ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೂ ಅತ್ತೆ ಮನೆಯ ವಾಸದ ಬಗ್ಗೆ ಭಯ ಹುಟ್ಟುವಂತೆ ಮಾತನಾಡಲಾಗುತ್ತಿರುತ್ತದೆ. “ನೀನು ಹೀಗೇ ಆಡುತ್ತಿರು, ಅತ್ತೆ ಮನೆಗೆ ಹೋದಾಗ ನಿನಗೆ ಅರ್ಥ ಆಗುತ್ತದೆ. ಅತ್ತೆಯಿಂದ ಹೇಳಿಸಿಕೊಂಡ ಮೇಲೆ ನಿನಗೆ ಬುದ್ಧಿ ಬರುತ್ತದೆ!”
ಇಂತಹ ಹಲವಾರು ಮಾತುಗಳನ್ನು ಕೇಳಿ ಯುವತಿಯರ ಮನಸ್ಸಿನಲ್ಲಿ ಅತ್ತೆ ಮನೆಯ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹುಟ್ಟಿಕೊಂಡಿರುತ್ತದೆ. ವಿವಾಹವಾಗಿ ಅತ್ತೆ ಮನೆಗೆ ಕಾಲಿಡುವ ಸಮಯದಲ್ಲಿ ಅವರು ಮನಸ್ಸಿನಲ್ಲಿ ನೂರಾರು ಅನುಮಾನಗಳನ್ನು ತುಂಬಿ ತಂದಿರುತ್ತಾರೆ. ಆದರೆ ಅವರ ಆಲೋಚನೆಗೆ ವಿರುದ್ಧವಾಗಿ ಸುಧಾರಿತ ಮನಸ್ಸಿನ ಅತ್ತೆಯು ತುಂಬು ಮನಸ್ಸಿನಿಂದ ಸೊಸೆಯನ್ನು ಸ್ವಾಗತಿಸುತ್ತಾರೆ. ಹೀಗಾಗಿ ಸೊಸೆಗೆ ಅತ್ತೆ ಬಗ್ಗೆ ಪ್ರೀತಿ, ಗೌರವ ಹುಟ್ಟುತ್ತದೆ ಮತ್ತು ಕ್ರಮೇಣ ಅವಳ ಮನಸ್ಸಿನಲ್ಲಿ ಹುದುಗಿದ್ದ ಆಸೆಗಳು ಜಾಗೃತವಾಗತೊಡಗುತ್ತವೆ.
ಅತ್ತೆಯ ಸಹಕಾರ ಹಸ್ತದಿಂದ ಅವಳು ತನ್ನ ಉದ್ಯೋಗ ಮತ್ತು ಹಾಬಿಯ ಬಗೆಗಿನ ಆಸಕ್ತಿಯನ್ನು ಪೂರೈಸಿಕೊಳ್ಳಲು ಶಕ್ತಳಾಗುತ್ತಾಳೆ. ಹೀಗಾಗಿ ಅವರ ಸಂಬಂಧ ಸಾಂಪ್ರದಾಯಿಕ ಅತ್ತೆಸೊಸೆ ರೂಪದಿಂದ ಮುಂದಡಿಯಿಟ್ಟು ಸ್ನೇಹಮಯ ಸಂಬಂಧವಾಗಿ ರೂಪುಗೊಳ್ಳುತ್ತದೆ. ಮನೆಯ ಯಾವುದೇ ಸಮಸ್ಯೆಯನ್ನು ಇಬ್ಬರೂ ಸೇರಿ ಪರಿಹರಿಸುತ್ತಾರೆ ಮತ್ತು ಮನೆಯ ಇತರ ಸದಸ್ಯರಿಗೆ ಅದರ ಸುಳಿ ಸಿಗುವುದಿಲ್ಲ.
