ರಾಹುಲ್‌ಗೆ ಬ್ಯಾಸ್ಕೆಟ್ ಬಾಲ್ ಆಡಲು ಇಷ್ಟ. ಆದರೆ ಏನೇ ಮಾಡಿದರೂ ಚೆಂಡನ್ನು ಬ್ಯಾಸ್ಕೆಟ್‌ಗೆ ಹಾಕಲು ಅಸಮರ್ಥನಾದಾಗ ಆಟದಲ್ಲಿ ಆಸಕ್ತಿ ಕಳೆದುಕೊಂಡು ಸುಮ್ಮನೆ ಕುಳಿತ. ಅವನ ಸಪ್ಪೆ ಮುಖ ನೋಡಿ ಅವನ ತಾಯಿ ಬಳಿಗೆ ಬಂದು ಸಮಾಧಾನಪಡಿಸಿ, “ಪ್ರಯತ್ನ ಪಡುತ್ತಲೇ ಇರು. ಖಂಡಿತ ಸಫಲನಾಗುವೆ, ಮೊದಲು ನಿನ್ನ ಹೆಸರನ್ನು ಬರೆಯುವುದಕ್ಕೂ ನಿನಗೆ ಬರುತ್ತಿರಲಿಲ್ಲ. ದಿನ ಬರೆದು ಅಭ್ಯಾಸ ಮಾಡಿದ್ದರಿಂದ ಈಗ ಎಷ್ಟೆಲ್ಲಾ ಬರೆಯಬಲ್ಲೆ,” ಎಂದು ಹೇಳಿದರು.
ಈ ರೀತಿಯ ಪ್ರೋತ್ಸಾಹದಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚಲು ಸಹಾಯವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಸುತ್ತಲ ವಾತಾವರಣದ ಬಗೆಗಿನ ಭಾವನೆಗಳು ವಿಕಸಿತಗೊಳ್ಳುತ್ತವೆ. ಮಗು ನೋಡು, ಕೇಳು, ಯೋಚಿಸು ಮತ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಅಂಶಗಳು ಅದರ ಪ್ರಕೃತಿಯನ್ನು ರೂಪಿಸುತ್ತವೆ. ಮಗುವಿಗೆ ಭಯ, ಚಿಂತೆ, ಒತ್ತಡದ ಭಾವನೆಗಳು ಬರತೊಡಗಿದರೆ, ಅದು ಕೋಪ ಮತ್ತು ಹಠ ಪ್ರದರ್ಶಿಸುತ್ತದೆ. ಅದರ ಆತ್ಮವಿಶ್ವಾಸ ಕುಂಠಿತವಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಕೆಲವು ಮಕ್ಕಳು ಬಾಲ್ಯದಲ್ಲಿಯೇ ಚಿಂತೆ ಮತ್ತು ಒತ್ತಡಕ್ಕೆ ಗುರಿಯಾಗುತ್ತಾರೆ. ಬಾಲ್ಯದಲ್ಲಿನ ನಕಾರಾತ್ಮಕ ಅನುಭವದಿಂದ ಅದರ ಇಡೀ ಜೀವನದಲ್ಲಿ ನಕಾರಾತ್ಮಕ ಪ್ರಭಾವವಿರುವುದು ಕಂಡು ಬರುತ್ತದೆ.
ಮಕ್ಕಳು ಚಿಂತೆ ಮತ್ತು ಒತ್ತಡಕ್ಕೆ ಗುರಿಯಾಗಲು ಅನೇಕ ಕಾರಣಗಳಿರುತ್ತವೆ. ಮಗು ತನ್ನ ಶಾಲೆಯ ಪಾಠವನ್ನು ಅರ್ಥ ಮಾಡಿಕೊಳ್ಳಲು ಅಥವಾ ಮಾಡಿ ಮುಗಿಸಲು ಅಸಮರ್ಥವಾದಾಗ ಅವನಲ್ಲಿ ಒತ್ತಡ ಹುಟ್ಟಿಕೊಳ್ಳುತ್ತದೆ. ಈ ದಿಸೆಯಲ್ಲಿ ತನ್ನನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಿ ಅಸಫಲನಾಗುತ್ತಾನೆ. ತನ್ನ ಜೊತೆಗಾರರು ಇದನ್ನು ಸುಲಭವಾಗಿ ಮಾಡುತ್ತಾರೆನಿಸಿದಾಗ ಅವನು ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ.
