ನಂದಿನಿ ರಾವ್ ಬೆಂಗಳೂರಿನ `ಪ್ರಭಾತ ಕಲಾವಿದರು’ ಸಂಸ್ಥಾಪಕರಲ್ಲೊಬ್ಬರಾದ ಜಯಸಿಂಹ ದಾಸ್‌ ಅವರ ಮೊಮ್ಮಗಳು. ಅಮ್ಮ ಗಾಯತ್ರಿ ರಾವ್‌ ಕೂಡ ಕಲಾವಿದೆ, ಡಾ. ರಾಜ್‌ ಜೊತೆ `ಲಗ್ನಪತ್ರಿಕೆ’ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದರು. ಹೀಗಾಗಿ ರಂಗಭೂಮಿಯ ರಕ್ತ ಅವರಲ್ಲೂ ತುಂಬಿಕೊಂಡಿದೆ. ನಂದಿನಿ ಹುಟ್ಟಿ ಬೆಳೆದದ್ದು ಮಧ್ಯಪ್ರದೇಶದಲ್ಲಿ. 8ನೇ ಕ್ಲಾಸಿನಲ್ಲಿ ಇದ್ದಾಗ ಬೆಂಗಳೂರಿಗೆ ಆಗಮನ. ಭರತನಾಟ್ಯ, ಚಿತ್ರಕಲೆಯಲ್ಲಿ ಆಸಕ್ತಿ. ನಾಟಕಗಳ ಬಗೆಗೂ ತುಂಬಾ ಕುತೂಹಲ ಹುಟ್ಟಿಕೊಂಡಿತ್ತು.

ನಂದಿನಿ 8ನೇ ತರಗತಿಯಲ್ಲಿದ್ದಾಗ ಒಂದು ಆಂಗ್ಲ ನಾಟಕವನ್ನು ನಿರ್ದೇಶಿಸಿದ್ದರು. ಆದರೆ ಬೇರೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕನ್ನಡ ನಾಟಕವನ್ನು ವಿದ್ಯಾರ್ಥಿಗಳು ಬಹಳ ಮೆಚ್ಚಿಕೊಂಡಿದ್ದರಿಂದ ಪ್ರಶಸ್ತಿ ಆ ನಾಟಕಕ್ಕೆ ಹೊರಟುಹೋಯಿತು. ಮರುವರ್ಷ ಅವರು ಹಾಸ್ಯ ಸಂಭಾಷಣೆಯುಳ್ಳ ಕನ್ನಡ ನಾಟಕವೊಂದನ್ನು ಪ್ರಸ್ತುತಪಡಿಸಿದರು. ಈ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟಿತಲ್ಲದೆ, ನಾಟಕ ವಿಭಾಗದ ಎಲ್ಲ ಬಹುಮಾನಗಳನ್ನೂ ಅದೊಂದೇ ನಾಟಕ ಪಡೆದುಕೊಂಡಿತು.

ನಂದಿನಿಯ ಬಗ್ಗೆ ಆಗಲೇ ಎಲ್ಲರೂ ಹುಬ್ಬೇರಿಸುವಂತೆ ಮಾಡಿತಲ್ಲದೆ, ಮುಂದೆ ಈ ಹುಡುಗಿ ರಂಗಭೂಮಿಯಲ್ಲಿ ಅಗಾಧ ಸಾಧನೆ ಮಾಡಬಹುದು ಎಂದು ಭವಿಷ್ಯ ನುಡಿದಿದ್ದರು.