ಅತ್ತೆ ಸೊಸೆಯರ ಅಪೂರ್ವ ಜೋಡಿಗಳು
ಬನ್ನಿ, ಹಾಲು, ನೀರು ಬೆರೆತಂತೆ ಪರಸ್ಪರ ಹೊಂದಿಕೊಂಡಿರುವ ಅತ್ತೆ ಸೊಸೆಯರ ಜೋಡಿಯನ್ನು ನಿಮಗೆ ಪರಿಚಯ ಮಾಡಿಸಿಕೊಡುತ್ತೇವೆ. ಮಾನಸಾ ಒಬ್ಬ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಇಂದಿರಾನಗರದಲ್ಲಿ ವಾಸಿಸುತ್ತಿದ್ದಾಳೆ. ಈ ಸಂಬಂಧದ ವಿಷಯವಾಗಿ ಹೀಗೆ ಹೇಳುತ್ತಾಳೆ, “ನಾನು ಹೊರಗೆ ಕೆಲಸ ಮಾಡಲು ನನ್ನ ಅತ್ತೆಯಿಂದ ಸಂಪೂರ್ಣ ಸಹಕಾರ ಸಿಗುತ್ತಿದೆ. ನನ್ನ ಸಹೋದ್ಯೋಗಿಗಳು ಲಂಚ್ ಟೈಮಿನಲ್ಲಿ ತಮ್ಮ ತಮ್ಮ ಅತ್ತೆಯರ ಬಗ್ಗೆ ಟೀಕೆ ಮಾಡುತ್ತಿರುತ್ತಾರೆ. ಆದರೆ ನಾನು ಅತ್ತೆಯ ಸಂರಕ್ಷಣೆಯಲ್ಲಿರುವ ನನ್ನ ಮಕ್ಕಳ ಬಗ್ಗೆ ನಿಶ್ಚಿಂತಳಾಗಿರುತ್ತೇನೆ. ಇಷ್ಟೇ ಅಲ್ಲ, ನನ್ನ ಅತ್ತೆ ನನ್ನ ಡ್ರೆಸ್ ಬಗ್ಗೆ ಯಾವುದೇ ನಿರ್ಬಂಧ ಮಾಡುವುದಿಲ್ಲ. ನನಗಿಷ್ಟವಾದಂತೆ ಡ್ರೆಸ್ ಮಾಡಿಕೊಳ್ಳಲು ನನಗೆ ಸ್ವಾತಂತ್ರ್ಯವಿದೆ.”
ಅವಳ ಅತ್ತೆ ಮೀನಾಕ್ಷಿ ಹೇಳುತ್ತಾರೆ, “ನನ್ನ ಮಗಳು ಮದುವೆಯಾಗಿ ಬೇರೆ ಊರಿನಲ್ಲಿದ್ದಾಳೆ. ಆದರೆ ಇಲ್ಲಿ ಈ ಮಗಳು ನನ್ನ ಜೊತೆಗಿದ್ದಾಳೆ. ಇವಳು ನನ್ನ ಊಟ ತಿಂಡಿ, ಹಣ್ಣು ಔಷಧ ಎಲ್ಲಗಳನ್ನೂ ನೋಡಿಕೊಳ್ಳುತ್ತಾಳೆ. ಮನೆಗೆ ಬರುವ ನಮ್ಮ ನೆಂಟರು, ಸ್ನೇಹಿತರಿಗೂ ಚೆನ್ನಾಗಿ ಸತ್ಕಾರ ಮಾಡುತ್ತಾಳೆ. ಹೀಗಿರುವಾಗ ನನಗೆ ಅವಳನ್ನು ದೂರು ಪ್ರಮೇಯವೇ ಇರುವುದಿಲ್ಲ.”
ಇತರ ಉದಾಹರಣೆಗಳು
ಗಾಂಧಿನಗರದಲ್ಲಿ ವಾಸಿಸುವ ಎಂಬಿಎ ಗ್ರಾಜುಯೇಟ್ ಶ್ವೇತಾ ಹೇಳುತ್ತಾಳೆ, “ನನಗೆ ಬಿಸ್‌ನೆಸ್ ಮಾಡಬೇಕೆಂಬ ಆಸೆಯಿತ್ತು. ಆದರೆ ನನ್ನ ತವರಿನಲ್ಲಿ ಅದಕ್ಕೆ ಆಸ್ಪದವಿರಲಿಲ್ಲ. ಅತ್ತೆಮನೆಯಲ್ಲಿ ಈಗ ನನ್ನ ಅತ್ತೆಯ ಒತ್ತಾಸೆಯಿಂದ ನಾನು ಸ್ವಂತ ಆರ್ಟಿಫಿಶಿಯಲ್ ಜ್ಯೂವೆಲರಿಯ ತಯಾರಿಕೆಯನ್ನು ಮನೆಯಿಂದಲೇ ಮಾಡಲು ಸಮರ್ಥಳಾಗಿದ್ದೇನೆ. ನನ್ನ ಚಿಕ್ಕ ಮಗುವನ್ನು ಅತ್ತೆಯೇ ಸುಧಾರಿಸುವುದರಿಂದ ಇದು ಸಾಧ್ಯವಾಗಿದೆ.