ಮಕ್ಕಳು ಲಜ್ಜಿತರಾಗಿ ಅಥವಾ ಮೌನಿಗಳಾಗಿರುವುದನ್ನು ಗಮನಿಸುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸ ಕುಂಠಿತವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ತಂದೆತಾಯಿಯರು ಈ ಚಿಹ್ನೆಗಳನ್ನು ಗುರುತಿಸಿ ಮಕ್ಕಳು ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡಬೇಕು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ತಂದೆತಾಯಿಯರ ಮತ್ತೊಂದು ಜವಾಬ್ದಾರಿ ಎಂದರೆ ಮನೆಯಲ್ಲಿ ಸ್ನೇಹಮಯ ವಾತಾವರಣವಿದ್ದು, ಮಕ್ಕಳು ಸುರಕ್ಷತೆಯ ಅನುಭವ ಹೊಂದುವಂತಿರಬೇಕು ಮತ್ತು ಅವರು ಗದರಿಕೆಯ ಭಯವಿಲ್ಲದೆ ತಮ್ಮ ಮಾತನ್ನು ಧೈರ್ಯವಾಗಿ ಹೇಳಲು ಅವಕಾಶ ದೊರೆಯಬೇಕು.
ಸಂಭಾಷಣೆ ಸದಾ ಇರಲಿ : ಮಕ್ಕಳಿಗೆ ತಮ್ಮ ಕುಟುಂಬದ ಸದಸ್ಯರೊಡನೆ ಹೊಂದಾಣಿಕೆ ಇರಬೇಕು. ಸಂಭಾಷಣೆಯ ಮೂಲಕ ಬಾಲ್ಯದಿಂದಲೇ ಅವರ ಸಾಮಾಜಿಕ ಕೌಶಲ್ಯ ವಿಕಸಿತಗೊಳ್ಳುತ್ತದೆ. ಆದ್ದರಿಂದ ಸಹಜ, ಸ್ನೇಹಪೂರ್ಣ ವಾತಾವರಣದೊಂದಿಗೆ ಮಕ್ಕಳ ಜೊತೆ ಮಾತುಕತೆ ನಡೆಸುತ್ತಿರಿ. ಇದರಿಂದ ಅವರಿಗೆ ಮುಕ್ತವಾಗಿ ಮಾತನಾಡಲು ಆತ್ಮವಿಶ್ವಾಸ ಹೆಚ್ಚುವುದು.
ತಮಗೆ ಇಷ್ಟವಾದುದನ್ನು ಆಯ್ಕೆ ಮಾಡಲಿ : ಮಕ್ಕಳು ತಮಗೆ ಇಷ್ಟವಾದುದನ್ನು ಆರಿಸಿಕೊಳ್ಳಲು ಸಹಾಯ ಮಾಡುವುದರಲ್ಲಿ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ. ತಮ್ಮ ಇಷ್ಟವನ್ನು ತಾವೇ ಆಯ್ಕೆ ಮಾಡುವುದು ಆತ್ಮವಿಶ್ವಾಸ ವಿಕಸನಕ್ಕೆ ಒಳ್ಳೆಯ ಉಪಾಯ. ಇದು ತೀರ್ಮಾನ ತೆಗೆದುಕೊಳ್ಳಲು ಮತ್ತು ತಮ್ಮ ಆಯ್ಕೆಯ ಬಗ್ಗೆ ಅರ್ಥ ಮಾಡಿಕೊಳ್ಳಲು ಅನುವು ನೀಡುತ್ತದೆ ಹಾಗೂ ಇದರಿಂದ ಅವರಿಗೆ ಸಂತೋಷ ಸಿಗುತ್ತದೆ.
