ಕಥೆ – ಬಿಂದು ಶೆಣೈ 

ಅಕ್ಕ ಮತ್ತು ಭಾವ ಸಾಯಂಕಾಲದ ರೈಲಿನಲ್ಲಿ ಬರುತ್ತಿದ್ದಾರೆ. ಅವರನ್ನು ಕರೆದುಕೊಂಡು ಬನ್ನಿ. ನನಗೆ ಒಂದು ಮೀಟಿಂಗ್‌ ಇದೆ. ನನಗೆ ಹೋಗುವುದಕ್ಕೆ ಆಗುವುದಿಲ್ಲ ಅನ್ನಿಸುತ್ತೆ,” ಶಾಲಿನಿ ತನ್ನ ಪತಿ ಸುಧೀರನಿಗೆ ಹೇಳಿದಳು.

“ನನಗೆ ಟೈಮ್ ಇಲ್ಲ. ಫೋನ್‌ ಮಾಡಿಬಿಡು. ಟ್ಯಾಕ್ಸಿ ಮಾಡಿಕೊಂಡು ಬರುತ್ತಾರೆ,” ಲ್ಯಾಪ್‌ಟಾಪ್‌ನಲ್ಲೇ ಕಣ್ಣು ಕೀಲಿಸಿದ್ದ ಸುಧೀರ್

ಉತ್ತರಿಸಿದ.

“ನಮ್ಮ ಮದುವೆ ಆದ ಮೇಲೆ ಮೊದಲ ಸಲ ಇಲ್ಲಿಗೆ ಬರುತ್ತಿದ್ದಾರೆ. ನಾವು ಹೋಗಿ ಕರೆತರದಿದ್ದರೆ ತಪ್ಪು ತಿಳಿಯಬಹುದು. ನಿಮ್ಮ ಅಕ್ಕ ಬಂದಿದ್ದಾಗ ಇಡೀ ವಾರ ರಜೆ ಹಾಕಿದ್ದಿರಿ. ಈಗ 1 ದಿಸ ರಜೆ ಹಾಕಲು ಆಗೋಲ್ಲವೇ….?”

“ನನ್ನ ಅಕ್ಕ ನಮ್ಮ ಸುಖ ಸಂಸಾರವನ್ನು ನೋಡೋದಕ್ಕೆ ಬಂದಿದ್ದಳು. ಆದರೆ ನಮ್ಮನ್ನು ನೋಡಿ ಅವಳಿಗೆ ಬಹಳ ನಿರಾಶೆ ಆಗಿರುವುದಂತೂ ಖಂಡಿತ. ನಾವು ಹೇಗೆ ನಮ್ಮ ನಮ್ಮ ಕೆಲಸ ನಾವೇ ಮಾಡಿಕೊಳ್ಳುವುದು, ನಮ್ಮ ಹಣವನ್ನು ಪ್ರತ್ಯೇಕವಾಗಿ, ಸ್ನೇಹಿತರನ್ನು ಪ್ರತ್ಯೇಕವಾಗಿ ಇರಿಸಿಕೊಂಡಿದ್ದೇವೆಯೋ ಹಾಗೇ ಸಂಬಂಧಿಕರನ್ನೂ ಪ್ರತ್ಯೇಕವಾಗಿ ಇರಿಸಿಕೊಳ್ಳುವುದೆಂದು ನಾನು ಆಗಲೇ ತೀರ್ಮಾನಿಸಿಬಿಟ್ಟೆ…” ಸುಧೀರ್‌ ತಲೆಯೆತ್ತದೆ ಆಡಿದ ಮಾತುಗಳನ್ನು ಕೇಳಿ ಶಾಲಿನಿ ಮಾತನಾಡಲಾರದೆ ಉಗುಳು ನುಂಗಿದಳು.

ಆರು ವರ್ಷಗಳ ಪರಿಚಯ, ಸ್ನೇಹ, ಪ್ರೀತಿಯು ಸುಧೀರ್‌ ಮತ್ತು ಶಾಲಿನಿಯರನ್ನು ದಾಂಪತ್ಯ ಜೀವನಕ್ಕೆ ಮುಟ್ಟಿಸಿತ್ತು. ಆದರೆ ಮದುವೆಯಾಗುತ್ತಿದ್ದಂತೆ ಮೊದಲಿನ ಉತ್ಕಟ ಪ್ರೇಮ ಅದೆಲ್ಲಿ ಮಾಯವಾಯಿತೆಂದು ತಿಳಿಯಲಿಲ್ಲ. ಹನಿಮೂನ್‌ನ ಸಮಯದಲ್ಲಿಯೇ ಇಬ್ಬರ ಜಗಳ ತಾರಕಕ್ಕೇರಿ, ಪಂಚತಾರಾ ಹೋಟೆಲ್‌ನ ಮ್ಯಾನೇಜರ್‌ ವಿನಮ್ರವಾಗಿ ರೂಮ್ ಖಾಲಿ ಮಾಡುವಂತೆ ಹೇಳಿದ್ದರು.

“ನಾವು ಇಡೀ ವಾರಕ್ಕೆ ಅಡ್ವಾನ್ಸ್ ಬುಕಿಂಗ್‌ ಮಾಡಿಕೊಂಡಿದ್ದೇವೆ,” ಶಾಲಿನಿ ಕೋಪದಿಂದ ಹೇಳುತ್ತಿದ್ದರೆ ಸುಧೀರ್‌ ಮೌನವಾಗಿ ನಿಂತು ನೋಡುತ್ತಿದ್ದ.

“ನೀವು ಹೇಳುವುದು ಸರಿ ಮೇಡಂ. ಆದರೆ ಇಲ್ಲಿರುವ ಇತರೆ ಗೆಸ್ಟ್ ಗಳಿಗೆ ತೊಂದರೆ ಆಗದ ಹಾಗೆ ನಾವು ನೋಡಬೇಕಲ್ಲವೇ? ಇನ್ನು ನಿಮ್ಮ ಅಡ್ವಾನ್ಸ್ ಪೇಮೆಂಟ್‌ ಬಗ್ಗೆ ಹೇಳುವುದಾದರೆ, ನಮ್ಮ ಫರ್ನೀಚರ್‌, ಕಪ್ಸ್ ಮತ್ತು ಪ್ಲೇಟ್ಸ್ ಗೆ ನಿಮ್ಮ ಕೃಪೆಯಿಂದ ಆಗಿರುವ ಡ್ಯಾಮೇಜ್‌ನ್ನು ಹಿಡಿದುಕೊಂಡು ಉಳಿದ ನಿಮ್ಮ ಹಣವನ್ನು ಹಿಂದಿರುಗಿಸುತ್ತೇವೆ,” ಎಂದರು ಮ್ಯಾನೇಜರ್‌,

ಮ್ಯಾನೇಜರ್‌ ಮಾತು ಕೇಳಿ ಇಬ್ಬರೂ ಮಾತಿಲ್ಲದೆ ಕುಳಿತರು. ಮುಂದೇನು ಮಾಡಬೇಕೆಂಬುದನ್ನು ಚರ್ಚಿಸಬೇಕಿತ್ತು. ಆದರೆ ಪರಸ್ಪರ ಮಾತನಾಡದಿರುವವರು ಏನು ತಾನೇ ಚರ್ಚಿಸಿಯಾರು….? ಹಿಂದಿರುಗಿ ಮನೆಗೆ ಹೋಗುವುದು ಅಸಂಭವ, ಏಕೆಂದರೆ ರಿಟರ್ನ್‌ ಟಿಕೆಟ್‌ ಮೊದಲೇ ಬುಕ್‌ ಮಾಡಿಯಾಗಿತ್ತು.

