ಕಥೆ - ವಿಮಲಾ ಮೂರ್ತಿ
ಏನು ವಿಷಯ ಮೋಹನ?''
``ಈ ಎರಡೂ ಕಾಪಿಗಳನ್ನು ನೋಡಿ ಮಿಸ್.''
``ಏನು ನೋಡಬೇಕು?''
``ಅಂಬುಜಾ ಏನು ಬರೆದಿದ್ದಾಳೋ ನಾನೂ ಅದೇ ರೀತಿ ಬರೆದಿದ್ದೇನೆ. ಒಂದು ಪದ ಕಡಿಮೆಯೂ ಇಲ್ಲ, ಒಂದು ಪದ ಜಾಸ್ತಿಯೂ ಇಲ್ಲ.''
``ಅದಕ್ಕೆ....''
``ಹಾಗಾದರೆ ಅವಳಿಗೆ 50 ನಂಬರು, ನನಗೆ 49 ನಂಬರು ಯಾಕೆ? ಅವಳಿಗೆ 1 ನಂಬರ್ ಕಡಿಮೆ ಮಾಡಿ ಅಥವಾ ನನಗೆ 1 ನಂಬರ್ ಜಾಸ್ತಿ ಮಾಡಿ!'' ಕೋಪದಿಂದ ಅವನ ಮುಖ ಕೆಂಪಾಗಿತ್ತು.
``ಏನು ವಿಷಯ ಮೋಹನ್, ಒಂದು ನಂಬರಿಗಾಗಿ ನಿನಗೆ ಇಷ್ಟು ಹಗರಣ ಮಾಡಬೇಕು ಅನ್ನಿಸುತ್ತಿದೆಯಾ?''
``ನೋ ಮಿಸ್!''
``ಹಾಗಾದರೆ ಸುಮ್ಮನೆ ಹೋಗಿ ನಿನ್ನ ಜಾಗದಲ್ಲಿ ಕುಳಿತುಕೋ. ಹಾಗೆ ಅಂಬುಜಾಳ ಪುಸ್ತಕ ಅವಳಿಗೆ ಕೊಡು,'' ಗೀತಾ ಟೀಚರ್
ಹೇಳಿದರು.
ಮೋಹನ್ ಅಂಬುಜಾಳ ಜಾಗದ ಬಳಿ ಬಂದ. ಅಂಬುಜಾ ತನ್ನ ಗುಂಗುರು ಕೂದಲಿಗೆ ಹಾಕಿಕೊಂಡಿದ್ದ ಕ್ಲಿಪ್ಪನ್ನು ತೆಗೆದಳು. ಆಲಸ್ಯದಿಂದ ತಲೆ ಕೊಡವಿದಳು. ಸ್ವಲ್ಪ ಹೊತ್ತು ಕೂದಲನ್ನು ಹಾರಾಡಲು ಬಿಟ್ಟಳು. ನಂತರ ಗೆದ್ದ ಹುಂಜದಂತೆ ವ್ಯಂಗ್ಯಭರಿತ ನಗೆ ಬೀರಿ ಕೂದಲಿಗೆ ಕ್ಲಿಪ್ ಹಾಕಿಕೊಂಡಳು. ಇದರಿಂದ ಮೋಹನನ ಅಹಂಗೆ ಇನ್ನೂ ಪೆಟ್ಟಾಯಿತು.
ಮೋಹನ ಮತ್ತು ಅಂಬುಜಾರ ನಡುವಿನ ಪೈಪೋಟಿ ಕೇವಲ ಓದಿಗಷ್ಟೇ ಸೀಮಿತವಾಗಿದ್ದಿದ್ದರೆ... ಇಬ್ಬರ ಬೆಂಬಲಿಗರು ಓದುವುದರಲ್ಲಿ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಅವರಿಬ್ಬರನ್ನೂ ಪರಸ್ಪರ ಪೈಪೋಟಿಗಿಳಿಸಲು ನೋಡುತ್ತಿದ್ದರು. ಹೀಗೆ ತಿಳಿಯದೆ ಇಬ್ಬರು ಬುದ್ಧಿವಂತ ವಿದ್ಯಾರ್ಥಿಗಳು ಸ್ಪರ್ಧೆಯ ಹೆಸರಲ್ಲಿ ಪರಸ್ಪರ ವೈರಿಗಳಾಗುತ್ತಾ ಬೆಳೆದರು. ಪರಸ್ಪರರನ್ನು ಕೀಳಾಗಿ ತೋರಿಸುವುದೇ ಅವರ ಉದ್ದೇಶವಾದಂತಾಯಿತು.
``3ನೇ ಕ್ಲಾಸಲ್ಲೇ ಈ ಸ್ಥಿತಿಯಾದರೆ ಮುಂದೆ ಏನಾಗಬಹುದು?'' ಮೂರ್ತಿಗೆ ಚಿಂತೆಯಾಗಿತ್ತು.