“ಅತ್ತೆ ಎಂದೂ ತಾಯಿಯಾಗಲಾರಳು ಎಂದು ಜನರು ಹೇಳುತ್ತಾರೆ. ಆದರೆ ಅದು ನಿಜವಲ್ಲ. ಸಂಬಂಧಕ್ಕೆ ಬೆಲೆ ಕೊಟ್ಟರೆ, ಅತ್ತೆ ಸೊಸೆಯರು ತಾಯಿ ಮಗಳಾಗಬಲ್ಲರು.”
ಶ್ವೇತಾಳ ಅತ್ತೆ ಹೀಗೆ ಹೇಳುತ್ತಾರೆ, “ನಾನು ನನ್ನ ಸೊಸೆಯ ಅಲಂಕಾರ ಅಥವಾ ಕೆಲಸದ ವಿಷಯದಲ್ಲಿ ತಲೆ ಹಾಕುವುದಿಲ್ಲ. ನನ್ನ ಸೊಸೆ ಹಿರಿಯರನ್ನು ಮನಃಪೂರ್ವಕವಾಗಿ ಗೌರವಿಸುತ್ತಾಳೆ. ಕೇವಲ ತೋರಿಕೆಗಾಗಿ ಅಲ್ಲ. ಅವಳ ಇಂತಹ ಗುಣಗಳನ್ನು ನಾನು ಬಹಳವಾಗಿ ಮೆಚ್ಚುತ್ತೇನೆ.”
ಮೈಸೂರಿನಲ್ಲಿ ಒಂದು ಸರ್ಕಾರೀ ಉದ್ಯೋಗದಲ್ಲಿರುವ ತನುಜಾ ಈ ಸಂಬಂಧವನ್ನು ಕುರಿತು ಭಾಪೂರ್ಣಳಾಗಿ ಹೇಳುತ್ತಾಳೆ, “ನಾನು ಅಂತರ್ಜಾತೀಯ ವಿವಾಹದ ಮೂಲಕ ಈ ಕುಟುಂಬಕ್ಕೆ ಸೇರಿದ್ದೇನೆ. ಇಲ್ಲಿಯ ಆಹಾರ ಪದ್ಧತಿ ಮತ್ತು ಜೀವನ ಕ್ರಮಗಳು ನಮ್ಮ ತವರಿನ ಜೀವನ ಶೈಲಿಗೆ ಸಂಪೂರ್ಣ ಭಿನ್ನವಾಗಿವೆ.
“ಆದರೆ ನನ್ನ ಅತ್ತೆಯ ಸಹಕಾರದಿಂದ ಅತ್ತೆಮನೆಯ ರೀತಿ ನೀತಿಗಳಲ್ಲಿ ಒಂದಾಗಿ ಬೆರೆತು ಹೋಗಿದ್ದೇನೆ. ಇಲ್ಲಿ ನನ್ನ ಉದ್ಯೋಗದ ಬಗ್ಗೆ ಯಾವುದೇ ಕಿರಿಕಿರಿ ಇಲ್ಲ. ಮೇಲಾಗಿ ನನಗೆ ಆಫೀಸಿಗೆ ತಡವಾಗುವಂತಿದ್ದರೆ ನನ್ನ ಅತ್ತೆಯೇ ಬೆಳಗಿನ ತಿಂಡಿಗೆ ಸಿದ್ಧ ಮಾಡಿ ನನಗೂ ಕೊಡುತ್ತಾರೆ. ನಾವು ಪತಿಪತ್ನಿಯರು ವೀಕೆಂಡ್ ಪಾರ್ಟಿಗೆ ಹೋದರೆ ಅವರಾರೂ ಆಕ್ಷೇಪಣೆ ಮಾಡುವುದಿಲ್ಲ.”
