ರಚಿತಾ ರಾಮ್ ಅಂದ್ರೆ ಸ್ಯಾಂಡಲ್‌ವುಡ್‌ ಕ್ವೀನ್‌, ಡಿಂಪಲ್ ಕ್ವೀನ್‌, ಲಕ್ಕಿ ಕ್ವೀನ್‌ ಹೀಗೆ ಅನೇಕ ಹೆಸರುಗಳು ಸೇರಿಕೊಳ್ತಿವೆ.

ರಚಿತಾ ಕಿರುತೆರೆಯಿಂದ ಬಂದಂಥ ನಟಿ. ಇಂದು ಜನಪ್ರಿಯ ತಾರೆ. ಇದೆಲ್ಲ ಹೇಗೆ ಸಾಧ್ಯವಾಯ್ತು ಅಂತ ನೀವಂದುಕೊಂಡರೆ ರಚಿತಾ ಹೇಳೋದನ್ನೇ ಕೇಳಿದರೆ ಚೆನ್ನಾಗಿರುತ್ತದೆ.

“ನಾನು ಫಿಲ್ಮ್ ಫ್ಯಾಮಿಲಿಯಿಂದ ಬಂದವಳಲ್ಲ. ನನಗ್ಯಾರೂ ಗಾಡ್‌ಫಾದರ್‌ ಇಲ್ಲ. ನಾನ್ಯಾವತ್ತೂ ಸಿನಿಮಾ ತಾರೆಯಾಗಬೇಕೆಂದು ಆಸೆ ಪಟ್ಟವಳೇ ಅಲ್ಲ. ಟಿವಿ ಸೀರಿಯಲ್‌ನಲ್ಲಿ  ಅವಕಾಶ ಅದಾಗಿಯೇ ಬಂದಿತು. ಅದರಲ್ಲಿ ನಟಿಸಿದೆ. ಅದೇ ಸಮಯಕ್ಕೆ `ಬುಲ್ ಬುಲ್’ ಚಿತ್ರ ತಂಡದಿಂದ ಆಫರ್‌ಬಂತು. ಇಂಥ ದೊಡ್ಡ ಆಫರ್‌ ಅದರಲ್ಲೂ ದರ್ಶನ್‌ ಸರ್‌ ಜೊತೆ ನಟಿಸುವ ಅವಕಾಶ ನಾನಂತೂ ಕನಸಿನಲ್ಲೂ ಕಂಡಿರಲಿಲ್ಲ. ಎಲ್ಲದಕ್ಕೂ ಆತನೊಬ್ಬನೇ ಕಾರಣ!

ಯಾರಿದು ರಚಿತಾ…..?

ನಾನು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಆಂಜನೇಯ ಭಕ್ತಳು. ನನಗೇನೇ ಬೇಕೆಂದರೂ ಆಂಜನೇಯ ದೇವಸ್ಥಾನ ಗಿರಿನಗರದಲ್ಲಿದೆ. ಅಲ್ಲಿಗೆ ಹೋಗಿ ಕೇಳುವ ರೂಢಿ. ಆಂಜನೇಯ ಏನು ಹೇಳ್ತಾನೋ ಅದನ್ನೇ ನಾನು ಕೇಳೋದು. `ಅರಸಿ’ ಟಿ.ವಿ. ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ದೊಡ್ಡ ಸಿನಿಮಾ ಕಂಪನಿಯಿಂದ ಫೋನ್‌ ಕರೆ ಬಂತು. ನಾನು ಆಂಜನೇಯನ ಬಳಿ ಹೋಗಿ ನಮಸ್ಕಾರ ಹಾಕಿ ಬಂದೆ. ಏನೇ ಬಂದರೂ ಒಳ್ಳೆಯದು ಬರಲಿ ಅಂತ ಕೇಳಿಕೊಂಡೆ, ಆಂಜನೇಯ ನಾನು ಕೇಳದಿದ್ದರೂ ಕೊಟ್ಟೆ ಕೊಡುತ್ತಾನೆ ಎಂಬುದು ಗೊತ್ತಿದೆ. ಮರುದಿನವೇ `ಬುಲ್‌ ಬುಲ್‌’ ಚಿತ್ರಕ್ಕೆ ನೀವು ನಾಯಕಿಯಾಗಿ ಆಯ್ಕೆಯಾಗಿದ್ದೀರಾ ಅಂತ ನ್ಯೂಸ್‌ ಬಂತು. ಜೈ ಆಂಜನೇಯ ಅಂತ ಸಿನಿಮಾರಂಗಕ್ಕೆ ಹೊರಟುಬಿಟ್ಟೆ. ಇಲ್ಲಿಯವರೆಗೂ ನಾನು ಮಾಡಿಕೊಂಡು ಬಂದಿರುವ ಎಲ್ಲಾ ಚಿತ್ರಗಳೂ, ಪಾತ್ರಗಳೂ ಆ ದೇವರು ಕೊಟ್ಟಿರುವ ಆಶೀರ್ವಾದ. ನನ್ನ ಸೋಲು, ಗೆಲುವು, ಜನಪ್ರಿಯತೆ ಎಲ್ಲಾ ಕ್ರೆಡಿಟ್‌ನಿನಗೇ ಸೇರಿದ್ದು ಅಂತ ಮೊದಲೇ ಹೇಳಿಬಿಟ್ಟಿರುತ್ತೇನೆ. ಜೈ ಹನುಮಾನ್‌!

