ಒಂದೇ ಕಲೆಯಲ್ಲಿ ಪ್ರಾವೀಣ್ಯತೆ ಪಡೆಯುವುದು ಕಷ್ಟಕರ. ಇನ್ನು ಎರಡೆರಡು ಸಂಗೀತ ಕಲೆಗಳಲ್ಲಿ ನೈಪುಣ್ಯತೆ ಪಡೆಯುವುದು ಅಪರೂಪದಲ್ಲಿ ಅಪರೂಪದ ಸಂಗತಿಯೇ ಹೌದು. ಅಂತಹ ಪ್ರತಿಭಾವಂತೆ ಒಬ್ಬರಿದ್ದಾರೆ. ಅವರೇ ಬೆಂಗಳೂರಿನ ವಾರಿಜಾಶ್ರೀ ವೇಣುಗೋಪಾಲ್.
ವಾರಿಜಾಶ್ರೀ ಅವರ ತಂದೆ ವಿದ್ವಾನ್ ಎಚ್.ಎಸ್. ವೇಣುಗೋಪಾಲ್. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕೊಳಲು ವಾದನದಲ್ಲಿ ಹೆಸರುವಾಸಿಯಾದವರು. ತಾಯಿ ಟಿ.ವಿ. ರಮಾ ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಡುಗಾರ್ತಿ.
ಬಾಲ ಪ್ರತಿಭೆ
ವಾರಿಜಾಶ್ರೀ ಬಾಲಕಲಾವಿದೆ. ಚಿಕ್ಕ ವಯಸ್ಸಿನಲ್ಲಿಯೇ ಅನೇಕ ರಾಗಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಳು. ಒಂದೂವರೆ ವರ್ಷದವಳಿದ್ದಾಗ ತಂದೆಯ ಜೊತೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದಳು. ಸಭಾಂಗಣದಲ್ಲಿ ಸಂಗೀತದ ಅಲೆಗಳು ತೇಲಿ ಬರುತ್ತಿದ್ದರೆ, ಇತ್ತ ಸಭಾಂಗಣದ ಹೊರಗಡೆ ಪುಟ್ಟ ಬಾಲೆ ಮಣ್ಣಲ್ಲಿ ಆಟ ಆಡುವುದರಲ್ಲಿ ಮಗ್ನಳಾಗಿದ್ದಳು. ಸ್ವಲ್ಪ ಹೊತ್ತಿನ ಬಳಿಕ ವಾರಿಜಾಶ್ರೀ, ``ಅಪ್ಪಾ, ಹಂಸಪತಿ....'' ಎಂದು ಜೋರಾಗಿ ಕೂಗಿದಳು. `ಇದೇನಿದು, ಮಗಳು ಹೀಗೇಕೆ ಕೂಗಿದಳು?' ಎಂದು ಯೋಚಿಸುತ್ತಲೇ ಅಪ್ಪ ಹೊರಗೆ ಬಂದರು.
ಆಮೇಲೆ ಗೊತ್ತಾದದ್ದು ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಗಾಯಕರು ಹಾಡುತ್ತಿದ್ದದ್ದು `ಹಂಸ ಧ್ವನಿ' ರಾಗದ ಸ್ತುತಿ ಗೀತೆಯೊಂದನ್ನು. ತಂದೆಗೆ ಆಶ್ಚರ್ಯವೋ ಆಶ್ಚರ್ಯ! ಮಗಳ ಮೆದುಳಿನಲ್ಲಿ ರಾಗಗಳು ರೆಜಿಸ್ಟರ್ಡ್ ಆಗುತ್ತಿವೆ ಎನ್ನುವುದು ಅವರಿಗೆ ಮನವರಿಕೆಯಾಯಿತು. ಮನೆಗೆ ಬಂದ ಬಳಿಕ ಅವರು ಬೇರೆ ಬೇರೆ ಹಾಡುಗಳನ್ನು ಹಾಡಿ ಮಗಳಿಗೆ ಇದು ಯಾವ ರಾಗ? ಇದು ಯಾವ ರಾಗ? ಎಂದು ಕೇಳುತ್ತ ಹೋದರು. ಕೇವಲ ಒಂದೂವರೆ ವರ್ಷದಲ್ಲಿಯೇ ಅವಳು 20-25 ರಾಗಗಳನ್ನು ಗುರುತಿಸಬಲ್ಲವಳಾಗಿದ್ದಳು!
