ಕಥೆ – ಭವಾನಿ ಪ್ರಸಾದ್‌ 

“ಭಕ್ತ ಬಂಧುಗಳೇ, ಈ ಶರೀರ ನಶ್ವರವಾದುದು. ಇದರಲ್ಲಿರುವ ಆತ್ಮ ಪರಮಾತ್ಮನೊಡನೆ ಒಂದಾದಾಗಲೇ ನಿಜವಾದ ಆನಂದ, ಪರಮಾನಂದ ದೊರೆಯುವುದು. ಆದರೆ ಕಾಮ, ಕ್ರೋಧ, ಲೋಭಗಳೆಂಬ ತೊಡಕುಗಳು ಈ ಸಾಧನಾ ಮಾರ್ಗದಲ್ಲಿ ಅಡ್ಡಿಯಾಗಿ ನಿಂತಿವೆ. ಈ ತೊಡಕುಗಳನ್ನು ನಿವಾರಿಸಿಕೊಂಡು ಮುನ್ನಡೆದಾಗ ನೀವು ಮುಕ್ತಿ ಪಡೆಯುವುದು ಖಂಡಿತ,” ಸ್ವಾಮಿ ದಿವ್ಯಾನಂದರ ಓಜಸ್ವಿ ವಾಣಿಯು ಮೊಳಗುತ್ತಿತ್ತು.

ನಗರದ ಹವಾನಿಯಂತ್ರಿತ ಭವನದ ವೇದಿಕೆಯ ಮೇಲೆ ಸ್ವಾಮೀಜಿ ಕುಳಿತಿದ್ದರು. ಕಾಷಾಯ ರೇಷ್ಮೆ ವಸ್ತ್ರ, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹಣೆಯ ಮೇಲೆ ಚಂದನದ ತಿಲಕ ಇವುಗಳು ಸ್ವಾಮೀಜಿಯ ವ್ಯಕ್ತಿತ್ವಕ್ಕೆ ಮೆರುಗು ನೀಡಿದ್ದವು.

ನಗರದೆಲ್ಲೆಡೆ ಸ್ವಾಮೀಜಿಯ ದೊಡ್ಡ ಪೋಸ್ಟರ್‌ಗಳು ಕಂಡುಬರುತ್ತಿದ್ದವು. ಸ್ವಾಮೀಜಿ ಸಿದ್ಧಪುರುಷರೆಂದೂ, ಅವರ ಕೃಪಾದೃಷ್ಟಿ ಬಿದ್ದೊಡನೆ ಕಷ್ಟಗಳು ದೂರವಾಗುವುದೆಂದೂ ಪ್ರಚಾರ ಮಾಡಲ್ಪಟ್ಟಿತ್ತು. ಎಲ್ಲ ಕಡೆಯೂ ಜನರು ಸ್ವಾಮೀಜಿಯ ಮಹಿಮೆ ಬಣ್ಣಿಸುತ್ತಿದ್ದರು. ಅವರ ದರ್ಶನಕ್ಕಾಗಿ ಜನಸಾಗರವೇ ಹರಿದು ಬರುತ್ತಿತ್ತು.

ದಿನದಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಹೀಗೆ 3 ಸಲ ಸ್ವಾಮೀಜಿ ಜನರಿಗೆ ದರ್ಶನ ದಯಪಾಲಿಸುತ್ತಿದ್ದರು. ಸಾಯಂಕಾಲದ ದರ್ಶನ ಪ್ರವಚನದ ನಂತರ ಇರುತ್ತಿತ್ತು. ಆಗಷ್ಟೇ ಅವರ ಪ್ರವಚನ ಮುಗಿದಿತ್ತು. ಪ್ರವಚನ ಮಂದಿರ ಬಣ್ಣಬಣ್ಣದ ಬಲ್ಬ್ ಗಳ ಬೆಳಕಿನಿಂದ ಕಂಗೊಳಿಸುತ್ತಿತ್ತು. ತಾಜಾ ಗುಲಾಬಿ ಹೂಗಳಿಂದ ಅಲಂಕೃತವಾಗಿದ್ದವು ವೇದಿಕೆಯ ಪರಿಮಳ ಆ ಹಾಲ್‌ತುಂಬ ಹರಡಿತ್ತು.

ಸ್ವಾಮೀಜಿಯ ಚರಣಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು. ಆಶ್ರಮದ ಸ್ವಯಂಸೇವಕರು ಕಾಣಿಕೆ ನೀಡಿ ಆಶೀರ್ವಾದ ಪಡೆಯುವಂತೆ  ಭಕ್ತರನ್ನು ಪ್ರೇರೇಪಿಸುತ್ತಿದ್ದರು.

ಪ್ರವಚನ ಮತ್ತು ದರ್ಶನದ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಮುಗಿಯಿತು. ಜನರೆಲ್ಲ ಸ್ವಾಮೀಜಿಯ ಗುಣಗಾನ ಮಾಡುತ್ತಾ ತೆರಳಿದರು. ಸ್ವಾಮೀಜಿಯು ತಮ್ಮ ವಿಶ್ವಾಸಪಾತ್ರ ಶಿಷ್ಯರಾದ ಸ್ವಾಮಿ ಶ್ರದ್ಧಾನಂದಜೀ ಮತ್ತು ಸ್ವಾಮಿ ಸತ್ಯಾನಂದಜೀ ಅವರೊಡನೆ ತಮ್ಮ ಕೋಣೆಗೆ ನಡೆದರು.

ಆಶ್ರಮದ ಸ್ವಯಂಸೇವಕರೆಲ್ಲ ತಮ್ಮ ತಮ್ಮ ಕೆಲಸ ಮುಗಿಸಿ ಹೊರಟ ನಂತರ ಈ ಇಬ್ಬರು ಆಪ್ತಶಿಷ್ಯರು ಕೋಣೆಯ ಬಾಗಿಲನ್ನು ಭದ್ರಪಡಿಸಿ ಕುಳಿತುಕೊಂಡರು.

“ಇಂದಿನ ಕಾಣಿಕೆ ಚೀಲವನ್ನು ಸುರಿಯಿರಿ. ಅದರ ಎಣಿಕೆ ಕೆಲಸ ಮುಗಿಸೋಣ,” ಸ್ವಾಮಿ ಶ್ರದ್ಧಾನಂದಜೀ ತಮ್ಮ ಕಾಷಾಯ ಜುಬ್ಬಾದ ತೋಳನ್ನು ಮೇಲೇರಿಸುತ್ತಾ ಹೇಳಿದರು.

