ಮುಸ್ಸಂಜೆ ಆಗುತ್ತಿರುವುದನ್ನು ಕಂಡು ದೀಪಿಕಾ ಕೂದಲು ಸರಿಪಡಿಸಿಕೊಂಡು ಮೇಲೆದ್ದಳು. ಅವಳ ರೇಷ್ಮೆಯಂತಹ ಕೂದಲು ಮತ್ತೆ ಮತ್ತೆ ಗುಲಾಬಿ ಕೆನ್ನೆಗಳನ್ನು ಮುತ್ತಿಡುತ್ತಿದ್ದವು, ಅವಳು ಪದೇ ಪದೇ ಅವುಗಳನ್ನು ಹಿಂದೆ ತಳ್ಳುತ್ತಿದ್ದಳು.
“ನಿನ್ನ ಸುಂದರ ಮುಖದ ಮೇಲೆ ಮುಂಗುರುಳು ಇರಲಿ ಬಿಡು…. ಮೋಡಗಳು ಚಂದ್ರನನ್ನು ಮರೆಮಾಡುವ ಹಾಗೆ ಇರುತ್ತದೆ,” ಸಂತೋಷ್ ಅವಳ ಮುಖವನ್ನೇ ದಿಟ್ಟಿಸುತ್ತಾ ಹೇಳಿದ.
“ಈಗಾಗಲೇ ಸೂರ್ಯ ಮನೆಗೆ ಹೋಗಿ ಆಯಿತು. ನೀನು ಇನ್ನೂ ಹೀಗೇ ಮಲಗಿದ್ದರೆ ಈ ಚಂದ್ರನೂ ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ ಅಷ್ಟೆ,” ಎಂದಳು ದೀಪಿಕಾ.
“ಅದಕ್ಕೆ ಯಾಕೆ ಭಯ? ನಿನ್ನನ್ನು ಮನೆಯಿಂದ ಹೊರಗೆ ಹಾಕಿದರೆ, ಕರೆದುಕೊಂಡು ಹೋಗೋದಿಕ್ಕೆ ನಾನು ಸಿದ್ಧನಾಗಿದ್ದೇನಲ್ಲ…..”
“ಮಾತು ಸಾಕು ಎದ್ದೇಳು. ಉದಯ್ ಬರುವ ಹೊತ್ತಿಗೆ ನಾನು ಬೆಡ್ ಎಲ್ಲವನ್ನೂ ಸರಿಪಡಿಸಬೇಕು. ನಾಳೆ ಬಂದಾಗ ಉಳಿದ ಮಾತು…..” ದೀಪಿಕಾ ಹಾಸಿಗೆ, ಹೊದಿಕೆಗಳನ್ನು ಚೊಕ್ಕಗೊಳಿಸುತ್ತಾ ಹೇಳಿದಳು.
“ಅದೂ ಸರಿ. ಆದರೆ ಹೀಗೆ ಕದ್ದುಮುಚ್ಚಿ ಸೇರೋದು ನನಗೆ ಇಷ್ಟವಾಗೋದಿಲ್ಲ. ನಾವು ಪ್ರೇಮಿಗಳು. ತಪ್ಪು ಮಾಡುವವರ ಹಾಗಿದ್ದೇವೆ,” ಸಂತೋಷ್ ಬೇಸರದ ಧ್ವನಿಯಲ್ಲಿ ಹೇಳಿದ.
“ನಾವು ಮಾಡುತ್ತಿರುದು ತಪ್ಪು ತಾನೇ? ನಮ್ಮ ಮದುವೆ ಆಗಿದ್ದಿದ್ದರೆ ಅದು ಬೇರೆ ಮಾತು. ಆದರೆ ನಾನೀಗ ಉದಯ್ನ ಪತ್ನಿ…… ನೀನು ನಮ್ಮ ಮನೆಗೆ ಬರುತ್ತಿರುವುದು ಸಂಗೀತದ ಮೇಷ್ಟರ ಹಾಗೆ. ಅಂಥದರಲ್ಲಿ ನಮ್ಮ ಈ ಸಂಬಂಧ ತಪ್ಪಲ್ಲದೆ ಮತ್ತೇನು..?”
“ನಾವಿಬ್ಬರು ತಾನೇ ಮೊದಲು ಪ್ರೀತಿಸಿದ್ದು. ಉದಯ್ ಆಮೇಲೆ ಬಂದದ್ದು. ನಿಮ್ಮ ಮನೆಯವರು ಜಾತಿ ಜಾತಿ ಅಂತ ನಮ್ಮ ಪ್ರೀತಿಗೆ ಅಡ್ಡಹಾಕಿ ನಿನಗೆ ಬೇರೆ ಯಾವುದೋ ಊರಿನಲ್ಲಿ ಮದುವೆ ಮಾಡಿಲ್ಲದಿದ್ದರೆ…..”
“ಆ ಹಳೇ ವಿಷಯ ಬಿಟ್ಟುಬಿಡು. ಈ ಗೊತ್ತಿಲ್ಲದ ಊರಿನಲ್ಲಿ ನಾವು ಒಬ್ಬರಿಗೊಬ್ಬರು ಸಿಕ್ಕಿದ್ದೇವಲ್ಲ….. ಮತ್ತೆ ನಮಗೇನು ಕಡಿಮೆಯಾಗಿದೆ ಹೇಳು. ನನ್ನ ಮನಸ್ಸಿನಲ್ಲಿ ನಿನ್ನ ಮೇಲೆ ಇರೋ ಪ್ರೀತಿಯನ್ನು ಗುರುತಿಸಿ ದೈವವೇ ನಮ್ಮನ್ನು ಈ ರೀತಿ ಒಂದುಗೂಡಿಸಿರಬಹುದು.”
ಸಂತೋಷ್ ಹೋದ ಕೂಡಲೇ ದೀಪಿಕಾ ಕೊಠಡಿಯನ್ನು ಸುಸ್ಥಿತಿಗೊಳಿಸಿ ಸ್ವೆಟರ್ ಹೆಣೆಯುತ್ತಾ ಕುಳಿತಳು. ದೀಪಿಕಾಳ ಕೈಯಿಂದ ತಯಾರಾದ ವಸ್ತುಗಳೆಂದರೆ ಸಂತೋಷನಿಗೆ ಬಲು ಮೆಚ್ಚಿಗೆ. ಆದ್ದರಿಂದ ಅವಳು ಸ್ವೆಟರ್ ಅಥವಾ ಗ್ಲೌಸ್ ಹೆಣೆದು ಸಂತೋಷನಿಗೆ ಉಡುಗೊರೆಯಾಗಿ ಕೊಡುತ್ತಿದ್ದಳು. ಅದರ ಬಗ್ಗೆ ಉದಯ್ ಕೇಳಿದರೆ ಅದು ತನ್ನ ತಮ್ಮನಿಗೆ ಅಥವಾ ಗೆಳತಿಗೆ ಎಂದು ಸುಳ್ಳು ಹೇಳುತ್ತಿದ್ದಳು.
ದೀಪಿಕಾ ಮತ್ತು ಉದಯರ ವಿವಾಹವಾಗಿ 2 ವರ್ಷಗಳು ಕಳೆದಿದ್ದವು. ಹೊಸತರಲ್ಲಿ ದೀಪಿಕಾ ಬಹಳ ಸಪ್ಪಗಿರುತ್ತಿದ್ದಳು. ಹೊಸ ಜಾಗ, ಹೊಸ ಬದುಕು, ಹಿಂದಿನ ಜೀವನವನ್ನು ನೆನೆಸಿಕೊಂಡು ಬೇಸರದಲ್ಲಿದ್ದಾಳೆ ಎಂದು ಉದಯ್ ಭಾವಿಸುತ್ತಿದ್ದ. ಆದರೆ ವಾಸ್ತವವಾಗಿ ತನ್ನ ಪ್ರೀತಿಯ ಸಂತೋಷ್ನಿಂದ ದೂರವಾಗಬೇಕಾಗಿ ಬಂದದ್ದೇ ಅದಕ್ಕೆ ಕಾರಣವಾಗಿತ್ತು.
