ಕಥೆ – ಕುಮುದಾ ರಾವ್
ಅಜಿತ್ ಮತ್ತು ಸುರಭಿಯ ಮದುವೆ ಇದ್ದಕ್ಕಿದ್ದಂತೆ ನಿಶ್ಚಯವಾಯಿತು. ಮದುವೆ ಅಂದರೆ ಹಾರಾಡುತ್ತಿದ್ದ ಫ್ಯಾಷನ್ ಡಿಸೈನರ್ ಅಜಿತ್ ಅವಳನ್ನು ಯಾವುದೋ ಮದುವೆಯಲ್ಲಿ ನೋಡಿ ಇಷ್ಟಪಟ್ಟಿದ್ದ . ಅವನ ತಾಯಿ ಕಮಲಾದೇವಿ ಅತಿಥಿಗಳಿಂದ ತುಂಬಿದ್ದ ಚಪ್ಪರದಲ್ಲಿ ಸುರಭಿಯ ತಾಯಿ ನೀಲಾರ ಎದುರಿಗೆ ಹೋಗಿ ತನ್ನ ದುಬಾರಿ ಸೀರೆಯ ಸೆರಗನ್ನು ಹರಡಿ, “ನನ್ನ ಮಗ ಮೊದಲ ಸಲ ಒಬ್ಬ ಹುಡುಗಿಯಲ್ಲಿ ಆಸಕ್ತಿ ತೋರಿಸ್ತಿದ್ದಾನೆ. ಅವನು ನಿಮ್ಮ ಮಗಳನ್ನು ತೋರಿಸಿ ಈ ಹುಡುಗಿ ಜೊತೆ ಮದುವೆ ಮಾಡಿಸುವ ಹಾಗಿದ್ದರೆ ನಾನು ಸಿದ್ಧ ಅಂತ ಹೇಳಿದ. ನೀವು ಈ ಮದುವೆಗೆ ಹ್ಞೂಂ ಅನ್ನುವವರೆಗೆ ನಾನು ಹೀಗೇ ನಿಮ್ಮೆದುರು ನಿಂತಿರ್ತೀನಿ,” ಎಂದಳು.
ಈ ರೀತಿಯ ಅನಿರೀಕ್ಷಿತ ಪ್ರಸ್ತಾಪದಿಂದ ಗಲಿಬಿಲಿಗೊಂಡು ನೀಲಾ ಏನಾದರೂ ಹೇಳುವ ಮೊದಲೇ ಅವಳ ಬಳಿ ನಿಂತಿದ್ದ ಮಹಿಳೆಯೊಬ್ಬಳು ಹೇಳಿದಳು. “ಮೊದಲನೇ ಸಲ ಯಾರೋ ಒಬ್ಬ ಹುಡುಗೀನ ಮದುವೆಗೆ ಒಪ್ಪಿಕೊಂಡಿದೀಯ ಕಮಲಾ. ಆದರೆ ಫ್ಯಾಷನ್ ಡಿಸೈನರ್ ಯಾರೋ ಹುಡುಗಿಯಲ್ಲಿ ಮೊದಲ ಬಾರಿ ಆಸಕ್ತಿ ತೋರಿಸ್ತಿದ್ದಾನೆ ಅಂದರೆ ಜೀರ್ಣಿಸಿಕೊಳ್ಳಕ್ಕಾಗಲ್ಲ.” ಹತ್ತಿರ ನಿಂತಿದ್ದ ಮಹಿಳೆಯರು ಜೋರಾಗಿ ನಕ್ಕರು. ನೀಲಾಗೆ ನಸುನಗದೆ ಇರಲಾಗಲಿಲ್ಲ. ಕಮಲಾ ಮಾತ್ರ ಹಿಂಜರಿಯದೆ, “ಫ್ಯಾಷನ್ ಜಗತ್ತಿನ ಬಗ್ಗೆ ನಿನ್ನ ತಿಳಿವಳಿಕೆ ಬಹಳ ಕಡಿಮೆ ಅನ್ನಿಸುತ್ತೆ ಊರ್ಮಿಳಾ , ನನ್ನ ಮಗ ಗಂಡಸರ ಉಡುಪುಗಳ ಡಿಸೈನ್
ಮಾಡ್ತಾನೆ, ಹುಡುಗೀರದಲ್ಲ,” ಎಂದಳು.
ನೀಲಾ ಕಮಲಾಳ ಹರಡಿದ ಸೆರಗನ್ನು ಕೈಗಳಿಂದ ಜೋಡಿಸಿ ಹೇಳಿದಳು, “ಸುರಭಿ ಮತ್ತು ಅವಳ ತಂದೆಯ ಒಪ್ಪಿಗೆಯಿಲ್ಲದೆ ನಾನು ಮಾತ್ರ ಒಪ್ಪಿದರೆ ಅದಕ್ಕೇನು ಬೆಲೆ ಇದೆ? ಎಲ್ಲಿ, ಯಾವಾಗ ಭೇಟಿಯಾಗ್ಬೇಕು ಅನ್ನೋದನ್ನು ನಾನು ನಾಳೆ ಬೆಳಗ್ಗೆ ಫೋನ್‌ಮಾಡಿ ತಿಳಿಸ್ತೀನಿ,” ಅವಳು ಹೇಳಿದ್ದು ಒಂದು ರೀತಿಯಲ್ಲಿ ಆಶ್ವಾಸನೆಯಾಗಿತ್ತು. ಮರುದಿನ ಅಜಿತನ ಕುಟುಂಬದವರ ಜೊತೆ ಅವನ ಸೋದರತ್ತೆಯೂ ಬಂದಿದ್ದಳು. ಮಾತನಾಡುವಾಗ ಆಕೆ, “ನಿನ್ನೆ ಊರ್ಮಿಳೆ ಹೇಳಿದ ಮಾತುಗಳಿಂದ ನಿಮಗೂ ನಮ್ಮ ಹುಡುಗ ಅದ್ಹೇಗೆ ಹುಡುಗಿಯರ ಕಡೆ ಆಕರ್ಷಿತನಾಗಿಲ್ಲ ಅಂತ ಅನುಮಾನ ಬರಬಹುದು. ನನ್ನ ಸೋದರಳಿಯನದು ಪರೋಪಕಾರಿ ಸ್ವಭಾವ. ತನ್ನ ಕೆಲಸವಲ್ಲದೆ, ಅವನು ಹೆಚ್ಚಿನ ಸಮಯ ಇತರರ ದುಃಖನೋವುಗಳನ್ನು ಹಂಚಿಕೊಳ್ಳುವುದರಲ್ಲಿ ಕಳೆಯುತ್ತದೆ. ತನ್ನ ಬಗ್ಗೆ ಯೋಚಿಸುವುದಕ್ಕೆ ಅವನಿಗೆ ಸಮಯವೇ ಸಿಗುವುದಿಲ್ಲ. ಇನ್ನು ಹುಡುಗಿಯರ ಬಗ್ಗೆ ಹೇಗೆ ಯೋಚಿಸುತ್ತಾನೆ?”
