
ಅವಳು ಏಕಾಂತಕ್ಕಾಗಿ ಒದ್ದಾಡುತ್ತಿದ್ದಳು. ಅವಳಿಗೆ ಕವಿತೆ ಬರೆಯಲು ಆಗುತ್ತಿರಲಿಲ್ಲ. ಗದ್ದಲದ ಜೊತೆ ಓದಬೇಕಿತ್ತು. ದೊಡ್ಡವಳಾದ ಮೇಲೆ ಕೆಲವೊಮ್ಮೆ ಬಸ್‌ನಲ್ಲಿ ನೂಕುನುಗ್ಗಲು. ಕೆಲವೊಮ್ಮೆ ಸ್ಕೂಲಿಗೆ ಹೋಗುವಾಗ ಸಹಪಾಠಿಗಳ ಜೊತೆ ರಿಕ್ಷಾದಲ್ಲಿ ಜಾಗಕ್ಕಾಗಿ ಯುದ್ಧ ಅವಳಿಗೆ ಸಾಕಾಗಿ ಹೋಗಿತ್ತು. ತನಗಾಗಿಯೇ ಪ್ರತ್ಯೇಕ ಸ್ಥಾನ, ವಿಶೇಷ ಅಸ್ತಿತ್ವ ಬೇಕೆನ್ನುವ ಹಂಬಲ ಅವಳ ಮನದಲ್ಲಿ ಗಟ್ಟಿಯಾಗಿ ನೆಲೆ ನಿಂತಿತ್ತು. ಕೇವಲ ಮನೆಯಲ್ಲಿ ಮಾತ್ರವಲ್ಲ. ಜೀವನದಲ್ಲಿ ಸಹ ಎಲ್ಲಿ ತಾನಿರುವೆನೋ ಅಲ್ಲಿ ತಾನು ಏಕಮಾತ್ರ ಅಧಿಕಾರಿಣಿಯಾಗಿರಬೇಕೆಂಬ ಬಯಕೆ ಅವಳಲ್ಲಿತ್ತು. ವೈವಾಹಿಕ ಜೀವನದಲ್ಲಿ ಸಹ ಅವಳಿಗೆ ತನ್ನದೇ ಆದ ಸಮಯ ಹಾಗೂ ಸಾಮ್ರಾಜ್ಯವೆನ್ನುವುದಿರಲಿಲ್ಲ. ಅವಳ ಹಣೆಯ ಮೇಲೆ ವಿಧಿ ಏನನ್ನೂ ಬರೆದಿರಲಿಲ್ಲ. ಒಳ್ಳೆಯ ಕೆಲಸ ಸಿಕ್ಕ ಕೂಡಲೇ ತಂದೆತಾಯಿ ಅವಳಿಗೆ ಮದುವೆ ಮಾಡಿಬಿಟ್ಟರು. ನಡೆ ನಿನ್ನ ಮನೆ ಅಲ್ಲಿದೆ ಎಂದು ಓಡಿಸಿದಂತೆ. ಈಗ ಮನೆಯ ಒಂದು ಮೂಲೆಯಂತೂ ಖಾಲಿಯಾಯಿತು. ಯಾವ ಪೋಷಕರು ತಮ್ಮ ಮಕ್ಕಳ ಬಗ್ಗೆ ಈ ರೀತಿ ಯೋಚನೆ ಮಾಡುವುದಿಲ್ಲವೆಂದು ಅವಳಿಗೆ ತಿಳಿದಿತ್ತು.
“ತಮ್ಮ ಸಾಮಾನನ್ನು ಸ್ವಲ್ಪ ಎತ್ತಿಕೊಳ್ಳಲು ಆಗುವುದಿಲ್ಲವೇ?” ವೃದ್ಧ ಮಹಿಳೆ ಸಹ ಪ್ರಯಾಣಿಕರನ್ನು ಕೇಳುತ್ತಿದ್ದಳು. ಮುಂದೆ ತನ್ನ ಸರದಿ ಬರಬಹುದೆಂದು ಭಾವಿಸಿದ ಆಶಾ ತಕ್ಷಣವೇ ಕಣ್ಣು ಮುಚ್ಚಿ ಕುಳಿತಳು. ಅರ್ಧ ತೆರೆದ ಕಣ್ಣುಗಳಿಂದ ನಡೆಯುತ್ತಿರುವ ವಿದ್ಯಮಾನ ನೋಡತೊಡಗಿದಳು.
ಆಶಾಳ ಬಲಗಡೆ ಒಬ್ಬ ವೃದ್ಧ ವ್ಯಕ್ತಿ ಮತ್ತು ಒಬ್ಬ ಮಹಿಳೆ ಬಹುಶಃ ಆತನ ಪತ್ನಿಯಿರಬಹುದು. ಆಶಾ ಇಡೀ ಕೋಚನ್ನು ಅವಲೋಕಿಸಿದಾಗ ಅದರ ತುಂಬಾ ಅವರಿಬ್ಬರ ಸಾಮಾನುಗಳನ್ನು ತುಂಬಿಸುತ್ತಿದ್ದರು..ಸೀಟಿನ ಮೇಲೆ ಕೆಳಗೆ, ಬರ್ಥ್‌ಮೇಲೆ, ಜಾಗವಿದ್ದಿದ್ದರೆ ಬಹುಶಃ ಕಿಟಕಿಗಳಿಗೂ ಮುಚ್ಚಿದ್ದವು. ಜನರು ಪ್ರವಾಸಕ್ಕೆ ಹೋಗುವಾಗ ಇಷ್ಟೊಂದು ಸಾಮಾನು ಏಕೆ ತೆಗೆದುಕೊಂಡು ಹೋಗುತ್ತಾರೆ. ಇನ್ನೆಂದೂ ಮನೆಗೆ ಹಿಂದಿರುಗುವುದಿಲ್ಲ ಎನ್ನುವ ಹಾಗೆ. ಕೆಲವರಂತೂ ಈ ವೃದ್ಧ ವ್ಯಕ್ತಿಯ ಹಾಗೆ ಇಡೀ ಜಾಗವನ್ನೇ ಆಕ್ರಮಿಸಿಕೊಳ್ಳುತ್ತಾರೆ.
ಅವಳು ಎಂದೂ ಜಾಗ ಮಾಡಿಕೊಳ್ಳಲಿಲ್ಲ, ಆಕ್ರಮಿಸಿಕೊಳ್ಳಲೂ ಇಲ್ಲ. ಅವಳ ಅತ್ತೆಯ ಮನೆ ಸಹ ಅವಳ ಮನೆಯಂತೆಯೇ ಇತ್ತು. ಪ್ರಪಂಚದ ಎಲ್ಲಾ ಸಂಬಂಧಗಳಿಂದ ತುಂಬಿದ ಒಂದು ದೊಡ್ಡ ಸಂಬಂಧ. ಗಂಡನ ವ್ಯಾಪಾರ ನಡೆಯುತ್ತಿತ್ತು. ಅವಳಿಗೆ ತನ್ನ ಕೆಲಸದ ಬಗ್ಗೆ ಖುಷಿಯಿತ್ತು. ಅಭಾವವಿದ್ದುದು ಏಕಾಂತಕ್ಕೆ ಮಾತ್ರ. ದಿನವಿಡೀ ಅಷ್ಟೇ ಏಕೆ ರಾತ್ರಿ ಕೂಡಾ ವಾರಗಿತ್ತಿಯರ ಮಕ್ಕಳು ಗದ್ದಲವೆಬ್ಬಿಸುತ್ತಿದ್ದರು. ಗಂಡ ತನ್ನ ಕುಟುಂಬವನ್ನು ತುಂಬಾ ಗೌರವಿಸುತ್ತಿದ್ದ. ಆಯಾಸಗೊಂಡು ಬರುತ್ತಿದ್ದ ಅವಳು ಗಂಡನ ದಾರಿ ಕಾಯುತ್ತಲೇ ಇರುತ್ತಿದ್ದಳು. ಆದರೆ ಸುರೇಶ ಬರುತ್ತಿದ್ದಂತೆ ತಾಯಿಯ ಚರಣಗಳಲ್ಲಿ ಸೇರಿಕೊಳ್ಳುತ್ತಿದ್ದ. ದಿನವಿಡೀ ನಡೆದ ಕಥೆಗಳು, ಗೃಹಕ್ಲೇಶಗಳ ಚರ್ಚೆ ನಡೆಯುತ್ತಿದ್ದ ರೀತಿ ಸಂಸತ್ ಕಲಾಪಗಳನ್ನು ನೆನಪಿಸುತ್ತಿತ್ತು. ಏಕಾಂತ ಸಿಗುತ್ತಿದ್ದಂತೆ ನಿದ್ದೆ ಮಾಡಲು ಹೊರಡುತ್ತಿದ್ದ. ಅವಳು ತನ್ನನ್ನು ಖೈದಿಯಂತೆ ಭಾವಿಸುತ್ತಿದ್ದಳು.