“ಬೆಳಗ್ಗೆಯಿಂದ ಈ ಮೂರ್ಖ ಜನರ ಸ್ವಾಗತ ಸತ್ಕಾರದಲ್ಲಿ ನಮ್ಮ ನಶ್ವರ ಶರೀರ ಬಳಲಿಬಿಟ್ಟಿದೆ. ಈ ಕೆಲಸವನ್ನು ಬೇಗ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳೋಣ,” ಸ್ವಾಮಿ ಸತ್ಯಾನಂದಜೀ ಮೈ ಮುರಿಯುತ್ತಾ ಒಪ್ಪಿಗೆ ಸೂಚಿಸಿದರು.

ಜನರು ಕಾಣಿಕೆ ಹಣದೊಂದಿಗೆ ಸಮರ್ಪಿಸಿದ್ದ ಹೂಗಳು ಮತ್ತು ಇತರೆ ವಸ್ತುಗಳನ್ನು ಬೇರ್ಪಡಿಸುತ್ತಾ ಇಬ್ಬರೂ ಹಣವನ್ನು ಒಂದೆಡೆ ಗುಡ್ಡೆ ಮಾಡತೊಡಗಿದರು. ಅವರು ಮತ್ತೇನನ್ನೋ ಹುಡುಕುತ್ತಿರುವಂತೆ ತೋರುತ್ತಿತ್ತು.

ಸ್ವಾಮಿ ಶ್ರದ್ಧಾನಂದಜೀ ಮತ್ತೊಮ್ಮೆ ಕೆಂಪು ಗುಲಾಬಿ ಹೂಗಳ ರಾಶಿಯನ್ನು ತಡಕಾಡುತ್ತಿದ್ದಂತೆ ಅವರ ಕಣ್ಣುಗಳಲ್ಲಿ ಹೊಳಪು ಕಂಡಿತು, “ಓಹೋ! ಸಿಕ್ಕಿತು. ನೋಡಿ,” ಎಂದು ಸಂತೋಷದಿಂದ ಕೂಗಿದರು.

ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಸುತ್ತಿದ್ದ ಗಂಟೊಂದು ಅವರ ಕೈಯಲ್ಲಿತ್ತು. ಸ್ವಾಮಿ ಸತ್ಯಾನಂದಜೀ ಕೂಡಲೇ ಅದನ್ನು ತೆಗೆದುಕೊಂಡು ಬಿಡಿಸಿ ನೋಡಿದರು. ಅದರಲ್ಲಿ 1 ಲಕ್ಷ ರೂಪಾಯಿಯ ಹೊಸ ನೋಟುಗಳ ಕಟ್ಟು ಕಣ್ಣು ಕೋರೈಸುವಂತಿತ್ತು.

“ಈ ಹೊತ್ತು ಕೂಡ ಅವರು 1 ಲಕ್ಷ ರೂಪಾಯಿ ಕಾಣಿಕೆ ಹಾಕಿದ್ದಾರೆ,” ಎನ್ನುತ್ತಾ ಸ್ವಾಮಿ ಸತ್ಯಾನಂದಜೀ ನೋಟಿನ ಕಟ್ಟನ್ನು  ತೆಗೆದುಕೊಂಡು ಸ್ವಾಮಿ ದಿವ್ಯಾನಂದರ ಕೋಣೆಯತ್ತ ಧಾವಿಸಿದರು. ಸ್ವಾಮಿ ಶ್ರದ್ಧಾನಂದರೂ ಅವರ ಹಿಂದೆ ಓಡಿದರು.

ಸ್ವಾಮಿ ದಿವ್ಯಾನಂದರು ವೈಭವಯುತವಾದ ಕೋಣೆಯಲ್ಲಿ ಮಹಾರಾಜ ಬೆಡ್‌ ಮೇಲೆ ಪವಡಿಸಿದ್ದರು. ಸದ್ದು ಕೇಳುತ್ತಿದ್ದಂತೆ ಎದ್ದು ಕುಳಿತರು. 1 ಲಕ್ಷ ರೂಪಾಯಿಯ ನೋಟುಗಳ ಕಟ್ಟನ್ನು ಹಿಡಿದು ಹಿಂದೆ ಮುಂದೆ ತಿರುಗಿಸಿ ನೋಡುತ್ತಾ,“ಅವರು ಯಾರೆಂದು ಗೊತ್ತಾಯಿತೇ?” ಎಂದು ಕೇಳಿದರು.

“ಇಲ್ಲ ಸ್ವಾಮೀಜಿ. ನಾವು ಎಷ್ಟು ಕಾದು ನೋಡಿದರೂ ಇದನ್ನು ಯಾರು, ಯಾವಾಗ ಕೊಟ್ಟರು ಅನ್ನೋದೇ ತಿಳಿಯಲಿಲ್ಲ,” ಸ್ವಾಮಿ ಸತ್ಯಾನಂದಜೀ ಹೇಳಿದರು.

“ನೀವಿಬ್ಬರೂ ತಿಂದು ತಿಂದು ಕೊಬ್ಬಿದ್ದೀರಿ. ಒಬ್ಬ ಮನುಷ್ಯ 5 ದಿನಗಳಿಂದ ಪ್ರತಿದಿನ 1 ಲಕ್ಷದ ಕಟ್ಟನ್ನು ಕೊಡುತ್ತಾ ಇದ್ದಾನೆ. ನಿಮಗೆ ಅದನ್ನು ಕಂಡು ಹಿಡಿಯೋದಕ್ಕೆ ಆಗಿಲ್ಲ,” ಸ್ವಾಮೀಜಿಯ ಕಣ್ಣು ಕೆಂಪಾಯಿತು.

“ಕ್ಷಮಿಸಿ ಸ್ವಾಮೀಜಿ, ನಾವು ತುಂಬಾ ಪ್ರಯತ್ನ…..”

