ನೀಳ್ಗಥೆ – ಚಂದ್ರಿಕಾ ಸುಧೀಂದ್ರ
ಮಧ್ಯಮ ವರ್ಗದ ಹಿರಿಮಗಳಾಗಿ ಮೇಘನಾ ದುಡಿದು ತಾಯಿ ತಂದೆಗೆ ನೆರವಾಗಲು ಬಯಸಿದಳು. ಆದರೆ ಅವರು ಹೇಗಾದರೂ ಮಗಳ ಮದುವೆಯನ್ನು ಮುಗಿಸಬೇಕೆಂದು ಅವಳಿಗೆ ಅನುರೂಪನಲ್ಲದ ವರನೊಂದಿಗೆ ಮದುವೆ ನಿಶ್ಚಯಿಸಿದರು. ಮುಂದೆ ಅವಳ ಬದುಕು? ಮತ್ತೆ ಒಬ್ಬಂಟಿಯಾದ ಅವಳ ಜೀವನದಲ್ಲಿ ಗೌರವ್ ಕಾಣಿಸಿದ್ದೇಕೆ? ಅವಳ ಬದುಕಲ್ಲಿ ಭರವಸೆಯ ಬೆಳಕು ಮೂಡಿತೇ…?
ಮೇಘನಾ ಆಫೀಸಿಗೆ ಹೊರಡಲು ಆತುರಾತುರವಾಗಿ ವ್ಯಾನಿಟಿ ಬ್ಯಾಗ್‌ಗೆ ಊಟದ ಡಬ್ಬಿ ಹಾಕಿಕೊಂಡು ಸಿದ್ಧವಾಗುತ್ತಿದ್ದಳು. ತನ್ನ ಮಮತೆಯ ಕುಡಿ 6 ತಿಂಗಳ ಅನಘಾಳನ್ನು ಮನೆ ಓನರ್ ಬಳಿ ಬಿಟ್ಟು ಹೋಗಬೇಕಲ್ಲ ಎಂದು ಕಣ್ಣು ತುಂಬಿ ಬಂದರೂ ವಿಧಿ ಇಲ್ಲದೆ ಭಾರವಾದ ಮನಸ್ಸಿನಿಂದ ಬಸ್ ಹತ್ತಿದಳು. ಸಮಯಕ್ಕೆ ಸರಿಯಾಗಿ ಬಸ್ ಬಂದು ಸೀಟು ಸಿಕ್ಕಿದ ಸಮಾಧಾನದಿಂದ ಮೇಘನಾ ಕರವಸ್ತ್ರದಿಂದ ಮುಖದ ಬೆವರೊರೆಸಿಕೊಂಡು, ಸೀಟಿಗೊರಗಿ ಕಣ್ಣು ಮುಚ್ಚಿದಳು. ಅವಳಿಗೆ ತನ್ನ ಗತ ಜೀವನದ ಎಳೆಗಳು ಕಾಡಲಾರಂಭಿಸಿತು.
ಶಂಕರಮೂರ್ತಿ ಮತ್ತು ಅಂಬುಜಮ್ಮ ದಂಪತಿಗಳಿಗೆ ಮೇಘನಾ ಹಾಗೂ ಚೈತ್ರಾ ಇಬ್ಬರೇ ಹೆಣ್ಣುಮಕ್ಕಳು. ಸಣ್ಣ ಕೆಲಸದಲ್ಲಿದ್ದ ಶಂಕರಮೂರ್ತಿಗೆ ಸ್ವಂತ ಮನೆ ಇದ್ದುದರಿಂದ ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಮಕ್ಕಳನ್ನು ಓದಿಸುತ್ತಾ, ಹೆಚ್ಚಿನ ಆಡಂಬರವಿಲ್ಲದೆ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರು.
ಮೇಘನಾ ಹಿರಿಯಳಾಗಿದ್ದು, ನೋಡಲು ಮುದ್ದಾಗಿ, ಲಕ್ಷಣವಾಗಿದ್ದಳು. ಎರಡನೇ ಮಗಳು ಚೈತ್ರಾ ನೋಡಲು ಕಪ್ಪಗಿದ್ದರೂ ಆಕರ್ಷಕವಾಗಿದ್ದಳು. ಮೇಘನಾ ಸ್ವಭಾತಃ ಮಿತ ಭಾಷಿಯಾದರೆ, ಚೈತ್ರಾ ಅಷ್ಟೇ ವಾಚಾಳಿ. ಸಾಲದ್ದಕ್ಕೆ ಚಿಕ್ಕವಳೆಂದು ಮುದ್ದು. ಇದರಿಂದ ಹಠದ ಸ್ವಭಾವ ಮೈಗೂಡಿಸಿಕೊಂಡಿದ್ದಳು. ಚೈತ್ರಾ ಆಸೆಪಟ್ಟಿದ್ದನ್ನು ಕೊಡಿಸುವವರೆಗೂ ಬಿಡುತ್ತಿರಲಿಲ್ಲ. ಯಾರೊಂದಿಗೂ ಬೇಗ ಹೊಂದಿಕೊಳ್ಳುತ್ತಿರಲಿಲ್ಲ. ಆದರೆ ಮೇಘನಾ ಅಲ್ಪತೃಪ್ತಳು. ದೊಡ್ಡ ಮಗಳಾದ ಮೇಘನಾ ಎಲ್ಲದಕ್ಕೂ ಸೋಲಬೇಕಿತ್ತು. ತಂಗಿಯ ಹಠ, ಕೋಪದ ಮುಂದೆ ಸೋತು ತ್ಯಾಗ ಮಾಡಬೇಕಾಗುತ್ತಿತ್ತು. ಸಾಲದ್ದಕ್ಕೆ ಚೈತ್ರಾ, ಮೇಘನಾಳನ್ನು ನೇರ ನಿಷ್ಠುರದ ಮಾತುಗಳಿಂದ ಮೂದಲಿಸುತ್ತಿದ್ದಳು. ಅವಳು ನಿನಗಿಂತ ಚಿಕ್ಕಳು ಅವಳ ಜೊತೆ ನಿನ್ನದೇನು ಪೈಪೋಟಿ ಎಂದು ತಂದೆ, ತಾಯಿ ಇಬ್ಬರೂ ಅವಳ ಆಸೆಯನ್ನು ಚಿವುಟುತ್ತಿದ್ದರು. ಆದ್ದರಿಂದ ಮೇಘನಾ ಆಸೆಪಟ್ಟು ತನಗಾಗಿ ಏನನ್ನೂ ಕೇಳುತ್ತಿರಲಿಲ್ಲ, ತಂದೆ ತಾಯಿಯನ್ನು ಪೀಡಿಸುತ್ತಿರಲಿಲ್ಲ. ಜೊತೆಗೆ ತಾಯಿಯ ಆರೋಗ್ಯ ಆಗಾಗ್ಗೆ ಹದಗೆಡುತ್ತಿದ್ದುದರಿಂದ ಮನೆಯ ಕೆಲಸ, ತಾಯಿ ಔಷಧೋಪಚಾರವೆಲ್ಲ ಮೇಘನಾಳೇ ನೋಡಿಕೊಳ್ಳಬೇಕಾಗಿತ್ತು. ಶಾಲೆಗೆ ಹೋಗಿ ಬರುವುದರ ಜೊತೆಗೆ ಸಂಗೀತ ಕಲಿಯಲು ಹೋಗುತ್ತಿದ್ದಳು. ಅವಳು ಕಾಲೇಜು ಸೇರಿ ಗೆಳತಿಯರ ಸಲಹೆಯ ಮೇರೆಗೆ ಸಣ್ಣಪುಟ್ಟ ಟ್ರೈನಿಂಗ್‌ಗೆ ಹೋಗಿ ಅದನ್ನು ಮಾಡಿಕೊಂಡಿದ್ದಳು.