ಶಾಸ್ತ್ರೋಕ್ತ ಕಲಿಕೆ
4ನೇ ವಯಸ್ಸಿನಲ್ಲಿ ವಾರಿಜಾಶ್ರೀಗೆ ವಿದೂಷಿ ಎಚ್. ಗೀತಾರವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಶಾಸ್ತ್ರೋಕ್ತ ಕಲಿಕೆ ಆರಂಭ. ಅಲ್ಲಿಯವರೆಗೆ ಅವಳಿಗೆ 150-200 ರಾಗಗಳ ಪರಿಚಯವಾಗಿತ್ತು ಎಂದರೆ, ಅದೆಂಥ ದೈತ್ಯ ಪ್ರತಿಭೆಯಾಗಿತ್ತು ಎಂದು ಊಹಿಸಬಹುದು.
ಪ್ರಥಮ ಕಚೇರಿ
ವಾರಿಜಾಶ್ರೀ 7ನೇ ವರ್ಷದವಳಿದ್ದಾಗ ಗಾಯನ ಸಮಾಜದಲ್ಲಿ ಪ್ರಥಮ ಸಂಗೀತ ಕಚೇರಿ ನಡೆಸಿಕೊಟ್ಟಿದ್ದಳು. ಅದು ನಡೆದದ್ದು 1998ರಲ್ಲಿ. 7ನೇ ವರ್ಷದ ಬಳಿಕ ತಾಯಿಯ ಗುರುಗಳಾದ ವಸಂತಾ ಶ್ರೀನಿವಾಸನ್ ಬಳಿ ಅಪರೂಪದ ರಚನೆಗಳು, ರಾಗಮಾಲಿಕೆಗಳನ್ನು ಕಲಿಯುವ ಸದವಕಾಶ ದೊರೆಯಿತು. ವಿದ್ವಾನ್ ಡಿ.ಎ. ಶ್ರೀವತ್ಸ ಬಳಿ ಭಜನೆಗಳು, ಅಭಂಗಗಳನ್ನು ಹಾಡುವ ಕಲೆ ಸಿದ್ಧಿಸಿತು. 72 ಮೇಳ ಕರ್ತ ರಾಗಗಳ ಬಗ್ಗೆ ಮಹಾ ವೈದ್ಯನಾಥ ಶಿವನ್ ಅಯ್ಯರ್ ಬಳಿ ತರಬೇತಿ ಸಿಕ್ಕಿತು.
ಮಹತ್ವದ ತಿರುವು
ವಾರಿಜಾಶ್ರೀಯರ ಜೀವನಕ್ಕೆ ಮಹತ್ವದ ತಿರುವು ದೊರೆತದ್ದು ಗಾನ ಕಲಾನಿಧಿ ವಿದ್ವಾನ್ ಸೇಲಂ ಪಿ. ಸುಂದರೇಶನ್ ಅವರ ಬಳಿ. 14-15 ವರ್ಷಗಳ ಕಾಲ ಅವರ ಹತ್ತಿರ ಅಭ್ಯಾಸ ಮಾಡುವ ಅವಕಾಶ ದೊರೆಯಿತು. ``ತ್ಯಾಗರಾಜರ ಪರಂಪರೆಯಿಂದ ಬಂದ ಅಂತಹ ಮಹಾನ್ ಕಲಾವಿದರ ಬಳಿ ಕಲಿಯಲು ಅವಕಾಶ ದೊರೆತದ್ದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ. ಅವರೇ ನನ್ನ ಸಂಗೀತ ವಾಹಿನಿಗೆ ಪ್ರಮುಖ ತಿರುವು ನೀಡಿದರು. ಹೀಗಾಗಿ ನಾನು ಅವರಿಗೆ ಚಿರಋಣಿ,'' ಎಂದು ವಾರಿಜಾಶ್ರೀ ಹೆಮ್ಮೆಯಿಂದ ಹೇಳುತ್ತಾರೆ.