“ಅದ್ಭುತ ಅತ್ತೆ, ಎಷ್ಟು ಸರಳವಾಗಿ ನನ್ನನ್ನು ಸಾಧು.. ಸನ್ಯಾಸಿ ಮಾಡಿಬಿಟ್ಟಿರಿ. ಈಗ ಸುರಭಿ ನನ್ನನ್ನು ಮದುವೆಯಾಗಲು ಒಪ್ಪದಿದ್ದರೆ ಅವಳದು ತಪ್ಪು ಎಂದು ಹೇಳಲು ಆಗುವುದಿಲ್ಲ,” ಅವನು ತಮಾಷೆ ಮಾಡಿದ್ದು ಕೇಳಿ ಎಲ್ಲರೂ ನಕ್ಕರು.
“ಸುರಭಿಯ ಇಷ್ಟ ಏನು ಎಂದು ತಿಳಿದುಕೊಳ್ಳೋದು ಒಳ್ಳೇದು. ಅವಳಿಗೆ ನೀನು ಸರಳ ಅಭ್ಯಾಸಗಳ ವ್ಯಕ್ತಿ ಎಂದು ಹೇಳಿಬಿಡು. ಅವಳನ್ನು ಎಲ್ಲಿಗಾದರೂ ತಿರುಗಾಡಲು ಕರೆದುಕೊಂಡು ಹೋಗು,” ಅತ್ತೆ ಹೇಳಿದರು.
“ಇದಲ್ಲವೇ ಅತ್ತೆ ಸರಿಯಾದ ಮಾತು,” ಅಜಿತ್ ಮತ್ತೆ ತಮಾಷೆ ಮಾಡಿದ.
ಸುರಭಿಯ ಮನೆಯವರು ಏನಾದರೂ ಹೇಳುವ ಮೊದಲೇ ಅಜಿತನ ಅತ್ತಿಗೆ ನಳಿನಿ, “ನಾನೂ ಇವರಿಬ್ಬರ ಜೊತೆ ಹೋಗ್ತೀನಿ,” ಎಂದಳು.
ಸುರಭಿಯ ಅತ್ತಿಗೆ ಪಲ್ಲವಿ ಸುಮ್ಮನಿರ್ತಾಳಾ? ಅವಳೂ ತಕ್ಷಣ ಹೇಳಿದಳು, “ಹಾಗಾದರೆ ನಾನೂ ಬರ್ತೀನಿ.”
ಅಜಿತನ ಮುಖದ ಭಾವವನ್ನು ನೋಡಿ ಸುರಭಿಗೆ ನಗು ತಡೆಯಲಾಗಲಿಲ್ಲ.“ಸುರಭಿಯ ಒಪ್ಪಿಗೆ ತಿಳಿದುಕೊಳ್ಳಾಗಲೀ ಅಥವಾ ನನ್ನ ಬಗ್ಗೆ ಅವಳಿಗೆ ಹೇಳುವುದಕ್ಕಾಗಲೀ ಹೊರಗೆ ಹೋಗುವುದಕ್ಕಾಗಲಿ ಅಗತ್ಯ ಏನಿದೆ?”
ಅಜಿತ ನಕ್ಕ, “ನಾವು ಡೈನಿಂಗ್ ಟೇಬಲ್ ಬಳಿ ಕುಳಿತು ಮಾತನಾಡಬಹುದು.”“ಮನೇಲಿ ಡೈನಿಂಗ್ ಟೇಬಲ್‌ಗಿಂತ ಉತ್ತಮ ಸ್ಥಳ ಇದೆ. ಆದರೂ ನೀವು ಹೊರಗೆ ಹೋಗಿ ನೆಮ್ಮದಿಯಾಗಿ ಮಾತಾಡಿಕೊಳ್ಳಿ,” ಸುರಭಿಯ ಅಣ್ಣ ಯಾರನ್ನೂ ಕೇಳದೆ ಅವರಿಬ್ಬರಿಗೂ ಎದ್ದು ಹೋಗುವಂತೆ ಸೂಚಿಸಿದ.
ಮೊದಲ ಸಲ ಸುರಭಿಯನ್ನು ನೋಡುತ್ತಲೇ ಅವನಿಗೆ ಅವರ್ಣನೀಯ ಅನುಭವವಾಯಿತು. ಮಂತ್ರಮುಗ್ಧನಾಗಿ ತಾನು ಅವಳ ಹಿಂದೆ ಇದ್ದ ಕುರ್ಚಿಯ ಮೇಲೆ ಕುಳಿತ. ಆಮೇಲೆ ಸುರಭಿಯು ತನ್ನ ಗೆಳತಿಗೆ ತಾನು ತನ್ನ ಕೆರಿಯರ್‌ನಲ್ಲಿ ಹಸ್ತಕ್ಷೇಪ ಮಾಡದ ಹಾಗೂ ತನಗೆ ಅವನ ಕೆರಿಯರ್‌ನಲ್ಲಿ ಹಸ್ತಕ್ಷೇಪ ಮಾಡಲು ಬಿಡದಂತಹ ವ್ಯಕ್ತಿಯನ್ನು ಮದುವೆಯಾಗಲು ಇಷ್ಟಪಡುವುದಾಗಿ ಹೇಳುತ್ತಿದ್ದುದನ್ನು ಕೇಳಿಸಿಕೊಂಡ. ಅಜಿತ್ ತಕ್ಷಣ ತನಗೆ ಇಂತಹ ಸರಳ ವಿಚಾರಗಳ ಹುಡುಗಿಯೇ ಬೇಕು ಎಂದು ತಾಯಿಗೆ ಹೇಳಲು ಅವರ ಬಳಿ ಓಡಿದ.
ಇದಾದ ನಂತರ ಅವನು ಸುರಭಿಯ ಅಭಿರುಚಿ ಮತ್ತು ಹವ್ಯಾಸಗಳ ಬಗ್ಗೆ ಕೇಳಿದ, ತನ್ನ ಬಗ್ಗೆ ಹೇಳಿದ. ಅವನು ಸಾಮಾನ್ಯವಾಗಿ ಎಲ್ಲಾ ಫಿಲ್ಮುಗಳನ್ನು ನೋಡುತ್ತಾನೆ ಮತ್ತು ರಂಗುರಂಗಿನ ಕಾರ್ಯಕ್ರಮಗಳಿಗೂ ಹೋಗುತ್ತಾನೆ ಎಂದು ತಿಳಿದಾಗ ಒಬ್ಬರೇ ಹೋಗುವುದರಲ್ಲಿ ಏನು ಮಜಾ ಇರುತ್ತೆ ಎಂದು ಕೇಳಿದಳು.
