ಗುರಿ ಬಿಡಬೇಡಿ. ಇವತ್ತಲ್ಲ ನಾಳೆ ನಾನು ಯಶಸ್ಸು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲದಿಂದ ಮುನ್ನಡೆಯಿರಿ. ಆಗ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ,” ಎನ್ನುವ ಮಮತಾ ಇಂದಿನ ಯುವತಿಯರಿಗೆ ಮಾರ್ಗದರ್ಶಿ ಆಗಿದ್ದಾರೆ.

ಸಾಂಪ್ರದಾಯಿಕ ಕುಟುಂಬದ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಜನಸಮೂಹದೆದುರು `ಬಾಡಿ ಬಿಲ್ಡರ್‌’ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಯಾರೂ ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಆದರೆ ಅಂತಹದೊಂದು ಅಪರೂಪದ ಸಾಧನೆಗೆ ಕಾರಣವಾಗಿರುವವರು ಮಮತಾ ಸನತ್‌ಕುಮಾರ್‌. 5 ವರ್ಷದ ಹೆಣ್ಣು ಮಗುವಿನ ತಾಯಿಯಾದ ಇವರನ್ನು ಆ ಕ್ಷೇತ್ರದವರು ಪ್ರೀತಿಯಿಂದ `ಮಸಲ್ ಮಾಮ್ ಮಮತಾ’ ಎಂದು ಕರೆಯುತ್ತಾರೆ.

ಈ ಕ್ಷೇತ್ರಕ್ಕೆ ಬಂದದ್ದೇ ಅಪರೂಪ!

ಮಮತಾ ಮೂಲತಃ ಗೌರಿಬಿದನೂರು ತಾಲ್ಲೂಕಿನ ಬಸವಪುರ ಗ್ರಾಮದವರು. ಹೈಸ್ಕೂಲು ತನಕದ ಶಿಕ್ಷಣವನ್ನು ತಮ್ಮ ಗ್ರಾಮದಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ತುಮಕೂರಿನಲ್ಲಿ ಪಡೆದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇರದೇ ಇದ್ದುದರಿಂದ ಅವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ, ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಟೆಲಿ ಮಾರ್ಕೆಟಿಂಗ್‌ವಿಭಾಗದಲ್ಲಿ ಸೂಪರ್‌ವೈಸರ್‌ ಆಗಿ ಸೇರಿಕೊಂಡರು. ಅಲ್ಲಿ ಅವರಿಗೆ ಸನತ್‌ ಕುಮಾರ್‌ ಎಂಬುವವರ ಪರಿಚಯವಾಗುತ್ತದೆ. ಆ ಪರಿಚಯ ಪ್ರೀತಿಯಲ್ಲಿ, ಬಳಿಕ ಮದುವೆಯಲ್ಲಿ ಪರಿವರ್ತನೆಗೊಂಡಿತು. ಅದಾದ ಒಂದು ವರ್ಷದಲ್ಲಿ ಮಗಳು ಜನಿಸಿದಳು. ಅಲ್ಲಿಯವರೆಗೂ ಮಮತಾರದು ಅಷ್ಟೇನೂ ವಿಶೇಷತೆ ಇರದ ಸಹಜ ಜೀವನ.

ಹೊಸ ವರ್ಷದ ಸಂಕಲ್ಪ

ಇಷ್ಟೊತ್ತಿಗಾಗಲೇ ಮಮತಾರ ದೇಹ ತೂಕ 89 ಕಿಲೋ ತಲುಪಿ ಒಂದು ರೀತಿಯಲ್ಲಿ ಅವರಿಗೆ ಜೀವನದ ಬಗ್ಗೆ ನಿರಾಶೆ ಉಂಟು ಮಾಡಿತ್ತು. 2016ರ ಹೊಸ ವರ್ಷದ ಮೊದಲ ದಿನವೇ `ನಾನು ಹೇಗಾದರೂ ಮಾಡಿ ದೇಹತೂಕ ಕಡಿಮೆ ಮಾಡಿಕೊಳ್ಳಲೇಬೇಕು,’ ಎಂಬ ಸಂಕಲ್ಪ ತೊಟ್ಟು, ತಮ್ಮ ಮನೆಯ ಸಮೀಪವೇ ಇದ್ದ ಜಿಮ್ ಒಂದಕ್ಕೆ ಸೇರಿಕೊಂಡು ದಿನ ಸಾಕಷ್ಟು ಬೆವರು ಹರಿಸಿ ಹಲವು ರೀತಿಯ ವ್ಯಾಯಾಮ ಮಾಡುತ್ತಾರೆ. ಅವರ ಅವಿರತ ಪ್ರಯತ್ನದ ಫಲವಾಗಿ ಒಂದು ವರ್ಷದಲ್ಲಿ ಅವರ ದೇಹ ತೂಕ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಯಿತು. ಆ ರೀತಿ ಅವರಲ್ಲಿ ಸಾಕಷ್ಟು ಜೀವನೋತ್ಸಾಹ ಮೂಡಿತು.