ಅದೊಂದು ಸಾಯಂಕಾಲವನ್ನು ಮರೆಯಲು ದೀಪಿಕಾಳಿಗೆ ಸಾಧ್ಯವೇ ಆಗಿಲ್ಲ. ಆ ದಿನ ಸಂತೋಷನೊಂದಿಗೆ ಸಿನಿಮಾ ನೋಡಿಕೊಂಡು ಕೈ ಕೈ ಹಿಡಿದುಕೊಂಡು ಬರುತ್ತಿರುವಾಗ ಇದ್ದಕ್ಕಿದ್ದಂತೆ ಅವಳ ಅಣ್ಣ ಎದುರಾದ. ಮಿಂಚು, ಸಿಡಿಲು ಎರಗಿದಂತಾಗಿತ್ತು. ರಸ್ತೆಯೆಂದೂ ನೋಡದೆ ಅವಳನ್ನು ದರದರನೆ ಎಳೆದು ತಂದು ಮನೆಯ ಕೋಣೆಯೊಳಕ್ಕೆ ತಳ್ಳಿದ್ದ. ಆ ಕೋಣೆಯೇ ಅವಳ ಪ್ರಪಂಚವಾಯಿತು. ಯಾರನ್ನೂ ಭೇಟಿಯಾಗುವಂತಿಲ್ಲವಾಯಿತು. 2 ದಿನ ಊಟ ಮಾಡದೆ ಹಠ ಮಾಡಿ ಕುಳಿತಳು. ಅವಳ ಹಠಕ್ಕೆ ಮನೆಯವರು ಮಣಿಯಲಿಲ್ಲ.
ದೀಪಿಕಾ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವಳು. ಸಂತೋಷ್ ಬೇರೆ ಜಾತಿಗೆ ಸೇರಿದವನು. `ಆ ಹುಡುಗ ಜೀವಸಹಿತ ಉಳಿಯಬೇಕು ಅಂತ ಇದ್ದರೆ ಅವನನ್ನು ಮರೆತುಬಿಡು,’ `ಅಪ್ಪಾ, ನೀ ಹ್ಞೂಂ ಅಂತ ಹೇಳಿ. ಆ ನೀಚನ ಮೂಳೆ ಕೂಡ ಸಿಗದ ಹಾಗೆ ಮಾಡುತ್ತೇನೆ,’
`ಈ ನಾಚಿಕೆಗೆಟ್ಟವಳಿಗೆ ವಿಷ ಕೊಟ್ಟು ಸಾಯಿಸಿಬಿಡೋಣ ಅಂತ ಅನ್ನಿಸುತ್ತೆ,’ ಇವೇ ಮುಂತಾದ ಮಾತುಗಳನ್ನು ಅವಳು ದಿನ ಕೇಳುವಂತಾಯಿತು. ಹೀಗಾಗಿ ಅವಳು ಮಾನಸಿಕವಾಗಿ ಕುಸಿದಳು. ಮುಂದಿನ 15 ದಿನಗಳಲ್ಲಿ ಅವಳ ಮದುವೆ ನಿಶ್ಚಯವಾಯಿತು. ತನ್ನನ್ನು ಮದುವೆಯಾಗಲಿರುವ ಹುಡುಗನ ಬಗ್ಗೆ ತಿಳಿಯಬೇಕೆನ್ನುವ ಆಸಕ್ತಿಯೇ ಅವಳಲ್ಲಿ ಇರಲಿಲ್ಲ. ಬೊಂಬೆಯಂತೆ ಮನೆಯವರು ಹೇಳಿದುದನ್ನು ಮಾಡುತ್ತಿದ್ದಳು. ಮದುವೆಯ ನಂತರ ದೂರದ ಊರಿನಲ್ಲಿದ್ದ ಉದಯನ ಮನೆ ಸೇರಿದಳು. ಉದಯನ ತಂದೆ ತಾಯಿಯರು ಹಳ್ಳಿಯಲ್ಲಿ ವಾಸಿಸುತ್ತಿದ್ದರು.
ಉದಯ್ ಒಳ್ಳೆಯ ಹುಡುಗ. ಗಂಭೀರ, ಸರಳ ಸ್ವಭಾವದವನು. ಇಂತಹ ಹುಡುಗನನ್ನು ಪತಿಯಾಗಿ ಪಡೆಯುವುದು ಯಾವುದೇ ಹುಡುಗಿಗೆ ಅತ್ಯಂತ ಸಂತೋಷದ ವಿಷಯ. ಉದಯ್ ತನ್ನ ಪತ್ನಿಯ ಸಂತೋಷದ ಕಡೆ ಗಮನವಿರಿಸಿದ್ದ. ಮೊದಲ ರಾತ್ರಿಯಂದು ದೀಪಿಕಾಳ ಮುಖದಲ್ಲಿನ ದುಃಖದ ಛಾಯೆಯನ್ನು ಕಂಡು ಅವಳಿಗೆ ತೊಂದರೆ ಮಾಡಲಿಲ್ಲ.
ಕೆಲವಾರು ದಿನಗಳು ಬೇಸರದಲ್ಲೇ ಇದ್ದ ದೀಪಿಕಾ, ಸಂಸಾರದಲ್ಲಿ ಮನಸ್ಸಿಡುವುದೇ ಒಳ್ಳೆಯದೆಂದು ಭಾವಿಸಿದಳು. ತನ್ನ ಹೊಸ ಮನೆ, ಹೊಸ ಸಂಬಂಧದಲ್ಲಿ ಆನಂದವನ್ನು ಹುಡುಕತೊಡಗಿದಳು.
ಒಂದು ಸಂಜೆ ಉದಯ್ ಮನೆಯಲ್ಲಿ ಚಿಕ್ಕ ಪಾರ್ಟಿಯೊಂದನ್ನು ಏರ್ಪಡಿಸಿ ತನ್ನ ಮಿತ್ರರನ್ನೆಲ್ಲ ಆಹ್ವಾನಿಸಿದ್ದ. ಎಲ್ಲರ ಒತ್ತಾಯದ ಮೇರೆಗೆ ದೀಪಿಕಾ ಒಂದು ಹಾಡನ್ನು ಹಾಡಿದಳು. ಅವಳ ಸುಮಧುರ ಧ್ವನಿಯ ಗಾಯನಕ್ಕೆ ಎಲ್ಲರೂ ತಲೆದೂಗುತ್ತಾ ಕುಳಿತರು. ಹಾಡು ಮುಗಿಯುತ್ತಿದ್ದಂತೆ ಎಲ್ಲರೂ ಅವಳನ್ನು ಮುತ್ತಿಕೊಂಡು ಮೆಚ್ಚುಗೆ ಸೂಸಿದರು. ಉದಯನಂತೂ ಮಂತ್ರಮುಗ್ಧನಾಗಿದ್ದ.
ಎಲ್ಲರೂ ಹೋದ ನಂತರ ರಾತ್ರಿ ಉದಯ್, “ನಿನ್ನ ಕಂಠ ಇಷ್ಟೊಂದು ಮಧುರವಾಗಿದೆ ಎಂದು ನನಗೆ ಗೊತ್ತೇ ಇರಲಿಲ್ಲ. ನೀನು ಸಂಗೀತಾಭ್ಯಾಸ ಮಾಡಬಹುದಲ್ಲ…… ನಿನಗೆ ಅದರಲ್ಲಿ ಆಸಕ್ತಿ ಇದೆ. ಒಳ್ಳೆ ರೀತಿಯಲ್ಲಿ ಕಾಲ ಕಳೆಯೋದಕ್ಕೆ ಅವಕಾಶ ಆಗುತ್ತೆ,” ಎಂದ.
ಸಂಗೀತ ಕಲಿಕೆಯ ವಿಷಯ ಬಂದೊಡನೆ ಅವಳಿಗೆ ಸಂತೋಷನ ನೆನಪಾಯಿತು. ಸಂಗೀತದ ತರಗತಿಯಲ್ಲೇ ಅವನ ಪರಿಚಯವಾದದ್ದು. ಅವರಿಬ್ಬರ ಸ್ವರಗಳು ಎಷ್ಟು ಚೆನ್ನಾಗಿ ಹೊಂದುತ್ತಿದ್ದವೆಂದರೆ ಸ್ವತಃ ಗುರುಗಳೇ ಅವರನ್ನು ಜೋಡಿ ಮಾಡಿದ್ದರು. ಇಬ್ಬರೂ ಜೊತೆಯಾಗಿ ಅಭ್ಯಾಸ ಮಾಡುತ್ತಾ, ಯಾವಾಗ ಅವರ ಹೃದಯದ ತಂತಿಗಳು ಜೊತೆಯಾಗಿ ಮಿಡಿಯತೊಡಗಿದವು ಎಂಬುದು ಅರಿವಾಗಲೇ ಇಲ್ಲ. ಇದೇ ಗುಂಗಿನಲ್ಲಿ ಅವರು ಒಂದು ಉಜ್ವಲ ಸಂಗೀತಮಯ ಭವಿಷ್ಯದ ಕನಸನ್ನು ರೂಪಿಸತೊಡಗಿದ್ದರು. ಆದರೆ ಅವರ ಕನಸು ಭಗ್ನವಾಗಿತ್ತು. ಈಗ ಉದಯ್ ಸಂಗೀತದ ವಿಷಯವನ್ನು ತೆಗೆದು ಹುದುಗಿದ್ದ ನೆನಪನ್ನು ಹೊರಗೆಳೆದಿದ್ದ.
