ಮನೆ ಮುಂದಿನ ವರಾಂಡಾದಲ್ಲಿ ವಯಸ್ಸಾದ ತಂದೆ, ಜೊತೆಗೆ ಮಗಳು ಕುಳಿತಿದ್ದರು. ಅಷ್ಟರಲ್ಲಿ ಅವಳ ಬಾಯ್‌ಫ್ರೆಂಡ್‌ ಅಲ್ಲಿಗೆ ಬಂದ.

ಹುಡುಗಿ : ನೀವು ರಾಮ್ ಪಾಲ್‌ ಯಾದವ್ ರ `ಡ್ಯಾಡ್‌ ಈಸ್‌ ಅಟ್‌ ಹೋಂ,’ ಬುಕ್‌ ತಂದಿದ್ದೀರಾ?

ಹುಡುಗ : ಇಲ್ಲ. ನಾನು ಕೀಮತಿ ಆನಂದ್‌ರ `ವೇರ್‌ ಶುಡ್‌ ಐ ವೆಯ್ಟ್ ಫಾರ್‌ ಯೂ?’ ತಂದಿದ್ದೇನೆ.

ಹುಡುಗಿ : ಬೇಡ ಬಿಡಿ, ನನ್ನ ಬಳಿ ಪ್ರೇಮ್ ವಾಜ್‌ಪೇಯಿ ಅವರ `ಅಂಡರ್‌ ದಿ ಮ್ಯಾಂಗೋ ಟ್ರೀ’ ಪುಸ್ತಕ ಇದೆ.

ಹುಡುಗ : ಸರಿ. ನೀವು ಜೊತೆಗೆ ಆನಂದ್‌ಬಕ್ಷಿಯವರ `ಕಾಲ್‌ಯೂ ಇನ್‌ ಫೈವ್‌ ಮಿನಿಟ್ಸ್’ ಸಹ ಓದಬೇಕು.

ಹುಡುಗಿ : ಆಯ್ತು. ಜೊತೆಗೆ ನಾನು ಜಾನ್‌ಅಬ್ರಹಾಮ್ ರ `ಐ ವೋಂಟ್‌ ಲೆಟ್‌ ಯೂ ಡೌನ್‌’ ಸಹ ತರುತ್ತೀನಿ.

ಅದಾದ ಮೇಲೆ ಆ ಹುಡುಗ ಹುಡುಗಿಯ ತಂದೆಯ ಕಾಲಿಗೆ ವಿನಮ್ರವಾಗಿ ನಮಸ್ಕರಿಸಿ ಅಲ್ಲಿಂದ ಹೊರಟುಹೋದ. ಹುಡುಗಿಯ ತಂದೆ ಇವರಿಬ್ಬರ ಮಾತುಗಳನ್ನೂ ಗಮನವಿಟ್ಟು ಕೇಳುತ್ತಿದ್ದರು.

ತಂದೆ : ಅದೆಲ್ಲ ಸರಿ ಕಣಮ್ಮ, ಈ ಹುಡುಗ ಇಷ್ಟೊಂದು ಪುಸ್ತಕ ಓದುತ್ತಾನಾ ಅಂತ?

ಹುಡುಗಿ : ಹೌದಪ್ಪ, ಈ ಹುಡುಗ ನಮ್ಮ ಕ್ಲಾಸಿನ ವೆರಿ ಇಂಟೆಲಿಜೆಂಟ್‌ ಬಾಯ್‌, ಗೊತ್ತಾ?

ತಂದೆ : ಹೌದೇನಮ್ಮ……? ಹಾಗಾದರೆ ಈ ಹುಡುಗನಿಗೆ ಒಮ್ಮೆ ಮುಂಶಿ ಪ್ರೇಮ್ ಚಂದ್‌ರ `ಓಲ್ಡ್ ಮೆನ್‌ ಆರ್‌ ನಾಟ್‌ ಸ್ಟುಪಿಡ್‌’ ಸಹ ಓದಬೇಕು ಅಂತ ಹೇಳು.