ನಿಜ ಹೇಳು…. ನಟಿಯಾಗಬೇಕೆಂಬ ಆಸೇನೇ ಇರಲಿಲ್ವಾ?

ನೀವು ನಂಬೋದಿಲ್ಲ, ನನಗಂತೂ ಸತ್ಯವಾಗಲೂ ಅನಿಸಿರಲಿಲ್ಲ. ಏಕೆಂದರೆ ನನಗೆ ಅಭಿನಯ ಗೊತ್ತಿರಲಿಲ್ಲ. ಮೇಕಪ್‌ ಹಾಕೋಕೆ ಇಷ್ಟವಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೇನೇ ಇರಲಿಲ್ಲ. ಕ್ಯಾಮೆರಾ ಫೇಸ್‌ ಮಾಡೋದು, ಡೈಲಾಗ್‌ ಹೇಳೋದು ಇದು ಯಾವುದೂ ಗೊತ್ತಿರಲಿಲ್ಲ. ಸೀರಿಯಲ್ ಮಾಡುವಾಗ ಡೈರೆಕ್ಟರ್‌ ಅರವಿಂದ್‌ ಕೌಶಿಕ್‌ ನಂಗೆ ಟ್ರೇನ್‌ ಮಾಡಿದರು. ಆಗಲೇ ಎಲ್ಲರೂ ಹೇಳೋರು ನಿನಗೆ ಒಳ್ಳೆ ಸ್ಕ್ರೀನ್‌ ಪ್ರೆಸೆನ್ಸ್ ಇದೆ. ಹೀರೋಯಿನ್‌ ಆಗು ಅಂತ. ನಾನಂತೂ ಯಾರ ಬಳಿಯೂ ಅವಕಾಶ ಕೇಳಿಕೊಂಡು ಹೋದವಳಲ್ಲ. ಫೋಟೋ ಶೂಟ್‌ ಮಾಡಿಸಿ ಪ್ರೊಡಕ್ಷನ್‌ ಕಂಪನಿಗಳಿಗೆ ಕೊಟ್ಟವಳಲ್ಲ. ಅದೆಲ್ಲ ನಾನು ಮಾಡಿಲ್ಲ, ಮುಂದಕ್ಕೆ ಮಾಡುವುದೂ ಇಲ್ಲ. ನನ್ನ  ಭವಿಷ್ಯವನ್ನು ದೇವರೇ ರೂಪಿಸಬೇಕು ಅಂತ ಆಂಜನೇಯನಿಗೇ ಬಿಟ್ಟಿದ್ದೆ. ವಿದ್ಯಾಭ್ಯಾಸ ಮುಂದುವರಿಸು ಅಂದರೆ ಅದಕ್ಕೂ ರೆಡಿ ಇದ್ದೆ. ಒಳ್ಳೆ ಹುಡುಗ ಸಿಕ್ಕರೆ ಮದುವೆಯಾಗಿ ಸಂಸಾರ ಮಾಡಿಕೊಂಡಿರುವ ಅಂದರೆ ಅದಕ್ಕೂ ಸೈ. ಒಟ್ಟಿನಲ್ಲಿ ಯಾವ ದಾರಿ ತೋರಿಸತ್ತೀಯೋ ಅಲ್ಲಿಗೆ ಹೋಗ್ತೀನಿ ಅಂತ ಎಲ್ಲ ಭಾರವನ್ನೂ ಹಾಕಿಬಿಟ್ಟಿದ್ದೆ. `ನೀನು ನಾಯಕಿಯಾಗು,’ ಅಂತ ದೇವರು ಹೇಳಿದರು, ನಾನೀಗ ಅದೇ ಆಗಿದ್ದೀನಿ.