ಉದಯನ ಮಾತಿಗೆ ದೀಪಿಕಾಳ ಮೌನವೇ ಪ್ರತಿಕ್ರಿಯೆಯಾಗಿತ್ತು. ಆದರೂ ಅವಳ ಆಸಕ್ತಿಯ ಬಗೆಗೆ ಅತಿ ಕಾಳಜಿ ಹೊಂದಿದ್ದ ಉದಯ್ ಅಲ್ಲಿ ಇಲ್ಲಿ ವಿಚಾರಿಸಿ ಒಬ್ಬ ಸಂಗೀತ ಶಿಕ್ಷಕನನ್ನು ಗೊತ್ತು ಮಾಡಿದ.
“ನಾಳೆಯಿಂದ ನಿನಗೆ ಸಂಗೀತ ಕಲಿಸಲು ಒಬ್ಬ ಮೇಷ್ಟ್ರು ಬರುತ್ತಾರೆ.”
ಮರುದಿನ ಸಂಗೀತದ ಮೇಷ್ಟ್ರಾಗಿ ಬಂದ ಸಂತೋಷನನ್ನು ಕಂಡು ದೀಪಿಕಾ ಚಕಿತಳಾದಳು. ಸಂತೋಷನಿಗೂ ಇದು ಅಚ್ಚರಿಯ ಸಂಗತಿಯಾಗಿತ್ತು. ಇಬ್ಬರೂ ಪರಸ್ಪರ ಬೆರಗುಗಣ್ಣಿನಿಂದ ದಿಟ್ಟಿಸಿದರು. ಸತ್ಯವನ್ನು ತಿಳಿಯದ ಉದಯ್ ಇಬ್ಬರಿಗೂ ಪರಿಚಯ ಮಾಡಿಸಿ. `ಆಲ್ ದಿ ಬೆಸ್ಟ್,’ ಎಂದು ಹೇಳಿ ಆಫೀಸಿಗೆ ಹೊರಟಹೋದ.
“ನೀನು ಇಲ್ಲಿಗೆ ಹೇಗೆ ಬಂದೆ? ನನ್ನನ್ನು ಹಿಂಬಾಲಿಸಿಕೊಂಡು……?” ಪತಿ ಹೊರಗೆ ಹೋದೊಡನೆ ದೀಪಿಕಾ ಮೊದಲು ಮಾತನಾಡಿದಳು.
“ಇಲ್ಲ. ದೀಪು, ನಾನು ನಿನ್ನನ್ನು ಹಿಂಬಾಲಿಸಿಲ್ಲ. ನಾನು ಕೆಲಸ ಹುಡುಕಿಕೊಂಡು ಈ ಊರಿಗೆ ಬಂದೆ. ಇಲ್ಲಿ ಒಂದು ಅವಕಾಶ ಇದೆ ಅಂತ ಯಾರೋ ಹೇಳಿದ್ದರಿಂದ ಇಲ್ಲಿಗೆ ಬಂದೆ.”
“ನೀನು ನನ್ನನ್ನು ದೀಪು ಅಂತ ಕರೆಯುವ ಹಾಗಿಲ್ಲ. ನಾನು ಮದುವೆಯಾದವಳು…. ನಿನ್ನ ಪಾಲಿಗೆ ನಾನು ಪರಸ್ತ್ರೀ.”
“ದೀಪು…. ಅಲ್ಲ ದೀಪಿಕಾ, ನಾನು ಸಂಗೀತ ಹೇಳಿಕೊಡೋದಕ್ಕೆ ಬಂದಿದ್ದೇನೆ. ಅದರ ಫೀಸ್ನಿಂದ ನನ್ನ ಜೀವನಕ್ಕೆ ಸಹಾಯ ಆಗುತ್ತೆ. ಆದ್ದರಿಂದ ಬೇಡ ಅನ್ನಬೇಡ. ಉದಯ್ ಮುಂದೆ ಬೇರೆ ಯಾವ ವಿಷಯವನ್ನೂ ಮಾತನಾಡುವುದಿಲ್ಲ ಅಂತ ಪ್ರಮಾಣ ಮಾಡುತ್ತೇನೆ,” ಎಂದ.
ಸಂತೋಷನ ಬೇಡಿಕೆಯನ್ನು ತಿರಸ್ಕರಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಆ ದಿನ ಇಬ್ಬರ ಮಧ್ಯೆ ಕೊಂಚ ಅಸಹಜ ವಾತಾವರಣವಿತ್ತು. ಆದರೆ ಮಾರನೆಯ ದಿನದಿಂದ ಹಿಂದಿನಂತೆ ಮಾತನಾಡುತ್ತಾ, ನಗುತ್ತಾ, ಹಾಡುತ್ತಾ, ತಮಾಷೆ ಮಾಡುತ್ತಾ ಇರತೊಡಗಿದರು.
ಹಿಂದಿನದನ್ನು ಜ್ಞಾಪಿಸಿಕೊಂಡು ದುಃಖಪಡುವುದರಿಂದ ಏನು ಪ್ರಯೋಜನ? ಆಗಿದ್ದು ಆಯಿತು. ಮುಂದಿನದ್ದನ್ನು ನೋಡಿಕೊಳ್ಳುವುದೇ ಜಾಣತನ ಎಂದು ಇಬ್ಬರೂ ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಂಡರು.
“ಆದರೆ ನೀನು ಬೇರೆಯವರಿಗೆ ಸೇರಿದವಳು ಅನ್ನುವುದನ್ನು ನೆನೆಸಿಕೊಂಡರೆ ನನಗೆಷ್ಟು ಸಂಕಟವಾಗುತ್ತೆ, ನೀನು ನನ್ನವಳಾಗಿದ್ದೆ. ಈಗ….” ಎನ್ನುತ್ತಾ ಸಂತೋಷ್ ಅವಳನ್ನು ಬರಸೆಳೆದುಕೊಂಡ.
ಅವಿವಾಹಿತ ತರುಣಿಗೆ ಶೀಲ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಿಕೊಟ್ಟು ಎಚ್ಚರಿಕೆ ನೀಡಲಾಗುತ್ತದೆ. ಆದರೆ ದೀಪಿಕಾ ಈಗ ವಿವಾಹಿತ ತರುಣಿ. ಆ ಗಡಿಯನ್ನು ದಾಟಿ ಬಂದಿದ್ದಾಳೆ. ತನ್ನ ನಿಜವಾದ ಪ್ರೇಮಿ ಹತ್ತಿರ ಬಂದಿರುವಾಗ ಅವಳಿಗೆ ಇತರೆ ಯೋಚನೆ ಬೇಕಿಲ್ಲ. ಮನೆಯ ನಾಲ್ಕು ಗೋಡೆಗಳ ನಡುವೆ ನಡೆಯುವ ವಿಷಯ ಇತರರಿಗೆ ತಿಳಿಯುವುದಿಲ್ಲ. ಅಲ್ಲದೆ, ಅವಳ ಪತಿಯೇ ಸ್ವತಃ ಸಂತೋಷನನ್ನು ಕರೆತಂದು ಮನೆಯೊಳಗೆ ಸೇರಿಸಿದ್ದಾನೆ. ಹೀಗಾಗಿ ದೀಪಿಕಾ ಮತ್ತು ಸಂತೋಷರ ಪ್ರೀತಿಯ ಹೊನಲು ಉನ್ಮುಕ್ತವಾಗಿ ಎಲ್ಲ ತಡೆಗಳನ್ನೂ ಮೀರಿ ಹರಿಯತೊಡಗಿತು.
ದಿನ ಕಳೆದಂತೆ ದೀಪಿಕಾಳ ಮುಖ ಪ್ರಫುಲ್ಲಿತವಾದುದನ್ನು ಕಂಡು ಉದಯನಿಗೆ ಸಂತೋಷವಾಯಿತು. ಸಂಗೀತದಿಂದಾಗಿ ಅವಳು ಆನಂದವಾಗಿದ್ದಾಳೆಂದು ಭಾವಿಸಿದ.
ಹಾಡೊಂದನ್ನು ಗುನುಗುನಿಸುತ್ತಾ ದೀಪಿಕಾ ಆಕಾಶ ನೀಲಿ ಬಣ್ಣದ ಸ್ವೆಟರ್ ಹೆಣೆಯುತ್ತಿದ್ದಳು.“ಈ ಡಿಸೈನ್ ಬಹಳ ಚೆನ್ನಾಗಿದೆ ದೀಪಾ, ನನಗೂ ಒಂದು ಸ್ವೆಟರ್ ಹೆಣೆದು ಕೊಡು,” ಉದಯ್ ಆಸೆಯ ಕಣ್ಣುಗಳಿಂದ ಕೇಳಿದ.
