ನಗ್ಮಾ ಕಾಲೇಜು ವಿದ್ಯಾರ್ಥಿನಿ. ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ಮನೆಯಿಂದ ಕಾಲೇಜಿಗೆ ಬಸ್‌ನಲ್ಲಿ ಹೋಗಿ ಬರುತ್ತಿದ್ದಳು. ಬಸ್ ಪ್ರಯಾಣಕ್ಕೆ 45 ನಿಮಿಷ ಹಿಡಿಯುತ್ತಿತ್ತು.
ಆ ದಿನ ಕಾಲೇಜ್‌ನಲ್ಲಿ ಯೂತ್ ಫೆಸ್ಟಿವಲ್ ಇದ್ದುದರಿಂದ ಮನೆಗೆ ಹಿಂದಿರುಗಲು ತಡವಾಗಿತ್ತು. ಅವಳು ತನ್ನ ಗೆಳತಿಯ ಜೊತೆ ಬಸ್‌ನಿಂದ ಇಳಿದಾಗ ರಾತ್ರಿ 11 ಗಂಟೆ. ಬಸ್ ಸ್ಟಾಪ್‌ನಿಂದ 3-4 ನಿಮಿಷ ನಡೆಯುವಷ್ಟು ದೂರದಲ್ಲಿ ಅವಳ ಮನೆ ಇತ್ತು. ಗೆಳತಿಯ ಮನೆ ಇವಳ ಮನೆಯಿಂದ ತುಸು ದೂರದಲ್ಲಿತ್ತು.
ಆ ದಿನದ ಘಟನೆಯ ಬಗ್ಗೆ ನಗ್ಮಾ ಹೇಳುತ್ತಾಳೆ, “ನಾವು ಬಸ್‌ನಿಂದ ಇಳಿದಾಗ ಕೆಲವು ಹುಡುಗರು ನಮ್ಮತ್ತಲೇ ನೋಡುತ್ತಾ ನಿಂತಿದ್ದರು. ನಾವು ಕಾಲೇಜಿಗೆ ಹೋಗಿ ಬರುವಾಗೆಲ್ಲ ನಮ್ಮ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಹುಡುಗರೇ ಅವರು. ನಾವು ಬಸ್ ಇಳಿದು ನಡೆಯುತ್ತಿದ್ದಂತೆ ಅವರು ಕಾರಿನಲ್ಲಿ ನಿಧಾನವಾಗಿ ಹಿಂಬಾಲಿಸತೊಡಗಿದರು. ನಾವು ವೇಗವಾಗಿ ನಡೆದು ನನ್ನ ಮನೆಯ ಬಳಿ ಬಂದವು. ನಾನು ಗೆಳತಿಗೆ ನನ್ನ ಮನೆಯಲ್ಲೇ ಇದ್ದುಬಿಡು ಎಂದು ಹೇಳಿದೆ. ಆದರೆ ಅವಳು ತನ್ನ ಅಣ್ಣನಿಗೆ ಮೈ ಚೆನ್ನಾಗಿಲ್ಲವೆಂದು ಹೇಳಿ ಹೊರಟುಬಿಟ್ಟಳು.
“ಆದರೆ ಸ್ವಲ್ಪ ಸಮಯದ ನಂತರ ಅವಳಿಂದ ಫೋನ್ ಬಂದಿತು. ಅವಳು ಅಳುತ್ತಾ, `ಆ ಹುಡುಗರು ಹಿಂದೆ ಬಿದ್ದಿರುವವರೆಂದೂ, ಕಾರಿನೊಳಕ್ಕೆ ಎಳೆದುಕೊಳ್ಳಲು ಪ್ರಯತ್ನಿಸುತ್ತಿರುವರೆಂದೂ,’ ತಿಳಿಸಿದಳು. ನಾನು ಕೂಡಲೇ ಅವಳ ಅಣ್ಣನಿಗೆ ಮತ್ತು ನನ್ನ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ಅವಳ ಸಹಾಯಕ್ಕೆ ಕಳುಹಿಸಿದೆ.
“ಈ ಮಧ್ಯೆ ಆ ಪುಂಡರಿಂದ ತಪ್ಪಿಸಿಕೊಳ್ಳಲು ಅವಳು ಮೇನ್‌ರೋಡ್ ಬಿಟ್ಟು ಗಲ್ಲಿಯಲ್ಲಿ ಓಡತೊಡಗಿದಳು. ಅಲ್ಲಿ ಕಟ್ಟಡ ಕಟ್ಟುತ್ತಿದ್ದುದರಿಂದ ಮರಳು, ಜಲ್ಲಿ ಎಲ್ಲ ರಸ್ತೆಯಲ್ಲಿ ಹರಡಿತ್ತು. ಕಾರ್ ಚಲಿಸಲು ಅಲ್ಲಿ ಅವಕಾಶವಿರಲಿಲ್ಲ. ಈ ಹುಡುಗರು ಕಾರನ್ನು ನಿಲ್ಲಿಸಿ ಅವಳ ಹಿಂದೆ ಬಿದ್ದಿದ್ದರು. ಅವರು ಅವಳನ್ನು ಹಿಡಿಯುವಷ್ಟರಲ್ಲಿ ಅವಳ ಅಣ್ಣ ಮತ್ತು ನಮ್ಮ ನೆರೆಮನೆಯ ಹುಡುಗ ಅಲ್ಲಿಗೆ ತಲುಪಿದ್ದರು. ಒಂದು ಅಚಾತುರ್ಯ ಆಗುತ್ತಿದ್ದುದು ತಪ್ಪಿತು.
