ಸಂಜನಾಳ ಸೌಂದರ್ಯಕ್ಕೆ ಮನಸೋತ ನಿರ್ದೇಶಕ

ಕಾಸ್ಟಿಂಗ್‌ ಡೈರೆಕ್ಟರ್‌ನಿಂದ ಫಿಲ್ಮ್ ಡೈರೆಕ್ಟರ್‌ ಆಗಿರುವ ಮುಕೇಶ್‌ ಛಾಬ್ರಾ, ಸಂಜನಾ ಸುಶಾಂತ್‌ ರಜಪೂತ್‌ರ ಜೋಡಿಯ ಪ್ರೇಮಕಥೆಯ `ಕಿಝಿ ಮ್ಯಾನಿ’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದು ಸಂಜನಾ ನಾಯಕಿ ಆಗಿರುವ ಮೊದಲ ಚಿತ್ರ. ರಾಕ್‌ ಸ್ಟಾರ್‌, ಹಿಂದಿ ಮೀಡಿಯಂ ಚಿತ್ರಗಳಲ್ಲಿ ಚೂರೂಪಾರು ಕಾಣಿಸಿದ್ದಳಷ್ಟೆ.

ಸಂಜನಾ ಕುರಿತು ಮುಕೇಶ್‌, “ನಾನು ರಾಕ್‌ ಸ್ಟಾರ್‌ ಚಿತ್ರದ ಕಾಸ್ಟಿಂಗ್‌ ಮಾಡುವಾಗಲೇ ಮುಂದಿನ ಚಿತ್ರಕ್ಕೆ ಈ ಮುಗ್ಧ ಹುಡುಗಿಯನ್ನೇ ನಾಯಕಿ ಆಗಿಸುವೆ ಎಂದು ನಿರ್ಧರಿಸಿದ್ದೆ. ಸುಶಾಂತ್‌ ಸಂಜನಾ ಜೋಡಿ ಗ್ಯಾರಂಟಿ ಸಕ್ಸಸ್‌ ಆಗುತ್ತೆ ನೋಡಿ,” ಎನ್ನುತ್ತಾರೆ.

ಜೊತೆಯಾಗಿ ರೀಲ್ ರಿಯಲ್ ಸಂಜು

ರಣಬೀರ್‌ ಕಪೂರ್‌ ಹಾಗೂ ಸಂಜಯ್‌ ದತ್ತ್ ಒಟ್ಟೊಟ್ಟಿಗೆ ಮೊದಲ ಸಲ `ಶಂಶೇರಾ’ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇದರ ಜೊತೆ ವಾಣಿ ಕಪೂರ್‌ ಸಹ ತನ್ನ ಗ್ಲಾಮರಸ್‌ಹಾವಭಾವಗಳಿಂದ ಮಿಂಚಲಿದ್ದಾಳೆ. ಇದಕ್ಕೆ ಆದಿತ್ಯ ಚೋಪ್ರಾ ನಿರ್ಮಾಪಕರಾದರೆ, ನಿರ್ದೇಶಕ ಕರಣ್‌ ಮಲ್ಹೋತ್ರಾ. ರೀಲ್ ‌ಸಂಜು ರಣಬೀರ್‌ ಮೊದಲ ಸಲ ಡಾಕೂ ಪಾತ್ರದಲ್ಲಿ ಕಾಣಿಸಿದರೆ, ಅವನ ಗಾಡ್‌ಫಾದರ್‌ ಆಗಿರುತ್ತಾನೆ ರಿಯಲ್ ಸಂಜಯ್‌.