ಮತ್ತೆ ದೂರಿಗೆ ಅವಕಾಶ ನೀಡದೆ, ಉಳಿದ ದಿನಗಳನ್ನು ಕಳೆದು ಸುಧೀರನ ತಂದೆ ತಾಯಿಯರ ಮನೆಗೆ ಹೋದರು. ನವಿವಾಹಿತರ ಇಳಿಮುಖವನ್ನು ನೋಡಿ ಸುಧೀರನ ತಾಯಿಗೆ ಅನುಮಾನವಾಯಿತು.

“ಸುಧೀರ್‌ ಏನಾಯಿತು? ಏಕೆ ನೀವಿಬ್ಬರೂ ಹೀಗಿದ್ದೀರಿ?” ಸುಧೀರ್‌ ಒಬ್ಬನೇ ಸಿಕ್ಕಿದಾಗ ತಾಯಿ ಕೇಳಿದರು.

“ಏನು ಹೇಳಬೇಕು ಅಂತಲೇ ಗೊತ್ತಾಗುತ್ತಿಲ್ಲ ಅಮ್ಮಾ, ನಾನು ದೊಡ್ಡ ತಪ್ಪು ಮಾಡಿಬಿಟ್ಟೆ ಅನ್ನಿಸುತ್ತಿದೆ. ನಾವಿಬ್ಬರೂ ಜೊತೆಯಲ್ಲಿ ಇರುವುದು ಸಾಧ್ಯವೇ ಇಲ್ಲ,” ಎಂದು ಬೇಸರದಿಂದ ಹೇಳಿದ ಸುಧೀರ್‌.

“ಏನು ಹೇಳುತ್ತಿದ್ದಿಯಾ ಸುಧೀರ್‌? ಕಳೆದ 6 ವರ್ಷಗಳಿಂದ ಅವಳ ಹಿಂದೆ ಹುಚ್ಚನ ಹಾಗೆ ಸುತ್ತುತ್ತಾ ಇದ್ದೆ. ನಿನ್ನ ತಂಗಿಯ ಮದುವೆ ಆಗುವವರೆಗೆ ಇರು, ಆಮೇಲೆ ನಿನ್ನ ಮದುವೆ ಆಗಲಿ ಅಂತ ನಾನು ಎಷ್ಟು ಹೇಳಿದೆ. ಆದರೂ ನೀನು ಕೇಳಲೇ ಇಲ್ಲ……” ಎಂದರು.

“ಹೌದಮ್ಮ… ನೀವು ಹೇಳುವುದು ಸರಿ. ನಿಜ ಹೇಳಬೇಕು ಅಂದರೆ ಅವಳ ನಿಜವಾದ ಗುಣ ಈಗ ಬಯಲಾಗುತ್ತಾ ಇದೆ. ನಾವು ಒಬ್ಬರನ್ನೊಬ್ಬರು ಅಷ್ಟೊಂದು ಪ್ರೀತಿಸುತ್ತಾ ಇದ್ದೆವಾ ಅಂತ ಆಶ್ಚರ್ಯ ಆಗುತ್ತಾ ಇದೆ,” ಸುಧೀರ್‌ ಬೇಸರದ ದನಿಯಲ್ಲಿ ಹೇಳಿದ.

“ನೀವಿಬ್ಬರೂ 6 ವರ್ಷಗಳಿಂದ ಜೊತೆ ಜೊತೆಯಾಗಿ ಓಡಾಡಿಕೊಂಡಿದ್ದರೂ, ನೀನು ಅವಳನ್ನು ಅರ್ಥ ಮಾಡಿಕೊಂಡಿಲ್ಲ ಅಂದರೆ ಏನು ಹೇಳೋಣ. ನೀನು ಮೆಚ್ಚಿದವಳನ್ನು ಮದುವೆಯಾಗಿ ಸಂತೋಷವಾಗಿ ಇರುತ್ತೀಯಾ ಅಂದುಕೊಂಡಿದ್ದರೆ ಏನೋ ಅಪಸ್ವರ ಕೇಳಿಸುತ್ತಿದ್ದೆಯಲ್ಲ….” ಎಂದರು ದುಃಖದಿಂದ.

“ಇರಲಿ ಬಿಡಮ್ಮ…. ಇನ್ನೂ ಸ್ವಲ್ಪ ದಿವಸ ನೋಡೋಣ. ಹೀಗೇ ಇದ್ದರೆ ಬೇರೆ ಆಗಬೇಕು ಅಷ್ಟೆ……” ಎಂದ ನೀರಸವಾಗಿ

“ಏಯ್‌…. ಏನು ಅಂತ ಮಾತಾಡ್ತಿದೀಯ. ಮದುವೆಯಾಗಿ 15 ದಿನ ಆಗಿಲ್ಲ. ಆಗಲೇ ಬೇರೆಯಾಗುವ ವಿಷಯ ಹೇಳುತ್ತಿದ್ದೀಯಾ….” ತಾಯಿ ಕೋಪದಿಂದ ಕಿರುಚಿದರು.

“ನಾನು ಈಗಲೇ ಬೇರೆ ಆಗೋದಕ್ಕೆ ಹೊರಟಿಲ್ಲಮ್ಮ…. ನಮ್ಮದು 6 ವರ್ಷಗಳ ಪ್ರೀತಿ, ಮದುವೆಯಾಗಿ ಕಡೇ ಪಕ್ಷ 6 ತಿಂಗಳಾದರೂ ಕಳೆಯಲಿ. ಅಮೇಲೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ಮದುವೆಯಾದ ಮಾತ್ರಕ್ಕೆ ಜೀವನ ಪೂರ್ತಿ ಜೊತೆಯಲ್ಲಿದ್ದುಕೊಂಡು ಶಿಕ್ಷೆ ಅನುಭವಿಸಬೇಕು ಅಂತ ನಿಯಮ ಇಲ್ಲ,” ಎಂದು ಸುಧೀರ್‌ ಹೇಳಿದಾಗ ತಾಯಿಯ ಮುಖದಲ್ಲಿ ಚಿಂತೆಯ ಗೆರೆಗಳು ಸ್ಪಷ್ಟವಾಗಿ ಗೋಚರಿಸಿದವು.
ಇಂದು ಶಾಲಿನಿಯೊಂದಿಗೆ ವಾದ ಮಾಡಿದ ಮೇಲೆ ಸುಧೀರನಿಗೆ ತಾಯಿಯ ಜೊತೆ ಮಾತನಾಡುವ ಇಚ್ಛೆಯಾಗಿ ಫೋನ್ ಮಾಡಿದ.

“ಏನು ಸುಧೀರ್‌, ಈವತ್ತು ಅಮ್ಮನ ನೆನಪಾಯಿತಾ….?” ಸುಧೀರನ ಧ್ವನಿ ಕೇಳಿದ ಕೂಡಲೇ ತಾಯಿ ಕೇಳಿದರು.

“ಏನಮ್ಮ ಹೀಗೆನ್ನುತ್ತೀರಿ? ಯಾರನ್ನು ಮರೆತಿರುತ್ತೇವೋ ಅಂಥವರನ್ನು ಜ್ಞಾಪಿಸಿಕೊಳ್ಳಬೇಕು. ನೀವಂತೂ ಸದಾಕಾಲ ನನ್ನ ಮನಸ್ಸಿನಲ್ಲಿರುತ್ತೀರಿ…..” ಎಂದ.

“ಬಹಳ ಸಂತೋಷ ಸುಧೀರ್‌….. ಸರಿ ಏನಪ್ಪಾ ಸಮಾಚಾರ…..?”