ಪುಟ್ನಂಜಿಗೆ ಜ್ವರ ಬಂತೆಂದು ಗುಂಡ ಅವಳನ್ನು ಡಾಕ್ಟರ್‌ಬಳಿ ಕರೆದೊಯ್ದ. ಸದಾ ಬಡಬಡ ಎಂದು ಬಾಯಿ ಮಾಡುವ ಪುಟ್ನಂಜಿ ಬಾಯಿಗೆ ಥರ್ಮಾಮೀಟರ್‌ ತುರುಕಿದ ಡಾಕ್ಟರ್‌ ಅವಳನ್ನು 5 ನಿಮಿಷ ಹಾಗೇ ಇರುವಂತೆ ಕೂರಿಸಿದರು. ಮೌನವಾಗಿರುವ ಹೆಂಡತಿಯನ್ನು ಗಮನಿಸಿ ಗುಂಡ ದಂಗಾದ.

ಮುಗ್ಧನಾದ ಗುಂಡ ತಕ್ಷಣ ವೈದ್ಯರನ್ನು ಪ್ರಶ್ನಿಸಿದ, “ಸಾರ್‌, ನಮಗೆ ಬೇಕಾದಾಗೆಲ್ಲ ಇದನ್ನು ಇವಳ ಬಾಯಿಗಿರಿಸಿ ಹೀಗೆ ಪರೀಕ್ಷಿಸಬಹುದೇ?” ಎಂದು ಕೇಳುವುದೇ?

ಹುಡುಗಿ : ನಿನಗೆ ಗೊತ್ತೇ? ಹೆಂಗಸರು ದಿನ ಮ್ಯಾಚಿಂಗ್‌ ಡ್ರೆಸ್‌ ಬದಲಾಯಿಸುವ ಹಾಗೆ ತಮ್ಮ ಸಾಕ್ಸ್ ಕೂಡ ಬದಲಾಯಿಸುತ್ತಾರೆ.

ಹುಡುಗ : ಅದೇ ಗಂಡಸರು ತಮ್ಮ ಸಾಕ್ಸ್ ಮೂಸಿ ನೋಡಿ, ಬಹುಶಃ ಈ ದಿನ ಇದರಲ್ಲಿ ನಿಭಾಯಿಸಬಹುದು ಅನ್ಸುತ್ತೆ, ಅಂದುಕೊಳ್ತಾರೆ.

ನೋವು ಬೆರೆತ ಹಾಸ್ಯ ವೈವಾಹಿಕ ಜೀವನದ ಮೊದಲ ವರ್ಷ. ಹೊಸದಾಗಿ ಮದುವೆಯಾದ ಖುಷಿಯಲ್ಲಿ ದಿನ ಬೇಗ ಬೇಗ ಕಳೆದು ಹೋಗುತ್ತಿತ್ತು. ಪತಿರಾಯ ಬೆಳಗ್ಗೆ ಬೇಗ ಆಫೀಸ್‌ಗೆ ಹೊರಡುವ ಆತುರದಲ್ಲಿ ಶೇವಿಂಗ್‌ ಮಾಡಿಕೊಳ್ಳುವಾಗ ಬ್ಲೇಡ್‌ ತಗುಲಿ ತುಸು ರಕ್ತ ಚಿಮ್ಮಿತು. `ಹ್ಞಾಂ’ ಎಂದು ನರಳಿದ.

ಅದನ್ನು ಕೇಳಿಸಿಕೊಂಡು ಪತ್ನಿ ಅಡುಗೆಮನೆಯಿಂದ ಒಂದೇ ಓಟ ಓಡಿ ಬಂದಳು, “ಏನಾಯ್ತು ಡಾರ್ಲಿಂಗ್‌?” ಏದುಸಿರು ಬಿಡುತ್ತಾ ಕೇಳಿದಳು.

