ಕಥೆ - ಪ್ರಫುಲ್ಲಾ ನರೇಂದ್ರ
ತಾರಿಣಿ ಅಡುಗೆಮನೆಯ ಕೆಲಸ ಮುಗಿಸಿ ತಿಂಡಿ ತಟ್ಟೆ ಹಿಡಿದುಕೊಂಡು ಸೋಫಾ ಮೇಲೆ ಕುಳಿತು, ತಿಂಡಿ ತಿಂದು ಮುಗಿಸುತ್ತಿದ್ದ ಹಾಗೆ ಕರೆಗಂಟೆ ಬಾರಿಸಿತು. `ಯಾರಿರಬಹುದು? ಗಂಡ ಇದೇ ತಾನೇ ಆಫೀಸಿಗೆ ಹೋದರು. ಏನೋ ಮರೆತುಬಿಟ್ಟಿರಬೇಕು. ಅದಕ್ಕೆ ವಾಪಸ್ ಬಂದಿರಬಹುದು,' ಎಂದುಕೊಂಡು ಬಾಗಿಲು ತೆರೆದಳು. ಬಾಗಿಲು ಬಳಿ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ.
``ಯಾರು ಬೇಕಾಗಿತ್ತು?'' ಎಂದು ಕೇಳಿದಳು ತಾರಿಣಿ.
``ಯಾರೂ ಬೇಡ,'' ಎಂದವನೆ ಒಂದು ಕಾಗದ ಅವಳ ಕೈಗೆ ತುರುಕಿದ. ತಾರಿಣಿ ಪತ್ರ ಬಿಚ್ಚಿ ಓದಿದಳು. `ತಾರಿ, ಎಷ್ಟೋ ವರ್ಷಗಳ ಮೇಲೆ ನಿನ್ನನ್ನು ಹುಡುಕಿದ್ದೇನೆ. ನಾನು ಸಾಯುವ ಸ್ಥಿತಿಯಲ್ಲಿದ್ದೇನೆ. ಕಡೆಗಾಲದಲ್ಲಿ ನಿನ್ನ ಕ್ಷಮೆ ಯಾಚಿಸಿ ಶಾಂತಿಯಿಂದ ಸಾಯಲು ಇಚ್ಛಿಸುತ್ತೇನೆ,
ನಿನ್ನ ವೀರೇಶ.'
ತಾರಿಣಿ ಪತ್ರ ಓದಿ ಆ ವ್ಯಕ್ತಿಯನ್ನು ನೋಡಿದಳು. ಅವನು ಅವಳನ್ನೇ ದಿಟ್ಟಿಸುತ್ತಿದ್ದ. ತಾರಿಣಿಗೆ ಗಾಬರಿಯಾಯಿತು. ``ನಿನಗೆ ಈ ಪತ್ರ ಯಾರು ಕೊಟ್ಟರು? ನನ್ನ ಮನೆ ಹೇಗೆ ಗೊತ್ತಾಯಿತು?'' ಎಂದು ಕೇಳಿದಳು.
``4-5 ದಿನಗಳಿಂದ ನಿಮ್ಮನ್ನು ಹುಡುಕ್ತಾ ಇದೀನಿ. ಹಳೆ ಮನೆಗೆ ಹೋಗಿದ್ದೆ. ನೀವು ಮನೆ ಬದಲಾಯಿಸಿದ್ದೀರಿ ಅಂತ ಅಲ್ಲಿ ಗೊತ್ತಾಯಿತು. ಅವರೇ ಇಲ್ಲಿಯ ವಿಳಾಸ ಕೊಟ್ಟರು. ವೀರೇಶ ಸರ್ಕಾರಿ ಆಸ್ಪತ್ರೇಲಿ ವಾರ್ಡ್‌ನಂ.33ರಲ್ಲಿ ಇದ್ದಾನೆ. ಅವನೇ ನನ್ನನ್ನು ಕಳಿಸಿದ್ದು. ಬಹಳ ಸೀರಿಯಸ್ಸಾಗಿದೆ. ನೀವು ಬೇಗ ಹೋದರೆ ಒಳ್ಳೆಯದು.''