ಪ್ರೇಮ ಸಂಬಂಧಗಳ ವಿಶ್ಲೇಷಿಸುವ ಚಿತ್ರ

ನಿರ್ಮಾಪಕ ಸಂಜೀವ್ ‌ಮತ್ತು ನಿರ್ದೇಶಕ ಮಮತಾ ರಾಯ್‌ರ `ಲವ್ ಅಲರ್ಟ್‌’ ಚಿತ್ರ ಇಂದಿನ ಯುವ ಪೀಳಿಗೆಯ ಪ್ರಾಕ್ಟಿಕಲ್ ಕಥೆಯಂತೆ. ಪ್ರೀತಿ, ಪ್ರೇಮ, ವಿಶ್ವಾಸಗಳ ತಿಕ್ಕಾಟದ ಮಧ್ಯೆ ತಮ್ಮ ಸಂಬಂಧಗಳ ಅಸ್ತಿತ್ವ ಉಳಿಸಿಕೊಳ್ಳುವ ಪ್ರೇಮಿಗಳ ಕಥೆ ಇದು. ಸೌರವ್ ಸುರಭಿ ಮುಖ್ಯ ಪಾತ್ರದಲ್ಲಿದ್ದಾರೆ. ದೆಹಲಿಯ ಸುರಭಿ ಮಾಡೆಲ್ ‌ಆಗಿ ಬಂದಳು, ಹಲವಾರು ಆಲ್ಬಂ, ಪಂಜಾಬಿ ಚಿತ್ರಗಳಲ್ಲೂ ಕಾಣಿಸಿದ್ದಾಳೆ. ಇದು ಇವಳ ಮೊದಲ ಹಿಂದಿ ಚಿತ್ರ.

 

ಮಿಸೆಸ್‌ ಚೋಪ್ರಾಳನ್ನು ಮುದಿ ಎಂದವರಾರು?

ತಾಯಿಯಾದ ನಂತರ `ಹಿಚ್ಕಿ’ ಚಿತ್ರದಲ್ಲಿ ಸೆಕೆಂಡ್‌ ಇನಿಂಗ್ಸ್ ಆರಂಭಿಸಿದ ರಾಣಿ ಮುಖರ್ಜಿಯನ್ನು ಮಿಸ್ಟರ್‌ ಪರ್ಫೆಕ್ಷನಿಸ್ಟ್ ಎಂದೇ ಗುರುತಿಸಲ್ಪಟ್ಟಿರುವ 50+ನ ಆಮೀರ್‌ ಖಾನ್‌, ಮುದುಕಿ ಎಂದು ಛೇಡಿಸಿದ್ದಾನೆ. `ಹಿಚ್ಕಿ’ ಚಿತ್ರದ ಯಶಸ್ಸಿನ ನಂತರ ಆಮೀರ್‌ ಸಹ ಇವಳನ್ನು ಬಾಯಿ ತುಂಬಾ ಹೊಗಳಿದ್ದ. ಆದರೆ ಒಂದು ಸಂದರ್ಶನದಲ್ಲಿ ತಮಾಷೆ ಮಾಡುತ್ತಲೇ, ರಾಣಿ ಯಾವುದೇ ಚಿತ್ರದಲ್ಲಿ ಈ ಗೆಟಪ್‌ನಲ್ಲಿ ಕಾಣಿಸಿದರೂ ಪಕ್ಕಾ ಮುದುಕಿ ಹಾಗಿರುತ್ತಾಳೆ, ಎಂದಿದ್ದನಂತೆ. ಆಮೀರ್‌ನ ಈ ಕಮೆಂಟ್‌ಗೆ ರಾಣಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ, ಕೇವಲ ಮುಗುಳ್ನಗೆ ಅಷ್ಟೆ ಅಂತಿಮ!

ಜಗ್ಗದೆಯೇ ಕುಗ್ಗದೆಯೇ ಗೆದ್ದು ಬರುವೆ ನಾನು

ಬಾಲಿವುಡ್‌ನಲ್ಲಿ ಕ್ಯಾನ್ಸರ್‌ನಂಥ ಮಹಾಮಾರಿ ವಿರುದ್ಧ ಹೋರಾಡಿ ಗೆದ್ದವರಲ್ಲಿ ನಟಿ ಮುಮ್ತಾಜ್‌ಳಿಂದ ಈಗಿನ ಮನೀಷಾ ಕೋಯಿರಾಲಾವರೆಗೂ ಧೀರೆಯರಿದ್ದಾರೆ. ಕ್ಯಾನ್ಸರ್‌ನ್ನು ಬಗ್ಗು ಬಡಿದು, ಮತ್ತೆ ತೆರೆಗೆ ಬಂದು ಬಣ್ಣ ಹಚ್ಚಿದವರಿವರು.

