ನನ್ನ ಮದುವೆಗೆ ನೂಕುನುಗ್ಗಲು ಇಷ್ಟವಿಲ್ಲ!

ಇದೇನಪ್ಪ ವಿಚಿತ್ರ…… ಸೋನಂ ಎಲ್ಲರನ್ನೂ ತನ್ನ ಮದುವೆಗೆ ಬರುವಂತೆ ಕರೆದಳು, ಆದರೆ ಬಹಳ ಜನ ಬಂದು ನೂಕುನುಗ್ಗಲು ಆಗುವುದು ನನಗೆ ಇಷ್ಟವಿಲ್ಲ ಎನ್ನುತ್ತಾಳೆ. ತನ್ನ ಪ್ರೈವೆಸಿ ಮುಖ್ಯ ಎಂದು ಭಾವಿಸುವ ಮಿಸೆಸ್‌ ಸೋನಂ ಆನಂದ್‌, ಮದುವೆ ನಂತರ ಒಂದು ಚಿತ್ರದ ಪಿಸಿಯಲ್ಲಿ ಹೀಗೆ ಹೇಳಿದ್ದಾಳೆ. “ನನ್ನ ಮದುವೆಗೆ ಬಂದಿದ್ದ ಜ್ಯಾಕ್‌ಲೀನ್‌, ರಣಬೀರ್‌, ಮದುವೆಯ ಎಲ್ಲಾ ಕಲಾಪಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಮಾಡಿಬಿಟ್ಟರು. ಇದು ನನಗೆ ಅಷ್ಟು ಹಿಡಿಸಲಿಲ್ಲ. ಪ್ರತಿ ಮದುವೆಯಲ್ಲೂ ಪ್ರೈವೆಸಿ ಕೂಡ ಅಷ್ಟೇ ಮುಖ್ಯ. ನನ್ನ ಮದುವೆ ಬಗ್ಗೆಯೂ ಜನ ಹೀಗೆ ಯೋಚಿಸಿದ್ದರೆ ಚೆನ್ನಾಗಿತ್ತು. ನಾನಂತೂ ಕೆಲವೇ ಹಿತೈಷಿಗಳ ಮಧ್ಯೆ ಮದುವೆ ಆಗಬೇಕೂಂತಿದ್ದೆ. ಆದರೆ ಹಿರಿಯರು ಒಪ್ಪಬೇಕಲ್ಲ…..?”

ಹಿಟ್‌ಗಾಗಿ ಕಾಯುತ್ತಿರುವ ರಣಬೀರ್‌

ಇತ್ತೀಚೆಗೆ ಬಾಲಿವುಡ್‌ನಲ್ಲಿ ಈ ಕಪೂರ್‌ ಬಾಯ್‌ ಬಗ್ಗೆ ಎಲ್ಲೆಲ್ಲೂ ಮಾತು ಕೇಳಿಬರುತ್ತಿದೆ. ಕತ್ರೀನಾ ಕೈ ಕೊಟ್ಟ ನಂತರ ಆಲಿಯಾ ಹಿಂದೆ ಬಿದ್ದಿರುವ ಹಾಗೂ ಸಂಜಯ್‌ದತ್ ಕುರಿತಾದ `ಸಂಜೂ’ ಬಯೋಪಿಕ್‌ ಚಿತ್ರದ ಕುರಿತಾಗಿ ಮಾತು ಕೇಳಿಬರುತ್ತಿವೆ. ಸೋನಂ ಮದುವೆಗೆ ಒಟ್ಟಾಗಿ ಬಂದ ಆಲಿಯಾ ರಣಬೀರ್‌, ಆಗಿನಿಂದ ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಅವನ ಮಾಜಿ ಪ್ರೇಯಸಿ ಕತ್ರೀನಾ, ತಾನು ಕಣ್ಣಾರಿ ಅವರಿಬ್ಬರನ್ನೂ ಒಟ್ಟೊಟ್ಟಿಗೆ ಪಬ್ಲಿಕ್‌ ಆಗಿ ನೋಡುವವರೆಗೂ ಇದನ್ನು ನಂಬುವುದಿಲ್ಲ ಎಂದಿದ್ದಾಳೆ. ಆಕೆ ಜೊತೆ ನಟಿಸಿದ್ದ `ಜಗ್ಗಾ ಜಾಸೂಸ್‌’ ತೋಪಾಗಿದ್ದು ಗೊತ್ತಿರುವ ಇವನಿಗೆ ಈಗ ಆಲಿಯಾ ಜೊತೆ ನಟಿಸುತ್ತಿರುವ `ಬ್ರಹ್ಮಾಸ್ತ್ರ, ಸಂಜು’ ಚಿತ್ರಗಳ ಯಶಸ್ಸೇ ಆಶಾಕಿರಣವಾಗಿ ಕೂತಿದೆ. ಕಳೆದ ಹಲವು ವರ್ಷಗಳಿಂದ ಇವನ ಚಿತ್ರಗಳೆಲ್ಲ ಫ್ಲಾಪೇ, ಇವಾದರೂ ಕ್ಲಿಕ್‌ ಆಗುತ್ತವಯೇ? ಕಾಲವೇ ಉತ್ತರಿಸಬೇಕು.