ಕಲಾಸಕ್ತಿ ಮೂಡಿದ್ದು

ನಂದಿನಿಗೆ ತಾನೊಬ್ಬ ಸೃಜನಶೀಲ ವ್ಯಕ್ತಿಯಾಗಬೇಕೆಂಬ ಅಭಿಲಾಷೆ ಮೊದಲಿನಿಂದಲೇ ಇತ್ತು. ಹಾಗಾಗಿ ಅವರು ಚಿತ್ರಕಲಾ ಪರಿಷತ್ತು ಸೇರಿಕೊಂಡು ಚಿತ್ರಕಲೆಯ ಬಗ್ಗೆ ಅಭ್ಯಾಸ ಮಾಡಿದರು. ಅಲ್ಲಿಂದ ಮುಂದೆ ಕೆಲವು ಪ್ರಸಿದ್ಧ ಜಾಹೀರಾತು ಕಂಪನಿಗಳಲ್ಲಿ ಕೆಲಸ ಮಾಡಿ ತಮ್ಮ ಹೊಸ ಹೊಸ ಆಲೋಚನೆಗಳನ್ನು ಹೊರಹೊಮ್ಮಿಸಿದರು.

ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಸ್ನೇಹಿತರೊಬ್ಬರು ಹೆಸರಾಂತ ನಿರ್ದೇಶಕ ವಿಜಯ್‌ ಪತಕಿ ಅವರ ವರ್ಕ್‌ಶಾಪ್‌ ಹಾಗೂ ಆಡಿಷನ್‌ ನಡೆಯಲಿದೆ ಎಂಬ ಸುದ್ದಿ ಕೊಟ್ಟರು. ಅಲ್ಲಿ ಆಡಿಷನ್‌ಗೆ ಬಂದ 300 ಜನರಲ್ಲಿ ನಂದಿನಿ ಕೂಡ ಒಬ್ಬರಾಗಿದ್ದರು. ತನ್ನ ಆಯ್ಕೆ ಆಗುವುದು ಅನುಮಾನ ಎಂದು ಭಾವಿಸಿದ್ದ ನಂದಿನಿಗೆ, ಆಯ್ಕೆಯಾದ ಸುದ್ದಿ ಸಂತಸದಲ್ಲಿ ತೇಲುವಂತೆ ಮಾಡಿತು.

ವಿಜಯ್ ಪತಕಿ ಅವರ ರಂಗ ಗರಡಿಯಲ್ಲಿ ಪಳಗಿದ ನಂದಿನಿ ರಾವ್‌ ನಿರ್ದೇಶಿಸಿದ ಮೊದಲ ನಾಟಕ `ಪೇರ್‌ ಆಫ್‌ ಗ್ಲಾಸಸ್‌.’ ಗೋಧ್ರಾ ಘಟನೆ ಆಧರಿಸಿದ ಆ ನಾಟಕ ಬಹಳ ಪರಿಣಾಮಕಾರಿ ಎನಿಸಿತು. ಅವರ ನಿರ್ದೇಶನದಲ್ಲಿ ಸಾಕಷ್ಟು ಶಕ್ತಿ ಇದೆ ಎನ್ನುವುದು ಮನದಟ್ಟಾಯಿತು, ಮುಂದೆ ನಂದಿನಿ ರಂಗಚಟುವಟಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು.

ನಂದಿನಿ ರಾವ್ ಹಾಗೂ ಸಮಾನಮನಸ್ಕ ಕಲಾವಿದರು `ಬಬಲ್ಸ್’ ಎಂಬ ತಂಡ ರಚಿಸಿಕೊಂಡು ರಂಗ ಚಟುವಟಿಕೆಗಳಲ್ಲಿ ಬಗೆಬಗೆಯ ಪ್ರಯೋಗಗಳನ್ನು ಮಾಡಿದರು. ತಮ್ಮದೇ ಆದ ತಂಡ ರಚಿಸಬೇಕೆಂಬ ಅಭಿಲಾಷೆ ನಂದಿನಿ ರಾವ್‌ಗೆ ಇತ್ತು. ಅದಕ್ಕೆ ಏನು ಹೆಸರು ಇಡಬೇಕೆಂದು ಎಲ್ಲರೂ ಕುಳಿತು ಅನೇಕ ಸಲ ಚರ್ಚಿಸಿದ್ದಾಯಿತು. ಆದರೆ ಹೆಸರು ಮಾತ್ರ ಅಂತಿಮಗೊಳ್ಳಲಿಲ್ಲ.