“ಮುಂದಿನ ಸಲ ನಿಮಗೆ ಹೆಣೆದು ಕೊಡುತ್ತೇನೆ. ಇದನ್ನು ನನ್ನ ಚಿಕ್ಕಪ್ಪನ ಮಗನಿಗೋಸ್ಕರ ರೆಡಿ ಮಾಡುತ್ತಿದ್ದೇನೆ. ಇನ್ನೊಂದು ತಿಂಗಳಿಗೆ ಅವನ ಹುಟ್ಟಿದ ಹಬ್ಬವಿದೆ,” ಎಂದಳು.
“ಹಾಗಿದ್ದರೆ ನೀನು ನಿನ್ನ ತವರುಮನೆಗೆ ಹೋಗಿ ಬಾ. ನೀನು ಅಲ್ಲಿಗೆ ಹೋಗಿ ವರ್ಷದ ಮೇಲಾಯಿತು,” ಎಂದ.
“ಬೇಡ, ನಾನು ಹೋಗುವುದಿಲ್ಲ. ನಿಮ್ಮ ಊಟ ತಿಂಡಿಗೆ ತೊಂದರೆಯಾಗುತ್ತೆ.”
“ಇಷ್ಟೊಂದು ಯೋಚನೆ ಮಾಡೋದಕ್ಕೆ ನಾನೇನು ಚಿಕ್ಕ ಮಗುವೇನು? ಅಮ್ಮನ ಮನೆಗೆ ಹೋಗುವುದಕ್ಕೆ ಯಾವ ಹುಡುಗಿ ಬೇಡ ಅನ್ನುತ್ತಾಳೆ? ನೀನು ಆರಾಮವಾಗಿ ಹೋಗಿ ಎಲ್ಲರನ್ನೂ ನೋಡಿಕೊಂಡು ಬಾ. ನನ್ನ ಬಗ್ಗೆ ಯೋಚನೆ ಮಾಡಬೇಡ,” ಉದಯ್ ಖಂಡಿತವಾದ ಧ್ವನಿಯಲ್ಲಿ ಹೇಳಿದ್ದರಿಂದ ದೀಪಿಕಾಳಿಗೆ ಇಲ್ಲ ಎನ್ನಲಾಗಲಿಲ್ಲ.
ತವರಿಗೆ ಹೋಗುವ ಮಾತು ಬಂದಾಗಿನಿಂದ ಅವಳಿಗೆ ಯಾವುದರಲ್ಲೂ ಆಸಕ್ತಿ ಇಲ್ಲದಂತಾಯಿತು. ಕಡೆಗೆ ಸಂಗೀತಾಭ್ಯಾಸದಲ್ಲಿಯೂ ಮನಸ್ಸು ನಿಲ್ಲಲಿಲ್ಲ.
“ಈಗ ಏನು ಮಾಡುವುದು? ನಾನು ಹೋಗಿ ಬರುವವರೆಗೂ ನಾವು ಭೇಟಿಯಾಗುವ ಹಾಗಿಲ್ಲ. ನಮ್ಮ ಊರಿನಲ್ಲಂತೂ ಇದು ಸಾಧ್ಯವೇ ಇಲ್ಲ.”
“ನೀನು ಚಿಂತೆ ಮಾಡಬೇಡ. ನಾನು ಏನಾದರೂ ಏರ್ಪಾಟು ಮಾಡುತ್ತೇನೆ,” ಎಂದು ಹೇಳಿದ ಸಂತೋಷ್, ಸಾಕಷ್ಟು ಯೋಚಿಸಿ ಕಡೆಗೂ ಒಂದು ಉಪಾಯ ಹುಡುಕಿದ.
“ನೀನು ಇಲ್ಲಿಂದ ಹೊರಟ ಮೇಲೆ ಇಲ್ಲೇ ಪಕ್ಕದ ಊರಿನಲ್ಲಿ 3-4 ದಿವಸ ನಾವಿಬ್ಬರೂ ಒಂದು ಹೋಟೆಲ್ನಲ್ಲಿ ಇದ್ದುಬಿಡೋಣ. ರೂಮ್ ಒಳಗೆ ಸೇರಿಕೊಂಡ ಮೇಲೆ ಯಾರೂ ನಮ್ಮನ್ನು ನೋಡಲು ಆಗುವುದಿಲ್ಲ. ಹೇಗಿದೆ ಐಡಿಯಾ?” ಎಂದು ನಗುತ್ತಾ ಸಂತೋಷ್ ಅವಳನ್ನು ಅಪ್ಪಿಕೊಂಡ.
ಪ್ರಯಾಣದ ದಿನ ಉದಯ್ ಆಫೀಸ್ನಿಂದ ಬೇಗನೆ ಬಂದು ಪತ್ನಿಯನ್ನು ರೈಲು ಹತ್ತಿಸಿ ಬೈಬೈ ಹೇಳಿದ. ಮುಂದಿನ ಸ್ಟೇಷನ್ನಲ್ಲಿ ಸಂತೋಷ್ ಅವಳಿಗಾಗಿ ಕಾಯುತ್ತಿದ್ದ. ಅಲ್ಲಿಂದ ಇಬ್ಬರೂ ಹೋಟೆಲ್ಗೆ ಹೋದರು. ರೂಮ್ ಪಡೆಯಲು ಐಡಿ ಕಾರ್ಡ್ ತೋರಿಸಲೇ ಬೇಕಾಗಿದ್ದುದರಿಂದ ಬೇರೆ ಹೆಸರನ್ನು ಕೊಡುವಂತಿರಲಿಲ್ಲ. ಎಲ್ಲೆಡೆಯೂ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಹೀಗಾಗಿ ದೀಪಿಕಾಳಿಗೆ ಕತ್ತೆತ್ತಿ ನಡೆಯಲೂ ಹಿಂಜರಿಕೆಯಾಯಿತು.
“ಇಂಥ ಅನುಭವ ಆಗುತ್ತೆ ಅಂತ ಗೊತ್ತಿದ್ದರೆ ನಾನು ಬರುತ್ತಲೇ ಇರಲಿಲ್ಲ,” ಮೈ ಮನಸ್ಸುಗಳನ್ನು ಹಿಡಿ ಮಾಡಿಕೊಂಡು ರೂಮಿನೊಳಗೆ ಬಂದ ದೀಪಿಕಾ ಹೇಳಿದಳು.
“ರೂಮಿನೊಳಗೆ ಬಂದಾಯಿತಲ್ಲ ಬಿಡು. ಈಗ ನನ್ನ ತೋಳಿನೊಳಗೆ ಬಾ,” ಸಂತೋಷ್ ಯಾವ ಅಂಜಿಕೆಯೂ ಇಲ್ಲದೆ ಜೋರಾಗಿ ನಗುತ್ತಾ ಅವಳನ್ನು ಕರೆದನು.
ಅವನ ನಗು ರೀತಿ ದೀಪಿಕಾಳಿಗೆ ಕೊಂಚ ಇಷ್ಟವಾಗಲಿಲ್ಲ. ಅವಳಿಗೆ ಪತಿಯ ಸೌಮ್ಯವಾದ ನಗು ನೆನಪಾಯಿತು. ರೂಮಿನಲ್ಲಿ ಇಬ್ಬರೇ ಇದ್ದು ಬೇರೆ ಯಾರ ಭಯ ಇಲ್ಲದಿದ್ದರೂ, ಅವಳು ತಲೆನೋವಿನ ನೆಪ ಹೇಳಿ ಮಲಗಿದಳು.
ಮಾರನೇ ದಿನ ಬೆಳಗ್ಗೆ ಕಾಫಿ ಮತ್ತು ವಾಟರ್ ಬಾಟಲ್ಗಳನ್ನು ಆರ್ಡರ್ ಮಾಡಿದಾಗ ಅವುಗಳನ್ನು ತಂದ 2-3 ರೂಮ್ ಬಾಯ್ಸ್ ತನ್ನತ್ತ ನೋಡಿ ಪಿಸುಗುಟ್ಟುತ್ತಿರುವುದನ್ನು ಕಂಡು ದೀಪಿಕಾಳಿಗೆ ಇರಸು ಮುರುಸು ಉಂಟಾಯಿತು.
`ನಮ್ಮಿಬ್ಬರ ಬೇರೆ ಬೇರೆ ಹೆಸರು, ವಿಳಾಸಗಳ ಬಗ್ಗೆ ಮಾತನಾಡಿಕೊಳ್ಳುತ್ತಿರಬಹುದು…. ನನ್ನ ಬಗ್ಗೆ ಏನು ಭಾವಿಸಿದ್ದಾರೋ…. ಛೇ…’ ಎಂದು ಅವಳ ಕಳ್ಳ ಮನಸ್ಸು ಆತಂಕಗೊಂಡಿತು.