ಒಂದು ಸಲ ಗಾಡಿ ಮುಗ್ಗರಿಸಿ ಮುಂದೆ ಹೊರಟಿತು. ಅವಳು ಕಣ್ಣು ತೆರೆದಳು. ಹುಡುಗಿಯ ತಾಯಿ ಜಾಗ ಮಾಡಿಕೊಂಡಿದ್ದರು. ಅವಳ ಮಗಳು ಸ್ವಲ್ಪ ಕಾಲು ಚಾಚಿಕೊಂಡು ಕುಳಿತಿದ್ದಳು. ಆಶಾ ಅಧಿಕಾರದಿಂದ ತನ್ನ ಜಾಗ ಇನ್ನಷ್ಟು ಆಕ್ರಮಿಸಿಕೊಂಡಳು. ಹುಡುಗಿ ಆಯಾಸಗೊಂಡಿರುವ ಕಾಲನ್ನು ತನ್ನ ಮುಖದ ಮುಂದೆ ಚಾಚಬಹುದು, ಯಾರಿಗೆ ಗೊತ್ತು?
ಆಶಾ ತದೇಕ ದೃಷ್ಟಿಯಿಂದ ನೋಡಿದಳು. ಸುಮಾರು 25 ವರ್ಷದ ಯುವತಿ. ತುಂಬಾ ಅವಶ್ಯಕ ಕೆಲಸವಿರಬೇಕು. ಈ ರೀತಿಯ ಅಡ್ವಾನ್ಸ್ಡ್ ಅವಸ್ಥೆಯಲ್ಲಿ ಸಹ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದಳು. ಯುವತಿಯ ಮುಖದ ಮೇಲೆ ಆಯಾಸವಿತ್ತು. ಅವಳು ಗಟಗಟನೆ ನೀರು ಕುಡಿಯುತ್ತಿದ್ದಳು. ವೃದ್ಧ ವ್ಯಕ್ತಿ ಬಹಳ ಸಮಯದಿಂದ ಯಾವುದೋ ಪುಸ್ತಕವನ್ನು ಓದುತ್ತಿದ್ದರು. ಬಹುಶಃ ಅದು ಧಾರ್ಮಿಕ ಪುಸ್ತಕವಿರಬೇಕು. ಅವರ ಹೆಂಡತಿ ಮಾತ್ರ ಮಧ್ಯೆ ಮಧ್ಯೆ ಒಂದೇ ಸಮನೆ ಮೇಲಿನ ಬಲ್ಬ್ ಕಡೆ ನೋಡುತ್ತಿದ್ದರು. ಟ್ರೈನ್ ಹತ್ತಿದ ಸಮಯದಿಂದ ಅದೇ ಮುದ್ರೆಯಲ್ಲಿ ಏಕಾಗ್ರಚಿತ್ತದಿಂದ ಆಕೆ ಕುಳಿತಿರುವುದನ್ನು ಆಶಾ ಗಮನಿಸಿದಳು. ಅವರು ಯಾವುದೋ ಸಾಧನೆ ಮಾಡುತ್ತಿರುವಂತೆ ಕಾಣುತ್ತಿತ್ತು.`ಓಹ್,’ ಚೀತ್ಕಾರ ಕೇಳಿದ ಆಶಾಳ ಗಮನ ಬೇರೆಡೆಗೆ ಹರಿಯಿತು. ಗರ್ಭಿಣಿ ಯುವತಿ ತನ್ನ ಭಾರೀ ದೇಹವನ್ನು ಸಂಭಾಳಿಸಿಕೊಳ್ಳುತ್ತಿರುವುದು ಕಾಣಿಸಿತು. ಅವಳ ತಾಯಿ ಅವಳ ಬೆನ್ನು ಸವರುತ್ತಾ ಹೇಳುತ್ತಿದ್ದರು. ಬಹುಶಃ ಹೊಟ್ಟೆಯಲ್ಲಿರುವ ಮಗು ಜೋರಾಗಿ ಒದೆಯುತ್ತಿರಬೇಕು.
ಒಂದು ಕಡೆ ಟ್ರೈನಿನ ಪ್ರಯಾಣ, ಇನ್ನೊಂದೆಡೆ ಕಡಿಮೆ ಜಾಗ. ಹೆರಿಗೆ ನೋವೇನಾದರೂ ಆರಂಭವಾಯಿತೋ? ಮಕ್ಕಳನ್ನು ಹೊರುವುದು ಒಂದು ಜಂಜಾಟವೇ. ಅದು ಭೂಮಿಗೆ ಪಾದಾರ್ಪಣೆ ಮಾಡುವವರೆಗೂ ನೆಮ್ಮದಿ ಇರುವುದಿಲ್ಲ. ತನ್ನದೇ ಆದ ಪುಟ್ಟ ಗೂಡು ಸಿಗುವವರೆಗೂ ಮಗುವಿನ ಅವಶ್ಯಕತೆ ಇಲ್ಲವೆಂದು ಆಶಾ ಭಾವಿಸಿದ್ದಳು.ಆ ವಿಷಯದ ಬಗ್ಗೆ ಸುರೇಶನ ಜೊತೆ ಎಷ್ಟೊಂದು ವಿವಾದ ನಡೆದಿತ್ತು. ಅತ್ತೆಯ ಮನೆಗೆ ಹತ್ತಿರವಾಗಿದ್ದರೂ ಪರವಾಗಿಲ್ಲ. ಆದರೆ ತನ್ನದೇ ಆದ ಗೂಡಿನಲ್ಲಿ ಮುಕ್ತ ವಾತಾವರಣದಲ್ಲಿ ಮಗು ಬೆಳೆಯಬೇಕು. ಅದನ್ನೆಲ್ಲಾ ಅರ್ಥ ಮಾಡಿಕೊಂಡು ನಮಗಾಗಿ ಸುರೇಶ ಏಕೆ ಒಂದು ಮನೆ ಮಾಡುವುದಿಲ್ಲ? ಇಷ್ಟೊಂದು ದೊಡ್ಡ ಮನೆಯಿರುವಾಗ ಬೇರೆ ಮನೆಗೆ ಹೋದರೆ ತಂದೆ ತಾಯಿ ತಪ್ಪಾಗಿ ಭಾವಿಸುತ್ತಾರೆ. ಹಾಗಾಗಿ ಆ ವಿಷಯ ಸುರೇಶನಿಗೆ ಹಿಡುಸುತ್ತಿರಲಿಲ್ಲ. ಬೇರೆ ಮನೆ ಮಾಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದ್ದ.