ಶಂಕರಮೂರ್ತಿ ತಾವು ಸೇವೆಯಲ್ಲಿರುವಾಗಲೇ ಇಬ್ಬರು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಯ ಜವಾಬ್ದಾರಿಯನ್ನು ಮುಗಿಸುವ ಸಲುವಾಗಿ ಅಲ್ಪಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತಿದ್ದರು. ಹೀಗಾಗಿ ಮೇಘನಾ ಅಂತಿಮ ಪದವಿಗೆ ಬರುತ್ತಿದ್ದಂತೆ ವರನ ಬೇಟೆಗಾಗಿ ಪ್ರಯತ್ನಿಸುತ್ತಾ, ಅವರ ಪರಿಚಯದವರಿಗೆಲ್ಲಾ ಅವಳ ಫೋಟೋ, ಜಾತಕವನ್ನು ಕೊಟ್ಟು ಗಂಡು ನೋಡಲು ಹೇಳಿದ್ದರು.
ಮೇಘನಾಳಿಗೆ ಈಗಲೇ ಮದುವೆಯಾಗುವ ಆಸೆ ಇರಲಿಲ್ಲ. ಓದಿ ಕೆಲಸಕ್ಕೆ ಸೇರಿ ಗಂಡು ಮಕ್ಕಳಿಲ್ಲದ ತಂದೆತಾಯಿಗೆ ಸಹಾಯ ಮಾಡುವ ಅಭಿಲಾಷೆಯಿಂದ ಮದುವೆಯ ವಿಚಾರವನ್ನು ವಿರೋಧಿಸತೊಡಗಿದಳು. ಆದರೆ ಅವಳ ಮಾತಿಗೆ ಬೆಲೆ ಕೊಡದ ತಂದೆತಾಯಿ, `ನಾವು ನಿನ್ನ ಒಳ್ಳೆಯದಕ್ಕೇ ಹೇಳುವುದು. ನಿನ್ನ ಮದುವೆ ಮಾಡಿ, ಸುಧಾರಿಸಿಕೊಳ್ಳುವ ಹೊತ್ತಿಗೆ ಚೈತ್ರಾ ಮದುವೆಗೆ ಸಿದ್ಧವಾಗುತ್ತಾಳೆ. ನಾವು ನಮ್ಮ ಜವಾಬ್ದಾರಿ ಕಳೆದುಕೊಳ್ಳುವುದು ಬೇಡವಾ….? ದೊಡ್ಡವರು ಏಕೆ ಒತ್ತಾಯಿಸುತ್ತಾರೆ ಎಂದು ಅರ್ಥ ಮಾಡಿಕೋ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಒಳ್ಳೆ ಸಂಬಂಧ ಬಂದಾಗ ಬೇಡವೆಂದರೆ ಒಳ್ಳೆಯ ಅವಕಾಶ ಕಳೆದುಕೊಂಡಂತಾಗುತ್ತದೆ.
`ಹುಡುಗನಿಗೆ ತಂದೆತಾಯಿ ಇಲ್ಲ. ಸೋದರಮಾವನೇ ಸಾಕಿ ಓದಿಸಿದ್ದಾರೆ. ಒಳ್ಳೆಯ ಕೆಲಸದಲ್ಲಿದ್ದಾನೆ. ಅತ್ತೆ, ಮಾವ, ನಾದಿನಿಯರ ಜವಾಬ್ದಾರಿ, ಕಾಟ ಯಾವುದೂ ಇಲ್ಲದೆ ನೀನೇ ಆ ಮನೆಗೆ ಯಜಮಾನಿಯಾಗಿ ಹಾಯಾಗಿರಬಹುದು. ಜಾತಕ ಪ್ರಶಸ್ತವಾಗಿ ಕೂಡಿಬಂದಿದೆ,’ ಎಂದು ಬುದ್ಧಿ ಹೇಳಿ ಮದುವೆಗೆ ಒಪ್ಪುವಂತೆ ಮಾಡಿದರು. ಮನಸ್ಸಿಲ್ಲದ ಮನಸ್ಸಿನಿಂದ ಅಸಮಾಧಾನದಿಂದಲೇ ಹುಡುಗನನ್ನು ನೋಡಲು ಮೇಘನಾ ಒಪ್ಪಿದಳು.
ಹುಡುಗನನ್ನು ಮನೆಗೆ ಕರೆಸಿ ನೋಡುವ ಶಾಸ್ತ್ರ ಏರ್ಪಾಡಾಯಿತು. ಶ್ರೀಧರ್ ತನ್ನ ಅತ್ತೆ, ಮಾವನ ಜೊತೆಗೆ ಮೇಘನಾಳನ್ನು ನೋಡಲು ಬಂದ. ನೋಡಲು ಸುಮಾರಾಗಿದ್ದ. ಮೇಘನಾಳ ರೂಪಿಗೆ ತಕ್ಕ ಜೋಡಿಯಲ್ಲ ಎನಿಸಿತು. ಮೇಘನಾಳನ್ನು ನೋಡಿದ ಶ್ರೀಧರನ ಸೋದರತ್ತೆ ಮೀನಾಕ್ಷಿಗಂತೂ ಬಹಳ ಇಷ್ಟವಾಗಿ ಒಳ್ಳೆಯ ಜೋಡಿ ನಮ್ಮ ಶ್ರೀಧರನಿಗೆ ತಕ್ಕಂತೆ ಇದ್ದಾಳೆ ಎಂದು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದರು.
ಸಾಮಾನ್ಯ ರೂಪಿನ ಶ್ರೀಧರನನ್ನು ನೋಡಿದ ಮೇಘನಾಳಿಗೆ ನಿರಾಸೆಯಾಯಿತು. ಕಾಫಿ, ತಿಂಡಿ ಎಲ್ಲ ಮುಗಿದು ಹೆಣ್ಣು ನೋಡುವ ಶಾಸ್ತ್ರ ಮುಗಿಸಿ, ನೀವು ಮೇಘನಾಳ ಬಳಿ ಕೇಳಿ ಒಪ್ಪಿಗೆ ತಿಳಿಸಿದರೆ ಒಳ್ಳೆಯ ಮುಹೂರ್ತ ನಿಶ್ಚಯಿಸಲು ಅನುಕೂಲ ಎಂದು ಅವರು ಹುಡುಗಿಯನ್ನು ಒಪ್ಪಿರುವ ಬಗ್ಗೆ ಸೂಕ್ಷ್ಮವಾಗಿ ತಿಳಿಸಿ ಒಪ್ಪಿಗೆಗಾಗಿ ಕಾಯುತ್ತಿರುವುದಾಗಿ ಹೇಳಿ ಹೊರಟರು.
