ಬೆವರು ಮತ್ತು ತೈಲ ಸ್ರಾವದಿಂದಾಗಿ ಆಯ್ಲೀ ಸ್ಕಿನ್ ಮತ್ತಷ್ಟು ತೈಲಯುಕ್ತ, ನಿಸ್ತೇಜ ಆಗಿ ತೋರುತ್ತದೆ. ಹವೆಯಲ್ಲಿ ಬಿಸಿ ಮತ್ತು ಆರ್ದ್ರತೆ ಕೂಡಿದಾಗ ಕೆಂಪು ಕಲೆ ಗುಳ್ಳೆ ಮೊದಲಾದ ಸಮಸ್ಯೆಗಳು ತಲೆದೋರುತ್ತವೆ ಮತ್ತು ಚರ್ಮದಲ್ಲಿ ಕೊಳೆಯೂ ಸೇರಿಕೊಳ್ಳುತ್ತದೆ.
ತಾಜಾ ತ್ವಚೆಗಾಗಿ
ಬೆವರು ಮತ್ತು ತೈಲವನ್ನು ದೂರಗೊಳಿಸಲು ಮಾನ್ಸೂನ್ನಲ್ಲಿ ಚರ್ಮವನ್ನು ಸ್ವಚ್ಛವಾಗಿರಿಸಬೇಕು. ಸ್ಕ್ರಬಿಂಗ್ನಿಂದ ರೋಮ ರಂಧ್ರಗಳು ಸಂಪೂರ್ಣ ಸ್ವಚ್ಛವಾಗುತ್ತವೆ ಮತ್ತು ಮೊಡವೆಗಳು ಇಲ್ಲವಾಗುತ್ತವೆ. ಟೋನಿಂಗ್ ಸಹ ಇದೇ ರೀತಿಯಲ್ಲಿ ಉಪಯೋಗಿ ಎನಿಸುತ್ತದೆ.
ನೀವು ಮನೆಯಲ್ಲಿಯೇ ಫೇಶಿಯಲ್ ಸ್ಕ್ರಬ್ ತಯಾರಿಸಕೊಳ್ಳಬಹುದು. ಇದಕ್ಕಾಗಿ ಮೊಸರಿಗೆ ಅಕ್ಕಿಹಿಟ್ಟು ಅಥವಾ ಅರೆದ ಬಾದಾಮಿ ಮಿಶ್ರ ಮಾಡಿ. ಬೇಕಾದರೆ ಒಣಗಿಸಿ ಪುಡಿ ಮಾಡಿದ ನಿಂಬೆ ಅಥವಾ ಕಿತ್ತಳೆ ಸಿಪ್ಪೆಯನ್ನೂ ಸೇರಿಸಬಹುದು. ಇದನ್ನು ಮುಖಕ್ಕೆ ಹಚ್ಚಿ, ನಿಧಾನವಾಗಿ ಗುಂಡಾಗಿ ಉಜ್ಜಿ. ನಂತರ ನೀರಿನಿಂದ ತೊಳೆಯಿರಿ.
ಸೆನ್ಸಿಟಿವ್ ಅಥವಾ ಮೊಡವೆಯಿಂದ ಕೂಡಿದ ಚರ್ಮಕ್ಕೆ ಸ್ಕ್ರಬಿಂಗ್ ಮಾಡಬೇಡಿ. ಮೊಡವೆಗಳನ್ನು ದೂರ ಮಾಡಲು ಓಟ್ಸ್ ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಮಿಶ್ರಣ ಮಾಡಿ ವಾರಕ್ಕೆರಡು ಬಾರಿ ಹಚ್ಚಿರಿ.
