ಯಾವುದೇ ಮಗುವಿನ ಆರಂಭಿಕ 1000 ದಿನಗಳು ಅದರ ಜೀವನದ ಅತ್ಯಮೂಲ್ಯ ದಿನಗಳಾಗಿರುತ್ತವೆ. ಆದರೆ ಭಾರತದಲ್ಲಿ ಮಕ್ಕಳ ಆರೋಗ್ಯ ಮತ್ತು ಪೋಷಣೆಯಲ್ಲಿ ಸಾಕಷ್ಟು ಸುಧಾರಣೆ ಆಗಿದ್ದಾಗ್ಯೂ ಕೂಡ ಲಕ್ಷಾಂತರ ಮಕ್ಕಳು ತಮ್ಮ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೊದಲೇ ಸಾನ್ನಪ್ಪುತ್ತಿವೆ. ಇದಕ್ಕೆ ಮುಖ್ಯ ಕಾರಣ ಪೋಷಕಾಂಶದ ಕೊರತೆ. ವಿಟಮಿನ್ ಮತ್ತು ಮಿನರಲ್ ಕೊರತೆಯನ್ನು ಮೈಕ್ರೊನ್ಯೂಟ್ರಿಯೆಂಟ್ಸ್ ನ ಕೊರತೆ ಎಂದು ಕರೆಯಲಾಗುತ್ತದೆ. ಇದು ಕೂಸುಗಳು ಅನಾರೋಗ್ಯಕ್ಕೆ ತುತ್ತಾಗಲು ಮತ್ತು ಅವುಗಳ ಸಾವಿನ ಪ್ರಮಾಣ ಹೆಚ್ಚಲು ಕಾರಣವಾಗಿವೆ.
ಪೋಷಕಾಂಶಗಳ ಕೊರತೆ
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ವಿಟಮಿನ್ ಹಾಗೂ ಮಿನರಲ್‌ನ ಕೊರತೆಯ ಭಯಾನಕ ಪರಿಣಾಮ ಎಂದರೆ, ಪ್ರತಿವರ್ಷ ಹುಟ್ಟುವ 26 ದಶಲಕ್ಷ ಮಕ್ಕಳಲ್ಲಿ 7 ಲಕ್ಷದಷ್ಟು ಮಕ್ಕಳು ಆರಂಭಿಕ ಹಂತ ತಲುಪುದರೊಳಗೆ ಅಸುನೀಗುತ್ತವೆ. ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದ ಶೇ.13ರಷ್ಟು ಜನಸಂಖ್ಯೆ 6 ವರ್ಷಕ್ಕಿಂತ ಕಡಿಮೆ ವಯೋಮಾನದವರದ್ದಾಗಿದೆ. ಅದರಲ್ಲಿ 12.7 ಲಕ್ಷ ಮಕ್ಕಳು ಪೋಷಕಾಂಶದ ಕೊರತೆಯಿಂದ ಪ್ರತಿವರ್ಷ ಸಾವನ್ನಪ್ಪುತ್ತಿವೆ. ಆರಂಭಿಕ ಹಂತದಲ್ಲಿ ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಮೈಕ್ರೊನ್ಯೂಟ್ರಿಯೆಂಟ್ಸ್ ನ ಅಗತ್ಯ ಇರುತ್ತದೆ. ಆ ಅವಧಿಯಲ್ಲಿಯೇ ಶೇ.75 ರಷ್ಟು ಮಕ್ಕಳು ಸಾವಿಗೀಡಾಗುತ್ತವೆ.