ತನ್ನಣ್ಣ ಬಹಳ ವ್ಯಸ್ತನಾಗಿರುವುದರಿಂದ ಅತ್ತಿಗೆಯನ್ನು ಎಲ್ಲಿಗಾದರೂ ಕರೆದುಕೊಂಡು ಹೋಗುವುದು ತನ್ನ ಜವಾಬ್ದಾರಿಯಾಗಿದೆ ಎಂದ ಅಜಿತ್. ಕೆಲಸದ ಕಾರಣದಿಂದಾಗಿ ತಂದೆ ತಾಯಿ ಊರಲ್ಲಿದ್ದಾರೆ. ಅಜಿತ್ ತನ್ನಣ್ಣನ ಜೊತೆ ಇಲ್ಲಿದ್ದಾನೆ.
“ಮದುವೆಯಾದ ಮೇಲೂ ಇದೇ ರೀತಿ ಮುಂದುವರಿಯುತ್ತಾ?” ಸುರಭಿ ಹಿಂಜರಿಯದೆ ಕೇಳಿದಳು.
ಅಜಿತ್ ಒಳ್ಳೆ ಪ್ರಶ್ನೆ ಎನ್ನುವಂತೆ ಅವಳ ಕಡೆ ನೋಡಿದ, ನಂತರ ಹೇಳಿದ, “ಹಾಗೇ ಆಗುತ್ತೆ ಅಂತೇನೂ ಇಲ್ಲ. ಅತ್ತಿಗೆ ಸ್ವಾಭಿಮಾನಿ ಹಾಗೂ ತಿಳಿವಳಿಕೆಯುಳ್ಳವರು. ಶಿವಪೂಜೇಲಿ ಕರಡಿ ಆಗೋದು ಅವರಿಗೆ ಖಂಡಿತಾ ಇಷ್ಟವಿರಲ್ಲ. ಅಣ್ಣ ಆರ್ಕಿಟೆಕ್ಟ್.
“ಈಗ ಅವರ ಕೆಲಸ ತುಂಬಾ ಚೆನ್ನಾಗಿ ನಡೀತಿದೆ. ಅದಕ್ಕೆ ತಮ್ಮ ಸಹಾಯಕರ ಮೇಲೆ ಕೂಡ ಕೆಲಸ ಹೊರಿಸುತ್ತಿದ್ದಾರೆ. ನಾನು ಅವರಿಗೆ ಅಣ್ಣ, ನೀವು ನಿಮ್ಮ ಪತ್ನೀನಾ ಮತ್ತು ನಾನು ನನ್ನ ಪತ್ನೀನಾ ನೋಡಿಕೊಳ್ಳುವ ಕಾಲ ಬಂದಿದೆ ಅಂತ ಹೇಳ್ತೀನಿ. ಭವಿಷ್ಯದಲ್ಲಿ ಏನಾಗುತ್ತೆ ಹೇಳಲು ಸಾಧ್ಯವಿಲ್ಲ. ನನ್ನಿಂದಾಗಲಿ, ನನ್ನ ಮನೆಯವರಿಂದಾಗಲೀ ನಿನಗ್ಯಾವ ತೊಂದರೆಯೂ ಆಗುವುದಿಲ್ಲ ಅಂತ ಆಶ್ವಾಸನೆ ಕೊಡಬಲ್ಲೆ.”
ಈ ಆಶ್ವಾಸನೆಯ ನಂತರ ಇನ್ನೇನಾದರೂ ಕೇಳುವ ಹೇಳುವ ಅಗತ್ಯ ಕಾಣಿಸಲಿಲ್ಲ. ಬೇಗನೇ ಇಬ್ಬರ ಮದುವೆಯಾಯಿತು.
ಬೆಳಗ್ಗೆ ತಿಂಡಿಯಾದ ನಂತರ ಬೀಳ್ಕೊಡುಗೆ ಮತ್ತು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ಇದ್ದುದರಿಂದ ಮನೆಗೆ ಬರುವ ಹೊತ್ತಿಗೆ ಮಧ್ಯಾಹ್ನವಾಗಿತ್ತು.
ಸಂಜೆಯ ಔತಣದ ಏರ್ಪಾಡು ಮಾಡುವವರು ಬಂದಿದ್ದರು. ಸುರಭಿಯನ್ನು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿ ಅಜಿತ್ ತನ್ನ ಅಣ್ಣ ಮತ್ತು ಅಪ್ಪನ ಜೊತೆ ಅಲಂಕಾರದ ವ್ಯವಸ್ಥೆ ನೋಡಿಕೊಳ್ಳಲು ಹೊರ ಹೋದ.
ಅಜಿತ್ ಮತ್ತು ಸುರಭಿಯ ಕೋಣೆ ಅಜಿತ್ ನ ಅಣ್ಣ ಮತ್ತು ಅತ್ತಿಗೆಯ ಕೋಣೆಯ ಎದುರೇ ಇತ್ತು. ಅರೆತೆರೆದ ಬಾಗಿಲಿನಿಂದ ಬರುತ್ತಿದ್ದ ಶಬ್ದಗಳನ್ನು ಕೇಳಿ ಸುರಭಿ ಹೊರಗೆ ಇಣುಕಿ ನೋಡಿದಳು. ಮನೆಯ ಕೆಲಸಗಾರರು ಮತ್ತು ಡ್ರೈವರ್ ನಳಿನಿಯನ್ನು ಸುತ್ತುವರೆದಿದ್ದರು.
“ಅಮ್ಮ ಏನು ಕೊಟ್ಟಿದ್ದಾರೋ ಅದು ಅವರ ಕಡೆಯಿಂದ ಸರಿಯಾಗಿದೆ. ಆದರೆ ನಾವು ರಾತ್ರಿಯೆಲ್ಲಾ ಎದ್ದಿದ್ದು ಇಲ್ಲವೇ ನಮ್ಮ ಕೆಲಸವನ್ನು ಅಪಾಯಕ್ಕೊಡ್ಡಿ ನಿಮ್ಮ ಸೇವೆ ಮಾಡಿದ್ದೀವಿ. ಅದಕ್ಕೆ ನೀವು ಯಾವುದಾದರೂ ದೊಡ್ಡ ಇನಾಮು ಕೊಡಬೇಕು.”
“ನೀವು ಹೋಗಿ ಅಜಿತ್ ನನ್ನು ಕೇಳಿ,” ನಳಿನಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು.
“ಅಜಿತಪ್ಪನೋರಿಗೆ ಈಗ ನಮ್ಮ ಸೇವೆ ಯಾಕೆ ಬೇಕಾಗುತ್ತೆ….. ಅಮ್ಮ ಇನ್ನು ನಾವು ಕೇಳುವಷ್ಚು ಇನಾಮು ಕೊಡೋ ವಿಷಯ ಎಲ್ಲಿ?” ಡ್ರೈವರ್ ಹೇಳಿದ.