ಇಮ್ರಾನ್‌ ಹಶ್ಮಿಯ ಮಗನ ನಂತರ ಇರ್ಫಾನ್‌ ಆದ ಮೇಲೆ ಇದೀಗ ಸೋನಾಲಿ ಬೇಂದ್ರೆಯ ಸರದಿ. ಹೈಗ್ರೇಡ್‌ ಬ್ಲಡ್‌ ಕ್ಯಾನ್ಸರ್‌ಗೆ ತುತ್ತಾಗಿರುವ ಈಕೆ ಚಿಕಿತ್ಸೆಗೆಂದು ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟಿದ್ದಾಳೆ. ಬಾಲಿವುಡ್‌ನ ಹಲವು ತಾರೆಯರು ಈಕೆಗೆ ಧೈರ್ಯ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಕ್ಯಾನ್ಸರ್‌ನ್ನು ಹಿಮ್ಮೆಟ್ಟಿಸಿರುವ ನಟಿ ಲೀಸಾ ರೇ ಸೋನಾಲಿಗೆ ಟ್ವೀಟ್‌ ಮಾಡುತ್ತಾ, `ಡಿಯರ್‌ ಸೋನಾಲಿ, ನಾನು ನಿನ್ನ ಕುರಿತಾಗಿಯೇ ಯೋಚಿಸುತ್ತಿದ್ದೆ. ಏನಾದರೂ ಹೇಳಲು ನನ್ನಲ್ಲಿ ಪದಗಳೇ ಇಲ್ಲ. ನಿನಗೆ ಧೈರ್ಯ ಹೆಚ್ಚಲಿ ಎಂದು ಧಾರಾಳ ಪ್ರೀತಿ ಕಳಿಸುತ್ತಿದ್ದೇನೆ!’ ಎಂದರು.

ಟೈಗರ್‌ನ್ನು ಇನ್ನು ಹಿಡಿಯಲಾದೀತೇ?

ಹಾಲಿವುಡ್‌ನಲ್ಲಿ ಟೈಗರ್‌ ಶ್ರಾಫ್‌ ಈಗ ಪೂರ್ತಿಯಾಗಿ ಆ್ಯಕ್ಷನ್‌ ಫಿಲಂಗಳ ಐಕಾನ್‌ ಆಗಿಹೋಗಿದ್ದಾನೆ.  ಬಾಗಿ, ಬಾಗಿ-2, ಬಾಗಿ-3…. ಹೀಗೆ ಸಾಲುಸಾಲಾಗಿ ಆ್ಯಕ್ಷನ್‌ ಸಿನಿಮಾಗಳೇ ಬರತೊಡಗಿವೆ. ನಿರ್ಮಾಪಕ ಸಾಜಿದ್‌ ಬಾಗಿ-3 ಸಿನಿಮಾ ಮಾಡಲೇಬೇಕು ಎಂದು ಪಟ್ಟುಹಿಡಿದಿದ್ದಾರೆ. ಟೈಗರ್‌ನ ರೋಬೋ ಸ್ಟೈಲ್ ‌ಈ ಸಲ ಮತ್ತಷ್ಟು  ಖತರ್‌ನಾಕ್‌ ಆಗಲಿದೆಯಂತೆ. ನಿರ್ದೇಶಕರು ಬಾಗಿ-3 ಚಿತ್ರಕ್ಕಾಗಿ ಸ್ಟಂಟ್ಸ್ ನ್ನು ಮತ್ತಷ್ಟು ಹೈ ಪೀಕ್‌ಗೆ ಕೊಂಡೊಯ್ಯಲಿದ್ದಾರೆ. ಇಡೀ ಚಿತ್ರ ಸಿರಿಯಾದಲ್ಲಿ ಶೂಟ್‌ ಆಗಲಿದೆ. ಹೀಗಾಗಿ ಸ್ಟಂಟ್‌ ಮಾಸ್ಟರ್‌ ಅಹಮದ್‌, ಟೈಗರ್‌ನ್ನು ಟ್ರೇನಿಂಗ್‌ಗೆಂದು ಸಿರಿಯಾಗೆ ಕಳಿಸಿದ್ದಾರೆ. ಅಲ್ಲಿ ಸ್ಟಂಟ್ಸ್ ಮಾತ್ರವಲ್ಲದೆ 16, ರಾಕೆಟ್‌ ಲಾಂಚರ್‌ಗಳಂಥ ಮಾರಕಾಸ್ತ್ರಗಳ ಪ್ರಯೋಗ ಕಲಿಯಲಿದ್ದಾನೆ ಟೈಗರ್‌.  ಬಾಗಿ 1 – 2 ನಾಯಕಿಯರನ್ನು ಬಿಟ್ಟು ಬಾಗಿ 3 ಗಾಗಿ ಹೊಸ ನಾಯಕಿಯನ್ನು ಹುಡುಕುತ್ತಿದ್ದಾರಂತೆ.