ಆಶಾಳ ಮೂಗಿಗೆ ಉಪ್ಪಿನಕಾಯಿಯ ಘಾಟು ಹೊಡೆಯಿತು. ಚಂದ್ರಾಳ ತಾಯಿ ಡಬ್ಬಿಯಿಂದ ಚಪಾತಿ ತೆಗೆದು ಉಪ್ಪಿನಕಾಯಿ ಸವರಿ ಮಗಳಿಗೆ ತಿನ್ನಿಸುತ್ತಲೇ ಇದ್ದರು. ಇನ್ನೆಂದೂ ಊಟ ಮಾಡಲು ಸಾಧ್ಯವಿಲ್ಲವೆನ್ನುವ ಹಾಗೆ ಚಂದ್ರಾ ಅದನ್ನು ತಿನ್ನುತ್ತಿದ್ದಳು.
ವೃದ್ಧೆಯ ಗಮನ ಚಂದ್ರಾಳ ಮೇಲೆ ಬಿದ್ದಿರುವುದನ್ನು ಆಶಾ ಗಮನಿಸಿದಳು. ವೃದ್ಧೆಯ ಮುಖದ ಮೇಲೆ ಆಶ್ಚರ್ಯದ ಭಾವವಿತ್ತು. ಬಹುಶಃ ಅವರು ಚಂದ್ರಾಳಿಗೆ ಏನನ್ನೋ ಹೇಳಲು ಬಯಸುತ್ತಿದ್ದರು. ಆದರೆ ಹೇಳಲಾರದೆ ತಮ್ಮನ್ನು ಸಂಭಾಳಿಸಿಕೊಂಡರು. ವೃದ್ಧ ವ್ಯಕ್ತಿಯ ಮುಖದ ಮೇಲೆ ನೆಮ್ಮದಿಯ ಭಾವ ಕಾಣಿಸಿತು. ಹೀಗಾದರೂ ಹೆಂಡತಿ ಗಮನ ಬೇರೆ ಕಡೆ ಹರಿಯಿತಲ್ಲಾ ಎಂದು, ಇಲ್ಲವಾದರೆ ಆಕೆ ಆ ಬಲ್ಪನ್ನೇ ನೋಡುತ್ತಿದ್ದರು. ತನ್ನ ತಾಯಿ, ಅತ್ತೆಯರು ಮತ್ತು ಬೇರೆ ಹೆಂಗಸರು ತಯಾರಿಸುತ್ತಿದ್ದ ಉಪ್ಪಿನಕಾಯಿ ಬಗ್ಗೆ ಆಶಾಳಿಗೆ ನೆನಪು ಬಂದಿತು. ಇಡೀ ಅಂಗಳ ಅವರ ಗೀತೆಗಳಿಂದ ಮತ್ತು ಕಿಲಕಿಲ ನಾದದಿಂದ ತುಂಬಿರುತ್ತಿತ್ತು. ಅವಳಿಗೆ ಉಪ್ಪಿನಕಾಯಿ ಎಂದರೆ ಬಹಳ ಇಷ್ಟ. ಆದರೆ ಅವರು ಎಬ್ಬಿಸುತ್ತಿದ್ದ ಗದ್ದಲ ಮಾತ್ರ ಸರಿಬರುತ್ತಿರಲಿಲ್ಲ. ಅವಳ ಸಹೋದರಿಯರು ಅವರೆಲ್ಲರ ಜೊತೆ ಸೇರಿಕೊಳ್ಳುತ್ತಿದ್ದರು.“ಅಮ್ಮಾ,” ಎಂಬ ಆರ್ತನಾದ ಅವಳ ಪಕ್ಕದಿಂದಲೇ ಹಾದುಹೋಯಿತು. ಚಂದ್ರಾ ಹೊಟ್ಟೆ ಹಿಡಿದುಕೊಂಡು ಒದ್ದಾಡುತ್ತಿದ್ದಳು. ಅವಳ ತಾಯಿ ಗಾಬರಿಗೊಂಡರೂ ಅವಳಿಗೆ ಧೈರ್ಯ ನೀಡುತ್ತಾ ಹೇಳಿದ್ದಳು.
“ತಗೋ ಮಗೂ, ನೀರು ಕುಡಿ ಆರಾಮೆನಿಸುತ್ತದೆ.” ತಾಯಿ ಬಹುಶಃ ತಮ್ಮ ಜಾಗ ತಲುಪಿದ ನಂತರವೇ ಅವಳಿಗೆ ಹೆರಿಗೆಯಾಗಬೇಕೆಂದು ಬಯಸುತ್ತಿದ್ದಳು.
“ಇದು ಹೆರಿಗೆ ನೋವಲ್ಲ,” ಎಂದು ತನ್ನ ತಾಯಿಗೆ ಚಂದ್ರಾ ಹೇಳುತ್ತಿದ್ದಳು. ಅವಳಿಗೂ ಸಹಾ ಅನಿಸುತ್ತಿತ್ತು. ಆದರೆ ಅರ್ಧ ಡಜನ್‌ಚಪಾತಿ, ಅರ್ಧ ಕೆ.ಜಿ. ಉಪ್ಪಿನಕಾಯಿ ತಿಂದರೆ ಹೊಟ್ಟೆಯಲ್ಲಿ ಉರಿ ಬಂದೇ ಬರುತ್ತದೆ. ಈ ಗಮಾರ ಹೆಂಗಸರಿಗೆ ಇದೆಲ್ಲಾ ಎಲ್ಲಿ ಅರ್ಥವಾಗಬೇಕು?
ತನ್ನ ಅತ್ತೆ ಮನೆಯಲ್ಲಿ ಯಾರು ತಾನೇ ಸಭ್ಯರಿದ್ದಾರೆ? ಅವಳು ತನ್ನ ಸಹೋದ್ಯೋಗಿಗಳಿಗೆ ಪಾರ್ಟಿ ನೀಡಿದರೆ, ಎಲ್ಲರೂ ಅವಳ ರೂಮಿಗೆ ಬಂದು ಬಿಡುತ್ತಿದ್ದರು. ಅವಳ ಜೊತೆಗಾರರು ತುಂಬಾ ಸಭ್ಯತೆಯಿಂದ ಟೀಕಾಫಿ ಕುಡಿಯುತ್ತಿದ್ದರು. ಮನೆಯವರು ಮಾಡುತ್ತಿದ್ದ ಗಲಾಟೆ ವಾತಾವರಣದಲ್ಲಿ ಪ್ರತಿಧ್ವನಿಸುತ್ತಿತ್ತು. ತನಗೆ ಪ್ರೈವೆಸಿಯೇ ಇಲ್ಲವೆಂದು ಅವಳು ಸಂಕಟಪಡುತ್ತಿದ್ದಳು.
ಯಾವುದೋ ಸ್ಟೇಷನ್ ಬರುತ್ತಿತ್ತು. ಚಂದ್ರಾಳ ತಾಯಿ ಹನುಮಾನ್ ಚಾಲಿಸಾ ಪಠಿಸುತ್ತಿದ್ದಳು. ಅವಳು ವೃದ್ಧ ವ್ಯಕ್ತಿಯ ಕಡೆ ನೋಡುತ್ತಾ, “ಅಣ್ಣಾ ಸ್ವಲ್ಪ ನೀರು ತಂದುಕೊಡುವಿರಾ…?” ವ್ಯಕ್ತಿ ಏನೂ ಹೇಳದೆ ವಾಟರ್ ಬಾಟಲ್ ತೆಗೆದುಕೊಂಡು ಹೊರಟರು.
ಆಶಾಳಿಗೆ ಚಹಾ ಕುಡಿಯಬೇಕೆನಿಸಿತು. ಅವಳು ಕೆಳಗಿಳಿದು ಸ್ಟೇಷನ್‌ನಲ್ಲಿ ಟೀ ಕುಡಿಯುತ್ತಾ ತನ್ನ ಕಂಪಾರ್ಟ್‌ಮೆಂಟ್ ಕಡೆಗೇ ನೋಡುತ್ತಿದ್ದಳು. ಕಳ್ಳತನದ ಭಯಕ್ಕಿಂತ ಯಾರಾದರೂ ತಮ್ಮ ಕೋಚ್‌ನೊಳಗೆ ನುಗ್ಗಿ ತನ್ನ ಜಾಗ ಆಕ್ರಮಿಸುತ್ತಾರೆಂಬ ಅಂಜಿಕೆ ಅವಳಿಗೆ.