ಅಲ್ಲದೆ ಹೊರಡುವ ಮುನ್ನ ಸುಮ್ಮನೆ ನಿಶ್ಚಿತಾರ್ಥ ಎಂದರೆ ಅದರ ಖರ್ಚು ನಿಮಗೂ ಭಾರವಾಗುವುದು ಏಕೆ? ನೇರವಾಗಿ ಮದುವೆ ದಿನಾಂಕ, ಒಳ್ಳೆಯ ಲಗ್ನ ನೋಡಿ ತಿಳಿಸಿ ಸಾಕು ಎಂದರು. ತನ್ನ ಅಭಿಪ್ರಾಯವನ್ನು ಕೇಳದೇ ಆಗಲೇ ಮದುವೆ ಲಗ್ನದ ಸಿದ್ಧತೆಯವರೆಗೂ ಹೋಗಿಬಿಟ್ಟರಲ್ಲ ಎಂದುಕೊಂಡ ಮೇಘನಾ ತಂದೆ, ತಾಯಿಗೆ ಈಗಲೇ ಮದುವೆ ಬೇಡ ಎಂದು ಹೇಳಬೇಕೆಂದುಕೊಂಡಳು. ಆದರೆ ಅದಕ್ಕೆ ಅವಕಾಶ ಕೊಡದಂತೆ ತಂದೆತಾಯಿ ನಮ್ಮ ಮೇಘನಾಳ ಅದೃಷ್ಟ ನೋಡಿ ಮೊದಲನೇ ಹುಡುಗನೇ ಒಪ್ಪಿ, ಮದುವೆಗೆ ಮುಹೂರ್ತ ನೋಡಿ ಎಂದರಲ್ಲ ಎಂದು ಸಂತೋಷದಿಂದ ಸಂಭ್ರಮಿಸಿದರು.
ಮೇಘನಾಳ ಒಪ್ಪಿಗೆ ಕೇಳಬೇಕೆನ್ನುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಕೆಲಸಕ್ಕೆ ಸೇರಿ ತನ್ನ ಕಾಲ ಮೇಲೆ ನಿಂತುಕೊಂಡು ತಂದೆ ತಾಯಿಗೆ ಆಸರೆಯಾಗಬೇಕೆಂದು ಕನಸು ಕಟ್ಟಿಕೊಂಡಿದ್ದ ಮೇಘನಾಳ ಅಳಲನ್ನು ಕೇಳುವವರು ಯಾರು? ತನ್ನಿಂದ ತಂದೆ, ತಾಯಿಗೆ ತೊಂದರೆಯಾಗಿ ಭಾರವಾಗಬಾರದೆಂದು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಇತ್ತಳು. ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ ಮೇಘನಾಳ ಮನಸ್ಸಿನಲ್ಲಿ ಉದ್ವಿಗ್ನತೆ, ಆತಂಕ ಶುರುವಾಯಿತು. ಅವಳಿಗೆ ಹೇಳಿಕೊಳ್ಳಲು ಯಾರೂ ಇಲ್ಲದೆ ಏಕಾಂಗಿತನ ಕಾಡಲಾರಂಭಿಸಿತು. ತನ್ನ ಆಪ್ತ ಗೆಳತಿ ರಚನಾಳ ಬಳಿ ಹೇಳಿಕೊಂಡಾಗ, ನಿಮ್ಮ ತಂದೆ ತಾಯಿ ಹೇಳುತ್ತಿರುವುದೂ ಒಂದು ರೀತಿ ಸರಿ ಎನಿಸುತ್ತದೆ. ಆದರೂ ನೀನೇ ಯೋಚಿಸಿ ತೀರ್ಮಾನಿಸು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿ ಜಾರಿಕೊಂಡಳು. ತನ್ನ ಭವಿಷ್ಯ ತನ್ನದೇ ನಿರ್ಧಾರ ಎಂದುಕೊಂಡ ಮೇಘನಾ ಜೀವನ ಹೇಗೆ ಬರುತ್ತದೋ ಅದೇ ರೀತಿ ಸ್ವೀಕರಿಸುವುದೆಂದು ಮನದಲ್ಲೇ ನಿರ್ಧರಿಸಿದಳು. ಹುಡುಗನ ಮನೆಯವರ ಇಚ್ಛೆಯಂತೆ ಮೇಘನಾಳ ಮದುವೆ ಬಹಳ ಸರಳವಾಗಿ ನೆರವೇರಿತು. ಶ್ರೀಧರ ಮದುವೆಗೆ ಮೊದಲೆ ಬಾಡಿಗೆಗೆ ಚಿಕ್ಕ ಮನೆಯೊಂದನ್ನು ಮಾಡಿದ್ದ. ಅವನ ಅತ್ತೆ ಅದೇ ಮನೆಗೆ ಮೇಘನಾಳನ್ನು ಆರತಿ ಮಾಡಿ ಮನೆ ತುಂಬಿಸಿಕೊಂಡರು. ಸಂಸಾರಕ್ಕೆ ಅಣಿ ಮಾಡಿಕೊಟ್ಟು ಊರಿಗೆ ಹೊರಟರು. ತಂದೆ, ತಾಯಿ ತಮ್ಮ ಜವಾಬ್ದಾರಿ ಕಳೆಯಿತು ಎನ್ನುವಂತೆ ಹಗುರವಾದ ಮನಸ್ಸಿನಿಂದ, ಇನ್ನೊಂದೆಡೆ ಅತ್ತೆಯ ಮನೆಗೆ ಕಳುಹಿಸಿರುವ ದುಗುಡದಿಂದ ಭಾರವಾದ ಮನಸ್ಸಿನಿಂದ ಊರಿಗೆ ವಾಪಸ್ಸಾದರು.