“ದೊಡ್ಡಯ್ಯನೋರು ಮನೆಗೆ ಬೇಗ ಬರ್ತಾರೋ, ಹೊತ್ತಾಗಿ ಬರ್ತಾರೋ, ಈಗ ನಿಮ್ಮ ಕೆಲಸ ಇನ್ನೂ ಜಾಸ್ತಿ ಆಗುತ್ತೆ. ನೀವೀಗ ಒಂದಲ್ಲ ಎರಡು ಕೋಣೆಗಳ ಮೇಲೆ ಕಾವಲು ಇರಬೇಕಾಗುತ್ತೆ.”
“ಖಂಡಿತಾ ಕಾವಲು ಕಾಯ್ತೀವಿ, ನಮ್ಮನ್ನು ಕೆಲಸದಲ್ಲಿ ಉಳಿಸಿಕೊಂಡರೆ ತಾನೆ ಆ ಮಾತು? ಚಿಕ್ಕರಾಯರು 15 ದಿವಸಗಳು ಹೊರಗೆ ಸುತ್ತಾಡಲು ಹೋಗ್ತಾರೆ ಅಂತ ಕೇಳಿದೆ. ಇನಾಮು ಅಂತ ಕೊಡದಿದ್ದರೂ ಹೋಗಲಿ ಆ ದಿನಗಳ ಕಾಫಿ ತಿಂಡಿ ಖರ್ಚಿಗೆ ಅಂತಾದರೂ ಕೊಡಿ.”
ಸುರಭಿಗೆ ಇನ್ನೂ ಕೇಳಲಾಗಲಿಲ್ಲ. ಗೂಡು ನಿಲ್ಲುವ ಮೊದಲೇ ಉರುಳಿಹೋಗಿತ್ತು. ಮದುವೆ ನಿಶ್ಚಿತಾರ್ಥದಲ್ಲಿ ಅತ್ತೆ ಮಾವ ಹೇಳಿದ್ದರು. “ನಮಗೆ ಸಂತೋಷದ ವಾತಾವರಣದಲ್ಲಿ ಮದುವೆ ಮಾಡಿಕೊಡಬೇಕು ಅಷ್ಟೇ. ಶಾಸ್ತ್ರ, ಪೂಜೆ ಅಂತ ಮಾಡಲು ಹೋದರೆ ಸುಮ್ಮನೆ ಕಾಲ ವ್ಯರ್ಥವಾಗುತ್ತೆ.
“ಮದುವೆಯಲ್ಲಿ ಶಾಸ್ತ್ರ ನಡೆಸುವ ಬಗ್ಗೆಯಾಗಲಿ, ಹನಿಮೂನ್‌ಗೆ ಹೋಗುವುದರ ಬಗ್ಗೆಯಾಗಲಿ ಆಡಂಬರ ಜಾಸ್ತಿ ಮಾಡಬಾರದು. ಮದುವೆಯಾದ ಮೇಲೆ ಆಯಾಸವಂತೂ ಆಗಿರುತ್ತೆ. ಮೇಲೆ ಪ್ರಯಾಣದ ಆಯಾಸ ಬೇರೆ. ಹನಿಮೂನ್ ಮಜಾ ಎಲ್ಲಾ ಹಾಳಾಗುತ್ತೆ.” ನಳಿನಿ ಹೇಳಿದಳು.
“ಮದುವೆಯ ತಕ್ಷಣ ಹನಿಮೂನ್‌ಗೆ ಹೋಗಬಾರದು. ಆರಾಮಾಗಿ ಅಮೇಲೆ ಯಾವಾಗಲಾದ್ರೂ ಹೋಗಬೇಕು.”
ಸುರಭಿ ನಾಚಿಕೆಯಿಂದ ತಲೆ ಬಾಗಿಸಿದಳು. ಆದರೆ ಅಜಿತ್ ತತ್ವಜ್ಞಾನಿಯಂತೆ, “ಮನಸ್ಸು ಚೆನ್ನಾಗಿದ್ದರೆ ಯಾವಾಗ ಹೋದರೇನಂತೆ ಅತ್ತಿಗೆ,” ಎಂದ. ಅವನ ಮಾತಿಗೆ ಎಲ್ಲರೂ ನಕ್ಕರು. ಸುರಭಿಯ ಚಿಕ್ಕಣ್ಣನ ಮುಖ ಮಾತ್ರ ಗಂಟಾಯಿತು. ಅವನು ಪ್ರವಾಸ ಮತ್ತು ಮಾಹಿತಿ ವಿಭಾಗದಲ್ಲಿ ಅಧಿಕಾರಿಯಾಗಿದ್ದ. ಅವನು ಮದುವೆಯ ದಿನ ಸುರಭಿಯ ಕೈಗೆ ಒಂದು ಕವರ್ ಕೊಟ್ಟು, “ಇದು ನನ್ನ ಕಡೆಯಿಂದ ನಿಮ್ಮಿಬ್ಬರಿಗೆ ಕೇರಳಕ್ಕೆ ಹನಿಮೂನ್ ಪ್ಯಾಕೇಜ್. ನೀವು ಬೇರೆಲ್ಲಾದರೂ ಹೋಗಬೇಕೆಂದು ಇಷ್ಟಪಟ್ಟರೆ ನಾನು ಇದನ್ನು ಆ ಸ್ಥಳಕ್ಕೆ ಬದಾಯಿಸಿ ಕೊಡ್ತೀನಿ,” ಎಂದ.
“ಬೇಡ ಭಾವ, ನಿಮ್ಮ ಆಯ್ಕೆ ಬಹಳ ಚೆನ್ನಾಗಿದೆ ಮತ್ತು ಉಡುಗೊರೆ ಕೂಡ.” ಅಜಿತ್ ಗೆ ನಿಜವಾಗಲೂ ಖುಷಿಯಾಗಿತ್ತು.
“ರಜಾ ತೆಗೆದುಕೊಳ್ಳುವ ಮೊದಲು ಕೈಯಲ್ಲಿರೋ ಕೆಲಸ ಮುಗಿಸೋದರಲ್ಲಿ ಮತ್ತು ಮದುವೆ ಕೆಲಸದ ಗಡಿಬಿಡೀಲಿ ಹನಿಮೂನ್ ಪ್ಲಾನ್ ಮಾಡಲು ಸಮಯವೇ ಸಿಗ್ತಿರಲಿಲ್ಲ. ನಮ್ಮನ್ಮು ಹನಿಮೂನ್‌ಗೆ ಕಳಿಸ್ತಿರೋದಕ್ಕೆ ಬಹಳ ಧನ್ಯವಾದಗಳು.”
“ಅರೆ, ನೀನೇನು ಹಾಗೆ ಕುಳಿತಿದೀಯ,” ಬಾಗಿಲಲ್ಲಿ ನಿಂತು ಅಜಿತ್ ಹೇಳಿದಾಗ ಸುರಭಿಯ ಧ್ಯಾನ ಭಂಗವಾಯಿತು.