ತನುಜಾಳ ಅತ್ತೆ ಏನು ಹೇಳುತ್ತಾರೆಂದರೆ, “ನನಗೆ 3 ಜನ ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗಳ ಅಪೇಕ್ಷೆಯು ಸೊಸೆ ತನುಜಾಳ ರೂಪದಲ್ಲಿ ಪೂರೈಸಿದೆ. ತನುಜಾಳ ಉಡುಗೆ ತೊಡುವ ರೀತಿ ನನಗೆ ಮೆಚ್ಚಿಗೆಯಾಗಿದೆ. ನಾವು ಅತ್ತೆ ಸೊಸೆಯರು ಜೊತೆಯಾಗಿ ಬ್ಯೂಟಿ ಪಾರ್ಲರ್‌ಗೆ, ಶಾಪಿಂಗ್‌ಗೆ ಹೋಗುತ್ತೇವೆ.”
ಭೂಪಸಂದ್ರದಲ್ಲಿರುವ ನೀತು ಫಿಟ್‌ನೆಸ್ ಇನ್ಸ್ ಟಿಟ್ಯೂಟ್ ನಡೆಸುತ್ತಾಳೆ, “ನಾನು ಬೆಳಗ್ಗೆ ಮತ್ತು ಸಾಯಂಕಾಲ ಕ್ಲಾಸೆಸ್‌ನಡೆಸುತ್ತೇನೆ. ಈಗ ಅದು ಮನೆಯ ಕೆಲಸ ಕಾರ್ಯಗಳಲ್ಲಿ ಬಿಝಿಯಾಗಿರು ವೇಳೆ. ನನ್ನ ಅತ್ತೆಯ ಸಹಕಾರದಿಂದ ಮನೆಯನ್ನು ಮ್ಯಾನೇಜ್ ಮಾಡಲು ನನಗೆ ಸಾಧ್ಯವಾಗಿದೆ. ನನ್ನ ಪತಿ ಮತ್ತು ಮಕ್ಕಳ ಬೆಳಗಿನ ತಿಂಡಿಯ ಚಿಂತೆ ಮಾಡಬೇಕಾಗಿಲ್ಲ. ಅತ್ತೆಯಿಂದಾಗಿ ಇಂತಹ ಇನ್ಸ್ ಟಿಟ್ಯೂಟ್ ನಡೆಸಬೇಕೆಂಬ ನನ್ನ ಕನಸು ಪೂರ್ಣವಾಗಿದೆ,” ಎಂದು ನೀತು ಹೇಳುತ್ತಾಳೆ.
ನೀತೂಳ ಅತ್ತೆ ಚಂದ್ರಕಲಾ ಪ್ರಕಾರ, “ಮನೆಯ ಹಿರಿಯಳಾಗಿ ಎಲ್ಲ ಸದಸ್ಯರ ಬಗ್ಗೆ ಗಮನ ನೀಡುವುದು ನನ್ನ ಕರ್ತವ್ಯವಾಗಿದೆ. ಮನೆ ಒಂದಾಗಿರಲು ಎಲ್ಲರ ಸಹಯೋಗ ಅಗತ್ಯ. ನೀತೂ ನನಗೆ ಗೌರವ ನೀಡುತ್ತಾಳೆ. ಯಾವುದೇ ಕೆಲಸ ಮಾಡುವ ಮೊದಲು ನನ್ನ ಸಲಹೆ ಪಡೆಯುತ್ತಾಳೆ.”