ಬಯೋಪಿಕ್‌ನಲ್ಲಿ ಇದೀಗ ಕಪಿಲ್ ‌ಶರ್ಮ ಸರದಿ

ಸಂಜಯ್‌ ದತ್ತ್ ನ ಬಯೋಪಿಕ್‌`ಸಂಜು’ ಬಾಕ್ಸ್ ಆಫೀಸ್‌ನಲ್ಲಿ ಪ್ರಚಂಡ ಜಯಭೇರಿ ಬಾರಿಸಿದ್ದೇ, ಎಲ್ಲಾ ಘಟಾನುಘಟಿ ಸ್ಟಾರ್‌ಗಳೂ ತಮ್ಮ ಇಮೇಜ್‌ ಸರಿ ಎಂದು ತೋರ್ಪಡಿಸಲು ತಂತಮ್ಮ ಬಯೋಪಿಕ್‌ ಮಾಡಿಸಲು ಮುಂದಾಗಿದ್ದಾರೆ! ಹಲವು ವರ್ಷಗಳಿಂದ ಯಶಸ್ಸಿನ ಬೆನ್ನಟ್ಟುತ್ತಿರುವ ಕಪಿಲ್ ‌ಶರ್ಮ, ತೆರೆಮರೆಯ ತನ್ನ ಕಥೆಯನ್ನು ಇದೀಗ ಬೆಳ್ಳಿತೆರೆಯಲ್ಲಿ ಪ್ರದರ್ಶಿಸ ಬಯಸುತ್ತಾನೆ.

ನಿರ್ದೇಶಕ ವಿನೋದ್‌ ತಿವಾರಿ ಕಪಿಲ್‌ನ ಬಯೋಪಿಕ್‌ ಮಾಡಲು ಮುಂದಾಗಿದ್ದಾರೆ. ಇದರ ಕಥೆ ಕಪಿಲ್‌ನ ಲೈಫ್‌ ಸ್ಟ್ರಗಲ್ ಆಧರಿಸಿದೆ. ವಿನೋದ್‌ ಒಂದು ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಇಷ್ಟರಲ್ಲೇ ಬಯೋಪಿಕ್‌ ಸ್ಟಾರ್ಟ್‌ ಮಾಡುವುದಾಗಿ ಹೇಳಿದ್ದಾರೆ. ಕಪಿಲ್ ‌ಪಾತ್ರವನ್ನು ಕೃಷ್ಣ ಅಭಿಷೇಕ್‌ ನಿರ್ವಹಿಸಲಿದ್ದಾನೆ. ಕಾಮಿಡಿ ಶೋಗಳ ಕುರಿತಾಗಿ ಕೃಷ್ಣ ಕಪಿಲ್ ಮಧ್ಯೆ ಮಾರಾಮಾರಿ ವಾಕ್ಸಮರಗಳಾಗಿವೆ. ಹೀಗಿರುವಾಗ ಕೃಷ್ಣ ರೀಲ್ ಕಪಿಲ್ ‌ಆಗಲಿರುವುದು ಕುತೂಹಲಕಾರಿಯಾಗಿದೆ.