ಆ ವೃದ್ಧೆಯ ದೃಷ್ಟಿ ಪುನಃ ಆ ಬಲ್ಬಿನ ಮೇಲೆ ಬಿದ್ದಿರುವುದು ಆಶಾಳಿಗೆ ಕಾಣಿಸಿತು. ಅಂತಹವರು ಆಶಾಳಿಗೆ ಇಷ್ಟವಾಗುತ್ತಿದ್ದರು. ಅವರು ಯಾರ ವಿಷಯಕ್ಕೂ ತಲೆ ಹಾಕುತ್ತಿರಲಿಲ್ಲ. ಯಾವುದೇ ಸಹಾಯದ ಆಸೆಯೂ ಅವರಲ್ಲಿರುತ್ತಿರಲಿಲ್ಲ.
ವೃದ್ಧೆಯ ಗಂಡ ನಿಧಾನವಾಗಿ ಹೆಜ್ಜೆ ಇಡುತ್ತಾ ಕೋಚ್‌ನ ಕಡೆಗೆ ಹೋಗುತ್ತಿರುವುದು ಕಾಣಿಸಿತು. ಗಾರ್ಡ್ ಹಸಿರು ಬಾವುಟ ಅಲ್ಲಾಡಿಸುತ್ತಿದ್ದ. ಅವಳು ಬೇಗ ಬೇಗ ಚಹಾ ಕುಡಿದು ಟ್ರೈನನ್ನು ಹತ್ತಿದಳು.
ಟ್ರೈನು ಮತ್ತೆ ಓಡತೊಡಗಿತು. ಜನ ತೂಕಡಿಸುತ್ತಿದ್ದರು. ವೃದ್ಧ ಸಹ ಕನ್ನಡಕ ಪಕ್ಕಕ್ಕಿಟ್ಟು ನಿದ್ರೆ ಮಾಡುತ್ತಿದ್ದರು. ಚಂದ್ರಾಳ ತಾಯಿ ವಿಚಿತ್ರ ಭಂಗಿಯಲ್ಲಿ ಮೈಮುರಿಯುತ್ತಿದ್ದರು. ಚಂದ್ರಾಳ ತಾಯಿಗೂ ಚಪಾತಿಯ ನಶೆ ಏರತೊಡಗಿತ್ತು. ಅವರೆಲ್ಲರ ಅವಸ್ಥೆ ನೋಡಿ ಆಶಾಳಿಗೂ ನಿದ್ರೆ ಬರತೊಡಗಿತು. ಕೇವಲ ವೃದ್ಧನ ಹೆಂಡತಿ ತನ್ನ ಚಿರಪರಿಚಿತ ಭಂಗಿಯಲ್ಲಿ ಮಹಾತ್ಮ ಬುದ್ಧನಂತೆ ಕುಳಿತಿದ್ದರು.
ಮುಚ್ಚಿದ ಕಣ್ಣುಗಳಲ್ಲಿ ಕನಸು ತೇಲಾಡುತ್ತಿತ್ತು. ಹಸಿರು ತುಂಬಿದ ತೋಟದ ಮಧ್ಯೆ, ಬೆಟ್ಟದ ಮೇಲೆ ಅವಳ ಭವ್ಯ ಬಂಗಲೆಯಿತ್ತು. ಅವಳು ತನ್ನ ಮನೆಯ ಕೈತೋಟದಲ್ಲಿರುವ ಗಿಡಗಳಿಗೆ ನೀರು ಹಾಕುತ್ತಿದ್ದಳು. ಎಲ್ಲರ ಬಾಯಲ್ಲೂ ಅವಳ ಸುಖ ಸಂಸಾರದ ಮಾತೇ ಇತ್ತು. ಸುರೇಶ ಸಹ ಆನಂದವಾಗಿ ಅವಳ ಕಡೆ ನೋಡುತ್ತಾ ಬರುತ್ತಿದ್ದ. ಆಕಸ್ಮಿಕವಾಗಿ ಕಲ್ಲನ್ನು ಎಡವಿ ಒಂದು ದೊಡ್ಡ ಹೊಂಡದೊಳಗೆ ಬಿದ್ದ.
ಅವಳ ನಿದ್ದೆ ಹಾರಿಹೋಯಿತು. ಅವಳ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಎಂತಹ ಕೆಟ್ಟ ಕನಸು! ಆದರೆ ಆ ಭಯಂಕರ ಕನಸಿಗಿಂತ ಜೋರಾದ ಭಯ ತುಂಬಿದ ಒಂದು ಚೀತ್ಕಾರ ಅವಳ ಕಿವಿಯನ್ನು ತುಂಬಿತು. ಎದುರು ಕುಳಿತಿದ್ದ ಚಂದ್ರಾ ಜೋರಾಗಿ ಕಿರುಚುತ್ತಿದ್ದಳು.
ಆಶಾ ಕನ್ನಡಕ ಹಾಕಿಕೊಂಡು ನೋಡಿದರೆ ಚಂದ್ರಾ ಹೊಟ್ಟೆ ಹಿಡಿದುಕೊಂಡು ಆಕಡೆ ಈಕಡೆ ತೂಗಾಡುತ್ತಿದ್ದಳು. ಅವಳ ತಾಯಿ ಸಹನೆಯಿಂದ ಅವಳನ್ನು ಶಾಂತವಾಗಿರಿಸಲು ಪ್ರಯತ್ನಿಸುತ್ತಿದ್ದರು. ವೃದ್ಧ ವ್ಯಕ್ತಿಗೆ ಎಲ್ಲಾ ಅಯೋಮಯವಾಗಿತ್ತು. ಬಹುಶಃ ಅವರಿಗೆ ಆಗತಾನೇ ಎಚ್ಚರವಾಗಿರಬೇಕು.
ಪಕ್ಕದ ಕೋಚ್‌ನಿಂದ ಸಹ ಜನರು ಬರುತ್ತಿದ್ದರು. “ಏನಾಯಿತು, ಏನಾದರೂ ಕಾಯಿಲೆಯೇ?” “ಯಾರಾದರೂ ಡಾಕ್ಟರನ್ನು ಕರೆಯಿರಿ,” ಎಲ್ಲಾ ಕಡೆ ಗದ್ದಲ ತುಂಬಿಹೋಯಿತು. ಇಡೀ ಟ್ರೈನಿನಲ್ಲಿ ಓಡಾಟ ಆರಂಭವಾಯಿತು. ಚಂದ್ರಾಳ ಮೈ ಬೆವರಿನಿಂದ ತೊಯ್ದು ಹೋಯಿತು. ಅವಳ ತಾಯಿ ಜೋರಾಗಿ ಅಳುತ್ತಾ ಹೇಳಿದಳು.
“ಅಯ್ಯೋ! ಯಾರಾದರೂ ಡಾಕ್ಟರನ್ನು ಕರೆತನ್ನಿ. ಒಂಬತ್ತನೇ ತಿಂಗಳು ನಡೆಯುತ್ತಿದೆ.” ಆಶಾಳಿಗೆ ಒಮ್ಮೆಲೇ ಕೋಪ ಬಂದಿತು. ಒಂಬತ್ತನೇ ತಿಂಗಳಲ್ಲಿ ಏಕೆ ಕರೆದುಕೊಂಡು ಹೋಗುತ್ತಿದ್ದಾಳೆ ಈ ಮುದುಕಿ…. ಚಂದ್ರಾಳ ಇಡೀ ಸೀರೆ ತೊಯ್ದುಹೋಗಿತ್ತು. ಕೂದಲೆಲ್ಲಾ ಕೆದರಿಹೋಗಿತ್ತು. ತನ್ನ ಕಾಲನ್ನು ಕೆಳಕ್ಕೆ ಇಳಿಬಿಟ್ಟು ನೋವನ್ನೆಲ್ಲಾ ಕೆಳಗೆ ಬೀಳಿಸಲು ಬಯಸುತ್ತಿದ್ದಳು. ಅವಳ ತಾಯಿಯ ಪರಿಸ್ಥಿತಿ ಕೆಟ್ಟದಾಗಿತ್ತು. ಯಾರಿಗೂ ಏನು ಮಾಡಬೇಕೆಂದೇ ತೋಚಲಿಲ್ಲ. ಜನರು ಡಾಕ್ಟರ್ ಹುಡುಕಾಟದಲ್ಲಿ ಓಡಿ ಓಡಿ ಎಲ್ಲಾ ಬೋಗಿಗಳಿಗೂ ನುಗ್ಗುತ್ತಿದ್ದರು.