ಉಳಿದೆಲ್ಲ ನಾಯಕಿಯರಿಗಿಂತ ಡಿಫರೆಂಟ್‌ ಆಗಿರುವ ರಚಿತಾ ರಾಮ್ ಲೈಫ್‌ನಲ್ಲಿ ಹೇಗಿರುತ್ತಾಳೆ?

ನೀವು ನಂಬೋದಿಲ್ಲ. ಸಂಜೆ ಆರರ ನಂತರ ನಾನು ನನ್ನ ಮನೆ ಫ್ಯಾಮಿಲಿ ಜೊತೆ ಸೇರಿಕೊಳ್ತೀನಿ. ಒಂದು ಸಲ ಮೇಕಪ್‌ತೆಗೆದುಬಿಟ್ಟರೆ ನಾನು  ಸಿನಿಮಾ ನಟಿಯಾಗಿರೋದಿಲ್ಲ. ಅಪ್ಪ, ಅಮ್ಮ, ನಾನು…. ಮನೆಯಷ್ಟೇ ನನ್ನ ಪ್ರಪಂಚ. ಸಿನಿಮಾದವರ ಜೊತೆ ಯಾವುದೇ ರೀತಿ ಒಡನಾಟವಿಲ್ಲ. ಆರರ ನಂತರ ಈವೆನ್‌ ಶಾರೂಖ್‌ಖಾನ್‌ ಬಂದು ಆ್ಯಕ್ಟ್ ಮಾಡು ಅಂದರೂ ಮಾಡೋದಿಲ್ಲ. ಸೆಟ್‌ನಲ್ಲಿದ್ದಾಗ ನನ್ನ ಮನೆಯಿಂದ ಒಂದು ಫೋನ್‌ ಕಾಲ್ ಕೂಡಾ ಬರೋದಿಲ್ಲ. ಶೂಟಿಂಗ್‌ ಟೈಮಿನಲ್ಲಿ ಯಾರೂ ಡಿಸ್ಟರ್ಬ್‌ ಮಾಡೋದಿಲ್ಲ. ಆರು ಗಂಟೆ ನಂತರ ನಾನು ಮನೆ ಹುಡುಗಿ. ಅಲ್ಲಿ ನಾನು ಹೀರೋಯಿನ್‌ ಆಗಿರೋದಿಲ್ಲ. ಮನೆ ಕೆಲಸವನ್ನೆಲ್ಲ ನಾನೇ ಮಾಡುತ್ತಿರುತ್ತೀನಿ. ಕಂಪ್ಲೀಟ್‌ ಮನೆ ಮಗಳು.

ನೀನೀಗ ನಂ.ಒನ್‌ ನಾಯಕಿ ಅಂತಿದ್ದಾರೆ. ಹೇಗನಿಸುತ್ತೆ?

ಇದೆಲ್ಲ ನಂಬರ್‌ ಗೇಮ್, ನಂ.ಒನ್‌ ಇದೆಲ್ಲ ನಂಬೋದಿಲ್ಲ ಅಂತ ನಾನು ಮಾತ್ರ ಹೇಳೋದಿಲ್ಲ. ನಾನು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ದಿನವೇ ಟಾರ್ಗೆಟ್‌ ಹಾಕ್ಕೊಂಡಿದ್ದೆ. ಆದರೆ ನಂ.ಒನ್‌ ನಾಯಕಿ ಆಗಲೇಬೇಕು ಅಂತ. ಈ ಸ್ಥಾನ ಪಡೆಯೋದಕ್ಕೆ ನನ್ನ ಅಪಾರ ಪರಿಶ್ರಮ ಕೂಡಾ ಇದೆ. ಹಾಗೇ ಅದೃಷ್ಟದಿಂದ ಸಿಕ್ಕಿದ್ದಲ್ಲ. ದೊಡ್ಡ ದೊಡ್ಡ ಹೀರೋಗಳ ಜೊತೆ ನಟಿಸಿ ನಂ.ಒನ್‌ ಆದಳು ಅಂತ ಜನ ಅಂದುಕೊಳ್ಳಬಹುದು.

