`ಅದ್ಧೂರಿ, ಅಂಬಾರಿ, ಭರಾಟೆ’ ಸಿನಿಮಾಗಳ ಮೂಲಕ ಲವ್ ಸ್ಟೋರಿಯನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದು ನಿರ್ದೇಶಕ ಎ.ಪಿ. ಅರ್ಜುನ್‌. ಪ್ರೇಮ ಕಥೆಗಳನ್ನು ಪ್ರೇಕ್ಷಕರಿಗೆ ಮನ ತಲುಪುವಂತೆ ಸ್ಕ್ರೀನ್‌ ಮೇಲೆ ಹೇಳುವ ಅರ್ಜುನ್‌ಈ ಬಾರಿ ಹೊಸದೊಂದು ಪ್ರೇಮ್ ಕಹಾನಿ ರೆಡಿ ಮಾಡಿದ್ದಾರೆ. ಆ ಚಿತ್ರದ ಹೆಸರು `ಕಿಸ್‌.’ ಟೈಟಲ್‌ನಲ್ಲೇ ಮೋಡಿ ಮಾಡುತ್ತಿರುವ ಈ ಚಿತ್ರದಲ್ಲಿ ಮುದ್ದಾದ ಜೋಡಿಯೊಂದನ್ನು ಪರಿಚಯಿಸುತ್ತಿದ್ದಾರೆ. ಆ  ಹೊಸ ಪ್ರತಿಭೆಗಳೇ ವಿರಾಟ್‌ ಮತ್ತು ಶ್ರೀಲೀಲಾ.

ಶ್ರೀಲೀಲಾ ತನ್ನ ಮೊದಲ ಚಿತ್ರ `ಕಿಸ್‌’ ತೆರೆಗೆ ಬರುವ ಮೊದಲೇ ಸಾಕಷ್ಟು ಬೇಡಿಕೆಯ ನಟಿಯಾಗಿಬಿಟ್ಟಿದ್ದಾಳೆ. ಯಾರು ಈ ಶ್ರೀಲೀಲಾ ಅಂತ ನೀವು ಕೇಳಿದರೆ ಪುಟ್ಟ ವಿವರ ಇಲ್ಲಿದೆ. ತನಗೆ ಎಂಟು ವರ್ಷವಿದ್ದಾಗಿನಿಂದಲೇ ಶಾಸ್ತ್ರೀಯ ನೃತ್ಯ ಶುರು ಹಚ್ಚಿಕೊಂಡ ಶ್ರೀಲೀಲಾಗೆ ಡಾಕ್ಟರ್‌ ಆಗುವ ಆಸೆಯಂತೆ, ಸ್ಟೇಜ್‌ ಮೇಲೆ ಭರತನಾಟ್ಯ ಕಾರ್ಯಕ್ರಮ ಕೊಟ್ಟಾಗೆಲ್ಲ ನೋಡಿದವರೆಲ್ಲ ಸಿನಿಮಾ ನಾಯಕಿಯಾಗಲು ಹೇಳಿ ಮಾಡಿಸಿದಂತಿದ್ದಾಳೆ ಎಂದು ಹೇಳುತ್ತಿದ್ದರಂತೆ. ಕಡೆಗೆ ಹಾಗೆಯೇ ಆಯಿತು. ಲೀಲಾಗೆ ನಾಯಕಿಯಾಗುವ ಆಸೆ ಇಲ್ಲದಿದ್ದರೂ ನೃತ್ಯಪಟುವಾಗಿದ್ದರಿಂದ ಆಸೆ ಚಿಗುರೊಡೆಯಿತು ಎನ್ನಬಹುದು.

ಅರ್ಜುನ್‌ ತಮ್ಮ ಚಿತ್ರ `ಕಿಸ್‌’ಗಾಗಿ ನಾಯಕಿಯನ್ನು ಹುಡುಕುತ್ತಿದ್ದಾಗ ಶ್ರೀಲೀಲಾಳನ್ನು ನೋಡಿದ ಕೂಡಲೇ ನಾಯಕಿ ಈ ಹುಡುಗಿಯೇ ಆಗಿರಬೇಕೆಂದು ಫಿಕ್ಸ್ ಮಾಡಿಬಿಟ್ಟರು. ಮೊದಲಿಗೆ ಸಿನಿಮಾದ ಟೈಟಲ್ ಕೇಳಿದಾಗ ಏನಪ್ಪಾ ಇದು ಹೀಗಿದೆ, ಅಂತ ಲೀಲಾ ಮನೆಯಲ್ಲಿ ರಾಗ ಎಳೆದದ್ದೂ ಉಂಟಂತೆ.