ಯುವರ್ಸ್‌ ಟ್ರೂಲಿ ಥಿಯೇಟರ್‌

ನಂದಿನಿ ಏನೋ ಯೋಚಿಸುತ್ತಾ ಕುಳಿತಿದ್ದಾಗ ಅವರಿಗೆ `ಯುವರ್ಸ್‌ ಟ್ರೂಲಿ’ ಎಂಬ ಹೆಸರು ಹೊಳೆಯಿತು. ತಂಡದ ಇತರೆ ಸದಸ್ಯರಿಗೂ ಆ ಹೆಸರು ಇಷ್ಟವಾಯಿತು. ಆಕಸ್ಮಿಕವಾಗಿ ಹೊಳೆದ ಆ ಹೆಸರಿಗೆ ಅದೆಷ್ಟು ಅರ್ಥ ಇದೆ. ಈಗ ನಂದಿನಿ ರಾವ್‌ಗೆ ಅನಿಸುತ್ತಿರುತ್ತದೆ.

15 ವರ್ಷಗಳಲ್ಲಿ…..`ಯುವರ್ಸ್‌ ಟ್ರೂಲಿ ಥಿಯೇಟರ್‌’ ಇತ್ತೀಚೆಗಷ್ಟೆ 15 ವರ್ಷಗಳನ್ನು ಪೂರೈಸಿತು. ಈ ಅವಧಿಯಲ್ಲಿ ಅವರ ತಂಡದ ಕಲಾವಿದರ ಸಂಖ್ಯೆ 7 ಇದ್ದದ್ದು, ಈಗ 100ಕ್ಕೂ ಹೆಚ್ಚಾಗಿದೆ. ಅದರಲ್ಲಿ 10-15 ಜನ ಪೂರ್ಣಾವಧಿ ಕಲಾವಿದರು. ಇನ್ನುಳಿದ 80ಕ್ಕೂ ಹೆಚ್ಚು ಕಲಾವಿದರು ವಾರಾಂತ್ಯದ ದಿನಗಳಲ್ಲಿ ರಂಗ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ನಂದಿನಿ ಈವರೆಗೆ ನಿರ್ದೇಶಿಸಿದ ನಾಟಕಗಳ ಸಂಖ್ಯೆ 150 ದಾಟಿದೆ. ಅದರಲ್ಲಿ 10ಕ್ಕೂ ಹೆಚ್ಚು ನಾಟಕಗಳನ್ನು ಸ್ವತಃ ಅವರೇ ಬರೆದಿದ್ದಾರೆ. ಈವರೆಗೆ 1500 ಪ್ರದರ್ಶನಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ರಂಗ ತರಬೇತಿಗೆ ಅವರ ಬಳಿ ಬರುವವರೇ ಅವರ ತಂಡದಲ್ಲಿ  ಸೇರಿಕೊಂಡು ತಮ್ಮ ಪ್ರತಿಭೆ ಹೊರ ಹೊಮ್ಮಿಸುತ್ತಿರುವುದು ವಿಶೇಷ.

