ಕಥೆ –  ಸುಜಾತಾ ಶರ್ಮ

ನನ್ನ ಪತ್ನಿ ಚಂದ್ರಿಕಾಳ ಮಾಮನ ಮಗಳ ಮದುವೆ ಇತ್ತು. ಚಂದ್ರಿಕಾ ಮದುವೆಗೆ ಹೋಗದೆ ಇರುವುದನ್ನು ಯೋಚಿಸುವುದಕ್ಕೂ ಸಾಧ್ಯವಿರಲಿಲ್ಲ. ನಾನು ಗೊಂದಲದಲ್ಲಿದ್ದೆ. ಮಡಿಕೇರಿಗೆ ಹೋಗುವುದನ್ನು ನೆನೆದು ಸಂತೋಷಪಡಿ ಅಥವಾ ಬೇಜಾರಾಗದೆ? ಹೋಗಲು ಇಷ್ಟವಿದೆಯೋ ಇಲ್ಲವೋ? ಏನೊಂದೂ ತಿಳಿಯುತ್ತಿರಲಿಲ್ಲ. ನಾನೆಷ್ಟು ಸಲ ಮಡಿಕೇರಿಗೆ ಹೋಗಿಲ್ಲ? ನೆನಪು ಮಾಡಿಕೊಳ್ಳಲು ಯತ್ನಿಸಿದರೂ ಸರಿಯಾಗಿ ಎಣಿಸಲು ಆಗುತ್ತಿಲ್ಲ. ಅದರೆ ಚಂದ್ರಿಕಾ ಖಂಡಿತಾ ನೋಡಿರ್ತೀರಾ ಎಂದಾಗ ನನಗೆ ಉತ್ತರ ಕೊಡಲು ಇಷ್ಟವಿಲ್ಲ.

ಅದೂ ಅಲ್ಲದೆ, ಸುಚಿತ್ರಾ ನನ್ನ ಮುಗಿದು ಹೋಗಿರುವ ಹಳೆ ಅಧ್ಯಾಯ. ಅವಳೊಂದು ಪ್ರಿಯವಾದ ಪುಸ್ತಕ. ನಾನು ಅದನ್ನು ಮುಚ್ಚಿ, ಎಲ್ಲೋ ಜೋಪಾನವಾಗಿ ಇಟ್ಟಿದ್ದೀನಿ. ಸುಧೀರ ಕೂಡ ಒಂದು ಸಲ ಕೇಳಿದ್ದ. ಅಲ್ಲದೇ ನಮ್ಮ ದೇಶದಲ್ಲಿ ನೋಡಬೇಕಾದ ಸ್ಥಳಗಳು ಎಷ್ಟೊಂದಿವೆ. ಒಂದು ಹೊಸ ಊರಿಗೆ ಹೋದರೆ ಪೂರ್ತಿ ನೋಡಲು ವಾರಗಳೇ ಬೇಕಾಗುತ್ತೆ. ನೀನು ನೋಡಿದರೆ ರಜಾ ಸಿಕ್ಕರೆ ಸಾಕು ಮಡಿಕೇರಿಗೆ ಓಡ್ತೀಯಲ್ಲ….?

ಚಳಿಗಾಲದ ಆರಂಭದ ದಿನಗಳವು. ಬೆಳಗ್ಗೆ ತುಂಬಾ ಹೊತ್ತು ಮಂಜು ಆವರಿಸಿಕೊಂಡಿರುತ್ತಿತ್ತು. ಹಗಲಿನಲ್ಲಿ ಸುಡುವಂತಿರುತ್ತಿದ್ದ ಬಿಸಿಲು ಈ ಸಮಯದಲ್ಲಿ ಮಂಜಿನಿಂದ ಮುಸುಕಿ ಅಸಹಾಯಕವಾಗಿರುವಂತೆ ಅನಿಸುತ್ತಿತ್ತು. ಉಲನ್‌ವಸ್ತುಗಳನ್ನು ಹಾಕಿಕೊಳ್ಳದೆ ಹೊರಗೆ ಹೋಗುವಂತೆಯೇ ಇರಲಿಲ್ಲ.  ಬೆಟ್ಟದ ಇಳಿಜಾರಿನಲ್ಲಿ ನಡೆಯುತ್ತಾ ನಾನು ಪೇಟೆ ಬೀದಿಯಲ್ಲಿ ಬಂದಿದ್ದೆ. ಜನರ ಓಡಾಟ, ಬಸ್ಸುಗಳ ಓಡಾಟಗಳಿಂದ ವಾತಾವರಣದಲ್ಲಿ  ಸ್ವಲ್ಪ ಬಿಸಿ ಇತ್ತು. ನಾನು ಕಾಫಿ ಕುಡಿಯಲೆಂದು ಹೋಟೆಲಿನಲ್ಲಿ ಕುಳಿತಿದ್ದೆ.

ಎಷ್ಟೋ ಕಾಲದ ನಂತರ ಈ ಹೋಟೆಲಿಗೆ ಬಂದಿದ್ದೆ. ಹೋಟೆಲಿನ ಮುಗುಳ್ನಕ್ಕು ನನ್ನನ್ನು ಸ್ವಾಗತಿಸಿದ. ಅದು ಪರಿಚಯದವ ಮುಗುಳ್ನಗುವಾಗಿತ್ತು. ಹಿಂದಿನ ಸಲ ಬಂದಿದ್ದಾಗ ಬೆಳ್ಳ ಬೆಳಗ್ಗೇನೆ ಅವನ ಹೋಟೆಲಿಗೆ ಬಂದು ಯಾರನ್ನೋ ಕಾಯುತ್ತಿದ್ದುದು, ಅವನ ನೆನಪಿಗೆ ಬಂದಿರಬೇಕು. ನಾನು ಸುಚಿತ್ರಾಳನ್ನು ಕಾಯುತ್ತಿದ್ದೆ.