ಅರ್ಥಪೂರ್ಣ ಸಂಬಂಧ
ದಾವಣಗೆರೆಯಲ್ಲಿರುವ ಗೃಹಿಣಿ ಮಾಲಿನಿ ಹೀಗೆ ಹೇಳುತ್ತಾಳೆ, “ನಾನು ಒಂದು ಚಿಕ್ಕ ಕುಟುಂಬದಿಂದ ಬಂದ ಹೆಣ್ಣು ಮಗಳು. ವಿವಾಹವಾಗಿ ಇಲ್ಲಿ ಕೂಡು ಕುಟುಂಬಕ್ಕೆ ಎರಡನೆಯ ಸೊಸೆಯಾಗಿ ಬಂದಾಗ ಎಲ್ಲರಿಗೂ ಸರಿಹೊಂದುವಂತೆ ಇರಬಲ್ಲನೇ ಎಂಬ ಭಯವಿತ್ತು. ಆದರೆ ಅತ್ತೆ ಮನೆಯ ಕೆಲಸ ಕಾರ್ಯಗಳ ವಿಷಯಗಳನ್ನು ನನಗೆ ಧೈರ್ಯ ತುಂಬಿ ಪ್ರೀತಿಯಿಂದ ತಿಳಿಸಿ ಕೊಟ್ಟಿದ್ದರಿಂದ, ಇಂದು ನಾನು ಒಬ್ಬ ಒಳ್ಳೆಯ ಗೃಹಿಣಿಯಾಗಲು ಸಾಧ್ಯವಾಗಿದೆ. ಮನೆಯಲ್ಲಿ ಎಲ್ಲರೂ ನನ್ನನ್ನು ಬಹಳ ಪ್ರೀತಿಸುತ್ತಾರೆ. ನನ್ನ ಅತ್ತೆ ಅನಗತ್ಯವಾದ ಮಾತುಗಳನ್ನು ಆಡುವುದಿಲ್ಲ. ಅವರ ಈ ಗುಣ ನನಗೆ ಬಹಳ ಇಷ್ಟವಾಗಿದೆ.”
ಸರೋಜಾ ತಮ್ಮ ಸೊಸೆ ಮಾಲಿನಿಯನ್ನು ಕುರಿತು ಹೀಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ, “ಸೊಸೆಯಲ್ಲಿರುವ ಕಲಿಕೆಯ ಆಸಕ್ತಿಯನ್ನು ಕಂಡು ಅವಳಿಗೆ ಮನೆಯ ಕೆಲಸ ಕಾರ್ಯಗಳು ಮತ್ತು ಹೊಸ ಹೊಸ ವಿಷಯಗಳ ಬಗ್ಗೆ ತಿಳಿಸಿ ಕೊಡಲು ನಾನು ಮುಂದಾದೆ. ಅವಳು ಬಹಳ ಬೇಗನೆ ನಮ್ಮ ಮನೆ ರೀತಿ ರಿವಾಜುಗಳನ್ನು ಕಲಿತಳು. ಮಕ್ಕಳು ಸಂತೋಷವಾಗಿ ಸಂಸಾರ ಮಾಡಿಕೊಂಡಿರಲಿ ಎನ್ನುವುದು ಎಲ್ಲ ತಾಯಿಯರ ಆಶೆಯಾಗಿರುತ್ತದೆ. ಆ ವಯಸ್ಸಿನಲ್ಲಿ ಮಜಾ ಮಾಡದೆ ಮತ್ತೆ ಯಾವಾಗ ಮಾಡುವರು?”
ವಿವಾಹವಾಗಿ ಅತ್ತೆಯ ಮನೆಗೆ ಬರುವ ವಧುವಿಗೆ ಅಲ್ಲಿ ಅತ್ತೆಯು ಎದುರಾದಾಗ ಚಿಕ್ಕಂದಿನಿಂದಲೂ ಮನಸ್ಸಿನಲ್ಲಿ ಮನೆ ಮಾಡಿರುವ ಅತ್ತೆ ಎಂಬ ಭಯ ಧುತ್ತೆಂದು ಬಂದು ನಿಲ್ಲುತ್ತದೆ. ಆದರೆ ಅತ್ತೆಯು ಪ್ರೀತಿಯಿಂದ ಸೊಸೆಯ ಕೈ ಹಿಡಿದು ಮನೆವಾರ್ತೆಯ ಪಾಠವನ್ನು ಕಲಿಸಿಕೊಟ್ಟಾಗ, ಅವಳ ಉದ್ಯೋಗ ಅಥವಾ ಅಭಿರುಚಿಯ ಆಸಕ್ತಿಯನ್ನು ಪೂರೈಸಿಕೊಳ್ಳಲು ಸಹಕಾರ ನೀಡಿದಾಗ ಸೊಸೆಯ ಮನಸ್ಸು ನವಿಲಿನಂತೆ ರೆಕ್ಕೆ ಬಿಚ್ಚಿ ಕುಣಿಯುತ್ತದೆ. ತವರಿನ ನೆನಪು ಹಿಂದೆ ಉಳಿಯುತ್ತದೆ.
– ದೀಪಾ ಸತ್ಯನ್