`ಉದಯ್ ಒಂದು ದಿವಸ ಕಾಫಿ ಮಾಡಿದವರಲ್ಲ. ಈಗ ಕಾಫಿಗೆ ಏನು ಮಾಡುತ್ತಿದ್ದಾರೋ….?’ ರಾತ್ರಿಯಿಂದ ಪತಿಯ ಬಗ್ಗೆ ಯೋಚಿಸುತ್ತಿದ್ದ ದೀಪಿಕಾ, ಕಾಫಿ ಕುಡಿಯುತ್ತಾ, “ಇನ್ನೂ ಸ್ವಲ್ಪ ಹೊತ್ತು ಬಿಟ್ಟು ಅವರಿಗೆ ಫೋನ್ ಮಾಡುತ್ತೇನೆ,” ಎಂದಳು.
ಸ್ನಾನ ಮುಗಿಸಿ ಬಂದ ದೀಪಿಕಾ, “ಇಷ್ಟು ಹೊತ್ತಿಗೆ ರೈಲು ಊರಿಗೆ ತುಲಪಿರಬಹುದು. ಉದಯ್ಗೆ ಒಂದು ಫೋನ್ ಮಾಡಲಾ?” ಎಂದು ಕೇಳಿದಳು.
ಹೋಟೆಲ್ಗೆ ಬಂದಾಗಿನಿಂದಲೂ ಅವಳ ಮಾತು ಮತ್ತು ಮನಸ್ಸು ಉದಯನ ಕಡೆಗೇ ಇರುವುದನ್ನು ಕಂಡು ಸಂತೋಷನಿಗೆ ಬೇಸರವಾಗಿತ್ತು, “ಸರಿ….. ಮಾಡಿ ಮಾತನಾಡು,” ಎಂದ.
ಫೋನ್ ಎತ್ತಿದ ಕೂಡಲೇ ಉದಯ್ ಕೇಳಿದ, “ರೈಲಿನಲ್ಲಿ ನಿನಗೆ ಕಾಫಿ, ತಿಂಡಿಗೆ ಏನೂ ತೊಂದರೆಯಾಗಲಿಲ್ಲ ತಾನೇ? ಅದು ಯಾವಾಗಲೂ ಸಮಯಕ್ಕೆ ಸರಿಯಾಗಿ ತಲುಪುತ್ತಿತ್ತು. ಈವತ್ತು ಯಾಕೆ ತಡ ಆಯಿತೋ ಗೊತ್ತಿಲ್ಲ,” ಅವನ ಧ್ವನಿಯಲ್ಲಿ ಚಿಂತೆ ಇತ್ತು.
ಫೋನ್ ಇಟ್ಟ ಮೇಲೆ ದೀಪಿಕಾ ಎರಡೂ ಕೈಗಳಿಂದಲೂ ತಲೆಯನ್ನು ಹಿಡಿದು ಕುಳಿತಳು, “ಅಬ್ಬಾ….. ನಾನು ಮೊದಲು ಮಾತನಾಡಿ ಮನೆ ತಲುಪಿದ್ದೇನೆ ಅಂತ ಹೇಳಿಬಿಟ್ಟಿದ್ದಿದ್ದರೆ….. ಏನಾಗುತ್ತಿತ್ತು ಸಂತೋಷ್?”
“ಹೇಳಲಿಲ್ಲ ತಾನೇ? ಮತ್ತೆ ಯಾಕೆ ಭಯ? ನಿನ್ನೆಯಿಂದ ನಿನಗೆ ತಲೆನೋವು ಇದೆ. ಹೀಗೆ ಯೋಚನೆ ಹತ್ತಿಸಿಕೊಂಡರೆ ತಲೆನೋವು ಹೆಚ್ಚಾಗುತ್ತದೆ ಅಷ್ಟೆ,” ಎಂದ.
ಈ ರೀತಿ ಕದ್ದು ಮುಚ್ಚಿ ಬಂದಿದ್ದ ಪಿಕ್ನಿಕ್ನಿಂದ ದೀಪಿಕಾಳಿಗೆ ನೆಮ್ಮದಿ ಇರಲಿಲ್ಲ. ಸಂತೋಷನಿಗೆ ಆನಂದವಿರಲಿಲ್ಲ.
ತಿಂಡಿಗೆ ಆರ್ಡರ್ ಮಾಡುವಾಗ ದೀಪಿಕಾ ಕೇವಲ ಓಟ್ಸ್ ತರಿಸಿಕೊಂಡಳು. “ದೀಪು, ಇಷ್ಟೇ ಸಾಕಾ? ಹೊಟ್ಟೆ ಸರಿ ಇದೆ ತಾನೇ?” ಸಂತೋಷ್ ಕೇಳಿದ.
“ಮೊದಲಿನ ಹಾಗೆ ತಿನ್ನೋದಕ್ಕೆ ನಾನೇನು ಇನ್ನೂ ಕಾಲೇಜು ಹುಡುಗಿಯೇನು? ವಯಸ್ಸಿನ ಜೊತೆಗೆ ನಮ್ಮ ಆಹಾರ ಕ್ರಮ ಬದಲಾಗಬೇಕು. ಉದಯ್ ಹೇಳುತ್ತಾರೆ…..” ದೀಪಿಕಾ ಸಾವರಿಸಿಕೊಂಡು ಮಾತು ನಿಲ್ಲಿಸಿದಳು.
`ಇದೇನಾಗುತ್ತಿದೆ…. ಮತ್ತೆ ಮತ್ತೆ ಉದಯನ ನೆನಪು, ಉದಯನ ಬಗ್ಗೆ ಮಾತು…’ ಮತ್ತೊಮ್ಮೆ ಉದಯನ ಹೆಸರು ಕೇಳಿ ಸಂತೋಷನ ಮುಖ ಮಂಕಾಯಿತು. ಇಬ್ಬರೂ ಮೌನವಾಗಿ ತಿಂಡಿ ಮುಗಿಸಿದರು.
“ರೂಮಿನಲ್ಲೇ ಕುಳಿತು ಬೇಜಾರು ಆಗಿಬಿಟ್ಟಿದೆ. ಹೊರಗಡೆ ಹೋಗಿ ಬರೋಣ,” ದೀಪಿಕಾಳ ಮಾತಿಗೆ ಸಂತೋಷ್ ಒಪ್ಪಿದ. ರೂಮಿನಲ್ಲೇ ಟಿ.ವಿ ನೋಡುತ್ತಾ ಇದ್ದು ಅವನಿಗೂ ಸಾಕಾಗಿತ್ತು. ರಾತ್ರಿಯವರೆಗೆ ಅಂಗಡಿ ಬೀದಿಗಳಲ್ಲಿ ಸುತ್ತಾಡಿ ಹಿಂದಿರುಗಿದರು.
ರಾತ್ರಿ ಹಾಸಿಗೆಯ ಮೇಲೆ ಮಲಗಿದಾಗ ಅವಳಿಗೆ ಉದಯನನ್ನು ನೆಪ ಹೇಳಿ ನೂಕುವಂತೆ, ಇಂದು ಸಂತೋಷನನ್ನೂ ನಿರಾಕರಿಸುವ ಮನಸ್ಸಾಯಿತು. ಇದೇಕೆ ಈ ಅಪರಾಧೀ ಪ್ರಜ್ಞೆ ತನ್ನನ್ನು ಕಾಡುತ್ತಿದೆ ಎಂದು ಯೋಚಿಸಿದಳು.
ಅವಳಿಗೆ ಮನಸ್ಸಿಲ್ಲದಿದ್ದರೂ ಸಂತೋಷನೊಡನೆ ಸಹಕರಿಸಬೇಕಾಯಿತು. ಆದರೆ ಅವಳ ತಣ್ಣನೆಯ ಪ್ರತಿಕ್ರಿಯೆಯಿಂದ ಅವನು, “ಏನಿದು…? ಒಳ್ಳೆ ಯಂತ್ರದಂತೆ ನಡೆದುಕೊಳ್ಳುತ್ತೀದ್ದೀಯಲ್ಲ, ಏನಾಗಿದೆ ನಿನಗೆ,” ಎಂದು ಕೊಂಚ ಖಾರವಾಗಿ ಕೇಳಿದ.
ದೀಪಿಕಾ ಏನೂ ಮಾತನಾಡಲಿಲ್ಲ. ತನಗೇನಾಗಿದೆಯೆಂದು ಅವಳಿಗೇ ಅರ್ಥವಾಗಲಿಲ್ಲ. ಯಾವ ರಸಗಳಿಗೆಗಾಗಿ ಅವಳು ಹಾತೊರೆಯುತ್ತಿದ್ದಳೋ ಅದು ಮುಂದಿರುವಾಗ ಅದರ ಉಪಯೋಗ ಪಡೆಯಲು ಅವಳು ಮುಂದಾಗುತ್ತಿಲ್ಲ.