ಯಾವಾಗ ಕಥೆ ಕೇಳಿದರೋ ಎಲ್ಲರಿಗೂ ಹಿಡಿಸಿತು. ಯುವ ಪ್ರೇಮಿಗಳ ಲವ್ ಸ್ಟೋರಿಯಾಗಿದ್ದರಿಂದ ಟೈಟಲ್ ಆಕರ್ಷಕವಾಗಿರಲೆಂದು ಅರ್ಜುನ್‌ಇಟ್ಟಿರಬಹುದೆಂದು ಊಹಿಸಿರಬಹುದು. ಡಾಕ್ಟರ್‌ ಆಗುತ್ತೇನೆ ಅಂತ ಕನಸು ಕಂಡಿದ್ದ ಲೀಲಾಗೆ ಪಿ.ಯು.ಸಿ ಓದುವಾಗಲೇ `ಕಿಸ್‌’ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾದಳು. ಅದಾದ ಕೆಲವೇ ದಿನಗಳಲ್ಲಿ ಶ್ರೀ ಮುರುಳಿಯ `ಭರಾಟೆ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿಬಿಟ್ಟಳು.

`ಕಿಸ್‌’ ಫಸ್ಟ್ ಲುಕ್‌ ನೋಡಿದವರೆಲ್ಲ ಈ ಹೊಸ ಪ್ರತಿಭೆಗಳ ಬಗ್ಗೆ  ಪ್ರಶಂಸೆ ಮಾತುಗಳನ್ನೇ ಆಡುತ್ತಿದ್ದಾರೆ. ನಿರ್ದೇಶಕ ಅರ್ಜುನ್‌ಪ್ರೇಮಿಗಳ ದಿನಾಚರಣೆಗೆ ಟೀಸರ್‌ ಬಿಡುಗಡೆ ಮಾಡುತ್ತಿದ್ದಾರೆ.

ಶ್ರೀಲೀಲಾಳ ಲುಕ್‌ಮತ್ತು ಪರ್ಫಾರ್ಮೆನ್ಸ್ ಬಗ್ಗೆ ಸಾಕಷ್ಟು ಹೊಗಳಿಕೆಗಳು ಸಂದಾಯವಾಗುತ್ತಿದೆ. ಅದ್ಧೂರಿತನದಿಂದ ಕೂಡಿರುವ `ಕಿಸ್‌’ ಚಿತ್ರದ ಹಾಡುಗಳು ವಿದೇಶದಲ್ಲಿ ಚಿತ್ರೀಕರಣಗೊಳ್ಳುತ್ತಿವೆ.

ಈ ಸಿನಿಮಾದಲ್ಲಿ ನಟಿಸುತ್ತಲೇ ಅಭಿನಯದ ಕಡೆ ಹೆಚ್ಚು ಆಸಕ್ತಿ ತೋರುತ್ತಿರುವ ಶ್ರೀಲೀಲಾಳಿಗೆ ಇದು ಲಾಂಚಿಂಗ್‌ ಚಿತ್ರವಾಗಲಿದೆ. ಬಿಡುಗಡೆಗೆ ಮೊದಲೇ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿರುವ ಶ್ರೀಲೀಲಾ, “ಅರ್ಜುನ್‌ ಅವರ ಸೆಟ್ಟಿಗೆ ನಿರ್ದೇಶಕ ಚೇತನ್‌ ಭೇಟಿ ಕೊಟ್ಟಾಗಲೇ ಅವರು ತಮ್ಮ ಹೊಸ ಚಿತ್ರ `ಭರಾಟೆ’ಗೆ ನನ್ನನ್ನೇ ಹಾಕಿಕೊಳ್ಳಬೇಕೆಂದು ಡಿಸೈಡ್‌ಮಾಡಿದ್ದರಂತೆ. ಹಾಗಾಗಿ ನನ್ನ ಬರ್ಥ್‌ಡೇ ದಿನ `ಭರಾಟೆ’ ಚಿತ್ರದಲ್ಲಿ ನಾನು ನಾಯಕಿ ಅಂತ ಅನೌನ್ಸ್ ಮಾಡಿ ಬರ್ಥ್‌ಡೇ ಗಿಫ್ಟ್ ಕೊಟ್ಟಿದ್ದರು,” ಎನ್ನುತ್ತಾಳೆ.

`ಭರಾಟೆ’ ಚಿತ್ರದಲ್ಲಿ  ನನ್ನದು ಬಬ್ಲಿ ಹುಡುಗಿ ಪಾತ್ರ ಎಂದು ಹೇಳುವ ಶ್ರೀಲೀಲಾ ಈ ಚಿತ್ರ ಬಿಡುಗಡೆಗೆ ಮೊದಲೇ ಇನ್ನೆಷ್ಟು ಚಿತ್ರಗಳಿಗೆ ಸಹಿ ಹಾಕುತ್ತಾಳೋ ಎಂದು ಕಾದು ನೋಡಬೇಕು. ಆಲ್ ದಿ ಬೆಸ್ಟ್!

– ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