ಅವಳ ಬಗ್ಗೆ ಅಯ್ಯೋ ಎನಿಸುತ್ತೆ. ಅವಳಿಗೆ 35 ವರ್ಷ. ಆದರೂ ಈವರೆಗೆ ಏಕಾಂಗಿ, ಸುಂದರಿ, ದೊಡ್ಡ ಹುದ್ದೆಯಲ್ಲಿದ್ದಾಳೆ. ಆದರೂ ಈವರೆಗೆ ಆಕೆಗೆ ಮದುವೆಯಾಗಿಲ್ಲ!''
ಶ್ರೀಲತಾ ತನ್ನ ಅಪಾರ್ಟ್‌ಮೆಂಟ್‌ಗೆ ಬಂದಾಗ ಮೇಲ್ಕಂಡ ಮಾತುಗಳು ಕೇಳಿಸಿದವು. ಅವಳು ಈ ಮಾತುಗಳನ್ನು ಕೇಳಿಸಿಕೊಂಡಿದ್ದು ಇದೇ ಮೊದಲಲ್ಲ. ಇಂತಹ ಮಾತುಗಳನ್ನು ಅನೇಕರು ಬೇರೆ ಬೇರೆ ರೀತಿಯಲ್ಲಿ ಮಾಡಿಕೊಂಡದ್ದನ್ನು ಅವಳು ಕೇಳಿಸಿಕೊಂಡಿದ್ದಾಳೆ. ಒಂದು ರೀತಿಯಲ್ಲಿ ಅವಳು ಅಂತಹ ಮಾತುಗಳಿಗೆ ಒಗ್ಗಿ ಹೋಗಿದ್ದಾಳೆ ಆದರೂ ಒಮ್ಮೊಮ್ಮೆ ಅಂತಹ ಮಾತುಗಳನ್ನು ಕೇಳಿದಾಗ ಅವಳ ಮನಸ್ಸಿಗೆ ನೋವಾಗುತ್ತದೆ.
ಜನರು ಅವಳ ಜೀವನದಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಾರೆ? ಅವಳಿಗೆ ನೆಮ್ಮದಿಯಿಂದ ಇರಲು ಏಕೆ ಅವಕಾಶ ಕೊಡುವುದಿಲ್ಲ? ಅವಳ ಪ್ರತಿಯೊಂದು ಆಗುಹೋಗುಗಳನ್ನು ಏಕೆ ಗಮನಿಸಲಾಗುತ್ತದೆ? ಏಕಾಂಗಿಯಾಗಿರುವುದು ಭಾರಿ ದೊಡ್ಡ ಅಪರಾಧವೇ? ಅವಳು ತನ್ನ ಇಷ್ಟಕ್ಕೆ ತಕ್ಕಂತೆ ಅದನ್ನು ಸ್ವೀಕರಿಸಿದ್ದರೆ ಅದರಿಂದ ಸಮಾಜಕ್ಕೇನು ತೊಂದರೆ? ಅವಳು ಅದನ್ನೇ ಚೆನ್ನಾಗಿ ಎಂಜಾಯ್ ಮಾಡುತ್ತಾಳೆ.
ತನ್ನ ಅಕ್ಕನ ವೈವಾಹಿಕ ಜೀವನದ ಗೋಳನ್ನು ನೋಡಿದ ಬಳಿಕ ಶ್ರೀಲತಾ ಮದುವೆಯಾಗದೇ ಏಕಾಂಗಿಯಾಗಿರಲು ನಿರ್ಧರಿಸಿದಳು. ಅಕ್ಕನ ಮೇಲೆ ಅದೆಷ್ಟು ನಿರ್ಬಂಧ ಹೇರಲಾಗುತ್ತೆಂದರೆ, ಯಾವುದೇ ಕೆಲಸವನ್ನು ಅವಳು ತನ್ನ ಗಂಡನ ಅನುಮತಿ ಇಲ್ಲದೆ ಮಾಡಲು ಆಗುವುದಿಲ್ಲ. ಅಕ್ಕನ ವಯಸ್ಸು 36. ಆದರೆ ಈಗ ಆಕೆ 60 ವರ್ಷದ ಅಜ್ಜಿಯ ಥರ ಕಾಣ್ತಿದ್ದಾಳೆ.