ಬರಹ ಚಿರಪರಿಚಿತವಾದದ್ದು. ಆದರೆ ಕೈ ನಡುಗುತ್ತಿರಬೇಕು. ಅಕ್ಷರಗಳು ಸ್ವಲ್ಪ ಸೊಟ್ಟಗಾಗಿದ್ದವು. ತಾರಿ ಎಂಬ ಸಂಬೋಧನೆ ಅವಳ ಮನಸ್ಸನ್ನು ಅಲ್ಲಾಡಿಸಿಬಿಟ್ಟಿತು. ವೀರೇಶನನ್ನು ಬಿಟ್ಟರೆ ಯಾರೂ ಎಂದೂ ಅವಳನ್ನು ತಾರಿ ಎಂದು ಕರೆದಿರಲಿಲ್ಲ. ಮೊದಲೇ ಚಿಕ್ಕದಾಗಿದ್ದ ಹೆಸರನ್ನು ಇನ್ನೂ ಚಿಕ್ಕದಾಗಿಸಿದ್ದ. ಆದರೆ ಆ ಎರಡು ಅಕ್ಷರಗಳಲ್ಲಿ ವಿಶ್ವದ ಪ್ರೀತಿಯೆಲ್ಲಾ ಒಟ್ಟುಗೂಡಿದೆ ಎನಿಸುತ್ತಿತ್ತು. ಅವಳಿಗೆ ಹೆದರಿಕೆಯಾಯಿತು. ಎದುರಿಗೆ ಆ ವ್ಯಕ್ತಿ ನಿಂತಿದ್ದ. ಅವನನ್ನು ಕುಳಿತುಕೊಳ್ಳಲು ಹೇಳುವುದೋ ಅಥವಾ ಹೋಗಲು ಹೇಳುವುದೋ.... ಏನು ಮಾಡುವುದೆಂದು ತೋಚಲಿಲ್ಲ,
``ಸರಿ ನಾನು ಹೋಗ್ತೀನಿ,'' ಎಂದಳು. ಅವನಿಗೇನಾದರೂ ತನ್ನ ಹಿಂದಿನ ಕಥೆ ತಿಳಿದುಬಿಟ್ಟರೆ...., ಅವಳ ಹೃದಯದ ಬಾಗಿಲು ಬಲವಂತವಾಗಿ ತೆರೆದು ಅವಳು ಗತಕಾಲಕ್ಕೆ ಹೋಗಿದ್ದಳು.
ಆಮೇಲೆ ಬೇಗನೆ ತಯಾರಾಗಿ ಅವಳು ಟ್ಯಾಕ್ಸಿ ಹಿಡಿದಳು. ಪತಿಗೆ ಫೋನ್ ಮಾಡಿ ತನ್ನ ಆಪ್ತ ಗೆಳತಿಯ ಪತಿಗೆ ಹುಷಾರಿಲ್ಲ ಎಂದು ಫೋನ್ ಬಂತು. ಅದಕ್ಕೆ ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದಳು. ವೀರೇಶನಿಗೇನಾಗಿದೆ ಎಂದು ಅವಳು ದಾರಿಯುದ್ದಕ್ಕೂ ಚಿಂತಿಸುತ್ತಿದ್ದಳು. ಅವನು ಇಲ್ಲಿಗೇಕೆ ಬಂದಿದ್ದಾನೆ? ಅನುಮಾನಗಳು ಮುತ್ತಿದವು.
ಅವಳ ಮತ್ತು ವೀರೇಶನ ಪರಿಚಯ ಒಂದು ಮದುವೆ ಮನೆಯಲ್ಲಾಗಿತ್ತು. ತಾರಿಣಿ ತಂದೆ ತಾಯಿ ಜೊತೆಗೆ ಚಿಕ್ಕಪ್ಪನ ಮಗಳ ಮದುವೆಗೆಂದು ಮಡಿಕೇರಿಯಿಂದ ಬೆಂಗಳೂರಿಗೆ ಬಂದಿದ್ದಳು. ಪ್ರಕೃತಿ ಸೌಂದರ್ಯದ ನೆಲೆವೀಡಾದ ಕೊಡಗೆಲ್ಲಿ, ಮಾನವ ನಿರ್ಮಿತ ಎತ್ತರದ ಕಟ್ಟಡಗಳಿಂದ ತುಂಬಿದ ಸದಾ ಧಾವಂತದ ಜನನಿಬಿಡ ಯಾಂತ್ರಿಕ ಜೀವನದ ಬೆಂಗಳೂರೆಲ್ಲಿ? ಅವಳಿಗೆ ಇಲ್ಲಿ ಹಸಿರು ತುಂಬಿದ ಲಾಲ್‌ಬಾಗ್ ಮಾತ್ರ ಇಷ್ಟವಾಗಿತ್ತು. ಮರುದಿನ ವಿವಾಹದ ಶಾಸ್ತ್ರಗಳು ಶುರುವಾಗುತ್ತಿದ್ದುದರಿಂದ ಮಧ್ಯಾಹ್ನ ಸ್ವಲ್ಪ ಹೊತ್ತಿನ ಮಟ್ಟಿಗೆ ಲಾಲ್‌ಬಾಗ್ ನೋಡಿದಳು.