ಮರುದಿನ ದೀಪಿಕಾ ಪತಿಯೊಡನೆ 2 ಸಲ ಫೋನ್ನಲ್ಲಿ ಮಾತನಾಡಿದಳು, “ನಾನು ಬೆಳಗ್ಗೆ ಮಾತನಾಡಿದಾಗ ಉದಯ್ಖುಷಿಯಾಗಿದ್ದರು. ಆದರೆ ಈಗ ಯಾಕೋ ಮಾತನಾಡಲೇ ಇಲ್ಲ. ಏನಾಗಿರಬಹುದು…….?” ಎಂದು ಕೇಳಿದಳು.
ಅವಳು ಉದಯನ ಬಗೆಗೇ ಮಾತನಾಡುತ್ತಿದ್ದರೆ ಸಂತೋಷನಿಗೆ ತಡೆಯಲು ಕಷ್ಟವಾಗುತ್ತಿತ್ತು. “ಆಫೀಸಿನ ಕೆಲಸದಲ್ಲಿ ಏನೋ ಚಿಂತೆ ಇರಬಹುದು. ನೀನು ಇಲ್ಲಿಯೂ ಉದಯನ ವಿಷಯವನ್ನೇ ಮಾತನಾಡುವ ಹಾಗಿದ್ದರೆ ಏಕೆ ಬರಬೇಕಾಗಿತ್ತು?” ಎಂದು ಗಡುಸಾಗಿ ಹೇಳಿದ.
ಆ ದಿಸ ಬೇಸರದಲ್ಲೇ ಕಳೆಯಿತು. ಅವರು ಅಂದುಕೊಂಡಿದ್ದಂತೆ ಏನೂ ನಡೆಯಲಿಲ್ಲ. ದೀಪಿಕಾಳನ್ನು ಹಾಸಿಗೆಗೆ ಕರೆದಾಗಲೆಲ್ಲಾ ಅವಳ ಪ್ರತಿಕ್ರಿಯೆ ಎಷ್ಟು ನೀರಸವಾಗಿರುತ್ತಿತ್ತೆಂದರೆ…. ಅವಳ ಇಚ್ಛೆಗೆ ವಿರುದ್ಧವಾಗಿ ನಡೆಸುತ್ತಿರುವಂತೆ ಸಂತೋಷನಿಗೆ ಭಾಸವಾಗುತ್ತಿತ್ತು. ಯಾವ ಯೌವನದ ಹುರುಪಿನ ನಿರೀಕ್ಷೆಯಿಂದ ಬಂದಿದ್ದನೋ, ಅದು ಮಾಯವಾಗಿತ್ತು. ಜೊತೆಗೆ ಹೋಟೆಲ್ ಬಿಲ್ನ ಭಾರ. ಮಾರನೆಯ ಸಾಯಂಕಾಲ ಇಬ್ಬರೂ ಹಿಂದಿರುಗಲು ಆಲೋಚಿಸಿದರು.
“ನಿಮ್ಮ ಯೋಚನೆಯೇ ಬರುತ್ತಿತ್ತು ಅಂತ ಉದಯ್ಗೆ ಹೇಳುತ್ತೇನೆ,” ಎಂದ ದೀಪಿಕಾಳಿಗೆ, “ಇದು ನಿಜ ಅಲ್ಲ ತಾನೇ?” ಎಂದು ಅವಳ ಕಣ್ಣುಗಳನ್ನೇ ದಿಟ್ಟಿಸುತ್ತಾ ಸಂತೋಷ್ ಕೇಳಿದ.
ದೀಪಿಕಾ ಮೌನವಾಗಿದ್ದಳು. ಆದರೆ ಅವಳ ಕಣ್ಣುಗಳು ಗುಟ್ಟು ಬಿಟ್ಟುಕೊಟ್ಟಿದ್ದವು. ದೀಪಿಕಾಳ ಅಶಾಂತಿ, ಸಂತೋಷನ ನಿರಾಶೆ ಎರಡೂ ಒಂದಕ್ಕೊಂದು ಘರ್ಷಣೆ ನಡೆಸಿದ್ದವು. ದೀಪಿಕಾಳನ್ನು ಅವಳ ಮನೆಗೆ ಕಳುಹಿಸಿ ಅವನು ತನ್ನ ಮನೆಗೆ ಹೋದ. ಸಾಯಂಕಾಲ ಆಫೀಸ್ನಿಂದ ಮನೆಗೆ ಬಂದಾಗ ದೀಪಿಕಾಳನ್ನು ಕಂಡ ಉದಯ್ ಚಕಿತನಾದ.
“ಸರ್ಪ್ರೈಸ್!” ಎನ್ನುತ್ತಾ ದೀಪಿಕಾ ಉದಯನ ಕುತ್ತಿಗೆಯನ್ನು ಬಳಸಿದಳು.
ಅವಳ ಕೈಗಳನ್ನು ಬಿಡಿಸುತ್ತಾ ಉದಯ್, “ಬೇಗನೆ ಬಂದಿದ್ದೀಯಲ್ಲ….? ಇನ್ನೂ 2 ದಿನ ಬಿಟ್ಟು ಬೇರಬೇಕಿತ್ತಲ್ಲವೇ?” ಎಂದು ಕೇಳಿದ.
“ಯಾಕೆ ನಿಮಗೆ ಸಂತೋಷ ಆಗುತ್ತಿಲ್ಲವೇ? ಅಯ್ಯೋ, ನಿಮ್ಮ ನೆನಪಿನಿಂದಾಗಿ ನನಗೆ ಅಲ್ಲಿರೋದಕ್ಕೇ ಆಗಲಿಲ್ಲ. ಅದಕ್ಕೇ ಬೇಗನೆ ಬಂದುಬಿಟ್ಟೆ.”
ಊಟ ಮಾಡುವಾಗ ದೀಪಿಕಾ ಮಾತನಾಡುತ್ತಲೇ ಇದ್ದಳು. ಇಂದು ಅವಳ ಧ್ವನಿಯಲ್ಲಿ ಉತ್ಸಾಹ ತುಂಬಿತ್ತು.
“ಇಷ್ಟೊಂದು ಸುಸ್ತಾಗಿ ಇದ್ದೀರಲ್ಲ. ಆರೋಗ್ಯ ಸರಿ ಇಲ್ಲವೇ…?” ಅವಳು ಆತಂಕದಿಂದ ಕೇಳಿದಳು.
“ಕೆಲಸ ಸ್ವಲ್ಪ ಹೆಚ್ಚಾಗಿತ್ತು. ಬೇಗನೆ ಮಲಗಿದರೆ ಬೆಳಗ್ಗೆ ಫ್ರೆಶ್ ಆಗುತ್ತೆ,” ಎಂದ.
ಬೆಳಗ್ಗೆ ಉದಯ್ ಆಫೀಸಿಗೆ ಹೊರಡುವ ಹೊತ್ತಿಗೇ ಸಂತೋಷ್ ಮನೆಗೆ ಬಂದ. ಅವನನ್ನು ನೋಡಿ, “ಇಷ್ಟು ಬೇಗನೆ ಬಂದಿದ್ದೀರಲ್ಲ. ದೀಪಿಕಾ ಇಲ್ಲದೆ ನಿಮಗೆ ಇರೋದಕ್ಕೆ ಆಗುವುದಿಲ್ಲ ಅಂತ ಅನ್ನಿಸುತ್ತದೆ. ಹೌದು ನಿಮ್ಮ ಸಂಗೀತದ ತರಗತಿಗಳು ಇನ್ನೂ ಎಷ್ಟು ದಿನಗಳು ನಡೆಯುತ್ತವೆ…..?” ಎಂದು ವ್ಯಂಗ್ಯವಾಗಿ ಕೇಳಿದ ಉದಯ್.
ಉದಯನ ಮಾತನ್ನು ಕೇಳಿ ಸಂತೋಷ್ ಮತ್ತು ದೀಪಿಕಾ ಇಬ್ಬರೂ ಬೆಪ್ಪಾದರು. ಸಾಮಾನ್ಯವಾಗಿ ಸಂತೋಷನನ್ನು ಕಂಡಾಗ ಉದಯ್ ಪ್ರಸನ್ನ ಭಾವದಿಂದ ಮಾತನಾಡಿಸಿ, ಸಂಗೀತಾಭ್ಯಾಸದ ಪ್ರಗತಿಯ ಬಗ್ಗೆ ವಿಚಾರಿಸುತ್ತಿದ್ದ. ಸಂಗೀತ ಕಚೇರಿಯನ್ನು ಏರ್ಪಡಿಸುವ ಮಾತನ್ನು ಹೇಳುತ್ತಿದ್ದ. ಆದರೆ ಇಂದು ಅವನ ಮಾತಿನ ವರಸೆಯೇ ಬದಲಾಗಿತ್ತು.