ನನ್ನ ಅನುಮಾನ ನಿಜವಾಯಿತು. 9 ಗಂಟೆಗೆ ಕೆಲವು ನಿಮಿಷಗಳಿರುವಾಗ ಸುಚಿತ್ರಾ ಶಾಲೆಗೆಂದು ಮನೆಯಿಂದ ಹೊರಟಳು. ಅವಳು ಹೊರಡುತ್ತಲೇ ನಾನು ಅವಳ ಜೊತೆಗೂಡಿದೆ. ಸುಚಿತ್ರಾ ಮತ್ತು ನಮ್ಮ ಕುಟುಂಬಗಳ ನಡುವೆ ಸ್ನೇಹವಿತ್ತು. ಇಬ್ಬರೂ ಏನೇನೋ ಮಾತನಾಡುತ್ತಾ ನಡೆದೆವು. ಸಂಜೆ ತಮ್ಮ ಮನೆಗೆ ಬರುವಂತೆ ಸುಚಿತ್ರಾ ನನ್ನನ್ನು ಕರೆದಳು. ಅಂದು ಸುಚಿತ್ರಾಳ ಮನೆಗೆ ಹೋದಾಗ ನಾನು ನೋಡಿದ ನೋಟದಿಂದ ಬಹಳ ಆಘಾತವಾಯಿತು. ಜರ್ಜರಿತ ಗೋಡೆಗಳು, ಖಾಲಿ ಖಾಲಿ ಅಡುಗೆಮನೆ, ಫರ್ನಿಚರ್‌ ಹೆಸರಲ್ಲಿ 4 ಹಳೆ ಕುರ್ಚಿಗಳು ಮತ್ತು ಒಂದು ಮೇಜು. ಬಹಳ ಕಷ್ಟದ ಪರಿಸ್ಥಿತಿ ಇತ್ತು. ತನ್ನ ವೈಭವ ತನ್ನ ಪದವಿ ಬಗ್ಗೆ ಅವಳ ತಂದೆಗೆ ಅದೆಷ್ಟು ಗರ್ವವಿತ್ತು!

ಇದೇ ಗರ್ವದಿಂದಾಗಿ ಆತ ತನ್ನ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಲು ನಿರಾಕರಿಸಿದ್ದು. ನಾನು ಹಣವಂತನಾಗಿದ್ದಿದ್ದರೆ, ಒಳ್ಳೆಯ ಪದವಿಯಲ್ಲಿದ್ದಿದ್ದರೆ ನಾನು ಬೇರೆ ಜಾತಿಯವನಾಗಿದ್ದುದೂ ಅವರಿಗೆ ಅಷ್ಟೊಂದು ಚುಚ್ಚುತ್ತಿರಲಿಲ್ಲ. ನನ್ನ ಶಿಕ್ಷಣದ ಬಲದ ಮೇಲೆ ನಾನೀಗ ಉನ್ನತ ಪದವಿಯಲ್ಲಿದ್ದೇನೆ. ಆರ್ಥಿಕವಾಗಿ ಸದೃಢನಾಗಿದ್ದೇನೆ. ಆದರೆ ಸುಚಿತ್ರಾ…!

ಸುಚಿತ್ರಾಳ ಮೇಲಿನ ನನ್ನ ಪ್ರೀತಿ ಯಾವ ದೃಷ್ಟಿಯಿಂದಲೂ `ಮೊದಲ ನೋಟದ ಪ್ರೇಮ’ ಎಂದು ಹೇಳಲು ಸಾಧ್ಯವಿರಲಿಲ್ಲ. ನನ್ನ ತಂಗಿಯ ಜೊತೆ ಓದುತ್ತಿದ್ದವಳು ಅವಳು. ನಮ್ಮ ಮನೆಯಲ್ಲಿ ಓದು ಬರಹದ ವಾತಾವರಣ ಇದ್ದರೆ, ಅವಳ ಮನೆಯಲ್ಲಿ ಯಾವಾಗಲೂ ಪಾರ್ಟಿಗಳು ನಡೆಯುವ ಗಲಿಬಿಲಿ ವಾತಾವರಣ ಇರುತ್ತಿತ್ತು.

ಸುಚಿತ್ರಾಗೆ ಓದುವುದರಲ್ಲಿ ಬಹಳ ಆಸಕ್ತಿ ಇತ್ತು. ಬಹುಶಃ ಅದರಿಂದಲೇ ಅವಳು ತನ್ನ ತಾಯಿಯನ್ನು ಕೇಳಿ ಓದುವುದಕ್ಕೆ ನಮ್ಮ ಮನೆಗೆ ಬರುತ್ತಿದ್ದಳು. ಈ ಸ್ನೇಹ ಕುಟುಂಬಗಳ ಸ್ನೇಹಕ್ಕೂ ಕಾರಣವಾಯಿತು. ಅವಳ ತಾಯಿ ಸರಳ ಸ್ವಭಾವದ ಸ್ನೇಹಮಯಿ ಮಹಿಳೆಯಾಗಿದ್ದರು. ಅಷ್ಟು ಶ್ರೀಮಂತ ಕುಟುಂಬದಿಂದ ಬಂದವರು ಎಂದು ಗೊತ್ತಾಗುತ್ತಲೂ ಇರಲಿಲ್ಲ.

ನನ್ನ ತಂದೆ ತಾಯಿಗೆ ನಮ್ಮ ಬಗ್ಗೆ ಯಾವ ಆಕ್ಷೇಪ ಇರಲಿಲ್ಲ. ತಮ್ಮ ಮಗನ ಸಾಮರ್ಥ್ಯದ ಬಗ್ಗೆ ಅವರಿಗೆ ಪೂರ್ಣ ನಂಬಿಕೆ ಇತ್ತು. ಆದರೆ ಸುಚಿತ್ರಾಳ ಗರ್ವಿಷ್ಟ ತಂದೆ ತಮ್ಮ ಮಗಳನ್ನು ಶ್ರೀಮಂತ ವರನಿಗೆ ಕೊಟ್ಟು ವೈಭವದಿಂದ ಮದುವೆ ಮಾಡಬೇಕೆಂದು ಅವರ ಇಚ್ಛೆಯಾಗಿತ್ತು.

