ಮಲಪ್ರಭಾ, ಬೆಳಗಾವಿ ತಾಲ್ಲೂಕಿನ ತುರಮರಿ ಗ್ರಾಮದ ಯಲ್ಲಪ್ಪ ಜಾಧವ್ ರ ಐದು ಮಕ್ಕಳಲ್ಲಿ ಕೊನೆಯವಳು. ಮೂವರು ಸೋದರಿಯರು ಹಾಗೂ ಒಬ್ಬ ಅಣ್ಣ. ಹೀಗೆ ದೊಡ್ಡ ಕುಟುಂಬದಲ್ಲಿ ಕೊರತೆಗಳ ನಡುವೆಯೇ ಮಲಪ್ರಭಾ ಅದ್ಭುತ ಎನ್ನುವಂತಹ ಸಾಧನೆಗೈದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದಳು.

ಖೋಖೋದಿಂದ ಜ್ಯೂಡೋದತ್ತ

ಮಲಪ್ರಭಾ ಓದಿದ್ದು ಬೆಳಗಾವಿಯ ಮಹಿಳಾ ವಿದ್ಯಾಲಯದಲ್ಲಿ. ಆಗ ಈ ಹುಡುಗಿ ಖೋಖೋದಲ್ಲಿ ಮಿಂಚುತ್ತಿದ್ದಳು. ಅದೊಂದು ಸಲ ಆ ಶಾಲೆಗೆ ಮುಖ್ಯ ಅತಿಥಿಯಾಗಿ ಜ್ಯೂಡೋ ಕೋಚ್‌ ತ್ರಿವೇಣಿ ಸಿಂಗ್‌ ಆಗಮಿಸಿದ್ದರು. ಮಲಪ್ರಭಾಳ ಕ್ರೀಡಾ ಸಾಧನೆಯನ್ನು ಗಮನಿಸಿ ತ್ರಿವೇಣಿ ಮೇಡಂ `ನೀನೊಮ್ಮೆ ನನ್ನನ್ನು ಮೈದಾನದಲ್ಲಿ ಬಂದು ಕಾಣು,’ ಎಂದು ಆ ಹುಡುಗಿಗೆ ಹೇಳಿ ಬಂದಿದ್ದರು.

ಮೈದಾನದಲ್ಲಿ ಅವಳ ಕ್ರೀಡಾ ಚಾಕಚಕ್ಯತೆ ಗಮನಿಸಿ, “ಕ್ರೀಡೆಯಲ್ಲಿ ನೀನು ಇನ್ನಷ್ಟು ಸಾಧನೆ ಮಾಡಲು ಕ್ರೀಡಾ ಹಾಸ್ಟೆಲ್‌ ಸೇರು,” ಎಂದು ಹೇಳಿದರು. ಇಷ್ಟು ಚಿಕ್ಕ ಹುಡುಗಿಯನ್ನು ಹಾಸ್ಟೆಲ್‌ಗೆ ಸೇರಿಸುವುದು ಬೇಡ ಎಂದು ಮನೆಯವರೆಲ್ಲ ಹೇಳಿದರು. ಆದರೆ ಅವಳ ಅಪ್ಪ ಮಾತ್ರ, “ನಿನಗೆ ಅಲ್ಲಿಗೆ ಹೋಗಲು ಇಷ್ಟವಿದ್ದರೆ ಖಂಡಿತಾ ಹೋಗು,” ಎಂದು ಹೇಳಿ ಅವಳಿಗೆ ಪ್ರಥಮ ಪ್ರೋತ್ಸಾಹ ನೀಡಿದರು.

ಕ್ರೀಡಾ ಹಾಸ್ಟೆಲ್‌ನಲ್ಲಿ 6 ವರ್ಷ ಇದ್ದು ಜ್ಯೂಡೋನಲ್ಲಿ ಸಾಕಷ್ಟು ಅಭ್ಯಾಸ ಮಾಡಿ ಅನೇಕ ಪದಕಗಳನ್ನು ಪಡೆದು ತಾನು ಭವಿಷ್ಯದಲ್ಲಿ ಒಳ್ಳೆಯ ಕ್ರೀಡಾಪಟು ಆಗ್ತೀನಿ ಎಂಬುದರ ಬಗ್ಗೆ ಆಗಲೇ ಸುಳಿವು ಕೊಟ್ಟಿದ್ದಳು.