ವಿನೂತನ ಪ್ರಯೋಗ

ನಂದಿನಿ ರಾವ್‌ ರಂಗಭೂಮಿಗೆ ಹೊಸತನದ ಸ್ಪರ್ಶ ನೀಡಿದ ವಿಶಿಷ್ಟ ವ್ಯಕ್ತಿಯಾಗಿ ಕಂಡುಬರುತ್ತಾರೆ. ಪ್ರೇಕ್ಷಕರೊಂದಿಗೆ ಸಂವಾದ ನಡೆಸುತ್ತಲೇ ನಾಟಕ ಮುಂದುವರಿಸುವುದು ಅವರ ತಂತ್ರಗಾರಿಕೆ, ಈ ತೆರನಾದ ಪ್ರಯೋಗ ವಿದೇಶದಲ್ಲಿ ಸಾಮಾನ್ಯ. ನಾಟಕದ ಪ್ರೇಕ್ಷಕರು ಯಾರು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಅವರ ಮನಸ್ಸಿಗೆ ನಾಟುವಂತಹ ವಿಷಯ ಆಯ್ಕೆ ಮಾಡಿಕೊಂಡು ನಾಟಕವನ್ನು ಶುರು ಮಾಡುತ್ತಾರೆ. ನಾಟಕ ಒಂದು ಹಂತದಲ್ಲಿರುವಾಗ ಅದನ್ನು ನಿಲ್ಲಿಸಿ “ಈ ನಾಟಕ ಹೇಗೆ ಅಂತ್ಯಗೊಳ್ಳಬೇಕು ಎಂದು ನೀವು ಬಯಸುವಿರಿ?” ಎಂದು ಪ್ರೇಕ್ಷಕರನ್ನು ಕೇಳುತ್ತಾರೆ. ಕೆಲವು ಪ್ರೇಕ್ಷಕರು ಒಂದು ರೀತಿ, ಬೇರೆ ಕೆಲವರು ಅಂತ್ಯ ಹೀಗಿರಬೇಕೆಂದು ಹೇಳುತ್ತಾರೆ. ಅತಿ ಹೆಚ್ಚು ಜನರು ನಿರೀಕ್ಷಿಸುವ ರೀತಿಯಲ್ಲಿ ಆ ನಾಟಕವನ್ನು ಅಂತ್ಯಗೊಳಿಸುತ್ತಾರೆ. ಹೀಗಾಗಿ ಆ ನಾಟಕ ಬಹಳ ಪರಿಣಾಮಕಾರಿ ಎನಿಸುತ್ತದೆ.

ಆಶು ನಾಟಕ….

ನಂದಿನಿ ರಾವ್‌ರ `ಯುವರ್ಸ್‌ ಟ್ರೂಲಿ ಥಿಯೇಟರ್‌’ನಿಂದ ಪ್ರದರ್ಶನಗೊಳ್ಳುವ ನಾಟಕಗಳು ಒಂಥರಾ ಆಶು ನಾಟಕಗಳೇ ಆಗಿವೆ. ಲೈನ್‌ ಡ್ರಾಯಿಂಗ್‌ ಮೂಲಕ ನಾಟಕ ಶುರುವಾಗಿ ಪ್ರೇಕ್ಷಕರದ್ದೇ ಆದ ರೀತಿಯಲ್ಲಿ ಅಂತ್ಯಗೊಳ್ಳುತ್ತದೆ. ಹೀಗಾಗಿ ಆ ತಂಡದ ಕಲಾವಿದರು ಸಂಭಾಷಣೆಗೆ ರಿಹರ್ಸಲ್ ಮಾಡುವುದಿಲ್ಲ. ಆದರೂ ಕೂಡ ಕಥೆಯ ಎಳೆ ಎಲ್ಲೂ ದಾರಿ ತಪ್ಪುವುದಿಲ್ಲ. ಪ್ರೇಕ್ಷಕರು ತುದಿಗಾಲ ಮೇಲೆ ನಿಂತು ಕೊನೆಯತನಕ ನಾಟಕ ನೋಡುವಂತೆ ಮಾಡುತ್ತದೆ.