“ಅಮ್ಮಾ, ಶಾಲಿನಿಯ ಅಕ್ಕ ಮತ್ತು ಭಾವ ಬರುತ್ತಾ ಇದ್ದಾರೆ. ಅದಕ್ಕೆ ಅವಳು ಬಹಳ ಖುಷಿಯಾಗಿದ್ದಾಳೆ. ಅವಳಿಗೆ ಆಫೀಸ್‌ನಲ್ಲಿ ಮೀಟಿಂಗ್‌ ಇದೆಯಂತೆ. ಅದಕ್ಕೆ ಅವರನ್ನು ಕರೆದುಕೊಂಡು ಬರಲು ನನಗೆ ಹೇಳಿದಳು. ನಿನ್ನ ಅಕ್ಕನನ್ನು ನೀನೇ ಕರೆದುಕೊಂಡು ಬಾ. ನನಗೆ ಟೈಮ್ ಇಲ್ಲ ಅಂತ ಸ್ಪಷ್ಟವಾಗಿ ಹೇಳಿಬಿಟ್ಟೆ,” ಎಂದು ಹೇಳಿ ಸುಧೀರ್‌ ಜೋರಾಗಿ ನಕ್ಕ.

“ನಿನಗೇನಾಗಿದೆ ಸುಧೀರ್‌….? ನೀನು ಅಕ್ಕಪಕ್ಕದವರಿಗೂ ಸಹಾಯ ಮಾಡಲು ಓಡಾಡುತ್ತಿದ್ದವನು. ಅತಿಥಿಗಳನ್ನು ನಮ್ಮವರು ನಿಮ್ಮವರು ಅಂತ ವಿಂಗಡಿಸುವುದಕ್ಕೆ ಆಗಲ್ಲ. ಅವರು ಎಲ್ಲರಿಗೂ ಸೇರಿದವರು,” ತಾಯಿ ಬುದ್ಧಿ ಹೇಳಲು ಪ್ರಯತ್ನಿಸಿದರು.

“ಅಮ್ಮಾ, ಕಳೆದ ತಿಂಗಳು ಇಲ್ಲಿಗೆ ಅಕ್ಕ ಬಂದಿದ್ದಳಲ್ಲ ಆಗ ಶಾಲಿನಿ ಯಾವ ರೀತಿ ನಡೆದುಕೊಂಡಳು ಗೊತ್ತಾ? ಯಾರೋ ಗುರುತು ಪರಿಚಯ ಇಲ್ಲದವರು ಮನೆಗೆ ಬಂದಿದ್ದಾರೇನೋ ಅನ್ನುವ ಹಾಗಿದ್ದಳು. ನನಗಂತೂ ಅದನ್ನು ಮರೆಯೋದಕ್ಕೇ ಸಾಧ್ಯವಿಲ್ಲ….” ಎಂದ ಬೇಸರದಿಂದ.

“ಸಂಸಾರ ಅಂದ ಮೇಲೆ ಸಾವರಿಸಿಕೊಂಡು ಹೋಗಬೇಕು ಸುಧೀ….., ಕತ್ತಿ ಹಿಡಿದು ನಿಲ್ಲುವುದಕ್ಕೆ ಆಗಲ್ಲ. ಸಮಾಧಾನ ತಂದುಕೊಳ್ಳಬೇಕು,” ಎಂದರು ತಾಯಿ.

“ಹಾಗಂತ ಅವಳು ಏನೇ ಮಾಡಿದರೂ ನಾನು ಸೋತು ಕುಳಿತಿರಬೇಕಾ? ನಿಮಗೇ ಗೊತ್ತು ತಪ್ಪಿಲ್ಲದೆ ಒಪ್ಪಿಕೊಳ್ಳುವುದು ನನ್ನ ಸ್ವಭಾವ ಅಲ್ಲ ಅಂತ,” ಎಂದ.

“ಸೋಲು ಗೆಲುವು ಅಂತ ನಿಲ್ಲುವುದಕ್ಕೆ ಸಂಸಾರ ಅನ್ನುವುದು ಯುದ್ಧ ಅಲ್ಲ…. ನೀನು ಬುದ್ಧಿವಂತ, ನೀನೇ ಯೋಚನೆ ಮಾಡು,” ಎಂದು ಮತ್ತೊಮ್ಮೆ ಎಚ್ಚರಿಸಿದರು ಅಮ್ಮ.

“ಆಗಲಮ್ಮಾ,  ಯೋಚನೆ ಮಾಡ್ತೀನಿ. ಸಂಸಾರ ಉಳಿಸಿಕೊಳ್ಳಬೇಕು ಅನ್ನುವ ಆಸೆ ಅವಳಿಗಿದ್ದರೆ ಅವಳೂ ಯೋಚನೆ ಮಾಡಲಿ,” ಎಂದು ಹೇಳಿ ಫೋನ್‌ ಕಟ್‌ ಮಾಡಿದ.

ಶಾಲಿನಿ ಮ್ಯಾಗಝೀನ್‌ ತಿರುವಿ ಹಾಕುತ್ತಿದ್ದರೂ ಸುಧೀರ್‌ ತನ್ನ ತಾಯಿಯೊಡನೆ ಮಾತನಾಡುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದಳು. `ಸಂಸಾರವನ್ನು ಉಳಿಸಿಕೊಳ್ಳುವ ರೀತಿ ನನಗೆ ಗೊತ್ತು,’ ಎಂದು ಮನಸ್ಸಿನಲ್ಲೇ ಅಂದುಕೊಂಡಳು. ಅವಳ ತಾಯಿ ಹೇಳಿಕೊಟ್ಟಿದ್ದ ಪಾಠ ತಲೆಯಲ್ಲಿ ಭದ್ರವಾಗಿ ಕುಳಿತಿತ್ತು. `ನಿನ್ನ ಹಿತರಕ್ಷಣೆಗೆ ನೀನು ಪ್ರಾರಂಭದಿಂದಲೇ ಎಚ್ಚರಿಕೆಯಿಂದಿರಬೇಕು. ನಿನ್ನ ಗಂಡ ಮತ್ತು ಮನೆಯವರು ನಿನ್ನ ವಶದಲ್ಲಿರುವ ಹಾಗೆ ನೋಡಿಕೊಳ್ಳಬೇಕು. ಏನಾದರೂ ತಕರಾರು ತೆಗೆದರೆ ಪೊಲೀಸ್‌ ಕಂಪ್ಲೇಂಟ್‌ಕೊಡುತ್ತೇನೆ ಅಂತ ಹೆದರಿಸಬೇಕು. ನಾನು ನಿಮ್ಮಿಬ್ಬರನ್ನು ಬೆಳೆಸೋದಕ್ಕೆ ಎಷ್ಟು ಕಷ್ಟಪಟ್ಟಿದ್ದೇನೆ ಅನ್ನುವುದು ನನಗೆ ಮಾತ್ರ ಗೊತ್ತು. ನಿಮ್ಮ ಅಪ್ಪ ಮತ್ತು ಅವರ ಮನೆಯವರು ನನಗೆ ಏನೆಲ್ಲ ಕಷ್ಟಕೊಟ್ಟರು. ಆಮೇಲೆ ಅವರಿಗೆಲ್ಲ ನಾನು ಎಂಥವಳು ಅನ್ನುವುದು ನಿಧಾನವಾಗಿ ಅರ್ಥವಾಯಿತು,’  ಹೀಗೆ ಶಾಲಿನಿಯ ತಾಯಿ ಮಗಳಿಗೆ ಬೋಧಿಸಿದ್ದರು.

ಶಾಲಿನಿಗೆ ತಾಯಿಯ ಮಾತೇ ವೇದವಾಕ್ಯವಾಗಿತ್ತು. ಅವಳು ಸುಧೀರ್‌ನೊಂದಿಗಿನ ಪ್ರೇಮ ಪ್ರಕರಣವನ್ನು ಮುಂದುವರಿಸಿದ್ದು ತಾಯಿ ಅನುಮೋದಿಸಿದ ನಂತರವೇ.