ಮನೆತನದಿಂದ ವರನಾಗುವುದಿಲ್ಲ. ವರನಿಂದ ಮನೆತನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಸುಚಿತ್ರಾಳ ತಂದೆ ಈ ಮಾತನ್ನು ಒಪ್ಪುತ್ತಿರಲಿಲ್ಲ. ಅವರಿಗೆ ನನ್ನ ಉದ್ದೇಶ ಗೊತ್ತಾದ ಕೂಡಲೇ ಸುಚಿತ್ರಾ ನಮ್ಮ ಮನೆಗೆ ಬರದಂತೆ ತಡೆ ಹಾಕಿದರು. ಅವಳೀಗ ಬಿ.ಎ. ಕಡೆಯ ವರ್ಷದಲ್ಲಿದ್ದಳು. ಪರೀಕ್ಷೆ ಮುಗಿದ ಕೂಡಲೇ ಅವಳ ಮದುವೆ ಮಾಡುವುದೆಂದು ನಿಶ್ಚಯಿಸಿದ್ದರು. ನಗರದ ಹೆಸರಾಂತ ವಕೀಲರ ಕಿರಿಯ ಮಗನ ಜೊತೆ ಅವಳ ಮದುವೆ ಮಾಡುವುದೆಂದು ನಿಶ್ಚಯಿಸಿದ್ದರು. ವಕೀಲರ ಹತ್ತಿರ ಹಣ, ಪ್ರಭಾವ, ಹೆಸರು, ವೈಭವ ಎಲ್ಲವೂ ಇದ್ದವು. ಅವರ ಮಗ ಮುದ್ದಿನಿಂದ ಬೆಳೆದಿದ್ದರಿಂದ ಸೋಮಾರಿಯಾಗಿ ಹಾಳಾಗಿದ್ದ. ವಿದ್ಯಾಭ್ಯಾಸವನ್ನೂ ಮುಗಿಸಿರಲಿಲ್ಲ. ಯಾವುದೇ ಉದ್ಯೋಗದಲ್ಲೂ ಇರಲಿಲ್ಲ. ಅವನ ತಂದೆ ಎಲ್ಲಾ ಪ್ರಯತ್ನಪಟ್ಟು ನಿರಾಶರಾಗಿ ಕಡೆಗೆ ಮಡಿಕೇರಿಯಲ್ಲಿ ಒಂದು ಅಂಗಡಿ ಹಾಕಿಕೊಟ್ಟಿದ್ದರು. ತಮ್ಮ ಜನರಿಂದ, ಬಂಧು ಬಳಗದವರಿಂದ ದೂರ ಇದ್ದರೆ ಮಗನ ಸೋಲು ತಮ್ಮ ಕಳಂಕರಹಿತ ವೈಭವವನ್ನು ಮಸುಕು ಮಾಡುವುದಿಲ್ಲವೆಂದು ತಿಳಿದು ಈ ಊರನ್ನು ಆಯ್ಕೆ ಮಾಡಿದ್ದರು. ಅಂಗಡಿ ನೋಡಿಕೊಳ್ಳಲು ಮ್ಯಾನೇಜರನ್ನು ಬಿಟ್ಟು, ಅವನು ಊರೂರು ತಿರುಗಿಕೊಂಡು ಹಾಯಾಗಿರುತ್ತಿದ್ದ.

ಸ್ನೇಹಿತರ ಜೊತೆ ಇಸ್ಪೀಟಾಡುತ್ತಿದ್ದ. ಸಾಮಾನುಗಳ ಮಾರಾಟವಾಗುತ್ತಿದ್ದಂತೆ ಹೊಸ ಮಾಲನ್ನು ತಂದು ತುಂಬಿಸಬೇಕು ಅನ್ನುವುದರ ಕಡೆ ಅವನು ಗಮನ ಕೊಡುತ್ತಿರಲಿಲ್ಲ. ಹೀಗೆ ನಷ್ಟ ಅನುಭವಿಸುತ್ತಾ, ಅಂಗಡಿ ಮುಚ್ಚುವ ಪರಿಸ್ಥಿತಿ ಬಂತು. ಸುಚಿತ್ರಾಳ ತಂದೆಗೆ ಇಷ್ಟು ದೊಡ್ಡ ವಕೀಲರ ಜೊತೆ ಸಂಬಂಧ ಬೆಳೆಸುವ ಅವಕಾಶ ಬಂದಿದ್ದಕ್ಕೆ ಬಹಳ ಸಂತೋಷವಾಗಿತ್ತು. ನಮ್ಮ ಮನೆಗೆ ಮದುವೆ ಆಹ್ವಾನ ಪತ್ರಿಕೆ ಕೊಡಲು ತಾವೇ ಬಂದಿದ್ದರು. ನಾನು ಏನೂ ಹೇಳದೆ ಸುಮ್ಮನಿದ್ದೆ. ಬರಲಿರುವ ಪರೀಕ್ಷೆಗೆ  ಸಿದ್ಧವಾಗತೊಡಗಿದೆ. ನನ್ನ ನಿರಾಶೆಯನ್ನೂ ಮನಸ್ಸಿನಲ್ಲೇ ನುಂಗಿಕೊಂಡೆ. ಯಾರೊಂದಿಗೂ ಏನೂ ಹೇಳಲಿಲ್ಲ.

ಸುಚಿತ್ರಾಳ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲವೆಂಬ ಮಾತು ಕಿವಿಗೆ ಬೀಳತೊಡಗಿತು. ಸುಚಿತ್ರಾಳ ತಾಯಿ ಬಹಳ ದುಃಖಿತರಾಗಿದ್ದರು. ನಾಜೂಕಾಗಿ ಬೆಳೆಸಿದ್ದ ಅವರ ಮಗಳು ಈಗ ತಾನೇ ಎಲ್ಲಾ ಕೆಲಸವನ್ನೂ ಮಾಡಬೇಕಾಗಿತ್ತು. ಊಟ ತಿಂಡಿಗೂ ಕೊರತೆಯಾಗತೊಡಗಿತ್ತು. ತವರು ಮನೆಯಿಂದ ಯಾರಾದರೂ ಸುಚಿತ್ರಾ ಮನೆಗೆ ಹೋದರೆ ಸಾಮಾನು ತುಂಬಿಕೊಂಡು ಹೋಗುತ್ತಿದ್ದರು. ಹಬ್ಬಗಳು ಬಂದಾಗ ತಂಬಾ ಬಟ್ಟೆಗಳನ್ನು ಕಳಿಸುತ್ತಿದ್ದರು. ಸುಲಭವಾಗಿ ಕೆಲಸ ಸಿಗುವಂತಹ ಯಾವುದೇ ಡಿಗ್ರಿ ಸುಚಿತ್ರಾಳಿಗಿರಲಿಲ್ಲ.  ಬಹಳ ಪ್ರಯತ್ನಪಟ್ಟ ಮೇಲೆ ಒಂದು ಖಾಸಗಿ ಶಾಲೆಯಲ್ಲಿ ತಾತ್ಕಾಲಿಕ ಕೆಲಸ ಸಿಕ್ಕಿತ್ತು. ಹೇಗೋ ಜೀವನದ ಗಾಡಿ ನಡೆಯುತ್ತಿತು. ಐ.ಎ.ಎಸ್‌ ತೇರ್ಗಡೆಯಾದ ಬಳಿಕ ನಾನು ಆರ್ಥಿಕವಾಗಿ ಉತ್ತಮ ಸ್ಥಿತಿಗೆ ಬಂದೆ. ಅವಕಾಶ ಸಿಕ್ಕ ಕೂಡಲೆ ನಾನು ಮಡಿಕೇರಿಗೆ ಹೋಗಲು ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೆ. ಆಫೀಸಿನ ಕೆಲಸದ  ಮೇಲೆ ನಾನು ಅಲ್ಲಿಗೆ ಹೋಗುತ್ತೇನೆಂದು ಎಲ್ಲರೂ ತಿಳಿದುಕೊಂಡಿದ್ದರು. ಹೋಗುವ ಮೊದಲು ನಾನು ಸುಚಿತ್ರಾಳ ತಾಯಿಯನ್ನು ತಪ್ಪದೆ ಭೇಟಿಯಾಗುತ್ತಿದ್ದೆ.