ಪ್ಲಾಸ್ಟಿಕ್‌ ಮುಕ್ತ ಪರಿಸರ ಕಟ್ಟಬಯಸುವ ದೀಯಾ
ಸ್ವಚ್ಛ ಪರಿಸರಕ್ಕೆ ಆದ್ಯತೆ ಕೊಡು, ಅದನ್ನು ಸದಾ ಪ್ಲಾಸ್ಟಿಕ್‌, ಪಾಲಿಥಿನ್‌ ಫ್ರೀ ಆಗಿಸ ಬಯಸಿ ಅಭಿಯಾನಗಳನ್ನು ಆರಂಭಿಸಿರುವ ದೀಯಾ ಮಿರ್ಜಾ ಮೊದಲಿನಿಂದಲೂ ಇದರಲ್ಲಿ ಸಕ್ರಿಯಳು. ಈಗ ಎಷ್ಟೋ ತಾರೆಯರು ಈಕೆಯ ಈ ಸ್ವಚ್ಛತಾ ಆಂದೋಲನಕ್ಕೆ ಕೈ ಜೋಡಿಸಿದ್ದಾರೆ. ದೀಯಾ ಒಮ್ಮೆ ತಾನು ಸ್ಯಾನಿಟರಿ ನ್ಯಾಪ್‌ಕಿನ್‌ ಸಹಾ ಬಳಸುವುದಿಲ್ಲ ಎಂದು ಹೇಳಿದ್ದಳು. ಏಕೆಂದರೆ ಅದರಲ್ಲೂ ಪ್ಲಾಸ್ಟಿಕ್‌ ಬಳಸುತ್ತಾರೆ. ಜೂನ್‌ 5ರ ವಿಶ್ವ ಪರಿಸರ ದಿನದಂದು, ತಾಜ್‌ಮಹಲ್‌ನ ಸೌಂದರ್ಯ ಕುಂದಲು ಪ್ಲಾಸ್ಟಿಕ್‌ ಬಳಕೆಯೇ ಕಾರಣ ಎಂದಳು. ನಮ್ಮ ಮುಂದಿನ ಪೀಳಿಗೆಗಾಗಿ ನಾವಿಂದು ಪರಿಸರ ರಕ್ಷಿಸಲೇಬೇಕು. ನಾವು ಪ್ರಕೃತಿಗಾಗಿ ಏನು ಮಾಡುತ್ತೇವೋ ಅದು ಮರಳಿ ನಮಗೇ ಬರಲಿದೆ. ನದಿಗಳಲ್ಲಿ ನಾವು ಎಸೆಯುವ ಕಸ ಫುಡ್‌ ಚೇನ್‌ ಪ್ರಕ್ರಿಯೆ ಮೂಲಕ ನಮಗೇ ಮರಳುತ್ತದೆ, ಎಂದು ಕಳಕಳಿ ವ್ಯಕ್ತಪಡಿಸಿದಳು.

ಮಲೈಕಾ ಅರ್ಬಾಜ್ ಡೈವೋರ್ಸ್‌ಗೆ ಕಾರಣವಿದು

ಮಲೈಕಾ ಅರೋರಾ ತನ್ನ ಗಂಡ ಅರ್ಬಾಜ್ ನಿಂದ ಡೈಮೋರ್ಸ್‌ ಪಡೆಯಲು ಮೂಲಕಾರಣ ಅರ್ಜುನ್‌ ಕಪೂರ್‌ ಎಂದು ಬಾಲಿವುಡ್‌ನಲ್ಲಿ ಎಲ್ಲೆಲ್ಲೂ ಗುಸುಗುಸು ಕೇಳಿ ಬರುತ್ತಿತ್ತು. ಅರ್ಜುನ್‌ ಮಲೈಕಾರ ಅತಿ ನಿಕಟ ಸ್ನೇಹದಿಂದಾಗಿ ಅರ್ಬಾಜ್ ಹೆಂಡತಿಯಿಂದ ದೂರವಾಗತೊಡಗಿದ. ಆದರೆ ಈಗ ಪೆಪ್ಸಿ ಕ್ರಿಕೆಟ್‌ ಮ್ಯಾಚ್‌ನ ಜೂಜಿನಲ್ಲಿ ಅರ್ಬಾಜ್ ಹೆಸರು ದಟ್ಟವಾಗಿ ಕೇಳುತ್ತಿರುವಾಗ ಎಲ್ಲರಿಗೂ ವಿಷಯ ಕ್ಲಿಯರ್‌ ಆಗಿದೆ. ಅರ್ಬಾಜ್ ನ ಈ ದುರ್ಗುಣದಿಂದಾಗಿಯೇ ಮಲೈಕಾ ಅವನಿಂದ ದೂರ ಸರಿದಿದ್ದಂತೆ. ಅಣ್ಣ ಸಲ್ಮಾನ್‌ ಸಹ ಇವನಿಗೆ ತಿಳಿಹೇಳಿದ್ದನಂತೆ. ಆಗಲೂ ಅವನು ಜಗ್ಗದಿದ್ದಾಗ ಎಲ್ಲರೂ ಸಿಡಿದೆದ್ದರು. ಅರ್ಬಾಜ್ ಪೊಲೀಸರಿಗೆ ಹೇಳಿದ್ದೇನೆಂದರೆ, ತಾನು ಕಳೆದ 5 ವರ್ಷಗಳಿಂದಲೂ ಪೆಪ್ಸಿ ಜೂಜಿನಲ್ಲಿ ಕೋಟ್ಯಂತರ ಲಾಭ ನಷ್ಟ ಅನುಭವಿಸಿದ್ದನಂತೆ.