“ಅಜಿತ್, ಸ್ವಲ್ಪ ಕೇಳಿಲ್ಲಿ,” ನಳಿನಿ ಕರೆದಳು.
“ಏನತ್ತಿಗೆ? ಏನು ಹೇಳಬೇಕು ಅಂತಿದಿರೋ ಅದನ್ನ ಇಲ್ಲೇ ಹೇಳಿ. ಅಣ್ಣ ಮಹಡಿ ಮೇಲೆ ಇದ್ದಾರೆ.”
ಸುರಭಿಯ ಕಿವಿ ಚುರುಕಾಯಿತು. ಅವಳು ಬಾಗಿಲಿನ ಹತ್ತಿರ ನಿಂತುಕೊಂಡಳು.“ಬಡವರು ಏನು ಕೇಳ್ತಾರೋ ಕೊಟ್ಟುಬಿಡಿ ಅತ್ತಿಗೆ. ನಾನು ಕೊಟ್ಟರೇನು ನೀವು ಕೊಟ್ಟರೇನು?” ಅಜಿತ್ ಹೇಳಿದ.
“ನಿನ್ನಿಂದ ಇನ್ನು ದುಡ್ಡು ಸಿಗಲ್ಲ ಅಂತ ಯೋಚಿಸಿ ಅವರು ಬೇರೆ ಕಡೆ ಕೆಲಸ ಹುಡುಕಿಕೊಂಡರೆ… ಈ ಜನರಿಂದ ತಾನೇ ನಮ್ಮ ಆಟ ನಡೆಯಲು ಸಹಾಯವಾಗ್ತಿರೋದು. ಹೊಸ ಕೆಲಸಗಾರರಿಂದ ಬಹುಶಃ ಸಾಧ್ಯವಾಗದಿರಬಹುದು,” ನಳಿನಿ ಅರ್ಥ ಮಾಡುವ ಹಾಗೆ ಹೇಳಿದಳು.
“ಅದಕ್ಕೆ ಇವರೆಲ್ಲರಿಗೂ ಎಲ್ಲ ಮೊದಲಿನ ಹಾಗೆ ನಡೆಯುತ್ತೆ ಅಂತ ನಂಬಿಕೆ ಬರಿಸಿ ಇಟ್ಟುಕೋಬೇಕು.
“ಆಯ್ತು ಅರ್ಥ ಮಾಡಿಸ್ತೀನಿ. ಅಣ್ಣನೂ ಬಂದರು. ಸುಮ್ಮನೆ ಯೋಚನೆ ಮಾಡ್ತೀರ.” ಅಜಿತ್ ಒಳಗೆ ಬಂದು ಬಾಗಿಲು ಹಾಕಿದ.
ಸುರಭಿಯ ತಲೆ ಗಿರ್ರೆನ್ನುತ್ತಿತ್ತು. ನಳಿನಿ ಮತ್ತು ಅಜಿತರ ಸಂಬಂಧ ನಿಚ್ಚಳವಾಗಿತ್ತು. ಅಜಿತ್ ಆ ಸಂಬಂಧದ ಬಲೆಯಿಂದ ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದ. ಆದರೆ ಅವನು ಈ ಸಂಬಂಧದಿಂದ ಹೊರಬರಲು ಸಾಧ್ಯವೇ? ಅಜಿತ್ ಅಥವಾ ನಳಿನಿಯನ್ನು ಅನ್ನುವುದು ತನ್ನನ್ನೇ ಹಳಿದುಕೊಳ್ಳುವುದಕ್ಕಿಂತ ಕೇಡು. ತಿಳಿವಳಿಕೆ ಮತ್ತು ಸಂಯಮದಿಂದ ಕೆಲಸ ಮಾಡಿ ಅಜಿತ್ ನನ್ನು ನಳಿನಿಯ ಹಿಡಿತದಿಂದ ಬಿಡಿಸಬೇಕು. ತನ್ನ ಭಾವನೆಗಳನ್ನು ಅದುಮಿ ಸುರಭಿ ಅಜಿತ್ ನ ಜೊತೆ ಸ್ನೇಹದಿಂದ ಮಾತನಾಡಿದಳು.
ಸಂಜೆಯ ಔತಣದಲ್ಲಿ ಅಜಿತ್ ನ ಅಣ್ಣ ಪ್ರಸನ್ನ ವಧುವರರ ಬಳಿ ನಿಂತಿದ್ದ, ಒಬ್ಬ ಅತಿಥಿ ಅವನನ್ನುದ್ದೇಶಿಸಿ, “ತಮ್ಮನ ಮದುವೆ ಖುಷೀಲಿ ಅಫೀಸು ಮುಚ್ಚಿದೀರೇನು?” ಎಂದು ಕೇಳಿದ.
“ಇಲ್ಲ. ಆಫೀಸು ತೆರೆದಿದೆ.” ಎಂದ ಪ್ರಸನ್ನ.
“ಸಿಬ್ಬಂದಿ ಮೇಲಿನ ನಂಬಿಕೇನಾ?”
“ಹೌದು, ಜೀವನದ ಇನ್ನೊಂದು ಹೆಸರೇ ನಂಬಿಕೆ ಕಣ್ರೀ. ನಂಬಿಕೆ ಇಡದಿದ್ದರೆ ಜೀವಿಸೋದು ಹೇಗೆ?” ಪ್ರಸನ್ನ ಕೇಳಿದ.
ಸುರಭಿಯ ಹೃದಯದಲ್ಲಿ ಈ ಸರಳ ಹೃದಯದ ವ್ಯಕ್ತಿಯ ಬಗ್ಗೆ ಸಹಾನುಭೂತಿ ಉಂಟಾಯಿತು. ಪಾಪಾ ತನ್ನ ಮನೇಲಿ ತನ್ನವರಿಂದಲೇ ಮೋಸ ಹೋಗುತ್ತಿದ್ದಾನೆ. ತನ್ನ ಸಂಸಾರದ ಜೊತೆಗೆ ಅವನ ಸಂಸಾರವನ್ನೂ ಸರಿಮಾಡುತ್ತೇನೆಂದು ಅವಳು ಮನದಲ್ಲಿ ನಿರ್ಧಾರ ಮಾಡಿದಳು. ರಾತ್ರಿ 2 ಗಂಟೆ ಸುಮಾರಿಗೆ ಬಾಗಿಲನ್ನು ಯಾರೋ ಮೆಲ್ಲಗೆ ತಟ್ಟಿದರು. ಅಜಿತ್ ನ ದೇಹ ಮೆಲ್ಲಗೆ ಕಂಪಿಸಿದ್ದು ಸುರಭಿಯ ಅನುಭವಕ್ಕೆ ಬಂತು. ಅವನು ನಿದ್ರೆ ಬರ್ತಿದೆ ಎಂದು ಹೇಳಿ ಮಗ್ಗುಲು ತಿರುಗಿದ. ಸ್ವಲ್ಪ ಹೊತ್ತಿಗೆ ಮತ್ತೆ ಬಾಗಿಲ ಮೇಲೆ ಸದ್ದು. ಸುರಭಿ ಮೆಲ್ಲನೆ ಎದ್ದು ನೈಟ್‌ಗೌನನ್ನು ಸರಿಪಡಿಸಿಕೊಂಡಳು. ಅವಳ ನಿರೀಕ್ಷೆಯಂತೆ ಮೂರನೆ ಸಲ ಬಾಗಿಲು ಮೇಲೆ ಸದ್ದಾದಾಗ ಸುರಭಿ ತಕ್ಷಣ ಬಾಗಿಲು ತೆರೆದಳು. ಪಾರದರ್ಶಕ ನೈಟಿ ಧರಿಸಿದ್ದ ನಳಿನಿ ಬಾಗಿಲ ಬಳಿ ನಿಂತಿದ್ದಳು.