“ಸರಿಯಿರಿ ಎಲ್ಲರೂ… ನಾನು ನೋಡುತ್ತೇನೆ.” ಆಶಾಳಿಗೆ ಒಂದು ದ್ವನಿ ಕೇಳಿಸಿತು. ಅವಳ ಮುಖದಲ್ಲಿ ಆಶ್ಚರ್ಯಮೂಡಿತು. ಆ ಧ್ವನಿ ಬೇರೆ ಯಾರದೋ ಆಗಿರದೆ ಅವಳ ಜೊತೆ ಪಯಣಿಸುತ್ತಿದ್ದ ವೃದ್ಧೆಯದೇ ಆಗಿತ್ತು. ಇಷ್ಟು ಸಮಯದವರೆಗೂ ಆಕೆ ಮೌನವಾಗಿ ಪ್ರಯಾಣ ಮಾಡುತ್ತಿದ್ದರು.
ವೃದ್ಧೆ ತನ್ನ ಗಂಡನನ್ನು ಉದ್ದೇಶಿಸಿ ಹೇಳಿದರು, “ನೀವು ಇವರನ್ನೆಲ್ಲಾ ಆ ಕಡೆ ಕಳುಹಿಸಿ, 2-3 ಬೆಡ್‌ಶೀಟ್‌ಹಾಸಿ. ಇಲ್ಲಿ ನಾವು ಹೆಂಗಸರು ಮಾತ್ರ ಇರುತ್ತೇವೆ,” ಆಕೆ ಆದೇಶಿಸಿದಂತೆಲ್ಲಾ ಆ ವೃದ್ಧ ಪಾಲಿಸುತ್ತಾ ಹೋದರು. ವೃದ್ಧೆ ಯಾವುದೋ ದಕ್ಷ ವೈದ್ಯೆಯಂತೆ ಚಂದ್ರಾಳನ್ನು ಬೆಡ್‌ಶೀಟ್ ಮೇಲೆ ಮಲಗಿಸಿದರು. ಆಶಾ ಅನಾಯಾಸವಾಗಿ ತನ್ನ ಜಾಗ ಬಿಟ್ಟು ಮೇಲೆದ್ದಳು. ವೃದ್ಧ ವ್ಯಕ್ತಿ ಕೋಚ್‌ನ ಎರಡೂ ಕಡೆಯನ್ನು ಬೆಡ್‌ಶೀಟ್‌ನಿಂದ ಮುಚ್ಚಿದರು. ತಾನೂ ಹೊರಗೆ ಹೋಗಿ ಜನಸಂದಣಿ ನಿಯಂತ್ರಿಸುತ್ತಿದ್ದರು.
“ಯಾರಾದರೂ ಬಿಸಿ ನೀರು ತರುತ್ತೀರಾ?” ವೃದ್ಧೆಯ ಗಟ್ಟಿ ಕೂಗಿಗೆ ಕೋಚ್‌ನ ಹೊರಗೆ ನಿಂತಿದ್ದ ಜನರಲ್ಲಿ ಕೋಲಾಹಲ ಎಬ್ಬಿಸಿತು. ಜನರು ಬಿಸಿ ನೀರು, ಡೆಟಾಲ್‌ಮತ್ತು ಏನೇನೋ ವಸ್ತುಗಳನ್ನು ತರಲು ಓಡಿದರು.
“ಮಗೂ, ಸ್ವಲ್ಪ ಇವಳನ್ನು ಹಿಡಿದುಕೋ,” ಆಶಾಳಿಗೆ ಆದೇಶ ನೀಡಿದಳು. ಅವಳು ಚಂದ್ರಾಳ ಬಾಹುಗಳನ್ನು ಬಿಗಿಯಾಗಿ ಹಿಡಿದುಕೊಂಡು ನಿಂತಳು.
ಬಿಸಿ ನೀರು ತಂದರು. ವೃದ್ಧೆ ಚಂದ್ರಾಳಿಗೆ ಉತ್ಸಾಹ ತುಂಬುತ್ತಿದ್ದಳು. “ಗಾಬರಿಯಾಗಬೇಡ ಮಗಳೇ, ಧೈರ್ಯವಾಗಿರು. ಮಗವನ್ನು ಕೆಳಕ್ಕೆ ತರಲು ಪ್ರಯತ್ನಿಸು,” ಒಬ್ಬ ಕುಶಲ ನರ್ಸ್ ಹೇಳುವ ರೀತಿ ಚಂದ್ರಾಳಿಗೆ ಆದೇಶ ನೀಡಿದರು.
“ಉಸಿರು ತೆಗೆದುಕೋ, ಸ್ವಲ್ಪ ಪ್ರಯತ್ನ ಪಡು. ಹಾಂ, ಹಾಗೇ.” ಚಂದ್ರಾಳಿಗೆ ಆಯಾಸವಾಗುತ್ತಿತ್ತು. ಸಂದೇಶ ಪಡೆದ ಕೋಚ್‌ಅಟೆಂಡರ್ ತುಮಕೂರು ಸ್ಟೇಷನ್‌ಗೆ ವಿಷಯ ತಿಳಿಸಿದ್ದರು. ಬೆಂಗಳೂರು ತಲುಪಲು ಇನ್ನೂ 40 ನಿಮಿಷವಿತ್ತು, ಅಲ್ಲಿಯವರೆಗೂ ಏನಾಗುವುದೋ…
ಆ ಪರಿಸ್ಥಿತಿಗೆ ಹೊಂದಿಕೊಂಡು ತಾನೂ ಅದರಲ್ಲಿ ಭಾಗಿಯಾಗಿರುವುದು ಆಶಾಳ ಅನುಭವಕ್ಕೆ ಬಂದಿತು. ಒಮ್ಮೆ ಬಿಸಿ ನೀರು ಕೊಟ್ಟರೆ, ಇನ್ನೊಮ್ಮೆ ಚಂದ್ರಾಳ ತಾಯಿಯ ಜೊತೆ ಅವಳ ದೇಹ ಒರೆಸುತ್ತಿದ್ದಳು. ಆ ಪರಿಸ್ಥಿತಿಯಲ್ಲಿ ಎಷ್ಟು ಮಾಡಿದರೂ ಕಡಿಮೆಯೇ. ಹೊರಗೆ ವೃದ್ಧ ವ್ಯಕ್ತಿ ತನ್ನ ಹಾಗೂ ಚಂದ್ರಾಳ ಮನೆಯವರಿಗೆ ಮೊಬೈಲ್‌ನಿಂದ ವಿಷಯ ತಿಳಿಸುತ್ತಿದ್ದರು.
“ಹಾಂ ನೋಡು, ಯಾವುದಾದರೂ ಒಳ್ಳೆಯ ಗೈನಾಕಲಜಿಸ್ಟ್ ಜೊತೆಯಲ್ಲಿ ಕರೆದುಕೊಂಡು ಬನ್ನಿ, ಸ್ಥಿತಿ ಸ್ವಲ್ಪ ಗಂಭೀರವಾಗಿದೆ.”