`ಸಂತೋಷ್ ಇಷ್ಟು ಬೇಗನೇ ಏಕೆ ಬಂದಿದ್ದಾನೆ? ಉದಯ್ ಆಫೀಸ್ಗೆ ಹೋಗುವವರೆಗೆ ಕಾಯಲಾಗಲಿಲ್ಲವೇ..?’ ಎಂದು ದೀಪಿಕಾ ಅಂದುಕೊಂಡಳು.
ಉದಯ್ ಅಲ್ಲಿಂದ ಹೊರಟ ನಂತರ ದೀಪಿಕಾ, “ಸಂತೋಷ್, ನಾನು ಜೀವನವಿಡೀ ನಿನಗೆ ಆಭಾರಿಯಾಗಿರುತ್ತೇನೆ. ನಾನು ಜೀವನದಲ್ಲಿ ಕಳೆದುಕೊಂಡಿದ್ದೇನೆಂದು ಭಾವಿಸಿದ್ದ ಆನಂದಕ್ಕಾಗಿ ಹಂಬಲಿಸುತ್ತಾ ಶಾಂತಿಯಿಲ್ಲದೆ ಬಾಳುತ್ತಿದ್ದೆ. ಆ ಆನಂದವನ್ನು ನೀನು ನನಗೆ ಕೊಟ್ಟಿದ್ದೀಯ. ಈಗ ನನಗೆ ಬೇಕಾಗಿರುವುದು, ಮರೀಚಿಕೆಯ ಆ ಆನಂದ ಕ್ಷಣಗಳೋ….. ಅಥವಾ ದೃಢವಾದ ಗೌರವದ ಬದುಕೋ ಎಂಬುದು ಅರ್ಥವಾಗಿದೆ.
“ಸಂತೋಷ್ ನಾನು ವಿವಾಹಿತೆ. ಇದನ್ನು ನಾನು ಬಹುಶಃ ಮರೆತಿದ್ದೆ. ನೀನು ನನ್ನನ್ನು ಈ ಸಂಸಾರದಿಂದ ದೂರವಾಗಿಸಿ ಆ ಹೋಟೆಲ್ ರೂಮಿಗೆ ಕರೆದೊಯ್ಯದಿದ್ದರೆ, ನಾನು ಈ ಸಂಸಾರಕ್ಕೆ ಸೇರಿ ಹೋಗಿದ್ದೇನೆಂಬ ಅರಿವೇ ನನಗಾಗುತ್ತಿರಲಿಲ್ಲ. ಈ ಮನೆಯಿಂದ ಹೊರಗೆ ಹೆಜ್ಜೆ ಇಟ್ಟ ಮೇಲೆ, ಇಲ್ಲಿಯ ಗುರುತಿನ ಚಿಹ್ನೆ ಇಲ್ಲದೆ ನಾನೆಷ್ಟು ಅಪೂರ್ಣಳು ಎಂದು ನನಗೆ ತಿಳಿಯಿತು.
“ಉದಯ್ ಸದಾ ನನ್ನ ಬಗ್ಗೆ ಕಾಳಜಿ ವಹಿಸಿದವರು. ಮನಸಾರೆ ಪ್ರೀತಿಸಿದವರು. ಗೌರವದ ಸ್ಥಾನ ನೀಡಿದವರು. ಸಮಾಜದಲ್ಲಿ ಅವರು ತಲೆ ತಗ್ಗಿಸುವ ಹಾಗೆ ಮಾಡಲು ನನಗೆ ಯಾವ ಹಕ್ಕಿದೆ? ನಾನು ಮಾಡಿರುವ ಕೆಲಸದಿಂದ ಅವರಿಗೆ ಪ್ರೀತಿಯ ಬಗೆಗೆ ವಿಶ್ವಾಸವೇ ಇಲ್ಲವಾಗುತ್ತದೆ. ಬದುಕಿಗೆ ಬಣ್ಣ ತುಂಬುವ ಬದಲು ನಾನು ಮಸಿ ಬಳಿಯಲಾರೆ…..” ಎಂದಳು.
ದೀಪಿಕಾಳ ಅಭಿಪ್ರಾಯ ಮತ್ತು ಹಿಂದಿನ ಎರಡು ದಿನಗಳ ಅವಳ ನಡವಳಿಕೆ ಸಂತೋಷನ ಅನುವಭಕ್ಕೆ ಬಂದಿತ್ತು. “ನಮ್ಮ ಮದುವೆಯಾಗಿದ್ದಿದ್ದರೆ ನಾನು ನಿನ್ನನ್ನು ನನ್ನಿಂದ ದೂರವಾಗಲು ಬಿಡುತ್ತಿರಲಿಲ್ಲ. ಆದರೆ ಈಗ ನಿನ್ನ ಇಷ್ಟದ ಮುಂದೆ ನಾನು ಅಸಹಾಯಕನಾಗಿದ್ದೇನೆ,” ಎಂದು ಹೇಳಿ ಅವನು ಹಿಂದಿರುಗಿಹೋದ.
`ನಾನೇಕೆ ಇಂತಹ ತಪ್ಪು ಹೆಜ್ಜೆ ಇಟ್ಟೆ?’ ಎಂದು ದೀಪಿಕಾ ದಿನವೆಲ್ಲ ಯೋಚಿಸುತ್ತಿದ್ದಳು. ಸಾಕಷ್ಟು ಚಿಂತನ, ಮಂಥನ ನಡೆಸಿ, `ಉದಯನಿಗೆ ಎಲ್ಲ ವಿಷಯವನ್ನೂ ತಿಳಿಸುತ್ತೇನೆ. ಮನಸ್ಸಿನಲ್ಲಿ ಇಷ್ಟು ದೊಡ್ಡ ಹೊರೆಯನ್ನು ಹೊತ್ತುಕೊಂಡು ಇಡೀ ಜೀವನ ಕಳೆಯುವುದು ಕಷ್ಟವಾಗುತ್ತದೆ,’ ಎಂದವಳೆ ಒಂದು ತೀರ್ಮಾನಕ್ಕೆ ಬಂದಳು.
ಸಾಯಂಕಾಲ ಉದಯ್ ಮನೆಗೆ ಬಂದಾಗ ದೀಪಿಕಾ ಶಾಂತವಾಗಿ ಅವನಿಗೆ ಎಲ್ಲ ವಿಷಯವನ್ನು ಹೇಳಿದಳು. ದೀಪಿಕಾ ನೆಲದತ್ತ ದೃಷ್ಟಿಯಿರಿಸಿ ಮಾತನಾಡುತ್ತಿದ್ದರೆ, ಉದಯ್ ತಲೆ ತಗ್ಗಿಸಿ ಕೇಳುತ್ತಾ ಕುಳಿತಿದ್ದ.
“ನನ್ನನ್ನು ಕ್ಷಮಿಸಿ ಉದಯ್, ನನ್ನಿಂದ ಬಹು ದೊಡ್ಡ ತಪ್ಪಾಗಿದೆ. ಮುಂದೆ ನೀವು ಯಾವ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಒಪ್ಪಿಕೊಳ್ಳುತ್ತೇನೆ…..” ಎಂದಳು.