“ನಿನಗೂ ಶಬ್ದ ಕೇಳಿಸಿರಬೇಕಲ್ಲಾ ಸುರಭಿ? ನನಗೂ ಬಾಗಿಲು ತಟ್ಟಿದ ಶಬ್ದ ಕೇಳಿ ನೋಡಕ್ಕೆ ಬಂದೆ,” ನಳಿನಿ ಹೇಳಿದಳು.
“ಅಣ್ಣತಮ್ಮಂದಿರು ಇಬ್ಬರಿಗೂ ಏನೂ ಕೇಳಿಸಿಲ್ಲಾ?” ನಳಿನಿ ಮತ್ತೆ ಕೇಳಿದಳು.
“ಗಾಢವಾದ ನಿದ್ರೆ ಬಂದಿರಬೇಕು. ನನಗೆ ಈಗ ತಾನೇ ನಿದ್ರೆ ಹತ್ತಿತ್ತು ಅತ್ತಿಗೆ, ಅಲ್ಲದೆ ನನಗೆ ಎಷ್ಟೇ ಜೋರು ನಿದ್ರೆ ಬಂದಿದ್ದರೂ ಸ್ವಲ್ಪ ಶಬ್ದ ಕೇಳಿಸಿದರೂ ಸಾಕು ಎಚ್ಚರವಾಗಿಬಿಡುತ್ತೆ. ನೀವು ಮಲಗಿಕೊಳ್ಳಿ. ಮತ್ತೆ ಶಬ್ದವಾದರೆ ನಾನು ನೋಡ್ತೀನಿ.” ಸುರಭಿ ನಗುನಗುತ್ತಾ ಹೇಳಿ ಬಾಗಿಲು ಹಾಕಿಕೊಂಡಳು.
ಮರುದಿನ ಬೆಳಗ್ಗೆ ತಿಂಡಿ ತಿಂದ ನಂತರ ಸುರಭಿ ಅತ್ತೆಯ ಜೊತೆ ಕುಳಿತು ಮನೆಯವರ ಹಳೆಯ ಫೋಟೋಗಳನ್ನು ನೋಡುತ್ತಿದ್ದಳು. ಕಮಲಾ ತಮ್ಮ ಬಂಧುಗಳ ಬಗ್ಗೆ ವಿವರಿಸುತ್ತಿದ್ದಳು. ಬರದೇ ಇದ್ದ ಬಂಧುಗಳ ಬಗ್ಗೆ ಹೇಳುತ್ತಿದ್ದಳು. ಆಗ ಕೆಲಸದ ಹೆಂಗಸು ಜಯಮ್ಮ ಏನೋ ಹೇಳಲು ಬಂದಳು.
“ಮಧ್ಯಾಹ್ನದ ಅಡುಗೆಗೆ ಏನವಸರ? ತಡಿ ಇನ್ನೊಂದು ಅರ್ಧ ಗಂಟೆ, ಆಮೇಲೆ ಹೇಳ್ತೀನಿ ಏನು ಮಾಡಬೇಕಂತ,” ಜಯಮ್ಮನಿಗೆ ಹೇಳಿದಳು.
“ಇವಳು ಎಷ್ಟು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾಳೆ ಅಮ್ಮ?” ಜಯಮ್ಮ ಹೋದ ಮೇಲೆ ಸುರಭಿ ಕೇಳಿದಳು.
“4-5 ವರ್ಷಗಳಾಗಿರಬಹುದು,” ಯೋಚಿಸುತ್ತಾ ಕಮಲಾ ಹೇಳಿದಳು.
“ಚಂದ್ರು ಬಂದು 10 ವರ್ಷಗಳಾದವು. ಮದುವೆಯಾದ ಮೇಲೆ ಜಯಾನೂ ಇಲ್ಲಿಗೆ ಕರೆದುಕೊಂಡು ಬಂದ. ಪ್ರಸನ್ನನ ಮದುವೆಯಾದ ಮೇಲೆ ನಳಿನಿ ಒಬ್ಬಳೇ ಇರಬೇಕಾಗುತ್ತಲ್ಲಾ ಅನ್ನುವ ಭಯ ಹೋಯಿತು. ಆದರೆ ಈಗ ಇವರಿಬ್ಬರೂ ಹೆಚ್ಚು ದಿನ ಇರಲ್ಲ ಅಂತ ಕಾಣುತ್ತೆ.”
“ಯಾಕಮ್ಮ?” ಸುರಭಿ ಪ್ರಶ್ನಿಸಿದಳು.
“ನಾವು ಕೊಡೋ ಸಂಬಳದಿಂದ ಅವನು ಸಂಸಾರ ನಡೆಸೋದು ಕಷ್ಟವಾಗ್ತಿದೆ ಅಂತ ಚಂದ್ರು ಹೇಳ್ತಾನೆ. ಅದಕ್ಕೆ ಅವನಿಗೆ ಫ್ಯಾಕ್ಟರಿ ಅಥವಾ ಆಫೀಸಿನಲ್ಲಿ ಕೆಲಸ ಕೊಡಿಸಬೇಕಂತೆ. ಮನೆ ಕೆಲಸಕ್ಕೆ ಬೇರೆಯವರನ್ನು ಕರಕೊಂಡು ಬರ್ತೀನಿ ಅಂತಾನೆ. ಅಪ್ಪ ಮಕ್ಕಳಲ್ಲಿ ಯಾರಾದರೂ ಕೆಲಸ ಕೊಡಿಸಿದರೆ ಬೇರೆ ಕೆಲಸದವರನ್ನು ಕರೆತರುತ್ತಾನೆ. ಇಲ್ಲದಿದ್ದರೆ ಯಾವತ್ತಾದರೂ ಅವನೇ ಹೊರಟುಹೋಗುತ್ತಾನೆ ಅಷ್ಟೇ. ಆಗ ತೊಂದರೆಯಾಗುವುದು ಮನೆಯ ಹೆಂಗಸರಿಗೆ,” ಎಂದಳು ಕಮಲಾ.