“ಏನು ಪ್ರಯತ್ನ….. ಮಣ್ಣು ತಿನ್ನಿ ಹೋಗಿ!” ಅವರ ಮಾತನ್ನು ತುಂಡರಿಸಿ ಸ್ವಾಮೀಜಿ ಗುಡುಗಿದರು, “ನಿಮ್ಮ ಕೈಲಿ ಏನೂ ಆಗೋದಿಲ್ಲ… ನಾವೇ ಏನಾದರೂ ಮಾಡಬೇಕು,” ಎನ್ನುತ್ತಾ ಸ್ವಾಮೀಜಿ ತಮ್ಮ ಮೊಬೈಲ್‌ತೆಗೆದು, “ಹಲೋ ನಿರ್ಮಲ್ ಜೀ, ನಾನು ಕುಳಿತುಕೊಳ್ಳುವ ವೇದಿಕೆ ಕವರ್‌ ಆಗೋ ಹಾಗೆ ಇವತ್ತು ರಾತ್ರಿನೇ ಸಿಸಿ ಟಿವಿ ಕ್ಯಾಮೆರಾ ಹಾಕಬೇಕು,” ಎಂದು ಹೇಳಿದರು.

“ಆದರೆ ಸ್ವಾಮೀಜಿ, ಅಲ್ಲಿ ಕ್ಯಾಮೆರಾ ಹಾಕೋದು ಬೇಡ ಅಂತ ತಾವೇ ಹೇಳಿದ್ದಿರಿ. ಮಿಕ್ಕ ಎಲ್ಲ ಕಡೆಗಳಲ್ಲೂ ಕ್ಯಾಮೆರಾ ಹಾಕಿದ್ದೇನೆ ಮತ್ತು ರೆಕಾರ್ಡಿಂಗ್‌ ಕೂಡ ಚೆನ್ನಾಗಿ ಆಗುತ್ತಾ ಇದೆ.”

“ವತ್ಸಾ, ಇದು ಪರಿವರ್ತನಶೀಲ ಸೃಷ್ಟಿ. ಇಲ್ಲಿ ಯಾವುದೂ ಶಾಶ್ವತವಲ್ಲ,” ಸ್ವಾಮೀಜಿ ನಕ್ಕು ಹೇಳಿದರು, “ಪರಿಸ್ಥಿತಿಗೆ ತಕ್ಕಂತೆ ನನ್ನ ತೀರ್ಮಾನ ಬದಲಾಗುತ್ತದೆ ಅನ್ನುವುದು ನಿನಗೆ ಗೊತ್ತು. ಅದರಿಂದಲೇ ನನ್ನ ಕೆಲಸಗಳೆಲ್ಲ ಸಫಲವಾಗುತ್ತಿದೆ. ಈ ಕೆಲಸ ಎಷ್ಟು ಬೇಗ ಆಗುತ್ತದೆ ಅನ್ನೋದನ್ನು ನೀನು ಹೇಳು. ಕೆಲಸ ನಿನ್ನದು, ಹಣ ನಮ್ಮದು.”

“ಬೆಳಗಾಗುವಷ್ಟರಲ್ಲಿ ತಮ್ಮ ಆಜ್ಞೆಯನ್ನು ಪಾಲಿಸುತ್ತೇನೆ ಸ್ವಾಮೀಜಿ,” ನಿರ್ಮಲ್ ಆಶ್ವಾಸನೆ ನೀಡುತ್ತಾ ಹೇಳಿದರು, “ಆದರೆ ಒಂದು ಅರ್ಜೆಂಟ್‌ ಕೆಲಸ ಬಂದಿದೆ. ಸ್ವಲ್ಪ ಹಣ ಸಿಕ್ಕಿದರೆ ತಮ್ಮ ಕೃಪೆ.”

“ನನ್ನ ಹಣದ ಮೇಲೆ ನಿನಗೆ ನಂಬಿಕೆ ಇಲ್ಲವೇ,” ಎನ್ನುತ್ತಾ ಮಾತು ಮುಗಿಸಿ ಶ್ರದ್ಧಾನಂದರ ಕಡೆ ತಿರುಗಿ, “ನಿರ್ಮಲ್‌ಗೆ ಈಗಲೇ ಹಣ ತಲುಪಿಸಿಬಿಡು. ಇಲ್ಲದಿದ್ದರೆ ಅವನಿಗೆ ಇನ್ನೇನೋ ಅರ್ಜೆಂಟ್‌ ಕೆಲಸ ನೆನಪಾಗಿ ಬಿಡುತ್ತದೆ,” ಎಂದು ಹೇಳಿದರು.

“ಹಾಗೇ ಆಗಲಿ ಸ್ವಾಮೀಜಿ,” ಎಂದು ಸ್ವಾಮಿ ಶ್ರದ್ಧಾನಂದಜೀ ತಲೆಬಾಗಿ ನಮಸ್ಕರಿಸಿದರು.

ನಿರ್ಮಲ್ ಬಾಬು ಹೇಳಿದಂತೆ ನಡೆದುಕೊಂಡರು. ಬೆಳಗಾಗುವಷ್ಟರಲ್ಲಿ ವೇದಿಕೆಯ ಮೇಲ್ಭಾಗದಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಕಲ್ಪಟ್ಟಿತ್ತು. ಆ ಕಡೆ ಆ ಭಕ್ತನೂ ತನ್ನ ರೀತಿಯನ್ನು ಪಾಲಿಸಿದನು. ಇಂದೂ ಕೂಡ ಕೆಂಪು ವಸ್ತ್ರದಲ್ಲಿ ಸುತ್ತಿಟ್ಟಿದ್ದ 1 ಲಕ್ಷ ರೂಪಾಯಿ ನೋಟುಗಳ ಕಟ್ಟು ಸ್ವಾಮೀಜಿಯ ಚರಣಗಳಿಗೆ ಅರ್ಪಿತವಾಗಿತ್ತು. ಶಿಷ್ಯರು ಇಂದೂ ಕೂಡ ಆ ಭಕ್ತನನ್ನು ಪತ್ತೆ ಮಾಡಲಾಗಲಿಲ್ಲ.

ರಾತ್ರಿ 11 ಗಂಟೆಗೆ ಸ್ವಾಮೀಜಿ ಅತ್ಯಂತ ತಲ್ಲೀನತೆಯಿಂದ ಸಿಸಿ ಟಿವಿ ರೆಕಾರ್ಡಿಂಗ್‌ನ್ನು ವೀಕ್ಷಿಸುತ್ತಿದ್ದರು. ಒಂದು ದೃಶ್ಯವನ್ನು ಕಂಡಾಗ ಇದ್ದಕ್ಕಿದ್ದಂತೆ ಹೇಳಿದರು, “ರೀವೈಂಡ್‌ ಮಾಡು.”