ವೃದ್ಧಾಶ್ರಮದಲ್ಲಿ, ಅಬಲಾಶ್ರಮದಲ್ಲಿ, ಬೆಂಗಳೂರು ಕಾರಾಗೃಹದಲ್ಲಿ, ಕಾರ್ಖಾನೆಗಳಲ್ಲಿ ಹೀಗೆ ಅವರ ನಾಟಕ ಪ್ರದರ್ಶನಗಳು ಎಲ್ಲೆಡೆ ನಡೆಯುತ್ತಿರುತ್ತವೆ. ಇಂಗ್ಲಿಷ್‌ ನಾಟಕಗಳ ಜೊತೆಗೆ `ಕನ್ನಡ ಕಾವ್ಯ ನಾಟಕ ಚಿಲುಮೆ’ ಎಂಬ ವಿಶಿಷ್ಟ ಕಾವ್ಯಮಯ  ನಾಟಕವನ್ನು ಪ್ರದರ್ಶಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅವರ ನಾಟಕಗಳು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಪ್ರದರ್ಶಿತಗೊಂಡಿವೆ.

ಸಮಸ್ಯೆಗೆ ಸ್ಪಂದಿಸುವ ನಾಟಕಗಳು

ಸಂಘಸಂಸ್ಥೆಗಳು, ಎನ್‌ಜಿಓ, ಶಿಕ್ಷಣ ಸಂಸ್ಥೆ, ಕಾರ್ಖಾನೆ, ಬಹುರಾಷ್ಟ್ರೀಯ ಕಂಪನಿ, ಬ್ಯಾಂಕುಗಳಿಂದ ನಾಟಕ ಪ್ರದರ್ಶನ ನೀಡಲು ಅವರಿಗೆ ಆಹ್ವಾನ ಬರುತ್ತಿರುತ್ತವೆ. ಸಾಮಾನ್ಯವಾಗಿ ನಾಟಕಗಳ ಮುಖಾಂತರ ಅಲ್ಲಿನ ಸಮಸ್ಯೆ ಬಗೆಹರಿಸಲು ಕೋರುತ್ತಾರೆ. ಹೀಗಾಗಿ `ಯುವರ್ಸ್‌ ಟ್ರೂಲಿ’ ತಂಡದವರು ತಾವು ಅಭಿನಯಿಸುವ ನಾಟಕದ ವಿಷಯ ಏನಿರಬೇಕೆಂದು ಒಂದೇ ಕಡೆ ಕುಳಿತು ಚರ್ಚಿಸುತ್ತಾರೆ. ಒಂದು ವಿಷಯದೊಂದಿಗೆ ನಾಟಕ ಆರಂಭಗೊಂಡು ಅಲ್ಲಿನ ಪ್ರೇಕ್ಷಕರೊಂದಿಗೆ ಚರ್ಚಿಸಿ ವಿಶಿಷ್ಟ ರೀತಿಯಲ್ಲಿ ನಾಟಕವನ್ನು ಅಂತ್ಯಗೊಳಿಸುತ್ತಾರೆ.

ವಿದೇಶಿ ಕಲಾವಿದರು!

ನಂದಿನಿಯವರ ನಾಟಕ ತಂಡ ಆಗಾಗ ವಿದೇಶಕ್ಕೂ ತೆರಳಿ ನಾಟಕ ಪ್ರದರ್ಶಿಸುತ್ತದೆ. ಆದರೆ ಇಲ್ಲಿಂದ ಹೆಚ್ಚಿನ ಕಲಾವಿದರನ್ನು ಕರೆದುಕೊಂಡು ಹೋಗಲಾಗದೆ, ಅಲ್ಲಿನ ಬೇರೆ ಬೇರೆ ದೇಶಗಳ ಕಲಾವಿದರನ್ನೇ ತೆಗೆದುಕೊಂಡು ಅವರಿಗೆ ಭಾರತೀಯ ನಾಟಕದ ತರಬೇತಿ ನೀಡುತ್ತಾರೆ.