ಹೊಸ ಮನೆ, ಹೊಸ ಸಂಸಾರಕ್ಕೆ ಹೊಂದಿಕೊಳ್ಳಲು ಮೇಘನಾಳಿಗೆ ಸ್ವಲ್ಪ ಸಮಯವೇ ಆಯಿತು. ಮೇಘನಾ ಮೊದಲೇ ಮಿತಭಾಷಿಯಾದ್ದರಿಂದ ಹಿತವಾದ ಸಂಗೀತ ಆಲಿಸುತ್ತಾ, ಮನೆ ಕೆಲಸ ಮಾಡಿಕೊಳ್ಳುವುದು, ದಿನ ಪತ್ರಿಕೆ ಓದುವುದು, ಸಾಹಿತ್ಯದ ಅವಲೋಕನ ಇಷ್ಟೇ ಅವಳ ಪ್ರಪಂಚವಾಗಿತ್ತು. ಇದಕ್ಕೆ ತದ್ವಿರುದ್ಧವಾದ ವ್ಯಕಿತ್ವ ಶ್ರೀಧರನದು. ಮಾತುಗಾರ ಗೆಳೆಯರೊಡನೆ ಸುತ್ತಾಡುವುದು, ಗೆಳೆಯರನ್ನೆಲ್ಲಾ ಮನೆಗೆ ಕರೆತಂದು ಕೇರಂ, ಇಸ್ಪೀಟ್ ಆಡುವುದು, ಜೋರಾಗಿ ಧ್ವನಿ ಏರಿಸಿ ಹಾಡುವುದು, ಮಾತಾಡುವುದು ಅವನ ಅಭ್ಯಾಸವಾಗಿತ್ತು. ಇದರಿಂದ ಮೇಘನಾಳಿಗೆ ತಲೆ ಚಿಟ್ಟು ಹಿಡಿಯುತ್ತಿತ್ತು. ಹೊತ್ತಿಲ್ಲದ ಹೊತ್ತಿನಲ್ಲಿ ಗೆಳೆಯರನ್ನು ಕರೆತಂದು ತಿಂಡಿ, ಕಾಫಿ ಮಾಡಲು ಹೇಳುತ್ತಿದ್ದ. ಹೊಸದಾಗಿ ಅಡುಗೆ ಕಲಿಯುತ್ತಿದ್ದ ಮೇಘನಾಳಿಗೆ ಅಷ್ಟೊಂದು ಜನಕ್ಕೆ ತಿಂಡಿ ಮಾಡಿ ಅಭ್ಯಾಸವಿಲ್ಲದೆ ಕೆಲವು ಬಾರಿ ರುಚಿ ಕೆಟ್ಟು ಹೋಗಿ ಶ್ರೀಧರನ ಮಾತಿನ ಪ್ರಹಾರಕ್ಕೆ ಗುರಿಯಾಗುತ್ತಿದ್ದಳು. ಅವಳ ಭಾವನೆಯನ್ನೇ ಅರ್ಥ ಮಾಡಿಕೊಳ್ಳದ ಗಂಡನ ಈ ನಡವಳಿಕೆಯಿಂದ ಅವಳು ದುಃಖದಿಂದ ಪರಿತಪಿಸುತ್ತಿದ್ದಳು. ತನ್ನ ಜೀವನದಲ್ಲಿ ಎಲ್ಲೋ ಅಪಸ್ವರ ಕೇಳಿ ಬರುತ್ತಿದೆ ಎನಿಸಿ ಬೇಸರವಾಗುತ್ತಿತ್ತು. ಗಂಡ ಮನೆಯಲ್ಲಿರುವುದಕ್ಕಿಂತ ಹೊರಗೇ ಹೆಚ್ಚು ಸಮಯ ಕಳೆಯುತ್ತಿದ್ದ. ಬೆಳಗ್ಗೆ ಕಛೇರಿಗೆ ಹೋದರೆ ರಾತ್ರಿಯೇ ಮನೆಗೆ ಬರುತ್ತಿದ್ದುದು. ಮೇಘನಾಳಿಗೆ ಹೊತ್ತು ಕಳೆಯುವುದೇ ಕಷ್ಟ ಎನಿಸಿ, ತಾನೂ ಕೆಲಸಕ್ಕೆ ಪ್ರಯತ್ನಿಸಲೇ ಎಂದು ಗಂಡನ ಬಳಿ ಕೇಳಿದಳು. ಅದಕ್ಕವನು ಏನೂ ಬೇಡ ನಾನು ತರುತ್ತಿರುವ ಸಂಬಳ ಸಾಲುತ್ತಿಲ್ಲವೇ? ಹೆಂಡತಿಯಿಂದ ದುಡಿಸಿಕೊಂಡು ಶ್ರೀಧರ ಸಂಸಾರ ಮಾಡುತ್ತಿದ್ದಾನೆಂದು ಅವರಿವರು ಹೇಳಬೇಕಾ? ಎಂದು ಅವಳ ಬಾಯಿ ಮುಚ್ಚಿಸಿದ. ಆ ಹೊತ್ತಿಗೆ ಅವಳು ಹಿಂದೆ ತೆಗೆದುಕೊಂಡಿದ್ದ ಬ್ಯಾಂಕಿಂಗ್ ಎಗ್ಸಾಮಿನಲ್ಲಿ ಪಾಸಾಗಿದ್ದುದು ತಿಳಿದು ಅವಳಿಗೆ ಸಂತಸವಾಗಿತ್ತು. ಪಾಸಾಗಿದ್ದರೂ ಏನು ಪ್ರಯೋಜನ. ಕೆಲಸಕ್ಕೆ ಹೋಗೋಣವೆಂದರೆ ಗಂಡನ ನಿಷ್ಠೂರದ ಮಾತಿನಿಂದ ಸುಮ್ಮನಾದಳು.
ಅಷ್ಟರಲ್ಲಿ ತಾನು ಗರ್ಭಿಣಿ ಎನ್ನುವ ಸಂತಸದ ಸುದ್ದಿ ಮೇಘನಾಳಿಗೆ ಹಿತವೆನಿಸಿತು. ಈ ವಿಚಾರ ಗಂಡನಿಗೆ ತಿಳಿಸಿ ತಾಯಿಯ ಮನೆಗೆ ಹೋಗಿ ಒಂದು ವಾರವಾದರೂ ಇದ್ದು ಬರುತ್ತೇನೆಂದು ಕೇಳಿದಳು. ಏನೂ ಬೇಡ ಅವರೇ ಇಲ್ಲಿಗೆ ಬಂದು ನಿನ್ನ ಬಯಕೆ ತೀರಿಸಲಿ ಎಂದ. ಗಂಡನ ನಡವಳಿಕೆಯೇ ಮೇಘನಾಳಿಗೆ ಅರ್ಥವಾಗಲಿಲ್ಲ. ಮಗುವಿನ ಆಗಮನ, ಹೆಂಡತಿ ಗರ್ಭಿಣಿ ಎಂಬ ಯಾವ ಸಂತಸ ಇಲ್ಲದೆ ನಿರ್ಲಿಪ್ತನಾಗಿದ್ದ.