ದೇಶೀ ಗರ್ಲ್ ಇದೀಗ ಅಪ್ಪಟ ವಿದೇಶೀ

ಪ್ರಿಯಾಂಕಾ ಚೋಪ್ರಾಳಿಗೆ ಹಾಲಿವುಡ್‌ನ ಹವಾ ತಗುಲಿದಾಗಿನಿಂದ, ಅವಳ ಚಲನವಲನಗಳೆಲ್ಲ ಬದಲಾದವು. ಮೊದಲು ದೇಶೀ ಚಿತ್ರಗಳಿಂದ ಸಂಬಂಧ ತೊರೆದು ವಿದೇಶಕ್ಕೆ ಅಂಟಿದ್ದು ಮಾತ್ರವಲ್ಲದೆ, ಭಾರತದ ವರಗಳು ತನಗೆ ಲಾಯಕ್ಕೇ ಅಲ್ಲ ಎಂದು ಮೂಗು ಮುರಿದಳು. ಇದೀಗ ತನಗಿಂತಲೂ 10 ವರ್ಷ ಚಿಕ್ಕವನಾದ ಅಮೆರಿಕನ್‌ ಸಿಂಗರ್‌ ನಿಕ್‌ ಜೋನಸ್‌ ಜೊತೆ ಜೋರಾದ ಡೇಟಿಂಗ್‌ ನಡೆಸಿದ್ದಾಳೆ! ಪ್ರಿಯಾ ಜೊತೆ ನಿಕ್‌ ಈಗ ವಿದೇಶದಲ್ಲೆಡೆ ಸುತ್ತುತ್ತಿದ್ದಾನಂತೆ. ಆಕೆಯ ತಾಯಿಯನ್ನು ಈ ಬಗ್ಗೆ ಕೇಳಿದಾಗ, ಮಗಳ ಖುಷಿಯೇ ತನ್ನ ಖುಷಿ ಎಂದರು. ಪಾಪ, ಈ ವಯಸ್ಸಿನಲ್ಲಿ ಆಕೆ ಇನ್ನೇನು ಹೇಳಿಯಾರು?

ಅನನ್ಯಾ….. ತುಸು ಎಚ್ಚರ!

ತನ್ನ ಹಾಟ್‌ ಹಾವಭಾವಗಳಿಂದ ಸದಾ ಫೇಸ್‌ಬುಕ್‌ನಲ್ಲಿ ಧೂಳೆಬ್ಬಿಸುವ, ಚಂಕಿ ಪಾಂಡೆಯ ಮಗಳು ಅನನ್ಯಾ `ಬಿ` ಟೌನ್‌ನಲ್ಲಿ ಶೂಟಿಂಗ್‌ ನಡೆಸುವಾಗ ಆದ ಅನಾಹುತದಲ್ಲಿ ಕೂದಲೆಳೆಯಿಂದ ಪಾರಾದಳು. ಟೈಗರ್‌ ಶ್ರಾಫ್‌ ಜೊತೆ `ಸ್ಟೂಡೆಂಟ್‌ ಆಫ್‌ ದಿ ಇಯರ್‌’ ಚಿತ್ರದಲ್ಲಿ ಡೆಬ್ಯು ಪಡೆದಿದ್ದಾಳೆ. ಅದಕ್ಕೆ ಮೊದಲೇ FB ‌ನಲ್ಲಿ ಅಷ್ಟೆಲ್ಲ ಅವಾಂತರ ನಡೆದಿದೆ. ಈ ಚಿತ್ರದ ಶೂಟಿಂಗ್‌ಗಾಗಿ ರಸ್ತೆ ಬದಿ ಗಾಡಿ ಚಲಾಯಿಸುತ್ತಾ ಆ ದೃಶ್ಯ ಕಂಪ್ಲೀಟ್‌ ಮಾಡಬೇಕಿತ್ತು. ಆದರೆ ಏನಾಯ್ತೋ ಏನೋ….. ಶಾಟ್‌ ರೆಡಿ ಆದಂತೆ ಅನನ್ಯಾ ಗಾಡಿ ಮೇಲೆ ಕಂಟ್ರೋಲ್ ‌ಕಳೆದುಕೊಂಡಳು. ಹೀಗಾಗಿ ಅವಳು ಹೋಗಿ ರಸ್ತೆ ಬದಿ ಮರಕ್ಕೆ ಕಾರನ್ನು ಗುದ್ದಿದಳು. ಪ್ರಾಣಾಪಾಯದಿಂದ ಪಾರಾದ ಅನನ್ಯಾ, ಇನ್ನೊಂದಷ್ಟು ದಿನ ಗ್ಲಾಮರಸ್‌ ಆಗಿ ಕಾಣಿಸಲು ಅಸಾಧ್ಯ ಎಂಬ ಸ್ಥಿತಿ ತಲುಪಿದ್ದಾಳೆ. ಹುಷಾರಮ್ಮ ಹುಷಾರು….! FB ‌ನಲ್ಲಿ ಪೋಸ್‌ ಕೊಟ್ಟಂಗಲ್ಲ, ಶೂಟಿಂಗ್‌ ಎಂದು ಎಲ್ಲರೂ ಸಲಹೆ ನೀಡುತ್ತಿದ್ದಾರಂತೆ.