ಶ್ರದ್ಧಾನಂದರು 2 ಸಲ ರೀವೈಂಡ್‌ ಮಾಡಿ ತೋರಿಸಿದರು. ಅವರಿಗೆ ಅದರಲ್ಲಿ ಏನೂ ವಿಶೇಷತೆ ಕಂಡು ಬರಲಿಲ್ಲ. ಆದರೆ ಸ್ವಾಮೀಜಿಯ ಆಜ್ಞಾಪಾಲನೆ ಮುಖ್ಯವಾಗಿತ್ತು.

“ನಿಲ್ಲಿಸು, ಅಲ್ಲೇ ನಿಲ್ಲಿಸು!” ಇದ್ದಕ್ಕಿದ್ದಂತೆ ಸ್ವಾಮೀಜಿ ಕೂಗಿದರು.

“ಇದನ್ನು ಝೂಮ್ ಮಾಡು,” ಸ್ವಾಮೀಜಿಯ ಅಪ್ಪಣೆಯಂತೆ ಶ್ರದ್ಧಾನಂದರು ಝೂಮ್ ಮಾಡಿದರು.

“ಇಲ್ಲಿದೆ ನೋಡು ನನ್ನ ಬೇಟೆ,” ಸ್ವಾಮೀಜಿ ಸೋಫಾದಿಂದ ಎದ್ದು ಸ್ಕ್ರೀನ್‌ಮೇಲೆ ಒಂದು ಜಾಗದತ್ತ ಬೆರಳು ತೋರಿಸಿ, “ಸ್ವಲ್ಪ ರೀವೈಂಡ್‌ ಮಾಡಿ ಸ್ಲೋ ಮೋಶನ್‌ ಮಾಡು,” ಎಂದರು.

ಶ್ರದ್ಧಾನಂದರು ಸ್ಲೋ ಮೋಶನ್‌ ಮಾಡಿದರು. ರೆಕಾರ್ಡಿಂಗ್‌ನಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಬೊಗಸೆಯಲ್ಲಿ ಹೂಗಳನ್ನು ಹಿಡಿದು ಸ್ವಾಮೀಜಿಯನ್ನು ಸಮೀಪಿಸುತ್ತಿರುವುದು ಕಾಣಿಸಿತು. ಹತ್ತಿರ ಬಂದು ಹೂಗಳನ್ನು ಸ್ವಾಮೀಜಿಯ ಪಾದಗಳಿಗೆ ಸಮರ್ಪಿಸಿ ತಲೆಯನ್ನು ಅವರ ಚರಣಗಳಿಗೆ ಮುಟ್ಟಿಸಿದನು. ಜೊತೆಗೇ ಬೇಗನೆ ತನ್ನ ಜೇಬಿನಿಂದ ಕೆಂಪು ವಸ್ತ್ರದಲ್ಲಿ ಸುತ್ತಿದ್ದ ಕಟ್ಟನ್ನು ಹೊರತೆಗೆದು ಹೂಗಳ ಕೆಳಗೆ ತೂರಿಸಿದನು. ಮತ್ತೊಮ್ಮೆ ತಲೆ ಬಾಗಿ ನಮಸ್ಕರಿಸಿ ತಕ್ಷಣ ಹೊರಗೆ ಹೊರಟುಹೋದನು.

“ಇವನು ಗಟ್ಟಿ ಕುಳದ ಮನುಷ್ಯನ ಹಾಗೆ ಕಾಣುತ್ತಾನೆ. ನೀವಿಬ್ಬರೂ ಇವನ ಮುಖವನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳಿ. ಈ ಮನುಷ್ಯ ನನಗೆ ಬೇಕು. ಹೇಗಾದರೂ ಸರಿ….. ಇವನನ್ನು ನೀವು ಕರೆದುಕೊಂಡು ಬರಬೇಕು,” ಸ್ವಾಮೀಜಿಯ ಕಣ್ಣುಗಳಲ್ಲಿ ವಿಶೇಷವಾದ ಹೊಳಪು ಕಾಣಿಸಿತು.

“ನೀವೇನು ಯೋಚನೆ ಮಾಡಬೇಡಿ ಸ್ವಾಮೀಜಿ. ನಾವು ನಾಳೆ ಅವನನ್ನು ಹಿಡಿದೇ ಹಿಡಿಯುತ್ತೇವೆ,” ಸತ್ಯಾನಂದರು ಆಶ್ವಾಸನೆ ನೀಡಿದರು.

“ಅಲ್ಲ ವತ್ಸಾ,” ಸ್ವಾಮೀಜಿ ತಮ್ಮ ಬಲಗೈಯನ್ನು ಮೇಲೆತ್ತಿ ಶಾಂತಸ್ವರದಲ್ಲಿ ನುಡಿದರು, “ಅವನು ನನ್ನ ಅನನ್ಯ ಭಕ್ತ. ಅವನನ್ನು ಹಿಡಿದುಕೊಂಡು ಬರೋದಲ್ಲ, ಬದಲಾಗಿ ಗೌರವದಿಂದ ಕರೆತರಬೇಕು, ನೆನಪಿರಲಿ.”

“ಹಾಗೇ ಆಗಲಿ ಸ್ವಾಮೀಜಿ, ” ಶ್ರದ್ಧಾನಂದ ಮತ್ತು ಸತ್ಯಾನಂದರು ತಲೆ ಬಾಗಿ ವಂದಿಸಿ ಕೋಣೆಯಿಂದ  ಹೊರನಡೆದರು.

ಮರುದಿನ ಇಬ್ಬರೂ ಶಿಷ್ಯರೂ ಬಂದು ಹೋಗುವ ಭಕ್ತರ ಮುಖಗಳನ್ನು  ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಬೆಳಗಿನಿಂದ ಕಾದು ಕಾದು ಸುಸ್ತಾಗಿದ್ದಾಗ ರಾತ್ರಿ 8 ಗಂಟೆಯ ಸಮಯದಲ್ಲಿ ಆ ವ್ಯಕ್ತಿ ಬರುತ್ತಿರುವುದು ಕಾಣಿಸಿತು.

