ಕಥೆ - ಬಿಂದು ಶೆಣೈ
ಅಕ್ಕ ಮತ್ತು ಭಾವ ಸಾಯಂಕಾಲದ ರೈಲಿನಲ್ಲಿ ಬರುತ್ತಿದ್ದಾರೆ. ಅವರನ್ನು ಕರೆದುಕೊಂಡು ಬನ್ನಿ. ನನಗೆ ಒಂದು ಮೀಟಿಂಗ್ ಇದೆ. ನನಗೆ ಹೋಗುವುದಕ್ಕೆ ಆಗುವುದಿಲ್ಲ ಅನ್ನಿಸುತ್ತೆ,'' ಶಾಲಿನಿ ತನ್ನ ಪತಿ ಸುಧೀರನಿಗೆ ಹೇಳಿದಳು.
``ನನಗೆ ಟೈಮ್ ಇಲ್ಲ. ಫೋನ್ ಮಾಡಿಬಿಡು. ಟ್ಯಾಕ್ಸಿ ಮಾಡಿಕೊಂಡು ಬರುತ್ತಾರೆ,'' ಲ್ಯಾಪ್‌ಟಾಪ್‌ನಲ್ಲೇ ಕಣ್ಣು ಕೀಲಿಸಿದ್ದ ಸುಧೀರ್
ಉತ್ತರಿಸಿದ.
``ನಮ್ಮ ಮದುವೆ ಆದ ಮೇಲೆ ಮೊದಲ ಸಲ ಇಲ್ಲಿಗೆ ಬರುತ್ತಿದ್ದಾರೆ. ನಾವು ಹೋಗಿ ಕರೆತರದಿದ್ದರೆ ತಪ್ಪು ತಿಳಿಯಬಹುದು. ನಿಮ್ಮ ಅಕ್ಕ ಬಂದಿದ್ದಾಗ ಇಡೀ ವಾರ ರಜೆ ಹಾಕಿದ್ದಿರಿ. ಈಗ 1 ದಿಸ ರಜೆ ಹಾಕಲು ಆಗೋಲ್ಲವೇ....?''
``ನನ್ನ ಅಕ್ಕ ನಮ್ಮ ಸುಖ ಸಂಸಾರವನ್ನು ನೋಡೋದಕ್ಕೆ ಬಂದಿದ್ದಳು. ಆದರೆ ನಮ್ಮನ್ನು ನೋಡಿ ಅವಳಿಗೆ ಬಹಳ ನಿರಾಶೆ ಆಗಿರುವುದಂತೂ ಖಂಡಿತ. ನಾವು ಹೇಗೆ ನಮ್ಮ ನಮ್ಮ ಕೆಲಸ ನಾವೇ ಮಾಡಿಕೊಳ್ಳುವುದು, ನಮ್ಮ ಹಣವನ್ನು ಪ್ರತ್ಯೇಕವಾಗಿ, ಸ್ನೇಹಿತರನ್ನು ಪ್ರತ್ಯೇಕವಾಗಿ ಇರಿಸಿಕೊಂಡಿದ್ದೇವೆಯೋ ಹಾಗೇ ಸಂಬಂಧಿಕರನ್ನೂ ಪ್ರತ್ಯೇಕವಾಗಿ ಇರಿಸಿಕೊಳ್ಳುವುದೆಂದು ನಾನು ಆಗಲೇ ತೀರ್ಮಾನಿಸಿಬಿಟ್ಟೆ...'' ಸುಧೀರ್ ತಲೆಯೆತ್ತದೆ ಆಡಿದ ಮಾತುಗಳನ್ನು ಕೇಳಿ ಶಾಲಿನಿ ಮಾತನಾಡಲಾರದೆ ಉಗುಳು ನುಂಗಿದಳು.
ಆರು ವರ್ಷಗಳ ಪರಿಚಯ, ಸ್ನೇಹ, ಪ್ರೀತಿಯು ಸುಧೀರ್ ಮತ್ತು ಶಾಲಿನಿಯರನ್ನು ದಾಂಪತ್ಯ ಜೀವನಕ್ಕೆ ಮುಟ್ಟಿಸಿತ್ತು. ಆದರೆ ಮದುವೆಯಾಗುತ್ತಿದ್ದಂತೆ ಮೊದಲಿನ ಉತ್ಕಟ ಪ್ರೇಮ ಅದೆಲ್ಲಿ ಮಾಯವಾಯಿತೆಂದು ತಿಳಿಯಲಿಲ್ಲ. ಹನಿಮೂನ್‌ನ ಸಮಯದಲ್ಲಿಯೇ ಇಬ್ಬರ ಜಗಳ ತಾರಕಕ್ಕೇರಿ, ಪಂಚತಾರಾ ಹೋಟೆಲ್‌ನ ಮ್ಯಾನೇಜರ್ ವಿನಮ್ರವಾಗಿ ರೂಮ್ ಖಾಲಿ ಮಾಡುವಂತೆ ಹೇಳಿದ್ದರು.