``ಮೊದಲಿನಿಂದಲೂ ಮೋಹನ ಪಕ್ಷಪಾತದ ವಿರೋಧಿ ಅನ್ನೋದು ನಿಮಗೆ ಗೊತ್ತೇ ಇದೆ. ಈ ಹುಡುಗಿ ಅಂಬುಜಾ ಈ ತರಹದ ಸ್ಪರ್ಧೆಯಿಂದ ತನ್ನ ಗೌರವ ಹೆಚ್ಚುತ್ತೆ ಅಂತ ಯಾಕೆ ತಿಳಿದುಕೊಂಡಿದ್ದಾಳೋ? 3 ವರ್ಷಗಳಿಂದ ಇದೇ ನಡೀತಿದೆ. ಒಂದು ನಂಬರಿನ ಅಂತರ ಒಂದು ಸಲ ಮೋಹನ ಮೊದಲನೆಯವನಾಗಿ ಬರುವಂತೆ ಮಾಡಿದರೆ ಇನ್ನೊಂದು ಸಲ ಅಂಬುಜಾ ಮೊದಲನೆಯವಳಾಗಿ ಬರುವಂತೆ ಮಾಡಿದೆ. ಯಾರಾದರೂ ಹುಡುಗಿಯಿಂದ ಸೋಲುವುದೆಂದರೆ ಮೋಹನನಿಗೆ ಆಗುವುದಿಲ್ಲ. ನೀವು ಪ್ರಿನ್ಸಿಪಾಲರಿಗೆ ಹೇಳಿ ಮೋಹನನ ಸೆಕ್ಷನ್ ಏಕೆ ಬದಲಾಯಿಸುವುದಿಲ್ಲ?'' ದೀಪಾ ಸಲಹೆ ನೀಡಿದಳು.
``ಇದು ಸಮಸ್ಯೆಗೆ ಪರಿಹಾರವಲ್ಲ. ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಹುಡುಗ ಹುಡುಗಿಯೊಂದಿಗೆ ಸಮಾನ ಅಧಿಕಾರ ಮತ್ತು ಅವಕಾಶ ಕೊಡಲಾಗುತ್ತಿದೆ. ತನ್ನ ಬುದ್ಧಿಶಕ್ತಿಯಿಂದ ಹುಡುಗಿ ಹುಡುಗನಿಗಿಂತ ಮುಂದೆ ಹೋಗಬಹುದು. ನಾಳೆ ಇವನ ಬಾಸ್ ಅಥವಾ ಸೀನಿಯರ್ ಯಾರಾದರೂ ಹುಡುಗಿಯಾದರೆ ಇವನು ಅವಳ ಕೈ ಕೆಳಗೆ ಕೆಲಸ ಮಾಡಲು ನಿರಾಕರಿಸುತ್ತಾನಾ ಅಥವಾ ಹುಡುಗಿಯರನ್ನು ಕೆಲಸಕ್ಕೆ ತೆಗೆದುಕೊಳ್ಳದ ಸಂಸ್ಥೆಯನ್ನು ಹುಡುಕುತ್ತಾನೇನು?''
``ಇನ್ನೂ ಹುಡುಗ... ಮುಂದೆ ತಾನೇ ತಿಳ್ಕೋತಾನೆ. ಸಾಧ್ಯವಾದರೆ ನೀವು ಅವನು ಈಗಲೇ ದೊಡ್ಡವನಾಗಿದ್ದಾನೆ ಅಂತಾ ಉಪದೇಶಾಮೃತ ಕುಡಿಸಲು ಶುರು ಮಾಡಿಬಿಡುತ್ತೀರಿ,'' ದೀಪಾ ಅರ್ಥ ಮಾಡಿಸಲು ಹೋದಳು.
``ಈಗಿನಿಂದಲೇ ಅಭ್ಯಾಸ ಮಾಡಿಕೋ ದೀಪಾ, ಇಲ್ಲಾಂದರೆ ಅಮೇಲೆ ಪಶ್ಚಾತ್ತಾಪ ಪಡಬೇಕಾಗುತ್ತದೆ,'' ಮೂರ್ತಿ ಬ್ರೀಫ್‌ಕೇಸ್ ಎತ್ತಿಕೊಂಡು ಅಫೀಸಿಗೆ ಹೊರಟ. ದೀಪಾ ಮನೆಗೆಲಸದಲ್ಲಿ ಮುಳುಗಿಹೋದಳು. ಮೋಹನನ ಬಗ್ಗೆ ಅವಳ ಚಿಂತೆ ಆಧಾರರಹಿತವಾಗಿರಲಿಲ್ಲ. ಓದಿನಲ್ಲಿ ಅವನು ಬಹಳ ಚುರುಕಾಗಿದ್ದ. ಆದರೆ ಯಾರಾದರೂ ಹುಡುಗಿಯಿಂದ ಸೋತರೆ ಅದನ್ನು ಅವನು ಸಹಜವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಹುಡುಗರಿಗೆ ಸರಿಸಮ ಎಂದು ವಾದಿಸುವ ಹುಡುಗಿಯರಿಗೆ ಹುಡುಗರಿಗಿಂತ ಜಾಸ್ತಿ ಯಾವುದೇ ರೀತಿಯ ರಿಯಾಯಿತಿ ಅಥವಾ ಸೌಲಭ್ಯ ಸಿಕ್ಕಿದರೆ ಅವನು ಸಹಿಸುವುದಿಲ್ಲ.