ಕಾಜಲ್ ಇದೀಗ ಶೂರ್ಪನಖಿ

ತೆಲುಗು ಚಿತ್ರದ ಬೇಡಿಕೆಯ ನಟಿ ಕಾಜಲ್ ಅಗರ್ವಾಲ್‌, ಪೌರಾಣಿಕ ಪಾತ್ರಗಳಲ್ಲಿ ಪ್ರಮುಖವಾದ ರಾವಣನ ತಂಗಿಯಾದ ಶೂರ್ಪನಖಿಯಾಗಿ ತೆರೆ ಮೇಲೆ ಕಾಣಿಸಲಿದ್ದಾಳೆ. ಮೆಗಾ ಬಜೆಟ್‌ನ `ರಾಣ’ ಚಿತ್ರದಲ್ಲಿ ಈಕೆ ಪ್ರಮುಖ ಪಾತ್ರವಾದ ರಾವಣನ ತಂಗಿಯಾಗಿ ಕಾಣಿಸಲಿದ್ದಾಳೆ. ಈ ಚಿತ್ರದಲ್ಲಿ ರಾವಣನ ಕಥೆಯನ್ನು ಶೂರ್ಪನಖಿಯ ಆ್ಯಂಗಲ್‌ನಿಂದ ತೋರಿಸಲಾಗುತ್ತದೆ. ಈ ಚಿತ್ರವನ್ನು ನ್ಯಾಷನಲ್ ಅವಾರ್ಡ್‌ ವಿನ್ನರ್‌ ಎಚ್‌.ಆರ್‌. ಭಾರ್ಗವ್ ನಿರ್ದೇಶಿಸಲಿದ್ದಾರೆ. ಚಿತ್ರದ ಇನ್ನುಳಿದ ಪಾತ್ರಗಳ ಆಯ್ಕೆ ನಡೆಯಬೇಕಿದೆ.

ಅಂಕಲ್ ಅಂದೀರಿ ಜೋಕೆ!

ಬೀಟೌನ್‌ನ ಮೋಸ್ಟ್ ವಾಂಟೆಡ್‌ ಬ್ಯಾಚುಲರ್‌ ಸಲ್ಮಾನ್‌ ಭಾಯಿಯನ್ನು ಯಾರೋ ಹುಡುಗಿ ಮೀಡಿಯಾದಲ್ಲಿ ಅಂಕಲ್ ಅಂದಳಂತೆ! ಇದರಿಂದ ಅವನಿಗೆ ಕೆಂಡಾಮಂಡಲ ಸಿಟ್ಟೇರಿತು. 52ರ ಗಡಿ ದಾಟಿರುವ ಸಲ್ಮಾನ್‌ ಅದ್ಹೇಗೆ ಟೀನೇಜರ್‌ ಆದಾನು? ಈ ವಿಷಯದ ಕುರಿತಾಗಿ ಈತ ಒಂದು ರಿಯಾಲಿಟಿ ಶೋನಲ್ಲಿ, “ಈ ಮಾತಿಗೆ ನಾನು ಕೋಪಗೊಳ್ಳುತ್ತೇನೆ ಎಂದು ಗೊತ್ತಿದ್ದೇ ನನ್ನ ಪರಿಚಿತರು, ನೆಂಟರ ಮಕ್ಕಳು ನನ್ನನ್ನು ಅಂಕಲ್ ಎನ್ನುತ್ತಾ ಗೋಳುಹೊಯ್ದುಕೊಳ್ಳುತ್ತಾರೆ,” ಎಂದು ಅಲವತ್ತುಕೊಂಡಿದ್ದಾನೆ.

ಅಥಿಯಾಳ ಕಾಮೆಡಿ ಕಮಾಲ್

‌ಸಲ್ಲೂ ಅಂಕಲ್ ಮೆಹರ್ಬಾನಿಯಿಂದ ಅಂತೂ ಇಂತೂ ಅಥಿಯಾಳಿಗೆ ಒಂದು ಚಿತ್ರದಲ್ಲಿ ಮುಖ ತೋರಿಸುವ ಅವಕಾಶ ಸಿಕ್ಕಿತ್ತು. ಆದರೆ `ಮುಬಾರ್ಕಾ’ ಚಿತ್ರದಲ್ಲಿ ತನ್ನ ನಟನೆಯ ಕೌಶಲ ತೋರಿಸುವ ಅವಕಾಶ ಸಿಕ್ಕಿದಾಗ, ಇಲಿಯಾನಾಳ ಮುಂದೆ ಇವಳು ಇಲಿಯಾಗಿ ನಿಂತಿದ್ದನ್ನು ಪ್ರೇಕ್ಷಕರು ಇನ್ನೂ ಮರೆತಿಲ್ಲ. ಮುಂದೆ ಇವಳ ಚಿತ್ರಗಳಿಗೆ ತಮ್ಮ ಕಾಸು ಖರ್ಚು ಮಾಡಿ ಬರಬೇಕೇ ಎಂದು ಅವರು ಚಿಂತಿಸತೊಡಗಿದರಂತೆ. ಇದೀಗ ಈ ಬೇಬಿ ನಾಜ್‌ ಜೊತೆ `ಮೋತಿ ಚೂರು ಚಕ್ನಾಚೂರ್‌’ ಕಾಮೆಡಿ ಚಿತ್ರದಲ್ಲಿ ನಗಿಸಲು ಬರ್ತಿದ್ದಾಳೆ! ನಗಿಸಲು ಬಂದವಳು ಯಾರನ್ನೂ ಅಳಿಸದಿದ್ದರೆ ಸಾಕು ಎಂದು ಅಲ್ಲಲ್ಲಿ ಗುಸುಗುಸು ಕೇಳಿಬರುತ್ತಿದೆ.

