ಕಾಲದ ಓಟದ ಜೊತೆಗೆ ಪರಿವರ್ತನೆ ಕೂಡ ಅಗತ್ಯ. ಇಂದಿನ ಯುಗದಲ್ಲಿ ದಂಪತಿಗಳು ಅದರಲ್ಲೂ ವಿಶೇಷವಾಗಿ ನವವಿವಾಹಿತ ಜೋಡಿಗಳು ತಮ್ಮ ವಿಚಾರಗಳು, ಭಾವನೆಗಳು ಮತ್ತು ದೃಷ್ಟಿಕೋನವನ್ನು ಅಷ್ಟಿಷ್ಟು ಬದಲಿಸಿಕೊಳ್ಳಬೇಕು. ಮೊದಲು ಮದುವೆ ಎಂದರೆ ಪ್ರೀತಿ ಮತ್ತು ಸಮರ್ಪಣೆಯಾಗಿತ್ತು. ಅದರಲ್ಲಿ ಹೆಂಡತಿಯರೆ ತಮ್ಮ ಪತಿ ಮತ್ತು ಅವರ ಕುಟುಂಬದವರಿಗಾಗಿ ಸಮರ್ಪಿತರಾಗಿರುವುದನ್ನು ತಮ್ಮ ಜೀವನದ ಸಾರ್ಥಕತೆ ಎಂದು ಭಾವಿಸುತ್ತಿದ್ದರು. ಅಲ್ಲದೆ, ತ್ಯಾಗ ಮತ್ತು ಕರ್ತವ್ಯದ ಮೂರ್ತಿಗಳಾಗಿ ಜೀವನವಿಡೀ ಖುಷಿಯಿಂದ ಕಳೆಯುತ್ತಿದ್ದರು. ಕುಟುಂಬದಲ್ಲಿ ಅವರಿಗೆ ಇದರಿಂದ ಗೌರವ ಆದರಗಳು ದೊರೆಯುತ್ತಿದ್ದವು. ಪುರುಷರು ಕೂಡ ಇಂತಹ ಪತ್ನಿಯನ್ನು ಪಡೆದು ಖುಷಿಗೊಳ್ಳುತ್ತಿದ್ದರು. ಹೆಂಡತಿಯರಿಗಾಗಿ ಅವರ ಯೋಚನೆ ಕೂಡ ಇಷ್ಟೇ ಆಗಿರುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಗಂಡಹೆಂಡತಿ ಈ ಸಂಗತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇಂದು ಮಹಿಳೆಯರು ಕೂಡ ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ, ಮುಂದೆ ಸಾಗುತ್ತಿದ್ದಾರೆ. ಪ್ರೀತಿ ಮತ್ತು ಸಮರ್ಪಣೆಯ ಸ್ಥಾನವನ್ನು ಈಗ ಪ್ರೀತಿ ಮತ್ತು ಹೊಂದಾಣಿಕೆ ಪಡೆದುಕೊಂಡಿವೆ.
ವಧುವರರು ಮದುವೆಯ ಸಂದರ್ಭದಲ್ಲಿ ಸಪ್ತಪದಿ ತುಳಿಯುತ್ತಾರೆ. ಅವು ಸಪ್ತ ವಚನಗಳೇ ಆಗಿಬಿಟ್ಟಿವೆ. ಆದರೆ ವಧುವರರು ಆ ವಚನಗಳನ್ನು ಬಹುಬೇಗ ಮರೆತುಬಿಡುತ್ತಾರೆ. ಆದರೆ ದಂಪತಿಗಳನ್ನು ಸಮೀಕ್ಷೆಗೊಳಪಡಿಸಿದಾಗ ಬಹಳಷ್ಟು ಒಳ್ಳೆಯ ಸಂಗತಿಗಳು ಬೆಳಕಿಗೆ ಬಂದವು. ಮದುವೆಯ ನಂತರ ಆ ವಚನಗಳನ್ನು ಪಾಲಿಸಬೇಕು. ವಿವಾಹ ಬಂಧನ ಪ್ರೀತಿವಿಶ್ವಾಸ ಮತ್ತು ಪಾಲುದಾರಿಕೆಯಿಂದ ಕೂಡಿದೆ. ಇಬ್ಬರೂ ಮನೆ ಹಾಗೂ ಹೊರಗೆ ಎರಡೂ ಕಡೆ ಕೆಲಸ ಮಾಡುತ್ತಾರೆ. ಹಾಗಾದರೆ ಇಬ್ಬರೂ ಪರಸ್ಪರರ ಕೆಲಸದಲ್ಲಿ ಸಹಕಾರ ಮತ್ತು ಹೊಂದಾಣಿಕೆ ಮನೋ ಭಾವದ ಮೂಲಕ ಸಾಗಬೇಕಾದುದು ಅಗತ್ಯ. ಎಲ್ಲರ ವಿಚಾರ ಮಂಥನದಿಂದ ಹೊರಹೊಮ್ಮಿದ ಈ 9 ವಚನಗಳು ಬಹೂಪಯೋಗಿಯಾಗಿವೆ :