ಆಲಿಯಾ ಈಗ ಗಗನಸಖಿಯರ ಪರಮಸಖಿ

ಆಲಿಯಾಳ ಹೊಸ ಚಿತ್ರ `ರಾಝಿ` 100 ಕ್ರೋರ್‌ ಕ್ಲಬ್‌ ಸೇರಿದಾಗಿನಿಂದ, ಆಕೆ ಎಲ್ಲರಿಗೂ ಅಚ್ಚುಮೆಚ್ಚು! ಹೀಗಾಗಿ ಫ್ರಾಂಕ್‌ ಫಿನ್‌ಏರ್‌ ಹೋಸ್ಟೆಸ್‌ ಅಕ್ಯಾಡೆಮಿ ಈಕೆಯನ್ನು ತನ್ನ ಬ್ರ್ಯಾಂಡ್‌ ಅಂಬಾಝಿಡರ್‌ ಮಾಡಿಕೊಂಡಿದೆ. ಆಲಿಯಾ ತನ್ನ ಮುಂದಿನ `ಬದರೀನಾಥ್‌ ಕೀ ದುಲ್ಹನಿಯಾ’ ಚಿತ್ರದಲ್ಲೂ ಏರ್‌ ಹೋಸ್ಟೆಸ್‌ ಆಗಿ ಮಿಂಚಲಿದ್ದಾಳೆ. ಈ ಸಂಸ್ಥೆಯ ಚೇರ್‌ಮನ್‌ ಎಸ್‌.ಎಸ್‌. ಕೊಹ್ಲಿ ಹೇಳುತ್ತಾರೆ, “ಆಲಿಯಾ ಇಂದಿನ ಪರ್ಫೆಕ್ಟ್ ಯೂಥ್‌ ಐಕಾನ್‌. ಆಕೆಯನ್ನು ನಮ್ಮ ಬ್ರ್ಯಾಂಡ್‌ ಅಂಬಾಝಿಡರ್‌ ಆಗಿ ಆರಿಸಲು ಬಹಳ ಹೆಮ್ಮೆ!”

 