ಮನರಂಜನೆ ನೀಡುವ ಮಸ್ತ್ ಕಲಂದರ್

ಸದಾ ಪ್ರೇಕ್ಷಕರಿಗೆ ಹೆಲ್ದಿ ಮನರಂಜನೆ ಉಣಬಡಿಸುವ ಸೋನಿ ಸಬ್‌ ಟಿವಿ, ಇದೀಗ ತನ್ನ ಕಾಮಿಡಿ ಸೀರೀಸ್‌ನಲ್ಲಿ `ಮಸ್ತ್ ಕಲಂದರ್‌’ ಎನ್ನುವ ಕಾಮೆಡಿ ಶೋ, ಮನರಂಜನೆಯ ಕಲಾವಿದರ ಕಾರ್ನಿವಾಲ್ ‌ಆಗಿದೆ. ಇದರಲ್ಲಿ ಸಿಂಗರ್‌ ವೀಸಾ ಸಿಂಗ್‌, ಕೋರಿಯೋ ಗ್ರಾಫರ್‌ ಗೀತಾ ಕಪೂರ್‌, ಸೆಲೆಬ್ರೆಟಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳ ಕಚಗುಳಿ ಇಟ್ಟರೆ, ಆ್ಯಂಕರಿಂಗ್‌ ರಾಘವ್ ಮಾಡುತ್ತಾರೆ. ಶೋ ಬಗ್ಗೆ ಮಾತನಾಡುತ್ತಾ ಮೀರಾ, “ಇದರ ಕಾನ್‌ಸೆಪ್ಟ್ ಬಲು ಯುನಿಕ್‌ ಆಗಿದೆ. ಇಲ್ಲಿ ಸ್ಪರ್ಧಿಗಳು ಹಾಡೂ ಹೇಳುವುದು ಮಾತ್ರವಲ್ಲ, ಕಾಮೆಡಿ ಪ್ರದರ್ಶನ ಸಹ ಮಾಡುತ್ತಾರೆ,” ಎಂದರು.

ಡಾ. ಹಾಥಿಯ ಅಕಾಲ ಮರಣ

ಸಬ್‌ ಟಿವಿಯ ಅತಿ ದೀರ್ಘಾವಧಿಯ ಶೋ `ತಾರಕ್‌ ಮೆಹ್ತಾ ಕಾ ಉಲ್ಟಾ ಚಶ್ಮಾ’ದ ಪಾತ್ರಧಾರಿಯಾಗಿದ್ದ ನಟ ಕವಿ ಕುಮಾರ್ ಆಜಾದ್‌ಗೆ ಹೃದಯಾಘಾತದಿಂದ ಸಾವು ಬಂತು. ಆಜಾದ್‌`ವೋ’ ದಂಥ ಚಿತ್ರಗಳಲ್ಲೂ ನಟಿಸಿದ್ದಾರೆ. ಅತಿ ತೂಕವೇ ಇವರ ಹಾರ್ಟ್‌ ಅಟ್ಯಾಕ್‌ಗೆ ಕಾರಣ ಎಂದು ತಿಳಿದುಬಂತು. `ತಾರಕ್‌ ಮೆಹ್ತಾ….’ರ ಇವರ ಪಾತ್ರವನ್ನು ಯಾರೂ ತುಂಬಲಾರರು ಎಂದೇ ಕಿರುತೆರೆಯ ಕಲಾವಿದರು ಹೇಳುತ್ತಿದ್ದಾರೆ.