ಮೆಚ್ಚಿಗೆ : ಮಕ್ಕಳಿಗೆ `ಐ ಲವ್ ಯೂ’ ಹೇಳುತ್ತಿರಿ. ಪ್ರತಿಯೊಂದು ಮಗುವಿಗೂ ಪ್ರತ್ಯೇಕ ಪ್ರತಿಭೆ ಮತ್ತು ವೈಶಿಷ್ಟ್ಯ ಇರುವುದೆಂದು ಅವರಿಗೆ ತಿಳಿಸುತ್ತಿರಿ. ಅವರ ಸಕಾರಾತ್ಮಕ ಅಂಶಗಳನ್ನು ನೆನಪಿಸಿ ಮತ್ತು ಅವುಗಳ ಸಫಲತೆಯನ್ನು ಪ್ರಶಂಸಿಸಿ. ಅವರನ್ನು ಪ್ರೋತ್ಸಾಹಗೊಳಿಸಲು ಸ್ಟಿಕರ್, ಸ್ಕೆಚ್ ಪೆನ್, ಕುಕೀಸ್ ಮುಂತಾದ ಸಣ್ಣಪುಟ್ಟ ವಸ್ತುಗಳನ್ನು ಕೊಟ್ಟು ಮೆಚ್ಚಿಗೆ ತಿಳಿಸಿ. ಕೆಲಸ ಸಾಧಿಸುವಲ್ಲಿ ಅಸಫಲರಾದಾಗ ಅವರನ್ನು ಗದರದೆ, ಮೂದಲಿಸದೆ, ಮುಂದಿನ ಸಲ ಚೆನ್ನಾಗಿ ಮಾಡುವಂತೆ ಪ್ರೋತ್ಸಾಹಿಸಿ.
ಹೋಲಿಕೆ ಬೇಡ : ನಿಮ್ಮ ಮಕ್ಕಳ ಸಾಮರ್ಥ್ಯವನ್ನು ಇತರೆ ಮಕ್ಕಳೊಂದಿಗೆ ಎಂದೂ ಹೋಲಿಸಬೇಡಿ. ಪ್ರತಿಯೊಂದು ಮಗುವಿನ ಸ್ವಭಾವ, ಸಾಮರ್ಥ್ಯಗಳು ಬೇರೆಬೇರೆಯಾಗಿರುತ್ತವೆ. ಮಕ್ಕಳನ್ನು ಅವರ ಜೊತೆಗಾರರೊಂದಿಗೆ ಹೋಲಿಸಿದಾಗ ಅವರಲ್ಲಿ ಕೀಳುಭಾವನೆ ಉಂಟಾಗುತ್ತದೆ. ಹೋಲಿಕೆಯಿಂದ ಮಕ್ಕಳಲ್ಲಿ ಪರಸ್ಪರ ದ್ವೇಷ ಮತ್ತು ಈರ್ಷ್ಯೆ ಹುಟ್ಟಿಕೊಳ್ಳುತ್ತದೆ. ಇದು ಅವರ ಆರೋಗ್ಯಕ್ಕೆ ಹಾನಿ ಮಾಡಬಹುದು.