“ನೋಡಿ, ಅವನು ಬರುತ್ತಿದ್ದಾನೆ,” ಶ್ರದ್ಧಾನಂದರು ಸತ್ಯಾನಂದರ ಕಿವಿಯಲ್ಲಿ ಪಿಸುಗುಟ್ಟಿದರು.“ಹೌದು ಅವನ ಹಾಗೇ ಇದ್ದಾನೆ. ಬನ್ನಿ ಅವನನ್ನು ಆ ಕಡೆ ಕರೆದುಕೊಂಡು ಹೋಗೋಣ,” ಸತ್ಯಾನಂದರು ಉತ್ಸುಕರಾದರು.

“ಈಗಲೇ ಬೇಡ. ಮೊದಲು ಅವನು ಕಾಣಿಕೆ ಅರ್ಪಿಸಲಿ. ಆಗ ನಮಗೆ ಇವನೇ ನಾವು ಹುಡುಕುತ್ತಿರುವ ವ್ಯಕ್ತಿ ಅಂತ ಖಂಡಿತ ಆಗುತ್ತೆ,” ಶ್ರದ್ಧಾನಂದರು ಬುದ್ಧಿವಂತಿಕೆ ತೋರಿದರು.

ಹಿಂದಿನ ದಿನದಂತೆ ಆ ವ್ಯಕ್ತಿ ವೇದಿಕೆಯನ್ನು ಸಮೀಪಿಸಿದನು. ಹೂಗಳ ಅರ್ಪಣೆ ಮಾಡಿ. ಸ್ವಾಮೀಜಿಗೆ ನಮಸ್ಕರಿಸಿ. ಕೆಲವು ಬಣ್ಣದ ಬಟ್ಟೆಯಲ್ಲಿ ಸುತ್ತಿದ್ದ ನೋಟುಗಳನ್ನು ಸಮರ್ಪಿಸಿದ ನಂತರ ವೇಗವಾಗಿ ಹೊರನಡೆದ.

ಶ್ರದ್ಧಾನಂದರು ಅವನ ಹಿಂದೆ ದಾಪುಗಾಲು ಹಾಕುತ್ತಾ ಹೋಗಿ ಗೌರವದಿಂದ, “ಸ್ವಾಮಿ, ಕೊಂಚ ಈ ಕಡೆ ಬನ್ನಿ,” ಎಂದರು.

“ಏಕೆ?”

“ಸ್ವಾಮೀಜಿ ನಿಮ್ಮನ್ನು ಕರೆತರಲು ಹೇಳಿದ್ದಾರೆ.”

“ನನ್ನನ್ನೇ? ಏತಕ್ಕಾಗಿ?” ಆ ವ್ಯಕ್ತಿ ಗಾಬರಿಗೊಂಡು ಕೇಳಿದ.

“ಅವರು ನಿಮ್ಮ ಭಕ್ತಿಯಿಂದ ಅತ್ಯಂತ ಪ್ರಸನ್ನರಾಗಿದ್ದಾರೆ. ಆದ್ದರಿಂದ ನಿಮಗೆ ವಿಶೇಷವಾಗಿ ಆಶೀರ್ವದಿಸಬೇಕೆಂದಿದ್ದಾರೆ. ದೊಡ್ಡ ದೊಡ್ಡ ಮಂತ್ರಿಗಳು, ಆಫೀಸರುಗಳು ಸ್ವಾಮೀಜಿಯ ದರ್ಶನಕ್ಕಾಗಿ ಸಾಲುಗಟ್ಟಿ ಕಾಯುತ್ತಿರುತ್ತಾರೆ. ನೀವು ಭಾಗ್ಯಶಾಲಿಗಳು. ಸ್ವತಃ ಸ್ವಾಮೀಜಿಯೇ ನಿಮ್ಮನ್ನು ಕರೆಸಿದ್ದಾರೆ. ಇನ್ನು ನಿಮಗೆ ಶುಕ್ರದೆಸೆ ಖಂಡಿತ!”

ಶ್ರದ್ಧಾನಂದರ ಮಾತು ಕೇಳಿ ಆ ವ್ಯಕ್ತಿಯಿಂದ ಸಮಾಧಾನದ ಉಸಿರು ಹೊರಬಂದಿತು. ಆಪ್ತ ಶಿಷ್ಯರು ಅವನನ್ನು ಒಂದು ಸುಂದರವಾದ ಕೋಣೆಯಲ್ಲಿ ಕುಳ್ಳಿರಿಸಿದರು. ಸುಮಾರು ಅರ್ಧ ಗಂಟೆಯ ನಂತರ ಸ್ವಾಮೀಜಿ ಆ ಕೋಣೆಗೆ ಬಂದು ಶಾಂತ ಸ್ವರದಲ್ಲಿ, “ವತ್ಸಾ, ನಿನಗೆ ಜೀವನದಲ್ಲಿ ಯಶಸ್ಸು ಸಿಗುವುದೆಂದು ನಿನ್ನ ಹಣೆಯ ಮೇಲಿನ ರೇಖೆಗಳು ಹೇಳುತ್ತಿವೆ,” ಎಂದರು.

ಸ್ವಾಮೀಜಿಯ ಮಾತು ಕೇಳಿ ಆ ವ್ಯಕ್ತಿ ಅವರ ಚರಣಗಳ ಮೇಲೆ ತಲೆಯಿರಿಸಿ, ಭಾವುಕನಾಗಿ ಅವರ ಪಾದಧೂಳಿ ತೆಗೆದುಕೊಂಡನು. ಅವನ ಕೆನ್ನೆಯ ಮೇಲೆ ಶ್ರದ್ಧಾಭಕ್ತಿಗಳ ಅಶ್ರು ಹರಿಯತೊಡಗಿತು. ಸ್ವಾಮೀಜಿ ಕೈಗಳಿಂದ ಆತನನ್ನು ಮೇಲೆತ್ತಿ ಸ್ನೇಹಪೂರ್ಣ ಸ್ವರದಲ್ಲಿ ನುಡಿದರು, “ಏಳು ವತ್ಸಾ, ಕಣ್ಣೀರು ಹರಿಸುವ ಅವಶ್ಯಕತೆ ಇನ್ನು ನಿನಗಿಲ್ಲ. ಹೊಸ ಮುಂಬೆಳಕು ನಿನಗಾಗಿ ಕಾದಿದೆ.”

“ಸ್ವಾಮೀಜಿ, ತಮ್ಮ ದರ್ಶನ ಭಾಗ್ಯದಿಂದ ನನ್ನ ಜನ್ಮ ಪಾವನವಾಯಿತು,” ಆ ವ್ಯಕ್ತಿ ಕೈ ಜೋಡಿಸಿ ಹೇಳಿದ. ಭಾವಾತಿರೇಕದಿಂದ ಆತನ ಧ್ವನಿ ಗದ್ಗದವಾಯಿತು.