ನಾನು ಕೆಲಸದ ಮೇಲೆ ಹೋಗ್ತಿದೀನಿ, ಸುಚಿತ್ರಾಳಿಗೆ ಏನಾದರೂ ಕೊಡುವುದಿದ್ದರೆ ಕೊಡಲಿ ಎಂದು ಅವರಿಗೆ ಹೇಳುತ್ತಿದ್ದೆ. ಅವರು ತುಂಬಾ ಸಾಮಾನನ್ನು ಕೊಡುತ್ತಿದ್ದರು. ಸುಚಿತ್ರಾಳ ಮನೆಗೆ ಹೋಗಲು ನನಗೆ ಬಲವಾದ ಕಾರಣ ಸಿಕ್ಕುತ್ತಿತ್ತು. ಅವಳ ತಾಯಿ ಕಳಿಸುವ ಸಾಮಾನುಗಳನ್ನು ತರಲು ನೆರೆಮನೆಯವನು ಮಾತ್ರ ಆಗಿದ್ದೆ.

ನಾನು ಹೋಗುವುದರಿಂದ ಅವಳ ಗಂಡನಿಗೆ ಏನೂ ತೊಂದರೆ ಇರಲಿಲ್ಲ. ಸೋಮಾರಿಗಳಿಗೆ ಮನೇಲಿ ಕೂತಿದ್ದ ಹಾಗೆ ಮನೆಗೆ ಬೇಕಾದ ಸಾಮಾನುಗಳು ಬಂದು ಬೀಳುವುದು ಒಳ್ಳೇದೆ ಅನ್ನಿಸುತ್ತೆ. ಆದ್ದರಿಂದ ಅವನು ನನ್ನನ್ನು ಸ್ವಾಗತಿಸುತ್ತಿದ್ದ. ಕಳೆದ ಸಲ ನಾನು ಸುಚಿತ್ರಾಳ ತಾಯಿಯನ್ನು ಭೇಟಿಯಾಗಿರಲಿಲ್ಲ. ಮನಸ್ಸು ಎಳೆಯಿತು ಬಂದುಬಿಟ್ಟಿದ್ದೆ. ವಿಷಯ ಏನಂದ್ರೆ ನಾನು ಮದುವೆಯಾಗುವುದನ್ನು ಮುಂದೂಡುತ್ತಿದ್ದೆ.  ಅಪ್ಪ ಅಮ್ಮ ಇಬ್ಬರೂ ಇದುವರೆಗೂ ಸಹನೆಯಿಂದಿದ್ದು ನನ್ನ ಮನಸ್ಸು ಸರಿಯಾಗಲಿ ಎಂದು ಕಾಯುತ್ತಿದ್ದರು. ಆದರೆ ಈಗ ಅವರಿಗೆ ನನ್ನ ಮದುವೆಯ ಚಿಂತೆ ಹತ್ತಿತ್ತು.

ಸುಚಿತ್ರಾ ತನ್ನ ಪತಿಯ ಜೊತೆ ಸಖವಾಗಿರಲಿ ಎಂದು ನಾನು ತುಂಬು ಹೃದಯದಿಂದ ಇಷ್ಟಪಟ್ಟಿದ್ದೆ, ಇದು ಸತ್ಯ. ಮದುವೆಯ  ನಂತರ ಅವಳಿಗೆ ಯಾವ ಕಷ್ಟವಾಗಲಿ, ಕೊರತೆಯಾಗಲಿ ಕಾಡಬಾರದು ಎಂದು ನಾನು ಸದಾ ಹಾರೈಸುತ್ತಿದ್ದೆ. ಆದರೆ ಅವಳು ಒಬ್ಬ ಅಯೋಗ್ಯನನ್ನು ಮದುವೆಯಾಗಿದ್ದಳು.

ಅಂದು ನಾನು ಇದೆಲ್ಲವನ್ನೂ ಯೋಚಿಸುತ್ತಾ ಅವಳ ಮುಂದೆ ನಿಂತಿದ್ದೆ. “ನಿನಗೆ ಇಷ್ಟು ದೊಡ್ಡ ರೀತಿಯಲ್ಲಿ ಮೋಸವಾಗಿರುವಾಗ ನೀನು ಈ ಸಂಬಂಧವನ್ನು ಕಡಿದುಕೊಳ್ಳುವುದಕ್ಕೆ ಯಾಕೆ ಹಿಂಜರಿಯುತ್ತೀಯಾ?”

ನಾನು ಈ ಪ್ರಶ್ನೆಯನ್ನೂ ಅದೆಷ್ಟು ಸಲ ಅವಳನ್ನು ಕೇಳಿದ್ದೆನೋ….? ಅವಳ ಗಂಡ ಇಸ್ಪೀಟಾಡಲು ತನ್ನ ಗೆಳೆಯನ ಮನೆಗೆ ಹೋಗಿದ್ದ. ಇವತ್ತಿನ ಅವಕಾಶ ಹಾಗೆ ಹೋಗಲು ಬಿಟ್ಟರೆ ಮುಂದೆ ಎಷ್ಟು ಕಾಯಬೇಕಾಗುತ್ತದೋ ಏನೋ ಎಂದು ನನಗನ್ನಿಸಿತು. ಇಷ್ಟರಲ್ಲಾಗಲೇ 2 ಕಪ್ಪು ಕಾಫಿ ಕುಡಿದಿದ್ದೆವು. ಎಷ್ಟೊಂದು ಪರಿಚಿತರ ಯೋಗಕ್ಷೇಮದ ಬಗ್ಗೆ ಮಾತನಾಡಿದ್ದೆವು.

ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಮಾತನಾಡಿದ್ದೆವು. ಆದರೆ ನನ್ನ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಅವಳು ಮೌನವಾಗಿರುತ್ತಿದ್ದಳು. ಇಲ್ಲವೇ ಮಾತು ಬದಲಾಯಿಸುತ್ತಿದ್ದಳು. ಅಥವಾ ಯಾರೋ ಏನೂ ಅರಿಯದ ಬಾಲಕ ಅರ್ಥವಿಲ್ಲದ ಪ್ರಶ್ನೆ ಕೇಳುತ್ತಿದ್ದಾನೇನೋ ಎಂಬಂತೆ ನನ್ನ ಕಡೆ ನೋಡಿ ನಗೆ ಬೀರುತ್ತಿದ್ದಳು. ಆದರೆ ನಾನು ಸುತ್ತಿ ಬಳಸಿ ಮತ್ತೆ ನನ್ನ ಅದೇ ಪ್ರಶ್ನೆ ಕೇಳುತ್ತಿದ್ದೆ. ಉತ್ತರ ಸಿಗದೇ ಇದ್ದರೆ ನಾನು ಅಲ್ಲಿಂದ ಹೋಗುವವನಲ್ಲ ಎಂದು ಅವಳಿಗೂ ಗೊತ್ತಾಯಿತು.

ಅವಳೆಂದಳು, “ನಿನ್ನ ಮಾತಿನಿಂದ, ನಾನು ಕೋಪ ಮಾಡ್ಕೋತಿಲ್ಲ. ಏಕೆಂದರೆ ನಿನ್ನ ಉದ್ದೇಶ ಒಳ್ಳೆಯದೆಂದು ನನಗೆ ಗೊತ್ತು. ನಾನು ಸಂತೋಷವಾಗಿರಬೇಕು ಅನ್ನುವುದು ನಿನ್ನ ಇಷ್ಟ. ನಿನ್ನ ಭಾವನೆಗಳು ನನಗೆ ಮೊದಲಿಂದಲೂ ಗೊತ್ತು. ಆದರೆ ನಮಗೆ ಸಿಗದೆ ಇರುವುದನ್ನು ಮರೆತುಬಿಡುವುದು ಒಳ್ಳೆಯದಾ? ನನಗೆ ಮೋಸವಾಗಿದೆ ಅನ್ನುವುದು ನಿಜ. ಮದುವೆ ನಿಶ್ಚಯವಾಗುವುದಕ್ಕೆ ಮೊದಲು ಎಲ್ಲಾ ರೀತಿ ವಿಚಾರಿಸಿ ತಿಳಿದುಕೊಳ್ಳುವುದು ಅಗತ್ಯವಿದೆ. “ಸಂಬಂಧವನ್ನು ತಂದೆ ತಾಯಿ ನಿಶ್ಚಯಿಸುತ್ತಾರೆ ಅಂದಮೇಲೆ ಈ ಜವಾಬ್ದಾರಿ ಸಂಪೂರ್ಣವಾಗಿ ಅವರದೇ ಆಗಿರುತ್ತದೆ. ಒಂದು ಸಲ ಗಂಟು ಬಿದ್ದ ಮೇಲೆ ಈ ಸಂಬಂಧವನ್ನು ಅಷ್ಚು ಸುಲಭವಾಗಿ ಮುರಿದುಹಾಕಲಾಗುವುದಿಲ್ಲ.

“ಹಾಗೆ ಮುರಿಯಲೂಬಾರದು. ನೀನು ದಾರಿ ಬದಲಾಯಿಸುವ ಮಾತನಾಡುತ್ತೀಯಾ. ಆದರೆ ಒಂದು ಸಲ ಯಾವ ದಾರಿಯಲ್ಲಿ ಬಂದಿರುತ್ತೇವೋ ಆ ರಸ್ತೆ ಹಾಳಾಗಿದ್ದರೂ ಕೂಡಾ ಅದನ್ನು ಬದಲಾಯಿಸುವ ಬದಲು ಸರಿಪಡಿಸುವ ಪ್ರಯತ್ನ ಮಾಡಬಹುದಲ್ಲ….?

“ನಿಮ್ಮೆಲ್ಲರ ಉಪಕಾರದ ಹೊರೆ ನನ್ನ ಮೇಲಿದೆ. ನನ್ನ ತಂದೆ ತಾಯಿ, ಅಣ್ಣ, ಅತ್ತೆ ಮಾವ ಎಲ್ಲರಿಗೂ ಕೃತಜ್ಞಳಾಗಿದ್ದೇನೆ. ಈಗ ನನ್ನ ಕಾಲಿನ ಮೇಲೆ ನಿಂತುಕೊಂಡು ನೋಡುತ್ತೇನೆ. ನನಗೆ ಸ್ವಲ್ಪ ಸಮಯ ಬೇಕು ಅಷ್ಟೇ. ಇದುವರೆಗೆ ಇವರಿಗೆ ಹಣದ ಸಹಾಯ ಸಿಗುತ್ತಲೇ ಇದೆ. ಮೊದಲು ನಮ್ಮಪ್ಪ, ಆಮೇಲೆ ಅವರಪ್ಪ, ಸಹಾಯ ಮಾಡಿದ್ದರಿಂದ ಅವರಿಗೆ ಆರಾಮವಾಗಿ ಕುಳಿತು ತಿನ್ನುವ ಅಭ್ಯಾಸ ಆಗಿದೆ. ಹಣದ ಸಹಾಯ ನಿಂತರೆ ಅವರು ನಾನು ಶ್ರಮ ಪಡುವುದನ್ನು ನೋಡಿ ನನಗೆ ಬೆಂಬಲ ನೀಡಬಹುದು. ಅವರು ಅಂತಹ ಕೆಟ್ಟ ಮನುಷ್ಯರೇನಲ್ಲ. ನನ್ನನ್ನು ತುಂಬಾ ಪ್ರೀತಿಸ್ತಾರೆ.