ತರಬೇತುದಾರಳಾದದ್ದು…….

ಜಿಮ್ ನಲ್ಲಿ ಸಾಕಷ್ಟು ಪ್ರ್ಯಾಕ್ಟೀಸ್‌ ಮಾಡಿ ದೇಹ ಒಂದು ಹಂತಕ್ಕೆ ಬರುತ್ತಿದ್ದಂತೆ ಮಹಿಳೆಯರು ಸಾಮಾನ್ಯವಾಗಿ ಮತ್ತೆ ಜಿಮ್ ನತ್ತ  ಹೋಗುವುದಿಲ್ಲ. ಆದರೆ ಮಮತಾ ಅವರದ್ದು  ಹಾಗಾಗಲಿಲ್ಲ. ಅವರ ದೈನಂದಿನ ಅಭ್ಯಾಸದಿಂದ ಪ್ರೇರಿತರಾದ ಜಿಮ್ ಮಾಲೀಕರು, “ನೀವೇ ಏಕೆ ನಮ್ಮಲ್ಲಿಗೆ ಬರುವ ಮಹಿಳೆಯರಿಗೆ ತರಬೇತಿ ಕೊಡಬಾರದು?” ಎಂದು ಕೇಳಿದರು.

ಜಿಮ್ ಮಾಲೀಕರ ಆಹ್ವಾನವನ್ನು ಒಂದು ಚಾಲೆಂಜ್‌ ಎಂಬಂತೆ ಭಾವಿಸಿ ಮಮತಾ ಆ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಕೇವಲ ತರಬೇತಿಗಷ್ಟೇ ಸೀಮಿತರಾಗದೆ, ತಾವೇ 3 ತಿಂಗಳ ಒಂದು ಸರ್ಟಿಫಿಕೇಟ್‌ ಕೋರ್ಸ್‌ನ್ನು ಮುಗಿಸಿ ಅಧಿಕೃತ ಜಿಮ್ ಟ್ರೇನರ್‌ ಆದರು. ಅನೇಕ ಯುವತಿಯರಿಗೆ, ಮಹಿಳೆಯರಿಗೆ ಜಿಮ್ ತರಬೇತಿ ಕೊಡುತ್ತಾ ನಾನೇಕೆ ಬಾಡಿ ಬಿಲ್ದರ್‌ ಆಗಬಾರದು ಎಂಬ ಯೋಚನೆ ಆ ಬಳಿಕ ಅವರ ಮನಸ್ಸಿನಲ್ಲಿ ಬಂತು. ಅಮ್ಮ ಮತ್ತು ಪತಿ ಅವರ ಈ ಯೋಚನೆಗೆ ಮೂರ್ತರೂಪ ಕೊಟ್ಟರು.

ಬಾಡಿ ಬಿಲ್ದರ್‌ ಆದದ್ದು

ಮಮತಾ ಬಾಡಿ ಬಿಲ್ಡರ್‌ ಆಗಲು ಪೂರಕ ನೆರವು ನೀಡಿದ್ದು ಟ್ರೇನರ್‌ ಕಮ್ ಬಾಡಿ ಬಿಲ್ಡರ್‌ ಯೋಗೀಶ್‌ ಗೌಡ. ಸೆಪ್ಟೆಂಬರ್‌ರಲ್ಲಿ ಬಾಡಿ ಬಿಲ್ಡರ್‌ ಆಗಲು ಈಕೆ ಸಿದ್ಧತೆ ಶುರು ಮಾಡಿಕೊಂಡರು. ತಮ್ಮ ದೇಹವನ್ನು ಹುರಿಗೊಳಿಸಿದ ಆರೇ ತಿಂಗಳಲ್ಲಿ ಅಂದರೆ ಮಾರ್ಚ್‌ 2018ರಲ್ಲಿ ಗೋವಾದಲ್ಲಿ ನಡೆದ `ಬಾಸ್‌ ಕ್ಲಾಸಿಕ್‌ ಚಾಂಪಿಯನ್‌ಶಿಪ್‌’ನಲ್ಲಿ ಭಾಗವಹಿಸಲು ವೇದಿಕೆ ಹತ್ತಿದರು.