ಈ ಕಾಲದಲ್ಲಿ ಹೂಗಳಿಂದ ತಯಾರಿಸಿದ ಯಾವುದಾದರೂ ಚರ್ಮದ ಟಾನಿಕ್ ಅಥವಾ ಫ್ರೆಶ್ನರ್ ಉಪಯುಕ್ತವಾಗಿರುತ್ತದೆ. ಗುಲಾಬಿ ಜಲ ಒಂದು ನೈಸರ್ಗಿಕ ಟೋನರ್ ಆಗಿದೆ. ಫ್ರಿಜ್ನಲ್ಲಿರಿಸಿದ ರೋಸ್ ವಾಟರ್ ಅಥವಾ ಸ್ಕಿನ್ ಟಾನಿಕ್ನಿಂದ ಹತ್ತಿಯ ಸಹಾಯದಿಂದ ಮುಖ ಸ್ವಚ್ಛಗೊಳಿಸಿ. ವೆಟ್ ಟಿಶ್ಶೂನಿಂದ ಮುಖವನ್ನು ಒರೆಸಿ ಕಾಂಪ್ಯಾಕ್ಟ್ ಪೌಡರ್ ಹಚ್ಚಿ. ಇದರಿಂದ ತ್ವಚೆಯಲ್ಲಿ ತಾಜಾತನ ಉಂಟಾಗುತ್ತದೆ.
ಮುಖದ ಮೇಲೆ ಕೆಂಪು ಕಲೆ, ಮೊಡವೆ ಅಥವಾ ಗುಳ್ಳೆಗಳಾಗಿದ್ದರೆ ದಿನಕ್ಕೆರಡು ಸಲ ಮೆಡಿಕೇಟೆಡ್ ಸೋಪ್ ಅಥವಾ ಕ್ಲೆನ್ಸರ್ನಿಂದ ಮುಖ ತೊಳೆಯಿರಿ. ಒಂದು ಆ್ಯಂಟಿಸೆಪ್ಟಿಕ್ ಲೋಶನ್ ಮತ್ತು ರೋಸ್ವಾಟರ್ನ ಸಮಪ್ರಮಾಣದ ಮಿಶ್ರಣದಿಂದ ದಿನಕ್ಕೆ 4-5 ಸಲ ಮುಖವನ್ನು ಸ್ವಚ್ಛಗೊಳಿಸಿ. ಗುಳ್ಳೆಗಳ ಮೇಲೆ ಚಂದನದ ಪೇಸ್ಟ್ ಹಚ್ಚಿರಿ.
ಮಳೆಗಾಲದಲ್ಲಿ ಆಗಾಗ ಮುಖವನ್ನು ನೀರಿನಿಂದ ತೊಳೆಯುತ್ತಿರಿ. ದಿನವೆಲ್ಲ ಚರ್ಮದ ಮೇಲೆ ಕೊಳೆ ಸೇರುವುದರಿಂದ ರಾತ್ರಿ ಅದನ್ನು ಸ್ವಚ್ಛಗೊಳಿಸಿ. ಮಾನ್ಸೂನ್ನಲ್ಲಿ ಶರೀರದ ನೀರಿನಂಶ ಬೆವರಿನ ರೂಪದಲ್ಲಿ ಹೊರಗೆ ಹೋಗುತ್ತದೆ, ಆದ್ದರಿಂದ ಆದಷ್ಟು ಹೆಚ್ಚು ನೀರು ಕುಡಿಯಿರಿ.
ಬಿಸಿ ಟೀಗೆ ಬದಲಾಗಿ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿದ ಐಸ್ ಟೀ ಕುಡಿಯಿರಿ.
ನಿಮ್ಮ ಚರ್ಮ ಸಾಮಾನ್ಯವಾದದ್ದಾಗಲೀ ಅಥವಾ ಆಯ್ಲೀ ಆಗಿರಲಿ, ಬೇವು ಮತ್ತು ತುಳಸಿಯ ಅಂಶದಿಂದ ಕೂಡಿದ ಫೇಸ್ವಾಶ್ನ್ನು ಬಳಸಿ.
ಆಯ್ಲಿ ಸ್ಕಿನ್
ತ್ವಚೆಯು ತೈಲಯುಕ್ತವಾಗಿದ್ದರೆ ಮೊಡವೆ, ಗುಳ್ಳೆ ಮತ್ತು ಕೆಂಪು ಕಲೆಗಳ ಸಮಸ್ಯೆ ಉಂಟಾಗುತ್ತದೆ.