“ಏನಿಲ್ಲ ಡಿಯರ್‌….. ತುಸು ಬ್ಲೇಡ್‌ ತಗುಲಿತು ಅಷ್ಟೇ,” ಅವಳು ಓಡಿಹೋಗಿ ಬೇಗ ಡೆಟಾಲ್‌ ಹಿಡಿದು ಬಂದಳು.

“ಛೇ….ಛೇ! ಎಷ್ಟು ರಕ್ತ ಬರ್ತಿದೆ ಅಂತೀನಿ…. ಇವತ್ತು ಆಫೀಸ್‌ಗೆ ಹೋಗಬೇಡಿ, ರಜ ಹಾಕಿ ವಿಶ್ರಾಂತಿ ಪಡೆಯಿರಿ. ಒಂದಿಷ್ಟು ಆ್ಯಪಲ್ ಕಟ್‌ ಮಾಡಿಕೊಡ್ತೀನಿ. ಹಸಿರು ಸೊಪ್ಪಿನ ಅಡುಗೆ, ಬೀಟ್‌ರೂಟ್‌ ಜೂಸ್‌ ಕುಡಿದರೆ ರಕ್ತ ಬೇಗ ಕೂಡಿಕೊಳ್ಳುತ್ತೆ,” ಎಂದು ಗಂಡನ ಗಲ್ಲಕ್ಕೆ ಬ್ಯಾಂಡೇಜ್‌ ಹಾಕಿದಳು.

ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಕಾಲ ಸರಿದು 10 ವರ್ಷಗಳಾಗಿವೆ. ಹೆಂಡತಿ ಅಡುಗೆ ಮಾಡುತ್ತಾ ಗಡಿಬಿಡಿಯಲ್ಲಿ ಒಗೆದ ಬಟ್ಟೆ ಒಣಗಿಸುತ್ತಿದ್ದಾಳೆ. ಆಫೀಸಿಗೆ ತಡವಾಯ್ತೆಂದು ಬೇಗ ಬೇಗ ಶೇವಿಂಗ್‌ ಮಾಡ ಹೊರಟ ಗಂಡ, ಗಾಯ ಮಾಡಿಕೊಂಡು `ಹ್ಞಾಂ’ ಎಂದು ಕಿರುಚಿದ.

“ಏನ್ರಿ ನಿಮ್ಮ ಗೋಳು…. ಕೂಗಿಕೊಂಡ್ರಿ,” ಹೆಂಡತಿ ಅಲ್ಲಿಂದಲೇ ಕೇಳಿದಳು.

“ಬ್ಲೇಡ್‌ ತಗುಲಿ ಕಟ್‌ ಆಯ್ತು ಡಿಯರ್‌….”

“ನಿಮ್ಮದು ಇದ್ದಿದ್ದೇ….. ಅಲ್ಲೇ ಬಾಥ್‌ರೂಮ್ ಶೇಲ್ಫ್ ನಲ್ಲಿ ಡೆಟಾಲ್‌ ಬಾಟಲ್ ಇದೆ, ಸಿಗದಿದ್ದರೆ ಒಂದಿಷ್ಟು ಸ್ಪಟಿಕ ತೆಗೆದುಕೊಂಡು ಉಜ್ಜಿಕೊಳ್ಳಿ. ಈ ರಾಶಿ ಕೆಲಸದ ಮಧ್ಯೆ ನಿಮಗೆ ಉಪಚಾರ ಮಾಡ್ಕೊಂಡು ಇರೋಕ್ಕಾಗಲ್ಲ!” ಗಂಡನೆಂಬ ಪ್ರಾಣಿ ತೆಪ್ಪಗೆ ಆಫೀಸಿಗೆ ಹೋಯಿತು.