ವ್ಯಕ್ತಿತ್ವ ಪರಿವರ್ತಕಿ

ಕಂಪನಿ, ಕಾರ್ಖಾನೆ, ಸಂಘಸಂಸ್ಥೆಗಳಲ್ಲಿ ಇರುವ ಸಮಸ್ಯೆಯನ್ನು  ನಾಟಕಗಳ ಮೂಲಕ ಅನಾವರಣ ಮಾಡಿ, ಅವರದೇ ಆದ ರೀತಿಯಲ್ಲಿ ಪರಿಹಾರ ಸೂಚಿಸುವ ತಂತ್ರವನ್ನು ನಂದಿನಿ ಅನುಸರಿಸುತ್ತಿದ್ದಾರೆ. “ನಾಟಕ ಎನ್ನುವುದು ಪ್ರಭಾವಿ ಮಾಧ್ಯಮ. ಅದರ ಮೂಲಕ ಹಲವರಲ್ಲಿ ಬದಲಾವಣೆ ಉಂಟಾಗುತ್ತಿರುವುದು ನಿಜಕ್ಕೂ ಖುಷಿಯನ್ನುಂಟು ಮಾಡುತ್ತಿದೆ,” ಎಂದು ನಂದಿನಿ ರಾವ್ ಹೇಳುತ್ತಾರೆ.

ಅವರು ಕಂಪನಿಗಳ ಬೇರೆಬೇರೆ ಹುದ್ದೆಯ ವ್ಯಕ್ತಿಗಳಿಗೆ ಸೇಲ್ಸ್ ಟ್ರೇನಿಂಗ್‌, ಲೀಡರ್‌ಶಿಪ್‌ ಟ್ರೇನಿಂಗ್‌ ನೀಡುವುದರ  ಮೂಲಕ ಗ್ರಾಹಕಸ್ನೇಹಿ ವಾತಾವರಣ ಸೃಷ್ಟಿಸುತ್ತಾರೆ. ಬೆಂಗಳೂರು ಅಷ್ಟೇ ಅಲ್ಲ, ಗೋವಾ, ದೆಹಲಿ, ಪುಣೆ, ಹೈದರಾಬಾದ್‌, ಅಹ್ಮದ್‌ನಗರ, ಮಚಲಿಪಟ್ಟಣಂ ಹೀಗೆ ಬೇರೆ ಬೇರೆ ನಗರಗಳಿಗೆ ಹೋಗಿ ಕಂಪನಿಗಳ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ಬಗೆಬಗೆಯ ನಾಟಕಗಳು

ನಂದಿನಿ ರಾವ್‌ರ `ಯುವರ್ಸ್‌ ಟ್ರೂಲಿ’ ತಂಡ ಸದಾ ಹೊಸತನಕ್ಕೆ ತುಡಿಯುತ್ತಿರುತ್ತದೆ. `ಲೋರ್‌ ಟೂ ಲೂರು’ ಎಂಬ ನಾಟಕ ಬೆಂಗಳೂರು ಅಂದು ಹೇಗಿತ್ತು, ಈಗ ಹೇಗಿದೆ ಎಂದು ತೋರಿಸುವ ಒಂದು ವಿಶೇಷ ಪ್ರಯತ್ನ ಮಾಡಿತು. ಹಳೆ ತಲೆಮಾರಿನ ಕೆಲವರು ಬೆಂಗಳೂರು ಮೊದಲು ಹೇಗಿತ್ತು, ರುಚಿ, ಜೀವನಶೈಲಿಯ ಬಗ್ಗೆ ವಿವರಿಸುತ್ತಾರೆ. ಹೊಸ ತಲೆಮಾರಿನವರು ತಮಗೆ ಗೊತ್ತಿರದ ಎಷ್ಟೋ ವಿಷಯಗಳನ್ನು ಕುತೂಹಲದಿಂದ ಕೇಳಿ ತಿಳಿದುಕೊಳ್ಳುತ್ತಾರೆ. ಅವರು ತಮಗೆ ಬೆಂಗಳೂರು ಏಕೆ ಇಷ್ಟವಾಗುತ್ತಿದೆ, ಏಕೆ ಕಷ್ಟ ಅನಿಸುತ್ತದೆ ಎಂಬುದನ್ನೂ ಹೇಳುತ್ತಾರೆ. ಇದೊಂದು ಥರಾ ವಿನೂತನ ಪ್ರಯೋಗ.