ದೈಹಿಕ ಬೆಳಣಿಗಾಗಿ
ಮಕ್ಕಳ ತಜ್ಞ ಡಾ. ಸತೀಶ್ ಹೀಗೆ ಹೇಳುತ್ತಾರೆ, 6 ರಿಂದ 24ನೇ ತಿಂಗಳಿನ ತನಕ ಮಕ್ಕಳಿಗೆ ಬೆಳವಣಿಗೆ ಕುಂಠಿತಗೊಳ್ಳುವ ಹಾಗೂ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿಗೆ ಕಂಡುಬರುತ್ತದೆ. ಅವುಗಳಿಗೆ ಸೂಕ್ತ ಪೋಷಣೆ ದೊರೆಯದೇ ಇರುವುದೇ ಅದಕ್ಕೆ ಕಾರಣ. ಶಿಶುಗಳ ಸಾಮಾನ್ಯ ಬೆಳಣಿಗೆಗೆ ಸೂಕ್ತ ಪ್ರಮಾಣದಲ್ಲಿ ವಿಟಮಿನ್ ಮತ್ತು ಮಿನರಲ್‌ನಿಂದ ಕೂಡಿದ ಆಹಾರ ನೀಡುವುದು ಸೂಕ್ತ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನ್ಯೂಮೋನಿಯಾ, ಡಯೆರಿಯಾ, ಕಾಲರಾ, ಮಲೇರಿಯಾ ಇವು ಬರಲು ಮುಖ್ಯ ಕಾರಣ ಅಪೌಷ್ಟಿಕತೆಯೇ ಆಗಿದೆ. ಒಂದು ವೇಳೆ ಮಗುವಿನ ಆರಂಭಿಕ 1000 ದಿನಗಳಲ್ಲಿ ಪೋಷಕಾಂಶದಿಂದ ಕೂಡಿದ ಆಹಾರ ಕೊಟ್ಟರೆ, ಅವುಗಳ ದೈಹಿಕ ಬೆಳವಣಿಗೆ ಸಮರ್ಪಕವಾಗಿ ಆಗುತ್ತದೆ. ಇದರಿಂದ ಅವುಗಳ ನೆನಪಿನ ಶಕ್ತಿ ಮತ್ತು ವಿಚಾರ ಮಾಡುವ ಶಕ್ತಿ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲ, ಅದು ಬೆಳೆದು ದೊಡ್ಡದಾದ ಮೇಲೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ತಜ್ಞರ ಪ್ರಕಾರ ಶಿಶುವೊಂದು ಸ್ತನ್ಯಪಾನದಿಂದ ಗಟ್ಟಿ ಆಹಾರ ಸೇವಿಸುವ ಹಂತಕ್ಕೆ ಬಂದಾಗ ಅದಕ್ಕೆ ಮೈಕ್ರೊ ನ್ಯೂಟ್ರಿಯೆಂಟ್ಸ್ ನೀಡುವ ಅವಶ್ಯಕತೆ ಹೆಚ್ಚಿಗೆ ಇರುತ್ತದೆ. ಏಕೆಂದರೆ ಆಗ ಅದರ ಅಗತ್ಯ ಹೆಚ್ಚುತ್ತದೆ.
ಗಮನವಿರಲಿ
ಡಾ. ಸತೀಶ್ ಪ್ರಕಾರ, 6 ತಿಂಗಳ ಬಳಿಕ ಮಗುವಿಗೆ ಪೋಷಕಾಂಶಗಳ ಕೊರತೆ ಉಂಟಾಗಬಾರದು. ಸ್ತನ್ಯಪಾನದ ಜೊತೆಗೆ ವಿಟಮಿನ್, ಮಿನರಲ್, ಫೋರ್ಟಿಫೈಡ್, ಕಬ್ಬಿಣಾಂಶ, ಮಲ್ಟಿ ವಿಟಮಿನ್, ಡ್ರಾಪ್ ಸಪ್ಲಿಮೆಂಟ್, ಆಹಾರ ಪದಾರ್ಥಗಳನ್ನು ಕೊಡಬೇಕು.
– ಪ್ರತಿನಿಧಿ
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ದೇಶದ ಶೇಕಡಾ 13ರಷ್ಟು ಜನಸಂಖ್ಯೆ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳದ್ದಾಗಿದೆ. ಅವುಗಳಲ್ಲಿ 12.7 ಲಕ್ಷ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಪ್ರತಿ ವರ್ಷ ಸಾವನ್ನಪ್ಪುತ್ತಿವೆ. ಈ ಗಂಭೀರ ವಾಸ್ತವ ಅಂಶಗಳ ಜೊತೆಗೆ ಈ ಸಂಗತಿಯನ್ನು ಸೇರ್ಪಡೆಗೊಳಿಸುವುದು ಅತ್ಯವಶ್ಯ. ಯಾವ ಆರಂಭಿಕ ವಯಸ್ಸಿನಲ್ಲಿ ಮಕ್ಕಳಿಗೆ ಮೈಕ್ರೊನ್ಯೂಟ್ರಿಯೆಂಟ್ಸ್ ಎಲ್ಲಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುತ್ತೊ, ಅದೇ ಅವಧಿಯಲ್ಲಿ ಶೇ.75ರಷ್ಟು ಶಿಶುಗಳ ಸಾವಿಗೆ ಪೋಷಕಾಂಶಗಳ ಕೊರತೆ ಕಾರಣವಾಗಿರುತ್ತದೆ.