“ಪೊಲೀಸರಿಗೆ ದೂರು ಕೊಡಬೇಕೆಂದಿದ್ದಾಗ ಎಲ್ಲರೂ ಬೇಡವೆಂದು ತಡೆದರು. ಪೊಲೀಸರು ಸಹಾಯವನ್ನೇನೋ ಮಾಡುವರು, ಆದರೆ ನೀವು ತೊಂದರೆಗೆ ಸಿಕ್ಕಿಕೊಳ್ಳುತ್ತೀರಿ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
“ದುರ್ದೈವದ ಸಂಗತಿಯೆಂದರೆ ಮನೆ ಮಾಲೀಕರಿಂದ ಹಿಡಿದು ಪ್ರತಿಯೊಬ್ಬರೂ ನಮ್ಮನ್ನೇ ದೋಷಿಗಳೆಂದು ದೂರಿದರು. ಅವರ ಪ್ರಕಾರ ತಡರಾತ್ರಿಯವರೆಗೆ ಮನೆಯಿಂದ ಹೊರಗಿರುವುದು ಮತ್ತು ಜೀನ್ಸ್ ನಂತಹ ಪ್ರಚೋದಕ ಡ್ರೆಸ್ ಧರಿಸುವುದು ನಮ್ಮ ತಪ್ಪು.”
ಈಗ ನಗ್ಮಾ ಮಿನಿಸ್ಟ್ರಿ ಆಫ್ ಸೋಶಿಯಲ್ ಜಸ್ಟೀಸ್‌ನಲ್ಲಿ ಕನ್ಸಲ್ಟೆಂಟ್ ಆಗಿದ್ದಾಳೆ. ಮೆಟ್ರೊ ಸಿಟಿಯಲ್ಲಿ ವಾಸಿಸುತ್ತಿರುವ ಅವಳು ಸಾಕಷ್ಟು ಎಚ್ಚರಿಕೆಯಾಗಿರುತ್ತಾಳೆ. ಲೇಟ್ ನೈಟ್‌ನಲ್ಲಿ ಮನೆಯಿಂದ ಹೊರಗಿರುವುದಿಲ್ಲ. ಯಾರಾದರೂ ಹಿಂಬಾಲಿಸುತ್ತಿದ್ದರೆ ರಸ್ತೆ ಬದಲಾಯಿಸುತ್ತಾಳೆ. ರಾತ್ರಿ ವೇಳೆ ಸಾಧ್ಯವಾದಷ್ಟು ಆಟೋ ಹಿಡಿಯದೆ ಕ್ಯಾಬ್ ಬುಕ್ ಮಾಡುತ್ತಾಳೆ. ಮೀಡಿಯಾದ ಮಿತ್ರರೊಡನೆ ಸಂಪರ್ಕವಿರಿಸಿಕೊಂಡಿದ್ದಾಳೆ.
ಸ್ಟೇಕಿಂಗ್ ಅಂದರೆ ಹಿಂಬಾಲಿಸುವಿಕೆ, ನಮ್ಮ ದೇಶದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋದ 2015ರ ವರದಿಯ ಪ್ರಕಾರ ಅತಿ ಹೆಚ್ಚು ಸ್ಟೇಕಿಂಗ್ ಘಟನೆಗಳು ಮಹಾರಾಷ್ಟ್ರದಲ್ಲಿ, ನಂತರ ದೆಹಲಿಯಲ್ಲಿ ನಡೆಯುತ್ತವೆ.
ಮುಂಬೈ, ಚೆನ್ನೈ, ಬೆಂಗಳೂರು, ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಯುವತಿಯರು ಸುರಕ್ಷಿತವಾಗಿಲ್ಲ ಎಂದರೆ ಇತರೆ ಪಟ್ಟಣಗಳ ಬಗ್ಗೆ ಹೇಳುವುದೇ ಬೇಡ.
ಸ್ಟೇಕಿಂಗ್ ಎಂದರೇನು?
ಒತ್ತಾಯದ ಸಂಪರ್ಕ ಪ್ರಯತ್ನ, ಗಮನವನ್ನು ಸೆಳೆಯುವ ಯತ್ನ, ಮಾನಸಿಕ ತೊಂದರೆ ನೀಡುವ ಅಥವಾ ಅಂತಹ ವ್ಯವಹಾರ ನಡೆಸುವುದನ್ನು ಸ್ಟೇಕಿಂಗ್ ಎನ್ನಲಾಗುತ್ತದೆ. ಇದರಿಂದ ವ್ಯಕ್ತಿಯಲ್ಲಿ ಭಯ ಮೂಡುತ್ತದೆ ಮತ್ತು ಜೀವನದಲ್ಲಿ ಅಪಾಯ ಎದುರಾಗುವ ಸಂಭವಿರುತ್ತದೆ.