ಉದಯ್ ಮಾತನಾಡದೆ ಎದ್ದು ಹೋಗಿ ಹಾಲ್ನಲ್ಲಿ ಕುಳಿತು ಯೋಚಿಸತೊಡಗಿದನು….3 ದಿನಗಳ ಹಿಂದೆ ಉದಯ್ ಆಫೀಸ್ಕೆಲಸಕ್ಕಾಗಿ ಪಕ್ಕದ ಊರಿಗೆ ಹೋಗಿದ್ದ. ಕೆಲಸ ಮುಗಿದ ಮೇಲೆ ತನ್ನ ಪ್ರೀತಿಯ ಪತ್ನಿಗಾಗಿ ಏನಾದರೂ ಖರೀದಿಸಲೆಂದು ಅಂಗಡಿ ಬೀದಿಯ ಕಡೆಗೆ ಹೋಗಿದ್ದ. ಅಲ್ಲಿ ಸುತ್ತಾಡುವಾಗ ದೀಪಿಕಾ ಹೆಣೆದಿದ್ದ ಆಕಾಶ ನೀಲಿ ಬಣ್ಣದ ಸ್ವೆಟರ್ನ್ನು ಕಂಡು ಆಕರ್ಷಿತನಾಗಿ ಆ ವ್ಯಕ್ತಿ ಹತ್ತಿರ ಹೋಗಿ ಗಮನವಿಟ್ಟು ನೋಡಲು ಅದನ್ನು ಧರಿಸಿದ್ದ ವ್ಯಕ್ತಿ ಬೇರಾರೂ ಅಲ್ಲ, ಸಂತೋಷ್ ಎಂದು ತಿಳಿದು ಅವಾಕ್ಕಾದ. ಅವನ ತೋಳಿಗೆ ತೋಳು ಸೇರಿಸಿ ದೀಪಿಕಾ ನಡೆಯುತ್ತಿದ್ದಳು. ಈ ದೃಶ್ಯವನ್ನು ಕಂಡು ಉದಯನ ಮನಸ್ಸಿನಲ್ಲಿ ರೋಷ, ಆಘಾತ, ವೇದನೆ, ಸಂತಾಪ ಮಿಶ್ರಿತವಾದ ಭಾವನೆಗಳ ಬಿರುಗಾಳಿ ಎದ್ದಿತು. ತಲೆ ಸುತ್ತಿ ಬಂದಿತು. ಎಂಥ ದೊಡ್ಡ ವಿಶ್ವಾಸಘಾತ? ಅವನ ಪ್ರೀತಿಯ ಪತ್ನಿ ಇಂತಹ ದ್ರೋಹವೆಸಗಿದ್ದಳು. ಆಗ ಅವನ ರಕ್ತ ಕುದಿಯುತ್ತಿತ್ತು. ಆದರೆ ಈಗ ದೀಪಿಕಾ ನಡೆದದ್ದೆಲ್ಲನ್ನೂ ಹೇಳಿಕೊಂಡಿದ್ದರಿಂದ ಅವನ ಮನದಲ್ಲಿ ದ್ವಂದ್ವ ಭಾವನೆ ಮೂಡತೊಡಗಿತು. ಅವಳು ಮಾಡಿರುವ ಮೋಸವನ್ನು ಕಣ್ಣಾರೆ ಕಂಡ ಮೇಲೆ ಅವಳಿಗೆ ಸರಿಯಾದ ಶಿಕ್ಷೆ ಕೊಡಬೇಕೆಂದು ಯೋಚಿಸಿದ್ದ. ಅವಳು ಮನೆಗೆ ಹಿಂದಿರುಗಿದ ಮೇಲೆ ಹೇಗೆ ನಡೆದುಕೊಳ್ಳುವಳೆಂದು ನೋಡುವ ಪ್ರತೀಕ್ಷೆಯಲ್ಲಿದ್ದ. ಆದರೆ ಈಗ ಅವಳು ಇಡೀ ವೃತ್ತಾಂತವನ್ನು ಬಿಡಿಸಿ ಹೇಳಿ ಪಶ್ಚಾತ್ತಾಪದ ಕಣ್ಣೀರು ಸುರಿಸಿದ್ದನ್ನು ಕಂಡಾಗ ಅವನ ಮನಸ್ಸಿನಲ್ಲಿ ಉರಿಯುತ್ತಿದ್ದ ಬೆಂಕಿಯ ಕಾವು ಕೊಂಚ ಕಡಿಮೆಯಾಯಿತು.
ಉದಯ್ ಇಡೀ ರಾತ್ರಿ ಯೋಚಿಸುತ್ತಲೇ ಇದ್ದ. ದೀಪಿಕಾಳಿಗೆ ಶಿಕ್ಷೆ ಕೊಡುವುದೋ ಅಥವಾ ಅವಳ ತಪ್ಪೊಪ್ಪಿಗೆಗಾಗಿ ಕ್ಷಮೆ ನೀಡುವುದೋ? ಅವಳಿಗೆ ಶಿಕ್ಷೆ ಕೊಟ್ಟರೂ ತಾನು ಈ ತಾಪದಿಂದ ಪಾರಾಗಲು ಸಾಧ್ಯವೇ? ತನ್ನ ಸಂಸಾರ ಹಾಳಾಗುವುದು ಮತ್ತು ಜನರ ನಗೆಪಾಟಲಿಗೆ ಗುರಿಯಾಗಬೇಕಾಗುವುದು. ಆದರೆ ಇಂತಹ ವಿಶ್ವಾಸದ್ರೋಹ ಮಾಡಿದ ಪತ್ನಿಯ ಮೇಲೆ ನಂಬಿಕೆ ಇಡಲು ಸಾಧ್ಯವೇ?
ಬೆಳಗ್ಗೆ ಎದ್ದ ದೀಪಿಕಾ ದಿನನಿತ್ಯದ ಕೆಲಸಗಳಲ್ಲಿ ತೊಡಗಿದಳು. ಅವಳ ಮನಸ್ಸಿನಲ್ಲಿ ಮಾತ್ರ ಅಳುಕು ಇದ್ದೇ ಇತ್ತು. ಕಾಫಿ ಲೋಟವನ್ನು ಉದಯನ ಮುಂದಿಟ್ಟು ಅಲ್ಲೇ ನಿಂತಳು. ಒಂದೆರಡು ಕ್ಷಣದ ನಂತರ, “ಏನು ತೀರ್ಮಾನ ಮಾಡಿದಿರಿ? ನೀವು ಏನು ಹೇಳಿದರೂ ನಾನು ಅದಕ್ಕೆ ಒಪ್ಪುತ್ತೇನೆ.”
“ದೀಪಿಕಾ, ನೀನು ಹೇಳುವ ಮೊದಲೇ ನನಗೆ ವಿಷಯ ಗೊತ್ತಾಯಿತು. ನೀನು ತವರಿಗೆಂದು ಹೇಳಿ ಪಕ್ಕದ ಊರಿಗೆ ಹೋಗಿದ್ದಾಗ ನಾನು ನಿಮ್ಮಿಬ್ಬರನ್ನು ಅಲ್ಲಿ ಒಟ್ಟಿಗೆ ನೋಡಿದೆ. ನಿನ್ನ ತಮ್ಮನಿಗೂ ಫೋನ್ ಮಾಡಿ ನೀನು ಅಲ್ಲಿಗೆ ಹೋಗಿಲ್ಲವೆಂದು ತಿಳಿದುಕೊಂಡೆ. ನೀನು ಏನು ಹೇಳುತ್ತೀಯೋ ನೋಡೋಣವೆಂದು ಕಾಯುತ್ತಿದ್ದೆ.
“ನಿನ್ನ ತಪ್ಪೊಪ್ಪಿಗೆ ಮತ್ತು ಪಶ್ಚಾತ್ತಾಪದ ಕಣ್ಣೀರು ನನ್ನನ್ನು ಕರಗಿಸುತ್ತಿದೆ. ಆದರೆ ಕ್ಷಮಿಸುವುದು ಅಷ್ಟೊಂದು ಸುಲಭವಲ್ಲ. ಮತ್ತೆ ನಿನ್ನ ಮೇಲೆ ನಂಬಿಕೆ ಇಡುವುದು ಹೇಗೆ ಅನ್ನುವ ಯೋಚನೆ ಬರುತ್ತಿದೆ. ಆದರೆ ನಮ್ಮ ಸಂಸಾರ ಮುರಿಯೋದಕ್ಕೆ ನನಗೆ ಇಷ್ಟವಿಲ್ಲ. ನಿನ್ನ ಕಣ್ಣಿನಲ್ಲಿ ಕಾಣುತ್ತಿರುವ ಪಶ್ಚಾತ್ತಾಪದಿಂದಾಗಿ ನಿನಗೆ ಒಂದು ಅವಕಾಶ ಕೊಡುತ್ತೇನೆ. ಆದರೆ ಅದರ ಸದುಪಯೋಗ ಪಡೆದುಕೊಳ್ಳುವುದು ನಿನ್ನ ಜವಾಬ್ದಾರಿ.”
ಹೌದು. ಮಳೆಗಾಲದಲ್ಲಿ ನಮ್ಮ ಮನೆಯ ಅಂಗಳದಲ್ಲಿ ಪಾಚಿ ಸೇರಿದರೆ ನಾವು ಅಂಗಳವನ್ನು ಒಡೆದು ಹಾಕುತ್ತೇವೆಯೇ? ಖಂಡಿತಾ ಇಲ್ಲ. ಪಾಚಿಯನ್ನು ತೆಗೆದು ಆ ಭಾಗವನ್ನು ಶುಚಿಗೊಳಿಸಿ ಒಣಗಿಸುತ್ತೇವೆ. ಮತ್ತೆ ಅಲ್ಲಿ ಅನಗತ್ಯವಾದುದು ಹುಟ್ಟಿಕೊಳ್ಳದಂತೆ ನೋಡಿಕೊಳ್ಳುತ್ತೇವೆ. ಮಳೆಗಾಲದಲ್ಲಿ ಪಾಚಿ ಬೆಳೆದರೆ, ನಿಮ್ಮ ಅಂಗಳದಲ್ಲಿ ಏನೋ ಕೊರತೆಯಿದೆ ಎಂದು ಅರ್ಥವಲ್ಲ. ನಮ್ಮ ಅಂಗಳದ ಬಗ್ಗೆ ಒಂದಷ್ಟು ಗಮನ ನೀಡಬೇಕು ಎಂಬ ಸೂಚನೆ ಅದರಲ್ಲಿರುತ್ತದೆ, ನಮ್ಮ ಬದುಕೂ ಅಷ್ಟೆ.