ದೂರ ಬಹು ದೂರದ ತನಕ ಪಸರಿಸಿರುವ ಸಮುದ್ರ, ಅತ್ಯಂತ ಪ್ರಶಾಂತ ಗಾಳಿ, ಬಗೆಬಗೆಯ ಸಮುದ್ರ ಪಕ್ಷಿಗಳು, ದೂರದ ತನಕ ವ್ಯಾಪಿಸಿಕೊಂಡಿರುವ ಕಾಡು, ಗೋಡಂಬಿ ಹಾಗೂ ತೆಂಗಿನ ಮರಗಳು ಮತ್ತು ಅದ್ಭುತ ದೃಶ್ಯಗಳ ಜೊತೆ ರುಚಿ ರುಚಿಯಾದ ಸಮುದ್ರ ಉತ್ಪನ್ನಗಳನ್ನು ಸವಿಯಬೇಕಿದ್ದರೆ ಅಂಡಮಾನ್ ನಿಕೋಬಾರ್‌ಗೆ ಒಮ್ಮೆ ಪ್ರವಾಸ ಹೋಗಿಬನ್ನಿ.
ಇಲ್ಲಿನ ನೀಲಿ ಬಣ್ಣದ ನೀರು ಹಾಗೂ ಶಾಂತ ಸಮುದ್ರ ಯಾವುದೇ ನಿಟ್ಟಿನಲ್ಲೂ ಮಾಲ್ಡೀವ್ ಸ್ಪೆಷಲ್ ಮಾರಿಷಸ್, ಮಲೇಶಿಯಾಗಿಂತ ಕಡಿಮೆ ಏನಿಲ್ಲ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹವನ್ನು ಪ್ರೀತಿಯಿಂದ `ಎಮರಾಲ್ಡ್ ಐಲ್ಯಾಂಡ್ಸ್' ಎಂದು ಕರೆಯಲಾಗುತ್ತದೆ. ಇದರ ವಿಶೇಷತೆಯೇನೆಂದರೆ, ಇಲ್ಲಿನ ಅನುಪಮ ಸೌಂದರ್ಯ ಮತ್ತು ಚಕಿತಗೊಳಿಸುವ ಸಸ್ಯ ಸಂಪನ್ಮೂಲ ಮತ್ತು ಜೀವಜಂತುಗಳು, ಅತ್ಯಾಕರ್ಷಕ ಪಿಕ್ನಿಕ್ ಸ್ಪಾಟ್ಸ್ ಹಾಗೂ ಇತರೆ ಕೆಲವು ಅಚ್ಚರಿದಾಯಕ ಸಮುದ್ರದ ಸಂಗತಿಗಳು, ಪ್ರವಾಸಿಗರನ್ನು ಸದಾ ಕೈ ಬೀಸಿ ಕರೆಯುತ್ತಿರುತ್ತವೆ. ಸಮುದ್ರ ತೀರ ತನ್ನ ವಿಸ್ತಾರ ಹಾಗೂ ಬಂಗಾರ ವರ್ಣದ ಮರಳಿನಿಂದಾಗಿ ಮನಮೋಹಕ ಎನಿಸಿಕೊಂಡಿದೆ.
ಪ್ರಮುಖ ಪ್ರವಾಸಿ ಸ್ಥಳಗಳು
ಪೋರ್ಟ್ ಬ್ಲೇರ್ : ಹಿಂದೊಮ್ಮೆ ಪೋರ್ಟ್ ಬ್ಲೇರ್ ಕರಿ ನೀರಿನ ಶಿಕ್ಷೆಗೆ ಕುಖ್ಯಾತಿ ಪಡೆದಿತ್ತು. ಅದೀಗ ಆಧುನಿಕ ಸುಖ ಸೌಲಭ್ಯಗಳ ನಗರವಾಗಿದ್ದು, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ರಾಜಧಾನಿಯಾಗಿದೆ. ಇಲ್ಲಿ ಜಲಕ್ರೀಡೆಯ ವ್ಯವಸ್ಥೆ ಕೂಡ ಇದೆ. ಅದು ಹೆಚ್ಚುವರಿ ಆಕರ್ಷಣೆ ಕೇಂದ್ರವಾಗಿದೆ. ಪೋರ್ಟ್ ಬ್ಲೇರ್‌ನಿಂದ 35 ಕಿ.ಮೀ. ದೂರದಲ್ಲಿರುವ ಪಕ್ಷಿಗಳ ನಡುಗಡ್ಡೆ ಅದನ್ನು `ಸನ್ ಸೆಟ್ ಪಾಯಿಂಟ್' ಎಂದು ಕರೆಯುತ್ತಾರೆ. ಕಾರ್ಬಿನ್ ಕೋಲ್ಸ್, ಮೌಂಟ್ ಹ್ಯಾರಿಟ್, ರೋಸ್ ನಡುಗಡ್ಡೆ, ಮಧುಬನ ತೀರ ಮತ್ತು ಕಾಲಾಪತ್ಥರ್ ಪೋರ್ಟ್ ಬ್ಲೇರ್‌ನ ಜನಪ್ರಿಯ ಪ್ರವಾಸಿ ತಾಣಗಳಾಗಿವೆ.