ಸುಧೀರ್‌ ಫೋನ್‌ನಲ್ಲಿ ಮಾತನಾಡುತ್ತಿದ್ದುದನ್ನು ಕೇಳುತ್ತಿದ್ದ ಶಾಲಿನಿಗೆ ಅತ್ತೆ ಅವನಿಗೆ ಬುದ್ಧಿವಾದ ಹೇಳುತ್ತಿದ್ದಾರೆಂದು ಅರ್ಥವಾಯಿತು. ತನ್ನ ತಪ್ಪನ್ನು ಒಪ್ಪಿಕೊಳ್ಳಲು ಅವಳು ಸಿದ್ಧಳಿರಲಿಲ್ಲ. ಅದಕ್ಕೆ ಅವಳ ಅಹಂ ಅಡ್ಡ ಬರುತ್ತಿತ್ತು. ಸುಧೀರ್‌ ತಾಯಿಯ ಮಾತಿಗೆ ಬೆಲೆ ಕೊಟ್ಟು ಹೃದಯ ಪರಿವರ್ತನೆ ಮಾಡಿಕೊಳ್ಳಲಿ ಎಂದು ಆಶಿಸಿದಳು. ಆದರೆ ಸುಧೀರ್‌ನಿಂದ ಯಾವುದೇ ಅನುಕೂಲಕರ ಪ್ರತಿಕ್ರಿಯೆ ಬಾರದಿರಲು ಅವಳೇ ಸೋಲಬೇಕಾಯಿತು. ಶಾಲಿನಿ ಅಕ್ಕನಿಗೆ ಫೋನ್‌ ಮಾಡಿ, “ಅಕ್ಕ, ನಮ್ಮಿಬ್ಬರಿಗೂ ತುಂಬಾ ಕೆಲಸವಿದೆ. ಸ್ಟೇಷನ್‌ಗೆ ಬರುವುದಕ್ಕೆ ಆಗುತ್ತಿಲ್ಲ. ನೀವು ಒಂದು ಟ್ಯಾಕ್ಸಿ ಮಾಡಿಕೊಂಡು ಬನ್ನಿ,” ಎಂದು ಹೇಳಿದಳು. ಬರುವ ಅತಿಥಿಗಳಿಗೆ ವಿಶೇಷ ಗಮನ ಕೊಡಬೇಕೆಂದು ಮನೆ ಕೆಲಸದವಳಿಗೂ ಒತ್ತಿ ಹೇಳಿದಳು. ಆದರೂ ಆಫೀಸ್‌ನಲ್ಲಿ ಅವಳಿಗೆ ಮನೆಯ ಬಗ್ಗೆಯೇ ಚಿಂತೆಯೇ ಇತ್ತು.`ಅಕ್ಕ ಭಾವ ಮೊದಲ ಸಲ ಬರುವಾಗ ನಾವು ಕರೆದುಕೊಂಡು ಬರುವುದಕ್ಕೆ ಹೋಗಿಲ್ಲ. ಅಕ್ಕ ಏನೆಂದುಕೊಳ್ಳುತ್ತಾಳೋ….. ನನಗೆ ಕಾಲೇಜಿಗೆ ರಜೆ ಬಂದಾಗೆಲ್ಲ ಅಕ್ಕನ ಊರಿಗೆ ಓಡಿಹೋಗುತ್ತಿದ್ದೆ. ಅವಳು ನನ್ನನ್ನು ಎಷ್ಟು ಚೆನ್ನಾಗಿ ಆದರಿಸುತ್ತಿದ್ದಳು. ಬಗೆ ಬಗೆಯ ಅಡುಗೆ ಮಾಡುವುದರಲ್ಲಿ ಅವಳಿಗೆ ವಿಶೇಷ ಆಸಕ್ತಿ. ಎಷ್ಟೆಲ್ಲ ತಿಂಡಿ ಮಾಡಿ ತಿನ್ನಿಸುತ್ತಿದ್ದಳು,’ ಹೀಗೆ ಶಾಲಿನಿಯ ವಿಚಾರಧಾರೆ ಹರಿದಿತ್ತು.

ಅಡುಗೆಯ ಕೆಲಸ ಅಂದರೆ ಶಾಲಿನಿಗೆ ಬೇಸರ. ಆದರೆ ಅತಿಥಿಗಳು ಬರುವಾಗ ವಿಶೇಷ ಅಡುಗೆ ಮಾಡಲೇಬೇಕು. ನವೀನ್‌ ಭಾವನಿಗೆ ಮನೆ ಅಡುಗೆಯೇ ಆಗಬೇಕು. ಅವರು ಹೊರಗಿನ ತಿನಿಸನ್ನು ಇಷ್ಟಪಡುವುದಿಲ್ಲ. ಅದಕ್ಕಾಗಿ ಶಾಲಿನಿ ಅಡುಗೆಗೆ ಅಗತ್ಯವಾದ ದಿನಸಿ ವಸ್ತುಗಳೆಲ್ಲವನ್ನೂ ಕೊಂಡುತಂದಿದ್ದಳು. ಹಣ್ಣು ತರಕಾರಿಗಳನ್ನು ಫ್ರಿಜ್‌ನಲ್ಲಿ ತುಂಬಿರಿಸಿದ್ದಳು.

ಆಫೀಸಿನ ಕೆಲಸ ಮುಗಿಸಿ ಲಗುಬಗೆಯಿಂದ ಮನೆಗೆ ಬಂದ ಶಾಲಿನಿಗೆ ದೂರದಿಂದಲೇ ಜೋರಾದ ನಗು ಮತ್ತು ಮಾತುಗಳು ಕೇಳಿಬಂದವು. ಸ್ವಾತಿ ಇರುವ ಕಡೆ ಸಂತೋಷ ಇರುವುದು ಸಹಜ ಎಂದುಕೊಳ್ಳುತ್ತಾ ಮುಗುಳ್ನಗೆಯೊಂದಿಗೆ ಒಳಗೆ ಬಂದಳು.

“ಏನು ವಿಷಯ? ಎಲ್ಲರೂ ಇಷ್ಟೊಂದು ನಗುತ್ತಿದ್ದೀರಲ್ಲ. ನನಗೂ ಹೇಳಿ, ಅಕ್ಕ ಭಾವ, ಸಾರಿ, ಸಾರಿ…  ನನಗೆ ರಜೆ ತೆಗೆದುಕೊಳ್ಳೋದಕ್ಕೆ ಸಾಧ್ಯವೇ ಆಗಲಿಲ್ಲ. ಬೆಳಗಿನಿಂದ ಎಷ್ಟು ಒದ್ದಾಡಿದೆ ಗೊತ್ತಾ. ನಮ್ಮ ಬಾಸ್‌ ಮೇಲೆ ಸಿಟ್ಟು ಬರುತ್ತಿತ್ತು. ಆದರೆ ಏನು ಮಾಡುವುದು…. ಕೆಲಸಕ್ಕೆ ಅಂತ ಹೋದ ಮೇಲೆ ಇದನ್ನೆಲ್ಲ ಅನುಭವಿಸಬೇಕು ತಾನೇ?”

“ಶಾಲಿನಿ, ನೀನು ಇಷ್ಟೊಂದು ಬೇಸರ ಮಾಡಿಕೊಳ್ಳಬೇಕಾಗಿಲ್ಲ. ನೀನು ಹೀಗೆ ಕ್ಷಮೆ ಕೇಳೋದಕ್ಕೆ ನಾವೇನು ಹೊರಗಿನವರೇನು? ಅಲ್ಲದೆ ಸುಧೀರ್‌ ನಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆಂದರೆ ನಿನ್ನ ಜ್ಞಾಪಕವೇ ಬರಲಿಲ್ಲ,” ನವೀನ್‌ನಗುತ್ತಾ ಹೇಳಿದ.