ವರ್ಷಗಳುರುಳಿ ಮೊಮ್ಮಕ್ಕಳು ಬಂದಾಯ್ತು. ಗಂಡ ಎಂದಿನಂತೆ ಶೇವ್ ಮಾಡಲು ಹೋಗಿ ಗಡ್ಡದಿಂದ ರಕ್ತ ಬರಿಸಿಕೊಂಡ. ಕೆಮ್ಮುತ್ತಾ, ನರಳುತ್ತಾ ಮಲಗಿದ್ದ ಹೆಂಡತಿ “ಏನಾಯ್ತು? ಯಾಕೆ ಕಿರುಚಿದಿರಿ?” ಎಂದಳು.
“ಶೇವ್ ಮಾಡುವಾಗ ರಕ್ತ ಬಂತು,” ಎಂದ ಗಂಡ.

“ಬಡ್ಕೊಂಡ್ರು…. ಆ ಮದುವೆ ಮನೆಗೆ ನೀವು ಗಡ್ಡ ಬೋಳಿಸಿಕೊಂಡು ಹೋಗಲಿಲ್ಲ ಅಂತ ಯಾರು ಅಳ್ತಿದ್ರು? ಮುಖ್ಯ ಹೋಗದಿದ್ರೆ ತಾನೇ ಏನಂತೆ….? ಹಾಳಾಗಲಿ, ಒಂದಿಷ್ಟು ಅರಿಶಿನ ಮೆತ್ತಿ ಕೆಲಸ ನೋಡಿ,” ಎಂದು ಕೆಮ್ಮುತ್ತಾ ಆಕೆ ರಗ್ಗು ಹೊದ್ದು ಮಲಗಿದಳು.

ಪಾಪ, ಗಂಡನೆಂಬ ಪ್ರಾಣಿ ಸುಮ್ಮನಾಯಿತು.

ಕಾಲ ಕಳೆದಂತೆ ಪ್ರೀತಿ ಮಾಸುತ್ತದೆಯೇ?

ಟೀಚರ್‌: ಪ್ರಸಾದ್‌, ಸೀನಿಯರ್‌ಗೂ ಜೂನಿಯರ್‌ಗೂ ಇರೋ ವ್ಯತ್ಯಾಸವೇನು….?

ಪ್ರಸಾದ್‌: ಟೀಚರ್‌ ಸಮುದ್ರದ ಹತ್ತಿರ ವಾಸ ಮಾಡುವವರನ್ನು  ಸೀನಿಯರ್‌ ಎಂದೂ, ಮೃಗಾಲಯದ ಹತ್ತಿರ  ವಾಸಿಸುವವರನ್ನು ಜೂನಿಯರ್‌ ಎಂದೂ ಕರೆಯುತ್ತಾರೆ. ಗುಂಡನ ಅನಾರೋಗ್ಯ ಹೆಚ್ಚಲು ವೈದ್ಯರ ಬಳಿ ಹೋದ.

ಎಲ್ಲವನ್ನೂ ಪರೀಕ್ಷಿಸಿ ಅವರು ಹೇಳಿದರು, “ಏನೂ ಉಪಯೋಗವಿಲ್ಲ…. ಮನೆಗೆ ಹೊರಟುಬಿಡಿ. ನಾಳೆ ಬೆಳಗ್ಗೆವರೆಗೂ ಜೀವ ಉಳಿದರೆ ಹೆಚ್ಚು.”

ಮನೆಗೆ ಬಂದ ಗುಂಡ, ಗುಂಡಿಗೆ ವಿಷಯ ತಿಳಿಸಿ, ಆ ಕೊನೆಯ ರಾತ್ರಿಯಾದರೂ ಅವಳು ತನ್ನೊಂದಿಗೆ ಜಗಳ ಆಡದೆ ಪ್ರೀತಿಯಿಂದ ನಡೆದುಕೊಳ್ಳಲಿ ಎಂದು ಬಯಸಿದ.

ಅರ್ಧ ರಾತ್ರಿಯವರೆಗೂ ಕಳೆದ ಮಧುರ ನೆನಪುಗಳನ್ನು ಇಬ್ಬರೂ ಮೆಲುಕುಹಾಕಿದರು.