ಯಶಸ್ವೀ ನಾಯಕರ ಜೊತೆ ನಟಿಸಿದ್ದೂ ಕೂಡಾ ಕಾರಣವಿರಬಹುದೇನೋ ಅಂತ ಪ್ರಶ್ನೆ ಹಾಕಿದರೆ?

ಹೌದು, ದೊಡ್ಡ ಹೀರೋಗಳ ಜೊತೆ ನಟಿಸಿರಬಹುದು. ಅವರ ಪಕ್ಕದಲ್ಲಿ ಬರೀ ಶೋ ಪೀಸ್‌ ತರಹ ನಿಂತುಕೊಂಡಿದ್ದಿದ್ರೆ ನಾನಿವತ್ತು ಇಷ್ಟು ಬೆಳೆಯುತ್ತಿರಲಿಲ್ಲ. ನನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ನನ್ನ ಪ್ರತಿಭೆ ತೋರಿಸಿದೆ. ಜನಕ್ಕೆ ಇಷ್ಟವಾಯ್ತು. ಸಿನಿಮಾಗೆ ಹೀರೋಗಳು ಪಿಲ್ಲರ್‌ ತರಹ ನಿಂತಿರುತ್ತಾರೆ ನಿಜ. ಆದರೆ ಅವರ ಜೊತೆ ನಾನು ಕೂಡಾ ನನಗೆ ಸಿಕ್ಕ ಪಾತ್ರದ  ಮೂಲಕ ಭದ್ರವಾಗಿ ನಿಲ್ಲುವ ಪ್ರಯತ್ನ ಮಾಡುತ್ತಲೇ ಬಂದಿದ್ದೀನಿ. ಒಂದು ವಿಷಯದಲ್ಲಿ ನಾನು ತುಂಬಾನೇ ಲಕ್ಕಿ. ಕನ್ನಡದ ಎಲ್ಲ ದೊಡ್ಡ ದೊಡ್ಡ  ನಾಯಕರ ಜೊತೆ ನಟಿಸಿದ್ದೇನೆ. ಸಿನಿಮಾದಲ್ಲಿ ಅವರ ಪಕ್ಕ ನಿಂತುಕೊಳ್ಳೋದೆ ಒಂದು ಛಾಲೆಂಜಿಂಗ್‌.ಸ್ಕ್ರೀನ್‌ ಮೇಲೆ ಅವರು ಬಂದರೆ ವಿಷಲ್ ಹೊಡೀತಾರೆ. ಅವರುಗಳು ಮಾಡುವ ಫರ್‌ಫಾರ್ಮೆನ್ಸ್ ಎದುರು ನಾನು ಕೂಡಾ ಹಂಡ್ರೆಡ್‌ಪರ್ಸೆಂಟ್‌ ಎಫರ್ಟ್‌ ಹಾಕಿದ್ರೇನೇ ಜನ ನನ್ನನ್ನು ಗಮನಿಸೋದು.

ನನ್ನ ತಂದೆ ಒಂದು ಮಾತು ಹೇಳಿದ್ದಾರೆ, “ನಿನ್ನ ಮುಂದೆ ಅಮಿತಾಭ್ ಅಂತ ದೊಡ್ಡ ಕಲಾವಿದರು ಬಂದು ನಿಂತರೂ ಆ್ಯಕ್ಟ್ ಮಾಡುವಾಗ ನೀನೇ ಬೆಸ್ಟ್ ಅಂದುಕೊಂಡು ಮಾಡು,” ಅಂತ. ಹಾಗಾಗಿ ನಾನು ಏನೇ ಕೆಲಸ ಮಾಡಲಿ, `ಐ ಆ್ಯಮ್ ದಿ ಬೆಸ್ಟ್!’ ಅಂದುಕೊಳ್ತೀನಿ. ಕನ್ನಡಿ ಮುಂದೆ ನಿಂತಾಗಲೂ ಸಹ ನನ್ನಂತಹ ಚೆಲುವೆ ಯಾರೂ ಇಲ್ಲ, ಅಂದುಕೊಂಡು ಹೆಮ್ಮೆಪಡ್ತೀನಿ.

ಪ್ರತಿಯೊಬ್ಬರೂ ಇಂಥ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದೇ ಒಳ್ಳೆಯದು ಎಂಬುದನ್ನು ರಚಿತಾ ನಿರೂಪಿಸಿದ್ದಾಳೆ.

– ಸರಸ್ವತಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