ಆ ಸ್ಪರ್ಧೆಯಲ್ಲಿ ಅವರಿಗೆ ಯಾವುದೇ ಬಹುಮಾನ ಬರಲಿಲ್ಲ ನಿಜ, ಆದರೆ ಜನರ ಅಪಾರ ಪ್ರಶಂಸೆಗಳು ಬಂದವು. ಸಾಂಪ್ರದಾಯಿಕ ಕುಟುಂಬದಿಂದ ಬಂದ ಮಹಿಳೆ ಅದರಲ್ಲೂ ಒಂದು ಮಗುವಿನ ತಾಯಿಗೆ ಬಿಕಿನಿ ತೊಟ್ಟು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಅವರ ಪತಿ ಸನತ್‌ಕುಮಾರ್‌ಗೆ ಅಭಿನಂದನೆಗಳ ಸುರಿಮಳೆಯೇ ಆಯಿತು. ಕೆಲವರು ಅವರ ನಿರ್ಧಾರವನ್ನು ಟೀಕಿಸಿದರು. ಆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಅವರು ಕರ್ನಾಟಕದಿಂದ ಬಂದ ಪ್ರಥಮ ಬಾಡಿ ಬಿಲ್ಡರ್‌ ಎಂಬ ಖ್ಯಾತಿಗೂ ಪಾತ್ರರಾದರು.“ಪತಿಗೆ ಸಿಕ್ಕ ಪ್ರಶಂಸೆಯಿಂದ ಅವರು ನನಗೆ ಹೆಚ್ಚೆಚ್ಚು ಪ್ರೋತ್ಸಾಹ ಕೊಡುತ್ತಾ ಹೋದರು. ಇಂದು ನಾನು ಈ ಮಟ್ಟದ ಸಾಧನೆ ಮಾಡಿದ್ದೇನೆಂದರೆ ಅದರ ಸಂಪೂರ್ಣ ಶ್ರೇಯಸ್ಸು ನನ್ನ ಪತಿಗೆ ಹಾಗೂ ಅಮ್ಮನಿಗೆ ಸಲ್ಲುತ್ತದೆ. `ನೀನೇನಾದರೂ ಸಾಧನೆ ಮಾಡೇ ಮಾಡ್ತೀಯಾ’ ಎಂದು ಅಮ್ಮ ನನ್ನನ್ನು ಸದಾ ಹುರಿದುಂಬಿಸುತ್ತಿದ್ದರು. ಅವರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈಗ ನನ್ನ ಮಗಳ ಪಾಲನೆ ಪೋಷಣೆ, ಶಾಲೆಗೆ ಹೋಗುವಾಗಿನ ಸಿದ್ಧತೆಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಾರೆ. ಹೀಗಾಗಿ ನಾನು ಮುಂದಿನ ಸ್ಪರ್ಧೆಗಳಿಗೆ ಜಿಮ್ ತರಬೇತಿ ಪಡೆದುಕೊಳ್ಳುವುದರಿಂದ ಹಿಡಿದು, ಫ್ರೀಲಾನ್ಸ್ ಜಿಮ್ ಟ್ರೇನರ್‌ ಆಗಿ ಕೆಲಸ ಮಾಡಲು ಸಾಧ್ಯವಾಗಿದೆ.”

ಹಲವು ಸ್ಪರ್ಧೆಗಳ  ವಿಜೇತೆ

ಅಮ್ಮನ ಬೆಂಬಲ, ಪತಿಯ ಸಹಕಾರದಿಂದ ಸೆಪ್ಟೆಂಬರ್‌ 2018ರಲ್ಲಿ ನಡೆದ `ಮಿ. ಬೆಂಗಳೂರು ಸ್ಪರ್ಧೆ’ಯಲ್ಲಿ ಮಹಿಳೆಯರ ವಿಭಾಗದಲ್ಲಿ ರನ್ನರ್‌ ಅಪ್‌ ಆದರು. ಆ ನಂತರ ಅಂತರರಾಷ್ಟ್ರೀಯ ಬಾಡಿ ಬಿಲ್ಡರ್‌ ಕೃಷ್ಣ ವೆಂಕಟೇಶ್‌ರ ಬಳಿ ಬಾಡಿ ಬಿಲ್ಡರ್‌ ತರಬೇತಿಗೆ ಸೇರಿಕೊಂಡರು. ಕಳೆದ ಡಿಸೆಂಬರ್‌ನಲ್ಲಿ ನಡೆದ `ಸೌತ್‌ ಇಂಡಿಯನ್‌ ಬಾಡಿ ಬಿಲ್ಡರ್‌ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನದ ಪದಕ ಪಡೆದು ಹೊಸದೊಂದು ದಾಖಲೆ ಬರೆದರು.`ಶೇರು ಕ್ಲಾಸಿಕ್‌ ಚಾಂಪಿಯನ್‌ಶಿಪ್‌’ ನಲ್ಲಿ ಪಾಲ್ಗೊಂಡು ಅಲ್ಲಿ ಗೆದ್ದು ಪ್ರೊ. ಕಾರ್ಡ್‌ ಪಡೆದು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಬೇಕೆನ್ನುವುದು ಅವರ ಮುಂದಿನ ಗುರಿ.