ಸ್ವಾಮೀಜಿ ಆತನನ್ನು ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡು, “ವತ್ಸಾ, ಒಂದು ಪ್ರಶ್ನೆ ಕೇಳುತ್ತೇನೆ. ನಿಜವಾದ ಉತ್ತರ ಕೊಡುವೆಯಷ್ಟೇ?” ಕೇಳಿದರು.

“ತಾವು ಅಪ್ಪಣೆ ಕೊಟ್ಟರೆ ತಮಗಾಗಿ ನನ್ನ ಪ್ರಾಣವನ್ನೇ ಕೊಡಲು ಸಿದ್ಧನಾಗಿದ್ದೇನೆ,” ಎಂದ.

ಸ್ವಾಮೀಜಿ ತಮ್ಮ ದಿವ್ಯದೃಷ್ಟಿಯನ್ನು ಅವನ ಮುಖದ ಮೇಲೆ ಕೀಲಿಸಿ ಅವನ ಕಣ್ಣುಗಳನ್ನೇ ದಿಟ್ಟಿಸುತ್ತಾ, “ನೀನು ಪ್ರತಿದಿನ 1 ಲಕ್ಷ ರೂಪಾಯಿಗಳ ಕಟ್ಟನ್ನು ನಮ್ಮ ಚರಣಗಳಿಗೆ ಏಕೆ ಅರ್ಪಿಸುತ್ತಿದ್ದೆ?” ಎಂದು ಕೇಳಿದರು.

ಸ್ವಾಮೀಜಿಯ ಪ್ರಶ್ನೆಯಿಂದ ಆ ವ್ಯಕ್ತಿ ತನ್ನ ಕಣ್ಣುಗಳನ್ನು ಮುಚ್ಚಿ ಕುಳಿತುಕೊಂಡನು. ಆತನ ಆಂತರ್ಯದಲ್ಲಿ ಒಂದು ಸಂಘರ್ಷವೇ ನಡೆಯುತ್ತಿರುವುದು ಆತನ ಮುಖಭಾವದಿಂದ ಅರ್ಥವಾಗುತ್ತಿತ್ತು. ಕೊಂಚ ಹೊತ್ತಿನ ನಂತರ ಆತ ಕಣ್ಣು ತೆರೆದು, ನಿಧಾನವಾಗಿ, “ಸ್ವಾಮೀಜಿ, ಕೆಲವು ವರ್ಷಗಳ ಹಿಂದೆ ನಾನು ಕೋಟ್ಯಧಿಪತಿ ಮನುಷ್ಯನಾಗಿದ್ದೆ. ಆದರೆ ನನ್ನ ವ್ಯಾಪಾರದಲ್ಲಿ ಆದ ನಷ್ಟದಿಂದಾಗಿ ಮುಳುಗಿಹೋದೆ. ನನ್ನ ನೆಂಟರು, ಪರಿಚಿತರು ಎಲ್ಲರೂ ನನ್ನಿಂದ ಮುಖ ತಿರುಗಿಸಿ ನಡೆದರು. “ಕಳೆದ ವರ್ಷ ಯೂರೋಪ್‌ನಲ್ಲಿ ಒಂದು ಮುಚ್ಚಿಹೋಗಿದ್ದ ಫ್ಯಾಕ್ಟರಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕಿರುವ ಸುದ್ದಿ ನನಗೆ ತಿಳಿಯಿತು. ನನ್ನ ಪತ್ನಿ ತಮ್ಮ ಅನನ್ಯ ಭಕ್ತೆ. ಅವಳ ಸಲಹೆಯ ಮೇರೆಗೆ ನನ್ನ ಮನೆ ಮತ್ತು ಪತ್ನಿಯ ಆಭರಣಗಳನ್ನು ಮಾರಿ ಆ ಫ್ಯಾಕ್ಟರಿಯನ್ನು ಖರೀದಿಸಿದೆವು. ತಮ್ಮನ್ನು ಆ ಫ್ಯಾಕ್ಟರಿಯ 20% ಪಾಲುದಾರರನ್ನಾಗಿ ಭಾವಿಸಿಕೊಂಡು ಫ್ಯಾಕ್ಟರಿಯನ್ನು ಪ್ರಾರಂಭಿಸಿದೆವು. ಪ್ರಾರಂಭದಲ್ಲಿ ಸಾಕಷ್ಟು ತೊಂದರೆಗಳಾದವು. ಆದರೆ ತಮ್ಮ ದಯೆಯಿಂದ ಕಳೆದ ವಾರದಿಂದ ಲಾಭ ಬರುತ್ತಿದೆ. ಈಗ ದಿನ 5 ಲಕ್ಷ ರೂಪಾಯಿ ಲಾಭ ಬರುತ್ತಿದೆ. ಆದ್ದರಿಂದ ಶೇ.20ರ ಲೆಕ್ಕದಂತೆ ನಾನು ಪ್ರತಿದಿನ 1 ಲಕ್ಷ ರೂಪಾಯಿಗಳನ್ನು ತಮ್ಮ ಚರಣಗಳಿಗೆ ಅರ್ಪಿಸುತ್ತಿದ್ದೇನೆ,” ಎಂದು ಹೇಳಿದ.

“ಆದರೆ ನೀನು ಈ ವಿಷಯವನ್ನು ಗೌಪ್ಯವಾಗಿ ಇರಿಸಿದ್ದೇಕೆ? ನನಗೆ ಹೇಳಬಹುದಿತ್ತಲ್ಲವೇ?” ಸ್ವಾಮೀಜಿ ಕೇಳಿದರು.

“ತಾವು ಮೋಹ ಮಾಯೆ ಮತ್ತು ಲೋಭಗಳನ್ನು ಮೀರಿದವರು ಎಂದು ಕೇಳಿದ್ದೇನೆ. ಆದ್ದರಿಂದ ಇಂತಹ ವಿಷಯವನ್ನು ಹೇಳಿ ತಮ್ಮ ಸಾಧನೆಗೆ ಭಂಗ ತರಲು ಮನಸ್ಸಾಗಲಿಲ್ಲ.”