ಭಾರತೀಯ ತಾಳಕ್ಕೆ ವಿದೇಶೀ ಸ್ವರ

ಪೋಲೆಂಡ್‌, ಕೆನಡಾ, ಕೀನ್ಯಾ, ರಷ್ಯಾದ ಮಹಾನ್‌ ಕಲಾವಿದರು ಇದೀಗ ಸ್ಟಾರ್‌ ಪ್ಲಸ್‌ನ ಹೊಸ ಶೋ ` ದಿಲ್ ‌ಹೈ ಹಿಂದೂಸ್ಥಾನಿ-2’ನಲ್ಲಿ ಒಂದೇ ವೇದಿಕೆ ಹಂಚಿಕೊಂಡು ಭಾರತೀಯ ರಾಗ ತಾಳಕ್ಕೆ ಶೃತಿ ಹಾಡಲಿದ್ದಾರೆ. ಈ ಶೋಗೆ ಜಡ್ಜ್ ಗಳಾಗಿ  ಸಂಗೀತಗಾರ ಪ್ರೀತಮ್, ಗಾಯಕಿ ಸುನಿಧಿ, ಬಾದ್‌ಶಾಹ್‌ ಇರುತ್ತಾರೆ. “ಈ ಸೀಸನ್‌ನಲ್ಲಿ ಬರುವ ಎಲ್ಲಾ ಪ್ರತಿಭೆಗಳ ಕೈಲೂ ಅವರ ಭಾರತೀಯ ಸಂಗೀತದ ಶೃತಿ ಹಾಡಿಸಲಿದ್ದೇವೆ. ಈ ವಿದೇಶೀ ಕಲಾವಿದರ ದೈತ್ಯ ಪ್ರತಿಭೆ ದಂಗುಬಡಿಸುತ್ತಿದೆ,” ಎನ್ನುತ್ತಾರೆ.

ಥ್ರಿಲಿಂಗ್‌ ಆಯ್ತು `ದೇವ್-‌2′

ಇದೀಗ ಪ್ರೇಕ್ಷಕರು ಅತ್ತೆ ಸೊಸೆ ಧಾರಾವಾಹಿಗಳಿಂದ ಹೊರಬಂದು ರೋಮಾನ್ಸ್, ಸಸ್ಪೆನ್ಸ್ ಶೋ ಇಷ್ಟಪಡ್ತಿದ್ದಾರೆ. ಹಾಗಾಗಿ ಕಲರ್ಸ್‌ ಚ್ಯಾನೆಲ್ ‌ತನ್ನ ಪಾಪ್ಯುಲರ್‌ ಶೋ `ದೇವ್’ನ ಮುಂದಿನ ಭಾಗ `ದೇವ್-2′ ಆರಂಭಿಸಲಿದೆ. ಥ್ರಿಲಿಂಗ್‌ ಸಸ್ಪೆನ್ಸ್ ನ ಡಬಲ್ ಡೋಸ್‌ ಸಿಗಲಿದೆ. ಶೋ ಪ್ರಮೋಶನ್‌ಗೆ ಬಂದಿದ್ದ ಸ್ಟಾರ್‌ ಕಾಸ್ಟ್ ನಲ್ಲಿ ಹಳೆಯ ಮತ್ತು ಹೊಸ ಮುಖಗಳಿದ್ದವು. ಆಶಿಷ್‌ಡಿಟೆಕ್ಟಿವ್ ದೇವ್ ‌ಆಗಿದ್ದರೆ, ಹೊಸ ಪಾತ್ರಧಾರಿ ಜಿಜ್ಞಾಸಾ ಸಿಂಗ್‌ ತನ್ನ ಪಿ.ಎ. ರೋಲ್‌ನಿಂದ ಎಂಟರ್‌ಟೇನ್‌ ಮಾಡಲಿದ್ದಾಳೆ. ಈ ಕುರಿತಾಗಿ ಆಶಿಷ್‌ ಮಾತನಾಡುತ್ತಾ, “ನನ್ನ ಪಾತ್ರ ದೇವ್ ‌ತನ್ನ ಗತಕಾಲದಲ್ಲೇ ಮುಳುಗಿ ಹೋಗಿರುತ್ತಾನೆ. ಅವನ ವಿವಿಧ ಮುಖಗಳು ನನಗೆ ಈ ಶೋನಲ್ಲಿ ಇಷ್ಟವಾಯ್ತು. ಈ ಸಲದ ಹೊಸ ಶೋನಲ್ಲಿ ಹಿಂದಿಗಿಂತ ಅತ್ಯಧಿಕ ಸನ್ನಿವೇಶಗಳು ಬಹಳ ಕುತೂಹಲಕಾರಿಯಾಗಿವೆ,” ಎನ್ನುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