ಪತಿಗೂ ಟ್ರೇನರ್‌!

ಅವರ ಪತಿಯ ದೇಹ ತೂಕ 140 ಕಿಲೋದಷ್ಟಿತ್ತು. ಅವರಿಗೂ ಜಿಮ್ ತರಬೇತಿ ನೀಡಿ 89 ಕಿಲೋಗೆ ಇಳಿಸಿದರು. ಕೆಲವು ವೈದ್ಯ ದಂಪತಿಗಳಿಗೂ ಕೂಡ ಜಿಮ್ ತರಬೇತಿ ನೀಡುತ್ತಿರುವುದು ಅವರ ಹೆಗ್ಗಳಿಕೆ.

ಫ್ಯಾಟ್‌ನಿಂದ ಫಿಟ್‌ನತ್ತ

ಮಮತಾ ಫಿಟ್‌ನೆಸ್‌ ಟ್ರೇನರ್‌ ಆಗಿ ಹಲವಾರು ಮಹಿಳೆಯರಿಗೆ ಫ್ಯಾಟ್‌ನಿಂದ ಫಿಟ್‌ನೆಸ್‌ನತ್ತ ಪರಿವರ್ತನೆ ಮಾಡಿ ಅವರ ಜೀವನದಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ. “ಇನ್ನೊಬ್ಬರ ಜೀವನ ಬದಲಿಸುವ ಕಾಯಕ ನನಗೆ ಬಹಳ ಖುಷಿಕೊಟ್ಟಿದೆ,” ಎಂದು ಅವರು ಹೇಳಿಕೊಳ್ಳುತ್ತಾರೆ.“ಬಹಳಷ್ಟು ಮಹಿಳೆಯರು ಮದುವೆಯ ಬಳಿಕ ಆಹಾರ ಸೇವನೆಯ ಬಗ್ಗೆ ಯಾವುದೇ ಕಾಳಜಿ ವಹಿಸುವುದಿಲ್ಲ. ಹೀಗಾಗಿ ಅವರು ದಪ್ಪಗಾಗುತ್ತಾರೆ. ಜೀವನದಲ್ಲಿ ಆಹಾರ ಶಿಸ್ತು ಮುಖ್ಯ. ಜಂಕ್‌ ಫುಡ್‌ಗಳಿಂದ ದೂರ ಇದ್ದು, ಅಷ್ಟಿಷ್ಟು ವ್ಯಾಯಾಮ ಚಟುವಟಿಕೆ ಅನುಸರಿಸಿದರೆ ನಾವು ಲವಲವಿಕೆಯಿಂದಿರಬಹುದು,” ಎಂದು ಮಮತಾ ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ 

ಪೂರ್ವ ಆಹಾರ ಕ್ರಮ

ಮಮತಾ ಟ್ರೇನರ್‌ ಆಗಿ, ಬಾಡಿ ಬಿಲ್ಡರ್‌ ಆಗಿ ಲವಲವಿಕೆಯಿಂದ ಕಾರ್ಯನಿರ್ವಹಿಸಲು ದಿನ ಬೆಳಗ್ಗೆ 4.30ಕ್ಕೆ ಎದ್ದು ವ್ಯಾಯಾಮ ಮಾಡುತ್ತಾರೆ. ದಿನಕ್ಕೆ 5-6 ಗಂಟೆ ಪ್ರ್ಯಾಕ್ಟೀಸ್‌ ಇದ್ದೇ ಇರುತ್ತದೆ. 10-15 ಮೊಟ್ಟೆ, 500-600 ಗ್ರಾಂ ಚಿಕನ್‌, ತರಕಾರಿಗಳು, ಹಣ್ಣುಗಳು, ಡ್ರೈ ಫ್ರೂಟ್ಸ್ ಇವು ಇವರ ದೈನಂದಿನ ಆಹಾರದಲ್ಲಿ ಸೇರ್ಪಡೆಯಾಗಿರುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