“ಯಾರ ಬಗ್ಗೆಯೂ ನನಗೆ ಯಾವುದೇ ದೂರಿಲ್ಲ. ಏಕೆಂದರೆ ಎಲ್ಲರೂ ತಮ್ಮಿಂದಾದಷ್ಟು ಸಹಾಯ ಮಾಡಿದ್ದಾರೆ. ಈ ಸಹಾಯ ನಿಂತುಹೋಗಲಿ ಎಂದು ನಾನೀಗ ಇಷ್ಟಪಡ್ತೀನಿ. ಇನ್ನು ನಿನ್ನ ವಿಷಯ. ಜೀವನದಲ್ಲಿ ಎಲ್ಲರಿಗೂ ಎಲ್ಲ ಎಲ್ಲಿ ಸಿಗುತ್ತದೆ ಸುಬ್ಬು. ನನ್ನ ಪಾಲಿಗೆ ನೀನು ಈಗಲೂ ನನ್ನ ಆಪ್ತಮಿತ್ರ, ನನ್ನ ಹಿತೈಷಿ, ನನ್ನ ಏಕಮಾತ್ರ ಮಿತ್ರ. ಆದರೆ ನಮ್ಮ ಹಾದಿಗಳು ಬೇರೆ ಬೇರೆ, ಗುರಿ ಬೇರೆ. ಜೀವನದಲ್ಲಿ ಕೆಲವರಿಗೆ ಸಂತೋಷ ಅನ್ನುವುದು ಬಂಗಾರದ ತಟ್ಟೇಲಿ ಸಿಗುತ್ತದೆ. ಕೆಲವರಿಗೆ ಸಂಘರ್ಷ ನಡೆಸಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಹಾಗೆ ಸಂಘರ್ಷ ನಡೆಸಿದವರು ಜೀವನದ ದೀರ್ಘ ಓಟದಲ್ಲಿ ಬಹುಶಃ ಮುಂದೆ ಹೋಗುತ್ತಾರೆ ಅನ್ನುವುದು ಸತ್ಯದ ಮಾತು.”

ಮಡಿಕೇರಿಗೆ ಅದು ನನ್ನ ಕಡೆಯ ಭೇಟಿ. 2 ವರ್ಷಗಳ ನಂತರ ನಾನು ಮದುವೆಯಾದೆ. ಸ್ನೇಹಜೀವಿಯಾಗಿದ್ದ  ನನ್ನ ಮಡದಿ ಚಂದ್ರಿಕಾ ಬಹುಬೇಗನೇ ಮನೆಯವರೆಲ್ಲರ ಪ್ರೀತಿ ಗಳಿಸಿಕೊಂಡಳು. ಈಗ ಅವಳ ಸಂತೋಷಕ್ಕೆಂದು ನಾನು ಮತ್ತೆ ಮಡಿಕೇರಿಗೆ ಬಂದಿದ್ದೇನೆ. ಊರು ಸುತ್ತ ಬೇಕೆಂಬ ಅವಳ ಆಸೆ ಈಡೇರಿಸಲು ಮದುವೆಗೆ 4 ದಿನ ಮೊದಲೇ ಬಂದಿದ್ದೆ. ಆ ಊರಲ್ಲಿ ಇದ್ದ ಚಂದ್ರಿಕಾಳ ಮಾವ, ಅತ್ತೆ ನಮ್ಮನ್ನು ಸಂತೋಷದಿಂದ ಸ್ವಾಗತಿಸಿದರು. ಅವರ ಮಗಳು ಸುರಭಿಗಂತೂ ಬಹಳ ಸಂತೋಷವಾಗಿತ್ತು. ಅವಳು ತನ್ನ ಒಡವೆ ವಸ್ತುಗಳನ್ನು ಚಂದ್ರಿಕಾಗೆ ತೋರಿಸಿ ಅವಳ ಅಭಿಪ್ರಾಯ ಕೇಳಿದಳು.

“ಇಷ್ಟು ಸುಂದರವಾದ ಡ್ರೆಸ್‌ಗಳು ನಿನಗೆ ಇಲ್ಲಿ ಹೇಗೆ ಸಿಕ್ಕವು?” ಎಂದು ಚಂದ್ರಿಕಾ ಕೇಳಿದಳು.

ಅದಕ್ಕೆ ಸುರಭಿ, “ಇಲ್ಲೊಂದು `ಚಾಂದಿನಿ’ ಬೊಟಿಕ್‌ ಅಂತ ಹೊಸದಾಗಿ ಶುರುವಾಗಿದೆ. ಅಲ್ಲಿ ಎಲ್ಲಾ ರೀತಿಯ ಡ್ರೆಸ್‌ಗಳು ಲೇಟೆಸ್ಟ್ ಡಿಸೈನಿನಲ್ಲಿ ಸಿಗುತ್ತವೆ. ಮದುವೆಗೆ ಬೇಕಾದ ಬಟ್ಟೆಗಳಿಗೆ ನಾವು ಬೇರೆ ಊರಿಗೆ ಹೋಗಬೇಕಾಗಿಲ್ಲ,” ಎಂದಳು.

ಡ್ರೆಸ್‌ಗಳು ನಿಜವಾಗಲೂ ಸರಳವಾಗಿದ್ದರೂ ಸದಭಿರುಚಿಯಿಂದ ತಯಾರಾಗಿದ್ದವು. ಅತಿ ಅಲಂಕಾರವಿಲ್ಲದಿದ್ದರೂ ಸುಂದರವಾಗಿದ್ದವು.

ಅದಕ್ಕೆ ನಾನು ಇವಳಿಗೆ “ನೀನೂ ನಾಳೆ ಹೋಗಿ ನಿನಗಾಗಿ ಏನಾದರೂ ಕೊಂಡುಕೋ,” ಎಂದೆ. ಮರುದಿನ ನಾವು ಸುತ್ತಾಡಲು ಹೊರಟಾಗ ಚಂದ್ರಿಕಾಳ ಅತ್ತೆ ಸುರಭಿಯ ಬ್ಲೌಸ್‌ಗಳನ್ನು `ಚಾಂದಿನಿ ಬೊಟಿಕ್‌’ ನಿಂದ ತರಲು ಕೇಳಿಕೊಂಡರು.

ಬೊಟಿಕ್‌ ಹತ್ತಿರ ಬಂದಾಗ ನಾನು ಚಂದ್ರಿಕಾಗೆ “ನೀನು ಬ್ಲೌಸ್‌ಗಳನ್ನು ತಗೊಂಡು ಡ್ರೆಸ್‌ಗಳನ್ನು ನೋಡುತ್ತಿರು. ನಾನಿಲ್ಲೇ ಸುತ್ತಾಡಿಕೊಂಡು ಬರ್ತೀನಿ,” ಎಂದೆ.