ಮಾಜಿ ಪ್ರಿಯತಮ/ಪ್ರೇಯಸಿ, ಪತಿ/ಪತ್ನಿ, ಪರಿಚಿತ/ಅಪರಿಚಿತ ಇಂತಹ ಯಾವುದೇ ವ್ಯಕ್ತಿ ಸ್ಟೇಕರ್ ಆಗಿರಬಹುದು. ಪುರುಷ ಅಥವಾ ಸ್ತ್ರೀ ಯಾರಾದರೂ ಈ ಕೆಲಸ ಮಾಡಬಹುದು. ಆದರೆ ಹೆಚ್ಚಾಗಿ ಪುರುಷರೇ ಈ ಕೆಲಸ ಮಾಡುವವರಾಗಿರುತ್ತಾರೆ.
ಸಂಶಯ ಒಂದು ಕಾರಣ
ಹೆಸರಾಂತ ಸಮಾಜ ಸುಧಾರಕಿ ಮತ್ತು ಅಡ್ವೊಕೇಟ್ ಆಗಿರುವ ಅಪರ್ಣಾ ಹೀಗೆ ಹೇಳುತ್ತಾರೆ, “ನನ್ನ ಎನ್‌ಜಿಓ `ನಿರ್ಭಯಾ’ದಲ್ಲಿ ನನ್ನ ಸಹೋದ್ಯೋಗಿಯಾಗಿರುವವರ ಪತ್ನಿ ನನ್ನ ಹಿಂದೆ ಬಿದ್ದಿದ್ದಾಳೆ. ನಮ್ಮಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಅವಳಿಗೆ ಸಂಶಯ. ನಾನು ಎಲ್ಲಿ ಹೋಗುತ್ತೇನೆ, ಏನು ಮಾಡುತ್ತೇನೆ ಎಂಬುದರ ಬಗ್ಗೆ ಕಣ್ಣಿಟ್ಟಿರುತ್ತಾಳೆ. ನಾನು ಒಂದು ಜಾಗಕ್ಕೆ ತಲುಪಿದ್ದಂತೆ ಅವಳು ಅಥವಾ ಅವಳ ಕಡೆಯ ಪತ್ತೇದಾರರು ಅಲ್ಲಿ ಹಾಜರಿರುತ್ತಾರೆ.
“ಅವಳು ತನ್ನ ಸ್ನೇಹಿತರ ಬಗ್ಗೆಯೂ ತಿಳಿದುಕೊಳ್ಳುತ್ತಾಳೆ. ತನ್ನ ಪತಿಯನ್ನು ನನ್ನ ಬಗ್ಗೆ ವಿಚಾರಿಸುತ್ತಾಳೆ. ಅಷ್ಟೇ ಅಲ್ಲ, ತನ್ನ ಪತಿಗೆ ಹಿಂಸೆಯನ್ನು ಕೊಡುತ್ತಾಳೆ. ಅವರನ್ನು ಶಾಂತಿಯಿಂದ ಇರಗೊಡುವುದಿಲ್ಲ. ಕೆಲವು ಸಲ ಅವರಿಗೆ ಊಟ ಕೊಡುವುದಿಲ್ಲ, ಕೆಲವು ಸಲ ಅವರನ್ನು ಮನೆಯಲ್ಲಿ ಕೂಡಿಹಾಕುತ್ತಾಳೆ. ನಿಮಗೆ ಅಪರ್ಣಾ ಜೊತೆ ಅನೈತಿಕ ಸಂಬಂಧವಿದೆ ಎಂದು ಅವರಿಗೆ ಮತ್ತೆ ಮತ್ತೆ ಹೇಳುತ್ತಿರುತ್ತಾಳೆ.
“ಮೇಡಂ, ನೀವು ಹೋಗುವಾಗ ಮತ್ತು ಬರುವಾಗೆಲ್ಲ ಮತ್ತೊಂದು ಗಾಡಿ ನಿಮ್ಮನ್ನು ಹಿಂಬಾಲಿಸುತ್ತಿರುತ್ತದೆ,” ಎಂದು ಸೆಕ್ಯುರಿಟಿ ಗಾರ್ಡ್ ಹೇಳುತ್ತಾನೆ. ನಮ್ಮ ಚಲನವಲನಗಳನ್ನು ಪತ್ತೆ ಮಾಡಲು ಮತ್ತು ಅದಕ್ಕೆ ಸಾಕ್ಷಿ ದೊರಕಿಸಿಕೊಳ್ಳಲು ತಾನು ಪತ್ತೇದಾರರನ್ನು ನೇಮಿಸಿರುವುದಾಗಿ ಆಕೆ ತನ್ನ ಪತಿಯೊಡನೆ ಹೇಳಿಕೊಂಡಿದ್ದಾಳೆ. ಒಂದೂವರೆ ಲಕ್ಷ ರೂಪಾಯಿ ಮೊತ್ತಕ್ಕೆ ನೇಮಕಗೊಂಡಿರುವ ಈ ಜನರು ಈವೆಂಟ್ಸ್ ಮೊದಲಾದ ಸಂದರ್ಭಗಳಲ್ಲಿ ನಾವಿಬ್ಬರು ಜೊತೆಯಲ್ಲಿರುವ ಫೋಟೋಗಳನ್ನು ತೆಗೆದು ಅವಳಿಗೆ ಕೊಡುತ್ತಾರೆ.