ಸ್ವರಾಳಿಗೀಗ ದಿನನಿತ್ಯ ಕ್ಲಾಸ್‌ ತಪ್ಪಿದ್ದಲ್ಲ

ತನ್ನ ಅತಿ ಮಾತುಗಳಿಂದ ಸದಾ ವಿವಾದಗಳಿಗೆ ಸಿಲುಕಿಕೊಳ್ಳುವ ಸ್ವರಾ ಇದೀಗ FB‌ನಲ್ಲಿ ಸದಾ ಒಂದಿಲ್ಲೊಂದು ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾಳೆ. ಸದಾ ಪಾಕಿಸ್ತಾನವನ್ನು ಹೊಗಳಲು ಮುಂದಾಗುತ್ತಿದ್ದ ಸ್ವರಾ, ಅವಳ `ವೀರೆ ದಿ ವೆಡ್ಡಿಂಗ್‌’ ಚಿತ್ರ ಪಾಕಿಸ್ತಾನದಲ್ಲಿ ಬ್ಯಾನ್‌ ಆದಾಗಿನಿಂದ, ಅವಳ ಸ್ವರ ಲಹರಿಯೇ ಉಲ್ಟಾ ಆಗಿದೆ. ಈಗ ಬಾಯಿಗೆ ಬಂದಂತೆ ಪಾಕಿಸ್ತಾನವನ್ನು ಧಿಕ್ಕರಿಸುತ್ತಾ ಕಿಡಿ ಕಾರುತ್ತಿದ್ದಾಳೆ. ಸ್ವರಾಳ ಈ ಲಹರಿ ಕೇಳಿದ ತಕ್ಷಣ ಅವಳನ್ನು ತರಾಟೆಗೆ ತೆಗೆದುಕೊಂಡು ಜನ, ಟ್ರೋಲಿಂಗ್‌ನಲ್ಲಿ ಅವಳು ಪಾಕಿಸ್ತಾನವನ್ನು ಹೊಗಳುತ್ತಿದ್ದ ಕ್ಲಿಪ್ಪಿಂಗ್‌ನ್ನು ಲಿಂಕ್‌ ಮಾಡಿ ಕಿಚಾಯಿಸುತ್ತಿದ್ದಾರೆ. ಮತ್ತೊಂದು ವಿವಾದ ಸಹ ಇದೇ ಚಿತ್ರದ್ದು. ಆಕೆಯ ಅಭಿಮಾನಿಯೊಬ್ಬರು ತಮ್ಮ ಕುಟುಂಬ ಸಮೇತ ಈ ಚಿತ್ರಕ್ಕೆ ಹೋಗಿ, ಇದರಲ್ಲಿನ ಅತಿರೇಕದ ಸೆಕ್ಸಿ ದೃಶ್ಯಗಳಿಂದ ರೋಸಿಹೋಗಿ, “ಕುಟುಂಬದವರ ಜೊತೆ ಯಾರಾದರೂ ಸ್ವರಾಳ ಈ ಅವತಾರವನ್ನು ಸಹಿಸಿಕೊಳ್ಳಲು ಸಾಧ್ಯವೇ?” ಎಂದು ಟ್ರೋಲ್ ‌ಮಾಡಿದ್ದಾರೆ. ಅದಕ್ಕೂ ಫಟಾರನೇ ಉತ್ತರಿಸಿರುವ ಈಕೆ, “ಚಿತ್ರಕ್ಕೆ A ಸರ್ಟಿಫಿಕೇಟ್‌ ಇರುವಾಗ ಕುಟುಂಬದವರನ್ನೆಲ್ಲ ಕರೆದುಕೊಂಡು ಬಂದದ್ದು ಏಕೆ?” ಎನ್ನುತ್ತಿದ್ದಾಳೆ.

ಸೆಕ್ಸ್ ನನ್ನ ಫೇವರಿಟ್‌ ಹಾಬಿ

ಸದಾ ತನ್ನ ಬೋಲ್ಡ್ ಮಾತುಗಳಿಂದ ಚರ್ಚೆಯಲ್ಲಿ ಉಳಿಯುವ ಅಸ್ಸಾಮಿನ ಹುಡುಗಿ ಮಾಹಿಕಾಳ ಚಿತ್ರಗಳು ತೋಪಾದರೂ ಅವಳ ದೌಲತ್ತಿಗೇನೂ ಕಡಿಮೆ ಇಲ್ಲ. ಇತ್ತೀಚೆಗೆ ಇವಳು ನೀಡಿದ ಸ್ಟೇಟ್‌ಮೆಂಟ್‌ ಯಾರ ವಿರುದ್ಧ ಗೊತ್ತೇ? ಪಬ್ಲಿಕ್‌ ಆಗಿ ಪ್ರಧಾನಮಂತ್ರಿಯನ್ನೇ ತುಸು ಕಂಟ್ರೋಲ್‌ನಲ್ಲಿರಿ ಎಂದು ಗುಡುಗಿದ ಇವಳು, ಕಠವಾ ಗ್ಯಾಂಗ್‌ ರೇಪ್‌ ವಿರುದ್ಧ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾಳೆ. ಅಂಥವಳು ನೀಡಿದ ಹೊಸ ಸ್ಟೇಟ್‌ಮೆಂಟ್‌ ಏನು ಗೊತ್ತೇ? ಆಕೆ ಪಾಕಿಸ್ತಾನಿ ಕ್ರಿಕೆಟರ್‌ ಶಾಹಿದ್‌ಅಫ್ರೀದಿ ಹಾಗೂ ಪೋರ್ನ್‌ ನಟ ಡ್ಯಾನಿ ಜೊತೆ ಸೆಕ್ಸ್ ಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾಳೆ. ಹಾಲಿವುಡ್‌ ನಟ ರೆಯಾನ್‌ರೆನಾಲ್ಡ್, ತನ್ನ ಬಾಲ್ಯದ ದಿನಗಳ ಕ್ರಶ್‌ ಆಗಿದ್ದಾನೆ. ಇಂಥವರ ಸಹವಾಸ ಬಿಟ್ಟೋರುಂಟೇ ಎನ್ನುತ್ತಾಳೆ.