ಇತ್ತೀಚೆಗೆ ಶ್ರೀಧರನ ನಡತೆಯ ಬಗ್ಗೆ ಕೆಲವು ಒಡಕು ಸುದ್ದಿಗಳು ಮೇಘನಾಳಿಗೆ ಕೇಳಬಂದಿತು. ಅವನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಸಹೋದ್ಯೋಗಿಯಾದ ಶೃತಿಯೊಂದಿಗೆ ಹೆಚ್ಚಿನ ಒಡನಾಟವಿದೆ. ಅವರಿಬ್ಬರೂ ತಿರುಗದ ಹೋಟೆಲುಗಳಿಲ್ಲ, ಜಾಗವಿಲ್ಲ ಎಂಬ ಸುದ್ದಿ ಅವಳಿಗೆ ಆತಂಕವನ್ನುಂಟು ಮಾಡಿತ್ತು. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಅವನು ಮನೆಗೂ ಸರಿಯಾಗಿ ಹಣವನ್ನು ಕೊಡದೆ ಇರುವಷ್ಟರಲ್ಲೇ ತೂಗಿಸು. ನನ್ನನ್ನೇನೂ ಕೇಳಬೇಡ ಎಂದು ರೇಗುತ್ತಿದ್ದ. ಇದರಿಂದ ಅವಳ ಸಂಶಯ ಇನ್ನಷ್ಟು ಬಲವಾಯಿತು. ಅವಳ ಜೊತೆ ಓಡಾಡಲು ದುಡ್ಡು ಬೇಕು. ಮನೆಗೆ ಕೊಡುವ ದುಡ್ಡಿಗೆ ಖೋತಾ ಮಾಡುತ್ತಿದ್ದಾನೆ ಎನಿಸಿತು. ಒಮ್ಮೆ ಶ್ರೀಧರ್ ಮೇಘನಾಳ ಬಳಿ ನನಗೆ ನಿನ್ನನ್ನು ಮದುವೆಯಾಗುವ ಆಸೆ ಇರಲಿಲ್ಲ. ಕಾರಣ ನಾನು ನನ್ನ ಆಪ್ತ ಗೆಳತಿಯಾದ ಶೃತಿಯನ್ನು ಮೊದಲಿನಿಂದಲೂ ಪ್ರೀತಿಸುತ್ತಿದ್ದೆ. ಆದರೆ ಜಾತಿ ವಿಚಾರದಿಂದಾಗಿ ಮಾವನ ಬಳಿ ಅವಳನ್ನು ಮದುವೆಯಾಗುತ್ತೇನೆಂದು ಹೇಳುವ ಧೈರ್ಯ ನನಗೆ ಸಾಲದೆ ಅವರ ಇಚ್ಛೆ ಹಾಗೂ ಬಲವಂತಕ್ಕೆ ನಿನ್ನನ್ನು ಮದುವೆಯಾಗುವ ಹಾಗಾಯಿತು. ಆದರೆ ನನಗೆ ಶೃತಿಯನ್ನು ಬಿಟ್ಟು ಬದುಕುವ ಶಕ್ತಿ ಇಲ್ಲ ಎಂದ ಅವನ ಮಾತನ್ನು ಕೇಳಿದ ಮೇಘನಾಳಿಗೆ ಆಶ್ಚರ್ಯ ಹಾಗೂ ಅವನ ಬಗ್ಗೆ ತಿರಸ್ಕಾರ ಉಂಟಾಯಿತು.
ಒಂದು ಹುಡುಗಿಗೆ ಇಷ್ಟವಿಲ್ಲದೆ ತಾಳಿ ಕಟ್ಟಿ ಅವಳು ಗರ್ಭಿಣಿಯಾಗಿರುವಾಗ ಇನ್ನೊಂದು ಹುಡುಗಿಯ ಜೊತೆ ಸಂಬಂಧವಿದೆ ಎಂದು ಹೇಳುತ್ತಿರುವ ಗಂಡನ ಬಗ್ಗೆ ಇದ್ದ ಅಲ್ಪಸ್ವಲ್ಪ ಗೌರವ ಮಾಯವಾಗಿ ಅವನ ಬಗ್ಗೆ ಅಸಹ್ಯವೆನಿಸಿತು. ಒಂದು ಹೆಣ್ಣಿನ ಬಾಳು ತನ್ನಿಂದ ಹಾಳಾಯಿತು ಎಂದು ಯೋಚಿಸಲಾರದಷ್ಟು ಅನಾಗರಿಕನಾ? ಎನಿಸಿ ದುಃಖ ಆಯಿತು.
ಶ್ರೀಧರ ಅವಳ ಬಳಿ ಬಂದು ದಯವಿಟ್ಟು ನೀನು ದೊಡ್ಡ ಮನಸ್ಸು ಮಾಡಿ ಈ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿದರೆ ನಾನು ಶೃತಿಯ ಇಚ್ಛೆಯಂತೆ ಅವಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ. ಕೈ ಹಿಡಿದ ಹೆಂಡತಿಯ ಬಳಿ ಬಂದು ಇನ್ನೊಬ್ಬಳನ್ನು ಮದುವೆಯಾಗುತ್ತೇನೆ ಸಹಾಯ ಮಾಡು ಎನ್ನುವ ಗಂಡನ ಮಾತಿಗೆ ಅಳಬೇಕೋ ನಗಬೇಕೋ ಎಂದು ತಿಳಿಯದ ಮೇಘನಾಳಿಗೆ ದುಃಖ ಉಕ್ಕಿ ಬಂತು. ಇದೇ ಹೆಣ್ಣು ಬೇರೊಬ್ಬನನ್ನು ಮದುವೆಯಾಗುತ್ತೇನೆಂದು ಗಂಡನ ಬಳಿ ವಿಚ್ಛೇದನ ಅಪೇಕ್ಷಿಸಿದ್ದರೆ ಅವಳಿಗೆ ಅವನಿಂದ ಕಪಾಳ ಮೋಕ್ಷವಾಗುತ್ತಿತ್ತು. ಆಗ ಇದೇ ಸಮಾಜ ಹೆಣ್ಣನ್ನು ಅವಮಾನಿಸಿ, ಹೀನಾಯವಾಗಿ ಕಾಣುವ ಒಂದು ಸನ್ನಿವೇಶ ಅವಳ ಕಣ್ಮುಂದೆ ಹಾದುಹೋಯಿತು.
ಬಹುಶಃ ಕಾನೂನೇನಿದ್ದರೂ ಹೆಣ್ಣಿಗೆ ಮಾತ್ರ, ಗಂಡಸಿಗೆ ಸಹಕಾರ….. ಇಷ್ಟೆ ಅಲ್ಲವೇ ಪ್ರಪಂಚ ಎನಿಸಿ ಒಂದು ಕ್ಷಣ ಏನೂ ಮಾತನಾಡದೆ ಮೇಘನಾ ರೂಮಿಗೆ ಹೋಗಿ ಮನಸಾರೆ ಅತ್ತಳು.
ತಾನು ಒಪ್ಪಿಗೆ ಕೊಡದಿದ್ದರೂ ಖಂಡಿತಾ ಶ್ರೀಧರ ಆ ಹುಡುಗಿಯನ್ನು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾಗಿದೆ, ಹಿರಿಯರು ಜಾತಕ ನೋಡಿ ಮಾಡಿದ ಮದುವೆ ಯಾವತ್ತೂ ಬೇರಾಗುವುದಿಲ್ಲ, ಸುಖೀ ಸಂಸಾರವಾಗುತ್ತದೆ ಎಂದ ಹಿರಿಯರ ಮಾತು ಅವಳ ನೆನಪಿಗೆ ಬಂತು. ಹಾಗಾದರೆ ತನ್ನ ಬಾಳು? ಪ್ರೀತಿಸಿ ಮದುವೆಯಾದರೆ ಅದು ಶಾಶ್ವತವಾ? ತನ್ನ ಮುಂದಿನ ಜೀವನದ ಗತಿ? ತನ್ನ ಕರುಳಿನ ಕುಡಿಗಾಗಿ ಬದುಕಬೇಕೆಂಬ ನಿರ್ಧಾರ ಮಾಡಿದಳು.
ತನಗೆ ಇದುವರೆಗೂ ಆಶ್ರಯವಾಗಿದ್ದ ಮನೆ ಓನರ್ ಸುಶೀಲಮ್ಮನ ಬಳಿ ತನ್ನ ಮತ್ತು ಶ್ರೀಧರನ ಬಾಳಿನ ಅಪಶೃತಿ ಎಲ್ಲವನ್ನೂ ತಿಳಿಸಿ ಅತ್ತಳು. ಹಿರಿಯರಾದ ಆಕೆ ಶ್ರೀಧರನ ಬಳಿ ಬಂದು ಹೇಳಿದ ಬುದ್ಧಿ ಮಾತೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿ ವ್ಯರ್ಥವಾಯಿತು. ಶ್ರೀಧರ ಹೇಳದೆ ಕೇಳದೆ ಮನೆ ಬಿಟ್ಟು ಹೊರಟುಹೋದ.
