ಮುಗ್ಧತೆಯಿಂದ ಕೂಡಿದ ಮುಖಾರವಿಂದ, ಸರಳ ನೇರ ಮೃದು ನುಡಿಗಳು, ನಿಷ್ಕಳಂಕ ಮುಖಭಾವದ ಶಕುಂತಲಾರನ್ನು ಕಂಡಾಗ ಇವರ ಕಲಾ ಕುಶಲತೆಯ ಬಗ್ಗೆ ನಮಗೆ ತಿಳಿಯುವುದೇ ಇಲ್ಲ. ಆದರೆ ಸಾಗರದಾಳದಲ್ಲಿ ಮುತ್ತು ಹುದುಗಿರುವಂತೆ ಇವರ ಮನದ ಒಳಹೊಕ್ಕಾಗ ಮಾತ್ರ ಇವರಲ್ಲಿನ ಸೃಜನಶೀಲತೆಯ ಪರಿಚಯವಾಗುತ್ತದೆ.

ಬಾಲ್ಯದಿಂದಲೇ ಆಸಕ್ತಿ

ಚಿಕ್ಕಂದಿನಿಂದಲೂ ಕಲೆಯಲ್ಲಿ ಆಸಕ್ತಿ ಇತ್ತು. ಮನೆಯಲ್ಲಿ ಗೋಡೆಯ ಮೇಲೆ ಚಿತ್ರಗಳನ್ನು ಬರೆದು ಅಮ್ಮನ ಹತ್ತಿರ ಬೈಸಿಕೊಳ್ಳುತ್ತಿದ್ದರಂತೆ. ಆದರೆ ಇವರ ಅಜ್ಜಿ ಮಾತ್ರಾ ಮನೆಗೆ ಬಂದ ಎಲ್ಲರಿಗೂ ಇವರು ಬರೆದ ಮಹಾರಾಜರ ಚಿತ್ರವನ್ನು ನಮ್ಮ ಶಕ್ಕು ಬರೆದದ್ದು ಎಂದು ಎಲ್ಲರಿಗೂ ಹೆಮ್ಮೆಯಿಂದ ತೋರಿಸುತ್ತಿದ್ದರಂತೆ. ಅಂದು ಅಜ್ಜಿಯಿಂದ ಪಡೆದ ಪ್ರೋತ್ಸಾಹವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಪೇಂಟಿಂಗ್‌ ವೈವಿಧ್ಯತೆ

ಇವರು ಆಯಿಲ್‌ ಪೇಂಟಿಂಗ್‌, ತಂಜಾವೂರ್‌ ಪೇಂಟಿಂಗ್‌, ಗ್ಲಾಸ್‌ ಪೇಂಟಿಂಗ್‌, ಮೈಸೂರು ಪೇಂಟಿಂಗ್‌….. ಈ ರೀತಿ ವಿವಿಧ ಪ್ರಕಾರದ ಕಲೆಗಳನ್ನು ವಿವಿಧ ಗುರುಗಳಿಂದ ಕಲಿತಿದ್ದಾರೆ. ಇದರ ಜೊತೆ ಮದ್ರಾಸಿನ ಆಚಾರ್ಯ ಕಲಾಶಾಲೆಯಲ್ಲಿ ಸಹ ಕಲಿತಿದ್ದಾರೆ. ಇವೆಲ್ಲದರ ಜೊತೆ ತಮ್ಮದೇ ಆದ ರೀತಿಯಲ್ಲೂ  ಸಹ ಅನೇಕ ಚಿತ್ರಗಳನ್ನು ರಚಿಸಿದ್ದಾರೆ.

ಮಕ್ಕಳಿಗೆ ತರಬೇತಿ

ಶಾಲಾ ಕಾಲೇಜುಗಳಿಗೆ ಹೋಗಿ ಮಕ್ಕಳಿಗೆ ಚಿತ್ರಕಲಾ ತರಬೇತಿಯನ್ನು ನೀಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಪೇಂಟಿಂಗ್‌ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ. ಮಹಿಳಾ ಸಂಘಗಳಲ್ಲಿ ಹವ್ಯಾಸಿ ತರಗತಿಗಳನ್ನು ನಡೆಸಿ ಬಂದ ಹಣವನ್ನು ಮಹಿಳಾ ಸಂಘಗಳಿಗೆ ನೀಡಿದ್ದಾರೆ. ಪ್ರತಿ ವರ್ಷ ಮಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರವನ್ನು ನಡೆಸುತ್ತಿದ್ದಾರೆ. ಇವರು ಬಹಳವಾಗಿ ಮೆಚ್ಚಿರುವುದು ಇವರ ಗುರುಗಳಾದ ಗಿರೀಶ್‌ ಪೋಳಿಯವರ ಕಲೆಯನ್ನು, ಅವರಂತೆ ಚಿತ್ರ ರಚಿಸುವುದುನ್ನು ಕಲಿಯಬೇಕೆನ್ನುವ ಆಸೆ, ಅವರ ಒಂದೊಂದು ಸುಂದರ ಕೃತಿಗಳೂ ಇವರಿಗೆ ಪ್ರೇರಣೆಯಂತೆ. ಅವರಂತೆ ಸ್ವಲ್ಪವಾದರೂ ಸಾಧಿಸಬೇಕೆನ್ನುವುದು ಇವರ ಆಸೆ.

ವಿದೇಶೀ ಒಡನಾಟ

ಶಕುಂತಲಾ ಮಗನ ಮನೆಗೆಂದು ಅಮೆರಿಕಾ ದೇಶಕ್ಕೆ ಹೋದಾಗ ಅಲ್ಲಿಯ ಸೀನಿಯರ್‌ ಸೆಂಟರ್‌ನಲ್ಲಿ ಸದಸ್ಯರಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ನಡೆಯುವ ತರಗತಿಯಲ್ಲಿ ಚಿತ್ರಕಲೆ, ಪೇಂಟಿಂಗ್‌, ಸೆರಾಮಿಕ್‌, ಗ್ರೀಟಿಂಗ್‌ಕಾರ್ಡ್ಸ್ ಎಲ್ಲವನ್ನು ಕಲಿತು ಅಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ತಮ್ಮ ಕಲಾಕೃತಿಗಳನ್ನು ಇರಿಸಿ ಮೆಚ್ಚುಗೆ ಪಡೆದಿದ್ದಾರೆ.

ವಿದೇಶೀಯರ ಜೊತೆ ಇವರೊಬ್ಬರೇ ಭಾರತಿಯರಾಗಿದ್ದೂ ಸಹ ಸಕ್ರಿಯವಾಗಿ ಎಲ್ಲದರಲ್ಲೂ ಭಾಗವಹಿಸಿದ್ದಾರೆ. ತುಂಬು ಕುಟುಂಬದ ಶಕುಂತಲಾ ಅವರಿಗೆ ತಮ್ಮ ಇಳಿ ವಯಸ್ಸಿನಲ್ಲಿಯೂ ತೀರದ ಉತ್ಸಾಹ. ಏನಾದರೂ ಸಾಧಿಸುವ ಆಸೆ, ಅವರ ಉತ್ಸಾಹ ಮಿಕ್ಕವರಿಗೂ ಸ್ಛೂರ್ತಿ ಆಗಬಹುದಲ್ಲವೇ!

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