ಜಾಹ್ನವಿ ಇದೀಗ ಇವರುಗಳ ಫ್ಯಾನ್

ದಿ. ಶ್ರೀದೇವಿಯ ಮಗಳು ಜಾಹ್ನವಿಯ `ಧಡಕ್‌’ ಚಿತ್ರ ರಿಲೀಸ್‌ ಆಗಲಿದೆ. ಒಂದು ಹಾಟ್‌ ಫೋಟೋ ಶೂಟ್‌ ಮುಗಿಸಿದ ನಂತರ ಪ್ರೆಸ್‌ನವರನ್ನು ಉದ್ದೇಶಿಸಿ ಮಾತನಾಡುತ್ತಾ, “ನನಗೆ ಬಾಲಿವುಡ್‌ನಲ್ಲಿ ರಾಜ್‌ಕುಮಾರ್‌ ರಾವ್‌, ನವಾಜುದ್ದೀನ್‌ರಂಥ ಸಹಜಾಭಿನಯದ ಕಲಾವಿದರೆಂದರೆ ಇಷ್ಟ. ಯಾವ ರೀತಿ ಇವರ ಗಮನ ನನ್ನೆಡೆಗೆ ಸೆಳೆಯಲಿ ಎಂದು ಯೋಚಿಸುತ್ತೇನೆ. `ಬರೇಲಿ ಕೀ ಬರ್ಫಿ’ ಚಿತ್ರ ನೋಡಿದ ಮೇಲೆ, ಅದೇನಾಯ್ತೋ ಏನೋ….. ಇವರ ದೊಡ್ಡ ಅಭಿಮಾನಿ ಆಗಿದ್ದೇನೆ. ಇಂಥವರ ಜೊತೆ ನನಗೆ ಪೋಟೋ ಸೆಷನ್‌ ಸಿಕ್ಕಿದರೆ ನಿಜಕ್ಕೂ ಭಾಗ್ಯ!” ಎನ್ನುತ್ತಾಳೆ.

ಮೇಘನಾರ ಮುಂದಿನ ಚಿತ್ರ ಮತ್ತಷ್ಟು ರೋಚಕ

ಜಬರ್ದಸ್ತ್ ಚಿತ್ರಕಥೆ ಹಾಗೂ ಗಟ್ಟಿ ನಿರ್ದೇಶನಗಳಿಲ್ಲದೆ ಮೇಘನಾ ಗುಲ್ಜಾರ್‌ ಎಂದೂ ಹೊಸ ಚಿತ್ರಗಳ ನಿರ್ದೇಶನದ ಬಗ್ಗೆ ಯೋಚಿಸುವವರಲ್ಲ. ಆರುಷಿ ಹತ್ಯಾಕಾಂಡದ ಆಧಾರಿತ ಈಕೆಯ `ತಲ್ವಾರ್‌’ ಚಿತ್ರದ ನಂತರ ಇದೀಗ `ರಾಝಿ’ ಚಿತ್ರದಲ್ಲಿ, ಒಬ್ಬ ಅಮಾಯಕ ಭಾರತೀಯ ಹುಡುಗಿ ಪಾಕಿಸ್ತಾನಕ್ಕೆ ಹೋಗಿ ಸಿಲುಕಿ, ಅಲ್ಲಿ ತನ್ನ ವೈಯಕ್ತಿಕ ಜೀವನವನ್ನೇ ಪಣಕ್ಕೊಡ್ಡಿ ಭಾರತಕ್ಕಾಗಿ ಹೇಗೆ ಪತ್ತೇದಾರಿಕೆ ನಡೆಸಿದಳೆಂಬುದು ಹೆಚ್ಚು ರೋಚಕವೆನಿಸುತ್ತದೆ. ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೂಪರ್‌ ಹಿಟ್‌ ಎನಿಸಿತು. ಹೊಸ ಸುದ್ದಿ ಪ್ರಕಾರ ಮೇಘನಾ ಇದೀಗ ಬಯೋಪಿಕ್‌ ಕೈಗೆತ್ತಿಕೊಂಡಿದ್ದಾರೆ. ಅದೂ 1971ರ ಘೋರ ಯುದ್ಧದಲ್ಲಿ ಧೀಮಂತರಾಗಿ ಮೆರೆದ ಫೀಲ್ಡ್ ಮಾರ್ಶಲ್ ಸ್ಯಾಮ್ ಮಾಣಿಕ್‌ ಶಾ ಕುರಿತಾದುದು. ರೋನಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಈಕೆ ನಿರ್ದೇಶಕಿ.“ನಾನು `ರಾಝಿ’ ತಯಾರಿಸುತ್ತಿದ್ದಾಗ, 1971ರ ಯುದ್ಧದ ಕುರಿತಾಗಿ ವಿವರವಾಗಿ ಓದತೊಡಗಿದೆ. ಆಗಲೇ ನಾನು ಆ ಧೀಮಂತ ವ್ಯಕ್ತಿತ್ವವನ್ನು 3 ತಾಸುಗಳ ಚಿತ್ರ ಮಾಡಬೇಕೆಂದು ನಿರ್ಧರಿಸಿದೆ. ಈಗಾಗಲೇ ಶಾಂತನು ಹಾಗೂ ಭಾನಿ ಅಯ್ಯರ್ ಸ್ಕ್ರಿಪ್ಟ್ ಆರಂಭಿಸಿದ್ದಾರೆ. ಪಾತ್ರವರ್ಗ, ಶೂಟಿಂಗ್‌ ಮುಂದಿನ 6 ತಿಂಗಳಲ್ಲಿ ಆರಂಭ,” ಎನ್ನುತ್ತಾರೆ ಮೇಘನಾ.