ಚರ್ಮದ ಸ್ವಚ್ಚತೆ : ಕಡೆಲಹಿಟ್ಟು ಮತ್ತು ಮೊಸರು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ಮುಖ ತೊಳೆಯಿರಿ. ಒಣ ಪುದೀನಾ ಎಲೆಗಳ ಪುಡಿಯನ್ನೂ ಈ ಪೇಸ್ಟ್ಗೆ ಸೇರಿಸಬಹುದು.
ಟೋನರ್ : ರೋಸ್ ವಾಟರ್ ಮತ್ತು ಸೋರೆಕಾಯಿ ರಸವನ್ನು ಸಮಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ಸಾಮಾನ್ಯ ತ್ವಚೆ
ಬಾದಾಮಿ ಚೂರ್ಣವನ್ನು ಮೊಸರಿಗೆ ಸೇರಿಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಒದ್ದೆ ಕೈನಿಂದ ಗುಂಡಾಗಿ ಉಜ್ಜಿರಿ. ನಂತರ ಮುಖವನ್ನು ತೊಳೆಯಿರಿ.
2 ಚಮಚ ಜೇನುತುಪ್ಪ, ಸ್ವಲ್ಪ ಹಾಲು, ರೋಸ್ ವಾಟರ್ ಮತ್ತು ಒಣ ನಿಂಬೆ ಸಿಪ್ಪೆ ಚೂರ್ಣ ಇವುಗಳ ಪೇಸ್ಟ್ ತಯಾರಿಸಿ. ಇದನ್ನು ವಾರದಲ್ಲಿ 2 3 ಸಲ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 20 ನಿಮಿಗಳ ನಂತರ ತೊಳೆಯಿರಿ.
ಶುಷ್ಕ ಚರ್ಮ
2 ಚಮಚ ಬಾದಾಮಿ ಚೂರ್ಣಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. 5 ನಿಮಿಷಗಳ ನಂತರ ಹಗುರವಾಗಿ ಮುಖವನ್ನು ಉಜ್ಜಿ ನಂತರ ಮುಖ ತೊಳೆಯಿರಿ.
ಸಾಮಾನ್ಯ ಮತ್ತು ಶುಷ್ಕ ತ್ವಚೆಗೆ ಟೋನರ್ : 100 ಮಿ.ಲೀ. ರೋಸ್ ವಾಟರ್ಗೆ ಅರ್ಧ ಚಮಚ ಗ್ಲಿಸರಿನ್ ಸೇರಿಸಿ ಬಾಣಲೆಗೆ ಹಾಕಿ ಚೆನ್ನಾಗಿ ಕಲಸಿ. ನಂತರ ಫ್ರಿಜ್ನಲ್ಲಿಡಿ. ಇದನ್ನು ದಿನ ಬಳಸಿ.
ಶುಷ್ಕ ತ್ವಚೆಗೆ ಮಾಸ್ಕ್ : 3 ಚಮಚ ತೌಡು, 1 ಚಮಚ ಬಾದಾಮಿ ಚೂರ್ಣ ಮತ್ತು 1 ಮೊಟ್ಟೆಯ ಬಿಳುಪು ಇವುಗಳನ್ನು ಸೇರಿಸಿ. ಅದಕ್ಕೆ 1-1 ಚಮಚ ಜೇನುತುಪ್ಪ ಮತ್ತು ಮೊಸರನ್ನು ಮಿಶ್ರ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ವಾರದಲ್ಲಿ 1 2 ಸಲ ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ಮುಖ ತೊಳೆಯಿರಿ.