ಸೆಲ್ಯುಲರ್ ಜೈಲ್ : ಅಂಡಮಾನ್ ಪ್ರವಾಸಕ್ಕೆ ಹೋಗುವ ಪ್ರತಿಯೊಬ್ಬ ಪ್ರವಾಸಿಗರೂ ಸೆಲ್ಯುಲರ್ ಜೈಲ್ ನೋಡುವ ಕಾತುರ ಹೊಂದಿರುತ್ತಾರೆ. ಇದು ನಮ್ಮ ದೇಶದ ಪ್ರಮುಖ ಪಾರಂಪರಿಕ ತಾಣ. ಸ್ವಾತಂತ್ರ್ಯ ಚಳವಳಿಗಾರರನ್ನು ಇಲ್ಲಿ ಕೂಡಿ ಹಾಕಿ ಅವರಿಗೆ ಬಗೆಬಗೆಯ ಚಿತ್ರಹಿಂಸೆ ನೀಡಲಾಗುತ್ತಿತ್ತು. ಅದಕ್ಕೆ ಈ ಜೈಲು ಮೂಕಸಾಕ್ಷಿ ಎಂಬಂತೆ ನಿಂತಿದೆ. 1906ರಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತು. ಇದರಲ್ಲಿ ಶಿಕ್ಷೆಗೊಳಗಾದವರನ್ನು ಇಡಲಾಗುತ್ತಿತ್ತು. ಇದನ್ನು ಕರಿ ನೀರಿನ ಶಿಕ್ಷೆ ಎಂದು ಹೇಳಲಾಗುತ್ತಿತ್ತು.
ಹ್ಯಾವ್ ಲಾಕ್ ದ್ವೀಪ : ಇಲ್ಲಿನ ಪರಿಶುದ್ಧ ನೀರು ಪ್ರವಾಸಿಗರ ಗಮನ ಸೆಳೆಯುವಂತೆ ಮಾಡುತ್ತದೆ. ಇಲ್ಲಿ ಡಾಲ್ಛಿನ್‌ಗಳು ಹಿಂಡು ಹಿಂಡಾಗಿ ಈಜುತ್ತಿದ್ದು ಗಮನ ಸೆಳೆಯುತ್ತವೆ. ಕನ್ನಡಿಯ ಪ್ರತಿಬಿಂಬದಂತೆ ನೀರಿನೊಳಗಿನ ಸಸ್ಯಗಳು, ಬಣ್ಣ ಬಣ್ಣದ ಮೀನುಗಳನ್ನು ನೋಡಿ ಪ್ರವಾಸಿಗರು ಬಾಹ್ಯ ಪ್ರಪಂಚವನ್ನು ಮರೆತೇಬಿಡುತ್ತಾರೆ.
ಲಾಂಗ್ ಐಲ್ಯಾಂಡ್ : ಇದು ಕೂಡ ಅಂಡಮಾನ್ ದ್ವೀಪದ ಜನಪ್ರಿಯ ಪ್ರವಾಸಿ ತಾಣ. ಇಲ್ಲೂ ಕೂಡ ಪ್ರವಾಸಿಗರು ಡಾಲ್ಛಿನ್ ಗಳನ್ನು ನೋಡುವ ಉತ್ಸಾಹದಿಂದ ಕಾಯುತ್ತಿರುತ್ತಾರೆ. ಲಾಲಾಜಿ ಬೇ, ಲಾಂಗ್ ಐಲ್ಯಾಂಡ್‌ನ ಒಂದು ಪ್ರಮುಖ ಸ್ಥಳ.
ಮಹಾತ್ಮ ಗಾಂಧಿ ಮರೀನ್ ನ್ಯಾಷನಲ್ ಪಾರ್ಕ್: ಅಂಡಮಾನ್‌ನ ರಮ್ಯ ತಾಣಗಳಲ್ಲಿ ಮಹಾತ್ಮ ಗಾಂಧಿ ಮರೀನ್ ನ್ಯಾಷನಲ್ ಪಾರ್ಕ್ ಕೂಡ ಸೇರಿದೆ. ವಾಂಡೂರ್ ಎಂಬ ಸ್ಥಳದಲ್ಲಿ ಈ ಪಾರ್ಕ್ ಇದ್ದು, ಮುಕ್ತ ಸಮುದ್ರ ಹಾಗೂ ಆಯಕಟ್ಟಿನ ಕೊಲ್ಲಿ ಸೇರಿದಂತೆ 15 ದ್ವೀಪಗಳಲ್ಲಿ ಇದು ವ್ಯಾಪಿಸಿಕೊಂಡಿದೆ. ಇಲ್ಲಿ ಅಪರೂಪದ ಹವಳಗಳು, ಸಮುದ್ರ ಜೀವಿಗಳನ್ನು ನೋಡಲು ಜನರು ಬರುತ್ತಾರೆ.