“ನೀವು ಎಲ್ಲರಿಗೂ ಹೇಳಿಟ್ಟಿರಿ. ಯಾರಾದರೂ ಎಲ್ಲಾದರೂ ಕೆಲಸ ಕೊಡಿಸ್ತಾರೆ,” ಸುರಭಿ ಹೇಳಿದಳು.
“ಎಲ್ಲರಿಗೂ ಹೇಳಿದೀನಿ. ಆದರೆ ಯಾರಾದರೂ ಕೇಳಿದರೆ ತಾನೆ? ಮನೆ ಕೆಲಸದವನಿಗೆ ಎಲ್ಲಿ ಕೆಲಸ ಕೊಡಿಸೋದು ಅಂತ ಹೇಳ್ತಾರೆ.”
ಕೇರಳದ ವಿಶಾಲ ಸಮುದ್ರ ತೀರ ಮತ್ತು ಹಸಿರು ತುಂಬಿದ ಪರಿಸರ ಅಜಿತನಿಗೆ ಬಹಳ ಇಷ್ಟವಾದವು.
“ಇಷ್ಟು ಸುಂದರವಾದ ಜಾಗಗಳು ಇರುತ್ತೆ ಅಂತ ನನಗೇ ಗೊತ್ತೇ ಇರಲಿಲ್ಲ. ಒಂದು ಸಲ ಟೀವೀಲಿ ಸಮುದ್ರ ನೋಡಿ ಅಣ್ಣ ಅತ್ತಿಗೆಗೆ ನಡಿ ಗೋವಾಕ್ಕೆ ಹೋಗಿ ಸುತ್ತಾಡಿ ಬರೋಣ ಎಂದಾಗ ಅವರು ಯಾವಾಗಲೂ ನೀರನ್ನು ನೋಡಿ ನೋಡಿ ಬೋರಾಗುತ್ತೆ ಎಂದಿದ್ದರು. ಅಮೇಲೆ ಬೆಟ್ಟಗುಡ್ಡ ತೋರಿಸಕ್ಕೆ ಅಣ್ಣನ್ನ ನೈನಿತಾಲ್‌ಗೆ ಕರೆದುಕೊಂಡು ಹೋಗಿದ್ದರು,” ಅಜಿತ್ ನಗುತ್ತಾ ಹೇಳಿದ, “ಸಮುದ್ರ ನೋಡಿದರೆ ನೀರಿಗೆ ಎಷ್ಟು ರೂಪಗಳು. ಎಷ್ಟು ಬಣ್ಣಗಳು ಇರುತ್ತವೆ ಅಂತ ಗೊತ್ತಾಗುತ್ತೆ.”
ಸುರಭಿಯ ಮೆದುಳಿಗೆ ಮಿಂಚು ಸೋಕಿದಂತಾಯಿತು. “ಅದಕ್ಕೇನು, ಈಗಲೇ ಅವರಿಗೆ ಬನ್ನಿ ಎಂದು ಕರೆಯಿರಿ ….” ಎಂದಳು.
ಅಜಿತ್, “ಏನು ನಮ್ಮ ಹನಿಮೂನ್ ಸರ್ವನಾಶ ಮಾಡಬೇಕು ಅಂತಲಾ?” ಎಂದ. ಅವನ ದನಿಯಲ್ಲಿ ಕೋಪ ಇತ್ತು.
“ಅವರು ಇಲ್ಲಿಗೆ ಬರುವ ಹೊತ್ತಿಗೆ ನಾವು ಇಲ್ಲಿಂದ ಹೊರಡುವ ಸಮಯ ಆಗಿರುತ್ತದೆ. ಕೇರಳ ಪ್ರವಾಸಕ್ಕೆ ಇದು ಸೂಕ್ತ ಸಮಯ. ವರ್ಷದ ಕಡೆ ಆಗಿರೋದ್ರಿಂದ ಕ್ಲೈಂಟ್‌ಗಳು ಬರೋದು ಕಡಿಮೆ ಅಂತ ನಿಮ್ಮಣ್ಣ ಹೇಳ್ತಿದ್ದರು. ಅದಕ್ಕೆ ಅವರಿಗೆ ಈಗ ಬಿಡುವು ಇರುತ್ತೆ. ನಾವ್ಯಾಕೆ ಅಣ್ಣ ಮತ್ತು ಅತ್ತಿಗೇಗೆ ಕೇರಳದ ಹಾಲಿಡೇ ಪ್ಯಾಕೇಜ್ ಕೊಡಬಾರದು? ನಾನು ಅಣ್ಣನಿಗೆ ಫೋನ್ ಮಾಡಿ ಎಲ್ಲಾ ವ್ಯವಸ್ಥೆ ಮಾಡಲು ಹೇಳ್ತೀನಿ.”
ಅಜಿತ್ ನ ಮುಖ ನೋಡಿದರೆ ಅಲ್ಲಿ ಅವನ ತಲೆಯಿಂದ ಭಾರ ಇಳಿದ ಭಾವ ಇತ್ತು.“ನಿನ್ನ ಐಡಿಯಾ ತುಂಬಾ ಚೆನ್ನಾಗಿದೆ. 15 ದಿನಗಳ ಪ್ಯಾಕೇಜ್ ಹೇಳು,” ಎಂದ.
“ಉಡುಗೊರೆ ಕೊಡ್ತಿದ್ದೇವೆ ಅಂದಮೇಲೆ ಕಡೇ ಪಕ್ಷ 1 ತಿಂಗಳಾದರೂ ಕೊಡಿ. 15 ದಿನಗಳಲ್ಲಿ ಏನು ಮಜಾನೂ ಇರಲ್ಲ. ನಮಗೆ ಅನ್ನಿಸ್ತಿದೆ ನಾವು ಬಹಳ ಕಡಿಮೆ ಸಮಯ ಇಟ್ಟುಕೊಂಡು ಬಂದಿದೀವಿ ಅಂತ. ಆಮೇಲೆ ದುಡ್ಡಿನ ಬಗ್ಗೆ ಚಿಂತೆ ಮಾಡಬೇಡಿ. ನಮ್ಮಣ್ಣನಿಗೆ ಬಹಳ ರಿಯಾಯಿತಿ ಸಿಗುತ್ತೆ.”
“ಸರಿ, 1 ತಿಂಗಳಿನ ವ್ಯವಸ್ಥೆ ಮಾಡು,” ಅಜಿತ್ ನಿಗೆ ಈಗ ನಿಜವಾಗಲೂ ಖುಷಿಯಾಗಿತ್ತು.