ಕೆಲಸದ ಬಗ್ಗೆ ದೃಢತೆ : ತಮಗೆ ಕೊಟ್ಟ ಕೆಲಸವನ್ನು ಪೂರ್ಣಗೊಳಿಸಿದಾಗ ಮಕ್ಕಳಿಗೆ ತಮ್ಮಲ್ಲಿ ಆತ್ಮವಿಶ್ವಾಸದ ಅನುಭವವಾಗುತ್ತದೆ, ಪ್ರೋತ್ಸಾಹ ದೊರೆತಂತಾಗುತ್ತದೆ. ಉದಾಹರಣೆಗೆ ವಿವೇಕ್ ತನ್ನ ಬೂಟಿಗೆ ಲೇಸ್ ಕಟ್ಟಲು ಪ್ರಯತ್ನಿಸಿ ಯಾವಾಗಲೂ ವಿಫಲನಾಗುತ್ತಿದ್ದನು. ಇದರಿಂದ ಅವನು ನಿರಾಶನಾಗತೊಡಗಿದನು. ಆಗ ಅವನ ತಂದೆ ತಾಯಿಯರು ಅವನಿಗೆ, `ಪ್ರಯತ್ನಪಡುತ್ತಲೇ ಇರು. ನೀನು ಖಂಡಿತ ಸಫಲನಾಗುವೆ,’ ಎಂದು ಸಲಹೆಯಿತ್ತರು. ಇದರಿಂದ ಅವನು ನಿಜವಾಗಿಯೂ ಸಫಲನಾದನು. ಇಂತಹ ಸಲಹೆ, ಪ್ರೋತ್ಸಾಹಗಳಿಂದ ಮಕ್ಕಳಿಗೆ ತಮ್ಮ ಗುರಿಯೆಡೆಗೆ ಮುಂದುವರಿಯಲು ಪ್ರೇರಣೆ ದೊರೆಯುತ್ತದೆ.
ಉಪಾಧ್ಯಾಯರೊಂದಿಗೆ ಮಾತನಾಡಿ : ತಂದೆ ತಾಯಿಯರು ತಮ್ಮ ಮಕ್ಕಳ ಸ್ನೇಹಿತರು ಮತ್ತು ಉಪಾಧ್ಯಾಯರೊಂದಿಗಿನ ಅವರ ವ್ಯವಹಾರವನ್ನು ತಿಳಿದುಕೊಳ್ಳಬೇಕಾದುದು ಬಹಳ ಮುಖ್ಯ. ತಮ್ಮ ಮಕ್ಕಳು ಹೊರಗಿನ ವಾತಾವರಣದಲ್ಲಿ ಹೇಗೆ ನಡೆದುಕೊಳ್ಳುವರೆಂಬುದೂ ಇದರಿಂದ ತಿಳಿದುಬರುತ್ತದೆ. ಮಕ್ಕಳಿಗೆ ಪಾಠ ಕಲಿಯುವುದರಲ್ಲಿ ಏನಾದರೂ ತೊಂದರೆ ಇದೆಯೋ ಅಥವಾ ಇನ್ನಾವುದಾದರೂ ವಿಷಯದ ಬಗ್ಗೆ ತಾವು ಗಮನಹರಿಸಬೇಕೇ ಎಂಬುದೂ ಸಹ ಇದರಿಂದ ತಂದೆತಾಯಿಯರಿಗೆ ಅರ್ಥವಾಗುತ್ತದೆ. ಮಕ್ಕಳ ಗೆಳೆಯರು ಮತ್ತು ಶಿಕ್ಷಕರೊಂದಿಗೆ ಮಾತನಾಡುವುದರ ಮೂಲಕ ಅವರ ಆಸಕ್ತಿ ಬಗೆಗೂ ತಿಳಿದುಕೊಳ್ಳಲು ಸಹಾಯವಾಗುತ್ತದೆ.