“ಇರಲಿ ಬಿಡಿ. ಅವಳನ್ನು ಯಾಕೆ ರೇಗಿಸುತ್ತೀರಿ? ಪಾಪ ಅವಳು ಸುಸ್ತಾಗಿ ಬಂದಿದ್ದಾಳೆ,” ಸ್ವಾತಿ ಹೇಳಿದಳು.

“ಚೆನ್ನಾಯಿತು. ನಾನು ಏಕೆ ನಿನ್ನ ಮುದ್ದಿನ ತಂಗಿಯನ್ನು ರೇಗಿಸಲಿ? ನಮ್ಮಿಂದಾಗಿ ಅವಳಿಗೆ ಅಪರಾಧೀ ಭಾವ ಕಾಡದಿರಲಿ ಅಂತ ಹೇಳಿದೆ ಅಷ್ಟೇ. ನಾವಂತೂ ಇಲ್ಲಿ ಮಜವಾಗಿದ್ದೇವೆ.”

“ಗೊತ್ತು ಬಿಡಿ. ನಾನಿರದಿದ್ದಾಗ ಎಲ್ಲರೂ ಖುಷಿಯಾಗಿರುತ್ತಾರೆ. ಬಹುಶಃ ನನ್ನ ಮುಖ ನೋಡಿದರೆ ಎಲ್ಲರಿಗೂ ಬೇಸರ ಆಗಬಹುದು,” ಶಾಲಿನಿ ಅಳು ಮುಖ ಮಾಡಿ ಹೇಳಿದಳು.

“ಈ ವಿಷಯವಾಗಿ ನನಗೆ ಏನೂ ಗೊತ್ತಿಲ್ಲ. ಸುಧೀರನೇ ಉತ್ತರ ಕೊಡಬೇಕು,” ನವೀನ್‌ ಹುಬ್ಬೇರಿಸಿ ಸುಧೀರನತ್ತ ನೋಡುತ್ತಾ ಹೇಳಿದ.

“ನಾನು ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡೋದನ್ನು ನಿಲ್ಲಿಸಿಬಿಟ್ಟಿದ್ದೇನೆ. ಇಂತಹ ಮಾತುಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಹೊರಹಾಕಿಬಿಡುತ್ತೇನೆ,” ಸುಧೀರ್‌ ಶಾಂತನಾಗಿ ಹೇಳಿದ.

“ಓಹೋ….! ನೀವು ಈ ಕಲೆಯನ್ನು ಬಹಳ ಬೇಗನೆ ಕಲಿತುಬಿಟ್ಟಿದ್ದೀರಿ ಸುಧೀರ್‌. ನನಗೆ ಅದನ್ನು ಇನ್ನೂ ಕಲಿಯುವುದಕ್ಕೆ ಸಾಧ್ಯವಾಗಿಲ್ಲ,” ಎಂದು ಹೇಳುತ್ತಾ ನವೀನ್‌ ನಕ್ಕುಬಿಟ್ಟ.

“ಅಕ್ಕಾ…. ಕೇಳಿದೆಯಾ ಅವರ ಮಾತನ್ನು? ನಾನು ಹೇಳುವುದನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವವರ ಜೊತೆ ಏನು ತಾನೇ ಮಾತನಾಡಬಹುದು ನೀನೇ ಹೇಳು…..” ಶಾಲಿನಿ ತೀಕ್ಷ್ಣವಾಗಿ ಹೇಳಿದಳು.

“ಶಾಲಿನಿ, ಇದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬಾರದು. ಸುಧೀರ್‌ ತಮಾಷೆ ಮಾಡುತ್ತಿದ್ದಾರೆ. ನೀನು ಅದನ್ನು ತಪ್ಪು ತಿಳಿದುಕೊಳ್ಳುತ್ತಿದ್ದೀಯಾ….” ಸ್ವಾತಿ ತಂಗಿಯನ್ನು ಸಮಾಧಾನಿಸಿದಳು. ಊಟ ಮುಗಿಸಿ ಅಕ್ಕ ತಂಗಿಯರು ಮಾತನಾಡಲು ಕೋಣೆ ಸೇರಿದರು. ಸಾಯಂಕಾಲದಿಂದಲೂ ತಂಗಿಯ ನಡವಳಿಕೆಯನ್ನು ಗಮನಿಸಿದ್ದ ಸ್ವಾತಿ, “ಶಾಲಿನಿ, ಸುಧೀರ್‌ ಆಡು ಮಾತುಗಳಿಗೆಲ್ಲ ನೀನು ಬೇರೆಯೇ ಅರ್ಥ ಕಲ್ಪಿಸಿಕೊಳ್ಳುತ್ತೀ. ಇದರಿಂದ ಸುಮ್ಮನೆ ಮನಸ್ತಾಪವಾಗುತ್ತದೆ,” ಎಂದು ತಂಗಿಗೆ ತಿಳಿವಳಿಕೆ ಹೇಳಿದಳು.

“ಮಾತು ಬೆಳೆಸಿದರೆ ತಾನೇ ಮನಸ್ತಾಪ ಆಗೋದು. ಅದಕ್ಕೇ ಅಕ್ಕಾ… ನಾನು ಮಾತನಾಡುವುದನ್ನೇ ಕಡಿಮೆ ಮಾಡಿದ್ದೇನೆ. ಅಮ್ಮ ನನಗೆ ಮೊದಲೇ ಹೇಳಿದ್ದರು,`ನಮ್ಮ ಮತ್ತು ಸುಧೀರ್‌ ಕುಟುಂಬದ ಆಚಾರ ಸಂಪ್ರದಾಯಗಳಿಗೆ ಆಕಾಶ ಭೂಮಿಯಷ್ಟು ವ್ಯತ್ಯಾಸ ಇದೆ,’ ಅಂತ. ಆದರೆ ನಾನು ಅಷ್ಟು ಗಮನ ಕೊಟ್ಟಿರಲಿಲ್ಲ…..”

“ಓಹೋ…..! ಅಂದರೆ ನೀನು ಅಮ್ಮನ ಉಪದೇಶ ಪಾಲಿಸುತ್ತಾ ಇದ್ದೀ ಅನ್ನು,” ಎಂದಳು ಆಶ್ಚರ್ಯದಿಂದ.

“ಅದರಲ್ಲೇನು ವಿಶೇಷ ಅಕ್ಕಾ….? ನನ್ನ ಒಳಿತು ಕೆಡುಕುಗಳ ಬಗ್ಗೆ ಅಮ್ಮನಿಗಿಂತ ಹೆಚ್ಚಿಗೆ ಇನ್ನು ಯಾರು ಯೋಚಿಸುತ್ತಾರೆ ಹೇಳು. ನಿಜ ಹೇಳಬೇಕು ಅಂದರೆ ಅವರು ನನ್ನ ತಾಯಿ ಆಗಿರುವುದರ ಜೊತೆಗೆ ಫ್ರೆಂಡ್‌ ಅಂಡ್‌ ಫಿಲಾಸಫರ್‌ ಕೂಡ….”

“ಅಮ್ಮನಿಗೆ ಗಂಡು ಮಗ ಇಲ್ಲವಲ್ಲ ಅದಕ್ಕೆ ನೀನು ಮಗನ ಹಾಗೆ ಅವರ ಆಜ್ಞೆಯನ್ನು ಪಾಲಿಸುತ್ತಿದ್ದೀಯಾ ಅನ್ನು….” ವ್ಯಂಗ್ಯವಾಗಿ ಕೇಳಿದಳು ಸ್ವಾತಿ.