“ವತ್ಸಾ, ನೀನೇ ಧನ್ಯ. ನಿನ್ನಂತಹ ಪ್ರಾಮಾಣಿಕ ವ್ಯಕ್ತಿಗಳು ಇರುವುದರಿಂದಲೇ ಈ ಪ್ರಪಂಚ ನಡೆಯುತ್ತಿದೆ. ಇಲ್ಲವಾದರೆ ಪಾಪದ ಹೊರೆಯಿಂದಾಗಿ ಇದು ಪಾತಾಳಕ್ಕೆ ಕುಸಿದಿರುತ್ತಿತ್ತು,” ಸ್ವಾಮೀಜಿ ಗಂಭೀರ ಸ್ವರದಲ್ಲಿ ಆಶೀರ್ವಾದದ ಮುದ್ರೆಯೊಂದಿಗೆ ನುಡಿದರು,

“ಭಗವಂತನ ಕೃಪಾದೃಷ್ಟಿ ನಿನ್ನ ಮೇಲೆ ಬಿದ್ದಿದೆ. ಶೀಘ್ರದಲ್ಲೇ ನಿನಗೆ 5 ಲಕ್ಷ ರೂಪಾಯಿಗಳಲ್ಲ, ನಿತ್ಯ 5 ಕೋಟಿ ರೂಪಾಯಿಗಳ…….”

“ನಿಜಕ್ಕೂ ಸತ್ಯವನ್ನೇ ನುಡಿಯುತ್ತಿರುವಿರಿ ಸ್ವಾಮೀಜಿ,” ಆ ವ್ಯಕ್ತಿ ಭಕ್ತಿಯಿಂದ ತಲೆ ಬಾಗಿ, “ಯೂರೋಪ್‌ನಲ್ಲಿ ಇದೇ ರೀತಿ ಇಂತಹುದೇ ಇನ್ನೊಂದು ನಿಂತು ಹೋಗಿರುವ ಫ್ಯಾಕ್ಟರಿ ಇರುವುದು ತಿಳಿದುಬಂದಿದೆ. ಅದನ್ನೂ ಸರಿಪಡಿಸಿ ನಡೆಸಿದರೆ, ನನ್ನ ಲೆಕ್ಕದ ಪ್ರಕಾರ, ಪ್ರತಿದಿನ 5 ಕೋಟಿ ರೂಪಾಯಿ ಅಲ್ಲದಿದ್ದರೂ ತಿಂಗಳಿಗೆ 5 ಕೋಟಿ ರೂಪಾಯಿಗಳ ಲಾಭವಂತೂ ಖಂಡಿತ,” ಎಂದ ಆ ವ್ಯಕ್ತಿ.

“ಹಾಗಾದರೆ ಅದನ್ನೇಕೆ ಕೊಳ್ಳಲಿಲ್ಲ…?”

“ನನ್ನ ಮನಸ್ಸಿನಲ್ಲೂ ಅದೇ ಇದೆ. ಆದರೆ ಅದಕ್ಕೆ ಸುಮಾರು 20 ಕೋಟಿ ರೂಪಾಯಿಗಳು ಬೇಕು. ಆದರೆ ಅಷ್ಟೊಂದನ್ನು ಹೊಂದಿಸಲು ನನಗೆ ಸಾಧ್ಯವಾಗಲಿಲ್ಲ. ನನಗೆ ಒಂದು ಸಲ ವ್ಯಾಪಾರದಲ್ಲಿ ನಷ್ಟವಾಗಿರುವುದರಿಂದ ಫೈನಾನ್ಸರ್‌ಗಳು ಹಣ ಕೊಡಲು ಸಿದ್ಧರಿಲ್ಲ,” ಆ ವ್ಯಕ್ತಿಯ ಸ್ವರದಲ್ಲಿ ನಿರಾಶೆ ಇಣುಕುತ್ತಿತ್ತು.

“ವತ್ಸಾ, ಹಣದ ಚಿಂತೆ ಮಾಡಬೇಡಿ. ಪರಮಾತ್ಮನು ನಿನ್ನನ್ನು ನಮ್ಮ ಸಾಮೀಪ್ಯಕ್ಕೆ ಕಳುಹಿಸಿಕೊಟ್ಟಿದ್ದಾನೆ. ಆದ್ದರಿಂದ ಇನ್ನು ಮುಂದೆ ಎಲ್ಲ ವ್ಯವಸ್ಥೆಯಾಗುವುದು,” ಸ್ವಾಮೀಜಿ ಮುಗುಳ್ನಕ್ಕರು.

“ಅದೇ ಹೇಗೆ?”

“ನಿನ್ನಂಥವರು ನೀಡಿರುವ ಧನರಾಶಿ ನಮ್ಮಲ್ಲಿದೆ. ಅದರಿಂದ ನಮಗೇನೂ ಉಪಯೋಗವಿಲ್ಲ. ನೀನು ಅದನ್ನು ತೆಗೆದುಕೊಂಡು ಫ್ಯಾಕ್ಟರಿ ಖರೀದಿಸು.”

“ತಾವು ನನಗೆ ಇಷ್ಟೊಂದು ಹಣ ಕೊಡುವಿರಾ?” ಆ ವ್ಯಕ್ತಿಯ ಕಣ್ಣುಗಳು ಆಶ್ಚರ್ಯದಿಂದ ಅರಳಿದವು.

“ಕಾರಣವಿಲ್ಲದೆ ಕೊಡುವುದಿಲ್ಲ,” ಸ್ವಾಮೀಜಿ ನಸುನಗುತ್ತಾ, “ನನ್ನ ಭಕ್ತರ ಕಲ್ಯಾಣಕ್ಕಾಗಿ ನಾನು ಅನೇಕ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಅವುಗಳಿಗೆಲ್ಲ ಬಹಳ ಹಣ ಬೇಕಾಗುತ್ತದೆ. ಆದ್ದರಿಂದ ಈ ಹಣದಿಂದ ನೀನು ಫ್ಯಾಕ್ಟರಿ ಕೊಂಡುಕೊ. ಆದರೆ ಅದರಲ್ಲಿ ಶೇ.51ರಷ್ಟು ಶೇರ್‌ ನನ್ನದಾಗಿರುತ್ತದೆ,” ಎಂದರು.

“ತಮ್ಮ ದಯೆಯಿಂದ ನಾನು ಕೃತಾರ್ಥನಾದೆ ಸ್ವಾಮೀಜಿ,” ಎನ್ನುತ್ತಾ ಆ ವ್ಯಕ್ತಿ ಮತ್ತೊಮ್ಮೆ ಅವರ ಕಾಲಿಗೆರಗಿದ.

