ಮನೆಯನ್ನು ಸ್ವಚ್ಛಗೊಳಿಸಲು ನಾವು ಸದಾ ಕೆಮಿಕಲ್ಸ್ ಬೆರೆತ ಉತ್ಪನ್ನಗಳನ್ನೇ ಬಳಸುತ್ತೇವೆ. ಇವು ದುಬಾರಿ ಆಗಿರುವುದರ ಜೊತೆ ಒಮ್ಮೊಮ್ಮೆ ಕೈಗಳಲ್ಲಿ ರಾಶೆಸ್‌ ಯಾ ಅಲರ್ಜಿ ಸಹ ಮೂಡಿಸುತ್ತವೆ. ಹೀಗಿರುವಾಗ ನೀವು ಎಂದಾದರೂ ಸೋಡ ಬೈ ಕಾರ್ಬೋನೇಟ್‌ ಎಷ್ಟು ಲಾಭಕರ ಎಂದು ಯೋಚಿಸಿದ್ದೀರಾ? ಇದನ್ನು ಅಡುಗೆ ಸೋಡ, ಬೇಕಿಂಗ್‌ ಸೋಡ ಎಂದೂ ಹೇಳುತ್ತಾರೆ. ಪ್ರತಿ ಮನೆಯಲ್ಲೂ ಲಭ್ಯವಿರುವ ಇದನ್ನು ಕೇಕ್‌, ಇಡ್ಲಿ, ಢೋಕ್ಲಾ ಇತ್ಯಾದಿಗಳಿಗೆ ಬಳಸುತ್ತಾರೆ. ಇದನ್ನು ಅಷ್ಟೇ ಸಮರ್ಥವಾಗಿ ಮನೆಯನ್ನು ಶುಚಿಗೊಳಿಸಲಿಕ್ಕೂ ಬಳಸಬಹುದು ಎಂದು ನಿಮಗೆ ಗೊತ್ತೇ? ಬನ್ನಿ, ವಿವರವಾಗಿ ಗಮನಿಸೋಣ :

ಟೈಲ್ಸ್ ಇರುವ ನೆಲ, ಗೋಡೆ ಶುಚಿಗೊಳಿಸಲು ಮುಕ್ಕಾಲು ಬಕೆಟ್‌ ನೀರಿಗೆ ಅರ್ಧ ಕಪ್‌ ಬೇಕಿಂಗ್‌ ಸೋಡ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಟೈಲ್ಸ್ ಚಮಕಾಯಿಸುತ್ತವೆ.
ಕೆಮಿಕಲ್‌ಯುಕ್ತ ಏರ್‌ ಫ್ರೆಶ್‌ನರ್‌ಗೆ ಬದಲಾಗಿ ಬೇಕಿಂಗ್‌ ಸೋಡ ಬಳಸಿರಿ. 1 ಸಣ್ಣ ಬಟ್ಟಲಿಗೆ ಸೋಡ ತುಂಬಿಸಿ, ಅದಕ್ಕೆ ಕೆಲವು ಹನಿ ಎಸೆನ್ಶಿಯಲ್ ಆಯಿಲ್ ‌ಬೆರೆಸಿ ಕೋಣೆ ಮಧ್ಯೆ ಇರಿಸಿ. ಆಗ ಕೋಣೆಯಲ್ಲಿ ದುರ್ವಾಸನೆ ಮಾಯವಾಗುತ್ತದೆ, ಸುಗಂಧ ಹರಡುತ್ತದೆ. 3 ತಿಂಗಳಿಗೊಮ್ಮೆ ಹೀಗೆ ಮಾಡಿ.

ಯಾವುದೇ ತೆಳುವಾದ ಮೃದು ಬಟ್ಟೆಗೆ ತುಸು ಸೋಡ ಹಾಕಿ ಮೈಕ್ರೋವೇವ್‌ನ್ನು ಕ್ಲೀನ್‌ ಮಾಡಿ. ಇದರಿಂದ ಓವನ್‌ ಶುಚಿಗೊಳಿಸಲು, ಮೊದಲು ಓವನ್‌ ಮೇಲೆ ಸೋಡ ಉದುರಿಸಿ ತುಸು ನೀರು ಸಿಂಪಡಿಸಿ. ಇಡೀ ರಾತ್ರಿ ಹಾಗೇ ಬಿಡಿ. ಮಾರನೇ ಬೆಳಗ್ಗೆ ಒಣ ಬಟ್ಟೆಯಿಂದ ಉಜ್ಜಿ ಶುಚಿಗೊಳಿಸಿ, ನಂತರ ಒದ್ದೆ ಬಟ್ಟೆಯಿಂದ ಒರೆಸಬೇಕು.