“ಈ ವಿಷಯದಲ್ಲಿ ಅವಳ ತಂದೆತಾಯಿಯರು ಅವಳಿಗೆ ಒತ್ತಾಸೆಯಾಗಿರುವುದೇ ಬೇಸರದ ಸಂಗತಿ. ನಾವು ಒಂದು ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವಾಗ ಈವೆಂಟ್ಸ್ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲವೇ? ಸ್ತ್ರೀ-ಪುರುಷರು ಪರಸ್ಪರ ಸ್ನೇಹಿತರಾಗಿರಬಹುದು ಎಂಬ ವಿಷಯವನ್ನು ಆಕೆ ಅರ್ಥ ಮಾಡಿಕೊಂಡಿಲ್ಲ.
“ನಾನು ಆ ಮಹಿಳೆಯ ವಿರುದ್ಧ ಸ್ಟೇಕಿಂಗ್, ಡೀಫೇಮ್ ಮತ್ತು ಹರಾಸ್‌ಮೆಂಟ್‌ನ ಕೇಸ್‌ನ್ನು ಸಲ್ಲಿಸಲು ತೀರ್ಮಾನಿಸಿದ್ದೇನೆ. ಏಕೆಂದರೆ ಆಕೆ ನನ್ನ ಮತ್ತು ನನ್ನ ಸ್ನೇಹಿತರ ಬಾಳನ್ನು ಹಿಂಸೆಗೆ ಗುರಿ ಮಾಡಿದ್ದಾಳೆ.”
ಸ್ಟೇಕಿಂಗ್‌ಗೆ ಸೇರ್ಪಡೆಯಾಗುವ ಅಂಶಗಳು
ಡಾ. ಸಂದೀಪ್‌ರ ಪ್ರಕಾರ, ಸ್ಟೇಕಿಂಗ್‌ಗೆ ಸಂಬಂಧಿಸಿದಂತೆ ಅನೇಕ ವಿಷಯಗಳು ಇರುತ್ತವೆ. ಅವುಗಳಲ್ಲಿ ಮುಖ್ಯವಾದದೆಂದರೆ :
ಅಂಚೆ, ಫೋನ್ ಅಥವಾ ಇಮೇಲ್ ಮೂಲಕ ಅಸಭ್ಯ, ಅನುಚಿತ ಅಥವಾ ಅಂಜಿಸುವ ಸಂದೇಶಗಳನ್ನು ಕಳುಹಿಸುವುದು.
ಪದೇ ಪದೇ ಅನಗತ್ಯವಾಗಿ ಹೂ, ಉಡುಗೊರೆ ಅಥವಾ ವಸ್ತುಗಳನ್ನು ಕಳುಹಿಸುವುದು.
ಮನೆ, ಸ್ಕೂಲ್, ಕಾಲೇಜು, ಆಫೀಸ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕಾಯುತ್ತಾ ನಿಲ್ಲುವುದು ಅಥವಾ ಹಿಂಬಾಲಿಸುವುದು.
ಪೀಡಿತರ ಬಗ್ಗೆ ಮಾಹಿತಿಗಾಗಿ ಪ್ರೈವೇಟ್ ಡಿಟೆಕ್ಟಿವ್‌ನ್ನು ನೇಮಿಸುವುದು, ಸಾರ್ವಜನಿಕ ಕಡತಗಳ ಮತ್ತು ಇಂಟರ್‌ನೆಟ್ ಸರ್ಚ್ ಸರ್ವೀಸಸ್‌ನ್ನು ದುರುಪಯೋಗಪಡಿಸಿಕೊಳ್ಳುವುದು.
ಪೀಡಿತರ ಕಸದ ಬುಟ್ಟಿಯಿಂದ ಅವರ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವುದು.
ಹಿಂಬಾಲಿಸುತ್ತಿರುವವರು ಸರ್ಕಾರದಿಂದ ಅಧಿಕೃತವಾಗಿ ನೇಮಿಸಲ್ಪಟ್ಟಿರುವುದು.
ಯಾವುದೇ ನಿಯಮ ಅಥವಾ ಕಾನೂನಿಗನುಗುಣವಾಗಿ ಹಿಂಬಾಲಿಸಲ್ಪಟ್ಟಿರುವುದು.