`ನೋಡು, ನೀನೀಗ ಬಸುರಿ ಹುಡುಗಿ. ಕಣ್ಣಲ್ಲಿ ನೀರು ಹಾಕುವುದರಿಂದ ಯಾವ ಪ್ರಯೋಜನ ಇಲ್ಲ. ನಿನ್ನ ತಂದೆ, ತಾಯಿಗೆ ಈ ವಿಚಾರ ತಿಳಿಸು. ಅವರು ಏನು ಹೇಳುತ್ತಾರೋ ಅದರಂತೆ ಮಾಡು,’ ಎಂದು ಸುಶೀಲಮ್ಮ ಹೇಳಿದರು.
ಅದೇ ಸರಿ ಎಂದುಕೊಂಡು ಮೇಘನಾ ತವರುಮನೆಗೆ ಬಂದಳು. ಆದರೆ ಅವಳಿಗೆ ಅಲ್ಲಿ ಆಗಿದ್ದು ನಿರಾಶೆ, ಅವಮಾನ. ಕಾರಣ ಚೈತ್ರಾಳಿಗೆ ಮದುವೆ ನಿಶ್ಚಯವಾಗಿತ್ತು. ನೀನು ಗಂಡ ಬಿಟ್ಟವಳೆಂದು ಬೀಗರಿಗೆ ಗೊತ್ತಾದರೆ ಆಗಲಿರುವ ನಿಶ್ಚಿತಾರ್ಥ ಮುರಿದು ಹೋಗುತ್ತದೆ. ಹೆಣ್ಣು ಯಾವತ್ತೂ ತಗ್ಗಿಬಗ್ಗಿ ನಡೆಯಬೇಕು. ಅದು ಬಿಟ್ಟು ಗಂಡಿಗಿಂತ ನಾನೇನು ಕಡಿಮೆ ಎಂದು ಪೈಪೋಟಿ ಮಾಡಿದರೆ ಹೀಗೆ ಆಗುವುದೆಂದು ಅವಳನ್ನೇ ದೂಷಿಸಿದರು. ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು ಎಂದುಕೊಂಡು ಮೇಘನಾ ದುಃಖಿಸಿದಳು.
ನಿನ್ನ ಜೀವನ ನಿನ್ನದು, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತು ತಾಯಿಯಿಂದ ಬಂದಾಗ ನಿರಾಶಳಾದ ಮೇಘನಾ, ತಿರುಗಿ ಸುಶೀಲಮ್ಮನ ಬಳಿ ಬಂದು ತನ್ನ ಅಳಲನ್ನು ತೋಡಿಕೊಂಡಳು. ಆಕೆ ಅವಳಿಗೆ ಧೈರ್ಯ ತುಂಬಿ ದೇವರ ಇಚ್ಛೆ ಏನಿದೆಯೋ ಹಾಗೆ ಆಗುತ್ತದೆ. ನಾನೇ ನಿನ್ನ ಬಾಣಂತನ ಮಾಡುತ್ತೇನೆ. ನೀನು ಇಲ್ಲೇ ಇರು. ನೀನು ನನಗೆ ಮಗಳಿದ್ದಂತೆ. ನೀನೇನು ಬಾಡಿಗೆ ಕೊಡಬೇಡ ಎಂದರು. ಅವರ ವಿಶಾಲ ಹೃದಯಕ್ಕೆ ಸೋತ ಮೇಘನಾ ತನ್ನ ಮುಂದಿನ ಭವಿಷ್ಯ ನೆನೆದು ನಡುಗಿದಳು.
ಬಹಳವಾಗಿ ಯೋಚಿಸಿದ ಮೇಘನಾ ತನ್ನ ಗೆಳತಿಯಾದ ಅರುಣಾಳ ಸಹಾಯದಿಂದ ಕೆಲಸಕ್ಕಾಗಿ ಪ್ರಯತ್ನಿಸಿದಳು. ಕೆಲವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿದ್ದುದು ಈಗ ಅವಳ ಭವಿಷ್ಯ ನಿರ್ಧರಿಸಲು ದಾರಿಯಾಯಿತು. ಅವಳಿಗೆ 7 ತಿಂಗಳು ತುಂಬಿದಾಗ ಸೀಮಂತ ಶಾಸ್ತ್ರವನ್ನು ಸುಶೀಲಮ್ಮನೇ ಸರಳವಾಗಿ ನೆರವೇರಿಸಿದರು.
ಮೇಘನಾ ತಾಯಿಯನ್ನು ನೆನೆದು ದುಃಖಿಸಿದಳು. ಸುಶೀಲಮ್ಮನ ಕಾಲಿಗೆ ನಮಸ್ಕರಿಸಿದ ಮೇಘನಾ, `ಹೆತ್ತ ತಾಯಿ ದೂರ ಮಾಡಿದರೂ ನೀವು ನನಗೆ ಆಶ್ರಯ ನೀಡಿದಿರಿ. ನೀವು ಇಲ್ಲದಿದ್ದರೆ ನನ್ನ ಜೀವನದ ಗತಿ ಏನಾಗುತ್ತಿತ್ತು? ನನ್ನ ಪಾಲಿನ ನಿಜವಾದ ದೇವರು ನೀವೇ,’ ಎಂದಳು.
ಅವಳನ್ನು ಸಮಾಧಾನಿಸಿ ಸುಶೀಲಮ್ಮ ನಾನು ಹೆತ್ತ ಮಗ ನಮ್ಮನ್ನು ದೂರ ಮಾಡಿ, ವಿದೇಶದ ಹುಡುಗಿಯನ್ನು ಮದುವೆಯಾಗಿ ನಮ್ಮನ್ನು ಕಡೆಗಣಿಸಿ, ವಿದೇಶದ ವ್ಯಾಮೋಹಕ್ಕೆ ಬಲಿಯಾದ. ಋಣ ಎಂಬಂತೆ ಪ್ರತಿ ತಿಂಗಳು ಹಣ ಕಳಿಸುತ್ತಾನೆ. ಮಗನ ಪ್ರೀತಿ, ಆಸರೆ ಸಿಗದ ಮೇಲೆ ಹಣದಿಂದ ಏನು ಪ್ರಯೋಜನ? ಏನೋ ಜಮೀನಿನಿಂದ ಅಕ್ಕಿ ಕಾಳು ಬರುತ್ತದೆ. ನೀನೊಬ್ಬಳು ನಮಗೆ ಭಾರವಲ್ಲ ಎಂದರು.
ಮಗು ಹುಟ್ಟಿದ ಮೇಲೆ ಮತ್ತೆ ಇನ್ನಷ್ಟು ಭಾರವಾಗಬಾರದು. ಅಷ್ಟರಲ್ಲಿ ಕೆಲಸ ಹುಡುಕಿ ತನ್ನ ಮಗುವನ್ನು ಸಾಕುವಂತಾಗಬೇಕೆಂದು ತೀರ್ಮಾನಿಸಿದಳು ಮೇಘನಾ.