ಅಲ್ಲಿಯವರೆಗೆ ಬಂದ ನನಗೆ ಮನಸ್ಸು ತಡೆಯಲಾಗಲಿಲ್ಲ. ನಾನು ಸುಚಿತ್ರಾಳ ಅಂಗಡಿಯನ್ನು ನೋಡಿರಲಿಲ್ಲ. ಆದರೆ ಇಲ್ಲೇ ಸುತ್ತಮುತ್ತ  ಎಲ್ಲೋ ಇರಬೇಕು ಅಂತ ಊಹಿಸಿದ್ದೆ. ಆದರೆ ಅಲ್ಲಿ ವುಲ್ಲನ್‌ ಬಟ್ಟೆ, ಅಂಗಡಿಗಳು ಬಹಳ ಇದ್ದವು.

5 ವರ್ಷಗಳ ನಂತರ ಯಾವುದೇ ಪರಿಚಿತ ಮುಖ ಅಥವಾ ಸುಚಿತ್ರಾ ಇಲ್ಲವೇ ಅವಳ ಪತಿ ವಿಜಯನ ಮುಖ ಎಲ್ಲೂ ಕಾಣಿಸಲಿಲ್ಲ. ನಾನು `ಚಾಂದಿನಿ’ಗೆ ವಾಪಸ್‌ ಬಂದೆ. ಅಲ್ಲಿಗೆ ಬಂದಾಗ ಕ್ಯಾಶಿಯರ್‌ ಸ್ಥಾನದಲ್ಲಿ ಕುಳಿತಿದ್ದ ವ್ಯಕ್ತಿಯನ್ನು ನೋಡಿದಾಗ ಪರಿಚಿತ ಮುಖ ಎನ್ನಿಸಿತು.

ನಾನು ಯಾರಿರಬಹುದು ಎಂದು ಯೋಚಿಸುತ್ತಿರುವಾಗ ಚಂದ್ರಿಕಾ ಕರೆದಳು. ನೋಡಿದರೆ ಅವಳು ಸುಚಿತ್ರಾಳ ಜೊತೆ ಮಾತನಾಡುತ್ತಿದ್ದಳು.

ನನ್ನನ್ನು ನೋಡುತ್ತಲೇ “ಬನ್ನಿ, ನಿಮಗೊಂದು ತಮಾಷೆ ವಿಷಯ ಹೇಳ್ತೀನಿ. ಇವರು ಕೂಡ ನಿಮ್ಮ ಊರಿನವರೇ! ಅಷ್ಟೇ ಅಲ್ಲ, ನಾವಿದೀವಲ್ಲ ಅಲ್ಲಿಗೆ ಹತ್ತಿರದಲ್ಲೇ ಇವರೂ ಇರುವುದು. ಆದರೆ ಇವರ ಹೆಸರನ್ನು ನಾನಿನ್ನೂ ಕೇಳಿಲ್ಲ,” ಎಂದಳು. ನಾನು ಅವರನ್ನು ಪರಿಚಯಿಸುತ್ತಾ, “ಚಂದ್ರಿಕಾ, ಇವಳು ಸುಚಿತ್ರಾ. ನನ್ನ ತಂಗಿಯ ಸ್ನೇಹಿತೆ. ಇಬ್ಬರೂ ತುಂಬಾ ಆಪ್ತ ಗೆಳತಿಯರು. ಮದುವೆಯಾದ ಮೇಲೆ ಚದುರಿಹೋದರು,” ಎಂದೆ.

“ಬಹಳ ಕೆಲಸ ಇರುವುದರಿಂದ ನನಗೂ ಊರಿಗೆ ಹೋಗುವುದಕ್ಕೆ ಆಗ್ತಿಲ್ಲ. ಅದರಲ್ಲೂ ಅಮ್ಮ ಇಲ್ಲಿಗೆ ಬಂದ ಮೇಲೆ ಹೋಗ್ತಾನೇ ಇಲ್ಲ. ಅಪ್ಪ ಹೋದ ಮೇಲೆ ಅಮ್ಮನ್ನ ಇಲ್ಲಿಗೆ ಕರಕೊಂಡು ಬಂದಿದೀನಿ. ಅವರೊಬ್ಬರನ್ನೇ ಅಲ್ಲಿ ಹೇಗೆ ಬಿಡೋದು. ಅಣ್ಣನಂತೂ ಅಮೇರಿಕಾದಲ್ಲಿದ್ದಾನೆ. ನನಗೂ ಅಮ್ಮ ಬಂದಿದ್ದು ಸಂತೋಷ ಆಗಿದೆ. ನನ್ನ ಪುಟ್ಟ ಮಗಳನ್ನು ಆಯಾಳ ಬಳಿ ಮನೇಲಿ ಬಿಟ್ಟು ಬರಬೇಕಾಗಿತ್ತು. ಈಗ ಅಮ್ಮ ಬಂದಿರೋದರಿಂದ ನಿಶ್ಚಿಂತಳಾಗಿ ಕೆಲಸ ಮಾಡಬಹುದು,” ಎಂದಳು ಸುಚಿತ್ರಾ.

ನಂತರ ತನ್ನ ಗಂಡನನ್ನು ಪರಿಚಯಿಸಿದಳು. “ಇಷ್ಟು ದೊಡ್ಡ ಬೊಟಿಕ್‌ ನೋಡಿಕೊಳ್ಳುವುದು ನನ್ನೊಬ್ಬಳಿಂದ ಸಾಧ್ಯವೇ? ನಾನು ಡಿಸೈನ್‌ ಮಾಡಿ ಡ್ರೆಸ್‌ಗಳನ್ನು ಸಿದ್ಧಪಡಿಸ್ತೀನಿ. ಗ್ರಾಹಕರ ಇಷ್ಟಗಳ ಬಗ್ಗೆ ಗಮನ ಕೊಡ್ತೀನಿ. ಸಾಮಾನು ತರಿಸೋದು, ಕ್ಯಾಶ್‌ನೋಡಿಕೊಳ್ಳುವುದು, ಕೆಲಸಗಾರರ ಮೇಲೆ ಕಣ್ಣಿಡುವುದು ಎಲ್ಲಾ ಜವಾಬ್ದಾರಿ ಇವರದೆ,” ಎಂದು ಗಂಡನತ್ತ ತೋರಿಸಿದಳು ಸುಚಿತ್ರಾ.