ಬಟ್ಟೆ ಒಗೆಯುವಾಗ ಡಿಟರ್ಜೆಂಟ್‌ ಪೌಡರ್‌ಗೆ ಅರ್ಧ ಕಪ್‌ ಬೇಕಿಂಗ್‌ ಸೋಡ ಬೆರೆಸಿರಿ. ಇದರಿಂದ ಬಟ್ಟೆ ಇನ್ನೂ ಹೆಚ್ಚು ಹೊಳಪಾಗುತ್ತದೆ.

ಕಿಚನ್‌ನಲ್ಲಿ ಸಿಂಕ್‌ ಕಟ್ಟಿಕೊಂಡಿದ್ದರೆ, ರಾತ್ರಿ ಅರ್ಧ ಕಪ್‌ ಸೋಡಾಗೆ ಅರ್ಧ ಕಪ್‌ ವಿನಿಗರ್‌ ಬೆರೆಸಿ ಸಿಂಕ್‌ ಪೈಪ್‌ಗೆ ಹಾಕಿಡಿ. ಬೆಳಗ್ಗೆ  ತುಸು ಬಿಸಿ ನೀರು ಹಾಕಿ, ಕಟ್ಟಿರುವ ಸಿಂಕ್‌ ಸರಿಹೋಗುತ್ತದೆ.

ಕಾರ್ಪೆಟ್‌ ಮೇಲೆ ರಾತ್ರಿ ಸೋಡ ಉದುರಿಸಿ. ಬೆಳಗ್ಗೆ ವ್ಯಾಕ್ಯೂಂ ಕ್ಲೀನರ್‌ನಿಂದ ಶುಚಿಗೊಳಿಸಿ. ಕಾರ್ಪೆಟ್‌ನ ಕೊಳಕು ದೂರವಾಗುತ್ತದೆ.

ಕಿಚನ್ನಿನ ಸ್ಲ್ಯಾಬ್‌, ಕ್ಯಾಬಿನೆಟ್‌, ಗ್ಯಾಸ್‌ ಒಲೆ ಇತ್ಯಾದಿಗಳಿಂದ ಜಿಡ್ಡು ಕಲೆ ತೊಲಗಿಸಲು ಒದ್ದೆ ಬಟ್ಟೆ ಮೇಲೆ ಸೋಡ ಉದುರಿಸಿ ಆ ಭಾಗ ಕ್ಲೀನ್‌ ಮಾಡಿ. ಎಲ್ಲಾ ಜಿಡ್ಡೂ ಮಂಗಮಾಯ!

ಯಾವುದೋ ಸಮಾರಂಭಕ್ಕಾಗಿ ಒಂದೇ ಸಮ ಬೆಳ್ಳುಳ್ಳಿ ಸುಲಿದು, ಈರುಳ್ಳಿ ಹೆಚ್ಚಿ ಕೈಗಳು ದುರ್ವಾಸನೆ ಬೀರುತ್ತಿವೆಯೇ? ಅದನ್ನು ದೂರ ಮಾಡಲು ಕೈಗಳ ಮೇಲೆ ಬೇಕಿಂಗ್‌ ಸೋಡ ಹಾಕಿಕೊಂಡು ಚೆನ್ನಾಗಿ ಉಜ್ಜಬೇಕು, ಆಮೇಲೆ ಬೆಚ್ಚಗಿನ ನೀರಲ್ಲಿ ಕೈ ತೊಳೆಯಿರಿ.

ಸಮಾನ ಪ್ರಮಾಣದಲ್ಲಿ ಉಪ್ಪು, ಬೇಕಿಂಗ್‌ ಸೋಡ ಬೆರೆಸಿಕೊಂಡು ಮನೆಯ ಮೂಲೆಗಳಲ್ಲಿ ಇರುವೆ, ಇತರ ಕೀಟಗಳ ಕಾಟವಿದ್ದರೆ ಅಲ್ಲೆಲ್ಲ ಸಿಂಪಡಿಸಿ, ಅವು ಮಾಯವಾಗುತ್ತವೆ.

ಹೂಗಳ ತಾಜಾತನ ಕಾಪಾಡಿಕೊಳ್ಳಲು ಹೂಕುಂಡಗಳಿಗೆ 1 ಸಣ್ಣ ಚಮಚ ಬೇಕಿಂಗ್‌ ಸೋಡ ಹಾಕಿಡಿ.

ಫ್ರಿಜ್‌ ಒಳಗಿನ ವಸ್ತುಗಳ ತಾಜಾತನ ಕೆಡದೆ, ದುರ್ವಾಸನೆ ಹರಡದಿರಲು, ಒಂದು ಸಣ್ಣ ಬಟ್ಟಲಲ್ಲಿ ಬೇಕಿಂಗ್‌ ಸೋಡ ಹಾಕಿಡಿ. ಇದು ಎಲ್ಲಾ ಸಾಮಗ್ರಿಗಳ ದುರ್ವಾಸನೆಯನ್ನೂ ಓಡಿಸುತ್ತದೆ.