ವೃದ್ಧೆಯ ಹಣೆಯ ಮೇಲ್ಭಾಗ ಬೆವರು ಮೂಡಿತ್ತು. ಮಗು ಹೊರಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಚಂದ್ರಾ ತುಂಬಾ ಬಸವಳಿದಿದ್ದಳು.
ಅವಳ ಕಣ್ಣುಗಳಲ್ಲಿ ಗಾಢ ವೇದನೆ, ನಿದ್ದೆ ಮತ್ತು ಅರೆಪ್ರಜ್ಞಾವಸ್ತೆ ಇತ್ತು. ಏಕಾಏಕಿ ಅವಳಿಗೆ ಏನಾದರೂ ತೊಂದರೆಯಾದರೆ ಏನು ಮಾಡುವುದೆಂಬ ಭಯ ಆಶಾಳಿಗೆ ಬಂದಿತು. ಚಂದ್ರಾಳ ತಾಯಿ ಸಹ ಇದೇ ಭಯದಿಂದ ಥರಥರ ನಡುಗುತ್ತಿದ್ದರು.
ವೃದ್ಧೆ ಅವಳನ್ನು ಗದರಿಸಿದರು, “ಇಂತಹ ಪರಿಸ್ಥಿತಿಯಲ್ಲಿ ಇವಳನ್ನು ಟ್ರೈನಿವಲ್ಲಿ ಸುತ್ತಾಡಲು ಏಕೆ ಕರೆತಂದಿರುವೆ?” ತಾಯಿಯ ಪರಿಸ್ಥಿತಿ ಶೋಚನೀಯವಾಗಿತ್ತು. ಬಿಕ್ಕಳಿಸುತ್ತಾ ನೀರಸ ಧ್ವನಿಯಲ್ಲಿ ಹೇಳಿದರು, “ಇದು ಚಂದ್ರಾಳಿಗೆ ಮೂರನೇ ಹೆರಿಗೆ, ಮೊದಲ ಎರಡು ಮಕ್ಕಳು ಜನಿಸುವ ಮೊದಲೇ ಹೊರಟು ಹೋಗಿದ್ದವು. ಈ ಸಲ ಹೆರಿಗೆಯನ್ನು ಬೆಂಗಳೂರಿನಲ್ಲೇ ಮಾಡಿಸಬೇಕೆಂದು ಹೊರಟಿರುವಾಗ ಇದೆಲ್ಲಾ ನಡೆದುಹೋಯಿತು.”
ಮಾತಾನಾಡುತ್ತಲೇ ಆ ವೃದ್ಧೆ ಚಂದ್ರಾಳಿಗೆ ಹೆರಿಗೆ ಮಾಡಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಲೇ ಇದ್ದರು. ಇದ್ದಕ್ಕಿದ್ದಂತೆ ಒಂದು ಭಯಾನಕ ಕೂಗು ಚಂದ್ರಾಳ ಬಾಯಿಂದ ಹೊರಟಿತು. ಆಶಾಳ ಹೃದಯ ನಿಂತಂತಾಯಿತು. ಅವಳು ಕಣ್ಣುಗಳನ್ನು ಮುಚ್ಚಿಕೊಂಡಳು. ಹೊರಗೆ ಸ್ಮಶಾನ ಮೌನ ಆವರಿಸಿತ್ತು. ಆಶಾ ಪ್ರಾರ್ಥನೆ ಮಾಡುತ್ತಿದ್ದಳು.
ವೃದ್ಧೆ ಇನ್ನೂ ಚಂದ್ರಾಳಿಗೆ ಧೈರ್ಯ ತುಂಬುತ್ತಿರುವ ಧ್ವನಿ ಕೇಳಿಸುತ್ತಿತ್ತು, “ಇನ್ನೂ ಸ್ವಲ್ಪ, ಇನ್ನೊಂದಿಷ್ಟು, ಹಾಂ, ಹಾಗೆ,” ವೃದ್ಧೆಯ ಧ್ವನಿಯಲ್ಲಿ ಒಂದು ರೀತಿಯ ಉತ್ಸಾಹ ಹೊರಹೊಮ್ಮುತ್ತಿರುವುದು ಆಶಾ ಕಣ್ಣುಚ್ಚಿಕೊಂಡಿದ್ದರೂ ತಿಳಿಯಿತು. ಒಂದು ಹೊಸ ಭರವಸೆ ಮೂಡಿತ್ತು.
ಆಶಾ ಧೈರ್ಯ ತಂದುಕೊಂಡು ಕಣ್ಣು ತೆಗೆದಾಗ ಒಂದು ಅಪರೂಪದ ದೃಶ್ಯ ಕಣ್ಣಿಗೆ ಬಿತ್ತು. ಒಂದು ಜೀವ ಗರ್ಭದಿಂದ ಹೊರಬಂದು ಉಸಿರಾಡುತ್ತಿತ್ತು. ಅದೂ ವೊದಲನೇ ಸಲ. ಮಗುವಿನ ತಲೆ ನೋಡ ನೋಡುತ್ತಿದ್ದಂತೆ ಚಂದ್ರಾಳ ಧೈರ್ಯ ಮತ್ತು ವೃದ್ಧೆಯ ಸಾಹಸದಿಂದ ಆ ಮಗು ಸುರಕ್ಷಿತವಾಗಿ ಭೂಮಿಗೆ ಇಳಿಯಿತು.
ಒಬ್ಬ ಪುಟ್ಟ ಕಂದ ಹೊಸ ಪ್ರಪಂಚಕ್ಕೆ ಬಂದು ಅಳತೊಡಗಿದ. ತಾಯಿಯ ಗರ್ಭದ ಸಂವೇದನೆ ತುಂಬಿದ ಬಿಸಿ ಮತ್ತು ಸುರಕ್ಷತೆಯಿಂದ ವಂಚಿತವಾದ ಆ ಹಸುಗೂಸು ಭೂಮಿಯ ಅಸುರಕ್ಷತೆಯಿಂದ ಅಳತೊಡಗಿತು. ಕೋಚ್‌ನಲ್ಲಿ ಸಂತೋಷದ ಅಲೆ ತೇಲಿತು. ಮಗುವಿನ ಅಳು ಕೇಳಿದ ಹೊರಗಿನ ಜನರಿಗೂ ಸಮಾಧಾನ. ಹೊರಗಿನವರಾದರೇನು, ಆ ಮಗುವಿಗೆ ಜೀವನ ನೀಡುವುದರಲ್ಲಿ ಎಲ್ಲರೂ ಸಹಕರಿಸಿದ್ದರು. ಚಂದ್ರಾಳ ತಾಯಿ ಖುಷಿ ಮತ್ತು ಶಾಂತಿಯಿಂದ ಜೋರಾಗಿ ಅಳುತ್ತಿದ್ದರು.
ಚಂದ್ರಾಳ ತುಟಿಗಳ ಮೇಲೂ ಕೃತಜ್ಞತಾಪೂರ್ಕ ನಗುವಿತ್ತು. ಅವಳು ವೃದ್ಧೆಗೆ ಕೈಮುಗಿಯುತ್ತಾ, ಆಯಾಸಗೊಂಡಿದ್ದ ಕಣ್ಣುಗಳನ್ನು ಮುಚ್ಚಿದಳು. ನೋವಿನಿಂದ ಈಗ ಅವಳಿಗೆ ಮುಕ್ತಿ ಸಿಕ್ಕಿತ್ತು. ವೃದ್ಧೆ ಮಗುವನ್ನು ಶುದ್ಧಗೊಳಿಸುತ್ತಾ, ಸಂಭಾಳಿಸುತ್ತಾ. ಮುಂದೆ ಏನೇನು ಮಾಡಬೇಕೆಂದು ಚಂದ್ರಾಳ ತಾಯಿಗೆ ಸಲಹೆ ನೀಡುತ್ತಿದ್ದರು. ಆಶಾಳ ಕಣ್ಣುಗಳು ತುಂಬಿಬಂದವು. ಆ ಕ್ಷಣ ಒಂದು ಕನಸಿನಂತಿತ್ತು. ತನ್ನ ಸೀಟನ್ನು ಯಾರೋ ಆಕ್ರಮಿಸಿಕೊಂಡಿದ್ದಾರೆಂಬುದು ಅವಳಿಗೆ ಮರೆತೇಹೋಗಿತ್ತು. ಒಂದು ಹೊಸ ಜೀವ ಅದರ ಮೇಲೆ ತನ್ನ ಅಧಿಕಾರವನ್ನು ಹೂಡಿತ್ತು. ಆದರೆ ಆಶಾಳಿಗೆ ಅದರ ಬಗ್ಗೆ ಯಾವುದೇ ಬೇಸರವಿರಲಿಲ್ಲ.