ಚ್ಯಾರಿಟಿಗಾಗಿ ಸದಾ ಸಿದ್ಧ ಎನ್ನುವ ಫರ್ಹಾನ್

ಬಾಕ್ಸ್ ಆಫೀಸ್‌ನಲ್ಲಿ ಫರ್ಹಾನ್‌ ಚಿತ್ರಗಳು ಗೆಲ್ಲಲಿ ಬಿಡಲಿ, ಆತನ ಗಾಯನ ಹಾಗೂ FB ‌ಚಟುವಟಿಕೆಗಳು ಸದಾ ಈತನಿಗೆ ಹೆಸರು ತಂದುಕೊಟ್ಟಿವೆ. `ಲಖ್ನೌ ಸೆಂಟ್ರಲ್’ ಚಿತ್ರ ಪೂರಾ ತೋಪಾದಾಗಲೂ ಫರ್ಹಾನ್‌ ಹತಾಶನಾಗಲಿಲ್ಲ. ಚ್ಯಾರಿಟಿಗಾಗಿ ಈತ ಸದಾ ರಸ ಸಂಜೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾನೆ. FBನಲ್ಲಿ ಅದರ ಕುರಿತಾಗಿ ವಿನಂತಿಸುತ್ತಾನೆ. ಇತ್ತೀಚೆಗೆ ಶಿಲಾಂಗ್‌ನಲ್ಲಿ ನಡೆದ ಹಿಂಸಾಕಾಂಡದ ನಂತರ, ಈತ ಅಲ್ಲಿನ ಸ್ಥಳೀಯರು ಹಾಗೂ ಸಿಖ್‌ ಮಂದಿಯನ್ನು ಐಕ್ಯತೆ ಉಳಿಸಿಕೊಳ್ಳುವಂತೆ ಕಳಕಳಿಯ ಮನವಿ ಮಾಡಿದ್ದ. ಇಂಥ ಹತ್ಯಾಕಾಂಡಗಳು ನಮ್ಮ ದೇಶಕ್ಕೆ ಕಳಂಕ ಎಂದು ಎರಡೂ ತಂಡಗಳ ಮನ ಓಲೈಸಿದ್ದ.

ಆಯೇಶಾಳ ಹೊಸ ಅವತಾರ

ಕಿರುತೆರೆಯ ಹಿರಿ ಕಲಾವಿದೆ ರುಖ್‌ ಸಾರ್‌ ರೆಹಮಾನ್‌ರ ಮಗಳು ಆಯೇಶಾ ರೆಹಮಾನ್‌, ಸ್ಟಾರ್‌ ಪ್ಲಸ್‌ನ `ಮರಿಯಂ ಖಾನ್‌ ರಿಪೋರ್ಟರ್‌ ಲೈವ್‌’ ಧಾರಾವಾಹಿ ಮೂಲಕ ಟಿವಿಗೆ ಎಂಟ್ರಿ ಪಡೆದಿದ್ದಾಳೆ. ಈ ಧಾರಾವಾಹಿ ಮೂಲಕ ತಾಯಿ, ಮಗಳು ಒಟ್ಟಿಗೆ ಕಾಣಿಸುತ್ತಿದ್ದಾರೆ. ಈಗಾಗಲೇ `3 ಸ್ಟೋರೀಸ್‌’ ಚಿತ್ರದಲ್ಲಿ ಆಯೇಶಾ ಕಾಣಿಸಿಕೊಂಡಿದ್ದಾಳೆ. ಟಿವಿ ಖಂಡನೆಗೊಳ್ಳುತ್ತಿದ್ದಾಗಲೇ ನಾನು ನಟಿಸಿದ್ದ ಹಿರಿ ತೆರೆಯಲ್ಲಿ ಹಲವು ಹಿಟ್‌ ಚಿತ್ರಗಳನ್ನು ನೀಡಿದ ಬಳಿಕ 55ರ ಹರೆಯದ ಪೂನಂ ಧಿಲ್ಲಾನ್‌ ಇನ್ನೂ ಯಂಗ್‌ಆಗಿಯೇ ಕಾಣಿಸುತ್ತಾರೆ. 20 ವರ್ಷಗಳ ಮೊದಲೇ ಟಿವಿಗೆ ಕಾಲಿರಿಸಿದ್ದ ಈಕೆ, “ನನ್ನ ಕೆರಿಯರ್‌ ಚೆನ್ನಾಗಿದ್ದಾಗಲೇ ನಾನು ಕಿರುತೆರೆಯಲ್ಲಿ ನಟಿಸಲು ಆರಂಭಿಸಿದ್ದೆ. ಆ ಕಾಲದಲ್ಲಿ ಟಿವಿ ನಟನೆ ಎಂದರೆ, ಅವಕಾಶಗಳಿಲ್ಲದೆ ಅದಕ್ಕೆ ಇಳಿದಿದ್ದಾರೆ ಎಂದೇ ಮೂದಲಿಸಿ ಆಡಿಕೊಳ್ಳುತ್ತಿದ್ದರು. ಆದರೆ ನನಗಂತೂ ಯಾವ ಅಪಾಯ ಎದುರಾಗಲಿಲ್ಲ. ಕಿರುತೆರೆ ನನಗೆ ಹೆಚ್ಚು ರೋಚಕ ಎನಿಸಿದೆ, “ಎನ್ನುವ ಪೂನಂ, ಸೋನಿಯ `ದಿಲ್ ಹೀ ತೋ ಹೈ’ ಧಾರಾವಾಹಿಯ ಎಷ್ಟೋ ವರ್ಷಗಳ ನಂತರ ಇದೀಗ ಮತ್ತೆ ಮರಳಿದ್ದಾರೆ.