ಅವಳ ಮಾತಿನಲ್ಲಿದ್ದ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳದ ಶಾಲಿನಿ ತನ್ನ ಮಾತನ್ನು ಮುಂದುವರಿಸಿದಳು, “ಅಮ್ಮನಿಗೋಸ್ಕರ ನಾನು ಏನು ಬೇಕಾದರೂ ಮಾಡುತ್ತೇನೆ. ಆದರೆ ನನಗಿಂತ ಹೆಚ್ಚು ಅವರೇ ನನಗಾಗಿ ಮಾಡುತ್ತಿದ್ದಾರೆ. ಈಗಂತೂ ನನ್ನ ಸಂಸಾರವನ್ನು ಉಳಿಸುವ ಪ್ರಯತ್ನದಲ್ಲಿದ್ದಾರೆ. ಮದುವೆ ಆದ ಮೇಲೆ ಸುಧೀರ್‌ ಬಹಳ ಬದಲಾಗಿಬಿಟ್ಟಿದ್ದಾನೆ. ಎಲ್ಲ ಅವರ ಪ್ರಕಾರವೇ ನಡೆಯಬೇಕು. ಅದಕ್ಕೆ ಅಮ್ಮ ಎಚ್ಚರಿಕೆ ಕೊಟ್ಟಿದ್ದಾರೆ, `ಈಗಿನಿಂದಲೇ ಮೂಗುದಾರವನ್ನು ಭದ್ರವಾಗಿ ಹಿಡಿದುಕೊ. ಇಲ್ಲ ಅಂದರೆ ನಿನ್ನನ್ನು ಒಬ್ಬ ದಾಸಿಯ ಹಾಗೆ ಬಳಸಿಕೊಳ್ಳುತ್ತಾನೆ,’ ಅಂತ.”

“ಏನು…. ಅಮ್ಮ ನಿನಗೆ ಹೀಗೆಲ್ಲಾ ಹೇಳಿ ಕೊಟ್ಟಿದ್ದಾರಾ? ಆದರೆ ನೀನು ಸುಧೀರ್‌ ಬಗ್ಗೆ ಅಮ್ಮನಿಗೆ ದೂರು ಹೇಳುವಂಥದ್ದು ಏನಿತ್ತು…?”

“ನಾನು ದೂರು ಹೇಳಲಿಲ್ಲ. ಅಮ್ಮನೇ ಕೆದಕಿ ಕೆದಕಿ ಕೇಳಿದರು. ತಾಯಿ ಮಗಳ ಬಗ್ಗೆ ಚಿಂತೆ ಮಾಡದೆ ಬೇರೆ ಯಾರು ಮಾಡುತ್ತಾರೆ ಹೇಳು…” ಎಂದಳು ಶಾಲಿನಿ.

“ಹೌದು ಹೌದು…. ಅಮ್ಮನಿಗೆ ನಮ್ಮಿಬ್ಬರ ಚಿಂತೆ ಇದ್ದೇ ಇರುತ್ತದೆ. ಆದರೆ ಪತಿಪತ್ನಿಯರ ಸಂಬಂಧ ಸೂಕ್ಷ್ಮವಾದದ್ದು. ಅದರಲ್ಲಿ ಮೂರನೆಯವರ ಹಸ್ತಕ್ಷೇಪವಾದರೆ ಅಪಾಯ ಆಗಬಹುದು. ನೀನೇನೂ ಚಿಕ್ಕ ಹುಡುಗಿಯಲ್ಲ. ನಿನ್ನ ವಿಷಯ ನೀನೇ ತೀರ್ಮಾನಿಸುವುದನ್ನು ಕಲಿ,” ಎಂದು ಕೊಂಚ ಗಂಭೀರವಾಗಿ ಹೇಳಿದಳು ಸ್ವಾತಿ.

“ಹೋಗಲಿ ಬಿಡು ಅಕ್ಕಾ.. ಅದು ಸರಿ. ಈಗ ಹೇಳು, ಸ್ಟೇಷನ್‌ನಿಂದ ಹೇಗೆ ಬಂದಿರಿ? ನಮ್ಮ ಮನೆ ಹುಡುಕುವುದಕ್ಕೆ ಕಷ್ಟ ಆಗಲಿಲ್ಲ ತಾನೇ?”

“ಕಷ್ಟ ಯಾಕೆ ಆಗುತ್ತೆ. ಸುಧೀರ್‌ ಸ್ಟೇಷನ್‌ಗೆ ಬಂದು ನಮ್ಮನ್ನು ಕರೆದುಕೊಂಡು ಬಂದು, ತುಂಬಾ ಚೆನ್ನಾಗಿ ನೋಡಿಕೊಂಡರು. ನೀನೂ ಜೊತೆಯಲ್ಲಿ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.”

“ನಾಳೆ ಒಂದು ದಿನ ನಾನು ಆಫೀಸ್‌ಗೆ ಹೋಗಲೇಬೇಕು. ಅದಾದ ಮೇಲೆ 4 ದಿನ ರಜೆ ಹಾಕಿದ್ದೀನಿ. ಚೆನ್ನಾಗಿ ಸುತ್ತಾಡೋಣ, ಒಳ್ಳೊಳ್ಳೆಯ ಹೋಟೆಲ್‌ಗಳನ್ನು ಗುರುತು ಹಾಕಿಕೊಂಡಿದ್ದೇನೆ. ಅಡುಗೆ ಮನೆಗೆ ರಜಾ ಕೊಟ್ಟು ಒಳ್ಳೊಳ್ಳೆಯ  ತಿಂಡಿ ಊಟಗಳನ್ನು ಕೊಡಿಸುತ್ತೇನೆ,” ಎಂದಳು ಉತ್ಸಾಹದಿಂದ.

“ಏನು ಹೇಳುತ್ತಿದ್ದೀಯಾ ನೀನು….. ನವೀನ್‌ಗೆ ಹೊರಗಿನ ಊಟ ಇಷ್ಟವೇ ಇಲ್ಲ. ನನಗೂ ಬಗೆಬಗೆಯಾಗಿ ಅಡುಗೆ ಮಾಡೋದು ಇಷ್ಟ. ಹೀಗಾಗಿ ನಮ್ಮಿಬ್ಬರ ಸಂಬಂಧದಲ್ಲಿ ಒಳ್ಳೆ ಹೊಂದಾಣಿಕೆ ಇದೆ,” ಎಂದಳು ಸ್ವಾತಿ.

“ಇದೇ ಸಮಸ್ಯೆ, ಗಂಡಸರೆಲ್ಲ ಹೆಂಡತಿ ಸದಾ ಅಡುಗೆ ಮಾಡಿಕೊಂಡಿರಲಿ ಅಂತ ಆಶಿಸುತ್ತಾರೆ. ಅಮ್ಮ ಈ ವಿಷಯವಾಗಿ ನನಗೆ ಮೊದಲೇ ಎಚ್ಚರಿಸಿದ್ದರು. ಅದಕ್ಕೆ ನಮ್ಮ ನಮ್ಮ ಊಟ ತಿಂಡಿಗಳನ್ನು ನಾವು ನಾವೇ ತಯಾರಿಸಿಕೊಳ್ಳುತ್ತೇವೆ…..”

“ಸುಧೀರ್‌ಗೆ ಅಡುಗೆ ಮಾಡುವುದಕ್ಕೆ ಇಷ್ಟ ಇದೆಯಾ?”