ಕಾಲ್ಪನಿಕ ಆಟಗಳನ್ನು ಬಳಸಿಕೊಳ್ಳಿ : ಕಾಲ್ಪನಿಕ ಕ್ರೀಡೆಗಳ ಮೂಲಕ ಮಕ್ಕಳು ಸುತ್ತಮುತ್ತಲ ಜನ ಮತ್ತು ವಸ್ತುಗಳೊಂದಿಗೆ ಕಾಲ್ಪನಿಕ ಸ್ಥಿತಿಯನ್ನು ನಿರ್ಮಾಣ ಮಾಡಿ ಅದರಲ್ಲಿ ತಮ್ಮ ಪಾತ್ರವನ್ನು ನಿಭಾಯಿಸುತ್ತಾರೆ. ಇಂತಹ ಆಟಗಳಿಗೆ ಅವರು ಹೆಚ್ಚಾಗಿ ಯೋಚಿಸಲು ಅವಕಾಶ ದೊರೆಯುತ್ತದೆ. ಅವರು ಮುಂದೆ ಏನಾಗಲು ಬಯಸುತ್ತಾರೆ, ಎಂತಹ ಜೀವನವನ್ನು ಇಷ್ಟಪಡುತ್ತಾರೆ ಎಂಬುವ ವಿಷಯಗಳು ತಿಳಿದು ಬರುತ್ತವೆ. ಈ ಆಟಗಳಲ್ಲಿ ಭಾಗಹಿಸುವುದರ ಮೂಲಕ ತಂದೆ ತಾಯಿಯರಿಗೆ ಮಕ್ಕಳ ಕಲ್ಪನಾಲೋಕದ ಪರಿಚಯವಾಗುತ್ತದೆ ಮತ್ತು ಅವರಿಗೆ ಆತ್ಮವಿಶ್ವಾಸಪೂರ್ವಕ ಪ್ರೇರಣೆ ನೀಡುವ ಅವಕಾಶ ದೊರೆಯುತ್ತದೆ.
ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಸಂಬಂಧ ಗಾಢವಾಗಿರಬೇಕು. ನಿಮ್ಮ ಮಕ್ಕಳನ್ನು ಪ್ರೀತಿಸಿ. ಒಂದು ಬಲವಾದ ಸಂಬಂಧವನ್ನು ನೆಲೆಗೊಳಿಸಿ ಮತ್ತು ಅದನ್ನು ವಿಕಸಿತಗೊಳಿಸಿ. ತಮ್ಮ ಆತ್ಮವಿಶ್ವಾಸಕ್ಕೆ ಕೊರತೆಯಾದಾಗ ನೀವು ಅವರ ಸಹಾಯಕ್ಕೆ ಇರುವಿರಿ ಎಂಬ ವಿಷಯ ಮಕ್ಕಳಿಗೆ ತಿಳಿದಿರಬೇಕು. ಮಕ್ಕಳೊಂದಿಗೆ ಸಹಜವಾದ ಮತ್ತು ವಿಶ್ವಾಸಪೂರ್ಣವಾದ ಸಂಬಂಧವನ್ನು ನಿರ್ಮಿಸಿದ್ದರೆ ಅವರಿಗೆ ಯಾವುದೇ ಸಮಸ್ಯೆ ಬಂದಾಗ ನಿಮ್ಮ ಬಳಿಗೆ ಧಾವಿಸಿ ಬರುವರು. ಹಾಗೆ ಬಂದಾಗ ನಿಮ್ಮ ಮಾತನ್ನು ಕೇಳಿ ನಿಮ್ಮ ಸಲಹೆಯಂತೆ ನಡೆದುಕೊಳ್ಳುವರು. ಮಕ್ಕಳು ತಮ್ಮ ಅಭಿಪ್ರಾಯವನ್ನು ವಿಕಸಿತಗೊಳಿಸಲು ನೆರವಾಗಿ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಗೆಳೆಯರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು, ಅವರ ಮಾತುಗಳನ್ನು ಕೇಳಲು ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆಕೊಡಲು ಸಹಾಯಕವಾಗುತ್ತದೆ. ಬೇರೆ ಬೇರೆ ಜನರ ಮುಂದೆ ತಮ್ಮ ಧ್ವನಿ ಎತ್ತಲು ಮತ್ತು ಗುರುತು ಮೂಡಿಸಲು ಇದು ಅಗತ್ಯ.
– ಋತ್ವಿಕಾ