“ಶ್ರದ್ಧ ಮತ್ತು ಸತ್ಯ, ನೀವಿಬ್ಬರೂ ಇವರ ಜೊತೆಯಲ್ಲಿ ಇವರ ಮನೆಗೆ ಹೋಗಿ ಪಾಲುದಾರಿಕೆಯ ಪತ್ರವನ್ನು ಸಿದ್ಧಪಡಿಸಿ. ಆದಷ್ಟು ಬೇಗ ಫ್ಯಾಕ್ಟರಿ ಖರೀದಿಯ ಕೆಲಸ ಆಗಲಿ,” ಸ್ವಾಮೀಜಿ ಅಪ್ಪಣೆ ಕೊಟ್ಟರು.

ಮಾರನೆಯೇ ದಿನವೇ ಪಾಲುದಾರಿಕೆಯ ಕಾಗದ ಪತ್ರದ ಕೆಲಸವೆಲ್ಲ ಮುಗಿಯಿತು. ಸಾವಿರಾರು ಭಕ್ತರು ಸಮರ್ಪಿಸಿದ್ದ ಕಾಣಿಕೆಯ ಹಣವನ್ನು ಸ್ವಾಮೀಜಿ ತಮ್ಮ ಅನನ್ಯ ಭಕ್ತನಿಗೆ ಒಪ್ಪಿಸಿದರು. ಆ ಭಕ್ತ ಫ್ಯಾಕ್ಟರಿ ಕೊಳ್ಳಲು ಯೂರೋಪ್‌ಗೆ ಹೊರಟುಹೋದ.

ಸ್ವಾಮೀಜಿಯ ಕಣ್ಣುಗಳಲ್ಲಿ ಬೆಡಗಿನ ಭವಿಷ್ಯದ ಹೊಂಗನಸು ಕುಣಿದಾಡುತ್ತಿತ್ತು. ಆದರೆ ಒಂದು ತಿಂಗಳಾದರೂ ಆ ಭಕ್ತನಿಂದ ಯಾವುದೇ ಸಂಪರ್ಕ ಇಲ್ಲದಿರಲು ಶ್ರದ್ಧಾನಂದ ಮತ್ತು ಸತ್ಯಾನಂದರನ್ನು ಆ ವ್ಯಕ್ತಿಯ ಮನೆಗೆ ಕಳುಹಿಸಿದರು. ಅಲ್ಲಿದ್ದ ಗಾರ್ಡ್ ಅವರಿಬ್ಬರನ್ನು ಕಂಡಕೂಡಲೇ, “ಆ ಸಾಹೇಬರು ಈ ಮನೆಯನ್ನು 2 ತಿಂಗಳ ಬಾಡಿಗೆಗಾಗಿ ತೆಗೆದುಕೊಂಡಿದ್ದರು. ಆದರೆ ನೀವು ಇಲ್ಲಿಗೆ ಬಂದ 2 ದಿನಗಳಿಗೆ ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿ ಹೊರಟುಹೋದರು. ಹೋಗುವ ಮೊದಲು ನಿಮಗಾಗಿ ಒಂದು ಕವರ್‌ಕೊಟ್ಟು ಹೋಗಿದ್ದಾರೆ. ನೀವು ಒಂದಲ್ಲ ಒಂದು ದಿವಸ ಇಲ್ಲಿಗೆ ಬಂದೇ ಬರುವಿರಿ ಎಂದು ಹೇಳಿದ್ದರು,” ಎಂದು ಹೇಳಿದ.

ಗಾರ್ಡ್‌ತನ್ನ ಕೋಣೆಯೊಳಗಿನಿಂದ ಒಂದು ಲಕೋಟೆಯನ್ನು ತಂದುಕೊಟ್ಟ.

ಬೆದರುತ್ತಾ, ಬೆವರುತ್ತಾ ಸ್ವಾಮಿಗಳಿಬ್ಬರೂ ಆ ಲಕೋಟೆಯನ್ನು ತಮ್ಮ ಗುರುಗಳಿಗೆ ಒಪ್ಪಿಸಿದರು.

ಸ್ವಾಮೀಜಿ ಲಕೋಟೆಯನ್ನು ಒಡೆದು ಅದರೊಳಗಿದ್ದ ಪತ್ರವನ್ನು ಹೊರತೆಗೆದು ಓದಿದರು :

ಆದರಣೀಯ ಸ್ವಾಮೀಜಿಗಳಿಗೆ, ಸಾವಿರ ಪ್ರಣಾಮಗಳು.

ಈ ಶರೀರ ನಶ್ವರ ಎಂಬುದು ತಮಗೀಗ ಮನದಟ್ಟಾಗಿರಬಹುದು. ಇದರಲ್ಲಿರುವ ಆತ್ಮ ಪರಮಾತ್ಮನೊಡನೆ ಒಂದಾದಾಗಲೇ ನಿಜವಾದ ಆನಂದ, ಪರಮಾನಂದ ದೊರೆಯುವುದು. ಆದರೆ ಕಾಮ, ಕ್ರೋಧ, ಲೋಭಗಳೆಂಬ ತೊಡಕುಗಳು ಈ ಸಾಧನಾ ಮಾರ್ಗದಲ್ಲಿ ಅಡ್ಡಿಯಾಗಿ ನಿಂತಿವೆ. ಈ ತೊಡಕುಗಳನ್ನು ನಿವಾರಿಸಿಕೊಂಡು ಮುನ್ನಡೆದಾಗ ಮುಕ್ತಿ ಪಡೆಯುವುದು ಖಂಡಿತ. ತಾವು ತಮ್ಮ ಭಕ್ತರ ಬಂಧನಗಳನ್ನು ನಿವಾರಿಸುವ ಕಾರ್ಯ ಮಾಡಿದ್ದೀರಿ ಮತ್ತು ನಾನು ತಮ್ಮ ಬಂಧನಗಳನ್ನು ನಿವಾರಿಸುವ ಒಂದು ಸಣ್ಣ ತಮಾಷೆ ಮಾಡಿದ್ದೇನೆ. ತಾವು ಇದನ್ನು `ಅವರವರ ಕಸುಬು’ ಎಂದೂ ಕರೆಯಬಹುದು.

ಇತಿ, ತಮ್ಮ ಸೇವಕ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