ಮೊಡವೆಯುಕ್ತ ಚರ್ಮ
ಚರ್ಮ ತೈಲಯುಕ್ತವಾಗಿದ್ದು, ಮೊಡವೆಗಳು ಏಳುತ್ತಿದ್ದರೆ, ಆಯ್ಲೀ ಕ್ರೀಮ್ ಮತ್ತು ಮಾಯಿಶ್ಚರೈಸರ್ ಬಳಸಬೇಡಿ. ಚರ್ಮ ಒಣಗಿದಂತೆ ತೋರಿದರೆ ಅದು ಮೇಲ್ಪದರದ ಕೃತಕ ಶುಷ್ಕತೆಯಾಗಿರುತ್ತದೆ. ಇದರಿಂದ ಬಿಡುಗಡೆ ಪಡೆಯಲು ಈ ಕೆಳಗಿನ ವಿಧಾನಗಳನ್ನು ಅಳವಡಿಸಿಕೊಳ್ಳಿ.
ಮೆಡಿಕೇಟೆಡ್ ಕ್ಲೆನ್ಸರ್ ಅಥವಾ ಫೇಸ್ವಾಶ್ನಿಂದ ಸ್ವಚ್ಛಗೊಳಿಸಿಕೊಳ್ಳಿ. ಮೊಡವೆಗಳ ಮೇಲೆ ಚಂದನದ ಪೇಸ್ಟ್ ಹಚ್ಚಿ ಅಥವಾ ಚಂದನದ ಪೇಸ್ಟ್ ನ್ನು ರೋಸ್ ವಾಟರ್ನೊಂದಿಗೆ ಬೆರೆಸಿ ಇಡೀ ಮುಖಕ್ಕೆ ಹಚ್ಚಿ. 20-30 ನಿಮಿಷಗಳ ನಂತರ ಮುಖ ತೊಳೆಯಿರಿ.
ಬೇವಿನ ಎಲೆಗಳನ್ನು 4 ಲೋಟ ನೀರಿನೊಂದಿಗೆ ಕಡಿಮೆ ಉರಿಯಲ್ಲಿ 1 ಗಂಟೆಯ ಕಾಲ ಕುದಿಸಿ. ರಾತ್ರಿಯಿಡೀ ಅದನ್ನು ಹಾಗೇ ಬಿಡಿ. ಬೆಳಗ್ಗೆ ಅದರ ಶೋಧಿಸಿದ ನೀರಿನಿಂದ ಮುಖ ತೊಳೆಯಿರಿ. ಆ ಎಲೆಗಳ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ.
– ಎಂ. ಸುಭದ್ರಾ
ಹೀಗೆ ಮಾಡಿ
ಆಗಾಗ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.
ರೋಮ ಕೂಪಗಳನ್ನು ಮುಚ್ಚಲು ತಣ್ಣನೆಯ ಸ್ಕಿನ್ ಟಾನಿಕ್ ಅಥವಾ ರೋಸ್ ವಾಟರ್ನಿಂದ ಟೋನಿಂಗ್ ಮಾಡಿ.
ಒಂದು ಫೇಶಿಯಲ್ ಸ್ಕ್ರಬ್ನ್ನು ವಾರದಲ್ಲಿ 2 ಸಲ ಬಳಸಿ.
ಮೇಕಪ್, ಬೆವರು ಮತ್ತು ತೈಲಾಂಶವನ್ನು ಹೋಗಲಾಡಿಸಲು ರಾತ್ರಿ ಚರ್ಮವನ್ನು ಸ್ವಚ್ಛಗೊಳಿಸಿ.
ಚರ್ಮದಲ್ಲಿ ತಾಜಾತನ ಉಂಟಾಗಲು ಆಗಾಗ ಮುಖವನ್ನು ವೆಟ್ ಟಿಶ್ಯೂನಿಂದ ಒರೆಸಿ.
ಹೀಗೆ ಮಾಡಬೇಡಿ
ಹುರಿದ ಅಥವಾ ಸ್ಟಾರ್ಚ್ಯುಕ್ತ ಆಹಾರ ಸೇವನೆ ಮಾಡಬೇಡಿ.
ಮೊಡವೆಯಿಂದ ಕೂಡಿದ ಮತ್ತು ಆಯ್ಲಿ ಸ್ಕಿನ್ಗೆ ಕ್ರೀಮ್ ಅಥವಾ ಮಾಯಿಶ್ಚರೈಸರ್ ಬಳಸಬೇಡಿ.