ಶ್ರೀಲತಾಳಂತಹ ಮಹಿಳೆಯರ ಸಂಖ್ಯೆ ಕಡಿಮೆಯೇನಿಲ್ಲ. ಏಕೆಂದರೆ ಅವರು ತಮ್ಮ ಇಚ್ಛೆಗನುಗುಣವಾಗಿ ಮದುವೆಯಾಗದಿರಲು ನಿರ್ಧರಿಸಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸಲು ಬಯಸಿದ್ದಾರೆ. ಯಾವುದೋ ಕಾರಣದಿಂದ ಮದುವೆ ಆಗದೇ ಇದ್ದರೂ ಏಕಾಂಗಿಯಾಗಿ ಖುಷಿಯಿಂದ ಇರಬಹುದಾಗಿದೆ. ಆದರೆ ಜೀವನ ನಡೆಸುವ ವಿಧಾನ ಮಾತ್ರ ಗೊತ್ತಿರಬೇಕು.
ಶ್ರೀಲತಾ ಈ ಕುರಿತು ಹೀಗೆ ಹೇಳುತ್ತಾಳೆ, ``ಮದುವೆ ಆಗಲೇಬೇಕೆಂದೇನಿಲ್ಲ. ಎಷ್ಟೋ ಸಲ ನಾವು ಇಷ್ಟಪಟ್ಟ ಸಂಗಾತಿ ದೊರೆಯುವುದಿಲ್ಲ. ಹೀಗಾಗಿ ಮದುವೆ ಆಗುವುದಿಲ್ಲ. ಮತ್ತೆ ಕೆಲವು ಸಲ ಯಾರೋ ಒಬ್ಬರು ಇಷ್ಟವಾದರೂ ಜೀವನವಿಡೀ ಇವರ ಜೊತೆ ಜೀವನ ಸಾಗಿಸಬೇಕಾ ಎಂದೆನಿಸುತ್ತದೆ. ನನ್ನ ಜೊತೆಗೆ ಹೀಗೆ ಆಯಿತು. ಪ್ರೀತಿ ಒಂದು ವಿಶೇಷ ಅನುಭೂತಿ. ನಿಮಗೆ ಸೂಕ್ತ ಸಂಗಾತಿ ದೊರಕದಿದ್ದರೆ ಇದರರ್ಥ ನೀವು ಜೀವನದ ಬಗ್ಗೆ ಖುಷಿಯಿಂದಿಲ್ಲ ಎಂದಲ್ಲ. ನೀವು ಏಕಾಂಗಿಯಾಗಿದ್ದರೆ, ಮದುವೆ ಆಗದೇ ಇದ್ದರೆ ನಿಮ್ಮ ಜೀವನ ಅಪೂರ್ಣ ಎಂದು ಭಾವಿಸುವುದು ತಪ್ಪು. ಮದುವೆಯೇ ಎಲ್ಲ ಅಲ್ಲ. ಜೀವನ ನಮಗೆ ಅಗಣಿತ ಅವಕಾಶಗಳನ್ನು ದೊರಕಿಸಿಕೊಡುತ್ತದೆ. ಅವನ್ನು ನೀವೇ ಹುಡುಕಬೇಕು ಹಾಗೂ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು.''
ನಾವು ಏಕಾಂಗಿಯಾಗಿರುವುದನ್ನು ನೋಡಿ ನಿಮ್ಮ ಸ್ನೇಹಿತರು, ತಾಯಿತಂದೆಯರು, ಅಣ್ಣತಂಗಿ ಮತ್ತು ಸಮಾಜ ನೀವು ದುಃಖಿತರಾಗಿರಬಹುದು ಎಂದು ಅಂದುಕೊಳ್ಳುತ್ತಾರೆ. ನೀವು ಏಕಾಂಗಿಯಾಗಿರಲು ನಿರ್ಧರಿಸಿರುವ ಕಾರಣ ಏನೇ ಆಗಿರಬಹುದು, ನಾನು ಏಕಾಂಗಿಯಾಗಿದ್ದರೂ ಖುಷಿಯಿಂದ ಇರಬಲ್ಲೆ ಎಂದು ನಿರ್ಧರಿಸಿಕೊಂಡೇ ಮುನ್ನಡೆಯಿರಿ. ನೀವು ಮಾನಸಿಕವಾಗಿ ಪರಿಪೂರ್ಣವಾಗಿ ಸನ್ನದ್ಧರಾದಾಗಲೇ ಏಕಾಂಗಿಯಾಗಿ ಇರುವ ಬಗ್ಗೆ ನಿರ್ಧಾರ ಮಾಡಿ.