ರೀಸನೆಬಲ್ ಮತ್ತು ಜಸ್ಟಿಫೈಡ್ ಸ್ಟೇಕಿಂಗ್.
ಸ್ಟೇಕರ್‌ನ ಮಾನಸಿಕ ಸ್ಥಿತಿ
ಸಾಮಾನ್ಯವಾಗಿ ಸ್ಟೇಕರ್ ಒಬ್ಬಂಟಿಯಾಗಿದ್ದು, ಸಂಕೋಚ ಸ್ವಭಾವದವರಾಗಿರುತ್ತಾರೆ. ಅವರು ಒಬ್ಬರೇ ವಾಸಿಸುತ್ತಿದ್ದು ಅವರಿಗೆ ಬಾಳ ಸಂಗಾತಿ, ಕುಟುಂಬ ಅಥವಾ ಸ್ನೇಹಿತರ ಸಂಬಂಧವಾಗಲಿ ಇರುವುದಿಲ್ಲ. ಅವರು ಒಂದು ಬಗೆಯ ಪರ್ಸನಾಲಿಟಿ ಡಿಸಾರ್ಡರ್‌ಗೆ ಬಲಿಯಾಗಿರುತ್ತಾರೆ. ಪ್ರಪಂಚದಲ್ಲಿ ತಾನೇ ಅತ್ಯುತ್ತಮ ವ್ಯಕ್ತಿ ಎಂಬ ಭಾವನೆಯನ್ನು ಹೊಂದಿರುತ್ತಾರೆ.
ಫೋರ್ಟಿಸ್ ಆಸ್ಪತ್ರೆಯ ಡೈರೆಕ್ಟರ್ ಆಫ್ ಮೆಂಟಲ್ ಹೆಲ್ತ್ ಅಂಡ್ ಬಿಹೇವಿಯರ್ ಸೈನ್ಸ್ ಆಗಿರುವ ಮನೋವೈದ್ಯರು ಹೀಗೆ ಹೇಳುತ್ತಾರೆ, “ಸ್ಟೇಕರ್ ಅಥವಾ ಹುಚ್ಚನಂತೆ ಹಿಂಬಾಲಿಸುವ ವ್ಯಕ್ತಿಯ ಮಾನಸಿಕ ಸ್ಥಿತಿ ಹೇಗಿರುತ್ತದೆ ಎಂದರೆ, ತಾನು ಹಿಂಬಾಲಿಸುತ್ತಿರುವ ವ್ಯಕ್ತಿಯು ತನ್ನನ್ನು ಸ್ವೀಕರಿಸಲು ಇಷ್ಟಪಡುತ್ತಿಲ್ಲ ಎಂಬ ಮಾತನ್ನು ಆತ ಒಪ್ಪುವುದೇ ಇಲ್ಲ. ಬದಲಾಗಿ ಆ ವ್ಯಕ್ತಿಯನ್ನು ತನ್ನ ಬಾಳಿನ ಉದ್ದೇಶವನ್ನಾಗಿರಿಸಿಕೊಂಡು ಆ ವ್ಯಕ್ತಿಯನ್ನು ಪಡೆಯಲು ಏನು ಬೇಕಾದರೂ ಮಾಡಲು ಸಿದ್ಧನಾಗುತ್ತಾನೆ. ಇದಕ್ಕೆ ತನ್ನ ಕುಟುಂಬದ ಬೆಂಬಲವಿಲ್ಲದೆ ಡಿಪ್ರೆಶನ್‌ಗೆ ಗುರಿಯಾಗಿರುತ್ತಾನೆ. ಇಂತಹ ಜನರು ಭಾವನಾತ್ಮಕವಾಗಿ ಯೋಚಿಸದೆ ಉನ್ಮಾದಕ್ಕೊಳಗಾಗಿ ವರ್ತಿಸುತ್ತಾರೆ. ಇದು ತಪ್ಪು ಆಲೋಚನೆಯಿಂದ ಉತ್ಪನ್ನವಾದ ಒಂದು ಅಪರಾಧ ಪ್ರವೃತ್ತಿಯಾಗಿರುತ್ತದೆ.”
ಸ್ಟೇಕರ್‌ಗಳು ಅನೇಕ ಬಗೆಯಾಗಿರುತ್ತಾರೆ
ಅಸ್ವೀಕೃತ ಸ್ಟೇಕರ್ : ತಮ್ಮ ಪ್ರೀತಿಯ ಸಂಬಂಧ ಕೊನೆಗೊಂಡಾಗ ಕೋಪಗೊಳ್ಳುತ್ತಾರೆ. ಅಸ್ವೀಕೃತ ಸ್ಟೇಕರ್ ಕೇವಲ ತಮ್ಮ ಬಗ್ಗೆ ಯೋಚಿಸುತ್ತಾರೆ ಮತ್ತು ಈರ್ಷ್ಯೆಯಿಂದ ಕೂಡಿರುತ್ತಾರೆ.