ಮನೆ ಮಗಳು ಮಲಪ್ರಭಾ

ಮಲಪ್ರಭಾಳಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆಗೆ ಮತ್ತಷ್ಟು ಹೊಳಪು ಕೊಡಲು ನಿರ್ಧರಿಸಿದ ಜ್ಯೂಡೋ ತರಬೇತುದಾರ ದಂಪತಿಗಳಾದ ತ್ರಿವೇಣಿ ಹಾಗೂ ಜಿತೇಂದ್ರ ಸಿಂಗ್‌ ಹಾಸ್ಟೆಲ್‌ನಿಂದ ಸೀದಾ ತಮ್ಮ ಮನೆಗೆ ಅವಳ ವಾಸ್ತವ್ಯವನ್ನು ಬದಲಿಸಿದರು. “ಜಿತೇಂದ್ರ ಸರ್‌ ಹಾಗೂ ತ್ರಿವೇಣಿ ಮೇಡಂ, ನನ್ನನ್ನು ಮನೆ ಮಗಳ ರೀತಿಯಲ್ಲಿ ನೋಡಿಕೊಂಡು ಸೂಕ್ತ ತರಬೇತಿ ನೀಡಿದರು,” ಎಂದು ಮಲಪ್ರಭಾ ತಮ್ಮ ತರಬೇತುದಾರರ ಬಗ್ಗೆ ಹೆಮ್ಮೆಯಿಂದ ಹೇಳುತ್ತಾಳೆ.

ಜ್ಯೂಡೊದಿಂದ ಕುರಾಷ್

ತ್ರಿವೇಣಿ ಸಿಂಗ್‌ ವರ್ಷಗಳ ಕಾಲ ಮಲಪ್ರಭಾಗೆ ಜ್ಯೂಡೋ ಕ್ರೀಡೆಯ ತರಬೇತಿ ನೀಡಿದ್ದರು. ಅದರ ಪ್ರತಿಫಲ ಎಂಬಂತೆ ಮಲಪ್ರಭಾ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದು, ತಾನು ಭವಿಷ್ಯದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬಲ್ಲೆ ಎಂಬುದರ ಸುಳಿವು ನೀಡಿದಳು.

2016ರಲ್ಲಿ ಮಲಪ್ರಭಾ ಒಂದಿಷ್ಟು ಗಾಯಗೊಂಡು ಮಾನಸಿಕವಾಗಿ ಅಷ್ಟಿಷ್ಟು ಖಿನ್ನತೆಗೆ ಒಳಗಾಗಿದ್ದಳು. ಅದೇ ಸಮಯದಲ್ಲಿ `ಕುರಾಷ್‌’ ಎಂಬ ಕ್ರೀಡೆ ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರವೇಶ ಪಡೆದಿತ್ತು. ಜ್ಯೂಡೊ ಹಾಗೂ ಕುರಾಷ್‌ನಲ್ಲಿ ಅಷ್ಟೇನೂ ವ್ಯತ್ಯಾಸ ಇರಲಿಲ್ಲ. ಭಾರತದಲ್ಲಿ ಆಗ ಯಾರಿಗೂ ಈ ಕ್ರೀಡೆಯ ಬಗ್ಗೆ ಪರಿಚಯ ಇರಲಿಲ್ಲ. ಅಂತಹ ಸ್ಥಿತಿಯಲ್ಲಿ ಫೆಡರೇಶನ್‌ನವರು ತ್ರಿವೇಣಿಯವರಿಗೆ, “ನಿಮ್ಮ ತಂಡ ಜ್ಯೂಡೋದಲ್ಲಿ ಚೆನ್ನಾಗಿ ಸಾಧನೆ ಮಾಡ್ತಿದೆ. ನೀವೇಕೆ ಕುರಾಷ್‌ಗಾಗಿ ಕೆಲವರಿಗೆ ತರಬೇತಿ ಕೊಡಬಾರದು?” ಎಂದು ಕೇಳಿದರು.

ಆಗ ತ್ರಿವೇಣಿ ಸಿಂಗ್‌, ಮಲಪ್ರಭಾಗೆ ಕುರಾಷ್‌ ಬಗ್ಗೆ ಹೇಳಿ, ಆ ಆಟದ ಅಭ್ಯಾಸದಲ್ಲಿ ತೊಡಗುವಂತೆ ವ್ಯವಸ್ಥೆ ಮಾಡಿಕೊಟ್ಟರು.

ಕುರಾಷ್‌ ಆಟದ ಪಟ್ಟುಗಳನ್ನು ತಿಳಿದುಕೊಂಡು ಸಾಕಷ್ಟು ಅಭ್ಯಾಸ ನಡೆಸಿದ ಬಳಿಕ ಮಲಪ್ರಭಾ, ಸಾಕಷ್ಟು ಸ್ಪರ್ಧೆಗಳಲ್ಲಿ ಪದಕ ಪಡೆದಳು. ಆ ಬಳಿಕ ತುರ್ಕ್‌ ಮೆನಿಸ್ತಾನದಲ್ಲಿ ನಡೆದ ಅರ್ಹತಾ ಪಂದ್ಯಕ್ಕೆ ಆಯ್ಕೆಯಾಗಿ ಅಲ್ಲಿ ಬೆಳ್ಳಿ ಪದಕ ಪಡೆದಳು. ಈ ಮೂಲಕ ಜಕಾರ್ತಾ ಏಷ್ಯನ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡಳು. ಇಲ್ಲಿಂದ ಮಲಪ್ರಭಾಳ ಅದೃಷ್ಟವೇ ಬದಲಾಯಿತು.