“ತುಂಬಾ ಇಷ್ಟವೇನೋ ಇದೆ. ಆದರೆ ನಾನು ಅದಕ್ಕೆ ಪ್ರೋತ್ಸಾಹ ಕೊಡುವುದಿಲ್ಲ. ಯಾಕೆಂದರೆ ಅದರಿಂದ ಪ್ರತಿದಿನ ಒಂದಲ್ಲ ಒಂದು ಸಾಮಾನು ತರುತ್ತಲೇ ಇರಬೇಕಾಗುತ್ತದೆ. ಜೊತೆಗೆ ಕಿಚನ್‌ ಎಲ್ಲ ಕೊಳೆಯಾಗಿ ಅದನ್ನು ಚೊಕ್ಕಟ ಮಾಡುವುದೇ ಒಂದು ಕೆಲಸವಾಗುತ್ತದೆ. ಅದಕ್ಕೇ ಅಮ್ಮ ಹೇಳ್ತಾರೆ, `ಯಾವುದನ್ನೂ ಅತಿ ಮಾಡಿಕೊಳ್ಳಬೇಡ,’ ಅಂತ. ಆಮೇಲೆ, ಇನ್ನೊಂದು ವಿಷ್ಯಾ ಹೇಳ್ಲಾ….?”

“ಹ್ಞೂಂ ಹೇಳು….”

“ಕಳೆದ 1 ವರ್ಷದಿಂದ ನಮ್ಮ ಗ್ಯಾಸ್‌ ಖಾಲಿನೇ ಆಗಿಲ್ಲ. ಗ್ಯಾಸ್‌ ಏಜೆನ್ಸಿಯವರು ಬಹುಶಃ ನಾವು ಇಲ್ಲಿ ಇಲ್ಲ ಅಂದುಕೊಂಡು ಕನೆಕ್ಷನ್‌ ಕ್ಯಾನ್ಸಲ್ ಮಾಡಿಬಟ್ಟಿದ್ದರು,” ಎಂದು ಶಾಲಿನಿ ನಕ್ಕಳು. ಸ್ವಾತಿ ಕೂಡ ಅವಳ ಜೊತೆ ಸೇರಿ ನಕ್ಕಳು.

“ಅಮ್ಮ ಇದನ್ನೂ ಹೇಳಿಕೊಟ್ಟರೇನು?”

“ಹಾಗೇ ಅಂದ್ಕೊ. ಯಾಕೆಂದರೆ ಮದುವೆ ಯಾದ ಮೇಲೆ ಹೇಗಿರಬೇಕು ಅನ್ನೋದು ನನಗೇನೂ ಗೊತ್ತಿರಲಿಲ್ಲ. ಪ್ರತಿಯೊಂದನ್ನೂ ಅಮ್ಮನೇ ಕಲಿಸಿಕೊಟ್ಟರು. ಪತಿ ಸ್ಮಾರ್ಟ್‌ ಆಗಿರಬೇಕು ಅಂದರೆ ರುಚಿ ರುಚಿಯಾಗಿ ಅಡುಗೆ ಮಾಡಿ ಹಾಕುತ್ತಾ ಇರಬೇಡ. ಇಲ್ಲದಿದ್ದರೆ ತಿಂದು ಊದಿ ಬಿಡುತ್ತಾರೆ,’ ಅಂತ ಹೇಳಿದ್ದರು.”

“ಹೀಗೆ ಮಾಡಿಯೇ ಅಮ್ಮ ನಮ್ಮ ಅಪ್ಪನನ್ನು ಮನೆಯಿಂದ ಮತ್ತು ಜೀವನದಿಂದಲೇ ದೂರ ಮಾಡಿಬಿಟ್ಟರು,” ಸ್ವಾತಿ ಕಹಿಯಾಗಿ ಹೇಳಿದಳು.

“ಅಕ್ಕಾ…. ಏನು ಹೇಳುತ್ತಿದ್ದೀಯಾ?” ಶಾಲಿನಿ ಬೆಚ್ಚಿದಳು.

“ಏನಿಲ್ಲ ಬಿಡು…. ಬಾಯಿ ತಪ್ಪಿ ಏನೋ ಅಂದುಬಿಟ್ಟೆ…..” ಎಂದಳು.

“ಇಲ್ಲ….. ನೀನು ಏನನ್ನೋ ಮುಚ್ಚಿಡುತ್ತಿದ್ದೀಯಾ…… ಹೇಳು ಅಕ್ಕ…..”

“ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ನಿನಗೆ ಏನನ್ನು ಹೇಳಿಕೊಡುತ್ತಿದ್ದಾರೋ ಅದನ್ನೇ ಅವರು ಮಾಡಿದ್ದು.”

“ಅಂದರೆ…..?”

“ಆಗ ನೀನು ಪುಟ್ಟವಳಿದ್ದೆ. ಅಮ್ಮ ತಾನೇನೂ ಅಡುಗೆ ಮಾಡುತ್ತಿರಲಿಲ್ಲ. ಅಪ್ಪ ಒಬ್ಬ ಅಡುಗೆಯವನನ್ನು ಇರಿಸಿದರೆ ಅವನಿಗೂ ಮಾಡುವುದಕ್ಕೆ ಬಿಡದೆ ಓಡಿಸಿದರು. ನಾವು ಬರಿ ಕೇಕ್‌, ಬಿಸ್ಕಿಟ್‌, ಚಿಪ್ಸ್ ತಿಂದುಕೊಂಡೇ ಬಾಲ್ಯ ಕಳೆದೆವು. ಕೆಲವು ಸಲ ಅಪ್ಪ ಅಡುಗೆ ಮಾಡುತ್ತಿದ್ದರು. ನಾನೂ ಅವರ ಜೊತೆ ಇರುತ್ತಿದ್ದೆ. ಬಹುಶಃ ಹೀಗೇ ನನಗೆ ಅಡುಗೆಯಲ್ಲಿ ಆಸಕ್ತಿ ಬಂದಿರಬಹುದು.”

“ಆಮೇಲೆ……?”

“ನಾನು 10 ವರ್ಷದವಳಿದ್ದಾಗ ಅಪ್ಪ ಅಮ್ಮ ಬೇರೆಯಾದರು. ನನಗೆ ಅಪ್ಪನ ಜೊತೆ ಇರಬೇಕು ಅಂತ ಆಸೆ ಇತ್ತು. ಆದರೆ ಅಮ್ಮ ಬಿಡಲಿಲ್ಲ. ನಾನು ತುಂಬ ದಿವಸ ಅಳುತ್ತಾ ಇರುತ್ತಿದ್ದೆ. ಅಪ್ಪ ನನ್ನನ್ನು ನೋಡುವುದಕ್ಕೆ ಶಾಲೆಗೆ ಬರುತ್ತಿದ್ದರು. ತಿಂಡಿ, ಆಟದ ಸಾಮಾನು ತಂದುಕೊಡುತ್ತಿದ್ದರು. ಅದು ಅಮ್ಮನಿಗೆ ಗೊತ್ತಾದಾಗ ಅವರು ಬರದಿರುವ ಹಾಗೆ ಮಾಡಿದರು. ನನಗೆ ಅಮ್ಮನ ಮೇಲಿನ ಪ್ರೀತಿಯೇ ಹೊರಟುಹೋಯಿತು. ಅದು ಅವರಿಗೂ ಅರ್ಥವಾಯಿತು. ಅದಕ್ಕೇ ನನ್ನನ್ನು ಹಾಸ್ಟೆಲ್‌ಗೆ ಸೇರಿಸಿಬಿಟ್ಟರು,” ನೊಂದು ಹೇಳಿದಳು.

“ನೆನಪಿದೆ ಅಕ್ಕಾ, ನೀನು ರಜದಲ್ಲಿ ಮನೆಗೆ ಬರುತ್ತಿದ್ದೆ. ಆಗ ನಾವಿಬ್ಬರೂ ಎಷ್ಟು ಚೆನ್ನಾಗಿ ಆಡುತ್ತಿದ್ದೆವು. ಆದರೆ ನೀನು ಹಾಸ್ಟೆಲ್‌ಗೆ ವಾಪಸ್‌ ಹೋದರೆ ನಾನು ಮನೆಯಲ್ಲಿ ಒಬ್ಬಳೇ ಆಗಿಬಿಡುತ್ತಿದ್ದೆ.”