ತಾಯಿ ಮಗುವಿಗೆ ಹೊಸ ಬಟ್ಟೆ ತೊಡಿಸಿದರು. ಕೋಚ್ ಯಾವುದೋ ಆಸ್ಪತ್ರೆಯ ವಾರ್ಡಿನಂತೆ ಕಂಗೊಳಿಸುತ್ತಿತ್ತು. ಜನರು ತಾಯಿಮಗು ಮತ್ತು ಅಜ್ಜಿಗೆ ಜಾಗ ಮಾಡಿಕೊಡಲು ತಯಾರಾದರು.ಬಹುಶಃ ಯಾರಿಗೂ ತಮಗೆ ತೊಂದರೆಯಾಗಬಹುದೆಂದು ಭಾವಿಸದಿರುವುದು ಆಶಾಳ ಅನುಭವಕ್ಕೆ ಬಂದಿತು. ಬಹುಶಃ ಇನ್ನೆಂದೂ ಆ ಜನರು ಆ ತಾಯಿ ಮಗುವನ್ನು ಭೇಟಿ ಮಾಡುವುದಿಲ್ಲ. ಆದರೆ ತಮ್ಮ ಮನೆಯಲ್ಲೇ ಯಾವುದೋ ಸಮಾರಂಭವಿರುವಂತೆ ಜನರು ಉತ್ಸಾಹದಲ್ಲಿ ಮುಳುಗಿದ್ದರು.
ವೃದ್ಧ ವ್ಯಕ್ತಿಯ ಕಣ್ಣಿನಲ್ಲಿ ಕಣ್ಣೀರಿನ ಒಂದು ತೆಳುವಾದ ಛಾಯೆ ಅವಳ ಕಣ್ಣಿಗೆ ಕಂಡಿತು. ಅದನ್ನು ನೋಡಿ ಅವರ ಪತ್ನಿ ಮುಗುಳ್ನಗುತ್ತಿದ್ದರು. ಏನೋ ಯೋಚಿಸಿ ಅವರಿಬ್ಬರು ಅಳುತ್ತಿದ್ದರು. ಖುಷಿಯಿಂದ ಅವರಿಬ್ಬರ ಕಣ್ಣು ತುಂಬಿ ಬಂದಿರಬಹುದೆಂದು ಆಶಾ ಯೋಚಿಸಿದಳು.
ಬೆಂಗಳೂರು ಸ್ಟೇಷನ್ ಬರುತ್ತಿತ್ತು. ಮಗುವಿಗೆ ಉಡುಗೊರೆ ರೂಪದಲ್ಲಿ ಕೆಲವು ಸಾವಿರ ರೂಪಾಯಿಗಳು ಸಿಕ್ಕಿದವು. ಚಂದ್ರಾಳ ತಾಯಿ ಪದೇ ಪದೇ ಮಗುವಿನ ಅದೃಷ್ಟ ಕೊಂಡಾಡುತ್ತಿದ್ದಳು. ತಾಯಿ ವೃದ್ಧೆಯ ಕಾಲನ್ನು ಹಿಡಿಯುತ್ತಿದ್ದಂತೆ ವೃದ್ಧೆ ಅವಳನ್ನು ಮೇಲೆತ್ತಿದ್ದಳು. ಗಾಡಿ ಪ್ಲಾಟ್‌ಫಾರ್ಮನ್ನು ಪ್ರವೇಶಿಸಿತು. ಅವರ ಕೋಚ್‌ನಲ್ಲಿ ಹರ್ಷದ ಹೊಳೆಯೇ ಹರಿಯಿತು. ಡಾಕ್ಟರ್ ಬಂದಿದ್ದರು. ಅವರು ತಾಯಿ ಮಗುವಿನ ನಿರೀಕ್ಷೆಯಲ್ಲಿದ್ದರು. ಚಂದ್ರಾಳ ಗಂಡ ಮತ್ತು ಕುಟುಂಬದವರು ಇಡೀ ಸ್ಟೇಷನ್‌ತುಂಬಾ ಸಿಹಿ ಹಂಚುತ್ತಿದ್ದರು. ಭಾರತೀಯ ರೈಲ್ವೆಯ ಈ ಸಂತಾನವನ್ನು ನೋಡಲು ಅಲ್ಲಿ ಜನಸಂದಣಿಯೇ ನೆರೆದಿತ್ತು.
ಸ್ವಲ್ಪ ಜನಸಂದಣಿ ಕಡಿಮೆಯಾದರೆ ತಾನು ಮನೆಗೆ ಹೋಗಬಹುದೆಂದು ಆಶಾ ಕಾಯುತ್ತಿದ್ದಳು. ವೃದ್ಧ ವ್ಯಕ್ತಿ ಮೂಟೆಗಳನ್ನು ತೆಗೆದಿಡುತ್ತಿದ್ದರು. ಅವರ ಹೆಂಡತಿಯ ಕಣ್ಣುಗಳಲ್ಲಿ ಮೊದಲಿನಂತೆ ವಿಷಾದದ ಛಾಯೆ ತುಂಬಿತ್ತು. ಅವರು ಪದೇ ಪದೇ ಆ ನವಜೀವವನ್ನು ನೋಡುತ್ತಿದ್ದರು. ಒದ್ದೆ ಕಣ್ಣುಗಳಿಂದ ಏನೇನೋ ಬಡಬಡಿಸುತ್ತಾ ಒಂದು ಸಣ್ಣ ಗಂಟನ್ನು ತೆಗೆದುಕೊಂಡು ಗಂಡನನ್ನು ಹಿಂಬಾಲಿಸಿದರು.