ಸಾಬೂನಿನಿಂದ ಮುಖವನ್ನು ದಿನಕ್ಕೆ 3ಕ್ಕಿಂತ ಹೆಚ್ಚು ಸಲ ತೊಳೆಯಬೇಡಿ.
ಕೈ ತೊಳೆಯದೆ ಮುಖವನ್ನು ಮುಟ್ಟಬೇಡಿ ಮತ್ತು ಮೊಡವೆ ಅಥವಾ ಗುಳ್ಳೆಗಳನ್ನು ಕೆರೆಯಲು ಜಿಗುಟಲು ಪ್ರಯತ್ನಿಸಬೇಡಿ.
ಮಾನ್ಸೂನ್ ಫೇಸ್ ಪ್ಯಾಕ್
ಮುಲ್ತಾನಿ ಮಿಟ್ಟಿ ತಂಪಾಗಿರುತ್ತದೆ ಮತ್ತು ತೈಲಾಂಶವನ್ನು ಒಣಗಿಸುತ್ತದೆ. 1 ಚಮಚ ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್ನಲ್ಲಿ ಸೇರಿಸಿ ಮುಖಕ್ಕೆ ಹಚ್ಚಿ. 15-20 ನಿಮಿಷಗಳ ನಂತರ ಮುಖ ತೊಳೆಯಿರಿ.
ಸೌತೆಕಾಯಿ ರಸ ಅಥವಾ ತಿರುಳಿಗೆ 2 ಚಮಚ ಹಾಲಿನ ಪುಡಿ ಮತ್ತು 1 ಚಮಚ ಮೊಟ್ಟೆಯ ಬಿಳುಪು ಸೇರಿಸಿ ಬ್ಲೆಂಡರ್ನಿಂದ ಪೇಸ್ಟ್ ತಯಾರಿಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ. ಅರ್ಧ ಗಂಟೆಯ ನಂತರ ತೊಳೆದುಕೊಳ್ಳಿ.
ನಿಂಬೆರಸವನ್ನು ನೀರಿಗೆ ಸೇರಿಸಿ ಐಸ್ ಕ್ಯೂಬ್ ಟ್ರೇನಲ್ಲಿಟ್ಟು ಫ್ರೀಜ್ ಮಾಡಿ. ತಾಜಾತನ ಬೇಕೆನಿಸಿದಾಗ ಒಂದು ಕ್ಯೂಬ್ನ್ನು ಹೊರತೆಗೆದು ಹಗುರವಾಗಿ ಮುಖಕ್ಕೆ ಸವರಿ, ನಂತರ ಹತ್ತಿಯಿಂದ ಒರೆಸಿ. ಇದರಿಂದ ತೈಲಾಂಶ ಕಡಿಮೆಯಾಗಿ ತಾಜಾತನ ಉಂಟಾಗುತ್ತದೆ.
ಮೊಟ್ಟೆಯ ಬಿಳುಪು, ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಮಾಸ್ಕ್ ನಿಂದ ಮುಖಕ್ಕೆ ಹಚ್ಚಿರಿ. 20 ನಿಮಿಷಗಳ ನಂತರ ಮುಖ ತೊಳೆಯಿರಿ.
1-1 ಚಮಚ ಜೇನುತುಪ್ಪ, ಓಟ್ಸ್, ರೋಸ್ ವಾಟರ್ ಮತ್ತು 15 ಹನಿ ಕಿತ್ತಳೆ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿರಿ. 15 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ತೈಲಾಂಶ ದೂರವಾಗಿ ಮುಖಕ್ಕೆ ಕಾಂತಿ ದೊರೆಯುತ್ತದೆ.
ಸೇಬು, ಪರಂಗಿ, ಕಿತ್ತಳೆ ಮಂತಾದ ಹಣ್ಣುಗಳ ತಿರುಳನ್ನು ಸೇರಿಸಿ ಮುಖಕ್ಕೆ ಹಚ್ಚಬಹುದು. 20-30 ನಿಮಿಷಗಳ ನಂತರ ಮುಖ ತೊಳೆಯರಿ.