“ಹೌದು. ಅಮ್ಮನಿಗೆ ನಿನ್ನ ಜೊತೆ ಇರೋದಕ್ಕೆ. ನಿನ್ನನ್ನು ನೋಡಿಕೊಳ್ಳುವುದಕ್ಕೆ ಸಮಯ ಇರುತ್ತಿರಲಿಲ್ಲವಲ್ಲ. ಅದಕ್ಕೆ ಒಬ್ಬ ಆಯಾ ಇಟ್ಟಿದ್ದರು. ಹೀಗೆ ನಾವು ನಮ್ಮ ಬಾಲ್ಯವನ್ನೆಲ್ಲ ಒಂಟಿತನದಲ್ಲಿ ಕಳೆದೆವು. ಕಡೆಗೆ ಅವರಿಗೂ ಯಾರೂ ಜೊತೆ ಇಲ್ಲದ ಹಾಗಾಯಿತು. ಅವರ ಸ್ನೇಹಿತರೆಲ್ಲ ಒಬ್ಬೊಬ್ಬರಾಗಿ ಅವರನ್ನು ದೂರ ಮಾಡಿದರು.”

“ಆ ಸ್ನೇಹಿತರಿಂದಲೇ ನಮ್ಮ ಮನೆ ಹಾಳಾಗಿದ್ದು ಅಕ್ಕ…..”

“ನಮ್ಮ ಕಷ್ಟಗಳಿಗೆ ಬೇರೆಯವರನ್ನು ದೂರಬೇಡ. ಈಗ ನೀನು ನಿನ್ನ ಸಂಸಾರ ಸರಿಪಡಿಸಿಕೊ. ಅದೇನಾದರೂ ಹಾಳಾದರೆ ನನಗೆ ಬಹಳ ಬೇಸರವಾಗುತ್ತದೆ.”

“ನನ್ನದೇ ತಪ್ಪು ಅನ್ನಿಸುತ್ತಾ ನಿನಗೆ?”

“ತಪ್ಪು ಯಾರದ್ದು ಅಂತ ಬೆರಳು ಮಾಡಿ ತೋರಿಸುವುದಲ್ಲ. ಆದರೆ ನಿನ್ನ ಮನೆಯನ್ನು ಉಳಿಸಿಕೊಳ್ಳುವುದು ನಿನ್ನ ಕೈಯಲ್ಲಿದೆ ಅನ್ನುವುದನ್ನು ಖಂಡಿತವಾಗಿ ಹೇಳುತ್ತೇನೆ.”

“ಅಕ್ಕ ತಂಗಿಯರು ಬಹಳ ದಿನಗಳಾದ ಮೇಲೆ ಸೇರಿದ್ದೀರಿ ನಿಜ. ರಾತ್ರಿಯೆಲ್ಲ ಜಾಗರಣೆ ಮಾಡಬೇಕು ಅಂತ ಇದ್ದೀರಾ?” ನವೀನ್‌ ರೂಮಿನೊಳಗೆ ಪ್ರವೇಶಿಸುತ್ತಾ ತಮಾಷೆ ಮಾಡಿದ.

“ನೀವಿಬ್ಬರೂ ಟಿವಿನಲ್ಲಿ ಫಿಲಂ ನೋಡುತ್ತಿದ್ದೀರಿ ಅಂದುಕೊಂಡೆ.”

“ಫಿಲಂ ಮುಗಿಯಿತು. ಈಗ ಮಲಗುವುದಕ್ಕೆ ಹೊರಟೆ.”

“ನಾವು ಮಲಗೋಣ. ಶಾಲಿನಿಗೆ ಸುಸ್ತಾಗಿರಬಹುದು,” ಎನ್ನುತ್ತಾ ಸ್ವಾತಿ ಎದ್ದು ನಿಂತಳು.

ಆದರೆ ಶಾಲಿನಿಯ ಕಂಗಳಿಂದ ನಿದ್ರೆ ಹಾರಿಹೋಗಿತ್ತು.

ಶಾಲಿನಿ ಮತ್ತು ನವೀನ್‌ ಹಿತಕರವಾದ ತಂಗಾಳಿಯಂತೆ ಬಂದುಹೋದರು. 1 ವಾರ ಕಾಲ ಸುತ್ತಾಡಿ ನಕ್ಕು ನಗಿಸಿ ಹಿಂದಿರುಗಿಹೋದರು. ಅವರು ಹೋದ ನಂತರ ಮನೆಯಲ್ಲಿ  ಮತ್ತೆ ನಿಶ್ಶಬ್ದ ನೆಲೆಸಿತು.

ಒಂದು ದಿನ ಸುಧೀರ್‌ ಎಂದಿನಂತೆ ತನ್ನ ಲ್ಯಾಪ್‌ಟಾಪ್‌ ಹಿಡಿದು ಕೆಲಸದಲ್ಲಿ ಮಗ್ನನಾಗಿದ್ದನು. ಶಾಲಿನಿ ಅವನ ಪಕ್ಕಕ್ಕೆ ಬಂದು ಕುಳಿತು ತನ್ನ ತೋಳುಗಳಿಂದ ಅವನನ್ನು ಬಳಸಿ ಹಿಡಿದಳು. ಸುಧೀರ್‌ ಆಶ್ಚರ್ಯಗೊಂಡ. ಇಂತಹ ಪ್ರೇಮಪೂರ್ಣ ಸ್ಪರ್ಶವನ್ನು  ಅವನು ಮರೆತೇಹೋಗಿದ್ದನು.

“ಊಟ ಮಾಡೋಣ ಬನ್ನಿ, ಬಿಸಿಯಾಗಿದೆ.”

ಮೇಜಿನ ಮೇಲೆ ಜೋಡಿಸಿಟ್ಟಿದ್ದ ಖಾದ್ಯ ಪದಾರ್ಥಗಳನ್ನು ಕಂಡು ಸುಧೀರ್‌ ಚಕಿತನಾದ, “ಇವನ್ನೆಲ್ಲ ಎಲ್ಲಿಂದ ತಂದೆ?”

“ತರಲಿಲ್ಲ. ನಾನೇ ಸ್ವತಃ  ಮಾಡಿದ್ದೇನೆ. ಹೇಗಿದೆ ತಿಂದು ಹೇಳಿ….?” ಎನ್ನುತ್ತಾ ಲೈಟ್‌ ಆರಿಸಿ. ಪರಿಮಳಯುಕ್ತವಾದ ಮೊಂಬತ್ತಿಯನ್ನು ಹತ್ತಿಸಿದಳು. ಅದರ ಪರಿಮಳ ಕೋಣೆಯನ್ನೆಲ್ಲ ವ್ಯಾಪಿಸಿತು. ಅವಳ ಮುಗುಳ್ನಗೆಯು ಬೆಳಕಿನಂತೆ ಅಲ್ಲೆಲ್ಲ ಪಸರಿಸಿತು.

“ಹಾಯ್‌, ಸ್ವಾತಿ ಅಕ್ಕ ಇನ್ನೂ ಸ್ವಲ್ಪ ಮೊದಲೇ ಬರಬೇಕಿತ್ತು,” ಸುಧೀರ್‌ ಹೇಳುತ್ತಾ ಅವಳನ್ನು ಬರಸೆಳೆದುಕೊಂಡ.

ಶಾಲಿನಿ ಏನೂ ಮಾತನಾಡಲಿಲ್ಲ. ಆದರೆ ಅವಳು ಮನಸ್ಸಿನಲ್ಲಿ ಸ್ವಾತಿಗೆ ಧನ್ಯವಾದಗಳನ್ನು ಹೇಳುತ್ತಿರುವಳೆಂದು ಅವಳ ಮುಖಭಾವವೇ ಬಿಂಬಿಸುತ್ತಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