“ತುಂಬಾ ಮಜಾ ಆಗುತ್ತೆ. ಅವರಿಗೂ ನಮಗೂ ಊರಲ್ಲಿ ನಮ್ಮ ತಾತನ ಕಾಲದಿಂದ ಬಂದ ಮನೇನಾ ಬಿಟ್ಟು ಬೇರೆ ಹೋಗಕ್ಕಾಗಿಲ್ಲ. ಹೀಗೆ ಅಲ್ಲಿ ಇಲ್ಲಿ ಸುತ್ತಾಡಲು ಬಂದು ನಾವಿಬ್ಬರೇ ಇರುವ ಆನಂದಪಡಬೇಕು ಅಷ್ಟೇ,” ಎಂದ.
“ಅದೇನೋ ನಿಜ. ಆದರೆ ಮನೆಯರ ಜೊತೆ ಒಟ್ಟಿಗೆ ಇರುವ ಮಜಾನೇ ಬೇರೆ. ಅಲ್ಲದೆ ಸುರಕ್ಷತೆಯೂ ಇರುತ್ತೆ.”
ಸ್ವಲ್ಪ ಹಿಂಜರಿಕೆಯ ನಂತರ ಪ್ರಸನ್ನ ಗೋವಾಕ್ಕೆ ಬರಲು ಒಪ್ಪಿಕೊಂಡ. ಸುರಭಿ ಎಂಥಹ ವ್ಯವಸ್ಥೆ ಮಾಡಿದ್ದಳೆಂದರೆ ಪ್ರಸನ್ನ ಮತ್ತು ನಳಿನಿ ಕೇರಳಕ್ಕೆ ಹೊರಡಬೇಕಾಗಿತ್ತು.
ಸುರಭಿ ತನ್ನ ಯೋಜನೆ ಕಾರ್ಯಗತಗೊಳಿಸಲು ಯೋಚಿಸಿದಳು. ಅವಳು ಅಣ್ಣನಿಗೆ ಫೋನ್ ಮಾಡಿ ಮಧ್ಯಾಹ್ನ ಭೇಟಿ ಮಾಡಲು ಹೇಳಿದಳು. ಅಣ್ಣನ ಜೊತೆ ಮಾತನಾಡುತ್ತಾ ಸುರಭಿ ಮನೇಲಿ ನಳಿನಿಯ ಆಡಳಿತ ಸ್ವಲ್ಪ ಕಡಿಮೆ ಮಾಡಿ ತಾನು ಕಾಲೂರಲು ಹಳೆಯ ನೌಕರರನ್ನು ಬಿಡಿಸಿ ಹೊಸ ಕೆಲಸಗಾರರನ್ನು ಸೇರಿಸಿಕೊಳ್ಳಬೇಕಾಗಿದೆ ಎಂದು ಹೇಳಿದಳು. ಆದರೆ ಸಮಸ್ಯೆ ಇದ್ದದ್ದು ಹಳೆ ನೌಕರರು ಅಂದರೆ ಗಂಡ ಹೆಂಡತಿಯನ್ನು ಹೊರಹಾಕುವುದು ಹೇಗೆ ಅಂತ.
ಅಣ್ಣನಿಗೆ ಮೊದಲೇ ನಳಿನಿಯನ್ನು ಕಂಡರೆ ಅಷ್ಟು ಸರಿಬರುತ್ತಿರಲಿಲ್ಲ. ಆದ್ದರಿಂದ, “ನಾನು ಅವನಿಗೆ ಜಾಸ್ತಿ ಸಂಬಳ ಬರುವಂತಹ ಕೆಲಸ ಕೊಡಿಸ್ತೀನಿ. ತಾನಾಗೇ ಬಿಟ್ಟುಹೋಗ್ತಾನೆ. ನನಗೆ ಚೆನ್ನಾಗಿ ಗೊತ್ತಿರುವ ಒಂದೆರಡು ಹೋಟೆಲ್‌ಗಳಿವೆ. ಅಲ್ಲಿ ಕ್ಲೀನ್‌ಮಾಡುವುದಕ್ಕೆ, ಅಡುಗೆ ಮಾಡುವುದಕ್ಕೆ, ಬಡಿಸುವುದಕ್ಕೆ ಸಹಾಯಕರಾಗಿ ಇಬ್ಬರನ್ನೂ ಸೇರಿಸ್ತೀನಿ.” ಎಂದ.
“ಒಬ್ಬ ಡ್ರೈವರ್ ಕೂಡಾ ಇದಾನಣ್ಣ.”
“ಅವನನ್ನು ಯಾವುದಾದರೂ ಕಾರ್ ಸರ್ವಿಸ್‌ನಲ್ಲಿ ಸೇರಿಸ್ತೀನಿ ಬಿಡು. ನಳಿನಿ ಹೋಗಲಿ, ಅಮೇಲೆ ಈ ಜನರ ಜೊತೆ ಮಾತನಾಡಿ ಅವರಿಗೆ ಇಷ್ಟವಾದ ಕೆಲಸ ಕೊಡಿಸ್ತೀನಿ,” ಅಣ್ಣ ಆಶ್ವಾಸನೆ ನೀಡಿದ.
ನಳಿನಿ ಹೋದ ಕೆಲವು ದಿನಗಳ ನಂತರ ಚಂದ್ರುವೇ ಇಬ್ಬರು ಹುಡುಗರನ್ನು ಕರೆತಂದು ಅವರಿಗೆ ಕೆಲಸವನ್ನೆಲ್ಲಾ ಹೇಳಿಕೊಟ್ಟ. ಡ್ರೈವರ್ ಕೂಡಾ ಇನ್ನೊಬ್ಬ ಡ್ರೈವರನ್ನು ಕರೆದುಕೊಂಡು ಬಂದ. ಸುರಭಿಯ ಈ ಕೆಲಸಗಳಿಂದ ಕಮಲಾಗೆ ಸಂತೋಷವಾಗಿತ್ತು. ಒಂದು ದಿನ ಸೋದರತ್ತೆ ಬಂದಳು.
“ಅರೆ ವಾಹ್, ಸುರಭಿ ನೀನು ಬರುತ್ತಿದ್ದ ಹಾಗೆ ಎಲ್ಲಾ ಬದಲಾವಣೆ ಮಾಡಿದೀಯ.” ಸುರಭಿಯನ್ನು ಹೊಗಳಿದಳು.
“ಬದಲಾವಣೆ ಏನಿಲ್ಲ ಅತ್ತೆ. ನೀವು ನಿಮ್ಮ ಮಗ ಬಹಳ ಪರೋಪಕಾರಿ ಅಂತ ಹೇಳಿದ್ದಿರಿ ನೆನಪಿದೆಯಾ? ಅವರ ನೆರಳಲ್ಲಿ ಇದ್ದು ನಾನೂ ಸ್ವಲ್ಪ ಪರೋಪಕಾರ ಮಾಡಿದ್ದೀನಿ.” ಸುರಭಿ ಮುಗುಳ್ನಕ್ಕಳು.