``ನಾವು ಇಡೀ ವಾರಕ್ಕೆ ಅಡ್ವಾನ್ಸ್ ಬುಕಿಂಗ್ ಮಾಡಿಕೊಂಡಿದ್ದೇವೆ,'' ಶಾಲಿನಿ ಕೋಪದಿಂದ ಹೇಳುತ್ತಿದ್ದರೆ ಸುಧೀರ್ ಮೌನವಾಗಿ ನಿಂತು ನೋಡುತ್ತಿದ್ದ.
``ನೀವು ಹೇಳುವುದು ಸರಿ ಮೇಡಂ. ಆದರೆ ಇಲ್ಲಿರುವ ಇತರೆ ಗೆಸ್ಟ್ ಗಳಿಗೆ ತೊಂದರೆ ಆಗದ ಹಾಗೆ ನಾವು ನೋಡಬೇಕಲ್ಲವೇ? ಇನ್ನು ನಿಮ್ಮ ಅಡ್ವಾನ್ಸ್ ಪೇಮೆಂಟ್ ಬಗ್ಗೆ ಹೇಳುವುದಾದರೆ, ನಮ್ಮ ಫರ್ನೀಚರ್, ಕಪ್ಸ್ ಮತ್ತು ಪ್ಲೇಟ್ಸ್ ಗೆ ನಿಮ್ಮ ಕೃಪೆಯಿಂದ ಆಗಿರುವ ಡ್ಯಾಮೇಜ್‌ನ್ನು ಹಿಡಿದುಕೊಂಡು ಉಳಿದ ನಿಮ್ಮ ಹಣವನ್ನು ಹಿಂದಿರುಗಿಸುತ್ತೇವೆ,'' ಎಂದರು ಮ್ಯಾನೇಜರ್,
ಮ್ಯಾನೇಜರ್ ಮಾತು ಕೇಳಿ ಇಬ್ಬರೂ ಮಾತಿಲ್ಲದೆ ಕುಳಿತರು. ಮುಂದೇನು ಮಾಡಬೇಕೆಂಬುದನ್ನು ಚರ್ಚಿಸಬೇಕಿತ್ತು. ಆದರೆ ಪರಸ್ಪರ ಮಾತನಾಡದಿರುವವರು ಏನು ತಾನೇ ಚರ್ಚಿಸಿಯಾರು....? ಹಿಂದಿರುಗಿ ಮನೆಗೆ ಹೋಗುವುದು ಅಸಂಭವ, ಏಕೆಂದರೆ ರಿಟರ್ನ್ ಟಿಕೆಟ್ ಮೊದಲೇ ಬುಕ್ ಮಾಡಿಯಾಗಿತ್ತು.
ಮತ್ತೆ ದೂರಿಗೆ ಅವಕಾಶ ನೀಡದೆ, ಉಳಿದ ದಿನಗಳನ್ನು ಕಳೆದು ಸುಧೀರನ ತಂದೆ ತಾಯಿಯರ ಮನೆಗೆ ಹೋದರು. ನವಿವಾಹಿತರ ಇಳಿಮುಖವನ್ನು ನೋಡಿ ಸುಧೀರನ ತಾಯಿಗೆ ಅನುಮಾನವಾಯಿತು.
``ಸುಧೀರ್ ಏನಾಯಿತು? ಏಕೆ ನೀವಿಬ್ಬರೂ ಹೀಗಿದ್ದೀರಿ?'' ಸುಧೀರ್ ಒಬ್ಬನೇ ಸಿಕ್ಕಿದಾಗ ತಾಯಿ ಕೇಳಿದರು.
``ಏನು ಹೇಳಬೇಕು ಅಂತಲೇ ಗೊತ್ತಾಗುತ್ತಿಲ್ಲ ಅಮ್ಮಾ, ನಾನು ದೊಡ್ಡ ತಪ್ಪು ಮಾಡಿಬಿಟ್ಟೆ ಅನ್ನಿಸುತ್ತಿದೆ. ನಾವಿಬ್ಬರೂ ಜೊತೆಯಲ್ಲಿ ಇರುವುದು ಸಾಧ್ಯವೇ ಇಲ್ಲ,'' ಎಂದು ಬೇಸರದಿಂದ ಹೇಳಿದ ಸುಧೀರ್.