ಸಿಟ್ಟು ಮತ್ತು ದ್ವೇಷಯುಕ್ತ ಸ್ಟೇಕರ್ : ಸಂಬಂಧ ಮುರಿದುಹೋದಾಗ ಅವಮಾನವನ್ನು ಅನುಭವಿಸುತ್ತಾರೆ ಮತ್ತು ಎದುರು ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳುವ ಭಾವನೆ ಹೊಂದಿರುತ್ತಾರೆ.
ಹುಚ್ಚು ಪ್ರೀತಿಯ ಸ್ಟೇಕರ್ : ತಾವು ಇಷ್ಟಪಟ್ಟವರಿಂದ ಪ್ರೀತಿಯ ಸಂಬಂಧವನ್ನು ಬಯಸುತ್ತಾರೆ. ತಮ್ಮ ಪ್ರೀತಿ ಸ್ವೀಕೃತವಾಗದಿದ್ದಲ್ಲಿ ಅವರಿಗೆ ಪದೇ ಪದೆ ಫೋನ್ ಮಾಡುವುದು, ಪತ್ರ ಬರೆಯುವುದು, ಹತ್ತಿರವಾಗಲು ಪ್ರಯತ್ನಿಸುವುದು ಇತ್ಯಾದಿ ಮಾಡುತ್ತಾರೆ. ತಮ್ಮ ಪ್ರೀತಿಯ ವ್ಯಕ್ತಿ ಬೇರೆಯವರೊಡನೆ ಸ್ನೇಹ ಬೆಳೆಸಿದರೆ ಈರ್ಷ್ಯೆಗೊಳ್ಳುತ್ತಾರೆ. ಕೆಲವು ಸಲ ಸ್ಟೇಕರ್ ಹಿಂಸಾಪ್ರವೃತ್ತಿಯವರೂ ಆಗುತ್ತಾರೆ.
ಆಕ್ರಮಣಕಾರಿ ಸ್ಟೇಕರ್ : ಲೈಂಗಿಕ ಕಾಮನೆಯಿಂದಾಗಿ ಸ್ಟೇಕರ್ ಹಿಂಸಾಚಾರಿ ಆಗಬಹುದು. ಇಂತಹ ಸ್ಟೇಕರ್ ಅಪರಿಚಿತ ವ್ಯಕ್ತಿಯನ್ನು ಹಿಂಬಾಲಿಸಬಹುದು.
ಅಯೋಗ್ಯ ಪ್ರೇಮಿ : ಇಂತಹ ಸ್ಟೇಕರ್ ಅಷ್ಟು ಬುದ್ಧಿವಂತನಾಗಿರುವುದಿಲ್ಲ. ವ್ಯಕ್ತಿಯೊಡನೆ ಸಂಬಂಧವಿರುವುದಷ್ಟೇ ಅವನಿಗೆ ಮುಖ್ಯ.
ವಿಕೃತ ಆಕರ್ಷಣೆ : ಈ ಬಗೆಯ ಸ್ಟೇಕರ್, ಇನ್ನೊಂದು ವ್ಯಕ್ತಿಗೆ ತನ್ನ ಮೇಲೆ ಪ್ರೀತಿ ಇದೆ ಎಂದೇ ಭಾವಿಸುತ್ತಾನೆ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಇನ್ನೊಂದು ಪಕ್ಷದವರು ಉನ್ನತ ಸಾಮಾಜಿಕ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಆದರೂ ಸ್ಟೇಕರ್ ಅವರಿಗೆ ಹತ್ತಿರವಾಗಲು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ.
ಕಾನೂನು ಏನು ಹೇಳುತ್ತದೆ?
ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಹೀಗೆ ಹೇಳುತ್ತಾರೆ, “ನಮ್ಮ ದೇಶದ ಕಾನೂನಿನ ಪ್ರಕಾರ, ಇಂಡಿಯನ್ ಪೀನಲ್ ಕೋಡ್‌ರಂತೆ. ಮಹಿಳೆಗೆ ರಕ್ಷಣೆ ನೀಡಲಾಗುತ್ತದೆ. ನಿರ್ಭಯಾ ಕರ್ಮಕಾಂಡದ ಬಳಿಕ ಕಾನೂನಿನ ಕೆಲವು ಕೊರತೆಗಳನ್ನು ನೀಗಿಸಲು 2013ರಲ್ಲಿ ಕೆಲವು ವಿಶೇಷ ಆದೇಶಗಳನ್ನು ಹೊರಡಿಸಲಾಯಿತು. ಅದರಂತೆ ಯಾವುದೇ ಮಹಿಳೆಯನ್ನು ಹಿಂಬಾಲಿಸುವುದು, ಕದ್ದು ನೋಡುವುದು, ಸೋಶಿಯಲ್ ಮೀಡಿಯಾ ಮೂಲಕ ತೊಂದರೆ ಕೊಡುವುದು. ಅಂದರೆ ಸೈಬರ್ ಸ್ಟೇಕಿಂಗ್ ಮುಂತಾದ 354ಡಿ ಆ್ಯಕ್ಟ್ ನ ಪ್ರಕಾರ ಅಪರಾಧವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಅಪರಾಧಿಗೆ 3-5 ವರ್ಷ ಜೈಲುವಾಸ ಮತ್ತು ಜುಲ್ಮಾನೆಯನ್ನು ವಿಧಿಸಬಹುದಾಗಿದೆ.”