1 ದೊಡ್ಡ ಚಮಚ ನೀರಿಗೆ 3 ಚಮಚ ಬೇಕಿಂಗ್‌ ಸೋಡ ಬೆರೆಸಿ, ಹೊಳಪು ಕಳೆದುಕೊಂಡು ಮಂಕಾಗಿರುವ ಬೆಳ್ಳಿ ಪರಿಕರಗಳಿಗೆ ಆ ಪೇಸ್ಟ್ ನ್ನು ಸ್ಪಂಜ್‌ನಿಂದ ಸವರಬೇಕು. ನಂತರ ಮೃದು ಒಣಬಟ್ಟೆಯಿಂದ ಉಜ್ಜಿದರೆ, ಪಾಲಿಶ್‌ ಮಾಡಿದಂತೆ ಅದಕ್ಕೆ ಲಕಲಕ ಹೊಳೆಯುತ್ತವೆ.

ಒಂದು ಚಿಕ್ಕ ಟಬ್‌ಗೆ ತುಸು ಬಿಸಿ ನೀರು ತುಂಬಿಸಿ 3 ದೊಡ್ಡ ಚಮಚ ಬೇಕಿಂಗ್‌ ಸೋಡ ಹಾಕಿ, ಪಾದಗಳನ್ನು ಇದರಲ್ಲಿ ಅದ್ದಿಡಿ. ಆಗ ಕಾಲಿಗಾದ ಆಯಾಸ ದೂರಾಗುತ್ತದೆ.

ಕೊಳೆಯಾದ ಬ್ರಶ್‌, ಬಾಚಣಿಗೆಗಳನ್ನು ಶುಚಿಗೊಳಿಸಲು 1 ಕಪ್‌ ನೀರಿಗೆ 1 ಸಣ್ಣ ಚಮಚ ಬೇಕಿಂಗ್‌ ಸೋಡ ಬೆರೆಸಿ, ಅದರಲ್ಲಿ ಇವನ್ನು 2 ತಾಸು ನೆನೆಹಾಕಿಡಿ. ಅದರ ಕೊಳೆಯೆಲ್ಲ ತಂತಾನೇ ಹೊರಬರುತ್ತದೆ.

ಕಿಟಕಿಯ ಗಾಜುಗಳನ್ನು ಶುಚಿಗೊಳಿಸಲು ಬೇಕಿಂಗ್‌ ಸೋಡಾಗೆ ನೀರು ಬೆರೆಸಿ ಪೇಸ್ಟ್ ಮಾಡಿ. ಅದನ್ನು ಒದ್ದೆ ಬಟ್ಟೆಯಿಂದ ಗಾಜಿಗೆ ನೀಟಾಗಿ ಸವರಿ, ಒಣ ಬಟ್ಟೆ ಅಥವಾ ದಿಪತ್ರಿಕೆಯಿಂದ ಉಜ್ಜಿ ಹೊಳೆಯುವಂತೆ ಮಾಡಬಹುದು.

ಅಡುಗೆಮನೆಯ ಸಿಂಕ್‌ನ್ನು ಹೊಳೆಯುವಂತೆ ಮಾಡಲು, ಬೇಕಿಂಗ್‌ ಸೋಡಾಗೆ ನೀರು ಬೆರೆಸಿ ಪೇಸ್ಟ್ ಮಾಡಿ, ಒದ್ದೆ ಬಟ್ಟೆಯಿಂದ ಸಿಂಕ್‌ನ ಎಲ್ಲಾ ಭಾಗಕ್ಕೂ ಸವರಿಡಿ. 1 ತಾಸಿನ ನಂತರ ನೀರು ಸುರಿದು ನೀಟಾಗಿ ತೊಳೆದುಬಿಡಿ. ಆಗ ಸಿಂಕ್‌ ಹೊಳೆಯುತ್ತದೆ.

ಬೋನ್‌ ಚೈನಾ, ಪೋರ್ಸ್‌ಲೀನ್‌, ಮೆಲಮೈನ್‌ ಬಟ್ಟಲುಗಳ ಟೀ ಭಾಗದ ಕಲೆ ಹೋಗಲಾಡಿಸಲು, ಇದಕ್ಕೆ ಮೇಲೆ ಹೇಳಿದಂತೆ ಪೇಸ್ಟ್ ಸವರಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಬ್ರಶ್ಶಿನಿಂದ ಚೆನ್ನಾಗಿ ಉಜ್ಜಿ ತೊಳೆದರೆ ಕಲೆಗಳೆಲ್ಲ ಮಂಗಮಾಯ!

– ಜಿ. ಮಾಧುರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