“ನನ್ನ ಕೇಳಿದರೆ ಎಲ್ಲಕ್ಕಿಂತ ದೊಡ್ಡ ಲಾಭ ಆಗಿದ್ದು ಅಂದರೆ ದಿನಾ ಪೂರ್ತಿ ಜೊತಗಿರೋ ಹಾಗೆ ಆಗಿದ್ದು.” ಎಂದ ವಿಜಯ.

ಅವನ ಮಾತು ಕೇಳಿ ಸುಚಿತ್ರಾ ನಾಚಿಕೊಂಡು ಹೇಳಿದಳು “ಅಮ್ಮನ್ನ ಭೇಟಿಯಾಗಲ್ಲವೇ? ನಾಳೆ ರಾತ್ರಿ ಬನ್ನಿ, ಎಲ್ಲರೂ ಒಟ್ಟಿಗೆ ಊಟ ಮಾಡೋಣ.”

ಮರುದಿನ ಸುಚಿತ್ರಾಳ ತಾಯಿಯ ಭೇಟಿಯಾಗಿ ಮಾತನಾಡಿದ ಮೇಲೆ ವಿಷಯವೆಲ್ಲಾ ತಿಳಿಯಿತು. ಶಾಲೆಯ ಕೆಲಸದ ಜೊತೆಗೆ ಸುಚಿತ್ರಾ ಹೊಲಿಗೆ ಮತ್ತು ಕಸೂತಿಯನ್ನು ಕಲಿತಳು. ಶಾಲೆಗೆ ಬಹಳ ದಿನಗಳ ರಜಾ ಇದ್ದಾಗ ಅವಳು ಒಬ್ಬ ಟೈಲರ್‌ ಮತ್ತು ಕಟರ್‌ಗಳನ್ನು ಕರೆಸಿ ಉಡುಪುಗಳನ್ನು ಆರ್ಡರ್‌ ಪ್ರಕಾರ ಹೊಲಿಸತೊಡಗಿದಳು. ಹಗಲು ರಾತ್ರಿ ಕೆಲಸ ಮಾಡಿ ಅವಳು ಒಳ್ಳೆ ಹೆಸರು ಗಳಿಸಿದ್ದಳು. ಹಾಗಾಗಿ ಅವಳು ಸಿದ್ಧಪಡಿಸಿದ ಡ್ರೆಸ್‌ಗಳು ಅಲ್ಲೂ ಮಾರಾಟವಾಗುತ್ತಿದ್ದವು. ಒಳ್ಳೆಯ ಅಭಿರುಚಿಯ ಉತ್ತಮ ವಿನ್ಯಾಸದ ಉಡುಪುಗಳನ್ನು ಸಿದ್ಧಪಡಿಸುವುದರಲ್ಲಿ ಅವಳು ಮೊದಲೇ ಹೆಸರಾಗಿದ್ದಳು. ಅವಳ ಪ್ರತಿಭೆ ಈಗ ಕೆಲಸಕ್ಕೆ ಬಂತು.

ವರ್ಣ ಸಂಯೋಜನೆ, ವಿನ್ಯಾಸಗಳು ಊರಿನ ಯುವತಿಯರನ್ನು ಆಕರ್ಷಿಸಿದವು. ಹೀಗೆ ಅವಳ ಕೆಲಸ ನಡೆಯತೊಡಗಿತು. ಹಣ ಸೇರುತ್ತಿದ್ದಂತೆ ಬೊಟಿಕ್‌ನಲ್ಲಿ ಸಾಮಾನು ಹೆಚ್ಚಾಗತೊಡಗಿತು. ಈಗ ಊರಿನಲ್ಲಿ ಹೆಸರು ಗೌರವ ಇದೆ. ಸುಚಿತ್ರಾಳ ತುಂಬಿದ ಮನೆ, ಬೆಳೆಯುತ್ತಿರುವ ಸಂತಸಭರಿತ ಕುಟುಂಬ ನೋಡಿ ಮನಸ್ಸಿಗೆ ನೆಮ್ಮದಿಯಾಯಿತು. ವಿಜಯನನ್ನು ಹತ್ತಿರದಿಂದ ನೋಡಿ ಪರಿಚಯವಾಗಿ ಬಹಳ ಖುಷಿಯಾಯಿತು. ಚಂದ್ರಿಕಾ ಅವರ ಮಗಳಿಗೆಂದು ಒಂದು ಗೊಂಬೆಯನ್ನು ಕೊಂಡುಕೊಂಡಿದ್ದಳು. ಮಗು ಗೊಂಬೆಯನ್ನು ನೋಡಿ ಸಂತೋಷದಿಂದ ಕುಣಿದಾಡಿದಳು.

ಅವಳನ್ನು ತೊಡೆಯ ಮೇಲೆ ಕೂರಿಸಿಕೊಂಡಾಗ ಅರೆಕ್ಷಣ ಮನಸ್ಸಿಗೆ ಚುಚ್ಚಿದಂತಾಯಿತು. ಬೇಗನೇ ನಾನು ಸಂಭಾಳಿಸಿಕೊಂಡೆ. ನನ್ನ ಮುಚ್ಚಿದ ಪುಸ್ತಕದಲ್ಲಿ ಇನ್ನೊಂದು ಅಧ್ಯಾಯ ಸೇರಿತು. ಆದರೆ ಪುಸ್ತಕವನ್ನು ಮುಚ್ಚಿಯೇ ಇಡಬೇಕು. ನನ್ನ ಮತ್ತು ಚಂದ್ರಿಕಾಳ ನಡುವಿನ ಸಂಬಂಧದಲ್ಲಿ ಯಾವುದೇ ರೀತಿಯ ಮಲಿನವಾದ ನೆರಳು ಬೀಳಬಾರದು.  ಇದು ನಾನು ಸ್ವತಃ ನನಗೆ ಮಾಡಿಕೊಂಡ ವಾಗ್ದಾನ. ನನಗೆ ನನ್ನ ಮೇಲೆ ಮತ್ತು ನನ್ನ ದೃಢ ಇಚ್ಛಾಶಕ್ತಿಯ ಮೇಲೆ ಪೂರ್ಣ ಭರವಸೆ ಇದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