ಯಾವುದು ನನ್ನದು ಅದು ನಿನ್ನದೂ ಕೂಡ : ಹಾಸನದ ಆರ್ಕಿಟೆಕ್ಟ್ ಸುಹಾಸ್ ಮತ್ತು ಅವರ ಪತ್ನಿ ಸೀಮಾ ನಡುವೆ ಆರಂಭದಲ್ಲಿ ಚಿಕ್ಕಪುಟ್ಟ ಮಾತುಗಳಿಗೂ ಮನಸ್ತಾಪ ಉಂಟಾಗುತ್ತಿತ್ತು. ಈ ಕುರಿತಂತೆ ಸೀಮಾ ಹೀಗೆ ಹೇಳುತ್ತಾರೆ, ``ತವರುಮನೆಯಿಂದ ಉಡುಗೊರೆಯಾಗಿ ಬಂದ ಬೆಡ್ ಕವರ್, ಕ್ರಾಕರಿ ಮುಂತಾದವುಗಳನ್ನು ಸುಹಾಸ್ ತಮ್ಮ ಸ್ನೇಹಿತರಿಗಾಗಿ ಬಳಸಿಕೊಳ್ಳುತ್ತಿದ್ದರೆ, ನನಗೆ ಬಹಳ ಕೋಪ ಬರುತಿತ್ತು. ಅದೇ ರೀತಿ ಅವರ ಮ್ಯೂಸಿಕ್ ಸಿಸ್ಟಮ್, ಬೇರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನನ್ನ ಸಂಬಂಧಿಕರು ಬಳಸಿದರೆ ಅವರಿಗೆ ಕೋಪ ಬರುತ್ತಿತ್ತು. ಅದೊಂದು ದಿನ ನಾವು ನಿರ್ಧಾರ ಮಾಡಿದೆವು, ನಾವಿಬ್ಬರೂ ಒಂದೇ ಆಗಿರುವಾಗ ನಾವು ಬಳಸುವ ವಸ್ತುಗಳು ನಮ್ಮವೇ ಅಲ್ಲವೇ? ಎಂದು ಚರ್ಚಿಸಿದೆವು. ಆಗಿನಿಂದ ನಮ್ಮ ನಡುವಿನ ಮನಸ್ತಾಪ ದೂರವಾಯಿತು.''
ಪರಸ್ಪರರ ಸಂಬಂಧಿಕರ ಬಗ್ಗೆ ಗೌರವ : ಧಾರವಾಡದ ಡಾ. ರಾಜೇಶ್ ಮತ್ತು ಅವರ ಹೋಮ್ ಮೇಕರ್ ಹೆಂಡತಿ ನೀಲಾ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತಾರೆ, ಗಂಡಹೆಂಡತಿಯಾದವರು ಇಬ್ಬರೂ ಕುಟುಂಬದವರು, ಸಂಬಂಧಿಕರ ಮನೆಯವರಿಗೆ ಗೌರವ ಕೊಡುವುದು ಅತ್ಯವಶ್ಯ. ರಾಜೇಶ್ ತನ್ನ ತಂದೆತಾಯಿಗಳಿಗಾದ ಅಪಮಾನದ ಘಟನೆಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಇದರಿಂದ ಅವನ ತಂಗಿ ರಮಾ ತನ್ನ ಗಂಡನ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಳೆ. ಇದರಿಂದಾಗಿ ಅವರ ಪರಸ್ಪರ ಸಂಬಂಧಗಳು ಎಂದೂ ಮಧುರವಾಗಲೇ ಇಲ್ಲ.