ಸ್ಟೇಕಿಂಗ್ ಅಪರಾಧದ ಲಕ್ಷಣಗಳು
ಅನಗತ್ಯ ಉಡುಗೊರೆ : ನಿಮಗೆ ಯಾರಾದರೂ ಕಾರಣವಿಲ್ಲದೆ ಹೂ, ಚಾಕಲೇಟ್, ಟೆಡಿಬೇರ್ ಅಥವಾ ಲೆಟರ್ಸ್ ಕಳುಹಿಸುತ್ತಿದ್ದರೆ ಕೋಪಗೊಂಡು ಅವುಗಳನ್ನು ಎಸೆಯಬೇಡಿ. ಬದಲಾಗಿ ಅವುಗಳನ್ನು ಎತ್ತಿಡಿ. ವಿಷಯ ಗಂಭೀರವಾದಾಗ ಉಡುಗೊರೆಗಳು ಸಾಕ್ಷಿಗಳಾಗಿ ಉಪಯೋಗಕ್ಕೆ ಬರುತ್ತವೆ. ಕೆಲವು ಸಲ ಅರೆ ಹುಚ್ಚ ಅಪರಾಧಿಗಳು ಹೆದರಿಸಲೆಂದು ಸತ್ತ ಅಳಿಲು ಅಥವಾ ರಕ್ತಸಿಕ್ತವಾದ ಪತ್ರ, ಇತ್ಯಾದಿಗಳನ್ನು ಕಳುಹಿಸುವುದುಂಟು. ಅವುಗಳನ್ನು ಕಂಡು ಹೆದರಬೇಡಿ, ತೆಗೆದಿರಿಸಿರಿ.
ಕೊಲ್ಲುವ ಬೆದರಿಕೆ : ಕೆಲವರು ನಿಮ್ಮೆಲ್ಲ ಚಲನವಲನದ ಬಗ್ಗೆ ಗಮನವಿರಿಸಿರಬಹುದು. ಫೋನ್, ಇಂಟರ್‌ನೆಟ್ ಮೂಲಕ ನಿಮ್ಮನ್ನು ಕೊಲ್ಲುವ ಬೆದರಿಕೆ ಹಾಕಬಹುದು. ತನ್ನನ್ನು/ನಿಮ್ಮನ್ನು ಬೆಂಕಿ ಹಚ್ಚುವ ಅಥವಾ ಹೊಡೆದು ಹಾಕುವ ಹೆದರಿಕೆ ಹುಟ್ಟಿಸಬಹುದು.
ಸೈಬರ್ ಸ್ಟೇಕಿಂಗ್ : ಸೋಶಿಯಲ್ ಮೀಡಿಯಾ ಮುಂದುವರಿಯುತ್ತಿರುವುದರಿಂದ ಸೈಬರ್ ಸ್ಟೇಕಿಂಗ್ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ಸ್ಟೇಕಿಂಗ್‌ನಲ್ಲಿ ಒಂದು ವ್ಯಕ್ತಿಯ ಬಗ್ಗೆ ಮಾಹಿತಿ ಅರಿಯಲು ಸ್ಟೇಕರ್ ಸ್ವತಃ ಆ ವ್ಯಕ್ತಿಯನ್ನು ಹಿಂಬಾಲಿಸುವುದಿಲ್ಲ. ಬದಲಾಗಿ ಸೆಲ್ ಫೋನ್, ಇಂಟರ್‌ನೆಟ್ ಮೊದಲಾದ ಎಲೆಕ್ಟ್ರಾನಿಕ್ ಟೆಕ್ನಿಕ್‌ಗಳನ್ನು ಬಳಸುತ್ತಾನೆ. ಕೆಲವು ಸಲ ವ್ಯಕ್ತಿಯನ್ನು ಅವಮಾನಪಡಿಸಲು ಸ್ಟೇಕರ್ ಇಂಟರ್‌ನೆಟ್‌ನಲ್ಲಿ ನಕಲಿ ಪ್ರೊಫೈಲ್ ಹಾಕುತ್ತಾನೆ.
ಸುರಕ್ಷೆಗಾಗಿ : ನಿಮ್ಮ ಸುತ್ತಮುತ್ತಲಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಯು ಕಂಡುಬಂದರೆ ಪೊಲೀಸರನ್ನು ಕೂಡಲೇ ಸಂಪರ್ಕಿಸಿ, ಇಲ್ಲವಾದರೆ ಅಂತಹ ಸ್ಟೇಕರ್‌ಗೆ ಧೈರ್ಯ ಉಂಟಾಗಿ, ಇನ್ನೂ ಹೆಚ್ಚಿನ ಅಪರಾಧ ಎಸಗಬಹುದು.