ಹುಡುಗ ಹುಡುಗಿಯರ ಜೊತೆ ಪೋಷಕರು ಹೇಗೆ ಟ್ರೀಟ್‌ ಮಾಡಬೇಕು ಎಂಬುದರ ಬಗ್ಗೆ ತಿಳಿಹೇಳುವ `ಈಕ್ವಲ್ ನಾಟ್‌ ಸೇಮ್’ ಹಾಗೂ ಹುಡುಗರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವ `ಬಾಯ್ಸ್ ಡೋಂಟ್‌ ಕ್ರೈ’ ಎಂಬ ನಾಟಕಗಳು ಬಹಳ ಪರಿಣಾಮಕಾರಿ ಎನಿಸಿದವು.

ಪ್ರಶಸ್ತಿ ಪುರಸ್ಕಾರಗಳು

ನಂದಿನಿ ರಾವ್‌ ಅವರ ರಂಗಭೂಮಿಯಲ್ಲಿನ ವಿಶಿಷ್ಟ ಸೇವೆಯನ್ನು ಗಮನಿಸಿ `ಇನೋವೇಶನ್‌ ಇನ್‌ಟ್ರೇನಿಂಗ್‌ ಅಂಡ್‌ ಡೆವಲಪ್‌ಮೆಂಟ್‌ ಏಷ್ಯಾಸ್‌ ಎಕ್ಸಿನ್ಸ್ ಅವಾರ್ಡ್‌ 2017′ ಬಂದಿದೆ. ಎಚ್‌ಆರ್‌ಡಿ ಕಾಂಗ್ರೆಸ್‌ನಿಂದ ಲೀಡರ್‌ಶಿಪ್‌ ಅವಾರ್ಡ್‌ ಬಂದಿದೆ. ಬ್ರಿಟಿಷ್‌ಕೌನ್ಸಿಲ್‌ ಕೂಡ `ಯಂಗ್‌ ಕ್ರಿಯೇಟಿವ್ ಎಂಟರ್‌ ಪ್ರೆನ್ಶೂರ್‌’ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಹತ್ತು ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.

ಭ್ರಮೆಯಿಂದ ವಾಸ್ತವಕ್ಕೆ ಬನ್ನಿ

“ನಾನು ಮಾಡೆಲ್‌ ಥರಾ ಇರಬೇಕು, ನನ್ನ ದೇಹದ ಬಣ್ಣ ಹೀಗಿರಬೇಕು ಎಂಬೆಲ್ಲ ಜಾಹೀರಾತುಗಳ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಬಾಡಿ ಇಮೇಜ್‌ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಅಂತಃಶಕ್ತಿಯ ಬಗ್ಗೆ ಹೆಚ್ಚು ಫೋಕಸ್‌ ಮಾಡಿ. ನಾನಿಲ್ಲಿ ಏನು ಕಲಿತುಕೊಳ್ಳಬಹುದು, ಯಾವ ರಂಗದಲ್ಲಿ  ವಿಶೇಷ ಸಾಧನೆ ಮಾಡಬಹುದು ಎಂಬುದನ್ನು ನಮಗೆ ನಾವೇ ನಿರ್ಧರಿಸಬೇಕು. ನಮ್ಮದೇ ಆದ ವಿಚಾರಗಳಿಂದ ವ್ಯಕ್ತಿತ್ವ ಬೆಳೆಸಿಕೊಂಡರೆ ಆಗ ಪ್ರಗತಿಯ ಹಾದಿ ತಂತಾನೇ ತೆರೆದುಕೊಳ್ಳುತ್ತದೆ,”

ಇವು ಇಂದಿನ ಯುವತಿಯರಿಗೆ ನಂದಿನಿ ಕೊಡುವ ಸಲಹೆಗಳು.

– ಅಶೋಕ ಚಿಕ್ಕಪರಪ್ಪಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