ತುಂಬು ಗರ್ಭಿಣಿಯಾದ ಮೇಘನಾ ನೋವು ಅನುಭವಿಸಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದಳು. ಮಗು ಮೇಘನಾಳ ತದ್ರೂಪು. ಮಗುವನ್ನು ನೋಡಿ ಸಂತಸಪಡುವುದಕ್ಕಿಂತ ದುಃಖಪಟ್ಟಳು. ಕುತೂಹಲ ಉತ್ಸಾಹದಿಂದ ನೋಡಲು ಬರಬೇಕಿದ್ದ ಗಂಡನ ನಿರೀಕ್ಷೆಯಲ್ಲಿರಬೇಕಾಗಿದ್ದ ತಾನು, ತಂದೆ ತಾಯಿ ಇದ್ದೂ ಇಲ್ಲದಂತಾಗಿದ್ದು, ತನ್ನ ಮಗುವಿಗೆ ತಂದೆ ಇದ್ದೂ ದೂರವಾಗಿದ್ದರಿಂದ ತಾನು ತನ್ನ ಮಗು ನತದೃಷ್ಟರಂತೆನಿಸಿ ದುಃಖ ಒತ್ತರಿಸಿ ಬಂದಿತು.
ಬಹುಶಃ ಕೆಲವರ ಹಣೆಯಲ್ಲಿ ಇಷ್ಟು ವರ್ಷ ಕಾಲ ಗಂಡನೊಂದಿಗೆ ಬಾಳುವ ಭಾಗ್ಯ ಎಂದು ಬರೆದಿರುತ್ತದೆ ಅಷ್ಟೆ. ಇದಕ್ಕೆ ತನ್ನ ಬದುಕು ಹೊರತಾಗಿಲ್ಲ ಎನಿಸಿ ವ್ಯಥೆಯಾಯಿತವಳಿಗೆ.
ಮಗವಿಗೆ 4 ತಿಂಗಳು ತುಂಬುವ ಹೊತ್ತಿಗೆ ಅವಳು ಕಾಯುತ್ತಿದ್ದ ಕೆಲಸದ ಅವಕಾಶಗಳು ಬರತೊಡಗಿದವು. ಅವಳಿಗೆ ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಸಿಕ್ಕಿದಾಗ ಒಂದೆಡೆ ಸಂತೋಷ. ಮತ್ತೊಂದೆಡೆ ಈ ಹಸುಗೂಸನ್ನು ಹೇಗೆ ಬಿಟ್ಟು ಹೋಗುವುದು ಎನ್ನುವ ತೊಳಲಾಟ…..ಬಸ್ ಒಂದೆಡೆ ಸಡನ್ ಬ್ರೇಕ್ ಹಾಕಿದಾಗ ನೆನಪಿನಾಳದಿಂದ ಹೊರಬಂದಳು ಮೇಘನಾ.
ಕೆಲಸ ಮಾಡುತ್ತಿರುವ ಕಂಪನಿಯ ವಾತಾರಣಕ್ಕೆ ಮೇಘನಾ ಹೊಂದಿಕೊಂಡು ಎಲ್ಲಾ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಳು. ಇನ್ನೂ ಚಿಕ್ಕ ವಯಸ್ಸಿನ ಮೇನೇಜರ್ ಅಶೋಕ್ ಗೃಹಸ್ಥರಾಗಿದ್ದು, ಮೇಘನಾಳನ್ನು ಸ್ವಂತ ತಂಗಿಯಂತೆ ನೋಡಿಕೊಳ್ಳುತ್ತಿದ್ದರು. ಚಿಕ್ಕ ಮಗುವಿದ್ದ ಅವಳ ಪರಿಸ್ಥಿತಿಯನ್ನು ತಿಳಿದಿದ್ದ ಅಶೋಕ್‌ಬೇಗ ಮನೆಗೆ ಹೋಗುವಂತೆ ಅನುಮತಿ ನೀಡಿದ್ದರು. ಅಲ್ಲದೆ ಅವಳು ಕೇಳಿದಾಗ ಕಾರಣ ಕೇಳದೆ ರಜೆ ಮಂಜೂರು ಮಾಡುತ್ತಿದ್ದರು. ಇದರಿಂದಾಗಿ ಯಾವ ಕಿರಿಕಿರಿ ಇಲ್ಲದೆ ಮೇಘನಾ ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಳು.
ಒಮ್ಮೆ ಮೇನೇಜರ್ ಅಶೋಕ್ ಚೇಂಬರ್‌ನಿಂದ ಮೇಘನಾಗೆ ಕರೆ ಬಂದಿತು. ಅವಳು ಒಳಗೆ ಹೋದಳು. ಚೇಂಬರ್‌ನಲ್ಲಿ ಅವರ ಎದುರಿಗೆ ಮತ್ತೊಬ್ಬ ವ್ಯಕ್ತಿ ಕುಳಿತಿದ್ದರು. ಮೇನೇಜರ್ ಆತನನ್ನು ಮೇಘನಾಳಿಗೆ ಪರಿಚಯಿಸುತ್ತಾ, “ಇವರ ಹೆಸರು ಗೌರವ್. ನನ್ನ ಆತ್ಮೀಯ ಗೆಳೆಯ. ನಮ್ಮ ಕಂಪನಿಯಲ್ಲಿ ಷೇರುದಾರರಾಗಲು ಬಂದಿದ್ದಾರೆ. ಅದಕ್ಕೆ ಸಂಬಂಧಪಟ್ಟ ಎಲ್ಲ ಪ್ರೊಸೀಝರ್ ತಿಳಿಸಿ,” ಎಂದರು.
ಮೇಘನಾ ಆತನಿಗೆ ನಮಸ್ಕರಿಸಿ, ಅವರನ್ನು ತನ್ನ ಚೇಂಬರಿಗೆ ಕರೆದೊಯ್ದು, ಕಂಪನಿಗೆ ಸಂಬಂಧಿಸಿದ ಕಡತಗಳಿಗೆ ಆತನಿಂದ ಸಹಿ ಪಡೆದು ಅದಕ್ಕೆ ಪೂರಕವಾಗಿ ಫೋಟೋ ಹಾಗೂ ಗುರುತಿನ ಚೀಟಿಯನ್ನು ತರಬೇಕೆಂದು ನಿಧಾನವಾಗಿ ವಿವರಿಸಿದಳು. ಅವಳ ತಾಳ್ಮೆ, ಕೆಲಸದ ಮೇಲಿನ ಗಮನ ಇತರರೊಂದಿಗೆ ಸಹನೆಯಿಂದ ಮಾತನಾಡುವುದನ್ನು ಗೌರವ್ ಸೂಕ್ಷ್ಮವಾಗಿ ಗಮನಿಸಿದ. ಅವಳು ಹೇಳಿದ ಎಲ್ಲಾ ಪ್ರೊಸೀಝರ್‌ಗಳನ್ನು ಮುಗಿಸಿದ. ಮುಂದಿನ ವಾರ ಬಂದು ನಿಮ್ಮ ಬಾಂಡ್ ಹಾಗೂ ಪಾಸ್‌ಬುಕ್ ತೆಗೆದುಕೊಳ್ಳಿ ಎಂದವಳಿಗೆ ಥ್ಯಾಂಕ್ಸ್ ಹೇಳಿ ಹೊರಟುಹೋದ.