– ಗಿರಿಜಾ ಶಂಕರ್
ಸ್ಟೇಕರ್‌ಮಾಜಿ ಪ್ರಿಯಕರ/ ಪ್ರೇಯಸಿ, ಮಾಜಿ ಪತಿ/ಪತ್ನಿ, ಪರಿಚಿತ/ಅಪರಿಚಿತ ಯಾರಾದರೂ ಆಗಿರಬಹುದು. ಕೆಲವರು ಸೆಲೆಬ್ರಿಟೀಸ್‌ನ್ನು ಹಿಂಬಾಲಿಸುತ್ತಾರೆ. ಪುರುಷ, ಸ್ತ್ರೀ ಇಬ್ಬರಿಂದಲೂ ಸ್ಟೇಕಿಂಗ್ ನಡೆಯುತ್ತದೆ. ಆದರೆ ಇದರಲ್ಲಿ ಪುರುಷರದೇ ಮೇಲುಗೈ.
ಸ್ಟೇಕಿಂಗ್ ಮಾಡುವ ಬಗೆ ಸ್ಟೇಕಿಂಗ್‌ಗೆ ಸಂಬಂಧಿಸಿದಂತೆ ಅನೇಕ ವಿಷಯಗಳು ಇರುತ್ತವೆ. ಅವುಗಳಲ್ಲಿ ಮುಖ್ಯವಾದುವೆಂದರೆ ಅಂಚೆ, ಫೋನ್ ಅಥವಾ ಇಮೇಲ್ ಮೂಲಕ ಅಸಭ್ಯ, ಅನುಚಿತ ಅಥವಾ ಅಂಜಿಸುವ ಸಂದೇಶಗಳನ್ನು ಕಳುಹಿಸುವುದು. ಪದೇ ಪದೇ ಅನಗತ್ಯವಾಗಿ ಹೂ, ಉಡುಗೊರೆ ಅಥವಾ ವಸ್ತುಗಳನ್ನು ಕಳುಹಿಸುವುದು. ಮನೆ, ಸ್ಕೂಲ್, ಕಾಲೇಜ್, ಆಫೀಸ್ ಮುಂತಾದ ಸಾರ್ವನಿಕ ಸ್ಥಳಗಳಲ್ಲಿ ಕಾಯುತ್ತಾ ನಿಲ್ಲುವುದು ಅಥವಾ ಹಿಂಬಾಲಿಸುವುದು. ಪೀಡಿತರ ಬಗ್ಗೆ ಮಾಹಿತಿಗಾಗಿ ಪ್ರೈವೇಟ್ ಡಿಟೆಕ್ಟಿವ್ ನ್ನು ನೇಮಿಸುವುದು. ಸಾರ್ವಜನಿಕ ಕಡತಗಳ ಮತ್ತು ಇಂಟರ್‌ನೆಟ್ ಸರ್ವೀಸ್‌ನ್ನು ದುರುಪಯೋಗಪಡಿಸಿಕೊಳ್ಳುವುದು.
– ಡಾ. ಸಂದೀಪ್
ನಿಮ್ಮ ಸುತ್ತಮುತ್ತಲಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ಕಂಡುಬಂದರೆ, ಪೊಲೀಸರನ್ನು ಕೂಡಲೇ ಸಂಪರ್ಕಿಸಿ, ಇಲ್ಲವಾದರೆ ಅಂತಹ ವ್ಯಕ್ತಿಗೆ ಧೈರ್ಯ ಉಂಟಾಗಿ ಇನ್ನು ಹೆಚ್ಚಿನ ಅಪರಾಧವನ್ನು ಎಸಗಬಹುದು.
ಅಪರಾಧದ ಪ್ರಾರಂಭ ಸ್ಟೇಕಿಂಗ್
ಅವಿವಾಹಿತ ಯುವತಿಯರಿಗೇ ಹೆಚ್ಚಾಗಿ ಸ್ಟೇಕಿಂಗ್ ಮಾಡಲಾಗುತ್ತದೆ. ಇದು ಏಕಮುಖ ಪ್ರೀತಿಯ ಪ್ರಕರಣಕ್ಕೆ ಸಂಬಂಧಿಸಿದ್ದು. ಹುಡುಗ ಹುಡುಗಿಯನ್ನು ಹಿಂಬಾಲಿಸುತ್ತಾನೆ. ಕೋಪ ಹೆಚ್ಚಾದಾಗ ರೇಪ್ ಅಥವಾ ಆ್ಯಸಿಡ್ ಅಟ್ಯಾಕ್‌ನಂತಹ ಗಂಭೀರ ಅಪರಾಧಗಳಿಗೆ ಎಡೆ ಮಾಡಿಕೊಡುತ್ತದೆ. ಆದರೆ ಇದರ ಪ್ರಾರಂಭ ಸ್ಟೇಕಿಂಗ್‌ನಿಂದಲೇ ಆಗುತ್ತದೆ.
– ಅಲೆಕ್ಸಾಂಡರ್ ಬಕ್ಷೀ, ಅಡ್ವೋಕೇಟ್.