ಸ್ಟಂಟ್‌ ನನಗೆ ಹೊಸತಲ್ಲ

ಕ್ರೈಮ್, ಫ್ಯಾಂಟಸಿ  ಸಸ್ಪೆನ್ಸ್ ಆಧಾರಿತ ಕಥೆಗಳು ಪ್ರೇಕ್ಷಕರಿಗೆ ಸದಾ ಅಚ್ಚುಮೆಚ್ಚು. ಹೀಗಾಗಿ ದೆಹಲಿಯ ವಾಣಿ ಬಳಿ, ಸ್ಟಾರ್‌ಭಾರತ್‌ನ ಮಾಯಾವಿ, ಜಾದೂ ಕಥೆಗಳ ಶೋ `ಮಾಯಾವಿ ಮಲಿಂಗ್‌’ನ ಆಫರ್‌ ಬಂದಾಗ ಆಕೆ ತಕ್ಷಣ ಒಪ್ಪಿದಳಂತೆ. ವಾಣಿ ಹೇಳುತ್ತಾಳೆ, “ಇದು ಕಿರುತೆರೆಯಲ್ಲಿ ನನ್ನ ಮೊದಲ ಹೆಜ್ಜೆ. ಕಥೆಯ ವೈವಿಧ್ಯತೆಗೆ ಮನಸೋತು ನಾನು ಸ್ಟಂಟ್‌ ಸಹ ಕಲಿತೆ, ಕ್ರೋಮಾದಲ್ಲೂ ಪಳಗಿದ್ದೇನೆ. ಈ ಶೋ ಒಟ್ಟಾರೆ ಉತ್ತಮ ಸಹಕಲಾವಿದರನ್ನು ಹೊಂದಿದೆ. ನನಗಂತೂ ಮೊದಲ ಸಲ ನಟಿಸುತ್ತಿದ್ದೇನೆ ಅಂತ ಅನಿಸಲಿಲ್ಲ. ಎಲ್ಲರೂ ನನಗೆ ಉತ್ತಮ ಸಹಕಾರ ನೀಡಿದರು.”

100 ಕಂತು ದಾಟಿದ ಜೀಜಾಜಿ

ಸೋನಿ ಸಬ್‌ ಟಿವಿಯ ಜನಪ್ರಿಯ ಧಾರಾವಾಹಿ `ಜೀಜಾಜಿ ಛತ್‌ ಪರ್‌ ಹೈ’ ಈಗಾಗಲೇ ಯಶಸ್ವಿಯಾಗಿ 100 ಕಂತುಗಳನ್ನು ಮುಗಿಸಿದೆ. ಈ ಧಾರಾವಾಹಿಯ ಎಲ್ಲಾ ತಾರೆಯರೂ ಕೂಡಿ 100 ಕಂತಿನ ಈ ಯಶಸ್ಸನ್ನು ಅದ್ಭುತವಾಗಿ ಸೆಲೆಬ್ರೇಟ್‌ ಮಾಡಿದರು. ನಾಯಕಿ ಹೀಬಾ ಹೇಳುತ್ತಾಳೆ, “ಪ್ರೇಕ್ಷಕರು ಮನಸಾರೆ ಇದನ್ನು ಇಷ್ಟಪಟ್ಟಿದ್ದರಿಂದಲೇ ನಾವು 100 ಕಂತು ಪೂರೈಸಲು ಸಾಧ್ಯವಾಯಿತು. ನಾವು ಮುಂದೆ 500, 1000 ಕಂತು ಪೂರೈಸುವವರೆಗೂ ಪ್ರೇಕ್ಷಕರ ಸಹಕಾರ ಹೀಗೆ ಇರಲಿ ಎಂದು ಬಯಸುತ್ತೇವೆ!”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