ಎಷ್ಟು ಹೊತ್ತಿಗೆ ಕೆಲಸ ಮುಗಿಸಿ ಮನೆಗೆ ಹೋಗಿ ಮಗುವನ್ನು ನೋಡುತ್ತೇನೋ ಎನ್ನುವ ಧಾವಂತ ಅವಳಿಗೆ ಇತ್ತು. ಆ ಚಿಕ್ಕ ಮಗೂ ಕೂಡ ಮೇಘನಾಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಂತೆ ಹಠ ಮಾಡದೆ, ಚಂಡೀ ಹಿಡಿಯದೆ ಬಹಳ ಸೌಮ್ಯವಾಗಿ ಹೊಂದಿಕೊಂಡಿತ್ತು. ಮಗುವಿಗೆ ವಿಜೃಂಭಣೆಯಿಂದ ನಾಮಕರಣ ಮಾಡುವ ಮನಸ್ಸಿಲ್ಲದ ಮೇಘನಾ, ಅನಘಾ ಎಂದು ಹೆಸರಿಟ್ಟಳು. ತನ್ನ ಬಾಳಿನಂತಾಗದೆ, ತನ್ನ ಮಗಳಾದರೂ ಸುಖವಾಗಿರಲಿ ಎಂದು ಯಾವಾಗಲೂ ಆಶಿಸುತ್ತಿದ್ದಳು. ಬಾಸ್ ಒಂದು ವಾರ ರಜ ಹಾಕಿದ್ದರಿಂದ ಆ ದಿನ ಮೇಘನಾಗೆ ವಿಪರೀತ ಕೆಲಸವಿತ್ತು. ಬೇರೆ ಬ್ರಾಂಚಿನಿಂದ ಬಂದಿದ್ದ ಕಾಗದ ಪತ್ರಗಳ ಪರಿಶೀಲನೆ, ಉತ್ತರಿಸುವ ಜವಾಬ್ದಾರಿ, ಷೇರುದಾರರ ಡಿವಿಡೆಂಟ್ ವಿತರಿಸುವ ಹೆಚ್ಚಿನ ಒತ್ತಡದ, ಬಿಡುವಿಲ್ಲದ ಕೆಲಸದಿಂದ ಆಯಾಸವಾಗಿ ಕಾಫಿ ತರಲು ಹೇಳಿದಳು. ತಲೆ ನೋಯುತ್ತಿದ್ದುದರಿಂದ ಒಂದು ಕ್ಷಣ ಸೀಟಿಗೆ ಒರಗಿಕೊಂಡಳು. ಅಷ್ಟರಲ್ಲಿ ಗೌರವ್ ತನ್ನನ್ನು ಭೇಟಿಯಾಗಲು ಬಂದಿದ್ದಾರೆಂದು ಕೇಳಿ ತಲೆ ನೋಯುತ್ತಿದ್ದರೂ ವಿಧಿಯಿಲ್ಲದೆ ಚೇಂಬರ್‌ಗೆ ಬರಹೇಳಿದಳು. ಅವಳ ದಣಿದ ಮುಖ ಗಮನಿಸಿದ ಗೌರವ್, “ಸಾರಿ ನೀವು ಬಿಝಿಯಾಗಿದ್ದೀರಿ ಅನಿಸುತ್ತೆ. ಬೇಕಾದರೆ ನಾನು ನಾಳೆ ಬರುತ್ತೇನೆ,” ಎಂದು ಕಾಳಜಿ ತೋರಿಸಿದ.
“ಹಾಗೇನಿಲ್ಲ. ದಯವಿಟ್ಟು ಕುಳಿತುಕೊಳ್ಳಿ,” ಎಂದವಳೇ ಮತ್ತೊಂದು ಕಾಫಿ ತರಲು ಹೇಳಿದಳು.
“ಬನ್ನಿ, ಹೊರಗೆ ಹತ್ತಿರದ ಕ್ಯಾಂಟೀನ್‌ನಲ್ಲಿ ಕಾಫಿ ಕುಡಿಯೋಣ,” ಎಂದ ಗೌರವ್.
“ಪರವಾಗಿಲ್ಲ. ಮತ್ತೊಂದು ದಿನ ಬರುತ್ತೇನೆ,” ಎಂದು ನಯವಾಗಿ ತಿರಸ್ಕರಿಸಿ, ಅವನಿಗೆ ಒಪ್ಪಿಸಬೇಕಾಗಿದ್ದ ದಾಖಲಾತಿ ಪುಸ್ತಕಗಳನ್ನು ನೀಡಿದಳು.
ಕೆಲಸ ಮುಗಿದ ಮೇಲೂ ಅವಳ ಮುಂದೆ ಹೆಚ್ಚು ಹೊತ್ತು ಕುಳಿತರೆ ತಪ್ಪಾಗುತ್ತದೆ ಎಂದುಕೊಂಡ ಗೌರವ್ ಹೊರನಡೆದ. ಇದಾದ ನಂತರ ಅಶೋಕ್‌ನನ್ನು ಕಾಣುವ ಸಲುವಾಗಿ ಆಗಾಗ್ಗೆ ಬರುತ್ತಿದ್ದ. ಅಶೋಕ್ ಹಾಗೂ ಗೌರವ್ ಇಬ್ಬರೂ ಆತ್ಮೀಯ ಸ್ನೇಹಿತರು. ಹಾಗಾಗಿ ಆಗಾಗ್ಗೆ ಬರುತ್ತಾನೆಂದುಕೊಂಡಳು ಮೇಘನಾ. ಗೌರವ್ ಅಶೋಕ್ ಬಳಿ ಮೇಘನಾಳ ಬಗ್ಗೆ ಆಸಕ್ತಿಯಿಂದ ವಿಚಾರಿಸಿದಾಗ, ಅವಳ ಜೀವನದ ಕೆಲವು ವಿಚಾರಗಳನ್ನು ಸೂಕ್ಷ್ಮವಾಗಿ ವಿವರಿಸಿದರು ಅಶೋಕ್.
ಆದರೂ ಮೇಘನಾಳ ಮುಗುಳ್ನಗೆ, ಮುಗ್ಧ ದನಿ ಅವನಿಂದ ಮರೆಯಾಗದೆ ಅವಳತ್ತ ಆಕರ್ಷಿತನಾದ. ಅಶೋಕ್‌ರಿಂದ ಮೇಘನಾ ಒಂದು ಮಗುವಿನ ತಾಯಿ ಎಂದು ತಿಳಿದರೂ, ಪ್ರೀತಿ ಕುರುಡು ಎನ್ನುವಂತಾಗಿತ್ತು ಅವನಿಗೆ. ಕಾರಣ ಗೌರವ್ ಗೆ ತನ್ನ ಜೀವನದ ಆಕಸ್ಮಿಕ ಕಹಿ ಘಟನೆಯ ನೆನಪು ಅವನ ಮುಂದೆ ಸುಳಿದುಹೋಯಿತು.
(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)