ಎಫ್‌ಡಿ ಮುರಿಸಿ ತರಬೇತಿಗೆ ಕಳಿಸಿದರು!

ಮಲಪ್ರಭಾ ಜಕಾರ್ತಾ ಏಷ್ಯನ್‌ ಕ್ರೀಡಾಕೂಟಕ್ಕೆ ಕ್ವಾಲಿಫೈ ಏನೋ ಆಗಿದ್ದಳು. ಆದರೆ ಅಲ್ಲಿಗೆ ಹೋಗುವ ಮುಂಚೆ ಒಂದು ತಿಂಗಳ ಕಾಲ `ಕುರಾಷ್‌’ ಕ್ರೀಡೆಯ ತವರು ದೇಶ ಉಜ್ಬೇಕಿಸ್ತಾನಕ್ಕೆ ಹೋಗಬೇಕಿತ್ತು. ಅಲ್ಲಿಗೆ ಹೋಗಲು ಸಾಕಷ್ಟು ಮೊತ್ತದ ಅವಶ್ಯಕತೆ ಇತ್ತು. ದಾನಿಗಳ ಬಳಿ ಕೇಳೋಣ ಅಂದ್ರೆ `ಕುರಾಷ್‌’ ಎಂಬ ಹೆಸರೇ ಗೊತ್ತಿಲ್ಲದ ಕ್ರೀಡೆಗೆ ಏಕೆ ಕಳಿಸುತ್ತಿದ್ದೀರಿ ಎಂಬ ಮಾತುಗಳನ್ನು ಕೇಳಿಸಿಕೊಳ್ಳಬೇಕಾದ ಸಾಧ್ಯತೆ ಇತ್ತು. ಹಾಗಾಗಿ ಕೋಚ್‌ ತ್ರಿವೇಣಿ ಸಿಂಗ್‌ ತಮ್ಮಲ್ಲಿ ಇದ್ದ ಫಿಕ್ಸೆಡ್‌ ಡೆಪಾಸಿಟ್‌ಮುರಿಸಿ ಹಣ ಪಡೆದು ಉಜ್ಬೇಕಿಸ್ತಾನಕ್ಕೆ ಕಳಿಸಿಕೊಟ್ಟರು. ಆ ತರಬೇತಿ ಅವಳಿಗೆ ತುಂಬಾ ನೆರವಾಯಿತು. ಕೊನೆಗೂ ಏಷ್ಯನ್‌ಕ್ರೀಡಾಕೂಟದಲ್ಲಿ ಆಕೆ ಕಂಚಿನ ಪದಕ ಪಡೆದು ಹೊಸ ಇತಿಹಾಸವನ್ನೇ ಬರೆದಳು.

ಕೆಎಲ್ಇ ಸಂಸ್ಥೆಯ ಮಡಿಲಿಗೆ

ಮಲಪ್ರಭಾ ಏಷ್ಯನ್‌ ಕ್ರೀಡಾಕೂಟದಲ್ಲಿ ಜಯ ದಾಖಲಿಸುತ್ತಿದ್ದಂತೆ ಪ್ರಧಾನಿ ಮೋದಿ ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದರು. ಅಷ್ಟೇ ಅಲ್ಲ, ದೆಹಲಿಗೆ ಬಂದ ಬಳಿಕ ಪ್ರಧಾನಿಯವರು ತಮ್ಮ ನಿವಾಸದಲ್ಲಿ ಕ್ರೀಡಾಪಟುಗಳಿಗೆ ಚಹಾ ಕೂಟ ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ಮಲಪ್ರಭಾಗೆ ನೀವು ರಾಜ್ಯಸಭಾ ಸದಸ್ಯ ಪ್ರಭಾಕರ್‌ ಕೋರೆಯವರನ್ನು ಭೇಟಿಯಾಗಿ ಎಂದು ಹೇಳಿದರು. ಕೆಎಲ್ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರಭಾಕರ್‌ ಕೋರೆ ಮಲಪ್ರಭಾಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ದತ್ತು ಪಡೆದು ಅವಳ ಶಿಕ್ಷಣ, ತರಬೇತಿಯ ಖರ್ಚನ್ನು ತಮ್ಮ ಸಂಸ್ಥೆ ಹೊರುವುದಾಗಿ ಹೇಳಿ, ಅವಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.