ಸ್ವಲ್ಪ ಹೊತ್ತಿಗೆ ಗುಂಡಿ ಮಲಗುವ ತಯಾರಿ ನಡೆಸಿದಳು. ಗುಂಡನಿಗೆ ಒಂದೇ ಶಾಕ್‌!

ಗುಂಡ : ಇದೇನು….? ಮಲಗಲು ಹೊರಟೆ….?

ಗುಂಡಿ : ನಿಮಗೇನು ಬಿಡಿ, ಬೆಳಗಾಗಲ್ಲ. ನಾನೀಗ ಮಲಗಿದರೆ ತಾನೇ ಬೆಳಗ್ಗೆ ಎದ್ದು ಸಾಗಹಾಕುವ ಕೆಲಸ ಗಮನಿಸಲು ಸಾಧ್ಯ…..?

ಜಿಮ್ ಸೇರಿ ಫಿಟ್‌ನೆಸ್‌ ಬಗ್ಗೆ ತಿಳಿದುಕೊಳ್ಳಿ. 200 ಕ್ಯಾಲೋರಿ ಬರ್ನ್‌ಮಾಡಲು ತಗುಲುವ ಸಮಯ :

ವಾಕಿಂಗ್‌…….. 45 ನಿಮಿಷ

ಜಾಗಿಂಗ್‌……… 18 ನಿಮಿಷ

ಈಜು ….. 16 ನಿಮಿಷ

ಟೆನಿಸ್‌…….. 23 ನಿಮಿಷ್ಯ

ವ್ಯಾಯಾಮ …… 31 ನಿಮಿಷ

ಇದೆಲ್ಲ ಆಗುತ್ತಿಲ್ಲ ಅಂತೀರಾ……?

ಹೆಂಡತಿ ಜೊತೆ ವಾದ ಮಾಡಲು ಯತ್ನಿಸಿ. ಕೇವಲ 2 ನಿಮಿಷ ಸಾಕು, ದೇಹವಿಡೀ ಉರಿದುಹೋಗಿ ಎರಡೇ ನಿಮಿಷದಲ್ಲಿ ಎಲ್ಲ ಬರ್ನ್‌ಆಗುತ್ತದೆ!

ಹೆಂಡತಿ ಜೊತೆ ಜಗಳವಾಡಿಕೊಂಡು ಅವಳು ಮಾತು ಬಿಟ್ಟಿದ್ದಾಳೆಂದು ಬೇಸರಿಸಿಕೊಂಡಿರುವ ಗಂಡಂದಿರಿಗಾಗಿ ಒಂದು ಕಿವಿಮಾತು :

ನೀವು ಎಂದಿನ ನಿಮ್ಮ ಸಣ್ಣಪುಟ್ಟ ಪ್ರಯತ್ನ ಮಾಡಿ ನೋಡಿ, ಆಗಲೂ ಯಶಸ್ಸು ಸಿಗದಿದ್ದರೆ, ಆಕೆ ಅಡುಗೆಮನೆಯಿಂದ ಸ್ನಾನ, ಸಂಡಾಸಿಗೆ ಹೋಗಿರುವ ಸಮಯ ನೋಡಿಕೊಂಡು (ಅಪ್ಪಿತಪ್ಪಿಯೂ ಅವಳಿಗೆ ಸುಳಿವು ಸಿಗಬಾರದು), ಅಡುಗೆಮನೆಯ ಎಲ್ಲಾ ಡಬ್ಬಾಗಳ ಮುಚ್ಚಳಗಳನ್ನೂ ನಿಮ್ಮ ಶಕ್ತಿಮೀರಿ ಟೈಟ್‌ಆಗಿ ಹಾಕಿಬಿಡಿ. ನಂತರ ಗಂಭೀರವಾಗಿ ಹಾಲ್‌ನಲ್ಲಿ ಪೇಪರ್‌ಓದಿ. ಆಗ ನೋಡಿ….

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