ಗಾಡಿಯಿಂದ ಕೆಳಗೆ ಇಳಿಯುತ್ತಿದ್ದಂತೆ ವೃದ್ಧ ವ್ಯಕ್ತಿಯ ಸಂಬಂಧಿಕರ ದೊಡ್ಡ ಗುಂಪೇ ಅವರನ್ನು ಸುತ್ತುವರಿಯಿತು. ವೇದನೆಯಿಂದ ತುಂಬಿದ ಚೀತ್ಕಾರ ಮುಗಿಲು ಮುಟ್ಟಿತು. ಒಬ್ಬ ಯುವತಿ ವೃದ್ಧೆಯನ್ನು ಆಲಂಗಿಸುತ್ತಾ ಅಳುತ್ತಿದ್ದಳು. ವೃದ್ಧೆ ಸಂಭಾಳಿಸಿಕೊಳ್ಳಲು ಪ್ರಯತ್ನಿಸಿ ಸೋತು ಹೋದರು. ಗಂಟು ಬಿಚ್ಚಿಹೋಯಿತು. ಒಂದು ಸಣ್ಣ ಕಳಸ ವೃದ್ಧೆಯ ಕೈಯಲ್ಲಿತ್ತು. ಯಾರದೋ ಅಂತಿಮ ಅವಶೇಷದ ಚಿತಾಭಸ್ಮ ಅದರಲ್ಲಿತ್ತು . ಕೋಚ್‌ನೊಳಗೆ ಪಿಸುಗುಟ್ಟುವಿಕೆ ಆರಂಭವಾಯಿತು. ಅಲ್ಲಿ ಇಲ್ಲಿ ಕಿವಿಗೆ ಬಿದ್ದ ಸುದ್ದಿಯಿಂದ ಆಶಾಳಿಗೆ ವಿಷಯ ತಿಳಿಯಿತು. ಸೈನಿಕನಾಗಿದ್ದ ಆ ವೃದ್ಧ ದಂಪತಿಗಳ ಮಗ ಗಲಾಟೆಯಲ್ಲಿ ಸತ್ತು ಹೋಗಿದ್ದ. ತಂದೆ ತಾಯಿ ದಾವಣಗೆರೆಯಿಂದ ಅವನ ಅಂತಿಮ ಅವಶೇಷಗಳನ್ನು ತೆಗೆದುಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಅದು ವಿಚಿತ್ರ ವಿಡಂಬನೆಯಂತಿತ್ತು. ಒಂದು ಕಡೆ ನವಜೀವನ ನಿರ್ಮಾಣ, ಇನ್ನೊಂದು ಕಡೆ ಪ್ರಾಣವನ್ನು ಸದಾಕಾಲಕ್ಕಾಗಿ ಪಂಚತತ್ವದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ. ಎರಡೂ ಕಾರ್ಯಗಳು ಆ ವೃದ್ಧ ಮತ್ತು ಅವರ ಪತ್ನಿಯ ಕೈಗಳಿಂದಲೇ ಸಂಪನ್ನಗೊಳಿಸುತ್ತಿತ್ತು.
ವೃದ್ಧ ತಾಯಿ ಅಸ್ಥಿ ಕಲಶನ್ನು ಆಲಂಗಿಸಿ ಅಳುತ್ತಿದ್ದರು. ಈ ಕಡೆ ನವಜಾತ ಶಿಶುವನ್ನು ಅಪ್ಪಿಕೊಂಡ ಆ ಹೊಸ ತಾಯಿ ಅ ವೃದ್ಧ ಹೆಂಗಸಿಗಾಗಿ ಅಳುತ್ತಿದ್ದಳು. ಆ ವೃದ್ಧ ತಾಯಿ ತನ್ನ ದುಃಖವನ್ನು ಸ್ವಲ್ಪ ಕಾಲ ಮುಚ್ಚಿಕೊಂಡು ಅವಳ ಸಂತಾನಕ್ಕೆ ಜೀವವನ್ನು ನೀಡಿದ್ದರು.
ನವಜಾತ ಶಿಶು ಕಣ್ಮುಚ್ಚಿ ಮಲಗಿತ್ತು. ಸ್ವಲ್ಪ ಸಮಯದ ಆರಾಮ, ಮತ್ತೆ ಜಾಗ ಮಾಡಿಕೊಳ್ಳಲು ಸ್ಕೂಲಿನಲ್ಲಿ, ಕಾಲೇಜಿನಲ್ಲಿ, ಬಸ್ಸಿನಲ್ಲಿ ನೌಕರಿಗಾಗಿ ಹೊಡೆತ ತಿನ್ನುತ್ತಾ ತನ್ನ ಅಸ್ತಿತ್ವ ಮಾಡಿಕೊಳ್ಳುತ್ತದೆ.
ಒಂದು ಅಸ್ತಿತ್ವದ ಹುಡುಕಾಟದಲ್ಲಿ ಅವನ ಕುಟುಂಬದವರು ಜೊತೆ ನೀಡುತ್ತಿದ್ದಾರೆ. ಅಲ್ಲಿ ವೃದ್ಧ ದಂಪತಿಗಳ ಮಗ ತನ್ನ ಇಡೀ ಅಸ್ತಿತ್ವವನ್ನು ಭಸ್ಮ ಮಾಡಿಕೊಂಡು ಒಂದು ಗಂಟಿನಲ್ಲಿ ಉಳಿದಿದ್ದ. ಅವನೇನೋ ತನ್ನ ಜಾಗ ಬಿಟ್ಟಿದ್ದ . ಅವನು ಉಳಿಸಿದ್ದು ಗಾಢವಾದ ದುಃಖವನ್ನು, ತನ್ನ ತಂದೆ ತಾಯಿಯ ಜೀವನದಲ್ಲಿ, ಯಾರೂ ತುಂಬಲಾರದ ಒಂದು ಖಾಲಿ ಜಾಗವನ್ನು ಹೆಂಡತಿಯ ಹೃದಯದಲ್ಲಿ, ಜೀವನದ ಎರಡು ವೈರುಧ್ಯಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಆಶಾ ನೋಡಿದಳು.
ವೃದ್ಧ ತಂದೆ ತಾಯಿ ತಮ್ಮ ಕರುಳಿನ ಕುಡಿಯ ಕೆಲವು ಅಂತಿಮ ನೆನಪುಗಳನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದರು. ಚಂದ್ರಾ ಸಹ ತನ್ನ ಬಂಧು ಬಳಗದ ಜೊತೆ ಹೋಗುತ್ತಿದ್ದಳು. ಆಶಾ ತನ್ನ ಬ್ಯಾಗನ್ನು ಎತ್ತಿಕೊಂಡಳು.
ಮನೆಗೆ ಹೋದ ನಂತರ ಆಫೀಸಿನ ಕೆಲಸದ ನಿಮಿತ್ತ ಒಂದೆರಡು ದಿನ ತವರಿಗೆ ಬಂದಿರುವುದಾಗಿ ತಾಯಿಗೆ ಹೇಳಬೇಕೆಂದು ನಿರ್ಧರಿಸಿದಳು. ಗಂಡನೊಡನೆ ಜಗಳವಾಡಿಕೊಂಡು ತವರಿಗೆ ಬಂದಿದ್ದೇನೆಂದು ಈಗ ಹೇಳುವ ಅವಶ್ಯಕತೆ ಇಲ್ಲ. ನಾಳೆಯೇ ಹಿಂದಿರುಗಿ ಬರುತ್ತಿದ್ದೇನೆಂದು ಸುರೇಶನಿಗೆ ಫೋನ್ ಮಾಡಿ ತಿಳಿಸಬೇಕೆಂದು ನಿಶ್ಚಯ ಮಾಡಿದಳು. ಅವನ ತಾಯಿ, ತಂದೆ, ಅಜ್ಜಿ, ತಾತ, ಸಂಬಂಧಿಕರು ಎಲ್ಲರೂ ಇರುವ ಮನೆಗೆ ತಾನು ಹಿಂದಿರುಗಬೇಕು. ಸುರೇಶನನ್ನು ಅವರೆಲ್ಲರಿಂದ ಬೇರೆ ಮಾಡಿ, ಅವರ ಜೀವನದಲ್ಲಿ ಯಾವುದೇ ಕಂದಕ ಸೃಷ್ಟಿ ಮಾಡುವುದಿಲ್ಲ. ಅವಳ ಅತ್ತೆ ಮನೆಯವರಿಗೆ ನೋವನ್ನು ನೀಡಿ, ಬೇರೆ ಪ್ರಪಂಚ ಸೃಷ್ಟಿ ಮಾಡುವುದಿಲ್ಲ ಎಂದು ಅವಳು ನಿರ್ಧರಿಸಿದಳು. ಹಗುರವಾದ ಮನಸ್ಸಿನಿಂದ ಅವಳು ರಿಕ್ಷಾ ಕರೆದಳು. ಮೇಲೆ ಕಣ್ಣೆತ್ತಿ ನೋಡಿದಾಗ ಸೂರ್ಯ ಮೊದಲಿಗಿಂತ ಹೆಚ್ಚು ಪ್ರಕಾಶ ಬೀರುತ್ತಿದ್ದ. ಅವಳ ತಲೆಯ ಮೇಲೆ ಒಂದು ಸುಂದರವಾದ ಆಗಸವಿತ್ತು.