ಹುಟ್ಟೂರಲ್ಲಿ ಸನ್ಮಾನ

ಮಲಪ್ರಭಾ ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದಾಳೆ ಎಂಬುದನ್ನು ತುರಮರಿ ಗ್ರಾಮಸ್ಥರು ನಂಬಲು ಸಿದ್ಧರಿರಲಿಲ್ಲ. ಅವಳ ಸೋದರ ಕೋಚ್‌ ತ್ರಿವೇಣಿ ಮೇಡಂಗೆ ಕರೆ ಮಾಡಿ, “ಮಲಪ್ರಭಾ ಗೆದ್ದಿದ್ದು ನಿಜನಾ? ನಾವು ಪಟಾಕಿ ಹಚ್ಚಬಹುದಾ?” ಎಂದು ಕೇಳಿದ್ದ, “ಹೌದು, ಮಲಪ್ರಭಾ ಪದಕ ಗೆದ್ದಿದ್ದಾಳೆ! ನೀವು ಪಟಾಕಿ ಹಚ್ಚಬಹುದು,” ಎಂದು ತ್ರಿವೇಣಿ ಮೇಡಂ ಉತ್ತರಿಸಿದ್ದರು.

ಅದಾದ ಬಳಿಕ ಮಲಪ್ರಭಾ ಹುಟ್ಟೂರಿಗೆ ಆಗಮಿಸಿದಾಗ ಆಕೆಗೆ ಭವ್ಯ ಸ್ವಾಗತ ನೀಡಲಾಯಿತು. ಕೋಚ್‌ ದಂಪತಿಗಳಾದ ತ್ರಿವೇಣಿ ಸಿಂಗ್‌ ಹಾಗೂ ಜಿತೇಂದ್ರ ಸಿಂಗ್‌ ಸೇರಿದಂತೆ ಮೂವರನ್ನು ಗ್ರಾಮದಲ್ಲೆಲ್ಲ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.

ಪಿಯುಸಿ ಪರೀಕ್ಷೆ ಬರೆಯಬೇಕು

ಮಲಪ್ರಭಾ ತನ್ನ ಕುರಾಷ್‌ ತರಬೇತಿ, ಪಂದ್ಯಾಳಿಗಳ ಓಡಾಟದಲ್ಲಿ ಪಿಯುಸಿ ಪರೀಕ್ಷೆ ಕೂಡ ಬರೆಯಲು ಆಗಿಲ್ಲ. ಆ ಪರೀಕ್ಷೆ ಬರೆದು ಪಾಸ್‌ ಮಾಡುವ ಗುರಿ ಕೂಡ ಅವಳಿಗಿದೆ.

ಮುಂದಿನ ಗುರಿ

ಈ ಸಲದ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದು, 2022ರ ಏಷ್ಯನ್‌ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆಯುವ ಗುರಿ ಮಲಪ್ರಭಾಳದ್ದಾಗಿದೆ.

– ಅಶೋಕ ಚಿಕ್ಕಪರಪ್ಪಾ

ಏನಿದು ಕುರಾಷ್‌?

`ಕುರಾಷ್‌’ ಎಂಬುದು `ಉಜ್ಬೇಕಿಸ್ತಾನ’ ದೇಶದ ಪಾರಂಪರಿಕ ಕ್ರೀಡೆ. ಜ್ಯೂಡೋ ಕ್ರೀಡೆಗೂ ಈ ಕ್ರೀಡೆಗೂ ಹೆಚ್ಚು ವ್ಯತ್ಯಾಸ ಇಲ್ಲ. `ಜ್ಯೂಡೋ’ದಲ್ಲಿ ಜಪಾನಿ ಶಬ್ದಗಳ ಬಳಕೆ ಮಾಡಲಾಗುತ್ತದೆ. `ಕುರಾಷ್‌’ನಲ್ಲಿ ಉಜ್ಬೇಕಿಸ್ತಾನ ಭಾಷೆಯ ಶಬ್ದಗಳನ್ನು ಬಳಕೆ ಮಾಡಲಾಗುತ್ತದೆ. `ಕುರಾಷ್‌’ನಲ್ಲಿ ಎದುರಾಳಿಯ ಸೊಂಟದ ಟವೆಲ್ ಮೂಲಕ ಕೆಳಗೆ ಬೀಳಿಸಿ ಚಿತ್‌ ಮಾಡುವುದೇ ಮುಖ್ಯ ಗುರಿಯಾಗಿರುತ್ತದೆ. ಜ್ಯೂಡೋದಲ್ಲಿ ಎದುರಾಳಿ ಕೆಳಗೆ ಬಿದ್ದ ನಂತರ ಆಟ ಮುಂದುವರಿಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